ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ

Date: 03-01-2024

Location: ಬೆಂಗಳೂರು


"ನಾವೆಲ್ಲ ಮಾತಿನ ಮೂಲಕ ಬದುಕುತ್ತೇವೆ. ನಮ್ಮ ನಿತ್ಯದ ಬದುಕಿಗೆ ಮಾತೇ ಮೂಲ. ಎಲ್ಲಾ ಸಂಬಂಧಗಳು ಮುನ್ನೆಡೆಯುವದು ಮಾತಿನ ಮೂಲಕ. ಅಂತ ಮಾತುಗಳನ್ನು ಹೇಗೆ ಬಳಸಬೇಕು ಎಂಬ ಮರ್ಮ ಮಾನವನಿಗೆ ತಿಳಿದಿಲ್ಲ. ಮಾತುಗಳನ್ನು ಇನ್ನೊಬ್ಬರನ್ನು ಹೀಯಾಳಿಸಲು, ನೋಯಿಸಲು, ಅಪಮಾನಿಸಲು ಬಳಸಬಾರದು," ಎನ್ನುತ್ತಾರೆ ರಾಜಶೇಖರ ಹಳೆಮನೆ. ಅವರು ತಮ್ಮ ಓದಿನ ಹಂಗು ಅಂಕಣದಲ್ಲಿ ‘ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ’ ಕೃತಿ ಕುರಿತು ಬರೆದ ಲೇಖನವಿದು.

ಹೊಸಗನ್ನಡ ಕಾವ್ಯ ಆರಂಭಗೊಂಡಿದ್ದು ತತ್ವಪದಕಾರರಿಂದ. ಇವರು ಕನ್ನಡದಲ್ಲಿ ಮೊದಲ ಬಾರಿಗೆ ಜನರ ಮಧ್ಯದಿಂದ ಬಂದವರು. ಜನರ ಭಾಷೆಯನ್ನು ಬಳಸಿದವರು. ಸಾಮೂಹಿಕ ಹಿತ ಚಿಂತನೆಯನ್ನು ಮಾಡಿದವರು. ಜನರ ಬವಣೆಗಳನ್ನು ಹಾಡನ್ನಾಗಿಸಿದವರು. ಜನರ ನೋವು ನಲಿವುಗಳಿಗೆ ಸ್ಪಂದಿಸಿದವರು. ತಾವು ಶುಧ್ಧವಾಗಿ ಸಮಾಜವನ್ನು ಶುದ್ಧಗೊಳಸಲು ಪ್ರಯತ್ನಿಸಿದವರು. ಆದ್ದರಿಂದ ಇವರೇ ಹೊಸಗನ್ನಡ ಕಾವ್ಯವನ್ನು ಆರಂಭಿಸಿದವರು ಎನ್ನಬಹುದು. ತತ್ವಪದಕಾರರಲ್ಲಿ ಗುರುಪೀರಾ ಖಾದರಿ ಒಬ್ಬ ಶ್ರೇಷ್ಟ ತತ್ವಪದಕಾರರಾಗಿದ್ದಾರೆ.

ಗುರುಪೀರಾ ಖಾದರಿ ಅವರು ಸಮಾಜದ ಹಾಗು ಹೋಗುಗಳಿಗೆ ಸ್ಪಂದಿಸಿದವರು. ಸಮಾಜವನ್ನು ಹಸನು ಮಾಡಲು ಚಿಂತಿಸಿದವರು. ಅನೇಕ ಜನಾಂಗ ಜಾತಿ ಧರ್ಮಗಳಿಂದ ಕೂಡಿದ ಸಮಾಜವನ್ನು ಮತಾಂಧ ನೆಲೆಯಲ್ಲಿ ನೋಡದೆ ಸಾಮರಸ್ಯದ ನೆಲೆಯಲ್ಲಿ ನೋಡಬೇಕೆಂದವರು. ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದರು ಉತ್ತಮವಾದ ಕನ್ನಡದಲ್ಲಿ ತತ್ತ್ವಪದಗಳನ್ನು ರಚಿಸಿದರು.

