ಶಬ್ಧ ಪಂಜರದಲ್ಲಿ  ಕೂರಿಸಿದರೆ ಕವಿತೆ ರೆಕ್ಕೆ ಬಿಚ್ಚಬಲ್ಲದು


"ಪುಸ್ತಕ ಪ್ರಕಟಣೆ ಕೇವಲ ಮಾರಾಟ ವ್ಯವಹಾರವಲ್ಲ. ಅದೊಂದು ಸಾಂಸ್ಕೃತಿಕ ಜವಾಬ್ದಾರಿಯ ಕ್ರಿಯೆ. ಪ್ರತಿ ಪುಸ್ತಕದ ಹಿಂದೆಯೂ ಸಂವಾದಿಸಲು ಬಯಸುವ ಸೂಕ್ಷ್ಮ ಮನಸ್ಸುಗಳಿರುತ್ತವೆ. ಕಾವ್ಯದ ಓದುಗರ ವರ್ಗಕ್ಕೆ ಸೂಕ್ಷ್ಮ ಸಂವೇದನೆಯ ಕವಯಿತ್ರಿಯರ ಕವಿತೆಗಳನ್ನು ತಲುಪಿಸುವ ಆಶಯ ಹೊತ್ತು ಕವಿ ಪ್ರಕಾಶನ ಪ್ರಾತಿನಿಧಿಕ ಮಹಿಳಾ ಕಾವ್ಯ ಸಂಗ್ರಹವನ್ನು ಎರಡು ವರುಷಗಳಿಗೊಮ್ಮೆ ಹೊರತರುತ್ತಿದೆ," ಎನ್ನುತ್ತಾರೆ ಎಚ್.ಎಸ್. ಅನುಪಮಾ. ಅವರು ಪ್ರೊ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿರುವ ‘ಕನ್ನಡ ಮಹಿಳಾ ಕಾವ್ಯ’ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಕವಿತೆ ಭಾವದಾಸಗದ ಹಕ್ಕಿ. ಅದನ್ನು ಶಬ್ಧಗಳಲ್ಲಿ ಪೂರ್ಣ ಹಿಡಿಯಬಹುದೆಂಬುದೇ ಭ್ರಮೆ. ಕವಿತೆಯ ಸನಿಹಕ್ಕೆ ಶಬ್ಧ ಕೊಂಡೊಯ್ಯಬಲ್ಲದು. ಶಬ್ಧ ಪಂಜರದಲ್ಲಿ ಕೂರಿಸಿದರೆ ಕವಿತೆ ರೆಕ್ಕೆ ಬಿಚ್ಚಬಲ್ಲದು. ಆದರೆ ಅದು ಸ್ವಚ್ಛಂದ ಹಾರುವುದು ಓದುವವರ ಮನದಾಗಸದಲ್ಲಿ ಮಾತ್ರ.

ಕವಿತೆ ಹಕ್ಕಿ.
ನಮ್ಮೆಲ್ಲರ ಹೊರಗೆ ದಿನನಿತ್ಯ ಸಂತೆ ನೆರೆಯುತ್ತದೆ, ಚದುರುತ್ತದೆ. ಹಾಗೇ ಒಳಗೂ ಒಂದು ಸಂತೆ ನೆರೆಯುತ್ತದೆ, ಆದರೆ ನೆರೆಯುತ್ತಲೇ ಹೋಗುತ್ತದೆ. ಎಲ್ಲೋ ಒಮ್ಮೊಮ್ಮೆ ಚದುರಿದಾಗ ಮಹಾಮೌನ ಹುಟ್ಟುತ್ತದೆ. ಆಗ ಬದುಕಿನ ನಗ್ನಸತ್ಯಗಳ ದರ್ಶನವಾಗುತ್ತವೆ. ಮಹಾಮೌನ ತೋರಿಸಿದ ಸತ್ಯಗಳಿಗೆ ಅಕ್ಷರ ಬಟ್ಟೆ ತೊಡಿಸುತ್ತೇವೆ. ಕತೆ, ಕವಿತೆ ಎನ್ನುತ್ತೇವೆ.

ಕವಿತೆ ಬಟ್ಟೆ.

