ಕಾಡಿದ ಕಸದ ಚೀಲ 

Date: 27-11-2025

Location: ಬೆಂಗಳೂರು


"ನಗುವು ಮಸಕಾಕದ ಮುಖದಲ್ಲಿ ಪದ್ಯದ ನಾದ ಹಿಡಿದು ಲಯಕ್ಕೆ ತಕ್ಕ ಚಿಟಿಕೆ ಹಾಕುತ್ತ ಅವನು ಓದುವ ಭಂಗಿ ಚೆಂದ. ಮಕ್ಕಳ ಪದ್ಯವೊಂದನ್ನು ಹೀಗೆ ಓದಿಸಿ ಕೇಳಲೆಂದು ಬಾ ಎಂದಿದ್ದೆ. ಅವನ ಬರುವಿಕೆಗಾಗಿ ಕಾದಿದ್ದರಿಂದ ಕಸದ ಚೀಲವನ್ನು ನೂರು ಮೀಟರು ದೂರದ ಕಸದ ತೊಟ್ಟಿಗೆ ಹಾಕಿ ಬರಲಾಗಿರಲಿಲ್ಲ. ಹಿಂದಿರುಗಿ ಹೋಗುವಾಗ ಇದನ್ನು ಹಾಕಿ ಹೋಗಯ್ಯ ಎಂದರಾಯಿತು ಅಂದುಕೊಂಡಿದ್ದೆ," ಎನ್ನುತ್ತಾರೆ ಸ. ರಘುನಾಥ. ಅವರು ತಮ್ಮ ʻಬೆರಕೆ ಸೊಪ್ಪುʼ ಅಂಕಣದಲ್ಲಿ ಬರೆದ ʻಕಾಡಿದ ಕಸದ ಚೀಲʼ ಲೇಖನ ನಿಮ್ಮ ಓದಿಗಾಗಿ..

ಸಾಯಂಕಾಲ ಏಳುವರೆಗೆ ಬರುತೀನೆಂದ ರಮೇಶ ಎಂಟುವರೆಗೆ ಬಂದ. ಹಳ್ಳಗಳೇ ರಸ್ತೆ ಎನಿಸಿದ್ದ ರಸ್ತೆಯಲ್ಲಿ ಕಾರು ಬರೋದು ತಡವಾಯ್ತೇನೊ ಅಂದೆ. ಕಿಸಕ್ ನಕ್ಕ. ಸಿ.ಎ. ಅವನ ಇನ್ಷಿಯಲ್. ‘ಸಿಎಆರ್ ಸರ್’ ಎಂದು ಕಾಲೇಜು ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಕರೆಯುತ್ತಿದ್ದುದು. ‘ಕಾರು’ ಎಂದು ನಾನು ಕರೆಯುತ್ತಿದ್ದೆ. ಹಾಸ್ಯಪ್ರಿಯನಾಗಿದ್ದವನು ನಾನು ಹಾಗೆ ಕರೆಯುವುದನ್ನು ಇಷ್ಟಪಟ್ಟಿದ್ದ. ಪದ್ಯ ಓದುವುದು ಅವನಿಗೆ ಅತಿಪ್ರಿಯ. ನಗುವು ಮಸಕಾಕದ ಮುಖದಲ್ಲಿ ಪದ್ಯದ ನಾದ ಹಿಡಿದು ಲಯಕ್ಕೆ ತಕ್ಕ ಚಿಟಿಕೆ ಹಾಕುತ್ತ ಅವನು ಓದುವ ಭಂಗಿ ಚೆಂದ. ಮಕ್ಕಳ ಪದ್ಯವೊಂದನ್ನು ಹೀಗೆ ಓದಿಸಿ ಕೇಳಲೆಂದು ಬಾ ಎಂದಿದ್ದೆ. ಅವನ ಬರುವಿಕೆಗಾಗಿ ಕಾದಿದ್ದರಿಂದ ಕಸದ ಚೀಲವನ್ನು ನೂರು ಮೀಟರು ದೂರದ ಕಸದ ತೊಟ್ಟಿಗೆ ಹಾಕಿ ಬರಲಾಗಿರಲಿಲ್ಲ. ಹಿಂದಿರುಗಿ ಹೋಗುವಾಗ ಇದನ್ನು ಹಾಕಿ ಹೋಗಯ್ಯ ಎಂದರಾಯಿತು ಅಂದುಕೊಂಡಿದ್ದೆ. ಒಂಬತ್ತುಮುಕ್ಕಾಲಿಗೆ ಹೊರಡಲು ಎದ್ದಾಗ ಕಸದ ಚೀಲ ಕೈಗೆ ಕೊಟ್ಟೆ. ಹೊರಟ ಐದು ನಿಮಿಷಕ್ಕೆ ಫೋನು ಮಾಡಿದ, ಶೂ ಹಾಕಿಕೊಂಡು ಹೊರಡೋವಾಗ ಬಾಗಿಲ ಹೊರಗಿಟ್ಟ ಕಸದ ಕವರನ್ನು ಮರೆತುಬಿಟ್ಟೆ. ಸಾರಿ ಎಂದ.

