Date: 29-01-2025
Location: ಬೆಂಗಳೂರು
"ಮಂತ್ರಾಲಯ ಯಾತ್ರೆಗೆ ಹೊರಟ ಒಂದು ಮಧ್ಯಮ ವರ್ಗದ ಕುಟುಂಬವು ಪ್ರಾರಂಭದಲ್ಲೇ ಬಸ್ ಕೆಟ್ಟು ಕೆಸರು ನೀರಿನಲ್ಲಿ ಚಕ್ರ ಸಿಲುಕಿ ಕೊಳ್ಳುವುದು. ನಂತರ ಸಹ ಪ್ರಯಾಣಿಕರೆಲ್ಲ ಕಸರತ್ತಿನ ತಳ್ಳುವಿಕೆಯಿಂದ ರಸ್ತೆಗೆ ಬರುವ ಬಸ್ಸು. ಈ ಬಸ್ಸಿನ ಪ್ರಯಾಣದಿಂದ ಮಂತ್ರಾಲಯಕ್ಕೆ ಬರುವ ಕುಟುಂಬವು ಭೂತ, ವರ್ತಮಾನಗಳ ನಡುವೆ ನಡೆಯುವ ಚಿತ್ರಣದ ಸುತ್ತ ಕಥೆ ತೆರೆದುಕೊಳ್ಳುವುದು," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ರಾಘವೇಂದ್ರ ಖಾಸನೀಸ ಅವರ "ತಬ್ಬಲಿಗಳು" ಕಥೆಯ ಬಗ್ಗೆ ವಿಮರ್ಶಿಸಿದ್ದಾರೆ.
ನವ್ಯ ಸಾಹಿತ್ಯ ಸಂದರ್ಭದಲ್ಲಿ ಖಾಸನೀಸರ ಹೆಸರು ಕೇಳಿ ಬರುವಂತದ್ದು. ರಾಘವೇಂದ್ರ ಖಾಸಾನೀಸ ಇವರು ಬಿಜಾಪುರ ಜಿಲ್ಲೆಯ ಇಂಡಿಯವರು. ದಿನಾಂಕ: 2-3-1933 ರಂದು ಜನಿಸಿದರು. ತಂದೆ ನಾರಾಯಣ ಖಾಸನೀಸ.ತಾಯಿ ಕಮಲಾಭಾಯಿ. ಮನೆಯಲ್ಲಿ ಹೇಳುತ್ತಿದ್ದ ಶರ್ಲಾಕ್ ಹೋಮ್ಸ್ ನ ಪತ್ತೆದಾರಿ ಕತೆ, ಕಾದಂಬರಿ, ದೆವ್ವದ ಕಥೆಗಳನ್ನು ಪ್ರಾಥಮಿಕ ಶಾಲೆಯಿಂದಲೇ ಕೇಳುತ್ತಿದ ಖಾಸನೀಸ ಅವರಿಗೆ ಸಾಹಿತ್ಯಾಕ್ತಿ ಬೆಳೆಯಿತು. ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸಿದ ರಾಘವೇಂದ್ರ ಅವರು ಬರೆದಿದ್ದು ಕಡಿಮೆಯಾಗಿದ್ದರು ಸಹ ನೆನಪಿನಲ್ಲಿ ಉಳಿಯುವಂತ ಬರಹ ಬರೆದವರು.
ರಾಘವೇಂದ್ರ ಖಾಸನೀಸರ ಮೊದಲ ಕಥಾಸಂಕಲನ “ಖಾಸನೀಸರ ಕಥೆಗಳು” ಈ ಸಂಕಲನಕ್ಕೆ “ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಸೃಜನಶೀಲ ಕೃತಿ” ಎಂಬ ಪ್ರಶಸ್ತಿ ನೀಡಿತು. “ಬೇಡಿಕೊಂಡವರು” ಇವರ ಎರಡನೇ ಕಥಾಸಂಕಲನ. ಇವರು ಬಂಗಾಳಿ ಕಥೆಗಳನ್ನು ಕನ್ನಡಕ್ಕೆ ತಂದರು. 2006ರ ಲ್ಲಿ “ಸಮಗ್ರ ಕಥೆಗಳು” ಎಂದು ಪ್ರಕಟವಾಗಿರುವ ಕೃತಿಯಲ್ಲಿ ಇವರ ಕೇವಲ ಒಂಬತ್ತು ಕಥೆಗಳಿವೆ. ಹಾಗೂ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ 1995 ರಲ್ಲಿ ಲಭಿಸಿತು. ಪಾರ್ಕಿನ್ ಸನ್ ವ್ಯಾಧಿಯಿಂದ ಬಳಲುತ್ತಿದ್ದ ಇವರು 2007ರಲ್ಲಿ ನಿಧನರಾದರು. ಇವರ ತಬ್ಬಲಿಗಳು ಎಂಬ ಕಥೆಯನ್ನು ಡಾ:ವಿಕ್ರಂ ರಾಜ ಅರಸಿರವರು ಸಂಪಾದಿಸಿರುವ “AN ANTHOLOGY KANNADA SHORT STORIES” ಸಂಕಲನದಲ್ಲಿ ಪ್ರಕಟಗೊಂಡಿದೆ.
