ಕೌಟುಂಬಿಕ ಕಥಾ ವಸ್ತುಗಳ ಮೇಲೆ ರಚಿತವಾದಂಥ ಕಥೆಗಳಿವು


"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಅನುಭವಿಸುವ ಆತಂಕ ಮತ್ತು ಆರ್ತತೆ ಎಂಥವರನ್ನೂ ನಡುಗಿಸುತ್ತದೆ. ಕಟು ವಾಸ್ತವದ ಯಥಾವತ್ ಚಿತ್ರಣ ಇಲ್ಲಿದೆ," ಎನ್ನುತ್ತಾರೆ ಪಾರ್ವತಿ ಜಿ. ಐತಾಳ್. ಅವರು ವೈ.ಕೆ.ಸಂಧ್ಯಾ ಶರ್ಮ ಅವರ ‘ಒಳಮುಖಗಳು’ ಕೃತಿ ಕುರಿತು ಬರೆದ ವಿಮರ್ಶೆ.

ಕೃತಿಯ ಶೀರ್ಷಿಕೆ: ಒಳಮುಖಗಳು(ಕಥಾಸಂಕಲನ)
ಲೇಖಕಿ: ವೈ.ಕೆ.ಸಂಧ್ಯಾ ಶರ್ಮ
ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ
ಪುಟಗಳು: 170
ಬೆಲೆ: ರೂ. 200
ಮೊ: 9448094949

ವೈ.ಕೆ.ಸಂಧ್ಯಾ ಶರ್ಮ ಈಗಾಗಲೇ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರು. ಸಣ್ಣ ಕಥೆ, ಕಾದಂಬರಿ, ಪ್ರಬಂಧ ಕವನ ಸಂಕಲನ, ಜೀವನ ಚರಿತ್ರೆ, ವೈಚಾರಿಕ, ಸಂಪಾದಿತ, ಕಲಾ ವಿಮರ್ಶೆ- ಎಂದು ಹೀಗೆ ವಿವಿಧ ಪ್ರಕಾರಗಳಲ್ಲಿ ನಲುವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಶ್ರೀನಿವಾಸ ಪುಸ್ತಕ ಪ್ರಕಾಶನವು ಇತ್ತೀಚೆಗೆ ಪ್ರಕಟಿಸಿದ 'ಒಳಮುಖಗಳು' ಅವರ 16 ಕಥೆಗಳನ್ನೊಳಗೊಂಡ ಕಥಾ ಸಂಕಲನ.

ಈ ಸಂಕಲನದಲ್ಲಿರುವ ಎಲ್ಲ ಕಥೆಗಳು ಕೌಟುಂಬಿಕ ಕಥಾ ವಸ್ತುಗಳ ಮೇಲೆ ರಚಿತವಾದಂಥವು. ಎಲ್ಲವೂ ನಮ್ಮ-ನಿಮ್ಮ ಕಣ್ಮುಂದೆ ನಡೆಯುವಂಥವು. ಕುಟುಂಬದೊಳಗಿನ ಯಾವುದಾದರೂ ಒಂದು ಸಮಸ್ಯೆಯ ಎಳೆಯನ್ನು ಹಿಡಿದುಕೊಂಡು ಆರಂಭವಾಗುವ ಕಥೆಗಳು ಬರೆದು ಅನುಭವವುಳ್ಳ ಅವರ ನುರಿತ ಕೈಗಳಲ್ಲಿ ಸರಾಗವಾಗಿ ದಾರಿ ಕಂಡುಕೊಳ್ಳುತ್ತವೆ. ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಅನುಭವಿಸುವ ಆತಂಕ ಮತ್ತು ಆರ್ತತೆ ಎಂಥವರನ್ನೂ ನಡುಗಿಸುತ್ತದೆ. ಕಟು ವಾಸ್ತವದ ಯಥಾವತ್ ಚಿತ್ರಣ ಇಲ್ಲಿದೆ. (ಕೋರಿಕೆ ಪು. 1).