ಹೊರ ಹೋಗಿ ನೋಡಿದೆ. ಕಸದ ಚೀಲ ಕಾಣಿಸಲಿಲ್ಲ. ನೂರು ಮೀಟರು ದೂರದಲ್ಲಿದ್ದ ಬೀದಿದೀಪದ ಬೆಳಕು ಆ ಚೀಲವನ್ನು ಹುಡುಕಲು ಸಾಕಾಗಿತ್ತು. ಬಾಗಿಲಿಗೆ ಎಡದಲ್ಲಿದ್ದ ಮೆಟ್ಟಿಲುಗಳ ಮೇಲಿಟ್ಟಿರಬಹುದೆಂದು ಅತ್ತ ಹೆಜ್ಜೆ ಇಡಬೇಕು, ಹೊರಗಿನ ಲೈಟು ಹಾಕಿ ನೋಡುವುದು ಒಳ್ಳೆಯದೆನಿಸಿತು.

ಮನೆಯ ಮುಂದೆ ಹೊಲವಿತ್ತು. ಅದರ ಮಧ್ಯೆ ಕಲ್ಲು, ಇಟ್ಟಿಗೆ ಚೂರುಗಳ ಗುಡ್ಡೆ. ಅದರಲ್ಲಿ ಹಾವೊಂದು ವಾಸವಿತ್ತು. ಹಗಲಿನಲ್ಲಿ ಅದು ತಲೆ ಹೊರಹಾಕುತ್ತಿತ್ತಷ್ಟೆ, ಹೊರಬಂದು ಹರಿದಾಡುತ್ತಿರಲಿಲ್ಲ. ಅದಕ್ಕೆ ಹದ್ದಿನ ಭಯ.