"ರಾಮಾನುಜನ್ ರಂತೆಯೇ ಕಥೆಗಾರರಂದು ಹೆಚ್ಚು ಪ್ರಸಿದ್ಧರಾದವರಲ್ಲ. ಅವರು ಬರೆದ ಕಥೆಗಳ ಸಂಖ್ಯೆ ಹೆಚ್ಚಲ್ಲವಾದರೂ ಅವರ ತಬ್ಬಲಿಗಳು ಕನ್ನಡದ ಪ್ರಬುದ್ಧ ಕಥೆಗಳಲ್ಲಿ ಒಂದಾಗಿದೆ”.( ಜಿ.ಹೆಚ್. ನಾಯಕ್ ಕನ್ನಡದ ಸಣ್ಣ ಕಥೆಗಳು ಪ್ರಸ್ತಾವನೆಯಿಂದ) ಎನ್ನುವ ನಾಯಕ್ ಅವರ ಮಾತು ಸರಿಯಾದುದೇ.ಈ ತಬ್ಬಲಿ ಕಥೆಯ ಒಳನೋಟ ವಿಭಿನ್ನ ನೆಲೆಯಿಂದ ಕೂಡಿರುವಂಥದ್ದು.
ಮಂತ್ರಾಲಯ ಯಾತ್ರೆಗೆ ಹೊರಟ ಒಂದು ಮಧ್ಯಮ ವರ್ಗದ ಕುಟುಂಬವು ಪ್ರಾರಂಭದಲ್ಲೇ ಬಸ್ ಕೆಟ್ಟು ಕೆಸರು ನೀರಿನಲ್ಲಿ ಚಕ್ರ ಸಿಲುಕಿ ಕೊಳ್ಳುವುದು. ನಂತರ ಸಹ ಪ್ರಯಾಣಿಕರೆಲ್ಲ ಕಸರತ್ತಿನ ತಳ್ಳುವಿಕೆಯಿಂದ ರಸ್ತೆಗೆ ಬರುವ ಬಸ್ಸು. ಈ ಬಸ್ಸಿನ ಪ್ರಯಾಣದಿಂದ ಮಂತ್ರಾಲಯಕ್ಕೆ ಬರುವ ಕುಟುಂಬವು ಭೂತ, ವರ್ತಮಾನಗಳ ನಡುವೆ ನಡೆಯುವ ಚಿತ್ರಣದ ಸುತ್ತ ಕಥೆ ತೆರೆದುಕೊಳ್ಳುವುದು. ವಿಕ್ಷಿಪ್ತ ಮನಸ್ಥಿತಿ ಹೊಂದಿದ ತಾಯಿ, ಹೆಂಡತಿಯನ್ನು ಕಳೆದುಕೊಂಡ ತಮ್ಮ, ಅರೆ ಹುಚ್ಚಿಯಾಗಿರುವ ತಂಗಿ, ನಿರ್ಲಿಪ್ತ,ನಿರಾಕಾರ ಅಸಹಾಯಕನಾಗಿ ಉಳಿದುಬಿಡುವ ತಂದೆ, ಎಲ್ಲವನ್ನು ವಿವರಿಸುವ ಅಣ್ಣನಾಗಿ ಕಾಣುವ ನಿರೂಪಕ, ಹೀಗೆ ಹಲವು ಒಳ ದನಿಗಳನ್ನು ವಿವರಿಸುತ್ತದೆ ಈ ಕಥೆ. ತಮ್ಮನ ಹೆಂಡತಿ ಅಮ್ಮನ ಮಾತಿಂದ ಆತ್ಮಹತ್ಯೆ ಮಾಡಿಕೊಳ್ಳುವುದು. ಆ ಮನೆಯಲ್ಲಿ ಸಾವಾದ ಆರು ತಿಂಗಳ ನಂತರ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಧಾವಿಸುವುದು ತಂಗಿಯು ಅರೆಹುಚ್ಚಿನಿಂದ ಕಿರುಚಿ ರಥದಲ್ಲಿ ಬೆಂಕಿ ಬೆಂಕಿ ಎಂದು ಕೂಗುವುದು. ತಮ್ಮ ನಿಸ್ತೇಜನಾಗಿ ಬದುಕಿನ ವೈರಾಗ್ಯದತ್ತಲೇ ಕಳೆದು ಹೋಗುವುದು. ವಿಲಕ್ಷಣ ಮನಸ್ಸಿನ ತಾಯಿ ಎಲ್ಲರಿಗೂ ನರಕ ತೋರಿಸುವ ಆಕೆ ಮಗಳ ವಿಚಾರದಲ್ಲಿ ಕಾಳಜಿ ಕನಿಕರ ಪ್ರೀತಿ ತೋರುವುದು. ಕೊನೆಗೆಲ್ಲ ನುಚ್ಚುನೂರಾದ ಕನಸಿನ ಭಗ್ನತೆ,ಅಪ್ಪನು ಮಳೆಗೆ ಆತು ಕೊಂಡ ಆ ಗೋಡೆಯೂ ಕುಸಿದು ಬೀಳುವುದು, ತಮ್ಮ ಕಾಣೆಯಾಗುವುದು, ತಂಗಿ ತಪ್ಪಿಸಿಕೊಳ್ಳುವುದು, ಹೀಗೆ ಎಲ್ಲಾ ದುರಂತಗಳ ಸರಮಾಲೆಯನ್ನು ಹೊತ್ತು ಸಾಗುವ ಕತೆಯಲ್ಲಿ ತಬ್ಬಲಿಗಳು ಇಲ್ಲಿ ಯಾರು ಎಂಬ ಪ್ರಶ್ನೆಯನ್ನು ಓದುಗರೆದುರಿಗೆ ತೆರೆದುಕೊಳ್ಳುತ್ತದೆ.
