ಸಮಾಜದ ಪ್ರಕಾರ ಹೆಣ್ಣು ಮುಟ್ಟಬಾರದ ಮೂರು ವಿಚಾರಗಳು ಲೈಂಗಿಕ ಅಭಿವ್ಯಕ್ತಿ, ರಾಜಕಾರಣ, ಧರ್ಮ; ಬಾನು ಮುಷ್ತಾಕ್

Date: 23-03-2025

Location: ಬೆಂಗಳೂರು


ಬೆಂಗಳೂರು: "ಸಮಾಜದಲ್ಲಿ ಮಹಿಳೆಯಾಗಿ ಮತ್ತು ಲೇಖಕಿಯಾಗಿ ಒಬ್ಬ ವ್ಯಕ್ತಿ ಮುಟ್ಟಬಾರದ ಮೂರು ವಸ್ತುಗಳಿವೆ. ಅವುಗಳೆಂದರೆ ಲೈಂಗಿಕ ಅಭಿವ್ಯಕ್ತಿ, ರಾಜಕಾರಣ ಮತ್ತು ಧರ್ಮ. ಇದು ನಮ್ಮ ಸಮಾಜ ನಮಗೆ ಹೇಳುತ್ತದೆ," ಎಂದು ಖ್ಯಾತ ಲೇಖಕಿ ಬಾನು ಮುಷ್ತಾಕ್‌ ಅವರು ನುಡಿದರು.

ಅವರು ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು, ಡಾ. ಕಮಲಾ ಹಂಪನಾ ವೇದಿಕೆಯ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ 'ಅರಿವೆಂಬುದು ಬಿಡುಗಡೆ' ಘೋಷವಾಕ್ಯದಡಿ ಹಮ್ಮಿಕೊಂಡಿದ್ದ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 

"ಸಮಾಜವು ಒಬ್ಬ ಲೇಖಕಿಗೆ ಅಥವಾ ಮಹಿಳೆಯು ಲೈಂಗಿಕ ಅಭಿವ್ಯಕ್ತಿ, ರಾಜಕಾರಣ ಮತ್ತು ಧರ್ಮದ ವಿಚಾರವನ್ನು ಮುಟ್ಟಬಾರದೆಂದು ಹೇಳುತ್ತದೆ. ಒಂದು ವೇಳೆ ಇವುಗಳನ್ನು ಮುಟ್ಟಿ‌ದರೆ ನಾವು ನಿಮಗೆ ಶಿಕ್ಷೆ ಕೊಡುತ್ತೇವೆ ಎಂಬುವುದು ಈ ಸಮಾಜದ ಅಲಿಖಿತ ವಾದ ಮತ್ತು ಶಾಸನ. ಇವುಗಳ ಬಗ್ಗೆ ನಾವು ಸಂವಾದ ಮಾಡಬೇಕೋ ಬೇಡವೋ, ಇವುಗಳನ್ನು ಮುಟ್ಟಬೇಕೋ, ಪರಿಶೀಲನೆ ಮಾಡಬೇಕೋ ಬೇಡವೋ ಅನ್ನುವುದರ ಬಗ್ಗೆ ಮುಂದಿನ ದಿನಗಳಲ್ಲಿ  ನಾವು ಚರ್ಚೆ ಮಾಡಬೇಕಿದೆ. ಈ ಬಗ್ಗೆ ನಾವು ಧೃಡನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. 

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಸುಂಧರಾ ಭೂಪತಿ ಮಾತನಾಡಿ, "ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದಂತಹ ಅಖಿಲ ಕರ್ನಾಟಕ ಲೇಖಕಿಯರ ಸಂಘದ ಸಮ್ಮೇಳನದಲ್ಲಿ ಹೆಣ್ಣಿನ ಚಹರೆಯ ಹುಡುಕಾಟವನ್ನು ನಾವು ಕಾಣುತ್ತಾ ಹೋಗಿದ್ದೇವೆ. ನಿರ್ಣಯಗಳಲ್ಲೂ ಕೂಡ, ಹೆಣ್ಣಿನ ಬದುಕು ಮತ್ತು ಸಾಹಿತ್ಯ ಬದುಕು ಬೇರೆ ಬೇರೆಯಲ್ಲ. ಬದುಕು ಸುಂದರವಾಗಿದ್ದರೆ, ಸಾಹಿತ್ಯ ಕೂಡ ಚೆನ್ನಾಗಿರುವುದಕ್ಕೆ ಸಾಧ್ಯ ಎನ್ನುವಂತಹ ವಿಚಾರಗಳು ಹಲವು ಗೋಷ್ಠಿಗಳ ಮೂಲಕ ಪ್ರತಿಧ್ವನಿಸಿದೆ. ಇನ್ನು ಇತ್ತೀಚೆಗಷ್ಟೆ ಅಲಹಬಾದ್ ಹೈಕೋರ್ಟ್ ಒಂದು ತೀರ್ಪನ್ನು ನೀಡಿದ್ದು, ಆ ತೀರ್ಪುನ್ನು ನಾವು ಸಮ್ಮೇಳನದ ಮೂಲಕ ಖಂಡಿಸುತ್ತೇವೆ. ನ್ಯಾಯಾಂಗದ ಮೇಲೆ ನಮಗೆ ಭರವಸೆ ಬಹಳಷ್ಟಿತ್ತು. ಆದರೆ ನ್ಯಾಯಾಂಗ ನಮಗೆ ಅಘಾತಕಾರಿ ತೀರ್ಪನ್ನು ನೀಡುವ ಮೂಲಕ ಭರವಸೆ ಹುಸಿಯಾಗುವ ಕೆಲಸವನ್ನು ಮಾಡಿದೆ. ಮಹಿಳಾ ಸಮಾಜ ಇಂತಹ ವಿಚಾರಗಳಿಗೆ ಅವಕಾಶ ನೀಡಬಾರದು ಎಂದು ತಿಳಿಸಿದರು. 

