“ಈ ಎಲ್ಲ ಯುವಜನಾಂಗದ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದರ ಜೊತೆಗೆ ಇತರ ಕ್ಷೇತ್ರದಲ್ಲಿ ಹೆಸರು ಮಾಡಿದ ಸಾಧಕರ ಬಗ್ಗೆ ಕೂಡ ಓದುಗರು ಈ ಹೃದಯಸ್ಪರ್ಶಿಯಾದ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆಯುತ್ತಾರೆ,” ಎನ್ನುತ್ತಾರೆ ರಂಜಾನ್ ದರ್ಗಾ ಅವರು ಡಾ. ಮಹಂತೇಶ ಬಿರಾದಾರ ಅವರ "ಮುಖಪುಸ್ತಕದ ಮರೆಯದ ಮುಖಗಳು" ಕೃತಿಗೆ ಬರೆದ ಮುನ್ನುಡಿ.
ಮುನ್ನುಡಿ ಎಂಬುದು ಪುಸ್ತಕವೊಂದನ್ನು ಓದುವ ಮೊದಲು ಅದರ ಪ್ರವೇಶ ಹೇಗೆ ಮಾಡಬೇಕು ಎಂಬುದನ್ನು ಸೂಚಿಸುವಂಥದ್ದು. `ಮುಖಪುಟದ ಮರೆಯದ ಮುಖಗಳು' ಪುಸ್ತಕ ಬರೆದವರು ಗೆಳೆಯ ಮಹಾಂತೇಶ ಬಿರಾದಾರ. ಪ್ರಕಾಶಕರು ಗೆಳೆಯ ಗಣೇಶ ಅಮೀನಗಡ. ನಾವೆಲ್ಲರೂ ಅಖಂಡ ವಿಜಾಪುರ ಜಿಲ್ಲೆಯವರು. ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಗಣೇಶ ಕೇಳಿಕೊಂಡಾಗ ಖುಷಿಯಿಂದ ಒಪ್ಪಿಕೊಂಡೆ. ಏಕೆಂದರೆ ಈ ಪುಸ್ತಕದಲ್ಲಿನ ಅನೇಕ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಿ ಖುಷಿಯಿಂದ ಮಹಾಂತೇಶ ಅವರಿಗೆ ಮೊಬೈಲ್ ಮೂಲಕ ತಿಳಿಸುತ್ತಿದ್ದೆ.
ಗಣೇಶ ಕಳಿಸಿದ ಪುಸ್ತಕದ ಸಾಫ್ಟ್ ಕಾಪಿಯನ್ನು ರಾತ್ರಿ ಕುಳಿತು ಓದಿದೆ. ಮಹಾಂತೇಶ ಅವರ ಚಿಂತನಾಕ್ರಮ ವಿಶ್ವವ್ಯಾಪಿ ಪ್ರಜ್ಞೆಯಿಂದ ಕೂಡಿದ್ದನ್ನು ಗ್ರಹಿಸಿದೆ. ನಮ್ಮ ಯುವಕರು ಹೇಗೆ ಬೆಳೆಯಬೇಕು ಎಂಬುದಕ್ಕೆ ಈ ಪುಸ್ತಕ ಮಾರ್ಗದರ್ಶಿಯಾಗಿದೆ ಎಂಬುದರಲ್ಲಿ ಸಂಶಯವಿಲ್ಲ.