ಈ ಕಥೆಯನ್ನು ವಿಮರ್ಶೆಗೊಳಪಡಿಸಿದಾಗ ಈ ಜಗತ್ತಿನಲ್ಲಿ ಯಾರು ತಬ್ಬಲಿಗಳು? ಎಂಬ ಪ್ರಶ್ನೆ ಏಳುತ್ತದೆ. ಕಥೆಯಲ್ಲಿ ಬರುವ ಮಧ್ಯಮ ವರ್ಗದ ಕುಟುಂಬವೊಂದರ ಸಂಬಂಧಗಳ ತಲ್ಲಣ ತಾಕಲಾಟ ಬಹಳ ಜಟಿಲವಾದಂತಿದೆ. ಸದಾ ಮೌನಿಯಾಗಿ ತಾಳ್ಮೆ ಹೊಂದಿದ್ದ ತಮ್ಮನ ಹೆಂಡತಿ ಅಂದು ತಾಯಿ (ಅತ್ತೆ) ಯ ಮಾತಿಗೆ ರೋಸಿ ರೈಲಿಗೆ ಅತುಕೊಂಡು ಜೀವ ಬಿಡುವುದು ಸಂಬಂಧಗಳ ವೈಫಲ್ಯವನ್ನು ತೋರಿಸುತ್ತದೆ. ಸಾವೆಂದರೆ ನಿತ್ಯ ಪಾಠ ಎಂಬಂತೆ ತಿಳಿದುಕೊಂಡು, ಮಾತೆತ್ತಿದರೆ ಸಾಯುವೆ ಎಂದು ಹೆದರಿಸುತ್ತಿದ್ದ ತಾಯಿ ಮನೆಯ ಸದಸ್ಯಯಾದ ಸೊಸೆಯನ್ನೇ ಕೇವಲ ಕ್ಷುಲ್ಲಕ ಕಾರಣಕ್ಕಾಗಿ ಮಾತಿಂದ ತಿವಿದು ಆಕೆಯ ಸಾವಿಗೆ ಕಾರಣಳಾಗುವುದು. ಹೆಣದ ಬೆರಳಿನಲ್ಲಿ ಇದ್ದ ಒಂದು ಉಂಗುರವನ್ನು ಬಿಡದೆ ಎಳೆಯುವ ತಾಯಿ, ತಾಯಿಯ ವಿಚಿತ್ರ ವಿಕ್ಷಿಪ್ತ ನಡವಳಿಕೆಯಾಗಿದೆ. ಆಕೆಯಿಂದ ಮನೆಯಲ್ಲಿ ಯಾರಿಗೂ ನೆಮ್ಮದಿ ಇಲ್ಲ. ತಂದೆ ಅಸಹಾಯಕನಾಗಿ ಹೋಗಿದ್ದಾನೆ. ಅವಳ ವರ್ತನೆ ಆತನಿಗೆ ಜಿಗುಪ್ಸೆ ಹುಟ್ಟಿಸಿದೆ. ಕುಟುಂಬದ ವ್ಯವಸ್ಥೆ ಬದಲಾಗಿದೆ. ಎಲ್ಲರನ್ನೂ ದೂಷಿಸುವ ಹೀಯಾಳಿಸಿ ಶಾಪ ಕೊಡುವ ಆಕೆ ಒಂದು ತರದಲ್ಲಿ ಆಕೆಯು ಕೂಡ ಶಾಪಗ್ರಸ್ತಗಳೇ ಅನಿಸುತ್ತದೆ.
