Date: 27-06-2025
Location: ಬೆಂಗಳೂರು
"ನೀವೇನೇ ಹೇಳಿ ನನ್ನ ಬಾಲ್ಯದ ಹಳ್ಳಿಗಾಡಿನ ದೀವಳಿಗೆಯ ಖುಷಿಯೇ ಖರೇ ಖರೇ ಖುಷಿ. ಅದು ತುಂಬಾ ಸರಳ ಮತ್ತು ಎಳ್ಳಷ್ಟೂ ಖರ್ಚಿಲ್ಲದ ಖುಷಿ ಹುಟ್ಟಿಸುವ ಹಟ್ಟಿ, ಹಳ್ಳಿಗಳ ಹಬ್ಬವಾಗಿರುತ್ತಿತ್ತು. ಅವ್ವ ಹೆಂಡಿ ಹೆಸರಿನ ಸಗಣಿಯಿಂದ ಸಾರಿಸಿದ ನೆಲದಮೇಲೆ ಪಣತೆಯ ಬೆಳಕಿನ ಸನ್ನಿಧಾನದಲಿ ಹೆಂಡಿಯಲ್ಲೇ ಮಾಡಿದ ಗುಳಕಮ್ಮ ಮತ್ತು ಹೆಂಡಿ ಪಾಂಡವರ ಅನಾವರಣ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ . ಅವರು ತಮ್ಮ `ರೊಟ್ಟಿ ಬುತ್ತಿ' ಅಂಕಣದ ಸರಣಿಯಲ್ಲಿ "ಸಾವು ಬಿಡುಗಡೆ, ನನ್ನೂರ ದೀವಳಿಗೆ ಮತ್ತು ಜಟಿಂಗರಾಯನ ಕಟಂಬಲಿ ಇತ್ಯಾದಿ" ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ.
ಹಳೆಯ ಗೆಳೆಯನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಸಾವನ್ನು ಕುರಿತು ಹತ್ತಾರು ಮಂದಿ ಸೆಲೆಬ್ರಿಟಿಗಳು ಆಡಿದ ಸಟಪಟ ಮಾತುಗಳ ಆಡಿಯೋ ಪ್ರಚುರ ಪಡಿಸಿ ತನ್ನ 'ಸಾವು' ಪುಸ್ತಕ ಬಿಡುಗಡೆ ಮಾಡಿದ. ಅವನಿಗೆ "ಸಾವು ಬಂದರೇನು ಸಿಟ್ಟಿಲ್ಲ ಅದು ಮಹಾ ಮಹಾಂತರನೇ ಬಿಟ್ಟಿಲ್ಲ " ಎಂಬ ನಮ್ಮ ಮುತ್ಯಾ ಮಡಿವಾಳಪ್ಪನ ತತ್ವಪದವೇ ಗೊತ್ತಿರಲಿಲ್ಲವೆಂದು ಕಾಣಿಸ್ತದೆ. ಹೌದು ಅದು ಸಾವಿಲ್ಲದ ಸಾವುಗಳ ಹುಡುಕಾಟ ಎಂಬುದು ಆ ಸಾವುಸ್ನೇಹಿ ಸ್ನೇಹಿತನಿಗೆ ತಿಳಿದಿರಲಿಕ್ಕಿಲ್ಲ. ಅಷ್ಟಕ್ಕೂ ಅವನು ನನಗೆ ಕಳೆದ ಶತಮಾನದ ಚೆಂದದ ಅಭಿರುಚಿಯ ಬರಹಗಾರ ಗೆಳೆಯ. ಅವನಿಗೆ ತತ್ವಪದಗಳ ಹರಿಕಾರ ನಮ್ಮ ಮಡಿವಾಳಪ್ಪನ ಕುರಿತು ತಿಳಿಸಿ ಹೇಳಬೇಕಾದ ಪ್ರಸಂಗಗಳೇ ಬರಲಿಲ್ಲ. ಅದೇನೇ ಇರಲಿ ಅವನು ಬರೆದ ಸಾವು ಪುಸ್ತಕದ ಸವಿವರಗಳನ್ನು ನಾನು ಓದಲೇಬೇಕಿದೆ. ಸಾವಿನ ಕುರಿತಾದ ಭಿನ್ನ ಕೌತುಕದ ಸಮಗ್ರ ಸಂಗತಿಗಳಿರುವ ಯುನಿಕ್ ಬರಹ ಅದಾಗಿರಬಹುದು. ಸಾವಿನ ಗುಣಾಕಾರ, ಭಾಗಾಕಾರ ಹೀಗೆ ಎಲ್ಲ ಬಗೆಯ ಲೆಕ್ಕಾಚಾರದ ಗಣಿತಗಳು ಅವನ ಚಿತ್ರಕಶಕ್ತಿಯ ಸಾವಿನ ಬರಹದಲ್ಲಿ ಇರಲಿಕ್ಕೆ ಸಾಕು. ಇರದಿದ್ದರೂ ಸಾಕು.
