'ತಲ್ಕಿ' ಎನ್ನುವ ಕರುಳು ಹಿಂಡುವ ಕಥೆ

Date: 24-03-2025

Location: ಬೆಂಗಳೂರು


ಮಾರ್ಚ್ 22-23ರಂದು ನಡೆದ ಕರ್ನಾಟಕ ಲೇಖಕಿಯರ ಸಂಘದ 8ನೆಯ ಅಖಿಲ ಕರ್ನಾಟಕ ಸಮ್ಮೇಳನದ ಮೊದಲ ದಿನದ ಕೊನೆಯಲ್ಲಿ ರಂಗದ ಮೇಲೆ ಪ್ರದರ್ಶನಗೊಂಡ ಒಂದೂಕಾಲು ಗಂಟೆಯ ನಾಟಕ 'ತಲ್ಲಿ'. ಭಿನ್ನಲಿಂಗಿಗಳು ಈ ಸಮಾಜದಲ್ಲಿ ಅನುಭವಿಸುತ್ತಿರುವ ಸಂಕಟದ ಕಥೆಯನ್ನು ಈ ನಾಟಕವು ಮನಮುಟ್ಟುವಂತೆ ಪ್ರಸ್ತುತ ಪಡಿಸುತ್ತದೆ," ಎನ್ನುತ್ತಾರೆ ಪಾರ್ವತಿ ಜಿ.ಐತಾಳ್. ಅವರು 'ತಲ್ಲಿ’ ನಾಟಕದ ಕುರಿತು ಬರೆದ ಅವರ ಅಭಿಪ್ರಾಯವಿದು.

ಬಿನ್ನ ಲಿಂಗಿ ಮಹಿಳೆಯರು ಜತೆಯಾಗಿ ವಾಸಿಸುವ ಒಂದು ಮನೆಯಲ್ಲಿ ಈ ಘಟನೆಗಳು ಸಂಭವಿಸುವಂತೆ ತೋರಿಸಲಾಗಿದೆ. ಇವು ಎಲ್ಲವೂ ವಾಸ್ತವದ ಘಟನೆಗಳು. ಕಪೋಲಕಲ್ಪಿತ ವಿಚಾರಗಳು ಇಲ್ಲಿಲ್ಲ. ಈ ಸಮಾಜದಲ್ಲಿ ತಮ್ಮದಲ್ಲದ ತಪ್ಪಿಗೆ ಮುಗ್ಧ ಮನಸ್ಸಿನ ಅವರು ಎಷ್ಟೊಂದು ಕಷ್ಟ- ನೋವುಗಳನ್ನು ಅನುಭವಿಸುತ್ತಾರೆ ಅನ್ನುವುದರ ಒಂದು ಝಲಕ್ ತೋರಿಸುವುದು ನಾಟಕದ ಉದ್ದೇಶ.(ನಿರ್ದೇಶನ : ಶ್ರೀಜಿತ್ ಸುಂದರ್)

ಎಲ್ಲರಂತೆಯೇ ಸಾಮಾನ್ಯರಾಗಿ ಹುಟ್ಟಿ ಬೆಳವಣಿಗೆಯ ಹಂತದಲ್ಲಿ ಭಿನ್ನರಾಗುತ್ತ ಹೋಗುವ ತೃತೀಯ ಲಿಂಗಿಗಳು ವ್ಯವಸ್ಥೆಯ ಕ್ರೂರ ಚಕ್ರಗಳೆಡೆಯಲ್ಲಿ ಸಿಲುಕಿ ಒಂದಿಲ್ಲೊಂದು ರೀತಿಯಲ್ಲಿ ನರಳುತ್ತಾರೆ. ತಮ್ಮಲ್ಲಿರುವ ಹೆಣ್ಣು ಅಥವಾ ಗಂಡು ಭಾವನೆಗಳಿನುಸಾರವಾಗಿ ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಆಸೆಗಳನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಅವುಗಳನ್ನು ನನಸು ಮಾಡಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬೇಕಾದರೂ ಅವರು ಹರಸಾಹಸ ಪಡಬೇಕಾಗುತ್ತದೆ. ಆದರೆ ಹಾಗೆ ಬದಲಾದ ನಂತರ ಹೆಣ್ಣಾದರೂ ಗಂಡಾದರೂ ಅವರನ್ನು ಸಮಾಜ ನಾರ್ಮಲ್ ಅಗಿ ಸ್ವೀಕರಿಸುವುದಿಲ್ಲ. ಅವರ ಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಸಂವೇದನಾಶೂನ್ಯ ಮಂದಿಯಿಂದ ಅವರು ಸದಾ ಛೀಮಾರಿ ಹಾಕಿಸಿಕೊಳ್ಳುತ್ತಾರೆ. ಎಲ್ಲರಂತೆ ಬದುಕಬೇಕೆಂದು ತಹತಹಿಸಿದರೂ ಯಾರೂ ಅವರನ್ನು ತಮ್ಮ ಜತೆಗೆ ಸೇರಿಸಿಕೊಳ್ಳುವುದಿಲ್ಲ. ಜೀವನ ನಿರ್ವಹಣೆಗೆ ಕೆಲಸ ಕೊಡುವುದಿಲ್ಲ. ಆದ್ದರಿಂದ ಸೆಕ್ಸ್ ವರ್ಕರ್ಸ್ ಆಗಿ ಕೆಲಸ ಮಾಡದೆ(ಅದು ಅವರ ಸ್ವಾಬಿಮಾನಕ್ಕೆ ಕುಂದೆನಿಸಿದರೂ) ಅವರಿಗೆ ಬೇರೆ ದಾರಿಯಿರುವುದಿಲ್ಲ. ಆದರೆ ಎಷ್ಟೇ ಪ್ರಾಮಾಣಿಕರಾಗಿಯೇ ಬದುಕಿದರೂ ಜನರು ಅವರನ್ನು ತಾತ್ಸಾರದಿಂದ ನೋಡುತ್ತಾರೆ. ಸ್ವಂತ ತಂದೆ-ತಾಯಿ-ಬಂಧು- ಬಳಗದವರೇ ಅವರನ್ನು ಅನುಮಾನದಿಂದ ನೋಡುತ್ತಾರೆ. ಅವರು ಸೆಕ್ಸ್ ವರ್ಕರ್ ಗಳಾಗಿ ಸಂಪಾದನೆ ಮಾಡಿದ ಹಣವನ್ನು ತಮ್ಮ ಸ್ವಂತಕ್ಕಾಗಿ ಬಳಸಿಕೊಂಡು ನಂತರ ಅವರನ್ನು ಕಡೆಗಣಿಸುವ ಸ್ವಾರ್ಥಿಗಳಾಗುತ್ತಾರೆ. ಹೀಗೆ ಸ್ವಾರ್ಥಿಗಳ ಜಗತ್ತಿನಲ್ಲಿ ಏಕಾಕಿತನದ ವೇದನೆಯನ್ನು ಅನುಭವಿಸುವ ಭಿನ್ನ ಲಿಂಗಿಗಳ ಬದುಕಿಗೆ 'ತಲ್ಕಿ' ಕನ್ನಡಿ ಹಿಡಿಯುತ್ತದೆ.(ತಲ್ಕಿ ಎಂದರೆ ಮಾಂಸದಿಂದ ಮಾಡುವ ಒಂದು ರುಚಿಕರವಾದ ತಿಂಡಿ). ಕೊನೆಯ ದೃಶ್ಯದಲ್ಲಿ ನೂರಾರು ಕನಸುಗಳನ್ನು ಕಂಡ ಅವರ ಕನಸುಗಳು ನಿಜವಾದರೆ ಹೇಗಿರಬಹುದು ಎಂಬ ಭರವಸೆಯನ್ನೀಯುವ ಒಂದು ಕಾಲ್ಪನಿಕ ಚಿತ್ರಣದ ವೈಭವವು ಸುಂದರವಾಗಿ ಮೂಡಿಬಂತು.