“ಹಲವು ಸುಳಿಗಳು, ಭೂತದ ಸುಳಿಗಳು, ವ್ಯಕ್ತಿಗಳು, ಸುಳಿಗಳು ಹುಟ್ಟಿಕೊಂಡು ಹೊರ ಜಗತ್ತು ಒಳಜಗತ್ತುಗಳು ಬೆಳೆಯುತ್ತಾ ಹೋಗುತ್ತವೆ. ಅದರ ಪರಿಣಾಮ ಎರಡು ಜಗತ್ತುಗಳಿಗೂ ಸಂಬಂಧಿಸಿದು ಅಪೂರ್ಣ ಸಂಕೀರ್ಣತೆ ಈ ಕಥೆಯಲ್ಲಿ ಮೈತಾಳುತ್ತದೆ” (ಹೊಸಗನ್ನಡ ಸಾಹಿತ್ಯ ಚರಿತ್ರೆ ಎಲ್.ಎಸ್. ಶೇಷಗಿರಿ ರಾವ್) ಇಲ್ಲಿಯ ಹೊರಜಗತ್ತು ನಮಗೆ ಒಂದು ಲೋಕವನ್ನು ತೆರೆದಿಟ್ಟರೆ, ಆ ಪಾತ್ರಗಳ ಮನೋವಿಕಲ್ಪಕತೆ ಇನ್ನೊಂದು ಲೋಕವನ್ನು ತೆರೆದಿಡುತ್ತದೆ.ರಥ ಎಳೆಯುವುದನ್ನು ಕಂಡ ತಂಗಿ, ಬೆಂಕಿ ಬೆಂಕಿ ಎಂದು ಕೂಗಿ ಎಲ್ಲರಿಂದ ತಪ್ಪಿಸಿಕೊಂಡು ರಥವನ್ನು ಮುಟ್ಟಿದಾಗ “ಹುಚ್ಚು ಮಗಳು ಅವಲಕ್ಷಣವಾಗಿ ಮಾತಾಡುತ್ತಾ ರಥವನ್ನು ಮುಟ್ಟಿ ಮೈಲಿಗೆ ಮಾಡುತ್ತಿದ್ದರೆ ತಾಯಿಯಾದವಳು ಅದನ್ನು ತಡೆಯಬಾರದೇನು?, ಹುಚ್ಚು ಮಗಳನ್ನು ಕಟ್ಟಿಕೊಂಡು ಇಲ್ಲಿಗೇಕೆ ಬರಬೇಕು? ಈ ನಿಟ್ಟಿನಲ್ಲಿ ಜನರು ಮಾತನಾಡುವುದು ಕೂಡ ಜನರ ಮನಸ್ಥಿತಿ ಅರಿವಿಗೆ ಬರುವುದು ಮೈಲಿಗೆ ಎಂದರೆ ಯಾವುದು ಹಾಗಾದರೆ? ಹುಚ್ಚಿ ಎಂದು ತಿಳಿದ ಈ ಜನರು ಕೂಡ ಹುಚ್ಚರಿಗಿಂತ ಹೀನಾಯ ನಡವಳಿಕೆಯನ್ನು ತೋರುವ ಅಸಂಗತ ಮನೋಭಾವನೆ ಸಮಾಜಶಾಸ್ತ್ರೀಯವಾಗಿ ವಿವೇಚಿಸಬೇಕಾದ್ದು. ಹುಚ್ಚಿಗೆ ತಿಳಿಯಲಾರದೆ ಕೂಗಿದಳು ಎನ್ನುವುದಾದರೆ, ಇವರ ತಿಳಿವಿನ ಅರಿವಿನ ಒಳಗೆ ಅವಿತ ಇವರ ಹುಚ್ಚುತನಕ್ಕೆ ಯಾವ ಸಮಾಜ ಕಾರಣ? ಇಡೀ ಸಮಾಜದ ಮನೋಕ್ಲೇಶ ಈ ಕತೆಯ ಮೂಲಕ ಅನಾವರಣವಾಗುತ್ತದೆ.
ಈ ಕಥೆಯಲ್ಲಿ ಬದುಕಿನ ಸಂದಿಗ್ಧತೆಯನ್ನು ಪ್ರಯಾಣಿಸುವ ಬಸ್ಸಿನೊಂದಿಗೆ ಸಮೀಕರಿಸಿದ್ದಾರೆ. ಬದುಕಿನ ಪ್ರಯಾಣದಲ್ಲಿ ತಾಕಲಾಟ, ನೋವು, ನಲಿವು, ವಿಕ್ಷಿಪ್ತತೆ,ದುಃಖ,ಸಾವು,ನೋವು, ಅಸಂಬದ್ಧ ಸಂಬಂಧ, ಸ್ಪಂದನೆರಹಿತ ಮನೋಚಿಂತನೆ, ಹೀಗೆ ಒಂದಕ್ಕೊಂದು ತಾಳಮೇಳ ಇರದ ಬದುಕಿನ ಬಂಡಿ ಆಗಾಗ ಕೆಸರು ನೀರು ಸಿಲುಕಿ ಮತ್ತೆ ತಹಬದಿಗೆ ಬರುವಂತ ರೂಪಕವಾಗಿ ಕಥೆಗಾರ ಕಥೆಯ ಪ್ರಾರಂಭದಲ್ಲಿಯೇ ಪ್ರಯಾಣದ ಸಂಕೇತದೊಂದಿಗೆ ತೆರೆದಿಟ್ಟಿರುತ್ತಾರೆ. ಈ ಹಿನ್ನೆಲೆಯಿಂದ ಬಸ್ ನ ಮೂಲಕ ಜೀವನದಲ್ಲಿ ಪ್ರತಿಮೆಗಳೊಡನೆ ಸೂಚನೆ ನೀಡಿರುವುದು ಕಾಣಿಸುತ್ತದೆ. ಈ ಕತೆಯಲ್ಲಿ ಬಸ್ ನ ಪ್ರಯಾಣ, ರಥ ಎಳೆಯುವಂತದ್ದು, ನೀರು, ಬಂಡೆಕಲ್ಲು, ಮಳೆ ಹುಯ್ಯುವುದು, ಗೋಡೆ ಕುಸಿಯುವುದು, ಹೀಗೆ ಪ್ರತಿಯೊಂದು ಮನುಷ್ಯ ಬದುಕಿನ ಭೂತ, ವರ್ತಮಾನ, ಭವಿಷ್ಯದ ಸಂಕೇತಗಳ ಒಟ್ಟು ಆಯಾಮಗಳನ್ನು ಕತೆಗಾರ ಕಟ್ಟಿಕೊಟ್ಟಿದ್ದಾರೆ.