ಕವಿತೆ ನೆಲದಾಳದ ಶುದ್ಧ ನೀರು. ಅದರ ಬಳಿ ಹೋಗಲು ಸೋಪಾನ ಕಟ್ಟಬಹುದು, ಆದರೆ ಸಂಗ್ರಹಿಸಿ ತರಲಾಗದು. ದಾಹ ಇಂಗಬೇಕಿದ್ದರೆ, ಜೀವ ತಂಪಾಗಬೇಕಿದ್ದರೆ ನೀರು ಕುಡಿಯಬೇಕು.

ಕವಿತೆ ನೀರು. ಶಬ್ದ ಸೋಪಾನ.
ಕವಿತೆ ಈ ಲೋಕವನ್ನು ಬದಲಿಸುವುದೋ ಇಲ್ಲವೋ ಗೊತ್ತಿಲ್ಲ
ಕವಿತೆ ಚರಿತ್ರೆಯನ್ನು ಬದಲಿಸುವುದೋ ಇಲ್ಲವೋ ಗೊತ್ತಿಲ್ಲ
ಕವಿತೆ ವರ್ತಮಾನವನ್ನು ಬದಲಿಸುವುದೋ ಇಲ್ಲವೋ ತಿಳಿದಿಲ್ಲ
ಆದರೆ ಅದು ಕವಿಯನ್ನು ಮಾತ್ರ ಬದಲಾಯಿಸಬಲ್ಲದು

- ಪ್ಯಾಲೆಸ್ಟೀನ್ ಕವಿ ಮಹಮೂದ್ ದರವೇಶ್

ಹೀಗೆ ಕವಿತೆಗಳನ್ನು ಕವಿಜೀವಗಳು, ಕಾವ್ಯಾಸಕ್ತಿಯಿರುವವರು ನಾನಾ ರೀತಿಗಳಲ್ಲಿ ಬಣ್ಣಿಸಿದ್ದಾರೆ, ವ್ಯಾಖ್ಯಾನಿಸಿದ್ದಾರೆ. ಕನ್ನಡ ನೆಲವಂತೂ ಸಾವಿರಾರು ಕವಿಗಳಿಂದ ತುಂಬಿ ತುಳುಕುತ್ತಿದೆ. ಕವಿಗೋಷ್ಟಿಗಳು ಸಾಕಷ್ಟು ನಡೆಯುತ್ತಿವೆ. ಕವಿತೆಯ ಬಗೆಗೆ ಚರ್ಚೆ, ಸಂವಾದಗಳು ಏರ್ಪಡುತ್ತಲಿವೆ. ಆದರೂ ಪ್ರಕಟಿಸಲು ಪ್ರಕಾಶಕರು ಸಿಗುವುದಿಲ್ಲ ಎನ್ನುವುದು ಬಹುತೇಕ ಕವಿಗಳ ಅಳಲಾಗಿದೆ. ಕವಿತೆ ಪುಸ್ತಕ ಖಾಲಿಯಾಗುವುದಿಲ್ಲ ಎನ್ನುವುದು ಪ್ರಕಾಶಕರ ಕಷ್ಟವಾಗಿದೆ. ಅದು ನಿಜವೂ ಹೌದು, ಕವಿತೆ ಪುಸ್ತಕಗಳನ್ನು ಕೊಂಡು ಓದುವವರು ಕನ್ನಡದಲ್ಲಿ ಅತಿಕಡಿಮೆ ಇದ್ದಾರೆ. ಏಕೆ ಹೀಗೆ? ಜನರಿಂದ ಕವಿತೆ ದೂರವಾಗತೊಡಗಿದೆಯೇ? ಕಾವ್ಯವನ್ನು ಬಾಯಲ್ಲಿಟ್ಟುಕೊಂಡು ಜತನ ಮಾಡಿದ ಮೌಖಿಕ ಪರಂಪರೆಯ ಕನ್ನಡ ನೆಲಕ್ಕೆ ಇದೇನಾಯಿತು? ಓಲೆಗರಿಗಳಲ್ಲಿ ವಚನಗಳನ್ನೂ, ಕನ್ನಡ ಕಾವ್ಯ-ಪುರಾಣಗಳನ್ನು ಬರೆಸಿ ಕಾಪಿಟ್ಟ, 'ಶಾಸ್ತ್ರದಾನ' ಮಾಡಿದ ಕನ್ನಡ ಕಾವ್ಯ ಸಂಸ್ಕೃತಿ ಹೀಗೇಕೆ ಬಡವಾಯಿತು? ಖಡ್ಗವಾಗಲಿ ಕಾವ್ಯ ಎಂದು ಹೋರಾಟಕ್ಕೂ, ಕಾವ್ಯಕ್ಕೂ ನಂಟು ಬೆಸೆದ ಸಂವೇದನೆಗೆ ಏನಾಯಿತು? ಕವಿತೆ ಜನರನ್ನು ತಲುಪದೇ ಇರಲು ಜನಸಮೂಹದ ಬದಲಾದ ಆದ್ಯತೆ, ಅಭಿರುಚಿಗಳು ಕಾರಣವೋ? ಕವಿಗಳ ಕಾವ್ಯಾಭಿವ್ಯಕ್ತಿಯ, ಸಂವೇದನೆಯ ಸೋಲೂ ಕಾರಣವೋ? ಕೇವಲ ಪದಗಳನ್ನು ಹಿಡಿದುಕೊಂಡು ಹೊರಟ ಕವಿತೆ ಅರ್ಥ, ಲಯ, ಗತಿ, ಗುರುತುಗಳನ್ನು ಮರೆತು ಹೀಗಾಯಿತೇ?

