“ಸರಳವಾದ ಭಾಷಾ ಬಳಕೆ ಹಾಗೂ ಸಮಕಾಲೀನ ಯುಗಧರ್ಮದ ಅರಿವಿಗೆ ತಕ್ಕಂತೆ ಸಂಗೀತವು ಬದಲಾಗುತ್ತಿರುವ ರೀತಿಯ ಬಗೆಗಿನ ಸಕಾರಾತ್ಮಕ ದೃಷ್ಟಿಕೋನದಿಂದಾಗಿ ಈ ಪುಸ್ತಕವು ಕನ್ನಡದ ಓದುಗರಿಗೆ ಒಳ್ಳೆಯ ಓದಿನ ಅನುಭವವವನ್ನು ನೀಡುತ್ತದೆ,” ಎನ್ನುತ್ತಾರೆ ಎಲ್. ಜಿ. ಮೀರಾ ಅವರು ಜಯದೇವಿ ಜಂಗಮಶೆಟ್ಟಿ ಅವರ “ನಿಜದ ಬೆಳಗಿನ ನಾದ” ಕೃತಿಗೆ ಬರೆದ ಮುನ್ನುಡಿ.
`ಸಂಗೀತವು ವಿಶ್ವದ ಏಕೈಕ ಸಾರ್ವತ್ರಿಕ ಭಾಷೆ’ ಎಂಬ ಸೂಕ್ತಿ ಇದೆ. ಅಂದ ಮೇಲೆ ಸಂಗೀತದ ಬಗ್ಗೆ ಕನ್ನಡದಲ್ಲಿ ಮಾತಾಡುವುದು ಅಂದರೆ ಕನ್ನಡವನ್ನು ವಿಶ್ವಾತ್ಮಕಗೊಳಿಸಿದಂತೆಯೇ ಸರಿ. ಇಂತಹ ಒಂದು ಪ್ರಯತ್ನವೇ ಡಾ.ಜಯದೇವಿ ಜಂಗಮಶೆಟ್ಟಿಯವರ `ನಿಜದ ಬೆಳಗಿನ ನಾದ’ ಎಂಬ ನೂತನ ಪ್ರಬಂಧ ಸಂಗ್ರಹ.
ಖ್ಯಾತ ಹಿಂದೂಸ್ಥಾನಿ ಸಂಗೀತಗಾರ್ತಿಯೂ, ಲೇಖಕಿಯೂ ಹಾಗೂ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಸಂಗೀತ ಪ್ರಾಧ್ಯಾಪಕರೂ ಆಗಿರುವ ಶ್ರೀಮತಿ ಜಯದೇವಿ ಜಂಗಮಶೆಟ್ಟಿ ಅವರ ಈ ಪ್ರಬಂಧ ಸಂಕಲನದಲ್ಲಿ ಒಟ್ಟು ಹದಿನಾಲ್ಕು ಲೇಖನಗಳಿವೆ. ಈ ಲೇಖನಗಳ ಮೂಲಕ ಈ ಲೇಖಕಿಯು ಸಂಗೀತವನ್ನು ಕುರಿತಾದ ಸಮಕಾಲೀನ ಸಂವಾದವನ್ನು ಮಾಡುತ್ತಿದ್ದಾರೆ. ಇಂತಹ ಸಂವಾದಗಳು ಕನ್ನಡದ ಮಟ್ಟಿಗೆ ಅತ್ಯಗತ್ಯ ಮತ್ತು ಅಪೇಕ್ಷಣೀಯವಾಗಿವೆ.