ಒಂದೊಮ್ಮೆ ದುಡ್ಡಿನ ಸೊಕ್ಕಿನಲ್ಲಿ ತನ್ನನ್ನು ಗಾಢವಾಗಿ ಪ್ರೀತಿಸಿದ ಸನ್ಮನಸ್ಸಿನ ಯುವಕನನ್ನು ತಿರಸ್ಕರಿಸಿದ ಮೈತ್ರಿ ಮುಂದೆ ಮದುವೆಯಾಗಿ ತನ್ನ ಗಂಡನನ್ನು ಕಳೆದುಕೊಂಡು ದಿಕ್ಕಿಲ್ಲದವಳಾಗಿ ಸಂಕಟ ಪಡುತ್ತಿದ್ದಾಗ ಒಳ್ಳೆಯ ಉದ್ಯೋಗ ದೊರಕಿಸಿಕೊಂಡು ಉಚ್ಛ್ರಾಯ ಸ್ಥಿತಿಗೆ ಬಂದ ಆ ಯುವಕ ಅವಳನ್ನು ಪುನಃ ಸ್ವೀಕರಿಸುವುದು(ಪು.), ಕುಡಿದು ಬಂದು ಹೆಂಡತಿಗೆ ಹೊಡೆದು ಅವಳು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಎಗರಿಸಿಕೊಂಡು ಹೋದಾಗ, ತನ್ನ ಒಡತಿ ಎಷ್ಟೇ ಬುದ್ದಿವಾದ ಹೇಳಿದರೂ ಕೇಳದೆ ಅವನನ್ನು ಕ್ಷಮಿಸಿ ಒಪ್ಪಿಕೊಳ್ಳುವುದು(ಕ್ಷಮೆ ಪು. 159), ಮದುವೆಯಾದ ಗಂಡಸನ್ನು ಪ್ರೀತಿಸಿ ಅವನ ಕತ್ತಲು ತುಂಬಿದ ಬದುಕಿನಲ್ಲಿ ಬೆಳದಿಂಗಳಾಗುತ್ತೇನೆಂಬ ಆದರ್ಶದ ಕನಸು ಕಾಣುವ ಸುಷ್ಮಾ ಅವನ ಆಷಾಢಭೂತಿತನದ ಅರಿವಾದಾಗ ತನ್ನ ತಪ್ಪನ್ನು ತಿದ್ದಿಕೊಳ್ಳುವುದು(ಹಾವಸೆ ಪು.25), ಮದುವೆಯಾದ ಗಂಡಸಿನೊಂದಿಗೆ ಸ್ನೇಹ ಬೆಳೆಸಿಕೊಂಡು ಅವನ ಹೆಂಡತಿ ಸತ್ತಾಗ ಅವನ ಮೇಲಿನ ಕರುಣೆಯಿಂದ ಅವನ ಮಕ್ಕಳಿಗೆ ತಾಯಾಗಲು ಒಪ್ಪುವ ಅಮೃತಾ ಅವನ ಒಳಮುಖದಲ್ಲಿ ಹುದುಗಿದ್ದ ಸ್ತ್ರೀಯರ ಬಗೆಗಿನ ತಾತ್ಸಾರದ ಪರಿಚಯವಾದಾಗ ಅವನ ಮೇಲೆ ತಿರುಗಿ ಬೀಳುವುದು( ಒಳಮುಖಗಳು ಪು.99), ಹಿರಿಯರು ತನಗೋಸ್ಕರ ಮಹಾತ್ಯಾಗಗಳನ್ನು ಮಾಡಿದ್ದರೂ ಮಗ ಅವರನ್ನು ನಿರ್ಲಕ್ಷಿಸಿ, ಅವರು ಮುತುವರ್ಜಿಯಿಂದ ಕೊಂಡು ತಂದಿದ್ದ ಮತ್ತು ತಾನೂ ತನ್ನ ಮಕ್ಕಳೂ ಆಡುತ್ತ ಬೆಳೆದ ಬೆತ್ತದ ತೊಟ್ಟಿಲು ಹಳತಾಯಿತೆಂದು ಅದನ್ನು ಮುರಿದು ಎಸೆದು ಬಿಡುವುದು(ಬೆತ್ತದ ತೊಟ್ಟಿಲು ಪು.80), ಮಗನಿಗೆ ನಿಶ್ಚಯವಾದ ಹುಡುಗಿಯ ಕಾಲ್ಗುಣ ಕೆಟ್ಟದು ಎಂಬ ಮೂಢ ನಂಬಿಕೆಯಿಂದ ಚಿನ್ನದಂಥ ಹುಡುಗಿಯನ್ನು ತಿರಸ್ಕರಿಸಿದ ನಂತರ ಅವಳಿಗೆ ಬಹಳ ಒಳ್ಳೆಯ ವರ ಗೊತ್ತಾಗಿ ಮದುವೆ ಫಿಕ್ಸ್ ಆಗುವ ವಿಪರ್ಯಾಸ (ಶಕುನ ಪು.71), ಒಳ್ಳೆಯ ಮನಸ್ಸಿರುವ ನೆರೆಮನೆಯ ಹೆಣ್ಣು ರಂಜನಾ ತಮ್ಮ ಮನೆಯಲ್ಲಿ ಮಗನಿಗೆ ಎರಡನೇ ಮದುವೆಯ ಮಾತುಕತೆ ನಡೆಯುತ್ತಿದ್ದ ಹೊತ್ತಿನಲ್ಲಿ ಏನೋ ಸಹಾಯ ಕೇಳಲು ಬಂದಾಗ ಮನೆಯವರಿಗೆ ಅದು ಇಷ್ಟವಾಗದಿದ್ದರೂ ಮದುವೆ ಹೆಣ್ಣು ರಂಜನಾಳ ಹತ್ತಿರ ತೀರಾ ಒರಟಾಗಿ ವರ್ತಿಸಿದ್ದನ್ನು ನೋಡಿ ಅವಳು ತನ್ನ ಮಕ್ಕಳಿಗೆ ಒಳ್ಳೆಯ ತಾಯಿ ಅಗಲಾರಳು ಎಂದು ಅವಳನ್ನು ಮಗ ತಿರಸ್ಕರಿಸುವುದು(ಅನಾವರಣ ಪು.60), ಒಬ್ಬನೇ ಮಗನೆಂದು ಮುದ್ದು ಮಾಡಿ ಬೆಳೆಸಿದ ರಾಕೇಂದು ತಮ್ಮ ಹತ್ತಿರ ಮಾತು ಮಾತಿಗೂ ಉರಿದು ಬಿದ್ದಾಗ ಅಪಾರವಾಗಿ ನೊಂದುಕೊಳ್ಳುವ ಅಪ್ಪ-ಅಮ್ಮ, ಅವನಿಗೆ ಮದುವೆಯಾಗಿ ಮಗುವಾದ ನಂತರ ಮೊಮ್ಮಗುವಿನ ಲಾಲನೆ-ಪಾಲನೆಯಲ್ಲಿ ಸುಖ ಕಾಣುವುದು(ಮಕ್ಕಳೆಂದರೆ ಹಾಗೇನೇ..ಪು.150) - ಹೀಗೆ ಎಲ್ಲಾ ಕತೆಗಳು ಮನುಷ್ಯ ಸಂಬಂಧಗಳ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತವೆ. ಹುಟ್ಟಿಕೊಂಡ ಸಮಸ್ಯೆಗಳನ್ನು ಬಿಡಿಸುತ್ತ ಸರಳೀಕೃತ ಪರಿಹಾರದ ಸೂಚನೆಯನ್ನೀಯುತ್ತವೆ.

ಕಥೆಗಾರ್ತಿ ತಮ್ಮ ಮೊದಲ ಮಾತುಗಳಲ್ಲಿ ಹೇಳಿಕೊಂಡಿರುವಂತೆ ಈ ಕಥೆಗಳು ಅವರ ಬರವಣಿಗೆಯ ಆರಂಭದ ದಿನಗಳಿಂದ ಹಿಡಿದು ತೀರಾ ಇತ್ತೀಚಿನ ವರೆಗೆ ವಿವಿಧ ಹಂತಗಳಲ್ಲಿ ಬರೆದಂಥವು.‌ ಆದ್ದರಿಂದ ಕಥೆಗಾರ್ತಿಯ ಬೆಳವಣಿಗೆಯನ್ನು ಕೂಡಾ ಇಲ್ಲಿ ಗಮನಿಸಬಹುದಾಗಿದೆ. ಆರಂಭದ ಕಥೆ 'ಕೋರಿಕೆ'ಗೂ ಕೊನೆಯ ಕಥೆ 'ಕ್ಷಮೆ'ಗೂ ಆಲೋಚನಾ ಕ್ರಮದಲ್ಲಿ ತುಂಬಾ ವ್ಯತ್ಯಾಸ ಕಾಣುತ್ತದೆ. ಭಾಗಮ್ಮನಲ್ಲಿ ಕಾಣುವ ಪ್ರತಿಭಟನೆಯ ದನಿಯು 'ಕ್ಷಮೆ'ಯ ಗಂಗಾಳ ವರ್ತನೆಯಲ್ಲಿ ಪ್ರೌಢತೆಯ ಹಂತವನ್ನು ತಲುಪಿದೆ.

