"ಉಸಿರಾಟದ ತೊಂದರೆ ಯಾವ ಮಟ್ಟಿಗೆ ಹೋಯಿತೆಂದರೆ ಕೂಸಿಗೆ ಅಂಗಾತ ಮಲಗಲೂ ಆಗುತ್ತಿರಲಿಲ್ಲ. ಉಸಿರುಗಟ್ಟದಂತೆ ಕಾಯಲು ಅವಳು ಕೂತೇ ನಿದ್ದೆ ಮಾಡಬೇಕಿತ್ತು. ಅರ್ಧ ರಾತ್ರಿ ನಾನು; ಉಳಿದರ್ಧ ರಾತ್ರಿ ಗಿರಿ ಅವಳನ್ನು ಎದೆಗಾನಿಸಿಕೊಂಡು ಭರ್ತಿ 12 ದಿನಗಳ ಕಾಲ ಔಷಧಿ ಕೊಟ್ಟ ಮೇಲೆ ಮೊದಲಿನಂತಾದಳು. ಮೊದಲ ಸಲ ಶಾಲೆಗೆ ಅಷ್ಟು ದಿನಗಳ ಕಾಲ ರಜೆಯಾಗಿತ್ತು," ಎನ್ನುತ್ತಾರೆ ಶಮಾ ನಂದಿಬೆಟ್ಟ. ಅವರು ಲಕ್ಷ್ಮಣ ವಿ.ಎ ಅವರ ‘ಪಿ.ಎಚ್.ಸಿ. ಕವಲುಗುಡ್ಡ’ ಕೃತಿ ಕುರಿತು ಬರೆದ ವಿಮರ್ಶೆ.
ಅದಿನ್ನೂ ‘ಕೊರೋನಾʼ ಎಂಬ ಶಬ್ದ ಜಗತ್ತಿಗೆ ಪರಿಚಯವಾಗಿರದ ಕಾಲ; ವೈದ್ಯ ಸಂಕುಲದೊಳಗೆ ಸಣ್ಣಗೆ ಗುಸುಗುಸು ಶುರುವಾಗಿದ್ದ ಹೊತ್ತು. ಡಾಕ್ಟರ ಮಡದಿಯಾಗಿರುವ ಕಾರಣ ಒಂದಷ್ಟು ವಿಚಾರಗಳು ನನ್ನ ಕಿವಿಗೂ ಬೀಳುತ್ತಿದ್ದವು. ಆದರೆ ಯಾರಿಗೂ ಯಾವುದೇ ಸ್ಪಷ್ಟ ಮಾಹಿತಿ, ನಿರ್ದಿಷ್ಟ ಗುಣಲಕ್ಷಣಗಳು ಗೊತ್ತಿರಲಿಲ್ಲ. ಒಂದಷ್ಟು ಊಹಾಪೋಹಗಳ ನಡುವೆ ತಮ್ಮ ಜ್ಞಾನವನ್ನೂ ಬೆರೆಸಿ ಮಾತಾಡಿಕೊಳ್ಳುತ್ತಿದ್ದರಷ್ಟೇ ಹೊರತು ಅದರ ಭೀಕರ ಪರಿಣಾಮಗಳ ಅರಿವು ಕಿಂಚಿತ್ತೂ ಇದ್ದಂತಿರಲಿಲ್ಲ. ಇಂಥ ಹೊತ್ತಿನಲ್ಲಿ ಹಿರಿಕೂಸು ಪ್ರಣತಿಗೆ ಬಂದ ಜ್ವರ ಅನಿರೀಕ್ಷಿತವಾಗಿ ಹೇಗ್ಹೇಗೋ ವರ್ತಿಸಲಾರಂಭಿಸಿತ್ತು. ಎಷ್ಟು ಔಷಧಿ ಕೊಟ್ಟರೂ ನಾ ಹೋಗಲೊಲ್ಲೆ ಎಂಬಂತೆ ಚಂಡಿ ಹಿಡಿದು ದಿನಕ್ಕೊಂದು ಲಕ್ಷಣ ತೋರಿಸುತ್ತಿತ್ತು. ಉಸಿರಾಟದ ತೊಂದರೆ ಯಾವ ಮಟ್ಟಿಗೆ ಹೋಯಿತೆಂದರೆ ಕೂಸಿಗೆ ಅಂಗಾತ ಮಲಗಲೂ ಆಗುತ್ತಿರಲಿಲ್ಲ. ಉಸಿರುಗಟ್ಟದಂತೆ ಕಾಯಲು ಅವಳು ಕೂತೇ ನಿದ್ದೆ ಮಾಡಬೇಕಿತ್ತು. ಅರ್ಧ ರಾತ್ರಿ ನಾನು; ಉಳಿದರ್ಧ ರಾತ್ರಿ ಗಿರಿ ಅವಳನ್ನು ಎದೆಗಾನಿಸಿಕೊಂಡು ಭರ್ತಿ 12 ದಿನಗಳ ಕಾಲ ಔಷಧಿ ಕೊಟ್ಟ ಮೇಲೆ ಮೊದಲಿನಂತಾದಳು. ಮೊದಲ ಸಲ ಶಾಲೆಗೆ ಅಷ್ಟು ದಿನಗಳ ಕಾಲ ರಜೆಯಾಗಿತ್ತು. ಇದಾಗಿ ಸುಮಾರು ಹದಿನೈದು ದಿನಗಳಿಗೆ ಮೊದಲ ಸಲದ ಲಾಕ್ ಡೌನ್ ಘೋಷಣೆಯೊಂದಿಗೆ ಕೊರೋನಾ ಎಂಬ ಅನಪೇಕ್ಷಿತ ಅತಿಥಿಯ ಗುಣಲಕ್ಷಣಗಳು ಮತ್ತು ಇತ್ಯಾದಿ ಇತ್ಯಾದಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿತಲ್ಲ, ಅವತ್ತು ನಮ್ಮನೇಲಿ ʼಯುರೇಕಾ, ಯುರೇಕಾʼ! ನಮ್ಮ ಮಗಳು ಪ್ರಣತಿಯ ದೇಹಕ್ಕೆ ಹೊಕ್ಕು ಹೈರಾಣು ಮಾಡಿದ್ದು ʼಕೊರೋನಾʼ ಎಂದು ಘೋಷಿಸಿದ್ದರು ನಮ್ಮನೆ ಡಾಕುಟ್ರು. ಅಷ್ಟಾದರೂ ಅತೀ ಸುಸ್ತಾಗಲಿಲ್ಲವಲ್ಲ ಮಗುವಿಗೆ ಎಂದು ಮಾತಾಡಿಕೊಳ್ಳುತ್ತಿರುವಾಗ “ಹೆಂಗೆ ನನ್ನ ಮಗಳು?” ಅಂತ ನಾನು ಹುಬ್ಬು ಹಾರಿಸಿದರೆ, “ಹೆಂಗೆ ನಮ್ಮ ಆಯುರ್ವೇದ?” ಎಂದು ನಮ್ ಡಾಕ್ಟ್ರು ಕಾಲರ್ ಹಾರಿಸಿದ್ರು. ಆ ಮಾರ್ಚ್ 22ನೇ ದಿನದಂದು ನಮ್ಮದೂ ಸೇರಿದಂತೆ ಅನೇಕ ಭಾರತೀಯರ ಜಗತ್ತು ಮಗ್ಗಲು ಬದಲಾಯಿಸಿತ್ತು.