ಇಲ್ಲಿಯ ಅನೇಕ ಲೇಖನಗಳು ವಿಜಯಪುರ ಪರಿಸರಕ್ಕೆ ಸಂಬಧಿಸಿದವುಗಳಾಗಿವೆ. ಕಳೆದ ಶತಮಾನದ ವಿಜಯಪುರದ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡಾಗ ಈ ಪುಸ್ತಕದ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡುವುದು. ನನ್ನ ಬಾಲ್ಯದ ನೆನಪು 65 ವರ್ಷಗಳಷ್ಟು ಹಿಂದಕ್ಕೆ ಹೋಗುವುದು. ಅಲ್ಲಿಂದ ಇಂದಿನವರೆಗೂ ವಿಜಾಪುರದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತ್ಯಂತರಗಳನ್ನು ಗಮನಿಸುತ್ತ ಬಂದಿದ್ದೇನೆ. ವಿಜಯಪುರದಲ್ಲಿ ಔದ್ಯೋಗಿಕ ಕ್ರಾಂತಿ ಆಗಲೇ ಇಲ್ಲ. ಅದರಿಂದಾಗಿ ಆರ್ಥಿಕವಾಗಿಯೂ
ಹಿಂದುಳಿಯಿತು. ನಾನು ಚಿಕ್ಕವನಿದ್ದಾಗ ವಿಜಯಪುರಕ್ಕೆ ಫಕೀರ ಬಸ್ತಿ ಎಂದು ಕರೆಯುತ್ತಿದ್ದರು. ಆದಿಲಶಾಹಿಗಳ ಕಾಲಕ್ಕೆ ವಿಶ್ವಮಾನ್ಯವಾದ ವಿಜಯಪುರ ತದನಂತರ ಕಾಲದ ಹೊಡೆತಕ್ಕೆ ಸಿಕ್ಕಿ ಫಕೀರಬಸ್ತಿಯಾಗಿತ್ತು. ಅಂಥ ವಾತಾವರಣದಲ್ಲಿ ನನ್ನ ಬಾಲ್ಯ ಅಲ್ಲಿ ಕಳೆಯಿತು.
ಅನೇಕ ಬಡರೈತರು ಪರ್ಯಾಯ ಒಣ ಬೇಸಾಯ ಮಾಡುತ್ತಿದ್ದುದನ್ನು ನಾನು ಬಾಲ್ಯದಲ್ಲಿ ನೋಡಿದ್ದೇನೆ. ಅವರು ತಮ್ಮ ಅರ್ಧ ಹೊಲವನ್ನು ಈ ವರ್ಷ ಬಿತ್ತಿದರೆ ಉಳಿದರ್ಧ ಹೊಲವನ್ನು ಮುಂದಿನ ವರ್ಷ ಬಿತ್ತುತ್ತಿದ್ದರು. ಹೀಗೆ ಅವರು ಒಂದು ವರ್ಷ ಫಡಾ ಬಿಡುವುದರಿಂದ ಅದು ಗಾಳಿ, ಮಳೆ, ಬಿಸಿಲಿಗೆ ಫಲವತ್ತೆಯನ್ನು ಪಡೆದುಕೊಳ್ಳುತ್ತಿತ್ತು. ಗೊಬ್ಬರ ಹಾಕದಂಥ ಬಡತನದ ಕಾರಣ ಅನೇಕ ರೈತರು ಇ೦ಥ ಅನುಭವದಿಂದ ಪಡೆದುಕೊಂಡ ವೈಜ್ಞಾನಿಕ ಕ್ರಮವನ್ನು ರೂಢಿಸಿಕೊಂಡಿದ್ದರು.
ವಿಜಯಪುರದಲ್ಲಿನ ಮಸೀದಿ ಮುಂತಾದ ಐತಿಹಾಸಿಕ ಕಟ್ಟಡಗಳ ಎಣಿಕೆ ಹಾಕಿದರೆ ಅವು ದೆಹಲಿಗಿಂತಲೂ ಹೆಚ್ಚಾಗುತ್ತವೆ. ಎಷ್ಟೋ ಬಡ ಜನರು ರಾತ್ರಿ ಶೇಂಗಾ ಬೆಲ್ಲ ತಿಂದು ಹಾಳು ಮಸೀದಿಯಲ್ಲಿ ಮಲಗುವುದು ಸಹಜವಾಗಿತ್ತು. ಏತನ್ಮಧ್ಯೆ ಜಮೀನುದಾರಿ ವ್ಯವಸ್ಥೆಯಿಂದಾಗಿ ಉಳ್ಳವರು ಇಲ್ಲದವರ ಮೇಲೆ ಧಿಮಾಕು ತೋರಿಸುವ ಪ್ರವೃತ್ತಿಯೂ ಬಹಳವಾಗಿತ್ತು.
