ಓದುಗರಿಗೆ ಹೇಳಿಮಾಡಿಸಿದ ಕಥಾ ಸಂಕಲನ ಮಿಕ್ಸ್ ಅಂಡ್ ಮ್ಯಾಚ್


"ಇಲ್ಲಿನ ಕತೆಗಳಲ್ಲಿ ಸಂಕೀರ್ಣ ನಿರೂಪಣೆ ಇಲ್ಲ. ಅವು ಸುದೀರ್ಘವೂ ಅಲ್ಲ. ಹಾಗಂದ ಮಾತ್ರಕ್ಕೆ ಅವು ಕಾವ್ಯಾತ್ಮಕ ಗುಣದಿಂದ ಹೊರತಾಗಿವೆ ಅಂತೇನೂ ಇಲ್ಲ! ತುಂಬಾ ಚಂದದ ರೂಪಕಗಳ ಮೂಲಕ ಅವರು ಕತೆಗಳನ್ನು ಸಹಜವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಇಲ್ಲಿನ ಕತೆಗಳನ್ನು ಓದುವಾಗ ಇವು ಲೇಖಕನ ಮಾತುಗಳಂತೆ ಅನ್ನಿಸುವುದಿಲ್ಲ," ಎನ್ನುತ್ತಾರೆ ವೀರಕಪುತ್ರ ಶ್ರೀನಿವಾಸ. ಅವರು ಅರ್ಜುನ್ ದೇವಾಲದಕೆರೆ ಅವರ `ಮಿಕ್ಸ್ ಅಂಡ್ ಮ್ಯಾಚ್' ಕೃತಿಗೆ ಬರೆದ ಪ್ರಕಾಶಕರ ನುಡಿ.

ಸಣ್ಣ ಕತೆಗಳು ಪ್ರಪಂಚದಾದ್ಯಂತದ ಸಂಸ್ಕೃತಿಗಳಲ್ಲಿ ಬಹಳ ಹಿಂದಿನಿಂದಲೂ ಅಮೂಲ್ಯವಾದ ಸ್ಥಾನವನ್ನು ಹೊಂದಿವೆ. ಈಸೋಪನ ಕಥೆಗಳು, ಚಂದಮಾಮದ ಕತೆಗಳು, ರಾಮಾಯಣ, ಮಹಾಭಾರತದೊಳಗಿನ ಕತೆಗಳು ಇಂದಿಗೂ ಅತಿಹೆಚ್ಚು ಜನಪ್ರಿಯತೆಯನ್ನು ಪಡೆದವುಗಳೇ ಆಗಿವೆ. ಕತೆ ಎಂದ ತಕ್ಷಣ ಅದು ಒಳನೋಟಗಳಿಂದ ಕೂಡಿರಬೇಕು, ಸಂಕೀರ್ಣ ನಿರೂಪಣೆಯನ್ನು ಹೊಂದಿರಬೇಕು ಎಂಬುದನ್ನು ಸಾಹಿತ್ಯಲೋಕ ನಂಬಿ ಪೋಷಿಸುತ್ತಿದೆ. ನೈಜ ಕತೆ ಹೇಗಿರಬೇಕು ಅಂದರೆ, ಲೇಖಕನ ಕತೆ ಮುಗಿದಾಗ, ಅದು ಓದುಗನಲ್ಲಿ ಹುಟ್ಟಬೇಕು ಅನ್ನೋ ಅರ್ಥದ ಮಾತುಗಳೂ ಅಗಾಗ ಕೇಳಿಸುತ್ತಲೇ ಇರುತ್ತವೆ. ಆದರೆ ಹೊಸ ಓದುಗರನ್ನು ಆ ಕತೆಗಳು ಭಯಪಡಿಸುತ್ತವೆ ಅಥವಾ ನಿರಾಸೆ ಮೂಡಿಸುತ್ತವೆ ಎಂಬುದು ನಾನು ಕಂಡುಕೊಂಡ ಸತ್ಯ. ವೀರಲೋಕದ ಕಾರ್ಯಕ್ರಮಗಳಿಂದ ಪ್ರೇರಣೆ ಪಡೆದು, ಹೊಸದಾಗಿ ಪುಸ್ತಕ ಓದಲು ಆರಂಭಿಸಿದವರು, ಕೆಲವು ಅರ್ಥವಾಗದ ಸಾಲುಗಳು ಮತ್ತು ಅಂತ್ಯಗಳ ಬಗ್ಗೆ ನನಗೆ ಕರೆಮಾಡಿ ವಿಚಾರಿಸಿಕೊಂಡಿದ್ದರ ಹಿನ್ನಲೆಯಲ್ಲಿ ನಾನೀ ಮಾತನ್ನು ಹೇಳುತ್ತಿದ್ದೇನೆ.