ಆ ಗುಡ್ಡೆಗೆ ಕೊಂಚವೇ ದೂರದಲ್ಲಿ ದೊಡ್ಡ ಮರವಿತ್ತು. ಬೆಳಕು ಹರಿದರೆ ಮೂರು ಹದ್ದುಗಳು ಬಂದು ಆ ಮರದ ಕೊಂಬೆಯಲ್ಲಿ ಕೂರುತ್ತಿದ್ದವು. ಗುಡ್ಡೆಯಲ್ಲಿ ಹಾವು ಇರುವುದನ್ನು ಅವು ಕಂಡಿದ್ದವು. ಒಂದಿಲ್ಲವೊಂದು ದಿನ ಹಾವು ಹೊರಬರದೆ, ಬಂದಾಗ ಹಿಡಿದು ತಿನ್ನದಿರುವೆವೆ ಎಂಬ ನಿರೀಕ್ಷೆ ಅವುಗಳದು. ಕೂಳು ಹುಡುಕಿ ಹೋದರೂ ಮೂರರಲ್ಲೊಂದು ಹದ್ದು, ಹೋದವು ಬರುವವರೆಗೆ ಇದ್ದು, ಅವು ಬಂದ ನಂತರ ತಾನು ಹೋಗುತ್ತಿತ್ತು. ಕಾಯುವ ಬೇಸರಿಕೆ ಕಳೆಯಲು ಬಾನಿಗೆ ಹಾರಿ, ಆ ಗುಡ್ಡದ ಸುತ್ತ ಗಸ್ತು ಹೊಡೆಯುತ್ತಿದ್ದವು. ಯಾವುದಾದರೊಂದು ದಿನ ಹದ್ದುಗಳ ಹಾರಟವಿಲ್ಲದಿದ್ದನ್ನು ಖಾತರಿ ಪಡಿಸಿಕೊಂಡು ಹಸಿವೆಯಿಂದಲೋ ಬಿಸಿಲಿಗೆ ಮೈಯೊಡ್ಡಿ ಸುಖಿಸಲೋ ಹಾವು ಹೊರಬಂದರೆ ಸಾಕು, ಮರದಲ್ಲಿ ಗೂಡು ಕಟ್ಟಿದ್ದ ಕಾಗೆ, ಕೊಂಬೆಗಳಲ್ಲಿ ಕುಳಿತಿರುತ್ತಿದ್ದ ಗಿಳಿ, ಗೊರವಂಕ ಮತ್ತೆ ಕೆಲವು ಹಕ್ಕಿಗಳು ಕಿರುಚಿ, ಅರಚಿ ಹದ್ದಗಳನ್ನು ಕರೆದುಬಿಡುತ್ತಿದ್ದವು. ಹಾಗಾಗಿ ಹಾವು ಪ್ರತಿಕ್ಷಣ ಜೀವ ರಕ್ಷಣೆಯ ಎಚ್ಚರದಲ್ಲಿ ಇರುತ್ತಿತ್ತು. ಈ ಆಪತ್ತಿನಿಂದ ತಪ್ಪಿಸಿಕೊಳ್ಳಲು ಅದು ಸಂಚಾರಕ್ಕೆ ಇರುಳನ್ನು ಆರಿಸಿಕೊಂಡಿತ್ತು. ಒಂದೆರಡು ಬಾರಿ ಮನೆ ಮುಂದೆ ಕಾಣಿಸಿಕೊಂಡಿತ್ತು.

ಮನೆಯ ಹೊರಗಿನ ಲೈಟು ಹಾಕಿ, ಜಾಗರೂಕತೆಯಿಂದ ಕಸದ ಚೀಲವನ್ನು ಹುಡುಕಿದೆ. ಅದು ಕಾಣಿಸಲಿಲ್ಲ. ರಮೇಶ ಹೋರಟು, ಫೋನು ಮಾಡುವ ಸಮಯದಂತರದಲ್ಲಿ ನಾಯಿ ಏನಾದರು ಕಚ್ಚಿಕೊಂಡು ಹೋಯಿತೆ ಎಂಬ ಆಲೊಚನೆ ಹುಟ್ಟಿ, ಆತಂಕವಾಯಿತು.

ಕೆಲವು ದಿನಗಳ ಹಿಂದೆ ಎಸೆದು ಬರಲು ಇಟ್ಟ ಕಸದ ಚೀಲವನ್ನು ನಾಯಿ ಒಯ್ದು, ಯಜಮಾನನ ಮನೆ ಗೋಡೆಯಂಚಿನಲ್ಲಿ ಚೆಲ್ಲಾಡಿತ್ತು. ಮೊದಲು ಅದನ್ನು ನೋಡಿದ ಮನೆಯೊಡತಿ ಬಂದು, ಆದುದನ್ನು ಹೇಳಿದರೂ ಕಿವಿಗೆ ಹಾಕಿಕೊಳ್ಳದೆ, ನಾನೇ ಚಿಲ್ಲದೆನೆನ್ನುವಂತೆ, ಐದು ನಿಮಿಷಗಳ ಸಮಯ ಹೀಗೆ ಮಾಡಬಾರದೆಂದು ಬೋಧಿಸಿ ಹೋಗಿಯೂ ನನಗದು ಬೋಧೆಯಾದುದಿಲ್ಲವೆಂಬತೆ ಗಂಡನಿಗೆ ಹೇಳಿ ಆತನನ್ನು ಕಳಿಸಿದ್ದಳು, ಆತನೊಂದೈದು ನಿಮಿಷ ಮಡದಿ ಹೇಳಿದುದನ್ನೇ ಹೇಳಿ ಹೋದ. ನಂತರದ ಕೆಲವು ನಿಮಿಷಕ್ಕೆ ಆತನ ತಾಯಿ ಬಂದರು. ಆಕೆಯ ಬೋಧನೆ ಎಷ್ಟು ನಿಮಿಷದ್ದೆಂದು ಲೆಕ್ಕ ಮಾಡಲಿಲ್ಲ. ಬೆಳಗಾದರೆ ಈ ಬಾರಿ ಆ ಮುವ್ವರ ಹಿತೋಪದೇಶ ಕೊಂಚ ಕಠಿಣವಾಗಿಯೇ ಆಗುವುದಿದೆ ಅಂದುಕೊಂಡೆ. ಮನಸ್ಸಿಗೆ ಇರುಸುಮುರುಸು.