ಈ ಹಳೆಯ ನೆನಪುಗಳನ್ನೆಲ್ಲ ಒಂದೊಂದಾಗಿ ಕಣ್ಮುಂದೆ ತಂದಿದ್ದು ಪಿ.ಎಚ್.ಸಿ. ಕವಲುಗುಡ್ಡದ ಭೇಟಿ! ಆಯುರ್ವೇದ ವೈದ್ಯನ ಹೆಂಡತಿಯಾಗಿ, ಹಲವು ವೈದ್ಯರುಗಳ (ಆಯುರ್ವೇದ, ಅಲೋಪತಿ & ಇತರ ಪದ್ಧತಿಯ) ಗೆಳತಿಯಾಗಿ ಮತ್ತು ಜನ ಸಾಮಾನ್ಯರೊಡನೆ ನಿರಂತರ ಸಂಪರ್ಕದಲ್ಲಿರಲೇಬೇಕಾದ ಬ್ಯಾಂಕಿನ CEO ಹುದ್ದೆಯಲ್ಲಿದ್ದು ಕೋವಿಡ್ ಕಾಲದಲ್ಲೂ ದಿನವಿಡೀ ಕೆಲಸ ಮಾಡಿ ಕೊರೋನಾದ ವಿವಿಧ ಆಯಾಮಗಳನ್ನು ಕಂಡವಳು ನಾನು. ಕೆಲವೊಂದನ್ನು ಕಾಣುವುದಕ್ಕೆ ಕಣ್ಣಿದ್ದರೆ ಸಾಲದು, ಒಳಗಣ್ಣೂ ಇರಬೇಕು ಎನ್ನುವುದಿದೆ. ಕೋವಿಡ್ ಮಹಾಮಾರಿಯ ಕಾಲದಲ್ಲಿ ಜನಸಾಮಾನ್ಯರ ಕಣ್ಣಿಗೆ, ದೃಷ್ಟಿಗೆ ನಿಲುಕುವುದಿರಲಿ ಹತ್ತಾರು ಒಳಗಣ್ಣುಗಳಿದ್ದರೂ ನಿಲುಕದಂತ ವಿದ್ಯಮಾನಗಳು, ಗುಟ್ಟುಗಳಿದ್ದವು; ಅಂತೆಯೇ ಸಾಕಷ್ಟು ಬಹಿರಂಗ ರಹಸ್ಯಗಳೂ, ಊಹಾಪೋಹಗಳೂ ಚಾಲ್ತಿಗೆ ಬಂದಿದ್ದವು. ಜೊತೆ ಜೊತೆಗೇ ಒಂದಿಡೀ ಶತಮಾನಕ್ಕಾಗುವಷ್ಟು ಜೋಕುಗಳೂ ಹುಟ್ಟಿಕೊಂಡವು. ಇದೆಲ್ಲದರ ಆಚೆಗಿನ ವಾಸ್ತವ, ಅದರ ಭೀಕರತೆ, ಪ್ರತಿಕ್ಷಣ ಜೊತೆಯಾಗುವ ಅಸಹಾಯಕತೆ, ಕಂಬನಿ, ರೋಷ, ಸಿಟ್ಟು ಮುಂತಾದ ಮಾನವೀಯ ಸಂವೇದನೆಗಳೂ ಅವಕ್ಕೆ ಸಮಾನಾಂತರ ರೇಖೆಗಳಂತಿದ್ದ ಭ್ರಷ್ಟಾಚಾರ, ಅನಾಚಾರಗಳೆಲ್ಲವೂ ಕಂಡದ್ದು ಕೋವಿಡ್ ವಾರಿಯರ್ಸ್ ಹೆಸರಿನಲ್ಲಿ ಕರ್ತವ್ಯ ನಿರ್ವಹಣೆಯಲ್ಲಿದ್ದ ವೈದ್ಯರು ಮತ್ತು ಅವರ ಜೊತೆಗಿದ್ದ ಎಲ್ಲ ರೀತಿಯ (Para-medical, non-medical) ಜೀವಗಳಿಗೆ ಮಾತ್ರ. ಡಾ. ಲಕ್ಷ್ಮಣ ವಿ.ಎ ಒಡೆತನದ ಪಿಎಚ್.ಸಿ ಕವಲುಗುಡ್ಡ 24 7 ಇಂಥವರು ಕಂಡದ್ದರ ಚಿತ್ರಣ.