ಹೇ ತೊಗಲಿನ ಕಾಯ ಭೇದವ್ಯಾಕೋ ಮಹಾರಾಯ
ಮೈಯೆಲ್ಲ ನಿನಗೆ ಗಾಯ ನಿನ್ನಂತೆ ಅವರ ಕಾಯ
ತೆಗೆದು ಹಾಕು ಜಾತಿನ್ಯಾಯಾ ನಿನ್ನದಲ್ಲೋ ಇದು ಪರಕಾಯಾ
ಹರನು ತಗಲು ಹರಿಯು ತೊಗಲು ಹೇಳುತಿರುವ ಬಾಯಿಯ
ತೊಗಲು ಹಗಲು ಇರಳು ನಿನ್ನ ಜೊತೆಗೆ ಮಿತ್ರ ಮಡದಿ ಎಲ್ಲಾ
ತೊಗಲು
ಗಂಡು ತೊಗಲು ಹೆಣ್ಣು ತೊಗಲು ಎರಡಿಲ್ಲ ಬ್ಯಾರೆ
ಒಂದೆ ತೊಗಲ ಭೇದ ಮಾಡುವ ಭವಿಗಳು ತೊಗಲು
ಭೇದ ಅಳಿಯುವ ಜ್ಞಾನಿಯು ತೊಗಲು.
ಬ್ರಹ್ಮ ತೊಗಲು ವಿಷ್ಣು ತೊಗಲು ಮುಕ್ತಿಯೆಂಬ
ಶಕ್ತಿಯೆ ತೊಗಲು ಪಾರ್ವತಿ ಪರಿ ಹರಹರ ತೊಗಲು
ಶ್ರೀ ಗಣಪತಿಯ ರೂಪವೇ ತೊಗಲು.
ಸತಿಪತಿಯೆಂಬ ರೂಪವೇ ತೊಗಲು ಹುಟ್ಟುತ್ತಿರುವ ಸಂತತಿ ತೊಗಲು
ನೋಡುತಿರುವೆ ದಿವಸಾ ತೊಗಲು ಭೇದ ಮಾಡಬ್ಯಾಡ ತೊಗಲಿನ
ತೊಗಲು

ಎಂದು ದೇಹದ ಮೋಹವನ್ನು ಬಿಡಬೇಕೆಂದು ಹೇಳಿದ್ದಾರೆ. ಈ ದೇಹವು ಅನೇಕ ದುಃಖಗಳಿಂದ ಕೂಡಿದೆ. ಅದಕ್ಕೆ ಬೇಕಾದಷ್ಟು ಗಾಯಗಳು ಆಗಿವೆ. ಆದರೂ ಜಾತಿ ಹೆಸರಿನಲ್ಲಿ ನಮ್ಮದು ಅವರದು ಎಂದು ಭೇದ ಭಾವ ಮಾಡಲಾಗುತ್ತದೆ. ಹಾಗೆ ಮಾಡುವದು ಸರಿಯಾದ ದಾರಿಯಲ್ಲ. ಅದು ಸಮಾಜವನ್ನು ಒಡೆಯುತ್ತದೆ. ಸಮಾಜವನ್ನು ಬೆಸೆಯುವದು ಬದುಕಿಗೆ ಮುಖ್ಯ. ಅದನ್ನು ಬಿಟ್ಟು ಜಾತಿ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸುವದು ತಪ್ಪು ಎನ್ನುತ್ತಾರೆ. ಎಲ್ಲಾರ ದೇಹವು ತೊಗಲಿನಿಂದ ಕೂಡಿದೆ. ಆದರೂ ಅದರಲ್ಲಿ ಭೇದ ಮಾಡುತ್ತೇವೆ. ಹರ ಹರಿ ಬೇರೆಯಲ್ಲ. ಇಬ್ಬರೂ ಒಂದೇ. ಆದರೆ ಮನುಷ್ಯ ಮಾತ್ರ ಬೇರೆಬೇರೆ ಎಂದು ಕಚ್ಚಾಡುತ್ತಾನೆ. ತೊಗಲಿನ ಮಹಿಮೆಯನ್ನು ಅರಿಯದೆ ಬಾಳುತ್ತಾನೆ. ಜೊತೆಗಿರುವ ಹೆಂಡತಿ, ಮಕ್ಕಳು ಎಂಬ ಮೋಹದಲ್ಲಿ ಬಿದ್ದು ಬದುಕಿನ ಸುಖವನ್ನು ಕಳೆದುಕೊಳ್ಳುತ್ತಾನೆ. ನಾನು ನನ್ನದು ಎಂದು ಸ್ವಾರ್ಥದಿಂದ ಭವದಲ್ಲಿ ಬಾಳುತ್ತಾನೆ. ಪರಸ್ಪರರ ನಡುವೆ ಭೇದ ಭಾವ ಮಾಡುತ್ತಾನೆ. ಎಲ್ಲಾ ಮನುಜರ ಮೇಲಿರುವ ಚರ್ಮ, ರಕ್ತ ಒಂದೇ ಆಗಿರುವಾಗ ಧರ್ಮ, ಜಾತಿಯ ಹೆಸರಿನಲ್ಲಿ ಬೆರೆ ಬೇರೆ ಎಂದು ಬದುಕುವುದು ತರವಲ್ಲ ಎಂದು ದೇಹ ತತ್ವವನ್ನು ಹೇಳುತ್ತಿದ್ದಾನೆ. ಈ ದೇಹವು ತೊಗಲಿನಿಂದ ಕೂಡಿದೆ. ಎಲ್ಲಾರ ತೊಗಲು ಒಂದೇ ರೀತಿಯಿಂದ ಇರುವುದು. ದೇವರು ಕೂಡ ಇದಕ್ಕೆ ಹೊರತಲ್ಲ. ಆದರೆ ಮಾನವ ಈ ಮರ್ಮವನ್ನು ತಿಳಿಯದೆ ಪರಸ್ಪರ ಭೇದ ಮಾಡಿಕೊಂಡು ಕಚ್ಚಾಡುತ್ತಾನೆ. ಇದು ಬದುಕಿನ ತತ್ವವಾಗಬಾರದು. ಸಕಲ ಜೀವಿಗಳು ಒಂದೆ ಎಂದು ಬದುಕುವುದು ಬದುಕಿನ ತತ್ವವಾಗಬೇಕು.