ಅಚ್ಚರಿಯೆಂದರೆ ಅವನ 'ಸಾವು' ಬಿಡುಗಡೆಯಾದ ಮಳ್ಳೆ ಮರುದಿನವೇ ಮರುಮುದ್ರಣಕ್ಕೆ ಸಿದ್ಧಗೊಂಡ ಸುದ್ದಿ ಬಂದಿದೆ. ಅಂತಹ ಸುದ್ದಿಯನ್ನು ಸೋಜಿಗವೆಂದು ಯಾರೂ ಅಂದುಕೊಳ್ಳಬಾರದು. ಯಾಕೆಂದರೆ ಕೆಲವರ ಪುಸ್ತಕಗಳು ಬಿಡುಗಡೆಗೆ ಮುನ್ನವೇ ಎರಡನೇ, ಮೂರನೇ ಮುದ್ರಣದ 'ನೀಲಿಕೆಟ್ಟ' ಸುಮಾರು ಸುದ್ದಿಗಳು ಎಂಬಂತೆ ಕೇಳಿ ಬರುವುದು ನನಗಂತೂ ಹೊಸವೇನಲ್ಲ. ಅವನ ಸಾವು ಪುಸ್ತಕ ಅಂತಹ ಸಾಲಿಗೆ ಸೇರುವುದಲ್ಲ ಎಂಬ ನಂಬುಗೆ ನನ್ನದು. ಅವನ ದೈತ್ಯ ಬರಹಗಳ ಪೊಗದಸ್ತಾದ ಪರಿಚಯದಿಂದಾಗಿ ಈ ಮಾತು ಹೇಳಿದೆ. ಪ್ರಾಯಶಃ ಈ ಲೇಖನ ಬರೆದು ಮುಗಿಸುವಷ್ಟರಲ್ಲಿ ಅವನ ಪರಮಾಪ್ತ ಸಾವು ಪುಸ್ತಕದ ಮರುಮುದ್ರಣ ಮತ್ತು ಅದರ ಎರಡನೇ ಆವೃತ್ತಿಯ ಬಿಡುಗಡೆಯೂ ಆಗಿರಬಹುದು.