ಪಾತ್ರಧಾರಿಗಳ ತನ್ಮಯತೆಯ ನಟನೆ ಮತ್ತು ಧ್ವನಿಪೂರ್ಣ ಸಂಭಾಷಣೆಗಳ ನಿರ್ವಹಣೆಗಳು ನಾಟಕದ ಪ್ರಸ್ತುತಿಯನ್ನು ಪರಿಣಾಮಕಾರಿಯಾಗಿಸಿತು. ಒಂದು ಸರಳವಾದ ಮನೆಯ ಒಳಭಾಗವೇ ರಂಗಸಜ್ಜಿಕೆ. ಆಯತಾಕಾರದ , ಮಿಂಚಿ ಮಾಯವಾಗುವ ಬೆಳಕಿನ ಮಾಲೆಯ ಹಿನ್ನೆಲೆ ನಾಟಕದ ವಸ್ತುವಿಗೆ ಪೂರಕವಾಗಿ ಬಂತು. ಒಟ್ಟಿನಲ್ಲಿ ಬಿನ್ನ ಲಿಂಗಿಗಳ ಬಗ್ಗೆ ನಮ್ಮ ಮನಸ್ಸನ್ನು ಆರ್ದ್ರವಾಗಿಸುವ, ಅವರ ನೊವುಗಳನ್ನು ಹಂಚಿಕೊಳ್ಳಲು ಪ್ರೇರೇಪಿಸುವ ನಾಟಕವಿದು. ಈಗಾಗಲೇ 27 ಪ್ರದರ್ಶನಗಳನ್ನು ಮುಗಿಸಿದೆ.

 

MORE NEWS

ಭಾನುಪ್ರಕಾಶ್ ಶರ್ಮ ಮತ್ತು ಶ್ರೀಧರ ದೀಕ್ಷಿತ್ ಗೆ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ 

25-03-2025 ಬೆಂಗಳೂರು

ಮೈಸೂರಿನ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಶ್ರೀ ವಾಸುದೇವ ಮಹಾರಾಜ 88...

ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ, ಸಾಧಕರನ್ನು ಗುರುತಿಸಿ ಕೊಡುವುದು ಶ್ರೇಷ್ಠ; ಶಿವರಾಜ ತಂಗಡಗಿ

24-03-2025 ಬೆಂಗಳೂರು

ಬೆಂಗಳೂರು: "ಯಾವುದೇ ಒಂದು ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವುದಕ್ಕಿಂತ, ವ್ಯಕ್ತಿಯ ಸಾಧನೆಯನ್ನು ಗುರುತಿಸಿ ಪ್...

'ಶಿವರಾಮ ಕಾರಂತ ಪುರಸ್ಕಾರ'ಕ್ಕೆ 2020-2024ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳ ಆಹ್ವಾನ

24-03-2025 ಮೂಡುಬಿದಿರೆ

ಮೂಡುಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನವು ಕೊಡಮಾಡುವ 28ನೇ ವರ್ಷದ 'ಶಿವರಾಮ ಕಾರಂತ ಪುರಸ್ಕಾರ'ಕ್ಕೆ ಕೃತಿಗಳ...