ನಾವೆಲ್ಲ ಮಾತಿನ ಮೂಲಕ ಬದುಕುತ್ತೇವೆ. ನಮ್ಮ ನಿತ್ಯದ ಬದುಕಿಗೆ ಮಾತೇ ಮೂಲ. ಎಲ್ಲಾ ಸಂಬಂಧಗಳು ಮುನ್ನೆಡೆಯುವದು ಮಾತಿನ ಮೂಲಕ. ಅಂತ ಮಾತುಗಳನ್ನು ಹೇಗೆ ಬಳಸಬೇಕು ಎಂಬ ಮರ್ಮ ಮಾನವನಿಗೆ ತಿಳಿದಿಲ್ಲ. ಮಾತುಗಳನ್ನು ಇನ್ನೊಬ್ಬರನ್ನು ಹೀಯಾಳಿಸಲು, ನೋಯಿಸಲು, ಅಪಮಾನಿಸಲು ಬಳಸಬಾರದು. ಇನ್ನೊಬ್ಬರ ಏಳಿಗೆಗೆ ಬಳಸಬೇಕು. ಆದರೆ ಇಂದಿನ ಸಮಾಜದಲ್ಲಿ ಮಾತು ತನ್ನತನವನ್ನು ಕಳೆದುಕೊಂಡು ಕೇಳುವವರಿಗೆ ಹೇಸಿಗೆ ಬರುವಂತೆ ಆಗಿದೆ. ಪ್ರಮಾಣಿಕ, ನೈತಿಕ, ಬದ್ದತೆಯ ಸಿದ್ದಿಯನ್ನು ಪಡೆಯಬೇಕಾದ ಮಾತು ಮಲಿನಗೊಂಡು ಇಡೀ ಸಮಾಜವನ್ನು ಕಲುಸಿತಗೊಳಿಸುತ್ತಿದೆ. ಆದ್ದರಿಂದ ಕವಿ ಮಾತಿನ ಸತ್ಯ ಅರಿಯಿರಿ ಎಂದು ಹೇಳುತ್ತಾನೆ.

