Date: 14-02-2025
Location: ಬೆಂಗಳೂರು
"ಬದುಕಿನ ಹಲವು ಆಯಾಮಗಳ ಮೂಲಕ ಪ್ರೇಮವನ್ನು ನೋಡುತ್ತವೆ. ಇಲ್ಲಿ ದುಃಖ, ವಿಷಾದ, ನೋವು, ಸಂಕಟ, ಸಂಭ್ರಮ ಒಂದಕ್ಕೊಂದು ಬೆಸೆದುಕೊಂಡು ಬದುಕಿನ ನಿಶಾಂತ ತತ್ವವೊಂದನ್ನು ಶೋಧಿಸುವ ಪ್ರಯತ್ನವನ್ನು ಈ ಕವಿತೆಗಳು ಮಾಡುತ್ತವೆ. ಈ ಕವಿತೆಗಳಲ್ಲಿ ಕಾಣಿಸುವ ನೀನಾ ಎಲ್ಲರ ಬದುಕಿನ ಬಿಂಬವಾಗಿ ಕಾಣುತ್ತಾಳೆ," ಎನ್ನುತ್ತಾರೆ ರಾಜಶೇಖರ ಹಳೆಮನೆ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ‘ನೀನಾ ಕವಿತೆಗಳು’ ಕುರಿತು ಬರೆದ ಲೇಖನ.
ಸಿದ್ದಲಿಂಗ ಪಟ್ಟಣಶೆಟ್ಟಿಯವರು ತಮ್ಮ ಹದಿ ಹರಿಯದಲ್ಲಿ ಬರೆದ ಈ ಕವಿತೆಗಳು ಕಾವ್ಯಕ್ಕೆ ಹೊಸ ಬನಿಯನ್ನು ನೀಡಿವೆ. ಅರವತ್ತರ ದಶಕದಲ್ಲಿ ಸೃಷ್ಟಿಯಾಗುತ್ತಿದ್ದ ಕವಿತೆಗಳ ವಿನ್ಯಾಸದಲ್ಲಿ ಈ ಕವಿತೆಗಳು ಭಿನ್ನವಾಗಿ ನಿಲ್ಲುತ್ತವೆ. ಮುಖ್ಯವಾಗಿ ನವ ಭಾಷಿಕ ಲಯವೊಂದನ್ನು ಈ ಕವಿತೆಗಳು ಕಂಡುಕೊಂಡಿವೆ. ಪ್ರಾದೇಶಿಕವಾದ ʻಲಯ ಮಾದರಿʼ ಯೊಂದನ್ನು ಈ ಕವಿತೆಗಳು ಹುಟ್ಟು ಹಾಕಿವೆ. ಪ್ರೇಮದ ಸುತ್ತವೇ ಸುತ್ತುವ ಈ ಕವಿತೆಗಳು ಪ್ರೇಮವನ್ನು ವ್ಯಸನವನ್ನಾಗಿ ನೋಡದೆ ಜೀವನದ ಉತ್ಸಾಹದ ಬಿಂಬವನ್ನಾಗಿಸಿಕೊಂಡದ್ದು ಈ ಕವಿತೆಗಳ ವಿಶೇಷತೆಯಾಗಿದೆ. ಬದುಕಿನ ಹಲವು ಆಯಾಮಗಳ ಮೂಲಕ ಪ್ರೇಮವನ್ನು ನೋಡುತ್ತವೆ. ಇಲ್ಲಿ ದುಃಖ, ವಿಷಾದ, ನೋವು, ಸಂಕಟ, ಸಂಭ್ರಮ ಒಂದಕ್ಕೊಂದು ಬೆಸೆದುಕೊಂಡು ಬದುಕಿನ ನಿಶಾಂತ ತತ್ವವೊಂದನ್ನು ಶೋಧಿಸುವ ಪ್ರಯತ್ನವನ್ನು ಈ ಕವಿತೆಗಳು ಮಾಡುತ್ತವೆ. ಈ ಕವಿತೆಗಳಲ್ಲಿ ಕಾಣಿಸುವ ನೀನಾ ಎಲ್ಲರ ಬದುಕಿನ ಬಿಂಬವಾಗಿ ಕಾಣುತ್ತಾಳೆ. ಇವು ಲೋಕದ ಪ್ರೇಮದ ತನ್ಮಯತೆಯೊಂದಿಗೆ ಸಂವಾದಿಸುತ್ತವೆ. ಪ್ರತಿಮೆ, ರೂಪಕಗಳ ಮೂಲಕ ಪ್ರೇಮದ ಒಳ ತುಡಿತವನ್ನು ಸಂವೇದನೆಯ ನೆಲೆಯಲ್ಲಿ ಕಾಣಿಸುವ ಚಿಂತನೆ ಕವಿತೆಯಲ್ಲಿ ಅಂತರ್ ವಾಹಿನಿಯಾಗಿ ಹರಿಯುತ್ತದೆ. ಮೋಡ, ಬೆಳದಿಂಗಳು, ಮಳೆ, ನೀರು, ಮಿಂಚು, ಭೂಮಿ, ಮರ, ಹೂ, ಬೆಂಕಿ, ಗಾಳಿ, ಮರಳುಗಾಡು, ಉಸುಕು, ಬೆಂಕಿ, ಮಿಡಿನಾಗರ ಮುಂತಾದ ಪ್ರಾಕೃತಿಕ ಪ್ರತಿಮೆಗಳು ಪ್ರೇಮದ ಸಂವೇದನೆಯನ್ನು ಪರಿಣಾಮಕಾರಿಯಾಗಿ ಅನುಭವಿಸುವ ಸಂಕೇತಗಳಾಗಿ ಬರುತ್ತವೆ. ವಚನ, ಸೂಫಿ, ತತ್ವಪದ, ಜಾನಪದದ ಜೀವನ ಸಿದ್ದಾಂತವನ್ನು ಈ ಕವಿತೆಗಳು ಮೈ ತುಂಬಿಕೊಂಡಿವೆ. ಹೀಗಾಗಿ ಇಲ್ಲಿ ಪ್ರೇಮದ ಅವಿಷ್ಕಾರ ಕೇವಲ ಒಂದು ಸಂವೇದನೆಯಾಗಿ ಬರುವುದಿಲ್ಲ. ಬದುಕಿನ ಬಹು ಆಯಾಮಗಳ ಜೊತೆ ಮುಖಾಮುಖಿಯಾಗುತ್ತದೆ. ಇದರಿಂದ ಈ ಕವಿತೆಗಳು ಕನ್ನಡ ಕಾವ್ಯ ಪರಂಪರೆಯಲ್ಲಿ ಭಿನ್ನ ದಾರಿಯನ್ನು ತುಳಿದಿವೆ.
ನಾನೊ?
ನೀನು ಸಿಂಹಾಸನವನೇರಿ ಮೆರೆವಾಗ
ಯಾವುದೋ ದೂರದೂರೊಂದರಲ್ಲಿ
ಕವನಗಳ ಬದುಕುತ್ತ
ಅಳಿವ ಸೂರ್ಯನನೆ ದಿಟ್ಟಿಸುವ ಭೂಪ
ಮೈತುಂಬ ಮೆತ್ತಿ ನಿನ್ನ ಅಂದಿನ ಮೈತ್ರಿ
ಎಂದು ಕವಿ ಕವನಗಳಲ್ಲಿ ಬದುಕುವ ಇಚ್ಚೆಯನ್ನು ವ್ಯಕ್ತಪಡಿಸುತ್ತಾನೆ. ಸರ‍್ಯನನ್ನು ನೋಡುತ್ತಾ ಮೈತ್ರಿಯನ್ನು ಮೆಲಕು ಹಾಕುತ್ತಾನೆ. ಮುಖ್ಯವಾಗಿ ಕಾವ್ಯದ ಲಯವನ್ನು ಇಲ್ಲಿ ಗಮನಿಸಬೇಕು. ಸರ‍್ಯ, ಸಿಂಹಾಸನ, ಮೈತ್ರಿ ಎಂಬ ಶಬ್ದಗಳು ಆಳದ ಪ್ರೇಮದ ಉತ್ಕಟತೆಯನ್ನು ಬೆಸೆಯುತ್ತವೆ. ಕವಿಯೊಳಗೆ ಅಡಗಿದ ಪ್ರೇಮದ ಪವಿತ್ರ ಸಂಗಾತವನ್ನು ಹೃದಯ ತುಂಬಿಕೊಳ್ಳುತ್ತದೆ.
ಬೆಲೆಯುಳ್ಳ ವೀಣೆಯಲಿ ಬಿಗಿದ ತಂತಿ ನೀ,
ನಿನ್ನ ಬಿಗಿತದಲೆ ಬಾರಿಸಿ ಬಿಡು
ನನ್ನಳಲಿನಳನ್ನ್ನು,
ನಿನ್ನೆದೆಯ ನೆಳಲನ್ನು.
ಸಿಂಹಾಸನವೇರಿದ ಸಂದರ‍್ಭವನ್ನು ತನ್ನ ಅಂತರಂಗದ ಆರ‍್ಧ್ರತೆಯಲ್ಲಿ ಕವಿ ಕಾಣಿಸುವುದು ಬಿಗಿದ ತಂತಿಯಲ್ಲಿ ತನ್ನ ಅಳಲನ್ನು ಬಾರಿಸಿಬಿಡು ಎನ್ನುತ್ತಾನೆ. ಜೊತೆಗೆ ನಿನ್ನೆದೆಯ ನೆಳಲನ್ನು ಎನ್ನುವ ಸಾಲು ಪ್ರೇಮದ ಹೃದಯವನ್ನು ಹಿಡಿಯುತ್ತದೆ.
ಓಯಾಸಿಸ್ ಬಿಸಿಲಾಗೆ ಜೀವಸೆಲೆ ಬತ್ತಿತ್ತು.
ದಡದಲ್ಲಿಯೇ ಬಳಲಿ ನಿಂತಿರುವ ಪಯಣಿಗನು
ದಿನ ರಾತ್ರಿ ನಕ್ಷತ್ರಗಳ ಕಂಡು ಮಾತಾಡಿ
ಈ ಓಯಾಸಿಸ್ಸಿನಲಿ ನೀರು ಬಂದೀತೇನು
ಎಂದು ದಿನವೂ ಕೇಳಿ ದಿನ ನುಂಗುತಿಹನು
ಯಾರಾದರೂ ನೋಡಬಹುದವನನಲ್ಲಿ.
ನಕ್ಷತ್ರಗಳ ಜೊತೆ ಮಾತಾಡುವ, ಮರಳುಗಾಡಿನಲ್ಲಿ ನೀರನ್ನು ಹುಡುಕುವ, ಎಂದಾದರೂ ಪ್ರೇಮದ ನೀರು ದಕ್ಕೀತೆಂದು ಕಾಯುವ ಭರವಸೆ ಭಾವವನ್ನು ತೇವಗೊಳಿಸುತ್ತದೆ. ಕಾವ್ಯ ಪ್ರಿಯರ ಎದೆಯನ್ನು ಕಲುಕುವ, ತೇವಗೊಳಿಸುವ ಕಾವ್ಯಶಕ್ತಿ ಈ ಕವಿತೆಗಳಲ್ಲಿ ಕಾಣಬಹುದು.
ಮನಸಿನಲಿ ಮಿಡುಕುತಿಹ ಮಿಡಿನಾಗರ
ಕಚ್ಚಿ ಕೊಚ್ಚಿ ಸೆಳೆಯುವುದೊ
ನಮ್ಮ ವಿಷವನೆ ಹೀರಿ ಹೊರಡುವುದೊ,
ಕೈಯ ಗಡಿಯಾರದಲಿ ಲೆಕ್ಕ ಪತ್ರ.
ಈ ಕವಿತೆಯ ಮಿಡಿನಾಗರ ರೂಪಕ ಪ್ರೇಮದ ಉತ್ಕಟತೆಯ ತೀವ್ರತೆಯನ್ನು ಧ್ವನಿಸುತ್ತದೆ. ಕೈಯ ಗಡಿಯಾರದಲ್ಲಿ ಲೆಕ್ಕ ಪತ್ರ ಎಂಬ ನರ‍್ಣಯ ಕಾಲದ ಸೆಲೆಯಲ್ಲಿ ಪಯಣಿಸುವ ಸಂಕೇತವಾಗಿಯೂ ಬರುತ್ತದೆ. ಲೋಕದ ವಿಷ ಹೀರಿ ಅಮೃತ ಚೆಲ್ಲುವ ಮನಸ್ಸು ಪ್ರೇಮಕ್ಕಿದೆ ಎಂಬ ಭಾವ ಉದ್ದೀಪಿಸುತ್ತದೆ.
ಬೆಂಕಿಯನು ಮೈತುಂಬ ಬಳಿದುಕೊಂಡುದರಿಂದ
ಒಳಗೆ ಬೆಂಕಿಯ ರಕುತ ಕತಕತನೆ ಕುದಿಯುತಿದೆ
ತಿಂದ ಅನ್ನದ ರಸವು ಲಾವಾರಸ.