ಶ್ರೀಮಂತರ ಸಂಖ್ಯೆ ಕಡಿಮೆ ಇರಲಿಲ್ಲ. ಆದರೆ ವೈಜ್ಞಾನಿಕ ಮತ್ತು ತಂತ್ರಜ್ಞಾನದ ವಾತಾವರಣವಿಲ್ಲದ ಕಾರಣ ಮತ್ತು ಪಕ್ಕದಲ್ಲೇ ಔದ್ಯೋಗಿಕ ನಗರ ಸೋಲಾಪುರ ಇದ್ದರೂ ಯಾವುದೇ ಔದ್ಯೋಗಿಕ ಯೋಜನೆಗಳ ಕಡೆಗೆ ನಮ್ಮ ರಾಜಕೀಯ ನಾಯಕರು ಗಮನ ಹರಿಸದ ಕಾರಣ ಹಿಂದುಳಿದವರಾಗೇ ಉಳಿದೆವು. ಆ ಕಾಲದಲ್ಲಿ ಒಂದು ನೂಲಿನ ಗಿರಣಿಯನ್ನೂ ಯಶಸ್ವಿಯಾಗಿ ನಡೆಸಲಿಕ್ಕಾಗಲಿಲ್ಲ.
ಅಖಂಡ ವಿಜಾಪುರಕ್ಕೆ ಮೊದಲ ಭರವಸೆ ಮೂಡಿದ್ದು ಆಲಮಟ್ಟಿ ಅಣೆಕಟ್ಟಿನಿಂದ. ಅದಕ್ಕಾಗಿ ಅನೇಕ ಚಳವಳಿಗಳು ನಡೆದವು. ಸೈನಿಕ ಶಾಲೆ ಬಂದು ದೇಶದ ಮಕ್ಕಳ ಜೊತೆ ನಾಡಿನ ಕೆಲ ಶ್ರೀಮಂತ ಮಕ್ಕಳಿಗೂ ಉಪಯೋಗವಾಯಿತು. ಇವೆಲ್ಲಕ್ಕಿಂತ ಮಿಗಿಲಾಗಿ 1910ರಲ್ಲಿ ಪ್ರಾರಂಭವಾದ ಬಿ.ಎಲ್.ಡಿ.ಇ. ಸಂಸ್ಥೆಯನ್ನು ಕಟ್ಟುವಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ, ಸಿದ್ರಾಮಪ್ಪ ಲಕ್ಷ್ಮೀಶ್ವರ, ಬಂಥನಾಳ ಶಿವಯೋಗಿಗಳು ಮತ್ತು ನಂತರ ಬಿ.ಎಂ. ಪಾಟೀಲ ಮುಂತಾದವರ ಶ್ರಮ ಬಹಳಷ್ಟಿದೆ. ಇಂದು ಅದು ಎಂ.ಬಿ. ಪಾಟೀಲ ಅವರಿಂದಾಗಿ ಡೀಮ್ಸ್ ಯೂನಿವರ್ಸಿಟಿಯಾಗಿದೆ.
ವಿಜಾಪುರ ಜಿಲ್ಲೆಯಲ್ಲಿ ಔದ್ಯೋಗಿಕ ಕ್ರಾಂತಿಯಾಗದಿದ್ದರೂ ಎಂ.ಬಿ. ಪಾಟೀಲ ಅಂಥವರಿಂದಾಗಿ ನೀರಾವರಿ ಮತ್ತು ಶೈಕ್ಷಣಿಕ ಕ್ರಾಂತಿಯಾಯಿತು. ಆ ಮೂಲಕ ಆರ್ಥಿಕ ಬೆಳೆಗಳಲ್ಲಿ ಜಿಲ್ಲೆ ಔನ್ನತ್ಯ ಸಾಧಿಸತೊಡಗಿತು. ಆದಿಲಶಾಹಿಗಳ ಕಾಲದಲ್ಲಿ ರೋಮ್ ನಗರ ಬಿಟ್ಟರೆ ಜಗತ್ತಿನಲ್ಲಿ ವಿಜಾಪುರ ನಗರದಲ್ಲಿ ಮಾತ್ರ ನೀರು ಸರಬರಾಜು ವ್ಯವಸ್ಥೆ ಇತ್ತು. ಆ ಕಾಲದಲ್ಲಿ ಅತಿ ಹೆಚ್ಚು ಕೆರೆ, ಬಾವಿಗಳಿದ್ದ ವಿಜಾಪುರದಲ್ಲಿ ಇತ್ತೀಚಿನ ದಶಕಗಳವರೆಗೆ ಕುಡಿಯುವ ನೀರು ಸಿಗುವುದಕ್ಕೂ ಪರದಾಡುವ ಸ್ಥಿತಿ ಇತ್ತು. ವಾರಕ್ಕೊಮ್ಮೆ ಬರುವ ನಳದ ನೀರು ಪಡೆಯಲು ನಸುಕಿನಲ್ಲಿ ಹೋಗಿ ಸಾರ್ವಜನಿಕ ನಳಗಳ ಮುಂದೆ ಕೊಡಗಳ ಪಾಳಿ ಹಚ್ಚಿ ಕಾಯುತ್ತ ಕೂಡಬೇಕಿತ್ತು. ಒಂದು ಕೊಡ ನೀರಿಗಾಗಿ ಗಂಟೆಗಟ್ಟಲೆ ಕಾಯಬೇಕಿತ್ತು.