ಅದಕ್ಕೆ ಮೊದಲು ದೀವಳಿಗೆಯ ಈ ಗಳಿಗೆಗಳ ಕುರಿತು ಬರೆಯುವ ಅಗತ್ಯದಲಿ ಬಂಧಿಯಾಗಿದ್ದೇನೆ. ದೀಪಾವಳಿಯನ್ನು ದಯವಿಟ್ಟು "ಹ್ಯಾಪಿ ದಿವಾಳಿ" ಎಂಬ ಶುಭಾಶಯ ನುಡಿಗಳಿಂದ ಕರೆಯಬೇಡಿ ಎಂದು ವಾಟ್ಸ್ಯಾಪ್ ಸಂದೇಶವೊಂದು ಕಳೆದೆರಡು ದಿನಗಳಿಂದ ಎಡಬಿಡದೇ ಅಲ್ಲಿ ಇಲ್ಲಿ ಓಡಾಡಿತು. ಅದು ನನ್ನ ಬಲ್ಲೇಕು ಬಂತು. ಕನ್ನಡದ ಪದ ದಿವಾಳಿಗು ಇಂಗ್ಲಿಷಿನ ದಿವಾಲಿಗೂ ಫರಕುಗಳಿವೆ. ಈ ಫರಕುಗಳ ಅರಿವಿಲ್ಲದವರು ಮತ್ತು ಇದ್ದವರು ಸಾರಾಸಗಟಾಗಿ ಹ್ಯಾಪಿ ದಿವಾಲಿ ಎಂದು ಮೆಸೆಜ್ ಕಳಿಸುವುದನ್ನೇ ಕಂಡಾಪಟಿ ರೂಢಿ ಮಾಡಿಕೊಂಡವರುಂಟು. ಅಂಥವರಿಂದ ಇದೆಲ್ಲ ಈ ರೀತಿಯಲ್ಲಿ ದಿವಾಳಿ ಆಗುತ್ತಿರಬಹುದು.
ನೀವೇನೇ ಹೇಳಿ ನನ್ನ ಬಾಲ್ಯದ ಹಳ್ಳಿಗಾಡಿನ ದೀವಳಿಗೆಯ ಖುಷಿಯೇ ಖರೇ ಖರೇ ಖುಷಿ. ಅದು ತುಂಬಾ ಸರಳ ಮತ್ತು ಎಳ್ಳಷ್ಟೂ ಖರ್ಚಿಲ್ಲದ ಖುಷಿ ಹುಟ್ಟಿಸುವ ಹಟ್ಟಿ, ಹಳ್ಳಿಗಳ ಹಬ್ಬವಾಗಿರುತ್ತಿತ್ತು. ಅವ್ವ ಹೆಂಡಿ ಹೆಸರಿನ ಸಗಣಿಯಿಂದ ಸಾರಿಸಿದ ನೆಲದಮೇಲೆ ಪಣತೆಯ ಬೆಳಕಿನ ಸನ್ನಿಧಾನದಲಿ ಹೆಂಡಿಯಲ್ಲೇ ಮಾಡಿದ ಗುಳಕಮ್ಮ ಮತ್ತು ಹೆಂಡಿ ಪಾಂಡವರ ಅನಾವರಣ. ಅವಕ್ಕೆಲ್ಲ ಹಳದಿ ಬಣ್ಣದ ಹೊನ್ನಂಬರಿ ಹೂವಿನ ಅಲಂಕಾರ. ಅಂಗಳವೇ ಇಲ್ಲದ ನಮ್ಮಪುಟ್ಟ ಮನೆಯ ಮುಂದಿನ ಪುಟ್ಟ ಕೊಟ್ಟಿಗೆಯಲ್ಲಿ ವಾರ ಪೂರ್ತಿ ದನಕರುಗಳಿಗೆ ರಾತ್ರಿಹೊತ್ತು ಹಾಡು ಆರತಿಗಳದ್ದೇ ಸದ್ದು ಸಮಾರಾಧನೆ. ಊರುತುಂಬಾ ಮಳ್ಳಿ ಸಾಯಿಬಣ್ಣ ಅವನ ಜತೆಯ ಹತ್ತಾರು ಹುಡುಗರ ತಂಡದಿಂದ ಊರೆಲ್ಲ ದನಕರುಗಳಿಗೆ ಆರತಿ. ನಿಸರ್ಗ ದೈವಾರಾಧನೆ. ಜನಪದ ಜಾಡಿನ ಹಾಡುಹಬ್ಬ.