ಮಾತು ಮಾಣಿಕ್ಯದ ಹರಳು
ಮಾತು ಮಮತೆಯ ಕರುಳು ಮಾತು ತುಂಬಿದ
ಮಡಿಲ ಮಾತು ಮಿಂಚಿನ ಸಿಡಿಲು

ಮಾತು ಮಾಣಿಕ್ಯದಂತೆ ಇರಬೇಕು. ಮಾತಿಗೆ ಮಾಣಿಕ್ಯದ ಬೆಲೆ ಇದೆ. ಆದರೆ ಮನುಷ್ಯ ಆ ಬೆಲೆಯನ್ನು ಕಳೆದುಕೊಳ್ಳುತ್ತಾನೆ. ಬಾಯಿಗೆ ಬಂದದ್ದು ಮಾತಾಡಿ ಬಾಯಿಯನ್ನು ಹೊಲಸು ಮಾಡಿಕೊಳ್ಳುತ್ತಾನೆ. ಇದನ್ನು ಮೀರಿ ಮಾತಿನ ಮಹಿಮೆಯನ್ನು ಅರಿತಾಗ ಮಾತು ಮಮತೆಯ ಮಡಿಲಾಗುತ್ತದೆ.

ಮಾತು ಮುತ್ತಿನ ಮಾಲೆ ಮಾತು ಕ್ರೋಧದ ಜ್ವಾಲೆ
ಮಾತು ಕಂಠಕದ ಕಹಳೆ ಮಾತಿನಿಂದ ಶಾಂತಿ ಸುರಿಮಳೆ
ಮಾತಿನಿಂದಲೆ ಹಗಲು ಮಾತಿನಿಂದಲೆ ಇರಳು
ಮಾತಿನಿಂದಲೆ ಬಿಸಿಲು ಮಾತು ತಣ್ಣನೆಯ ನೆರಳು

ಎಂದು ಮಾತಿನ ಮಹತ್ವವನ್ನು ಕವಿ ಹೇಳುತ್ತನೆ. ಮಾತನಿಂದಲೆ ನಡೆಯುತ್ತದೆ. ಮಾತು ಹಗಲು, ರಾತ್ರಿ, ಬಿಸಿಲು, ಮಳೆ ಇದ್ದ ಹಾಗೆ. ಅದು ಶಾಂತಿಯನ್ನು ತರುತ್ತದೆ. ಅಶಾಂತಿಯನ್ನು ತರುತ್ತದೆ. ಮಾತನ್ನು ನಾವು ಶಾಂತಿ ನೆಲೆಸಲು ಬಳಸಬೇಕು. ಅದೇ ಬದುಕಿನ ತತ್ವವು ಆಗಬೇಕು.

ಮಾತು ವಿಶ್ವಾಸಭರಿತ ಮಾತಿನಿಂದಲೇ ವಿಪರೀತ ಮಾತು ಸರ್ವರಿಗೆ
ಸಮ್ಮತ ಮಾತು ಉದಯ ಸುಪ್ರಭಾತ
ಮಾತು ಸರ್ವರಿಗೆ ಸ್ವಾಗತ ಮಾತೆ ಸರ್ವರ ಶುಭ ಸಂಕೇತ
ಮಾತಿನಿಂದಲೆ ಅಪಘಾತ ಮಾತೆ ಪ್ರೀತಿಯ ಸಂಕೇತ
ಮಾತು ಸರ್ವರ ರಕ್ಷಣೇತ ಮಾತೆ ಸರ್ವರ ಪ್ರೀತಿಯ ಸಂಕೇತ
ಮಾತಿನಿಂದಲೆ ಅಪಘಾತ ಮಾತು ಸರ್ವರಿಗೆ ಸ್ವಾಗತ