ಇಂತಹ ಹತ್ತಾರು ಪ್ರಶ್ನೆಗಳು ಚುಚ್ಚುತ್ತಿರುವ ಕಾವ್ಯಾತಂಕದ ಹೊತ್ತಿನಲ್ಲಿ ಕವಿತೆಯನ್ನು ಜನರ ಬಳಿ ಕೊಂಡೊಯ್ಯುವ ಕಿರುಪ್ರಯತ್ನವನ್ನು 'ಕವಿ' ಪ್ರಕಾಶನ ನಡೆಸುತ್ತ ಬಂದಿದೆ. ಅದರ ಭಾಗವಾಗಿ ಕವಿತೆಗಳನ್ನು ಪ್ರಕಟಿಸುವುದು, ಕವಿಕಾವ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು, ಮಹಿಳಾ ಧ್ವನಿಗೆ ವೇದಿಕೆಯಾಗಲು ಮಹಿಳಾ ಕಾವ್ಯ ಸಂಗ್ರಹಗಳನ್ನು ಪ್ರಕಟಿಸುವುದು, 'ಆಧುನಿಕ ಕನ್ನಡ ಮಹಿಳಾ ಕಾವ್ಯ' ಕುರಿತು ಕವಿ, ವಿಮರ್ಶಕರೊಡನೆ ಸಂವಾದ ಏರ್ಪಡಿಸುವಂತಹ ಕೆಲಸ ಮಾಡುತ್ತಿದೆ.

ಪುಸ್ತಕ ಪ್ರಕಟಣೆ ಕೇವಲ ಮಾರಾಟ ವ್ಯವಹಾರವಲ್ಲ. ಅದೊಂದು ಸಾಂಸ್ಕೃತಿಕ ಜವಾಬ್ದಾರಿಯ ಕ್ರಿಯೆ. ಪ್ರತಿ ಪುಸ್ತಕದ ಹಿಂದೆಯೂ ಸಂವಾದಿಸಲು ಬಯಸುವ ಸೂಕ್ಷ್ಮ ಮನಸ್ಸುಗಳಿರುತ್ತವೆ. ಕಾವ್ಯದ ಓದುಗರ ವರ್ಗಕ್ಕೆ ಸೂಕ್ಷ್ಮ ಸಂವೇದನೆಯ ಕವಯಿತ್ರಿಯರ ಕವಿತೆಗಳನ್ನು ತಲುಪಿಸುವ ಆಶಯ ಹೊತ್ತು ಕವಿ ಪ್ರಕಾಶನ ಪ್ರಾತಿನಿಧಿಕ ಮಹಿಳಾ ಕಾವ್ಯ ಸಂಗ್ರಹವನ್ನು ಎರಡು ವರುಷಗಳಿಗೊಮ್ಮೆ ಹೊರತರುತ್ತಿದೆ. ಈ ಮೊದಲು 2014ರಲ್ಲಿ ನಾನು 'ಕಾವ್ಯಬೋಧಿ' ಸಂಗ್ರಹವನ್ನು ಸಂಪಾದಿಸಿದ್ದೆ. ನಂತರ ಗೆಳತಿ ಡಾ. ಸಬಿತಾ ಬನ್ನಾಡಿ ಸಂಪಾದಿಸಿದ 2015-16ರ ಪ್ರಾತಿನಿಧಿಕ ಸಂಗ್ರಹ 'ಅವಳ ಕವಿತೆ'ಯನ್ನು ಪ್ರಕಟಿಸಿದೆವು. 2017-18ರ ಅವಧಿಯಲ್ಲಿ 53 ಕವಯಿತ್ರಿಯರ ಕಾವ್ಯದ ಕಟ್ಟನ್ನು ಗೆಳತಿ ಡಾ. ಅನಸೂಯಾ ಕಾಂಬಳೆ ಸಂಪಾದಿಸಿ 'ಬೆಂಕಿಯೊಳಗಣ ಬೆಳಕು' ಹೊರಬಂದಿತು. ನಂತರ 2019-20ರ ಸಂಗ್ರಹ ತರಲುದ್ದೇಶಿಸಿದ ವೇಳೆಗೆ ಕೊರೋನಾ ಬಂದೆರಗಿ ಕನ್ನಡದ ಮುದ್ರಣ ಜಗತ್ತು ಕೊಂಚ ಮಂಕಾಯಿತು. ನಾವೂ ನಮ್ಮ ಅರ್ಧ ಪ್ರಯತ್ನವನ್ನು ಅಲ್ಲಿಗೇ ಬಿಟ್ಟು ಈಗ 2020-2022ರ ಪ್ರಾತಿನಿಧಿಕ ಮಹಿಳಾ ಕಾವ್ಯ ಸಂಗ್ರಹ ತರುತ್ತಿದ್ದೇವೆ.