ನಿರಾಕರಣೆಯ ಪ್ರೇಮದ ವ್ಯಥೆಯನ್ನು ಇಲ್ಲಿ ಕಾಣುತ್ತೇವೆ. ಬೆಂಕಿಯನು ಮೈ ತುಂಬ ಬಳಿಕೊಂಡಿರುವದರಿಂದ ಎಂಬ ಸಾಲು ವ್ಯಥೆಯ ಆರ‍್ದ್ರತೆಯನ್ನು ಮನಗಾಣಿಸುತ್ತದೆ. ಶಕ್ತವಾದ ಬೆಂಕಿಯ ರೂಪಕದ ಮೂಲಕ ಸಂಕಟವನ್ನುಂಟುಮಾಡುತ್ತದೆ. ʻಸುಡುವ ಸುಣ್ಣದ ಬಟ್ಟಿಯೊಳು ಸಿಕ್ಕು ಬೋರಾಡುತಿದೆ ಕೂಸುʼ ಎಂಬ ಸಾಲು ಹೃದಯವನ್ನು ಹಿಂಡುತ್ತದೆ.
‘ಬನದಿಂದ ಬಂದರೂ ಹೂವೇಕೆ ತರಲಿಲ್ಲ?’
ಎಂದು ನೀ ಕ್ರೋಧಿಸಿದಿ ಅಂದು,
ಹೂವಾಗಿ ಕಾಯುತಿಹೆ
ಮುಡಿವ ನೆಪ ಮಾಡಿ ನೀನೊಮ್ಮೆಯಾದರು ಕೂಡ
ಇತ್ತ ಬರಬೇಕಿತ್ತು
ಮನಸ್ಸು ಪ್ರಿಯತಮೆಗಾಗಿ ಕಾತರಸಿ ಕಾಯುವ ಪರಿ ಚಿತ್ರವತ್ತಾಗಿದೆ. ಹೂವಾಗಿ ಕಾಯುತಿಹೆ ಎಂಬ ಸಾಲು ಮನಸ್ಸನ್ನು ಮಿಡಿಯುತ್ತದೆ.
ಸಿಂಗಾರ ಮಾಡಿಕೋ,
ಕೇಶಮಂಡಲದಲ್ಲಿ ರಾತ್ರಿಯನು ತುರುಕು,
ಮತ್ತೆ ಅಲ್ಲೊಂದು ಇಲ್ಲೊಂದು ನಕ್ಷತ್ರ ಮಲ್ಲಿಗೆ
ಬಂಗಾರ ಕಿರಣಗಳ ಹಣಿಗೆ ಹಿಡಿದು
ಕೂದಲು ಕೊಲಾರಿಗಳ ಬಾಚಬೇಕು,
ನೀನುಟ್ಟ ನೀಲಿ ಸೀರೆಯ ನೋಡಿ
ಚೈತ್ರದ ಹಸಿರು ನಸು ನಾಚಬೇಕು,
ಕಿವಿಗೆ ಸಂಗೀತ ಬಾವಲಿಯ ಜೋತುಬಿಟ್ಟು
ಮುಗುಳುನಗೆ ಮಳೆ ಸುರಿಯೆ
ಪ್ರಕೃತಿ ಕುಲುಕುಲು ಕುಲುಕುಲು ಕುಣಿಯುತಿಹುದು.
ಸೊಗಸಾದ ಸಿಂಗಾರದ ಚಿತ್ರವನ್ನು ಇಲ್ಲಿ ಕಾಣಬಹುದು. ಪ್ರಿಯತಮೆಯ ಸಿಂಗಾರವನ್ನು ಪ್ರಕೃತಿಯ ಒಲುಮೆಯ ಆಸ್ವಾದದಲ್ಲಿ ಮೈತುಂಬಿಸಿಕೊಳ್ಳುವ ಪರಿ ಕಾವ್ಯದ ಸಿಂಗಾರವನ್ನು ಸಾರುತ್ತದೆ. ಪ್ರೇಮವೊಂದು ನಿಸರ್ಗ ಸಾತತ್ಯದ ಸಂಘರ್ಷವಾಗಿಯೂ ಕವಿತೆಯಲ್ಲಿ ಕಾಣಬಹುದು.
ಕಾಲ್ಮುರಿದು ಮೂಲೆಗುಂಪಾದ ಕಾಮನಬಿಲ್ಲು,
ಕುಷ್ಠ ರೋಗದಿ ಬಳಲುತಿಹ ಬೆಳುದಿಂಗಳು,
ಕೊಳೆತು ಕಳಚುವ ರಾತ್ರಿ
ನಿನ್ನ ಕಣ್ಣಿ ನ ಗೋರಿಯಲಿ ಹಣಿದ ಬಣಬೆ!