ತಮ್ಮನ ಹೆಂಡತಿ ಒಮ್ಮೆ ಮಂತ್ರಾಲಯಕ್ಕೆ ಹೋಗಿ ಬರೋಣ ಎಂದಾಗ ಇದೇ ತಾಯಿ (ಅತ್ತೆ) ಹೋಗಲಿಕ್ಕೆ ಬಿಡದೆ ಆಕೆಯನ್ನು ಹಿಂಸಿಸಿ ಗದರಿಸಿದ್ದಳು. ಆದರೆ ಆಕೆ ಸತ್ತು ಆರು ತಿಂಗಳಿಗೆ ಇವರು ಮಂತ್ರಾಲಯಕ್ಕೆ ಬಂದು ಪಾಪವನ್ನು ಕಳೆಯಲೆಂದೆ ಬಂದವರಂತೆ ಕಂಡು ಬಂದರೂ ಸಹ ಕುಟುಂಬದ ಸದಸ್ಯರೆಲ್ಲರೂ ದಿಕ್ಕಾಪಾಲಾಗಿ ಚದುರಿ ಹೋಗುವುದು ಕೂಡ ಬದುಕಿನ ಅನಿಶ್ಚಿತತೆ ಮತ್ತು ನಶ್ಚರತೆಯನ್ನು ಸೂಚಿಸುತ್ತದೆ. ಒಂದೇ ಕೈನ ಎಲ್ಲಾ ಬೆರಳುಗಳು ಒಂದೇ ತರ ಇರಲಾರವು. ಆದರು ಎಲ್ಲ ಬೆರಳುಗಳು ಒಂದನ್ನೊಂದು ಆಶ್ರಯಿಸಿ ಬದುಕಿ, ಬಾಳಿಗೆ ಬೆಳಕಾಗುತ್ತವೆ. ಆದರೆ ಮನುಷ್ಯ ಪ್ರಾಣಿ ಬರೀ ಸಂದಿಗ್ದತೆ ಅಸ್ಪಷ್ಟ ನಿಲುವು, ಅಸಂಬದ್ಧ ಯೋಚನೆಗಳ ನಡುವೆ ಹೊಂದಿಕೆ ಎನ್ನುವುದು ಮರೀಚಿಕೆ.
ಈ ಕಥೆಯಲ್ಲಿ ಅಪ್ಪ-ಅಮ್ಮನ ಹೊಂದಿಕೆಯ ಬದುಕೇ ಇಲ್ಲ. ಅವರ ಸಹಬಾಳ್ವೆಯು ಅತಂತ್ರ ಸ್ಥಿತಿ ಇಡೀ ಕಥೆಯುದ್ದಕ್ಕೂ ಮನಸಿಗೆ ತಾಕಿದರೂ ದುರಂತಗಳ ಸರಮಾಲೆಯ ಹೊದಿಕೆಯನ್ನು ಹೊದ್ದ ಕಥೆಯ ಆವರಣ ಮಾತ್ರ ಅನನ್ಯ ಎನಿಸುವುದು. ಸಂಕಟಗಳ ಜೋಳಿಗೆಯಲ್ಲಿ ಸಿಗಲಾರದ ನೆಮ್ಮದಿಯನ್ನು ಅರಸುವ ಈ ತಬ್ಬಲಿಗಳಿಗೂ ಸಿಕ್ಕಿರುವ ನ್ಯಾಯವಾದರೂ ಎಂತದ್ದು? “ಖಾಸನೀಸರು ತಮ್ಮ ಸಂಕಟಗಳಿಗೆ ಪರಿಹಾರವೇ ಇಲ್ಲದವರಂತೆ ತೊಳಲಾಡುವ ವ್ಯಕ್ತಿಗಳನ್ನು ಈ ಕಥೆಯಲ್ಲಿ ಕಟೆಯುತ್ತಾ ಹೋದರು. ಅಸ್ತಿತ್ವವಾದಿ ಫಿಲಾಸಫಿಯ ಅವತಾರಗಳಂತೆ ಇರುವ ಈ ಕಥೆಗಳು ಕನ್ನಡದಲ್ಲಿ ತಮಗೆ ಸೋದರವೇ ಕಮ್ಮಿಯಾದ ಕಾಲದಲ್ಲಿ ಹುಟ್ಟಿದವು”.( ಶತಮಾನದ ಕನ್ನಡ ಸಾಹಿತ್ಯ-೧ ಪುಟ ಸಂ.365)