ಇದು ನಮ್ಮ ನಾಲ್ಕನೆಯ ಸಂಗ್ರಹ, ಮಾರುಕಟ್ಟೆಯ ದೃಷ್ಟಿಯಿಂದ ಮಹಿಳಾ ಕಾವ್ಯ ಸಂಗ್ರಹಗಳ ಪ್ರಕಟಣೆ ಏನೇನೂ ಸಫಲ ಪ್ರಯತ್ನವಲ್ಲ. ಅದಕ್ಕೆ ಸಿಗುವ ಸಹೃದಯರ ಬೆಂಬಲವೂ ನಗಣ್ಯ. ಪ್ರಾತಿನಿಧಿಕ ಸಂಗ್ರಹಕ್ಕೆ ಕವನ ಕೊಟ್ಟ ಕವಿಗಳೂ, ಸಾಮೂಹಿಕತೆಯತ್ತ ತುಡಿಯುವ ಮಹಿಳಾ ಮನಸ್ಸುಗಳೂ, ಮಹಿಳಾಪರ ಚಿಂತಕರೂ, ಕಾವ್ಯ ವಿಮರ್ಶಾ ಕ್ಷೇತ್ರವೂ ನಮ್ಮ ಈ ಮೊದಲ ಮಹಿಳಾ ಕಾವ್ಯ ಸಂಗ್ರಹಗಳನ್ನು ಪರಿಚಯಿಸಿದ್ದು, ಚರ್ಚೆ ಮಾಡಿದ್ದು, ಕಾವ್ಯಾಸಕ್ತರನ್ನು ತಲುಪಲು ನೆರವಾದದ್ದು ಇಲ್ಲವೆನ್ನುವಷ್ಟು ಕಡಿಮೆ. ಇಂತಹ ವಿಷಾದಕರ ವಾಸ್ತವ ಎದುರಿಗಿದ್ದರೂ ಮಹಿಳಾ ಸಾಹಿತ್ಯ ಚರಿತ್ರೆ ಮತ್ತು ಈ ಕಾಲದ ಚರಿತ್ರೆ ಕಟ್ಟುವ ದೃಷ್ಟಿಯಿಂದ ಇದು ಆಗಲೇಬೇಕಾದ ಕೆಲಸ ಎಂದು ನಾಲ್ಕನೆಯ ಸಂಗ್ರಹ ಪ್ರಕಟಿಸುತ್ತಿದ್ದೇವೆ.