ಗಣಜಲದ ಹಸಿರು ಕಡ್ಡಿಗಳು ಮತ್ತು ಪುಂಡಿಕಡ್ಡಿಗಳು ಇಲ್ಲವೇ ಆಪಿನ ಸಿವುಡುಗಳ ನಡುವೆ ಹಚ್ಚಿಟ್ಟ ಹಣತೆ. ಅದು ಸಾಮಾನ್ಯವಾಗಿ ಔಡಲೆಣ್ಣೆಭರಿತ ಮಣ್ಣಿನ ಹಣತೆಯೇ ಆಗಿರುತ್ತಿತ್ತು. ಅದು ಸರ್ಪದ ಹೆಡೆಗಳ ಆಕಾರದಲಿ ಮಾಡಿರುವ ಆರತಿ ಬುಟ್ಟಿ. ಮೊದಲ ದಿನ ಒಂದು ಹೆಡೆಯ ಸರ್ಪದ ಆಕಾರ ಮರುದಿನ ಎರಡು ಹೆಡೆ. ಹೀಗೆ ದಿನೇ ದಿನೇ ಒಂದೊಂದು ಹೆಡೆಯ ಹೆಚ್ಚಳ. ಏಳನೇ ದಿನಕ್ಕೆ ಏಳು ಹೆಡೆಯ ಸರ್ಪದಾಕಾರದ ಬುಟ್ಟಿ ಆರತಿ. ನಮ್ಮೆಲ್ಲರ ಬದುಕಿಗೆ ಜೀವ ಭರಿಸುವಂತಹ ಅನ್ನದಾತ ಎತ್ತು, ಆಕಳು ಒಟ್ಟಾರೆ ಎಲ್ಲ ಜಾನುವಾರುಗಳಿಗೆ ರೋಗ ರುಜಿನುಗಳು ಬಾರದಿರಲೆಂದು ರಾತ್ರಿಹೊತ್ತು ಅವುಗಳಿಗೆ ಆರತಿ. ಮನೆ ಮನೆಯಲ್ಲೂ ಆ ಮೂಲಕ ದೈವಾರಾಧನೆ. ತಮ್ಮ ಕುಟುಂಬದ ಹೊಟ್ಟೆಯ ಹಸಿವು ನೀಗಿಸುವ ದೈವಸ್ವರೂಪಿ ಮೂಕಪ್ರಾಣಿಗಳಿಗೆ ಹಣತೆ ಬೆಳಕಿನ ಹಾಡಿನ ಆರತಿ. ಹೀಗೆ ಊರಿನ ಎಲ್ಲರ ಮನೆಗಳಲ್ಲಿರುವ ಪಶುಗಳ ಆರೋಗ್ಯ ರಕ್ಷಣೆಗೆ ಪ್ರಾರ್ಥಿಸುವ ವಾರಪೂರ್ತಿ ಶೆಡ್ಡಿನಾರತಿ ಆಚರಣೆ. ಹಾಗೆ ಆರತಿ ಮಾಡುವಾಗ ಅದೇನೋ ಉಪಾಸಕ ರಾಗದಲ್ಲಿ ಹಾಡುತ್ತಿದ್ದರು.
ಆಣಿಗೋ ಪೀಣಿಗೋ
ನಮ್ಮ ಆಕಳ ಪೀಡಾ
ಹೊಳಿ ಆಚೇಕೋ
ಎಂದು ಸಾಮೂಹಿಕವಾಗಿ ದೇಸೀಯ ದನಿಯಲ್ಲಿ ಜಡ್ಡು ಜಾಪತ್ರಿಯ ದುರಿತ ನಿವಾರಕ ಹಾಡುಗಳನ್ನು ಪಶುಗಳ ಮುಖಕ್ಕೆ ಆರತಿ ಬೆಳಗುತ್ತಲೇ ಸೊಗಸಾಗಿ ಹಾಡುತ್ತಿದ್ದರು. ಕತ್ತಲೆ ನಿವಾರಕ ಬೆಳಕಿನ ಹಣತೆ ಹಾಡುಗಳು ಆಕಳು ಎತ್ತುಗಳೆದುರು ಚೆಂದವಾಗಿ ಹಾಡುತ್ತಿದ್ದುದು, ಅವುಗಳು ಕೂಡ ಹಾಡನ್ನು ಕೇಳುತ್ತಿದ್ದುದು ನನಗಿನ್ನೂ ಚೆನ್ನಾಗಿ ನೆನಪಿದೆ. ಅವರಿಗೆ ಆಯಾ ಮನೆಯ ಎತ್ತು ಆಕಳುಗಳ ಹೆಸರುಗಳು ಗೊತ್ತಿದ್ದರೆ ಅವುಗಳ ಹೆಸರು ಹಿಡಿದು ಕರೆದು ಆರತಿ ಪ್ರಕ್ರಿಯೆಗಳು ಜರುಗುತ್ತಿದ್ದವು. ಅದು ಒಂದು ದಿನದ ಆರತಿ ಆಗಿರುತ್ತಿರಲಿಲ್ಲ. ವಾರದವರೆಗೆ ಜರುಗುವ ದೀಪಾವಳಿ ದೀಪದ ಹಾಡುಗಳ ಸಂಭ್ರಮ ಆಗಿರುತ್ತಿತ್ತು.