ಪ್ರಿಯತಮೆಯನ್ನು ನೋಡುವ ಮನಸ್ಸು, ಆಕೆಯ ತಿವಿದ ನೋಟ ಕಂಗೆಡಿಸುವ ಪರಿಯನ್ನು ರೂಪಾಕಾತ್ಮಕವಾಗಿ ಕಟ್ಟುತ್ತದೆ. ನಿನ್ನ ಮುಟ್ಟಿದ ಹವೆಯು ಭುಗಿಲ್ಲೆನುತಲಿದೆ, ಆಕಾಶದೆತ್ತರಕು ಜ್ವಾಲೆಗಳ ತಾಂಡವ ಬಂಡೆಗಲ್ಲುಗಳು ಪುಡಿ ಪುಡಿ, ಧೂಳು! ಎಂದು ನೋಟದ ತೀವ್ರತೆಯು ಪರಿಣಾಕಾರಿಯಾಗಿ ಮನ ತಟ್ಟುತ್ತದೆ.
ಭೋರ್ಗರೆವ ಕಣ್ಣಿಂದ ಹೀಗೆ ನೀ ನೋಡದಿರು
ಆರ್ಭಟಿಸಿ ನನ್ನನೇ ನಾ ತಿಂದು ಬಿಡುವೆ,
ನನ್ನ ನಿರಾಕೃತಿಗೆ ನೀ ಬೆದರಿಕೊಂಡು
ಜಲಪ್ರಾತದ ಗರ್ಭದಂತರವ ಹೊಕ್ಕು
ಕೂಗಬಯಸುವ ಕಿರಿಯ ಇರುವೆಯಾದೀಯೆ,
ಠುಸ್ಸೆನುವ ನಿರ್ವೀರ್ಯ ಫಟಾಕ್ಷಿಯಾದೀಯೆ,
ಬೆಂಕಿ ಕರ ಕುಳದಲ್ಲಿ ಕಪ್ಪುರದ ವಡೆಯಾಗಿ
ನನ್ನೊಡನೆ ನೀನೂನು ಭಸ್ಮವಾದೀಯೆ!
ಆ ನೋಟವನ್ನು ಹೆದರಿಸುವ ರೀತಿ ಬೆಚ್ಚಿಬೀಳಿಸುತ್ತದೆ. ನನ್ನನೇ ನಾ ತಿಂದುಬಿಡುವೆ ಎಂದು ತನ್ನನ್ನೇ ರ‍್ಪಿಸಿಕೊಳ್ಳುವ ಒಳತುಡಿತ, ಬೇಗುದಿ, ತಪ್ತತೆ ಉಸಿರಿಡುವಂತೆ ಮಾಡುತ್ತದೆ.
ಶ್ರಾವಣದ ಸೆಳಕುಗಳು ಗಾಳ್ಯಾಗ ಹರದ್ಹಾಂಗ
ತಡತಡದ ಬರತೈತಿ ನನೆಪ ನನಗ;
ಬೆಂಕೀsನ ನುಂಗೇನ ಬೆಳತನಕ ಕುಂತೇನ
ಮೈಯೆಲ್ಲ ಸುಣ್ಣಽದ ಭಟ್ಟಿ ಆತಽ!
ಪ್ರಿಯತಮೆಯ ನೆನಪನ್ನು ʻಬೆಂಕಿನ ನುಂಗೇನ ಬೆಳತನಕ ಕುಂತೇನ ಮೈಯೆಲ್ಲ ಸುಣ್ಣದ ಭಟ್ಟಿ ಆತʼ ಎಂದು ಪರಿತಪಿಸುವ ಕವಿಯ ಪ್ರೇಮ ದುಃಖದ ತೀವ್ರತೆಯನ್ನು ಕಾಣಬಹುದು.
ಡಬಗಳ್ಳಿ ರೆಂಬೆಯಲಿ ಧೋತರವು ಸಿಕ್ಕಿಹುದು
ಬಿಡಿಸಲಾಗದು ಮತ್ತೆ ಓಡಲಾಗದು ಎಂದು
ನಿನ್ನ ಕರೆದರೆ ಏಕೆ ನಗುತಿರುವೆ ಹೀಗೆ?