ಡಾ. ಸುಹಾಸ್ ಎಂಬ ನಿರುದ್ಯೋಗಿ ವೈದ್ಯನೋರ್ವ ಕೋವಿಡ್ ಕಾರಣದಿಂದಾಗಿ ಕೆಲಸ ಗಿಟ್ಟಿಸಿಕೊಳ್ಳುವ ಮೂಲಕ ಆರಂಭವಾಗುವ ಈ ಕಾದಂಬರಿ ಆತನ ಕೋವಿಡ್ ಸಮಯದಲ್ಲಿನ ಸೇವೆಯ ಮತ್ತು ಕರ್ತವ್ಯದ ಪಯಣವನ್ನು ಹೇಳುತ್ತಾ ಸಾಗುತ್ತದೆ. ಸುಮಾರು 500ಕ್ಕೂ ಹೆಚ್ಚು ಕೋವಿಡ್ ಕೇಸ್ʼಗಳಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯೊಂದರ ಸಹ-ಮಾಲಕಿಯಾಗಿ, ವೈದ್ಯರೊಬ್ಬರ ಮಡದಿಯೂ ಆಗಿ ಈ ಕಾದಂಬರಿಯಲ್ಲಿನ ಅಷ್ಟೂ ಪಾತ್ರಗಳನ್ನು ಸನಿಹದಲ್ಲೂ, ದೂರದಿಂದಲೂ ಕಂಡಿದ್ದೇನೆ. ಆದ್ದರಿಂದ ಸ್ವತಃ ವೈದ್ಯರಾಗಿದ್ದು ಕೋವಿಡ್ ವಾರಿಯರ್ ಆಗಿಯೂ ಸರ್ಕಾರದಿಂದ ನೇಮಕವಾಗಿ ಕರ್ತವ್ಯ ನಿಭಾಯಿಸಿದ ಲೇಖಕ ಡಾ.ಲಕ್ಷ್ಮಣ್ ಬರೆದುದರಲ್ಲಿ ಲವಲೇಶವೂ ಕಲ್ಪನೆಯಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ.
ಓದುತ್ತ ಹೋದಂತೆಲ್ಲ ವೈದ್ಯ ಸುಹಾಸನ ಮಡದಿ ನಳಿನಿಯ ವರ್ತನೆಯ ಬಗ್ಗೆ ತೀರಾ ನಿಕೃಷ್ಟ ಭಾವವೋ ಹೇವರಿಕೆಯೋ ಹುಟ್ಟಿದರೆ ‘ಅಷ್ಟು ಕಷ್ಟಪಟ್ಟು ಕೆಲಸ ಮಾಡುವ ವೈದ್ಯನ ಮಡದಿ ಹೀಗಿರಲು ಸಾಧ್ಯವಾ?ʼ ಎನ್ನಬೇಡಿ. ಹಲವು ಜೀವಗಳನ್ನು ಬಲಿ ತೆಗೆದುಕೊಂಡ ಕೋವಿಡ್ ಕೆಲವು ಜೀವನಗಳನ್ನೂ ಆಪೋಷನ ತೆಗೆದುಕೊಂಡಿದ್ದು ಬಲ್ಲೆ. ಸರ್ಕಾರಿ ಸೇವೆಯಲ್ಲಿರುವ ಸಾವಿರಾರು ವೈದ್ಯರುಗಳು 3-6ತಿಂಗಳ ವರೆಗೆ ಮನೆಗೆ ಕಾಲಿಡದ ದಿನಗಳಿದ್ದವು. ಮೂಲಭೂತ ಅವಶ್ಯಕತೆ ಎಂದು ಬಿಂಬಿಸಲಾಗಿದ್ದ ಪಿ.ಪಿ.ಇ. ಕಿಟ್ ಕೂಡ ಇಲ್ಲದೇ ಅವರು ಕರ್ತವ್ಯ ನಿರ್ವಹಿಸುತ್ತಿದ್ದರೆ ಅವರ ಮಡದಿಯರು (ಅದರಲ್ಲೂ ಬಹತೇಕರು ವೈದ್ಯರಲ್ಲದವರು ಮತ್ತು ಸಂದರ್ಭದ ಗಂಭೀರತೆ ಅರಿತುಕೊಳ್ಳುವಷ್ಟು ಬುದ್ಧಿಮತ್ತೆಯೋ ವಿವೇಕವೋ ಇಲ್ಲದವರು) ಇದನ್ನು ಒಪ್ಪಿಕೊಳ್ಳಲೂ ಆಗದೇ, ಕೆಲಸ ಬಿಡುವಂತೆ ಗಂಡನ ಮನವೊಲಿಸಲೂ ಆಗದೇ ಒದ್ದಾಡಿದರು. ಗಂಡ ಸೇವೆ ಮಾಡುತ್ತಿದ್ದಾನೆ ಎಂಬ ಹೆಮ್ಮೆ, ಸಾರ್ಥಕ್ಯದ ಭಾವಕ್ಕಿಂತ ಈ ಖಾಯಿಲೆಯ ಚಕ್ರವ್ಯೂಹಕ್ಕೆ ಸಿಲುಕಿದ ಗಂಡನ ಜೀವ ಉಳಿದೀತೋ ಇಲ್ಲವೋ ಎಂಬ ಆತಂಕ ನೋವೇ ಹೆಚ್ಚಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.