ಇಂದಿನ ಸಂದರ್ಭವೆAದರೆ ಸಾಮಾಜಿಕ ಮಾಧ್ಯಮಗಳು ನಮ್ಮ ಬದುಕು ಹಾಗೂ ಸಂಸ್ಕೃತಿಯ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿರುವ ಕಾಲ. ಈ ಸಂಗತಿಯನ್ನು ಇಲ್ಲಿನ ತಮ್ಮ ಮೊದಲ ಲೇಖನವಾದ `ಪ್ರದರ್ಶನ ಕಲೆ ಮತ್ತು ಮಾಧ್ಯಮ : ಸಾಂಸ್ಕೃತಿಕ ದೃಷ್ಟಿಕೋನ’ದಲ್ಲಿ ಡಾ.ಜಯದೇವಿಯವರು ಪರಿಗಣಿಸಿದ್ದಾರೆ. `ಈ ಹಿಂದೆ ಪ್ರಭಾವೀ ಪಟ್ಟಭದ್ರರ ಹಿಡಿತದಲ್ಲಿ ಇರುಕಿಕೊಂಡು ಒದ್ದಾಡುತ್ತಿದ್ದ ಸಂಗೀತ ಕ್ಷೇತ್ರಕ್ಕೆ ನೂತನ ಸಾಮಾಜಿಕ ಮಾಧ್ಯಮಗಳಿಂದಾಗಿ ಸ್ವಾತಂತ್ಯ್ರ ಸಿಕ್ಕಿದೆ, ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂ ಮುಂತಾದ ಸ್ವತಂತ್ರ ಮಾಧ್ಯಮಗಳಿಂದಾಗಿ ಯುವ ಕಲಾವಿದರು ನೇರವಾಗಿ ಸಂಗೀತ ರಸಿಕರನ್ನು ತಲುಪಲು ಸಾಧ್ಯವಾಗುತ್ತಿದೆ’ ಎಂಬ ಇವರ ನಿಲುವು ಸೂಕ್ತವಾಗಿದೆ ಮತ್ತು ಇದು ಇವರ ಪ್ರಗತಿಪರ ವಿಚಾರಧಾರೆಗೆ ಸಾಕ್ಷಿಯಾಗಿದೆ.
ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ಇರುವಂತಹ ಹಲವಾರು ಗಾಯನ ಪದ್ಧತಿಗಳಲ್ಲಿ ಖ್ಯಾಲ್ ಗಾಯನ ಪದ್ಧತಿಯೂ ಒಂದು. ಖ್ಯಾಲ್ ಎಂಬ ಪದದ ಅರ್ಥ, ಈ ಶೈಲಿಯು ದ್ರುಪದ್ ಶೈಲಿಯಿಂದ ಹುಟ್ಟಿದ ನೆಲೆ, ಅದರಲ್ಲಿರುವ ಸೃಜನಶೀಲ ಹಾಡಿನ ಕಲ್ಪನೆ ಇವುಗಳನ್ನು ಲೇಖಕಿ ಮೊದಲು ವಿವರಿಸಿ, ನಂತರ ಹೇಗೆ ಅಮಿರ್ ಖುಸ್ರೊ ಇದಕ್ಕೆ ಮೂಲಪುರುಷನಾಗಿರಬಹುದೇ ಎಂಬುದನ್ನು ಚರ್ಚಿಸುತ್ತಾರೆ. ಮುಂದುವರಿದು ``ಸ್ವರಗಳ ಆರೋಹ, ಅವರೋಹಗಳ ಬಳಕೆಯಿಂದ ಮಾತ್ರ ರಾಗ ನಿರ್ಮಾಣವಾಗುವುದಿಲ್ಲ. ಸ್ವರಗಳಲ್ಲಿನ ಜೀವದ್ರವ್ಯ ರಾಗದ ಭಾವಕ್ಕೆ ಪೂರಕವಾಗಿರಬೇಕಾಗುತ್ತದೆ. ಪ್ರತಿಯೊಂದು ರಾಗದ ಸ್ವರೂಪ ಆಯಾ ರಾಗದ ರಸಭಾವಗಳಿಗನುಗುಣವಾಗಿ ಭಿನ್ನವಾಗಿರುತ್ತದೆ. ರಾಗ ಮತ್ತು ಸ್ವರಗಳ ಭಾವಸಂಬಂಧದ ಸ್ವರೂಪವನ್ನು ಅರಿಯದೇ ಹೋದರೆ ನಿರೀಕ್ಷಿತ ಪ್ರಮಾಣದ ಭಾವತನ್ಮಯತೆ ಹಾಗೂ ಸೌಂದರ್ಯಾನುಭೂತಿಯ ಮಟ್ಟಕ್ಕೆ ತಲುಪಲು ಸಾಧ್ಯ ಆಗುವುದಿಲ್ಲ. ಯಾಂತ್ರಿಕ ಶಾಸ್ತçದ ಬಲ ಎಷ್ಟೇ ಇದ್ದರೂ ಭಾವ-ಬಂಧದ ಸಾಮರಸ್ಯವೇ ಸೌಂದರ್ಯ ಹೆಚ್ಚಿಸುವ ಪ್ರಮುಖ ಅಂಗ ಎನ್ನುವುದು(ದನ್ನು) ಸಂಗೀತಗಾರರು ಮನಗಾಣಬೇಕು’’ ಎಂದಿದ್ದಾರೆ. ಹಾಗೂ ಈ ಮೂಲಕ ಸಂಗೀತ ಕ್ಷೇತ್ರಕ್ಕೆ ಬಹು ಮುಖ್ಯವಾದ ವಿಷಯವೊಂದನ್ನು ಹೇಳಿದ್ದಾರೆ ಅನ್ನಬಹುದು. `ಕೇಳನೋ ಹರಿ ತಾಳನೋ, ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ’ ಎಂಬ ತಿಳುವಳಿಕೆಯನ್ನು ನಮಗೆ ಕೊಟ್ಟ ಪುರಂದರ ದಾಸರ ಕೀರ್ತನೆ ಇಲ್ಲಿ ನೆನಪಾಗುತ್ತದೆ. `ಖ್ಯಾಲ್ ಗಾಯನವು ಕೇವಲ ರಾಗ ಸಾಕ್ಷಾತ್ಕಾರ ಮಾತ್ರವಲ್ಲ, ಅದು ದೈವ ಸಾಕ್ಷಾತ್ಕಾರ’ ಎಂಬ ಉನ್ನತ ಭಾವನೆಯು ಸಂಗೀತ ಪ್ರಪಂಚದಲ್ಲಿರುವುದನ್ನು ಈ ಲೇಖಕಿಯು ಪ್ರಸ್ತುತ ಲೇಖನದಲ್ಲಿ ಸೋದಾಹರಣವಾಗಿ ಪರಿಚಯಿಸಿದ್ದಾರೆ.
ಇದೇ ರೀತಿಯಲ್ಲಿ `ವಚನ ಸಾಹಿತ್ಯ ಮತ್ತು ಸಂಗೀತ’ ಎಂಬ ಲೇಖನದಲ್ಲಿ, `ವಚನಗಳನ್ನು ಹಾಡುವಾಗಲೂ ಅವುಗಳ ಅರ್ಥಕ್ಕೆ ಚ್ಯುತಿ ಬರದಂತೆ ಹಾಡಬೇಕು’ ಎಂಬ ಅನಿಸಿಕೆಯನ್ನು ಇವರು ವ್ಯಕ್ತ ಪಡಿಸಿದ್ದಾರೆ. ಜೊತೆಗೆ `ಬಸವ ಜಯಂತಿ-ವಚನ ಸಂಗೀತ : ಸ್ಥಿತ್ಯಂತರದ ನೆಲೆಗಳು’ ಎಂಬ ಇವರ ಲೇಖನವು ಕಾಲಾಂತರದಲ್ಲಿ ವಚನ ಸಂಗೀತದಲ್ಲಿ ಆಗಿರುವಂತಹ ಬೆಳವಣಿಗೆ ಹಾಗೂ ಪ್ರಯೋಗಗಳನ್ನು ಸಮೀಕ್ಷೆ ಮಾಡುವಲ್ಲಿ ಯಶಸ್ವಿಯಾಗಿದೆ. `ವಚನ ಗಾಯನ ಪರಂಪರೆ – ಒಂದು ಸಂಗೀತಾತ್ಮಕ ಅಧ್ಯಯನ’ ಎಂಬುದು ಈ ಲೇಖಕಿಯ ಪಿ.ಎಚ್.ಡಿ. ಮಹಾಪ್ರಬಂಧದ ವಿಷಯ ಎಂಬುದನ್ನು ನಾವು ಇಲ್ಲಿ ಗಮನಿಸಬೇಕು. ವಚನ ಸಾಹಿತ್ಯ ಪರಂಪರೆಗೆ ಮಹತ್ವದ ಕೊಡುಗೆ ಕೊಟ್ಟು, ಪ್ರಗತಿಪರ ವಿಚಾರಗಳ ಹರಿಕಾರರಾಗಿದ್ದು, `ದ್ವಿತೀಯ ಅಲ್ಲಮ’ ಎಂಬ ಬಿರುದನ್ನು ಪಡೆದಿದ್ದ ಗದುಗಿನ ತೋಂಟದಾರ್ಯ ಮಠದ ಪೂಜ್ಯಶ್ರೀ ಸಿದ್ಧಲಿಂಗ ಸ್ವಾಮಿ’ ಅವರನ್ನು ಕುರಿತ `ಮನೆಮಂಗಳ ಜಂಗಮಜ್ಯೋತಿ’ ಲೇಖನವು ಸಹ ಈ ಕೃತಿಯಲ್ಲಿದೆ.
ಈ ಕೃತಿಯಲ್ಲಿನ `ಭಾರತೀಯ ಸಂಗೀತ : ಹೊಸ ಪ್ರಯೋಗಗಳು’ ಎಂಬ ಲೇಖನವು ಆಸಕ್ತಿ ಹುಟ್ಟಿಸುತ್ತದೆ. ಇದರಲ್ಲಿ ವೇದಗಳ ಕಾಲದ ಉಚ್ಚಾರದಿಂದ ಹಿಡಿದು ಇಂದಿನ `ಬೆಸೆದ(ಫ್ಯೂಷನ್) ಸಂಗೀತ’ದ ತನಕ ಕರ್ನಾಟಕ ಸಂಗೀತ, ಹಿಂದೂಸ್ಥಾನೀ ಸಂಗೀತ, ನರ್ತನ, ವಾದ್ಯಸಂಗೀತದಲ್ಲಿ ಆಗಿರುವ ಪ್ರಯೋಗಗಳ ಕಡೆಗೆ ಲೇಖಕಿ ಪಕ್ಷಿನೋಟ ಬೀರಿದ್ದಾರೆ. ಸಂಗೀತಕ್ಕಿರುವ ಭಾವೈಕ್ಯತೆ ಹಚ್ಚಿಸುವ ಶಕ್ತಿಯನ್ನು ಇವರ `ರಾಷ್ಟ್ರೀಯ ಭಾವೈಕ್ಯತೆ : ಸಂಗೀತದ ಪಾತ್ರ’ ಎಂಬ ಲೇಖನವು ಗುರುತಿಸಿದೆ. ``ಅನೇಕ ಮಂದಿ ರಾಷ್ಟ್ರೀಯ ಗೀತೆಯನ್ನು ಏಕಸ್ವರದಲ್ಲಿ ಹಾಡುವುದು ಬಹು ಸ್ಫೂರ್ತಿದಾಯಕ ಮತ್ತು ಉತ್ತೇಜಕ’’ ಎಂಬ ರಾಷ್ಟ್ರಪಿತ ಗಾಂಧೀಜಿಯವರ ಮಾತನ್ನು ಲೇಖಕಿ ಉಲ್ಲೇಖಿಸಿದ್ದಾರೆ.