ಪ್ರತಿ ಕವಿತೆಯಲ್ಲಿಯೂ ವ್ಯಥೆಯ ಚಿತ್ರವನ್ನು ಕಾಣುತ್ತೇವೆ. ವ್ಯಥೆಯೊಂದು ಕವಿತೆಯಲ್ಲಿ ಕರುಣಾ ರಸವಾಗಿಯೂ ಹರಿಯುತ್ತದೆ. ತನ್ನನ್ನೇ ಶೋಧಕ್ಕೊಳಪಡಿಸುವ ಕವಿ ಪ್ರೇಮದ ಅಭೀಪ್ಸೆಯನ್ನು ಮೈ ತುಂಬಿಕೊಂಡು ಪ್ರಿಯತಮೆಗೆ ರ‍್ಪಣೆಯ ಭಾವವನ್ನು ಕಾಣಿಸುವ ಪ್ರಯತ್ನ ಮಾಡುತ್ತಲೇ ಹೋಗುತ್ತಾನೆ. ಎಷ್ಟೂ ನಿವೇದನೆ ಮಾಡಿಕೊಂಡರೂ ಮುಗಿಯಲಾರದಷ್ಟೂ ದುಃಖದ ಕಡಲು ಕಾವ್ಯದಲ್ಲಿ ಹರಿಯುತ್ತದೆ. ಇದುವೇ ಕಾವ್ಯದ ವಿಸೇಷತೆಯೂ ಆಗಿದೆ.
ನಿನ್ನ ಹೆಸರೆತ್ತಿದರೆ
ಹೂವರಳಿ ಗಂಧ ಹೊರಹೊಮ್ಮಿ ಚಿಮ್ಮುತಲಿತ್ತು,
ನನ್ನವೆ ಪತಂಗಕ್ಕೆ ನೀನು ಬಾಲಾಗಸಿಯು
ಭಾವ ಗಗನದಿ ನಾವಿಬ್ಬರೂ ಹಾರುತಿರೆ
ಯಾವ ದಾರವು ಎಲ್ಲಿ ತೊಡಕಾಯಿತೊ!
ಉಕ್ಕನ್ನು ಬಿತ್ತಿ ಮಲ್ಲಿಗೆಯ ಬೆಳೆದು
ಮಧುರಸವ ಹಿಂಡಿ ದಿನದಿನವು ಕುಡಿದಿಹೆವು,
ನಮಗೆ ತಿಳಿಯದ ಹಾಗೆ
ಏಕೆ ಉಲ್ಕಾಪಾತವಾದ ಹಾಗೆ
ನಮ್ಮ ಬದುಕೆಲ್ಲ ಬರಡಾಯಿತೊ!
ಪ್ರೇಮದ ಸಂತಸವನ್ನು ಕಸಿಯುವ ಕರ್ಮ ಯಾವುದು ಎಂಬ ದಂದುಗ ಕವಿಗೆ ಕಾಡುತ್ತದೆ. ಸುಂದರವಾದ ರೂಪಕಗಳ ಮೂಲಕ ಅದನ್ನು ಕಾವ್ಯಮಯ ಮಾಡಲಾಗಿದೆ. ಪ್ರೇಮದ ಸಂಗಮದಲ್ಲಿಯೇ ತಕ್ಷಣಕ್ಕೆ ಕವಿ ಬಿರುಕುಗಳನ್ನು ಕಾಣುತ್ತಾನೆ. ಇದು ಮೇಲ್ನೋಟಕ್ಕೆ ವ್ಯಥೆಯಂತೆ ಕಂಡರೂ ಇದು ಪ್ರೇಮದ ಆವಿಷ್ಕಾರವೇ ಆಗಿದೆ.
ಕಾಳಿಂಗ ಸರ್ಪಗಳ ಹೆಡಿ ಮೆಟ್ಟಿ ಹಾಡೇನು
ಯೌವನವ ಹೆಡಮುರಿಗಿ ಕಟ್ಟಿ ತುಳಿದಾಡೇನು
ನಿನ್ನ ಮದುವೆಯ ರಾತ್ರಿ ಮೆರವಣಿಗೆಯಾಗುತಿರೆ
ಕಣ್ಣ ಗುಡ್ಡಿಗಳ ಹಿಲಾಲನ್ನೇ ಹಿಡಿದೇನು
ನಿನ್ನ ಮರೆಯೂಽ ಮಾತು ಮರೆತು ಬಿಡು ನೀನು!