ಈ ಕಥೆಯನ್ನು ಇನ್ನೊಂದು ಮಗ್ಗಲಿನಲ್ಲಿ ವಿವೇಚಿಸಿದಾಗ ಬಸ್ಸಿನ ಪ್ರಯಾಣ ಪ್ರಾರಂಭದಲ್ಲಿ ಬಸ್ಸು ಕೆಟ್ಟು ನಿಲ್ಲುವುದು,ಕೊನೆಯಲ್ಲಿ ಎಳಿಯುತಿದ್ದ ರಥಕ್ಕೆ ತಂಗಿ ಬೆಂಕಿ ಬಿತ್ತೆಂದು ಹೋಗುವ ಚಿತ್ರಣಗಳು ಬಾಳಿನ ಪಯಣದ ಇನ್ನೊಂದು ಕವಲು ದಾರಿಯನ್ನು ತೋರಿಸುವುದು. ಮಂತ್ರಾಲಯಕ್ಕೆ ಎಲ್ಲರೂ ಒಟ್ಟಿಗೆ ಬಂದಿದ್ದರು ಸಹ ಮನಸ್ಸು, ದಾರಿ, ಎಲ್ಲವೂ ಕವಲು ಕವಲಾಗಿ ಒಡೆದು, ಒಬ್ಬೊಬ್ಬರು ಮತ್ತೊಬ್ಬರನ್ನು ಹುಡುಕಾಡುವ ಸಿಕ್ಕರು ಸಿಗದಂತಿರುವ ಬಾಳಿನ ಗೋಳು,ವಾಸ್ತವ ಬದುಕಿನ ಚಿತ್ರಣಕ್ಕೆ ಮುಖಾಮುಖಿಯಾಗಿಸುತ್ತದೆ.
ಪ್ರಸ್ತುತ ಸಮಕಾಲಿನ ಸಂದರ್ಭಕ್ಕೂ ಮತ್ತು ಭವಿಷ್ಯನಲ್ಲಿಯೂ ಕೂಡ ನಿರ್ಮಾಣವಾದ ಹಾಗೂ ಮುಂದೆ ಇದಕ್ಕಿಂತ ವಿಕೋಪಕ್ಕೆ ತೆರಳುವ ಮನುಷ್ಯ ಸಂಬಂದಗಳ ಆತಂಕ, ಭಯ, ತಲ್ಲಣದ ಚಿತ್ರಣವನ್ನು ಈ ಕಥೆ ಪ್ರತಿನಿಧಿಸುತ್ತದೆ. ಮನೆಯಲ್ಲಿ ಎಲ್ಲರೂ ಒಟ್ಟಿಗಿದ್ದರೂ ಸಹ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತಬ್ಬಲಿಗಳೇ. ಈ ತಬ್ಬಲಿ ಕಥೆ ಎಲ್ಲಾ ಕಾಲಕ್ಕೂ ಸಲ್ಲುವಂತದ್ದು. ನಮ್ಮೊಳಗಿದ್ದುಕೊಂಡೇ ನಮ್ಮನ್ನೇ ನಾವು ಹುಡುಕುವ ಮತ್ತು ನಮ್ಮನ್ನು ದೂರ ಸರಿಸುವ ಹಾಗೂ ದೂರ ತಳ್ಳಿ ಮತ್ತೆ ಒಂದಾಗಿಸುವ ಚಿತ್ರಣ ಕಾಣಬಹುದು.” ತಂದೆಗೆ ನಾವೆಲ್ಲರೂ ಹೊರಟ ರೀತಿ ಹೊಸದೇನಿಸಿತು. ತುಸು ಸಂಕೋಚವೂ ಹುಟ್ಟಿತು.ಇಷ್ಟು ಸನಿಹದಿಂದ ಒಬ್ಬರೊಬ್ಬರಿಗೆ ಮೈ ಹಚ್ಚಿಕೊಂಡು ಇಡೀ ಸಂಸಾರದೊಂದಿಗೆ ತಾವು ಹಾಗೆ ಹೊರಗೆ ಹೋದದ್ದು ಬಹಳ ಅಪರೂಪ ಒಂದು ಕ್ಷಣ ತಂದೆ ಅಭಿಮಾನವೆನಿಸಿತು ತೃಪ್ತಿಯಾಯಿತು”. ಹೀಗೆ ಹೇಳುವ ಕಥೆಗಾರ “ನಾವು ಬದುಕಿನಲ್ಲಿ ಹೀಗೆ ಕೂಡಿ ನಡೆದಿದ್ದರೇ ನಮ್ಮೆಲ್ಲರ ಬಾಳು ಹೇಗಾಗಬಹುದಿತ್ತು” ಎಂದು ಕನಸು ಕಾಣುತ್ತಾ ಅವರು ಮುಂದೆ ನಡೆದರು. ಹೀಗೆ ಅಂದುಕೊಳ್ಳುವ ತಂದೆ ತಾಯಿಯ ವಿಚಿತ್ರ ಮನಸ್ಥಿತಿಯಿಂದ ಆತ ಬೇಸತ್ತು ಅಸಹಾಯಕನಾಗಿದ್ದ ಆತ ಈ ತರ ಕನಸು ಕಾಣಬಹುದಷ್ಟೇ. ಪ್ರಾಯೋಗಿಕವಾಗಿ ಅನುಭವಿಸಲಾರ. ಇದು ಕೂಡ ಇಂದಿನ ಕಾಲಘಟ್ಟಕ್ಕೆ ಪ್ರಸ್ತುತ ಸನ್ನಿವೇಶವೇ ಎಂಬಂತೆ ಭಾಸವಾಗುತ್ತದೆ.