ಈ ಕೃತಿಯ ಒಂದು ಬಹುಮುಖ್ಯ ಲೇಖನ ಅಂದರೆ ಲೇಖಕಿಯು ತಮ್ಮ ಸ್ವಾನುಭವದಿಂದ ಬರೆದ `ತತ್ವಪದಗಳ ನಿಜ ತೋರಿದ ಗಜಲ್ ಗುಂಡಮ್ಮ’ ಎಂಬ ಲೇಖನ. ಈ ಲೇಖಕಿಯು ತಾವು ಏಳನೆಯ ತರಗತಿಯ ಬಾಲಕಿಯಾಗಿದ್ದಾಗ ರಾಯಚೂರಿನಲ್ಲಿ ಗಜಲ್ ಗುಂಡಮ್ಮನವರನ್ನು ನೋಡಿದ್ದು ಇವರನ್ನು ಬಹುವಾಗಿ ಪ್ರಭಾವಿಸಿತು. ಖ್ಯಾತ ಲೇಖಕ ಶಾಂತರಸ ಅವರ ಪತ್ನಿ ಲಕ್ಷಿö್ಮÃದೇವಿಯವರು ಈ ಲೇಖಕಿಯ ಸೋದರತ್ತೆ. ಹೀಗಾಗಿ ಶಾಂತರಸ ಅವರ ಮನೆಯ ಸಾಹಿತ್ಯ-ಸಂಗೀತಗಳ ವಾತಾವರಣಕ್ಕೆ ಬಾಲ್ಯದಲ್ಲಿ ತೆರೆದುಕೊಳ್ಳುವ ಅವಕಾಶವು ಇವರಿಗೆ ದೊರೆಯಿತು. ಆ ಸಂದರ್ಭದಲ್ಲಿ ಶಾಂತರಸರ ಒತ್ತಾಸೆಯ ಮೇರೆಗೆ ರಾಯಚೂರಿಗೆ ಬಂದ ಸಾಹಿತಿ, ಕಲಾವಿದರೆಲ್ಲರೂ ಆ ಊರಿನ ಮಂಗಳವಾರ ಪೇಟೆಯ ಅಟ್ಟದ ಮನೆಗೆ ಹೋಗಿ ಗಜಲ್ ಗುಂಡಮ್ಮ ಎಂಬ ಅಪರೂಪದ ಗಾಯಕಿಯ ಸಂಗೀತದ ಸಾಂಗತ್ಯ ಪಡೆಯುತ್ತಿದ್ದರು. ಅವೆಲ್ಲಕ್ಕೆ ಈ ಪುಟ್ಟ ಬಾಲಕಿ ಸಾಕ್ಷಿಗಾಗುತ್ತಿದ್ದದ್ದು ಆ ಎಳೆಯ ಮನಸ್ಸಿನ ಮೇಲೆ ತುಂಬ ಪ್ರಭಾವ ಬೀರಿತು. ಕಂಚಿನ ಕಂಠದ ಆ ಹಿರಿಯ ಗಾಯಕಿಯು ತಮ್ಮ ಮನೆಗೆ ಬಂದದ್ದAತೂ ಈ ಪುಟ್ಟ ಬಾಲಕಿಯ ಮಟ್ಟಿಗೆ ಮರೆಯಲಾಗದ ನೆನಪಾಯಿತು.