ಅದಕ್ಕೆ ಮೊದಲು ಕೆಲವು ಊರುಗಳ ಕೆಲವರ ಮನೆಗಳಲ್ಲಿ ಹಿರಿಯರ ಹಬ್ಬ ಮತ್ತು ಘಟ್ಟ ಹಾಕುವ ಪದ್ಧತಿ ಇರುತ್ತಿತ್ತು. ಮಹಾನವಮಿಗೆ ಹಿರಿಯರ ಹಬ್ಬ ಮಾಡಿದರೆ ಮತ್ತೆ ಕೆಲವರು ದೀಪಾವಳಿಯಲ್ಲಿ ಹಿರಿಯರ ಹಬ್ಬ ಆಚರಿಸುತ್ತಾರೆ. ಮನೆಯಲ್ಲಿ ಜೋಳ, ಸಜ್ಜೆ, ಗೋಧಿ, ನವಣೆ ಇತರೆ ನವಧಾನ್ಯಗಳ ಮೊಳಕೆಗೊಳ್ಳುವ ಘಟ್ಟ. ಆ ಘಟ್ಟಕ್ಕೂ ಆರತಿ ಪೂಜೆ ಸಲ್ಲುತ್ತಿದ್ದವು. ಆರತಿ ಹರಕೆಯ ಕೊನೆಯ ದಿನಗಳಂದು ಅವರವರ ಮನೆಗಳಲ್ಲಿ ಹೋಳಿಗೆ, ಹೂರಣಗಡಬುಗಳ ನೈವೇದ್ಯ. ಅದನ್ನು ದನಕರುಗಳಿಗೂ ನೈವೇದ್ಯ ಮಾಡಿ ಸಲ್ಲಿಸಲಾಗುತ್ತಿತ್ತು. ಮುಖ್ಯವಾಗಿ ಗುಳಕಮ್ಮನಿಗೆ ನೈವೇದ್ಯ ಪೂಜೆ. ನಮ್ಮೂರ ಮನೋಹರ ರಾವ ಕುಲಕರ್ಣಿ ಮಾವನವರು ನರಕ ಚತುರ್ದಶಿಯ ಕುರಿತಾದ ಪೌರಾಣಿಕ ಸಂಗತಿಗಳ ಉಲ್ಲೇಖದ ಬಲಿಚಕ್ರವರ್ತಿಯ ಬಲಿ ಪಾಡ್ಯಮಿ ಕತೆಗಳನ್ನು ಮುಖದ ತುಂಬೆಲ್ಲಾ ದಿವ್ಯ ಮಂದಹಾಸ ತುಂಬಿಕೊಂಡು ಹೇಳುತ್ತಿದ್ದರು.