ಕವಿ ಪ್ರಕಾಶನಕ್ಕಾಗಿ ಈ ಸಲದ ಪ್ರಾತಿನಿಧಿಕ ಸಂಕಲನ ಸಂಪಾದನೆ ಮಾಡಲು ಅಕ್ಕ ಪ್ರೊ. ಸಬಿಹಾ ಅವರನ್ನು ಕೇಳಿದಾಗ ಪ್ರೀತಿಯಿಂದಲೇ ಒಪ್ಪಿಕೊಂಡರು. ಶಿಸ್ತುಬದ್ಧ, ಯೋಜನಾಬದ್ಧ, ಕಾಲಮಿತಿಯಲ್ಲಿ ಕೆಲಸ ಮುಗಿಸುವ ಶ್ರದ್ಧೆಗೆ ಅವರು ಹೆಸರುವಾಸಿ. ತಾವು ವಹಿಸಿಕೊಂಡ ಜವಾಬ್ದಾರಿಯುತ ಸ್ಥಾನಗಳನ್ನು, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಗಳಾದಾಗ ಮಾಡಿದ ಕೆಲಸದ ಪರಿಯನ್ನು ಹತ್ತಿರದಿಂದ ಗಮನಿಸಿದವರೆಲ್ಲರೂ ಇದನ್ನು ತಿಳಿದಿರುತ್ತಾರೆ.

ಈ ಸಂಗ್ರಹ ತರಲುದ್ದೇಶಿಸಿ ಕವಯಿತ್ರಿಯರ ಪಟ್ಟಿ ಮಾಡುತ್ತ ಹೋದೆವು. ಕನ್ನಡದಲ್ಲೀಗ ಎಷ್ಟೊಂದು ಮಹಿಳಾ ಕವಿಮನಸುಗಳಿವೆ ಎಂದು ಅಚ್ಚರಿಯೂ, ಸಂತಸವೂ ಒಟ್ಟೋಟ್ಟಿಗೆ ಆಯಿತು. ಯಾರನ್ನು ಇಟ್ಟುಕೊಳ್ಳುವುದು, ಯಾರನ್ನು ಬಿಡುವುದು ಎಂದು ಗೊಂದಲವಾಗುವಷ್ಟು ಒಳ್ಳೆಯ, ಮುಖ್ಯ ಕವಿಗಳು ಕನ್ನಡದಲ್ಲಿದ್ದಾರೆ. ಕೊನೆಗೆ ಕವಿತೆಯನ್ನು ಮುಖ್ಯ ಅಭಿವ್ಯಕ್ತಿ ಮಾಧ್ಯಮವಾಗಿ ಪರಿಗಣಿಸಿದ ಕವಿಗಳಿರಲೆಂದು ನಿರ್ಧರಿಸಿದೆವು. ಕಳೆದ ಮೂರು ಸಂಗ್ರಹದಲ್ಲಿರದ ಕೆಲವು ಹೊಸ ಕವಿಗಳೂ ಈ ಸಂಕಲನದಲ್ಲಿರುವಂತೆ; ಎಲ್ಲ ವಯೋಮಾನ-ಸಾಮುದಾಯಿಕ ಹಿನ್ನೆಲೆ-ಪ್ರಾದೇಶಿಕ ಹಿನ್ನೆಲೆಯ ಕವಯಿತ್ರಿಯರೂ ಇರುವಂತೆ ಯಾದಿ ಸಿದ್ಧವಾಯಿತು. ಅಂತೂ ಐವತ್ತಾರು ಕವಿಗಳ ಕವಿತೆಗಳಿರುವ ಈ ಸಂಗ್ರಹ ಸಿದ್ಧಗೊಂಡಿದೆ.

ನಿವೃತ್ತಿಯ ಬಳಿಕ ಸಂಘಟನೆ, ಸಾಹಿತ್ಯ, ಶಿಕ್ಷಣನೀತಿ ನಿರೂಪಣೆ, ಸಭೆಗಳೇ ಮೊದಲಾಗಿ ಒಂದೇಸಮ ತೆರೆಮರೆಯಲ್ಲಿ ಸಮಾಜದ ನಾನಾ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ ಸಬಿಹಕ್ಕ ತಮ್ಮ ಕೆಲಸದ ಒತ್ತಡದ ನಡುವೆಯೂ ಈ ಹೊತ್ತಗೆಯನ್ನು ಸಂಪಾದಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅಧ್ಯಯನಪೂರ್ಣ ಪ್ರಾಸ್ತಾವಿಕ ಮಾತನ್ನೂ ಬರೆದಿದ್ದಾರೆ.