ಈ ಕಥೆಯಲ್ಲಿ ತಂಗಿಯ ಸುತ್ತ ಇಡೀ ಜಗತ್ತು ತೆರೆದಿದ್ದರೂ ಆಕೆ ಒಂಟಿ. ತಮ್ಮನ ಹೆಂಡತಿ ಸಾಯಬಾರದ ವಯಸ್ಸಿನಲ್ಲಿ ಪಾಪವನ್ನಾಗಲಿ ತಪ್ಪಾಗಲಿ ಎಸಗದೆ ತಾಯಿಯ ಚುಚ್ಚು ಮಾತಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮ ವೈರಾಗ್ಯದ ಮೂರ್ತಿಯಾಗಿ ತನ್ನನ್ನೇ ತಾನು ಕಳೆದುಕೊಂಡು ತಬ್ಬಲಿಯಾಗುವುದು ಕೂಡ ಅಂತರ್ಮುಖತೆಯ ವೈರಾಗ್ಯ. ಕ್ರೌರ್ಯದ ಒಂದು ಭಾಗವೇ ಆಗಿ ಹೋದ ತಾಯಿ ಸಹ ಎಲ್ಲರನ್ನೂ ಕಳೆದುಕೊಂಡು ತಬ್ಬಲಿಯೇ. ಇವಕ್ಕೆಲ್ಲ ಯಾರು ಹೊಣೆ? ತಬ್ಬಲಿಗಳಾದ ಭಾವಗಳಿಗೆ ಯಾರು ಕಾರಣ? ತಬ್ಪಲಿಯಾದ ಸಾಂಗತ್ಯಕ್ಕೆ ಯಾರು ನ್ಯಾಯ ನೀಡುವರು? ಇಂತಹ ಹಲವು ಪ್ರಶ್ನೆಗಳಿಗೆ ಓದುಗರು ಉತ್ತರ ಕಂಡುಕೊಳ್ಳಬೇಕಿದೆ. ಮತ್ತೆ ಮತ್ತೆ ಕಾಡುವ ಈ ಪ್ರಶ್ನೆಗಳಿಗೆ ದೈವ ನಿಯಮ ಕಾರಣನ? ಸಮಾಜನಾ? ಅಥವಾ ಮನಸ್ಥಿತಿನಾ? ಸ್ಪಂದನೆ ಇರದ ಅಸಂಬದ್ಧತೆಯ ನಿಲುವುಗಳಾ? ಮಾನಸಿಕ ಹೊಯ್ದಾಟಗಳ ಎದುರಿನಲ್ಲಿ ಸಾವಿರಾರು ಮನುಷ್ಯರನ್ನು ನಿಲ್ಲಿಸಿದರೂ ಸಹ ಒಳಗಿಂದ ತಬ್ಬಲಿಯನ್ನಾಗಿಸುವ ಮನಸ್ಥಿತಿಯನ್ನು ಮನೋವೈಜ್ಞಾನಿಕ ಹಿನ್ನೆಲೆಯಿಂದ ತರ್ಕಿಸಬೇಕಿದೆ. ಮನುಷ್ಯನ ವಿಕ್ಷಿಪ್ತ ಭಾವನೆಗಳಿಗೆ ಆತನ ಹುಟ್ಟು ಬೆಳೆದ ಪರಿಸರ ಎಲ್ಲವೂ ಕಾರಣಿಭೂತವಾಗಿ ಕಾಡುವುದಂತು ಸತ್ಯಸಂಗತಿ.