ಇನ್ನು ಸರಳಾ ಸಿಸ್ಟರ್, ಗ್ರೂಪ್ ಡಿ ವನಜಮ್ಮ, ಕಾಳಮ್ಮನಂಥವರು ಅದೆಷ್ಟೋ ಲಕ್ಷ ಸಂಖ್ಯೆಯಲ್ಲಿ ದುಡಿದರು, ಜೀವ ತೇಯ್ದರು, ನಡುವೆ ಸಿಕ್ಕ ಎರಡು ನಿಮಿಷದಲ್ಲಿ ವಿಡಿಯೋ ಕಾಲ್ ಮಾಡಿಯೇ ಮನೆಯಲ್ಲಿ ಬಿಟ್ಟು ಬಂದಿದ್ದ ಹಸುಗೂಸುಗಳನ್ನು ನೋಡಿ ಕಣ್ತುಂಬಿಕೊಂಡರು. ಕೆಲವರು ಹೇಗೋ ಕಾದಾಡಿ ಗೆದ್ದರೆ ಇನ್ನೊಂದಷ್ಟು ಕಂದಮ್ಮಗಳು ಅಮ್ಮಂದಿರನ್ನು ಕಣ್ತುಂಬ ನೋಡುವ ಮೊದಲೇ ಕಳೆದುಕೊಂಡದರು. ಲ್ಯಾಬ್ ಟೆಕ್ನಿಷಿಯನ್ ರವಿಯಂತವರದ್ದು ಅತ್ತ ದರಿ, ಇತ್ತ ಪುಲಿ ಎಂಬ ಪರಿಸ್ಥಿತಿ. ಅತ್ತ ಇಲಾಖೆಯಿಂದ ಕೊಟ್ಟ ಟಾರ್ಗೆಟ್ ಪೂರೈಸಲೇಬೇಕಾದ ಒತ್ತಡ, ಇತ್ತ ಮೂಲಭೂತ ಸೌಕರ್ಯವೂ ಇರದ ಆಸ್ಪತ್ರೆಯ ಸ್ಥಿತಿಯಲ್ಲಿ ಎಷ್ಟೋ ʼರವಿʼಗಳಿಗೆ ಸುಮ್ಮನೇ ಕಡ್ಡಿ ಮುರಿದು ಹಾಕದ ಹೊರತು ಬೇರೆ ದಾರಿಯಾದರೂ ಎಲ್ಲಿತ್ತು ಎನಿಸುತ್ತಿದೆ ಇಂದು ಹಿಂತಿರುಗಿ ನೋಡಿದಾಗ. ಟಾರ್ಗೆಟ್ ಎಂಬ ಹುಚ್ಚಾಟದಲ್ಲಿ ದಾಳವಾಗಿ ತಾನಿರುವ ಊರಿನಲ್ಲಿ ಖಾಯಿಲೆಯಿಲ್ಲ ಎಂದು ಖುಷಿ ಪಡಲೂ ಆಗದಂಥ ಈ ಸ್ಥಿತಿಗೆ ತಂದಿಡಬೇಡಪ್ಪಾ ದೇವರೇ ಎಂದು ಮೊರೆಯಿಟ್ಟವರ ಸಂಖ್ಯೆ ಕೋಟಿಗಟ್ಟಲೇ ಇದ್ದೀತು. ಇದೆಲ್ಲದರ ಮೇಲೆ ಕಲಶವಿಟ್ಟಂತೆ ʼಎಲ್ಲದರಲ್ಲೂʼ ಮಾಧ್ಯಮಗಳು ಮತ್ತು ʼಮೇಲಿನವರʼ ಭ್ರಷ್ಟ ನಡವಳಿಕೆ ಸೇರಿ ಹಗಲಿರುಳು ಸೇವೆಗೆಂದು ಮುಡಿಪಿಟ್ಟ ಜೀವಗಳನ್ನು ಅದ್ಯಾವ ಮಟ್ಟಿಗೆ ಹೈರಾಣು ಮಾಡಿರಬಹುದೆಂಬ ಅಸ್ಪಷ್ಟ ಚಿತ್ರಣವನ್ನಾದರೂ ಕಾದಂಬರಿ ಕೊಟ್ಟಿದೆ. ಅಸ್ಪಷ್ಟ ಚಿತ್ರಣ ಎಂದೇ ಯಾಕೆ ಹೇಳಿದೆನೆಂದರೆ ಕಣ್ಣಾರೆ ಕಾಣದೇ, ಅನುಭವಿಸದೇ ಇರುವವರಿಗೆ ಈ ರುದ್ರತಾಂಡವ ನಿಜಕ್ಕೂ ಅಸ್ಪಷ್ಟ ಮಾತ್ರ!
