Date: 24-03-2025
Location: ಬೆಂಗಳೂರು
ಬೆಂಗಳೂರು: "ಯಾವುದೇ ಒಂದು ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ, ವ್ಯಕ್ತಿಯ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಕೊಡುವುದಕ್ಕೆ ಬಹಳ ದೊಡ್ಡ ಶಕ್ತಿಯಿದೆ," ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವರಾದ ಶಿವರಾಜ ತಂಗಡಗಿ ನುಡಿದರು.
ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ 2025 ಮಾರ್ಚ್ 24 ಸೋಮವಾರದಂದು ಹಮ್ಮಿಕೊಂಡಿದ್ದ 2023ನೇ ಸಾಲಿನ ಗೌರವ ಪ್ರಶಸ್ತಿ, 2023ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ 2022ನೇ ಸಾಲಿನ ಪುಸ್ತಕ ಬಹುಮಾನಗಳ ಪ್ರಶಸ್ತಿಗಳನ್ನು ಪ್ರದಾನಿಸಿ ಮಾತನಾಡಿದರು.
"ಪ್ರಶಸ್ತಿಗಳನ್ನು ಕೊಡುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಅನ್ನುವುದು ಮುಖ್ಯವಾಗುತ್ತದೆ. ಅದು ನಮ್ಮ ಮುಖ್ಯಮಂತ್ರಿಗಳ ಮೊದಲ ಆದ್ಯತೆ ಕೂಡಾ ಹೌದು. ಮುಖ್ಯವಾಗಿ ಸಮಾಜದಲ್ಲಿ ತುಳಿತಕ್ಕೊಳಗಾದ ವ್ಯಕ್ತಿಗಳಿಗೆ ಪ್ರಶಸ್ತಿ ತಲುಪಿದಾಗ ಪ್ರಶಸ್ತಿಗೂ ಒಂದು ಗೌರವ ಸಿಗುತ್ತದೆ. ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ ಗುರುತಿಸಿ ಕೊಡುವುದಕ್ಕೆ ಬಹಳ ದೊಡ್ಡ ಶಕ್ತಿಯಿದೆ. ಅಂತಹ ಕಾರ್ಯಕ್ರಮಗಳನ್ನು ನನಗೂ ಮಾಡುವಂತಹ ಆಸೆ ಇದೆ" ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರು ಪ್ರಸ್ತಾವಿಕ ನುಡಿಗಳನ್ನಾಡಿ, "ಕಳೆದ ಮೂರು - ನಾಲ್ಕು ವರ್ಷಗಳ ಹಿಂದೆ ಇದ್ದಂತಹ ಸರ್ಕಾರ ಅಥವಾ ಅಕಾಡೆಮಿಯ ಸಮಿತಿ 2021, 2022 ಹಾಗೂ 2023ರ ಪ್ರಶಸ್ತಿಗಳನ್ನು ನೀಡದೇ ಇದ್ದು, ಇದೀಗ ಆ ಎಲ್ಲಾ ಸಾಲಿನ ಪ್ರಶಸ್ತಿಗಳನ್ನು ನೀಡುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡುತಿದೆ. ಇದರಿಂದಾಗಿ ಆ ಕಾಲದಲ್ಲಿ ಬರೆಯುತ್ತಿದ್ದಂತಹ ಪ್ರತಿಭಾವಂತ ಲೇಖಕನಿಗೂ ಮನ್ನಣೆಯನ್ನು ನೀಡಿ ಗೌರವಿಸಿದಂತಾಗುತ್ತದೆ. ನಮ್ಮ ಕರ್ನಾಟಕ ಅಕಾಡೆಮಿಯ ಪ್ರಶಸ್ತಿ, ಗೌರವಕ್ಕೆ ಸಾಕಷ್ಟು ಮನ್ನಣೆಯಿದ್ದು, ಇದುವರೆಗೂ ಬಹಳ ದೊಡ್ಡ ದೊಡ್ಡ ವ್ಯಕ್ತಿಗಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ" ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ವರ್ಷದ ಗೌರವ ಪ್ರಶಸ್ತಿಯನ್ನು ಡಾ. ಸಿ. ವೀರಣ್ಣ, ಡಾ. ಶ್ರೀರಾಮ ಇಟ್ಟಣ್ಣವರ, ಜಾಣಗೆರೆ ವೆಂಕಟರಾಮಯ್ಯ, ಎ.ಎಂ. ಮದರಿ ಮತ್ತು ಡಾ. ಸಬಿಹಾ ಭೂಮಿಗೌಡ ಅವರು ಪಡೆದುಕೊಂಡರು. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿಗಳ ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರಗಳನ್ನೊಳಗೊಂಡಿತ್ತು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಎಂ.ಎಸ್. ಶೇಖರ್ , ಜಿ.ಎನ್. ಮೋಹನ್, ಟಿ.ಎಸ್. ವಿವೇಕಾನಂದ, ಜಯಶ್ರೀ ಕಂಬಾರ, ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ, ಬಾಲಗುರುಮೂರ್ತಿ, ಶಿವಗಂಗಾ ರುಮ್ಮಾ, ರೀಟಾ ರೀನಿ, ಕಲೀಮ್ ಉಲ್ಲಾ, ವೆಂಕಟಗಿರಿ ದಳವಾಯಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರಗಳನ್ನೊಳಗೊಂಡಿತ್ತು.