ಒಣ ಬೇಸಾಯ ಮುಗಿದ ಕೂಡಲೆ ಸಣ್ಣ ರೈತರು ತಮ್ಮ ಹಳ್ಳಿಗಳನ್ನು ಬಿಟ್ಟು ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದ ಸೋಲಾಪುರ, ಕೊಲ್ಲಾಪುರ, ಮುಂಬೈ ಮುಂತಾದ ಕಡೆಗಳಲ್ಲಿ ದುಡಿಯಲು ಹೋಗುತ್ತಿದ್ದರು. ಮತ್ತೆ ಮುಂಗಾರು ಮತ್ತು
ಹಿಂಗಾರು ಸಮಯದಲ್ಲಿ ತಮ್ಮ ಹೊಲಗಳಲ್ಲಿ ದುಡಿಯಲು ಬರುತ್ತಿದ್ದರು. ಈ ಕುರಿತು ಒಂದು ಸಲ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರು ವಿಜಾಪುರದ ಕ್ರಿಯಾಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾವು ವಿಜಾಪುರದವರು ಹೀಗೆ ದುಡಿದು ಸಾಯುತ್ತೇವೆ. ಯಾವುದೇ ಬದಲಾವಣೆ ಕಂಡುಬರುತ್ತಿಲ್ಲ ಎಂದು ನಾನು ಬೇಸರ ವ್ಯಕ್ತಪಡಿಸಿದ್ದೆ. ಆಗ ಅವರು ದೇವರಾಜ ಅರಸು ಅವರ ಜೊತೆ ಮಾತನಾಡಿದ ಪ್ರಸಂಗವೊಂದನ್ನು ಹೇಳಿದರು. ಒ೦ದು ಅಣೆಕಟ್ಟಿನ ಯೋಜನೆ ಮುಗಿಯುವವರೆಗೆ ಇನ್ನೊಂದನ್ನು ಕೈಗೆತ್ತಿಕೊಳ್ಳದೆ ಇದ್ದಾಗ ಕೆಲಸ ಬೇಗ ಮುಗಿಯುವುದು. ವೆಚ್ಚ ಕೂಡ ಅಂದಾಜು ಮಾಡಿದಷ್ಟೇ ಆಗುವುದು. ಇಲ್ಲದಿದ್ದರೆ ಹಂತ ಹಂತವಾಗಿ ಮಾಡುತ್ತ ಹೋಗುವುದರಿಂದ ವೆಚ್ಚ ವಿಪರೀತವಾಗುವುದು ಎಂದು ಅಂದಿದ್ದಕ್ಕೆ ದೇವರಾಜ ಅರಸು ಅವರು ನಗುತ್ತ ಹೇಳಿದ್ದನ್ನು ತಿಳಿಸಿದರು. ಹಾಗೆ ಮಾಡುವುದು ಒಳ್ಳೆಯದು ಆದರೆ ಜನ ಕೇಳಬೇಕಲ್ಲ. ಪ್ರಾದೇಶಿಕ ತಾರತಮ್ಯ ಎನ್ನುತ್ತಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲ ಭಾಗದವರಲ್ಲಿ ಆಳುವ ಪಕ್ಷದವರು ನಂಬಿಕೆ ಉಳಿಸಿಕೊಳ್ಳುವುದು ಅನಿವಾರ್ಯ. ಎಲ್ಲ ಗೊತ್ತಿದ್ದು ಹೀಗೇ ಸಾಗಬೇಕಾಗುತ್ತದೆ ಎಂದು ಅರಸು ಅವರು ಹೇಳಿದ್ದನ್ನು ಜ್ಞಾಪಿಸಿದರು. ಹೀಗೆ ಜನರ ಮತ್ತು ರಾಜಕೀಯ ನಾಯಕರ ಅಭಿಪ್ರಾಯವಿದ್ದ ವಾತಾವರಣದಲ್ಲಿ ಎಂ.