ಅವರು ಎತ್ತಿದ ಹಲವು ಸಂಗತಿಗಳು ಗಂಭೀರ ಚರ್ಚೆಯನ್ನು ಬಯಸುತ್ತವೆ. ಅವರ ಕಾವ್ಯಪ್ರೇಮ ಮತ್ತು ಸಾಮಾಜಿಕ, ಸಾಹಿತ್ಯಕ ಪ್ರೀತಿಗಳನ್ನು ಎತ್ತಿ ತೋರಿಸುವಂತಿದೆ. ಅವರಿಗೆ ಕವಿ ಪ್ರಕಾಶನದ ವತಿಯಿಂದ ಪ್ರೀತಿ ತುಂಬಿದ ಶರಣು. ಈ ಸಂಕಲನಕ್ಕೆ ತಮ್ಮ ಕವಿತೆ ನೀಡಿದ ಎಲ್ಲ ಕವಿ ಮಿತ್ರೆಯರಿಗೆ ಪುಟವಿನ್ಯಾಸ ಮಾಡಿದ ಎಚ್. ಕೆ. ಶರತ್‌ಗೆ; ಮುಖಪುಟ ರೂಪಿಸಿದ ಜಿ. ಅರುಣಕುಮಾರ್‌ಗೆ; ಅಂದವಾಗಿ ಮುದ್ರಿಸಿದ ಮುದ್ರಣಾಲಯ ಸಿಬ್ಬಂದಿಗಳಿಗೆ; ಪ್ರಕಾಶನದ ಎಲ್ಲ ಪುಸ್ತಕಗಳ ಮಾರಾಟದ ಜವಾಬುದಾರಿ ಹೊತ್ತ, ವಿಮರ್ಶೆಯ ಮುಳ್ಳಾಡಿಸುತ್ತಲೇ ಜೊತೆ ನಡೆಯುವ ಗೆಳೆಯ ಬಸೂವಿಗೆ; ನನ್ನ ಪ್ರಯತ್ನಗಳನ್ನು ಗಮನಿಸುತ್ತ ಬೆಂಬಲಿಸುವ ಕಾರ್ಮೋಡದ ನಡುವೆ ಬೆಳ್ಳಿ ಕಿರಣದಂತೆ ಎಂದೋ ಮೆಚ್ಚುಗೆಯ ಬೆಂಬಲಕ್ಕೆ ಮನದಾಳದ ಶರಣು.

- ಎಚ್. ಎಸ್. ಅನುಪಮಾ

MORE FEATURES

ಮ್ಯಾಜಿಕ್ ನಂತೆ ಮಂತ್ರ ಮುಗ್ಧಗೊಳಿಸುವ ಕತೆಗಳು

30-12-2024 ಬೆಂಗಳೂರು

"ನನಗೆ ತುಂಬಾ ಇಷ್ಟವಾದ ಕತೆ ಮ್ಯಾಜಿಕ್ ಸೌಟು. ಇದರಲ್ಲಿ ಕೆಲಸದಾಕೆಯ ಕೈ ರುಚಿ ನೀಡುವ ನೆಮ್ಮದಿಗಾಗಿ ಹಂಬಲಿಸುವ ಕುಟ...

ಮಕ್ಕಳಿಗಾಗಿ ಬರೆಯುವುದೆಂದರೆ ಮಕ್ಕಳಾಟವಲ್ಲ

30-12-2024 ಬೆಂಗಳೂರು

“ಎಲ್ಲದಕ್ಕಿಂತ ಮುಖ್ಯವಾಗಿ ಇವೆಲ್ಲ ಕಾದಂಬರಿಯ ಮುಖ್ಯ ಕಥಾನಕಕ್ಕೆ ಪೂರಕ ಅಂಶಗಳಾಗಿ ಬಂದುಹೋಗುವುದರಿಂದ, ಓದುಗರಿಗೆ...

ಸೋಲಿಸಬೇಡ ಗೆಲಿಸಯ್ಯಾ... 

30-12-2024 ಬೆಂಗಳೂರು

"ಕರಾವಳಿಯ ಘಟನೆಯಲ್ಲಿ ಶಿಕ್ಷಕಿಯ ವಿರುದ್ಧ ರೂಪುಗೊಂಡ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೂ ಇದ್ದರು. ತಮಗೆ ಕಲಿಸಿದ ಗ...