2022ನೇ ವರ್ಷದ ಅಕಾಡೆಮಿಯ ಚದುರಂಗ ದತ್ತಿ ಬಹುಮಾನವನ್ನು ಕಾದಂಬರಿ ಪ್ರಕಾರದಲ್ಲಿ ಹೆಚ್.ಎಸ್. ಅನುಪಮಾ ಅವರ ‘ಬೆಳಗಿನೊಳಗು ಮಹಾದೇವಿಯಕ್ಕ’, ಲಲಿತ ಪ್ರಬಂಧ ಪ್ರಕಾರದಲ್ಲಿ ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನವನ್ನು ಫಾತಿಮಾ ರಲಿಯಾ ‘ಕಡಲು ನೋಡಲು ಹೋದವಳು’, ಜೀವನಚರಿತ್ರೆ ಪ್ರಕಾರದಲ್ಲಿ ಸಿಂಪಿ ಲಿಂಗಣ್ಣ ದತ್ತಿ ಬಹುಮಾನವನ್ನು ಶಾರದಾ ವಿ. ಮೂರ್ತಿ ಅವರ ‘ಮಾತಂಗಿ ಮಾಣಿಕ್ಯ’, ಸಾಹಿತ್ಯ ವಿಮರ್ಶೆ ಪ್ರಕಾರದಲ್ಲಿ ವಿನಯಾ ನಂದಿಹಾಳ, ಅನುವಾದ-1ರಲ್ಲಿ ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿ ಬಹುಮಾನಕ್ಕೆ ವಿಕ್ರಮ ವಿಸಾಜಿ ಅವರ ‘ದೇಹವೇ ದೇಶ’, ಲೇಖಕರ ಮೊದಲ ಸ್ವತಂತ್ರ ಕೃತಿಯಲ್ಲಿ ಮಧುರಚೆನ್ನ ದತ್ತಿ ಬಹುಮಾನಕ್ಕೆ ಸುಶ್ರುತ್ ಜೆ.ಆರ್ ಅವರ ‘ಪರಿಣಯ ಪ್ರಪಂಚ’, ವೈಚಾರಿಕೆ/ಅಂಕಣ ಬರಹ ಪ್ರಕಾರದಲ್ಲಿ ಬಿ.ವಿ ವೀರಭದ್ರಪ್ಪ ದತ್ತಿ ಬಹುಮಾನ ಪ್ರಕಾರದಲ್ಲಿ ಅಕ್ಷತಾ ಕೃಷ್ಣಮೂರ್ತಿ ಅವರ ‘ಇಸ್ಕೂಲು’, ಕನ್ನಡದಿಂದ ಇಂಗ್ಲಿಷಿಗೆ ಅನುವಾದದಲ್ಲಿ ‘ಅಮೆರಿಕ ಕನ್ನಡ ದತ್ತಿ ನಿಧಿ ಬಹುಮಾನವನ್ನು ಕೃಷ್ಣಮೂರ್ತಿ ಚಂದರ್ ಅವರ ‘Kavirajamarga and the kannada world', ದಾಸ ಸಾಹಿತ್ಯದಲ್ಲಿ ಶ್ರೀಮತಿ ಜಲಜಾ ಶ್ರೀಪತಿ ಅಚಾರ್ಯ ಗಂಗೂರ್ ದತ್ತಿ ನಿಧಿ ಬಹುಮಾನವನ್ನು ಡಾ. ಶ್ರೀಧರಹೆಗಡೆ ಭದ್ರನ್ ಅವರ ‘ಸುಜ್ಞಾನ ಅಡಿಗೆ’ಯು ಪಡೆದುಕೊಂಡಿತು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ವೀಕ್ಷಿಸಲು ಈ ಲಿಂಕ್ ಅನ್ನು ಬಳಸಿ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಗುರುಲಿಂಗ ಕಾಪಸೆ ದತ್ತಿಯಡಿ ನೀಡಲಾಗುವ ಗುರುಲಿಂಗ ಕಾಪಸೆ ಸಾಹಿತ್ಯ ಪ್ರ...
ಮೈಸೂರಿನ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಶ್ರೀ ವಾಸುದೇವ ಮಹಾರಾಜ 88...
ಮಾರ್ಚ್ 22-23ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ 8ನೆಯ ಅಖಿಲ ಕರ್ನಾಟಕ ಸಮ್ಮೇಳನದ ಮೊದಲ ದಿನದ ಕೊನೆಯಲ್ಲಿ ರಂಗದ ಮೇಲೆ ...
©2025 Book Brahma Private Limited.