ಹಿರಿಯ ಕವಿ, ಮಾಜಿ ಸಂಸದ ಡಾ. ಎಲ್‌. ಹನುಮಂತಯ್ಯ ಮಾತನಾಡಿ, "ಹೆಣ್ಣು ಮಕ್ಕಳಿಗೂ ಅವಕಾಶ ಸಿಕ್ಕರೆ, ನಾವು ಗಂಡಸರಿಗಿಂತ ಅಚ್ಚುಕಟ್ಟಾಗಿ, ಹೆಚ್ಚು ಪ್ರಭಾವಶಾಲಿಯಾಗಿ ಕಾರ್ಯಕ್ರಮವನ್ನು ಮಾಡಬಲ್ಲೆವು ಎನ್ನುವುದನ್ನು ಈ ಎರಡು ದಿನದ ಕಾರ್ಯಕ್ರಮದ ಮೂಲಕ ಮಹಿಳೆಯರು ತೋರಿಸಿಕೊಟ್ಟಿದ್ದಾರೆ. ಸಾಹಿತ್ಯದಲ್ಲಿ ಗಂಡು ಹೆಣ್ಣು ಇರುವುದಿಲ್ಲ. ಮೊದಲು ಕಾವ್ಯ ಆಮೇಲೆ ನಿಮ್ಮ ಧೋರಣೆ ಏನೆಂಬುವುದು ಮುಖ್ಯವಾಗುತ್ತದೆ. ಕಾವ್ಯ, ಸಾಹಿತ್ಯ, ಸಮಾಜವನ್ನು ಕಟ್ಟಲು ಇರುವಂತಹ ಅಡೆತಡೆಗಳನ್ನು ಒಡೆದು ಹಾಕುವ ಮಾರ್ಗವೇ, ಆ ಸಾಹಿತ್ಯವೇ ಎಲ್ಲವನ್ನೂ ಮಾಡುತ್ತದೆ ಎಂಬ ನಂಬಿಕೆ ಇಡಬಾರದು. ಮಹಿಳೆಯರು ಪುರುಷರಿಗಿಂತ ಹೆಚ್ಚು ಕ್ರಾಂತಿಕಾರಿಗಳು ಅನ್ನುವುದನ್ನು ಯಾರು ಕೂಡ ಅನುಮಾನಿಸಬೇಕಿಲ್ಲ. ಆ ರೀತಿ ಕ್ರಾಂತಿಕಾರಿಯ ವಿಚಾರವನ್ನು ಬಹಳ ಮಹತ್ವವಾಗಿ ಪುರುಷರಿಗಿಂತ ಹೆಚ್ಚಾಗಿ ಬರೆಯಬಲ್ಲರು ಮಹಿಳೆಯರೇ," ಎಂದು ಮಹಿಳೆಯರ ಪ್ರಭಾವದ ಬಗ್ಗೆ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಪಿ.ಜಿ.ಆರ್‌. ಸಿಂಧ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಭಾರತಿ ಹೆಗಡೆ ಅವರು ನಿರೂಪಿಸಿದರು. ಸುಮಾ ಸತೀಶ್‌ ಅವರು ಸ್ವಾಗತಿಸಿದರು. 

MORE NEWS

ಭಾನುಪ್ರಕಾಶ್ ಶರ್ಮ ಮತ್ತು ಶ್ರೀಧರ ದೀಕ್ಷಿತ್ ಗೆ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ 

25-03-2025 ಬೆಂಗಳೂರು

ಮೈಸೂರಿನ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಶ್ರೀ ವಾಸುದೇವ ಮಹಾರಾಜ 88...

ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ, ಸಾಧಕರನ್ನು ಗುರುತಿಸಿ ಕೊಡುವುದು ಶ್ರೇಷ್ಠ; ಶಿವರಾಜ ತಂಗಡಗಿ

24-03-2025 ಬೆಂಗಳೂರು

ಬೆಂಗಳೂರು: "ಯಾವುದೇ ಒಂದು ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ, ವ್ಯಕ್ತಿಯ ಸಾಧನೆಯನ್ನು ಗುರುತಿಸಿ ಪ್...

'ತಲ್ಕಿ' ಎನ್ನುವ ಕರುಳು ಹಿಂಡುವ ಕಥೆ

24-03-2025 ಬೆಂಗಳೂರು

ಮಾರ್ಚ್ 22-23ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ 8ನೆಯ ಅಖಿಲ ಕರ್ನಾಟಕ ಸಮ್ಮೇಳನದ ಮೊದಲ ದಿನದ ಕೊನೆಯಲ್ಲಿ ರಂಗದ ಮೇಲೆ ...