ಈಗ ಯಾವ ಕಥನಗಳು ಕೇಳಿ ಬರುತ್ತಿಲ್ಲ. ಯಾವ ಆಚರಣೆಗಳು ರೂಢಿಯಲ್ಲಿ ಜರುಗುತ್ತಿಲ್ಲ. ಅದೇನಿದ್ದರೂ ಲಕ್ಷ್ಮಿ ಪಟಾಕಿಗಳ ಹಬ್ಬ. ಶ್ರೀಮಂತರ ಲಕ್ಷ್ಮೀ ಪೂಜೆಯ ಝಗಮಗಿಸುವ ನೋಟುಗಳ ಪ್ರದರ್ಶನ ಮತ್ತು ಪೂಜೆಯ ಹಬ್ಬವಾಗಿದೆ. ಪೂಜೆಯ ರಾತ್ರಿಯಂದು ಸುರಸುರ ಬತ್ತಿಗಳ ಸಿಡಿತ. ಪಟಾಕಿಗಳ ಭರ್ಜರಿ ಹಾರಾಟ. ಬಡವರ ಪಾಲಿಗೆ ಅವು ಸಟಪಟ ಚೋಟೆಗಳು ಮತ್ತು ಸುರ್ಸುರ ಬತ್ತಿಗಳಿಗೆ ಸೀಮಿತವಾದ ಹಬ್ಬವಾಗಿದೆ. ಇದು ಎಲ್ಲ ಊರುಗಳ ಕತೆಯೂ ಹೌದು. ಮುಂದುವರೆದು ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಹ್ಯಾಪಿ ದಿವಾಳಿ ಹಬ್ಬಗಳಾಗಿ ಜನಪದೀಯ ಜೀವಸಂವೇದನೆಗಳಿಂದ ದೀವಳಿಗೆ ಗಾವುದ ಗಾವುದ ದೂರ ಉಳಿದಿದೆ.
ದೀವಳಿಗೆ ಅಮಾವಾಸ್ಯೆಯ ಸಂಜೆ ಗೋಧೂಳಿಯ ಸಮಯಕ್ಕೆ ಸರಿಯಾಗಿ ಪಕ್ಕದ ಊರು ಶಖಾಪುರದಿಂದ ಜಟಿಂಗರಾಯ ದೈವದ ಆಗಮನ. ಜಟಿಂಗರಾಯ ಕುರಿಗಾಹಿಗಳ ಅಲೆಮಾರಿ ದೈವ. ದಾಂಗುಡಿ ಇಡುವ ಡೊಳ್ಳುಗಳ ಬಡಿತ. ಡೊಳ್ಳುಗಳ ನಾದದೊಂದಿಗೆ ದೈವದವರ ಆಗಮನ. ದೇವರು ಜಟಿಂಗರಾಯನ ಅವತಾರವು ನಾನು ಚಿಕ್ಕವನಿದ್ದಾಗ ಬನ್ನೆಪ್ಪ ಪೂಜಾರಿಯ ಮೈಯಲ್ಲಿ ಅವತರಿಸಿ ಬರುತ್ತಿದ್ದ ನೆನಪು. ಅವರು ದೈವಾಧೀನರಾದ ಮೇಲೆ ಅವರ ಮಗ ಹಣಮಂತ್ರಾಯನ ಮೈಯಲ್ಲಿ ಜಟಿಂಗರಾಯ ದೇವರ ಸವಾರಿ ಬರುತ್ತದೆಂದು ಕೇಳಿದ್ದೇನೆ. ನನಗೆ ಇತ್ತೀಚಿನ ದೈವ ಸವಾರಿಯ ಪರಿಚಯ ಅಷ್ಟಾಗಿ ಇಲ್ಲ.