ಎಂದು ಮಾತಿನ ಮಹಿಮೆಯನ್ನು ಹೇಳಿದ್ದಾರೆ. ಇಲ್ಲಿ ಬದುಕಿನ ತತ್ವವನ್ನು ಕಾಣಬಹುದು. ನಿತ್ಯ ನಾವು ಮಾತಾಡುತ್ತೇವೆ. ಅವು ಇನ್ನೊಬ್ಬರಿಗೆ ತೊಂದರೆ ಮಾಡುವಂತೆ ಇರಬಾರದು. ಅವು ಬೆಳೆಸುವಂತೆ ಇರಬೇಕು. ಮಾತಿನಿಂದ ಅಪಘಾತವಾಗಬಾರದು. ಅಪಘಾತವನ್ನು ತಪ್ಪಿಸಬೇಕು. ಮಾತುಗಳು ಮಾನವನಿಗೆ ಉಚಿತವಾಗಿ ಸಿಗುವ ಸರಕು. ಅದಕ್ಕೆ ಯಾರ ಅನುಮತಿ ಬೇಕಿಲ್ಲ. ಮಾನವನಿಗಿರುವ ಸರ್ವಸ್ವತಂತ್ರವಾದ ವರದಾನ. ಪ್ರತಯೊಬ್ಬರಿಗೂ ಯಾವ ಹಂಗಿಲ್ಲದೆ ದೊರೆಯುವ ಅಭಿವ್ಯಕ್ತಿ ಸಾಧನ. ಅದನ್ನು ಬದುಕಿನಲ್ಲಿ ಹೇಗೆ ಬಳುಸುತ್ತೇವೆ ಅನ್ನುವುದರ ಮೇಲೆ ಅದರ ಮಹತ್ವ ಅಡಿಗಿರುತ್ತದೆ. ಆದ್ದರಿಂದ ನಾವು ಮಾತಾಡುವಾಗ ಎಚ್ಚರದಿಂದ ಇನ್ನೊಬ್ಬರನ್ನು ಎಚ್ಚರಿಸುವಂತೆ, ಅರಿವು ಮೂಡಿಸುವಂತೆ ಮಾತಾಡಬೇಕು ಅದೇ ಜೀವನ ತತ್ವವಾಗಬೇಕು. ಆಗ ಸಾಮಾಜಿಕ ಸ್ವಾಸ್ಥ್ಯ ಮೂಡಲು ಸಾಧ್ಯವಿದೆ. ಇಲ್ಲದಿದ್ದರೆ ಅಮಾಜ ಹಾಳಾಗಿ ಹೋಗುತ್ತದೆ. ಬಾಯಿಗೆ ಬಂದದ್ದೆಲ್ಲ ಮಾತಾಡಬಹುದು ಎಂದು ಮಾತಾಡಿದರೆ ಸಮಸ್ಯೆಗಳು ಹೆಚ್ಚಾಗಿ ಪರಸ್ಪರ ಸಂಘರ್ಷಗಳು ನಡೆಯುತ್ತವೆ. ಕವಿಗೆ ಸಂಘರ್ಷಕ್ಕಿಂತಲು ಸಾಮರಸ್ಯ ಮುಖ್ಯವಾದುದು.

ಈ ಭವವು ಪಾಶಾಣ ಅಮೃತವೆ ಗುರುಕಣ
ನಿತ್ಯ ಮಾಡು ಗುರುಧ್ಯಾನ ಅದುವೆ ಭಕ್ತನಿಗೆ ಪ್ರಾಣ
ಷಡ್ ಗುಣ ಅಳಿದವ ಜಾಣ ಸಂಸಾರ ಬಿಟ್ಟವ ಕ್ವಾಣ
ತಿಳಿದು ಮಾಡಿ ಬಿಟ್ಟವ ಶರಣ ಅಂಜಿದರೆ ಹೇಸಿ ಮರಣ
ಅಪವಾದ ಅವಮಾನ ಮಾನವತೆಯ ಬಹುಮಾನ
ಕಷ್ಟವೆಂಬ ಈ ದಾಣ ಹೂಡಿ ಹೊಡಿಯೋ ಪ್ರೀತಿಯ ಬಾಣ
ಅಂಬಿನೊಳಗ ಇಂಬುಂಟು ಗುರುವು ಭಕ್ತನ ಗಂಟು
ಪ್ರೀತಿಯಿಂದ ನೋಡು ನೀಜಾಣ ಅಚಿಟಿ ನಡೆದವ ಶರಣ
ಸತ್ಯ ಶಾಂತಿ ನಿನ್ನ ತಪವು ಮೋಹ ಪಾಶವ ಹರಿದು ಗರ್ವಿಗಳ ಗರ್ವ ಮುರಿದು
ನೀನೆ ಭಕ್ತಿನಿತ್ಯ ಪ್ರವೀಣ