ಬಿ. ಪಾಟೀಲರು ಭಗೀರಥನಂತೆ ನೀರು ಒದಗಿಸಲು ಮಾಡಿದ ಪ್ರಯತ್ನ ಒಟ್ಟಾರೆ ರಾಜ್ಯದ ಜನರು ಮತ್ತು ಮುಖ್ಯವಾಗಿ ವಿಜಾಪುರದ ಜನರು ಮರೆಯುವ ಹಾಗಿಲ್ಲ. ವಿಜಾಪುರ ಔದ್ಯೋಗಿಕವಾಗಿ ಬೆಳೆಯದಿದ್ದರೂ ನೀರಾವರಿಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
ಇಂಥ ಹಿನ್ನೆಲೆಯನ್ನು ಅರಿತುಕೊಂಡು ಈ ಪುಸ್ತಕ ಓದಿದರೆ ಮಹಾಂತೇಶ ಅವರ ಶ್ರಮ ಸಾರ್ಥಕವಾಗುತ್ತದೆ. ಅವರ ಚಿಂತನಾ ಕ್ರಮ ಜೀವಕಾರಣ್ಯ ಮತ್ತು ಪರಿಸರಪ್ರೇಮದಿಂದ ಕೂಡಿದೆ. ಜೀವಜಾಲ ಸಮತೋಲನದಿಂದ ಕೂಡಿದ ಸಮೃದ್ಧ ಸಮಾಜ ಅವರ ಕನಸಾಗಿದೆ. ಯುವಕರು ಸತತ ಪರಿಶ್ರಮದಿಂದ ಮೇಲೆ ಬರುವುದಕ್ಕೆ ಪೂರಕವಾಗುವಂಥ ಪ್ರಸಂಗಗಳನ್ನು ಅವರು ತಮ್ಮ ಲೇಖನಗಳಲ್ಲಿ ದಾಖಲಿಸಿದ್ದಾರೆ. ಪರಿಶ್ರಮ ಪಟ್ಟು ಸಾಧನೆ ಮಾಡುವ ಬಡವರು, ಪ್ರಾಮಾಣಿಕ ಅಧಿಕಾರಿಗಳು, ಸುಸಂಸ್ಕೃತ ಶ್ರೀಮಂತರು, ಜನರಿಗಾಗಿ ಸ್ಪಂದಿಸುವ ರಾಜಕಾರಣಿಗಳು ಮತ್ತು ವಸ್ತುಮೋಹಕ್ಕೆ ಒಳಗಾಗದೆ ಬದುಕುವ ಸಂತರು, ಶರಣರು ಅವರಿಗೆ ಆದರ್ಶಪ್ರಾಯರು. ಅವರ ಈ ಆಯ್ಕೆ ಯಾವುದೇ ಕುಲ, ಗೋತ್ರ, ಜಾತಿ, ಉಪಜಾತಿ, ಭಾಷೆ, ಪ್ರದೇಶ ಮತ್ತು ರಾಜಕೀಯ ಪಕ್ಷಗಳಿಗೆ ಸೀಮಿತವಾದುದಲ್ಲ. ಯಾರು ಎಲ್ಲಿಯವರಾಗಿದ್ದರೂ ಒಳ್ಳೆಯವರು ಒಳ್ಳೆಯವರೇ, ಕೆಟ್ಟವರು ಕೆಟ್ಟವರೆ ಎಂಬುದನ್ನು ಅವರು ದೃಢವಾಗಿ ನಂಬಿದ್ದಾರೆ. ಒಳ್ಳೆಯವರ ಬಗ್ಗೆ ಹೃದಯಸ್ಪರ್ಶಿಯಾಗಿ ಬರೆಯುತ್ತಾರೆ. ಹಾಗಲ್ಲದವರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ.