ಮನಸ್ಸೊಕ್ಕ ಪ್ರೇಮದ ಮರುವು ಸಾಧ್ಯವಿಲ್ಲ. ಎಂತಹ ಇಕ್ಕಟ್ಟು ಬಂದರೂ ಅದು ಜೀವಂತವಾಗಿ ನೆನಪುಗಳೊಂದಿಗೆ ಉಸಿರಾಡಬೇಕೆಂದು ಕವಿ ಬಯಸುತ್ತಾನೆ. ಪರಿತ್ಯಕ್ತವಾಗುವ ಪ್ರೇಮ ಮನಸ್ಸಿಂದ ದೂರ ಹೋಗುವುದಿಲ್ಲ. ಮನಸ್ಸಲ್ಲಿಯೇ ಉಸಿರಾಡುತ್ತದೆ ಎಂಬ ಅಚಲ ನಂಬಿಕೆ ಕವಿದಾಗಿದೆ. ಎಂತಹ ಸವಾಲು ಬಂದರೂ ಮರೆಯುವ ಮಾತು ಬಿಡು ಎನ್ನುತ್ತಾನೆ. ಹೀಗಾಗಿ ಪ್ರೇಮ ಕವಿಯಲ್ಲಿ ಆತ್ಮಸ್ಥಾಯಿ.
ಚೆನ್ನೆ, ನಿನ ಕಣ್ಣಾಗ ಮೂಡಿದ್ದ ನನ ಗೊಂಬಿ
ಮ್ಯಾಣ ಕರಗಿದ ಹಾಂಗ ಕರಗಿತೇನ,
ನಿನ್ನ ಕಣ್ಣೀರಾಗ ನನ್ನ ಮಣ್ಣಿನ ಮೂರ್ತಿ
ಮುಖದ ಕಳೆ ಕಳಕೊಂಡು ಒರಗಿತೇನ?
ಪ್ರತಿ ಪದ್ಯದಲ್ಲಿ ದುಃಖದ ಚಿತ್ರಗಳನ್ನೇ ಕಾಣುತ್ತೇವೆ. ಪ್ರೇಮದ ಸಂಗಾತಕ್ಕೆ ಹಾತೊರೆಯುವ ಮನಸ್ಸು, ಭೀತಿಗೊಂಡು ವ್ಯಾಕುಲ ಪಡುವ ಸ್ಥಿತಿಯೊಂದು ಕವಿತೆಗಳಲ್ಲಿ ಅಲೆ ಅಲೆಯಾಗಿ ಬಡಿಯುತ್ತವೆ. ಅವು ನಿರಾಶೆಯನ್ನುಂಟು ಮಾಡುವುದಿಲ್ಲ. ಪ್ರೇಮದ ನಿವೇದನೆಯ ಉತ್ಸಾಹವನ್ನು ವ್ಯಥೆಯ ಸಾಂಗತ್ಯದಲ್ಲಿ ಕಾಣಿಸುತ್ತವೆ.
ಆಷಾಢ ಮೋಡಗಳು ಕಡೆಗುನೂ ಸುರಿಯದಲೆ
ಸುರಿಯೆಂದು ನಿನಗೆನೇ ಹೇಳಬೇಕೆ?
ಚಿಂತೆ ಮಾಡದಿರು, ಒಬ್ಬನೇ ಎಂದು,
ನಾನೆನ್ನ ಕನಸು ಗಾಜಿನ ಒಡೆದ ಎಲ್ಲ ತುಣುಕುಗಳನ್ನು
ಬಳಿದು ಮೂಲೀಕುಂಚಿಗೆಯೊಳಗೆ ಕಟ್ಟಿ
ಈ ದೂರ ದಾರಿಯಲಿ ನಿನ್ನೊಡನೆ ನಡೆವೆ...
ಇಬ್ಬರೂ ಹಾಡಿದರೆ ಇಬ್ಬನ್ನಿ ಅಳುವುದು
ಸೂರ್ಯ ಪಿಂಡಗಳನ್ನು ನುಂಗಿ ನುಂಗಿ
ಮತ್ತೆ ಪ್ರಕೃತಿಯೇ ನಮ್ಮೊಳಗೆ ಇಂಗಿ!