ಈ ಕಥೆಯಲ್ಲಿ ಆಚರಣೆಗಳು, ಕ್ರಿಯೆಗಳು, ಎಲ್ಲವೂ ಯಾಂತ್ರಿಕವಾಗಿ ಜರುಗುವುದು. ಧರ್ಮ ಭಕ್ತಿ ಇದ್ಯಾವುದರ ಗೊಡವೆಯೂ ಇಲ್ಲಿರುವ ಯಾವ ಪಾತ್ರಗಳಿಗೂ ಇಲ್ಲ. ಎಲ್ಲವೂ ಯಾಂತ್ರಿಕ ಕ್ರಿಯೆಯಾಗಿ ಕಥೆಯ ಸಂವಿಧಾನವನ್ನು ಆವರಣವನ್ನು ಕಟ್ಟಿಕೊಡುತ್ತವೆ. ಕುಟುಂಬದಲ್ಲಿರುವ ಅಷ್ಟು ಜನರಿಗೂ ಸಂಬಂಧಗಳ ಸ್ಪಂದನೆ ಭಾವತೀವ್ರತಯೇ ಕಾಣಲಾರದ ಅಸಂಬದ್ಧ ಚಲನೆ ಹೊಂದಿದ್ದ ಬಾಂಧವ್ಯಗಳಿವು.ಹನ್ನೆರಡು ವರ್ಷಗಳ ಹಿಂದೆ ಮಂತ್ರಾಲಯಕ್ಕೆ ಬಂದಾಗ ಎದುರಾದ ಒಂದು ಹೆಂಗಸು ಇಂದಿಗೂ ಕೂಡ ಅದೆ ಜಜ್ಜಿ ಹೋದ ತಂಬಿಗೆ ಹಿಡಿದು ಬಾಗುತ್ತಾ ತೆರಳಿದ್ದು ಮನುಷ್ಯ ಬದುಕಿನ ಕ್ರೌರ್ಯತೆಯನ್ನು ತೀವ್ರವಾಗಿ ತೋರಿಸುತ್ತದೆ., ಒಂದು ಕುಟುಂಬದಲ್ಲಿ ಕ್ರೌರ್ಯ ದುರಂತಗಳು ಜರುಗಿದ್ದರು ಸಹ ಓದುವರಿಗೆ ಯಾವುದೇ ತೆರನಾದ ನೋವು ಕಣ್ಣೀರು ಭಾವಪರಶತೆ ಆಗಲಾರದು. ಕಾರಣ ಇಲ್ಲಿ ಕಟ್ಟಿಕೊಟ್ಟಿರುವಂತಹ ಪಾತ್ರಗಳು ಸಹ ಭಾವಹೀನ ಚಲನೆಯನ್ನು ಹೊಂದಿರುವುದರಿಂದ ಓದುಗರಿಗೆ ಸಹಜವಾಗಿ ಅನಿಸುತ್ತದೆ. ಆ ಕಾರಣದಿಂದಲೇ ಈ ಕಥೆ ಇಷ್ಟು ವರ್ಷದ ನಂತರವೂ ಪ್ರಸ್ತುತ ಎನಿಸುತ್ತದೆ. ಸಮಕಾಲೀನ ಸಂದರ್ಭದಲ್ಲಿ ಸಮಾಜದ ಬಾಂಧವ್ಯಗಳೊಂದಿಗೆ ಮುಖಾಮುಖಿಯಾಗುವುದು. ಈ ಕಥೆಯು ಬಹಳ ಜಟಿಲ ಸಂಕೀರ್ಣತೆಯಿಂದ ಕೂಡಿಕೊಂಡಿದೆ. ಓದುಗ ಬೇಗ ತೆರೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕಥೆಯ ಓಟದೊಂದಿಗೆ ಕುಟುಂಬದ ಸದಸ್ಯರಾದ ಅಣ್ಣ ಅಥವಾ ನಿರೂಪಕ ಇಲ್ಲಿ ನಮಗೆ ಅಮೂರ್ತವಾಗಿ ಕಥೆಯನ್ನು ಸಾಕ್ಷಿಭೂತವಾಗಿ ಕಟ್ಟಿಕೊಡುತ್ತಾ ಸಾಗುತ್ತಾನೆ. ಆತನ ಕಣ್ಣೆದುರಿಗೆ ಎಲ್ಲವೂ ಜರುಗಿದರು ಕೂಡ ಆತ ಅಸಹಾಯಕ. ಒಟ್ಟಾರೆ ಇದೊಂದು ಪ್ರಬುದ್ಧತೆ ಹೊಂದಿದ ಕಥೆ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ.
- ವಾಣಿ ಭಂಡಾರಿ
"ಬದುಕಿನ ಹಲವು ಆಯಾಮಗಳ ಮೂಲಕ ಪ್ರೇಮವನ್ನು ನೋಡುತ್ತವೆ. ಇಲ್ಲಿ ದುಃಖ, ವಿಷಾದ, ನೋವು, ಸಂಕಟ, ಸಂಭ್ರಮ ಒಂದಕ್ಕೊಂದು...
"ಶ್ರೀನಿವಾಸನ ಮನೆಯಲ್ಲಿ ತಂದೆಯ ಶ್ರಾದ್ಧ ಕಾರ್ಯ ಕುರಿತು ತಾಯಿ ಮಗನಲ್ಲಿ ತಿಳಿಸಿದರು ಕೂಡ ಅದರ ಬಗ್ಗೆ ಇದ್ದ ಅಸಡ್ಡ...
"ಪೆರಮಾತಿನ ಶಿಕ್ಶಣ ಮಕ್ಕಳನ್ನು ಅವರದಲ್ಲದ ಇನ್ನೊಂದಕ್ಕೆ ಕಸಿ ಮಾಡುವುದರಿಂದ ಇಂತದೆಲ್ಲ ಅನಾಹುತಗಳ ಸಾದ್ಯತೆಗಳನ್ನು...
©2025 Book Brahma Private Limited.