ಅವರ ಈ ನುಡಿಚಿತ್ರಗಳನ್ನು ಓದುವಾಗ ಸುಸಂಸ್ಕೃತ ಮನಸೊಂದು ನಿಮ್ಮ ಮನಸ್ಸಿನ ಜೊತೆ ಹರಿದಾಡುತ್ತಿರುವಂತೆ ಭಾಸವಾಗುವುದು. ರಂಜಕತೆ ಮತ್ತು ಹೊಳವುಗಳೇ ಭಾವಪೂರ್ಣ ನುಡಿಚಿತ್ರಗಳ ಸಂಪತ್ತು. ಅವರು ತಮ್ಮ ಕಣ್ಣಿಗೆ ಕಾಣುವ ಮಹತ್ವದ್ದನ್ನೆಲ್ಲ ಒಳನೋಟದಿಂದ ತಮ್ಮ ಮನದಲ್ಲಿ ತುಂಬಿಕೊಳ್ಳುತ್ತಾರೆ. ಅವುಗಳಲ್ಲಿ ಭಾವತುಂಬಿ ಹೊರಹೊಮ್ಮಿಸುತ್ತಾರೆ. ಅವರ ಉದಾತ್ತ ಚಿಂತನೆಗಳು ಯೋಗ್ಯರನ್ನು ಗುರುತಿಸುತ್ತ ಅವರ ಗುಣಗಾನ ಮಾಡುವ ಮೂಲಕ ನಮ್ಮನ್ನು ಅವರ ದಾರಿಗೆ ಎಳೆದುಕೊಳ್ಳುತ್ತವೆ. ಇದುವೆ ಸೃಜನಶೀಲತೆಗೆ ಇರಬೇಕಾದ ಶಕ್ತಿ. ಇಂಥ ಪ್ರಸಂಗಗಳ ಒಟ್ಟು ಮೊತ್ತವೇ ಈ ಪುಸ್ತಕವಾಗಿದೆ.
"ಸಾಧಕರು ಪುಸ್ತಕದಲ್ಲಿಲ್ಲ. ಸಿನಿಮಾದಲ್ಲಿಲ್ಲ. ನಮ್ಮ ಮುಂದೆ ಇದ್ದಾರೆ. ಅವರೇ ನಮಗೆ ಮಾದರಿಯಾಗಬೇಕು. ಇಂತಹ ಸಾಧಕರನ್ನು ಗುರುತಿಸಿ ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಅಂದಾಗ ನಮ್ಮ ಮಕ್ಕಳ ಮನೋಬಲ ಹೆಚ್ಚುತ್ತದೆ. ಸಾಧಿಸಿ ತೋರಿಸಲೇಬೇಕೆಂಬ ಛಲ ಉಕ್ಕುತ್ತದೆ" ಎಂದು ಅವರು ಹೇಳಿದ್ದು ನಮ್ಮ ಯುವಜನಾಂಗಕ್ಕೆ ದಿಕ್ಸೂಚಿಯಾಗಿದೆ ವಿಜಾಪುರದ ಹಳ್ಳಿಗಾಡಿನಿಂದ ಬಂದ ಅನೇಕ ಯುವಕರು ಬೆರಗಾಗುವಂಥ ಸಾಧನೆ ಮಾಡಿದ್ದನ್ನು ಗುರುತಿಸಿ, ದಾಖಲಿಸಿದ್ದಾರೆ.