ಇದಕ್ಕೆ ಮೂರು ದಿನಗಳ ಹಿಂದೆ ನಾವು ಎಚ್‌ಎಪಿ ಎಂದು ಕರೆಯುವ ಗೆಳೆಯ ಎಚ್.ಎ.ಪುರುಷೋತ್ತಮರಾಯ ಕಸದ ಚೀಲವನ್ನು ತೆಗೆದುಕೊಡು ಹೋದವನು, ಅದನ್ನು ಕಸದ ತೊಟ್ಟಿಯಲ್ಲಿ ಎಸೆಯುವುದನ್ನು ಮರೆತು ಮನೆಗೆ ಒಯ್ದಿದ್ದ. ಅವನ ಮಡದಿ ಧನಲಕ್ಷಿಯವರು ಅದನ್ನು ನೋಡಿ, ಗಂಡ ಮನೆಗೆ ಏನೋ ಸಾಮಾನು ತಂದಿರುವನೆಂದುಕೊಂಡು ತೆರೆದು ನೋಡಿದಾಗ, ಹಳಸಿದ ಅನ್ನದವಾಸನೆ ಮೂಗಿಗೆ ಬಡಿದು, ಹಳಸಲು ಅನ್ನ ತರಲು ಹೊರಗೆ ಹೋಗಿದ್ದೇನು? ನಿಮ್ಮ ಬದ್ಧಿಗೇನಾಗದೆ? ಎಂದು ಕೇಳಿದಾಗ ಅವನಿಗೆ ತನ್ನ ಮರೆವಿಗೆ ನೆನಪಿನ ಯೋಗ ಬಂದಿತಂತೆ. ಆ ಪ್ರಸಂಗದ ನೆನಪಾಗಿ ನಗು ಬಂದಿತು.