ಎಂದು ಹೇಳಿದ್ದಾರೆ. ಭಕ್ತಿಯೆಂಬುದು ಗುರುವಿನ ಮೂಲಕ ಹುಟ್ಟಬೆಕು. ನಮಗೆ ಸಜ್ಜನರ ಸಂಘ ಬೇಕು. ಅದರಿಂದ ಬದುಕಿಗೆ ಒಳ್ಳೆಯ ದಾರಿಗಳು ಸಿಗುತ್ತವೆ. ಸದ್ಗುಣಗಳನ್ನು ಬೆಳೆಸುವವನು ಗುರು. ಗುರುವನ್ನು ನಂಬಿ ಬದುಕನ್ನು ಮುನ್ನೆಡೆಸಬೇಕು. ಆಗ ಬದುಕಿನ ಪಾಶಾಣವು ಹರಿಯುತ್ತದೆ. ಬದುಕು ಅಮೃತವಾಗುತ್ತದೆ. ಸಂಸಾರವನ್ನು ಬಿಟ್ಟು ಗುರುವನ್ನು ಪಡೆಯಬೇಕೆಂದು ಇಲ್ಲ. ಸಂಸಾರವನ್ನು ಸರಿಯಾಗಿ ನಿಭಾಯಿಸುವದು ಗುರುವನ್ನು ತಲುಪುವ ದಾರಿ. ಸಂಸಾರಕ್ಕೆ ಹೆದರಿ ಓಡಿ ಹೋಗುವದಲ್ಲ. ಅದರೊಳಗಿದ್ದೆ ಬದುಕನ್ನು ಅನುಭವಿಸಬೇಕು. ಸಂಸಾರಕ್ಕೆ ಹೆದರಿ ಓಡಿದರೆ ಅದುವೆ ಮರಣವಾಗುತ್ತದೆ. ಸಂಸಾರವನ್ನು ಸರಿಯಾಗಿ ತಿಳಿಯಲು ಗುರುವಿನ ಮಾರ್ಗದರ್ಶನ ಬೇಕು. ಬದುಕಿನಲ್ಲಿ ಕಷ್ಟಗಳು ಅಪಮಾನಗಳು ಬರುವುದು ಸಹಜ. ಅವುಗಳನ್ನು ಮೆಟ್ಟಿ ನಿಲ್ಲಬೇಕು. ಕಷ್ಟಗಳನ್ನು ಅಪಮಾನಗಳನ್ನು ಪ್ರೀತಿಯ ಮೂಲಕ ಗೆಲ್ಲಬೇಕು. ಅದಕ್ಕೆ ಗುರುವಿನ ಅನುಗ್ರಹ ಬೇಕು. ಬದುಕಿನಲ್ಲಿ ಸುಖ ಶಾಂತಿ ನೆಲೆಸಲು ಗುರುವಿನ ಆಶೀರ್ವಾದ ಬೇಕು. ಆದ್ದರಿಂದ ಒಳ್ಳೆಯ ಗುರುವಿನ ಸಾನಿಧ್ಯದಿಂದ ಬದುಕು ಪಾವನವಾಗುತ್ತದೆ. ಅಂತ ಗುರುವನ್ನು ಪಡೆದು ಜೀವನ ಸಾಗಿಸುವುದು ಪ್ರತಿಯೊಬ್ಬ ಮನುಷ್ಯನ ಗುರಿಯಾಗಬೇಕು.

ಪ್ರೀತಿ, ಸೌಹಾರ್ಧತೆಯಿಂದ ಬದುಕುವದೆ ಜೀವನದ ನೀತಿಯಾಗಬೇಕು. ಸಜ್ಜನರ ಸಂಘದಿಂದ ಜೀವನವನ್ನು ರೂಪಿಸಿಕೊಳ್ಳಬೇಕು. ದುಷ್ಟರಲ್ಲಿ ಒಳ್ಳೆಯದನ್ನು ಹುಡುಕಲು ಸಾಧ್ಯವಿಲ್ಲ. ಅವರನ್ನು ಕಂಡು ದೂರವಿರುವುದೆ ಒಳ್ಳೆಯದು ಎನ್ನುತ್ತಾನೆ.