ತೆಲಸಂಗದ ರೈತನ ಮಗ ಸಾತವೀರ ರೊಟ್ಟಿ ತರಕಾರಿ ಬೆಳೆಯಲ್ಲಿ ಸಾಧನೆ ಮಾಡಿ ಪೂನಾದಲ್ಲಿ ವಿಸ್ಕ್ ಅಗೋ ಹೆಸರಿನಲ್ಲಿ ಕಂಪೆನಿ ತೆಗೆದು ಯಶಸ್ಸನ್ನು ಸಾಧಿಸಿದ್ದಾರೆ. ಡೋಣಿ ನದಿ ದಂಡೆಯ ಚಂದ್ರಶೇಖರ ಬಿರಾದಾರ ಕೃಷಿ ಅರಣ್ಯದಲ್ಲಿ ಡಾಕ್ಟರೇಟ್ ಪಡೆದು ಜಗತ್ತು ಸುತ್ತಿ ಈಜಿಪ್ಟಲ್ಲಿ ನೆಲೆ ನಿಂತು ಜೀವವೈವಿಧ್ಯ ಪುನರ್ ಪ್ರತಿಷ್ಠಾಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬಸವನ ಬಾಗೇವಾಡಿ ಬಸವಸೇನೆಯ ಸದಸ್ಯರು ಅಲ್ಲಿನ ಸರ್ಕಾರಿ ಆಸ್ಪತ್ರೆಯ ಬರಡು ಭೂಮಿಯಲ್ಲಿ ಸಸಿ ನೆಟ್ಟು ಅರಣ್ಯ ಸೃಷ್ಟಿಸಿದ್ದಾರೆ. ಊರಿಗೆ ಹೋಗಲು ಟಿಕೆಟ್ ಚಾರ್ಜ್ ಇಲ್ಲದೆ ವಿಜಯಪುರ ಬಸ್ ಸ್ಟ್ಯಾಂಡ್ ನಲ್ಲಿ ಮಲಗುತ್ತಿದ್ದ ಮನಗೂಳಿಯ ಯುವಕ ಚಂದ್ರಶೇಖರ ಸಂಗಾಪುರ ಅದೇ ಬಸ್ ಸ್ಟ್ಯಾಂಡ್ ಎದುರಿಗೆ ಬೇಕರಿಯಲ್ಲಿ ಕೆಲಸಕ್ಕೆ ಸೇರಿದರು. ಇಂದು ಮೂರು ಬೇಕರಿಗಳ ಮಾಲೀಕರಾಗಿ, 50 ಮಂದಿ ಕೆಲಸಗಾರರಿಗೆ ಉದ್ಯೋಗ ಸೃಷ್ಟಿಸಿದ್ದಾರೆ. ಕಾಯಕದ ಮೂಲಕ ಕೈಲಾಸ ಸೃಷ್ಟಿಸಿದ್ದಾರೆ.
ಸೋಮನಗೌಡ ಪಾಟೀಲ ತಂದೆಯನ್ನು ಕಳೆದುಕೊಂಡು ಎಮ್ಮೆ ಮೇಯಿಸುತ್ತಿದ್ದರು. ಕಷ್ಟಪಟ್ಟು ಓದಿ ಸಾಫ್ಟ್ ವೇರ್ ಎಂಜಿನಿಯರ್ ಆದರು. ಆದರೆ ಸೃಜನಶೀಲ ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಅವರು ಇಂದು ಇಂಗ್ಲಿಷ್ ಸಾಹಿತ್ಯದಲ್ಲಿ ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ.
ಕಡು ಬಡವ ಕುಟು೦ಬದಿಂದ ಬಂದ ಯುವಕ ರವಿ ಭೈರವಾಡಗಿ ಹೋಟೆಲುಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತ ವಿದ್ಯಾಭ್ಯಾಸ ಮುಂದುವರಿಸಿದರು. ಧಾರವಾಡದಲ್ಲಿ ಪದವಿ ಮುಗಿಸಿದ ನಂತರ ಬೆಳಗಾವಿ ಕಾನೂನು ಕಾಲೇಜು ಸೇರಿ ಸಾಯಂಕಾಲ ಸಮಯದಲ್ಲಿ ತಳ್ಳುಗಾಡಿಯಲ್ಲಿ ಎಗ್‌ರೈಸ್ ಮಾರುತ್ತ ಶಿಕ್ಷಣ ಮುಗಿಸಿದರು. ನಂತರ ಖಾನಾವಳಿ ಪ್ರಾರಂಭಿಸಿದರು. ಈಗ ಅಲ್ಲೇ ಪ್ರಖ್ಯಾತ ನಳಪಾಕ ಹೋಟೆಲ್ ಮಾಲಿಕರಾಗಿದ್ದಾರೆ!
ಕೆಲಸ ಹುಡುಕಿಕೊಂಡು ಹೊರ ರಾಜ್ಯಕ್ಕೆ ಗುಳೆ ಹೋದವರ ಮಗಳು ಸೋನಾಲಿ ದೇವಾನಂದ ರಾಠೋಡ ಬಿ.ಎಸ್ಸಿ. ನರ್ಸಿಂಗ್‌ನಲ್ಲಿ ರಾಜೀವ ಗಾಂಧಿ ವಿಶ್ವವಿದ್ಯಾಲಯದಿಂದ ಎರಡು ಚಿನ್ನದ ಪದಕ ಪಡೆದು ರಾಷ್ಟ್ರಪತಿಗಳಿಂದ ಸ್ವೀಕರಿಸಿದ ರಾಜ್ಯದ ಏಕೈಕ ವಿದ್ಯಾರ್ಥಿನಿ. ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ. ಪಾಟೀಲ ನರ್ಸಿಂಗ್ ಕಾಲೇಜ್ ಆಗಿರದಿದ್ದರೆ, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಇಲ್ಲದಿದ್ದರೆ ವಿಜಯಪುರದ ಅನೇಕ ಪ್ರತಿಭೆಗಳು ಮುಂದೆ ಬರುವ ಸಾಧ್ಯತೆ ಬಹಳ ಕಡಿಮೆ ಇತ್ತು ಹೀಗೆ ಇತ್ತೀಚಿನ ದಶಕಗಳಲ್ಲಿ ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳು ವಿಜಯಪುರದ ಜನರ ಭವಿಷ್ಯದ ಭರವಸೆಗಳಾಗಿವೆ. ನಮ್ಮ ಕಾಲದ ಯುವಕರಿಗೆ ಸಿಗದೆ ಇರುವ ಸೌಲಭ್ಯಗಳು ಈಗಿನ ಕಾಲದ ಯುವಕರಿಗೆ ಸಿಗುತ್ತಿದ್ದು, ಅಂಥವರ ಪರಿಚಯ ಮಾಡಿಸಿದ ಮಹಾಂತೇಶ ಅವರು ಅಭಿನಂದನಾರ್ಹರು.
ಈ ಎಲ್ಲ ಯುವಜನಾಂಗದ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದರ ಜೊತೆಗೆ ಇತರ ಕ್ಷೇತ್ರದಲ್ಲಿ ಹೆಸರು ಮಾಡಿದ ಸಾಧಕರ ಬಗ್ಗೆ ಕೂಡ ಓದುಗರು ಈ ಹೃದಯಸ್ಪರ್ಶಿಯಾದ ಪುಸ್ತಕವನ್ನು ಓದಿ ಸ್ಫೂರ್ತಿ ಪಡೆಯುತ್ತಾರೆಂದು ಆಶಯ ವ್ಯಕ್ತಪಡಿಸುವೆ.
- ರಂಜಾನ್ ದರ್ಗಾ
"ಉಸಿರಾಟದ ತೊಂದರೆ ಯಾವ ಮಟ್ಟಿಗೆ ಹೋಯಿತೆಂದರೆ ಕೂಸಿಗೆ ಅಂಗಾತ ಮಲಗಲೂ ಆಗುತ್ತಿರಲಿಲ್ಲ. ಉಸಿರುಗಟ್ಟದಂತೆ ಕಾಯಲು ಅವ...
"ಅದೊಂದು ಕೂಡುಕುಟುಂಬ. ಅಣ್ಣ ಹಾಗೂ ತಮ್ಮನ ಸಂಸಾರಗಳು ಒಂದೇ ಮನೆಯಲ್ಲಿವೆ. ತಮ್ಮನಿಗೆ ಪಾರ್ಶುವಾಗಿ ಹಾಸಿಗೆ ಹಿಡಿದಿ...
“ರಾಜ್ಯವಾರು ಜನರ ಬದುಕಿನ ಗುಣಮಟ್ಟ ಹೆಚ್ಚಿಸೋಕೆ, ಮೂಲಭೂತ ಸೇವೆಗಳನ್ನ ಒದಗಿಸೋಕೆ ಕೇಂದ್ರ ಸರಕಾರದ ಅಡೆತಡೆಗಳು ದಕ...
©2024 Book Brahma Private Limited.