ಮಲಗಿದಾಗಲೂ ಕಸದ ಚೀಲದ ನಾಪತ್ತೆ ಕುರಿತೇ ಮನಸ್ಸು ಆಲೋಚಿಸುತಿತ್ತು. ಮನೆಯೊಡೆಯರ ಸಾಕುನಾಯಿ ಕೊಂಡೊಯ್ದಿರಲಾರದು. ಇತ್ತಿಚೆಗೆ ಅದಕ್ಕೆ ಕೆಮ್ಮುರೋಗ. ಹಗಲು ರಾತ್ರಿ ಕಮ್ಮುತ್ತಲೇ ಇರುತ್ತದೆ. ಕೆಮ್ಮಿನ ಸದ್ದು ಕೇಳಿಸಿರಲಿಲ್ಲ. ಹಾಗಿದ್ದರೆ ಕಸದ ಚೀಲ ಏನಾಯಿತು? ಮನೆಗೆ ಹೋಗುವ ಆತುರದಲ್ಲಿ ರಮೇಶ, ಮೆಟ್ಟಿಲ ಮೇಲಿಡುವ ಭರದಲ್ಲಿ ಉರುಳಿ ಮೆಟ್ಟಿಲಡಿ ಸೇರಿತೆ ಅನ್ನಿಸಿ ಎದ್ದು ಲೈಟು ಹಾಕಿ, ಹಾವಿನ ಭಯದ ಎಚ್ಚರಿಕೆಯಲ್ಲಿ ಹುಡುಕಿದೆ. ಕಾಣಿಸಲಿಲ್ಲ. ಇನ್ನಾವುದಾದರೂ ನಾಯಿ ಕಚ್ಚಿಕೊಂಡು ಹೋಗಿದ್ದೀತೆ? ಹೋಗಿದ್ದರೆ ದೂರಕ್ಕೊಯ್ದಿದ್ದರೆ ಸಾಕು ಶಿವನೆ ಎಂದುಕೊಂಡರು, ಕಸದ ಚೀಲ ಮನದಲ್ಲಿ ತುಂಬಿಕೊಂಡು ನಿದ್ದೆಯನ್ನು ಬರಗೊಡಲಿಲ್ಲ. ‘ಬಂದುದನು ಗೈಕೊ’ ಎಂಬ ಕಗ್ಗದ ಮಾತು ನೆನಪಿಗೆ ಬಂದು, ಮನಸ್ಸನ್ನು ಸಾಂತ್ವನಗೊಳಿದಾಗ ನಿದ್ದೆ ಹತ್ತಿತು. ಮನೆಯೊಡತಿ, ಯಜಮಾನ, ಆತನ ತಾಯಿಯ ಉಪದೇಶಗಳೇ ಕನಸಿನಲ್ಲಿ.

ಬೆಳಗಾಯಿತು. ಉಪದೇಶ ಕೇಳಲು ಶ್ರವಣಾಂಗದೊಡನೆ ಮನಸ್ಸನ್ನು ಅಣಿಮಾಡಿಕೊಂಡೆ. ಕಾದೆ. ಗಂಟೆ ಒಂಬತ್ತಾಯಿತು. ಉಪದೇಶಿಗರಾರೂ ಬರಲಿಲ್ಲ. ಮನಸ್ಸಿನಲ್ಲಿ ನೆಮ್ಮದಿ. ಫೋನನ್ನು ಕೈಗೆತ್ತಿಕೊಂಡಗ ಅದರ ತೆರೆಯ ಮೇಲೆ ನೋಟಿಫಿಕೇಷನ್ ಹೊಳೆದು ಸಿ.ಎ.ಆರ್. ಎಂದು ತೋರಿಸಿತು. ವಾಟ್ಸಪ್ ತೆರೆದೆ. ‘ಕಸದ ಕವರ್ ಸೀಟ್ ಕೆಳೆಗೆ ಇಟ್ಟಿದ್ದೆ. ಈಗ ಬಿಸಾಕಿದೆ’ ೧೦,೦೩ ಪಿಎಂ ಎಂದಿತ್ತು.

ಈ ಅಂಕಣದ ಹಿಂದಿನ ಅಂಕಣಗಳು:
ಬೆಳೆಯುವ ಮಕ್ಕಳಲ್ಲಿ ಇನಿತು ತಪ್ಪಿಲ್ಲ; ಸ.ರಘುನಾಥ
ಕರಗಸದಂತೆ ಹೋಗುತ್ತ ಕೊರೆವುದು, ಬರುತ್ತ ಕೊಯ್ದುದು: ಸ.ರಘುನಾಥ

MORE NEWS

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...

ಹರಿಹರ ಬಸ್ ನಿಲ್ದಾಣದಲ್ಲಿ ಕಳ್ಳರು ದೋಚಿದ ಪರ್ಸಿನಲ್ಲಿ ಇದ್ದದ್ದು ಹಣ ಮಾತ್ರವಲ್ಲ.

28-11-2025 ಬೆಂಗಳೂರು

"ದಾವಣಗೆರೆಯಲ್ಲಿ ಇಳಿದಾಗ ರಾತ್ರಿ ಎರಡೂವರೆ. ಆಟೋಕ್ಕೆ ಹೋಗಲೂ ಕಾಸಿಲ್ಲ. ಅದ್ಯಾರೋ ಪುಣ್ಯಾತ್ಮನಿಗೆ ಇರುವ ಸ್ಥಿತಿ ...