ಬೇವಿನ ಗಿಡದಲ್ಲಿ ಮಾವು ಹುಟ್ಟುವುದುಂಟೆ
ಮುಳ್ಳಿನ ಕೊಂಪೆಯಲ್ಲಿ ಸಂಪಿಗೆ ಹುಟ್ಟುವುದುಂಟೆ
ಸ್ವಾರ್ಥಿಗಳ ಸಂಘದಲ್ಲಿ ಶಾಂತಿ ನೆಲೆಸುವದುಂಟೆ
ಕಪಟಿಗಳ ಮಧ್ಯದಲ್ಲಿ ಸತ್ಯ ಹೇಳುವುದುಂಟೆ
ವಂಚಕರ ಗುಂಪಿನಲ್ಲಿ ಸಿರಿಯು ನೆಲೆಸುವದುಂಟೆ
ಬಚ್ಚಲದ ನೀರಿನಲ್ಲಿ ಗಮಗೆ ತಾನು ಹರಿಯುದುಂಟೆ
ಆಶೆಗೆ ಬಲಿಯಾಗಿ ಮೋಸ ಹೋದನು ತನುಜಾ
ಪಾರಸಕೆ ಕಬ್ಬಿಣದಂತೆ ತುಕ್ಕು ಹಿಡಿಯುದುಂಟೆ
ವಿಷದ ಗಿಡ ಬೆಳಸಿ ನಾವು ಹಲಸು ಬೇಡುವುದುಂಟೆ
ಪಾದರಸ ಭಾವಿಯಿಂದ ದಾಹ ತಣಿಸುವುದುಂಟೆ

ಎಂದು ಎನ್ನುತ್ತಾನೆ. ಬೇವಿನ ಗಿಡದಲ್ಲಿ ಹೇಗೆ ಮಾವು ಚಿಗಿಯಲು ಸಾಧ್ಯವಿಲ್ಲವೋ ಹಾಗೆ ದುಷ್ಟರಲ್ಲಿ ಒಳ್ಳೆಯದನ್ನು ಹುಡುಕಲು ಸಾಧ್ಯವಿಲ್ಲ. ಸ್ವಾರ್ಥಿಗಳ ಸಂಘದಲ್ಲಿ ಶಾಂತಿ ನೆಲೆಸುವದಿಲ್ಲ. ವಂಚಕರ ಗುಂಪಿನಲ್ಲಿ ಸಿರಿಯು ನೆಲೆಸುವದಿಲ್ಲ. ವಿಷದ ಗಿಡ ಬೆಳೆಸಿ ಹಲಸು ಬಯಸಿದರೆ ಸಿಗುವದಿಲ್ಲ. ಆದ್ದರಿಂದ ಬದುಕಿನಲ್ಲಿ ಒಳ್ಳೆಯದನ್ನು ಬಯಸಿ ಬದುಕುವದೆ ಮುಖ್ಯವಾದುದು.

ಮಾನವ ತನ್ನ ಜೀವನವನ್ನು ಮರದಂತೆ ರೂಪಿಸಿಕೊಳ್ಳಬೇಕು. ಅದು ಬಿಟ್ಟು ತೂತಿರಿವ ಜರಡಿಯಂತೆ ರೂಪಿಸಿಕೊಳ್ಳಬಾರದು. ನಮ್ಮನ್ನು ನಾವು ತಿಳಿದರೆ ಮರವಾಗುತ್ತೇವೆ. ಇಲ್ಲದಿದ್ದರೆ ಸತ್ಪುರುಷರು ಆಗುವದಿಲ್ಲ.

ಜರಡಿಯಾಗದಿರುವ ಮರವಾಗೊ ಮರವಾಗೊ ವರವಾಗೊ
ನಿನ್ನೊಳು ನೀ ತಿಳಿದು ನಡೆದೊಡೆ ನಿಜ ಮಾನವ ನೀನಾಗೊ
ಕೇರುವ ಮರವನು ಸೋರುವ ಜರಡಿಯ ನೋಡಿ ತಿಳಿದು ಎಚ್ಚರನಾಗೊ
ಪ್ರೀತಿ ತಿಳಿದು ನಿಸ್ವಾರ್ಥಿಯಾಗದೆ ರಾಕ್ಷಸ ಗುಣದಿ ದೂರಾಗು
ಎಂದು ಹೇಳಿದ್ದಾನೆ. ರಾಕ್ಷಸ ಗುಣಗಳಿಂದ ಹೊರಬಂದು ಸಾತ್ವಿಕ ಗುಣಗಳನ್ನು ರೂಢಿಸಿಕೊಂಡು ಬದುಕುವುದು ಬದುಕಿನ ಧ್ಯೇಯವಾಗಬೇಕೆಂಬುದು ಈ ಕವಿಯ ಆಶಯವಾಗಿದೆ.

ಈ ಅಂಕಣದ ಹಿಂದಿನ ಬರಹಗಳು:
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು

ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...