ಕೇವಲ ಒಂದೂವರೆ ಮೈಲುಗಳ ಅಂತರದಲ್ಲಿರುವ ಶಖಾಪುರದಿಂದ ಜಟಿಂಗರಾಯನ ಪಾಲಕಿ ಸಮೇತ ದೇವರ ಸವಾರಿ ಸಂಜೆ ಹೊತ್ತು ಆಗಮಿಸುವುದು. ಊರ ಹೊರಗೆ ಮವಾರಿಸಿದ್ಧನ ಗುಡಿಯ ಬಳಿಗೆ ಜಟಿಂಗರಾಯನ ಸ್ವಾಗತ ಕೋರಲು ಬಾಜಾ ಭಜಂತ್ರಿಗಳ ಸಮೇತ ನಮ್ಮೂರ ಹಿರೀಕರು ಹೋಗಿ ದೇವರನ್ನು ಸ್ವಾಗತಿಸಿ ಊರ ಮುಂದಿನ ಹಿರೇಹಳ್ಳಕ್ಕೆ ಕರೆದೊಯ್ಯುವರು. ಅಲ್ಲಿ ಮೂರು ಹಳ್ಳ ಸೇರುವ ಸಂಗಮದ ಗಂಗಮ್ಮನ ಜಾಗದಲ್ಲಿ ಜಟಿಂಗರಾಯನ ಗಂಗಾಪೂಜೆ. ಅದಾದ ಮೇಲೆ ಕಟಂಬಲಿಯ ಮಹಾಪ್ರಸಾದ. ತದನಂತರವೇ ಜಟಿಂಗರಾಯನ ಕಾರಣಿಕದ ಹೇಳಿಕೆ.
ಮುಂದಿನ ವರುಷದ ಮಳೆ, ಬೆಳೆ, ಲೋಕ ಸಮಾಜದ ಆರೋಗ್ಯ, ದನ ಕರುಗಳ ಆರೋಗ್ಯ ಇತ್ಯಾದಿ ಸಮಷ್ಟಿ ಕಾಳಜಿಗಳ ಕುರಿತಾದ ಕಾರಣಿಕ ಅದಾಗಿರುತ್ತದೆ. ಬನ್ನೆಪ್ಪ ಪೂಜಾರಿ ತರುವಾಯ ಈಗೀಗ ಹಣಮಂತ್ರಾಯನ ಮೈಯಲ್ಲಿ ಜಟಿಂಗರಾಯನ ಅವತಾರ ಬರುತ್ತದೆಂದು ಕೇಳಿದ್ದೇನೆ. ಕಾರಣಿಕ ಮುಗಿದ ಮೇಲೆ ಡೊಳ್ಳು, ಬಾಜಾ ಬಜಂತ್ರಿಗಳ ಸಮೇತ ಮರಳಿ ಊರೊಳಕ್ಕೆ ಜಟಿಂಗರಾಯನ ಆಗಮನ. ಊರ ಅಗಸಿ ಬಾಗಿಲ ಬಳಿ ಇರುವ ಸಿರೆಪ್ಪ ಮುತ್ಯಾನ ಕಟ್ಟಿಗೆ ಬಂದು ಕ್ಷಣಕಾಲ ದೇವರು ವಿರಮಿಸುವನು. ಅಲ್ಲಿ ಪೂಜೆ ಮುಗಿಸಿಕೊಂಡು ಊರ ಹೊರಗಿನ ರೇವಡಿ ಗಿಡದ ಸನಿಹವಿರುವ ನಿಂಗರಾಯನ ಗದ್ದುಗೆ ಕಟ್ಟೆ ಹತ್ತಿರ ಮತ್ತೆ ತುಸು ಹೊತ್ತು ವಿರಮಿಸಿ ಅಲ್ಲಿ ಪೂಜೆ ಮುಗಿಸಿಕೊಂಡು ನಮ್ಮೂರ ಸೀಮೆ ದಾಟಿಸಿ ಜಟಿಂಗರಾಯ ದೇವರನ್ನು ಊರವರು ಕಳಿಸಿ ಬರುವರು. ಇದಿಷ್ಟು ನಾನು ಬಾಲ್ಯ ಕಾಲದಲ್ಲಿ ಕಂಡುಂಡ ದೀವಳಿಗೆಯ ಸಂಕ್ಷಿಪ್ತ ಕಥನ.
ಮಲ್ಲಿಕಾರ್ಜುನ ಕಡಕೋಳ
9341010712

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
©2025 Book Brahma Private Limited.