ಎಂಬ ಭರವಸೆಯ ಬೆಳಕನ್ನು ಕವಿತೆಯಲ್ಲಿ ಕಾಣುತ್ತೇವೆ. ಇಡೀ ಪ್ರಕತಿಯ ಸಂಗಾತಿಯಾಗಿ ಪ್ರೇಮ ಈ ಕವಿತೆಗಳಲ್ಲಿ ಸಿದ್ದಿಯನ್ನು ಪಡೆಯುತ್ತದೆ. ಈ ಕವಿತೆಗಳಲ್ಲಿ ಯೌವ್ವನದ ಚಂಚಲತೆಯನ್ನು, ಬೀಸುಬಯಕೆಯನ್ನು ಕಾಣುವುದಿಲ್ಲ. ತಾಳ್ಮೆಯಿಂದ ತಣ್ಣಗೆ ಹರಿಯುವ ವ್ಯಥೆಯ ತೀವ್ರತೆಯನ್ನು ಕಾಣುತ್ತೇವೆ. ಪ್ರತಿ ಕವಿತೆಯು ಬಂಡೆಗಲ್ಲನ್ನು ಕಡೆದಿಟ್ಟಂತೆ ಚಿತ್ರಕ ರೂಪವಾಗಿ ಮೈ ದಳೆದಿವೆ. ಎಲ್ಲಾ ಕವಿತೆಗಳಲ್ಲಿ ಪ್ರೇಮದ ಭಕ್ತಿ ಹರಿಯುತ್ತದೆ. ಇಲ್ಲಿ ಪ್ರೇಮವೂ ಹೆಣ್ಣು ಗಂಡಿನ ಸ್ವರೂಪವನ್ನು ಮೀರಿ ಇನ್ನೇನು ಬಯಲಿನ ಸ್ಥಿತಿಯನ್ನು ಹುಡುಕುತಿರುವಂತೆ ಕಾಣುತ್ತಿದೆ. ಒಂದೇ ಮನೆಯ ಹಲವು ದಾರಿಯ ಬಾಗಿಲುಗಳಂತೆ ಕವಿತೆಗಳು ಕಂಡರೂ ಒಂದೊಂದು ಬಾಗಿಲಿಗೂ ಒಂದು ಶಿಲ್ಪದ ಅನನ್ಯತೆ ಇದೆ. ಹೀಗಾಗಿ ಈ ಕವಿತೆಗಳು ಈಗಲೂ ಹೊಸದಾಗಿ ಹೊಸೆದ ಹಲವು ಬಣ್ಣಗಳ ದಾರದಂತೆ ಕಾಣುತ್ತವೆ.
ಈ ಅಂಕಣದ ಹಿಂದಿನ ಬರಹಗಳು:
ಅನುಭಾವದರಳುಃ ಭವದ ಕೇಡಿಗೆ ದಿವ್ಯತೆಯ ಬೀಜಗಳು
ಹೊಸ ರೂಪಕದ ಕವಿತೆಗಳು
ಅನುಭಾವದರಳುಃ ಭವದ ಕೇಡಿಗೆ ದಿವ್ಯತೆಯ ಬೀಜಗಳು
ಮೃತ್ಯುಂಜಯ ಕಾದಂಬರಿ ತಾತ್ವಿಕ ವಿಶ್ಲೇಷಣೆ
ಪ್ರಗತಿಶೀಲ ಸಾಹಿತ್ಯ ಮತ್ತು ನಿರಂಜನರು
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಆದಿಪುರಾಣ – ವೈಭೋಗ ಮತ್ತು ವೈರಾಗ್ಯದ ತಾತ್ವಿಕತೆ
ನಳ ಚರಿತ್ರೆ : ಪ್ರೇಮದ ಅವಿಷ್ಕಾರ
ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ
ಧರ್ಮಾಧಿಕಾರದ ಆಶಯಗಳು
ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ
ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ
ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ
ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು
"ಚರಿತ್ರೆಯ ಆತ್ಮವಿಮರ್ಶೆಯಂತೆಯೆ ಸಾಹಿತ್ಯದ ಆತ್ಮವಿಮರ್ಶೆಯೂ ನಮ್ಮಲ್ಲಿ ತೀರಾ ಕಡಿಮೆ. ಅಂದರೆ ನಾವು ನಮ್ಮ ರಾಜಮಹಾರ...
"ಇಂದು ಶಿಕ್ಶಣ ಅಕ್ಶರ ಕಲಿಯುವುದಕ್ಕೆ, ಬದುಕು, ಸಮಾಜವನ್ನು ತಿಳಿದುಕೊಳ್ಳುವುದಕ್ಕೆ, ಉದ್ಯೋಗ ಪಡೆಯುವುದಕ್ಕೆ ಹೀಗೆ...
"ಕಥೆಗಳ ಆಯ್ಕೆಯ ಕ್ರಮವನ್ನು ಹೀಗೆ ಹೇಳುತ್ತಾರೆ `ಕಥೆಗಳ ಆಯ್ಕೆ ಕೂಡ ವ್ಯಕ್ತಿಯ ಆಸಕ್ತಿ, ಅಭಿರುಚಿ ಮತ್ತು ಮನೋಧರ್ಮ...
©2025 Book Brahma Private Limited.