ಗಜಲ್ ಗುಂಡಮ್ಮನವರ ಅದಮ್ಯ ಸಂಗೀತಪ್ರೀತಿ ಮತ್ತು ಬಡತನದ ಕಷ್ಟಜೀವಿತದ ಜೀವನರೇಖೆಯನ್ನು ಈ ಲೇಖನವು ಗುರುತಿಸಿದೆ. ಗಜಲ್ ಹಾಡುವುದನ್ನು ಕಲಿಯುವ ಮಹದಾಸೆಯಿದ್ದ ಗುಂಡಮ್ಮ, ಕಲಬುರ್ಗಿ ನಗರದಲ್ಲಿ ಗಜಲ್ ಹೇಳಿಕೊಡುತ್ತಿದ್ದ ಗುರು ಅಜೀಜ್ ಮಾಸ್ತರರ ಮನೆಯಲ್ಲಿ ಎಳೆವಯಸ್ಸಿನಲ್ಲಿ ಕೆಲಸಕ್ಕೆ ಸೇರಿದ್ದು, ತಮ್ಮ ಒಬ್ಬ ಶಿಷ್ಯೆಗೆ ಆ ಗುರುಗಳು ಹೇಳಿಕೊಟ್ಟ ಒಂದು ಗಜಲನ್ನು ಆ ಶಿಷ್ಯೆ ಹಾಡಲಾಗದಿದ್ದರೂ, ಅಡಿಗೆ ಕೆಲಸ ಮಾಡುತ್ತಿದ್ದ ಈ ಹುಡುಗಿ ಗುಂಡಮ್ಮ ಪಾಠ ಕೇಳಿಸಿಕೊಂಡು ಕಲಿತು, ಕೆಲಸ ಮಾಡುತ್ತಲೇ ಆ ಗಜಲನ್ನು ತಾನು ಸುಶ್ರಾವ್ಯವಾಗಿ ಹಾಡಿಕೊಂಡದ್ದು, ಅದು ಗುರುಗಳ ಕಿವಿಗೆ ಬಿದ್ದು ಈಕೆಗಿದ್ದ ಅತಿಮಧುರ ಸ್ವರ ಹಾಗೂ ಕಲಿಯುವ ಆಸಕ್ತಿ ನೋಡಿ ಗುರುಗಳೇ ಮಂತ್ರಮುಗ್ಧರಾದದ್ದು, ನಂತರ ತಾವೇ ಸಂತೋಷದಿಂದ ಗಜಲ್ ಹಾಡುಗಾರಿಕೆಯ ರೀತಿಯನ್ನು ಮತ್ತು ಉರ್ದು ಭಾಷೆಯ ಸೂಕ್ಷö್ಮಗಳನ್ನು ಗುಂಡಮ್ಮನಿಗೆ ಕಲಿಸಿದ್ದು – ಇವೆಲ್ಲವನ್ನು ಓದುತ್ತಿದ್ದರೆ `ನಿಜವೇ ಇದು?’ ಎಂಬಷ್ಟರ ಮಟ್ಟಿಗೆ ಬೆರಗಾಗುತ್ತದೆ. ಜಾತಿ, ಧರ್ಮ, ಹಣಕಾಸಿನ ಸ್ಥಿತಿಗತಿಗಳನ್ನು ಮೀರಿದ ಗುರು-ಶಿಷ್ಯ ವಾತ್ಸöಲ್ಯ ಭಾವ ಹಾಗೂ ಸಂಗೀತಪ್ರೀತಿಯ ಪಯಣ ಇದು. ೧೯೪೮ರ ಸೂಕ್ಷö್ಮ ರಾಜಕೀಯ ಸನ್ನಿವೇಶದಲ್ಲಿ ರಜಾಕಾರರ ಆಕ್ರಮಣದಿಂದಾಗಿ ಕಲಬುರ್ಗಿ ಬಿಟ್ಟು ರಾಯಚೂರಿನಲ್ಲಿ ಗುಂಡಮ್ಮ ತಮ್ಮ ಬದುಕು ಕಟ್ಟಿಕೊಳ್ಳಬೇಕಾಗಿ ಬಂದಿದ್ದು, ಗಂಡನ ಅಕಾಲ ಮರಣಾನಂತರ ಹಾಡು ಹಾಡಿಯೇ ಜೀವನೋಪಾಯ ಮಾಡಿಕೊಳ್ಳುವ ಪರಿಸ್ಥಿತಿ ಬಂದದ್ದು, ಭಜನಾ ಮಂಡಳಿಗಳಲ್ಲಿ ಹಾಡಿ, ಮಹಿಳಾ ಗಾನತಂಡ(ಆರ್ಕೆಸ್ಟಾç) ಕಟ್ಟಿಕೊಂಡು ಹಾಡಿ ಜೀವನ ಮಾಡಿದ್ದು, ಶಾಂತರಸ, ಚುಕ್ಕಿ ಉಮಾಪತಿ, ಸಂತೋಷಕುಮಾರ ಗುಲ್ವಾಡಿ, ಲಹರಿ ವೇಲು ಮುಂತಾದ ಸಂಗೀತ-ಸಾಹಿತ್ಯ-ಪ್ರೋತ್ಸಾಹಕ ಮಹನೀಯರ ತುಂಬುಮನದ ಬೆಂಬಲದಿAದಾಗಿ ಈಕೆ ಜನಪ್ರಿಯ ಗಜಲ್-ತತ್ವಪದ ಗಾಯಕಿಯಾಗಿ ಬೆಳೆದದ್ದು - ಓಹ್ ಈ ಒಟ್ಟು ಕಥಾನಕವೇ ಒಂದು ಸಿನಿಮಾದಂತಿದೆ. ಇವರ ಮಗಳು ಮಂಜುಳಾ ಇವರ ಗಾಯನದ ವಾರಸುದಾರಿಕೆ ಪಡೆದು, ಉನ್ನತ ವಿದ್ಯಾಭ್ಯಾಸ ಹೊಂದಿ ತನ್ನ ಕಾಲ ಮೇಲೆ ನಿಂತಿದ್ದು ಮಾತ್ರವಲ್ಲದೆ ಕರ್ನಾಟಕದ ಮೊಟ್ಟಮೊದಲ ಮಹಿಳಾ ತಬಲಾವಾದಕಿಯಾಗಿದ್ದು ಗಮನೀಯ ವಿಷಯ. ಆದರೆ ಲೇಖಕಿಯು ಸರಿಯಾಗಿ ಗುರುತಿಸಿರುವಂತೆ `ಶ್ರೀಮಂತ ಗಜಲ್ ಸಂಗೀತ ಹಾಡಿ ಬಡವರಾಗಿದ್ದ’ ಗುಂಡಮ್ಮ, ಗುರುತಿಸುವವರ ಕೊರತೆಯಿಂದಾಗಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಾಗದೆ ಹೋದ ಅಪ್ಪಟ ದೇಸಿ ಪ್ರತಿಭೆ. ಹೀಗೆ, ಗಜಲ್ ಗುಂಡಮ್ಮನವರನ್ನು ಪರಿಚಯಿಸುವ ಮೂಲಕ, ನಮ್ಮ ಸಂಗೀತ ಪ್ರಪಂಚದ ಕಣ್ಣು ತೆರೆಸುವ ಲೇಖನವೊಂದನ್ನು ಈ ಲೇಖಕಿ ಬರೆದಿದ್ದಾರೆ, ತನ್ಮೂಲಕ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನಬೇಕು.
`ಮೇರುಗಿರಿಗಳೆಲ್ಲವು ಪ್ರಮಥರೊಡನೆ’ ಎಂಬ ಲೇಖನವು ಈ ಲೇಖಕಿಯ ವೃತ್ತಿಬದುಕಿನ ಕೆಲವು ಆತ್ಮಕಥನಾತ್ಮಕ ಅಂಶಗಳನ್ನು ಒಳಗೊಂಡಿದ್ದು, ಹಿರಿಯ ಭಾಷಾವಿಜ್ಞಾನಿ ಹಾಗೂ ಜಾನಪದ ತಜ್ಞ ಡಾ.ಎಚ್.ಎಂ.ಮಹೇಶ್ವರಯ್ಯನವರ ಮಾನವೀಯ ಅಂತಃಕರಣದ ಮುಖವನ್ನು ತೆರೆದಿಡುತ್ತದೆ.
`ಕನ್ನಡ ಭಾಷೆಯ ಅಭಿವೃದ್ಧಿಯಲ್ಲಿ ಸಂಗೀತ ಮತ್ತು ಪ್ರದರ್ಶಕ ಕಲೆಗಳ ಪಾತ್ರ’ವನ್ನು ಗುರುತಿಸುವ ಪ್ರಯತ್ನ ಮಾಡುವ ಒಂದು ಲೇಖನವೂ ಈ ಕೃತಿಯಲ್ಲಿ ಸೇರಿದೆ.