ನೇರ ನಿರೂಪಣೆಯ ಎಲ್ಲ ಕಥೆಗಳ ಉದ್ದಕ್ಕೂ ಇರುವ ಎಲ್ಲಾ ವಿವರಗಳು ಫ್ಲ್ಯಾಶ್‌‌‌ ಬ್ಯಾಕ್ ತಂತ್ರದ ಮೂಲಕ ಒಂದು ಸಿದ್ಧ ಮಾದರಿಯಲ್ಲಿ ಸಾಗುತ್ತವೆ. ಸಣ್ಣ್ ಸಣ್ಣ ವಾಕ್ಯಗಳು - ಕೆಲವೊಮ್ಮೆ ಎರಡು ಮೂರು ಶಬ್ದಗಳ ವಾಕ್ಯಗಳು- ನಿರೂಪಣೆಗೆ ಒಂದು ವಿಶಿಷ್ಟ ಅಸ್ಮಿತೆಯನ್ನು ಕೊಡುತ್ತವೆ. ಆರಂಭ-ಬೆಳವಣಿಗೆ ಮತ್ತು ಅಂತ್ಯಗಳ ಅಚ್ಚುಕಟ್ಟಾದ ರಚನಾ ಬಂಧವು ಕಥೆಗಳಿಗೆ ಒಂದು ಸಿದ್ಧ ಸೂತ್ರವನ್ನಿತ್ತಿದೆ. ವಸ್ತುವಿನ ವ್ಯಾಪ್ತಿ ಸಣ್ಣದಾದರೂ ಭಾಷೆ ಮತ್ತು ನಿರೂಪಣಾ ಶೈಲಿಗಳು ಆಕರ್ಷಕವಾಗಿವೆ. ಕಥಾ ರಚನಾ ಕಮ್ಮಟಗಳಲ್ಲಿ ಅರಂಭಿಕ ಬರಹಗಾರರಿಗೆ ಪರಿಚಯಿಸ ಬಲ್ಲ ಮಾದರಿ ಕಥೆಗಳಿವು.

 

MORE FEATURES

ಉತ್ತರ ಕರ್ನಾಟಕದ ಅಮಾಯಕ ಹೆಣ್ಮಕ್ಕಳನ್ನು ಪ್ರತಿನಿಧಿಸುತ್ತಾ ನಿಲ್ಲುತ್ತವೆ

16-03-2025 ಬೆಂಗಳೂರು

"ಬದುಕಿನಲ್ಲಿ ಲೇಖಕರಿಗೆ ಸೂಕ್ಷ್ಮತೆ ಬೇಕು ಅಂತಿದ್ರು ಲೇಖಕರೊಬ್ರು. ಇದನ್ನು ನೋಡಿದಾಗಲೂ ಹಾಗೇ ಅನಿಸಿತು ನನಗೆ. ಒಂ...

ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು

16-03-2025 ಬೆಂಗಳೂರು

"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...

ಲೇಖಕಿ ದೀಪ ಜೋಶಿ ಅವರಿಗೆ ಕಥೆ ಹೇಳುವ ಕೌಶಲ್ಯ ಒಲಿದಿದೆ

15-03-2025 ಬೆಂಗಳೂರು

"ಕಥೆಯಲ್ಲಿ ಬರುವ ಬದರಿ ಯಾತ್ರೆಯ ಸನ್ನಿವೇಶಗಳು, ಕೇದಾರಲ್ಲಿ ನಡೆದ ಘಟನೆ, ಹರಿಹರದ ಕಾರ್ಖಾನೆ ಲಾಕ್ ಔಟ್, ಮಳಖೇಡದಲ...