ಓದುತ್ತಿದ್ದಂತೆ ಸಾಗರಿಕಾ, ಗೌರಮ್ಮ, ಮುನಿವೆಂಕಟಪ್ಪ, ಡ್ರೈವರ್ ವಿಜಿ ಮುಂತಾದವರನ್ನು ನಮ್ಮದೇ ಆಸುಪಾಸಿನಲ್ಲಿ ಕಂಡಿದ್ದೇನಲ್ಲ ಎನಿಸಿದರೆ, ಪೀಪಲ್ಸ್ ಪಾರ್ಟಿಯ ಜಯರಾಜ್, ಪಕ್ಷೇತರ ಮಲ್ಲಿಕಾರ್ಜುನಯ್ಯರನ್ನು ವಿಧಾನ ಸೌಧದ ಆಸುಪಾಸಿನಲ್ಲಿ ನೋಡಿದ್ದೆ ಎನಿಸಿತು. ಹೊಸಮನಿ, ಡಿ.ಹೆಚ್.ಒ ತಿಪ್ಪೇರುದ್ರಸ್ವಾಮಿಯರು, ಆಶಾ ಕಾರ್ಯಕರ್ತೆಯರ ಎಲ್ಲಿಯೂ ಸಲ್ಲದ ತ್ರಿಶಂಕುಗಳಾಗಿಯೇ ಬಸವಳಿದ ನತದೃಷ್ಟರ ಪಟ್ಟಿಗೆ ಸೇರುವವರು!
ಇಷ್ಟೆಲ್ಲ ಒಳಸುಳಿಗಳಿರುವ ಕಾರಣಕ್ಕೇ ಲಕ್ಷ್ಮಣ್ ಅಂದಿದ್ದು “ಕೆಂಡದ ದಾರಿಯನ್ನು ತುಳಿದು ಬಂದಿದ್ದೆ. ಗಾಯ ವಾಸಿಯಾಗಿರಲಿಲ್ಲ, ರಸಿಕೆಯಾಡಿ ಹಿಂಸಿಸುತ್ತಲೇ ಇತ್ತು”. ಇಷ್ಟು ಬರೆದು ಮುಗಿಸಿದ ನಂತರ ನಿರಾಳವಾದರಾ ಕೇಳಿದರೆ ʼಖಂಡಿತವಾಗಿ ಇಲ್ಲʼ ಎನ್ನುತ್ತೇನೆ ಮತ್ತು ಭಾವುಕ ಗೆಳೆಯನ ಗಾಯಗಳು ಬೇಗನೇ ವಾಸಿಯಾಗಲಿ ಎಂದು ಹಾರೈಸುತ್ತೇನೆ. ಕೋವಿಡ್ ಕಾಲದ ಸೇವೆಯ ದಾರಿಯೇ ಅಂಥದ್ದು. ಕೆಲವರಿಗೆ ಅದು ಜೀವ ಪಣಕ್ಕಿಟ್ಟು ಗೆಲ್ಲಬೇಕಾಗಿದ್ದ ಯುದ್ಧದಂತೆ ಕಂಡರೆ ಇನ್ನೊಂದಷ್ಟು ಮಂದಿಗದು ಜೀವ, ಜೀವನ ಎರಡನ್ನೂ ಬಲಿ ತೆಗೆದುಕೊಂಡ ಯಮದೂತ ಎನ್ನುವುದೇ ಸತ್ಯ. ಈ ಹಿನ್ನೆಲೆಯಲ್ಲಿ ನೋಡಿದರೆ ಎರಡನೇ ಬಾರಿ ಅದೇ ದಾರಿಯನ್ನು ತುಳಿದ ಲಕ್ಷ್ಮಣ್ ಅವರ ಧೈರ್ಯ ಮೆಚ್ಚಬೇಕಾದ್ದು. ಕೋವಿಡ್ ಕಾಲದ ಸಂಕಷ್ಟ ಕಂಡವರಿಗಿದು ಎದೆಗಿಳಿದು ಕಾಡಬಹುದಾದ ಕಾದಂಬರಿಯಾದರೆ, ಅದರ ಕಷ್ಟಗಳನ್ನು ಕಾಣದವರಿಗೆ ಸಣ್ಣದೊಂದು ಚಿತ್ರಣವನ್ನಾದರೂ ಕೊಡಬಹುದು. ಜೀವ, ಜೀವನ ಪ್ರೀತಿಯ, ಮಾನವೀಯ ಸಂವೇದನೆಯ ಎಲ್ಲರೂ ಒಮ್ಮೆ ಭೇಟಿ ನೀಡಬಹುದಾದ ತಾಣ ಪಿಎಚ್.ಸಿ ಕವಲುಗುಡ್ಡ 24 7 ಈಗ ಹೆದರುವ ಅವಶ್ಯಕತೆಯಿಲ್ಲ, ಕೋವಿಡ್ ಇಲ್ಲ!
ಪುಸ್ತಕದುದ್ದಕ್ಕೂ ಹರಡಿಕೊಂಡಿರುವ ವೈರಸ್ : ಅಗಣಿತ ಕಾಗುಣಿತ ಮತ್ತು ಭಾಷಾ ಬಳಕೆಯ ದೋಷಗಳು. ಲೇಖಕರು ಮತ್ತು ಪ್ರಕಾಶಕರಿಬ್ಬರೂ ಓದುಗರ ಮೇಲೆ ಕೊಂಚ ಕರುಣೆ ಮತ್ತು ಹೆಚ್ಚು ಗೌರವ ಬೆಳೆಸಿಕೊಂಡರೆ ಪುಸ್ತಕ ಸಂಸ್ಕೃತಿ ಬೆಳೆಯಲು ಇನ್ನೂ ಹೆಚ್ಚು ಸಹಾಯವಾಗಬಹುದು.
- ಶಮಾ ನಂದಿಬೆಟ್ಟ
"ಆಸ್ಟ್ರೇಲಿಯಾದ ಮೊದಲ ಮ್ಯೂಸಿಯಂ ನಲ್ಲಿ ಮೂಲನಿವಾಸಿಗಳು ಹೆಣೆಯುತ್ತಿದ್ದ ಬೆತ್ತದ ಬುಟ್ಟಿಗಳು, ಚಿಪ್ಪುಗಳ ಸರ ಇತ್ಯ...
“ತಪ್ಪು ತಪ್ಪೇ, ಅಪರಾಧ ಅಪರಾಧವೆ ಮತ ಬ್ಯಾಂಕ್ ಗಳ ದುರಾಸೆಯಿಂದ ಸಮರ್ಥನೆಯಾಗಲಿ ದಂಡನೆಗಳಾಗಲಿ, ಸಾಮಾಜಿಕ ನೆಮ್ಮದಿ...
"ಕರ್ಣಾಟಕದ ರಾಜಕೀಯ ಪರ್ವದ ಹೃದಯವಾಗಿರುವ ಬೆಂಗಳೂರಿನ ವನಪರ್ವ ಸಭಾಪರ್ವಗಳು ಇಲ್ಲಿ ಸುಂದರವಾಗಿ ಮೂಡಿದೆ. ನಗರವು ಮಹ...
©2025 Book Brahma Private Limited.