ಈ ಕೃತಿಯಲ್ಲಿ ಸೇರಿರುವ ಈ ಲೇಖಕಿಯ ಒಂದು ಸಂದರ್ಶನ (ಸುಧಾ ಪತ್ರಿಕೆಯಲ್ಲಿ ಪ್ರಕಟಗೊಂಡದ್ದು, ಸಂದರ್ಶಕಿ – ಉಮಾ ಅನಂತ್) ದಲ್ಲಿ ಸಂಗೀತವನ್ನು ಕುರಿತ ಇವರ ಇನ್ನಷ್ಟು ನಿಲುವುಗಳು ವ್ಯಕ್ತವಾಗಿವೆ. `ಗುರುಕುಲ ಪದ್ಧತಿಯಾಗಲಿ, ಆಧುನಿಕ ಶೈಕ್ಷಣಿಕ(ಅಕೆಡೆಮಿಕ್) ಪದ್ಧತಿಯಾಗಲಿ, ಕಲಿಸುವ ಗುರು ಮತ್ತು ಕಲಿಯುವ ಶಿಷ್ಯನ ಸಮರ್ಪಣಾ ಭಾವವು ಪ್ರಧಾನ ಪಾತ್ರ ವಹಿಸುತ್ತವೆ, ಸಂಗೀತ ಕಲಾವಿದರಿಗೆ ಅತ್ಯಂತ ಮುಖ್ಯವಾದುದು ಅಂದರೆ ರಿಯಾಜ್(ಅಭ್ಯಾಸ, ತಾಲೀಮು), ದೂರ ಸಂಪರ್ಕ ಪದವಿಗಳಂತೆ ಸಂಗೀತವನ್ನು ಕಲಿಯಲಾಗದು’ ಎಂಬ ಲೇಖಕಿಯ ಅಭಿಪ್ರಾಯಗಳು ಎಲ್ಲರೂ ಒಪ್ಪುವಂಥವಾಗಿವೆ.
ಒಟ್ಟಿನಲ್ಲಿ `ನಿಜದ ಬೆಳಗಿನ ನಾದ’ವಾದ ಈ ಕೃತಿಯ ಬಗ್ಗೆ ತೀರ್ಮಾನ ರೂಪದಲ್ಲಿ ಹೀಗೆ ಹೇಳಬಹುದು. ಸಂಗೀತದ ಬಗ್ಗೆ ಆಳವಾದ ಪ್ರೀತಿ, ಸರಳವಾದ ಭಾಷಾ ಬಳಕೆ ಹಾಗೂ ಸಮಕಾಲೀನ ಯುಗಧರ್ಮದ ಅರಿವಿಗೆ ತಕ್ಕಂತೆ ಸಂಗೀತವು ಬದಲಾಗುತ್ತಿರುವ ರೀತಿಯ ಬಗೆಗಿನ ಸಕಾರಾತ್ಮಕ ದೃಷ್ಟಿಕೋನದಿಂದಾಗಿ ಈ ಪುಸ್ತಕವು ಕನ್ನಡದ ಓದುಗರಿಗೆ ಒಳ್ಳೆಯ ಓದಿನ ಅನುಭವವವನ್ನು ನೀಡುತ್ತದೆ. ಡಾ.ಜಯದೇವಿ ಜಂಗಮಶೆಟ್ಟಿ ಅವರ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದ ಎಲ್ಲ ಮುಂದಿನ ಹೆಜ್ಜೆಗಳಿಗೆ ಶುಭ ಹಾರೈಸುತ್ತೇನೆ.
"ಬದುಕಿನಲ್ಲಿ ಲೇಖಕರಿಗೆ ಸೂಕ್ಷ್ಮತೆ ಬೇಕು ಅಂತಿದ್ರು ಲೇಖಕರೊಬ್ರು. ಇದನ್ನು ನೋಡಿದಾಗಲೂ ಹಾಗೇ ಅನಿಸಿತು ನನಗೆ. ಒಂ...
"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...
"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...
©2025 Book Brahma Private Limited.