ಅಂತಹ ಓದುಗರಿಗೆ ಹೇಳಿಮಾಡಿಸಿದ ಕಥಾ ಸಂಕಲನ ಮಿಕ್ಸ್ ಅಂಡ್ ಮ್ಯಾಚ್. ಅರ್ಜುನ್ ದೇವಾಲದಕೆರೆ ಕಾದಂಬರಿಕಾರರಾಗಿ ಒಂದೊಳ್ಳೆ ಓದುಗ ಬಳಗವನ್ನು ಹೊಂದಿರುವವರು. ಅವರ ಕಥೆಗಳಿಗಾಗಿ ಕಾಯುವ ಒಂದು ವರ್ಗವಿದೆ ಅನ್ನುವುದು ನನಗೆ ಖುಷಿಕೊಡುವ ಸಂಗತಿ. ಮೂರು ಕಾದಂಬರಿಗಳ ನಂತರ ಅವರು ಈ ಪುಟ್ಟಕತೆಗಳತ್ತ ವಾಲಿದ್ದಾರೆ. ಕುತೂಹಲಕ್ಕೆ ಅಂತಹ ಇಲ್ಲಿನ ಕತೆಗಳನ್ನು ನಾನು ಟೈಮರ್ ಇಟ್ಟುಕೊಂಡು ಓದಲು ಆರಂಭಿಸಿದೆ. ಬಹುತೇಕ ಕತೆಗಳು ಒಂದ್ನಿಮಿಷದ ಒಳಗೆ ಮುಗಿದುಬಿಡುತ್ತಿದ್ದವು. ಇಂದಿನ ರೀಲ್ಸ್ ಯುಗದಲ್ಲಿ, ಬಹುತೇಕರ ವೀಕ್ಷಣೆಯ ಅವಧಿ 10 ರಿಂದ 30 ಸೆಕೆಂಡ್ ಎಂಬುದನ್ನು ಅನೇಕ ಸಮೀಕ್ಷೆಗಳು ಧೃಡೀಕರಿಸಿವೆ. ಆ ಅವಧಿ ಆಚೆಗೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವುದು ಯಾವುದೇ ಮಾಧ್ಯಮಕ್ಕೆ ಕಷ್ಟವಾಗುತ್ತಿದೆ. ಇಂತಹ ಸಂದರ್ಭಕ್ಕೆ ಈ ಒಂದ್ನಿಮಿಷದ ಕತೆಗಳು ಹೇಳಿಮಾಡಿಸಿದಂತಿವೆ. ಸಾಹಿತ್ಯಲೋಕವೂ ಬದಲಾವಣೆಯತ್ತ ಮುಖಮಾಡಿರುವುದು ಒಳ್ಳೆಯ ಬೆಳವಣಿಗೆ.

ಇಲ್ಲಿನ ಕತೆಗಳಲ್ಲಿ ಸಂಕೀರ್ಣ ನಿರೂಪಣೆ ಇಲ್ಲ. ಅವು ಸುದೀರ್ಘವೂ ಅಲ್ಲ. ಹಾಗಂದ ಮಾತ್ರಕ್ಕೆ ಅವು ಕಾವ್ಯಾತ್ಮಕ ಗುಣದಿಂದ ಹೊರತಾಗಿವೆ ಅಂತೇನೂ ಇಲ್ಲ! ತುಂಬಾ ಚಂದದ ರೂಪಕಗಳ ಮೂಲಕ ಅವರು ಕತೆಗಳನ್ನು ಸಹಜವಾಗಿ ನಿರೂಪಿಸುತ್ತಾ ಹೋಗಿದ್ದಾರೆ. ಇಲ್ಲಿನ ಕತೆಗಳನ್ನು ಓದುವಾಗ ಇವು ಲೇಖಕನ ಮಾತುಗಳಂತೆ ಅನ್ನಿಸುವುದಿಲ್ಲ. ಗೆಳೆಯನೊಬ್ಬ ಮತ್ತೊಬ್ಬ ಗೆಳೆಯನೊಟ್ಟಿಗೆ ಕೂತು ಮಾಡಿದ ಹೃದಯ ಸಂವಾದದಂತಿವೆ. ಆ ಕತೆಗಳಲ್ಲಿ ತಾಜಾತನವಿದೆ, ತಾಯ್ತನವಿದೆ. ಈಗಷ್ಟೇ ಓದು ಮುಗಿಸಿ, ಬದುಕನ್ನು ಕಾಣಲಾರಂಭಿಸುವ ಕಣ್ಗಳಿಗೆ ಕೈಮರದಂತೆಯೂ, ಪ್ರೀತಿ ಪ್ರೇಮದಲ್ಲಿರುವವರಿಗೆ ಕನ್ನಡಿಯಂತೆಯೂ, ಸಮಾಜ ಸಂಬಂಧಗಳ ಕುರಿತಾಗಿ ಮೇಷ್ಟ್ರಿನಂತೆಯೂ ಇಲ್ಲಿನ ಕತೆಗಳು ದಕ್ಕುತ್ತವೆ. ಅರ್ಜುನ್ ಅವರದ್ದು ಕಿರಿವಯಸ್ಸು, ಆದರೆ ಅವರಿಗೆ ಸಿಕ್ಕಿರುವ ಜೀವನಾನುಭವ ತುಂಬಾ ದೊಡ್ಡದು ಅನ್ನುವುದಕ್ಕೆ ಈ ಕತೆಗಳಲ್ಲಿ ಸಾಕ್ಷಿಗಳು ಸಿಗುತ್ತವೆ.

ಮುಖ್ಯವಾಗಿ ಈ ಕತೆಗಳಿಗೆ ದಕ್ಕಿರುವ ಓದಿಸಿಕೊಳ್ಳುವ ಗುಣದ ಬಗ್ಗೆ ನನಗೆ ಅಪಾರ ಮೆಚ್ಚುಗೆ ಇದೆ. ಕಡಲೆ ಕಾಯಿಯನ್ನು ಕಳ್ಳೇಕಾಯಿ ಅಂತಾರೆ ಅನ್ನೋದು ನಿಮಗೆ ಗೊತ್ತಿರುತ್ತೆ. ಅದ್ಯಾಕೆ ಅದನ್ನು ಕಳ್ಳೇಕಾಯಿ ಅಂತಾರೆ ಅನ್ನೋದಕ್ಕೆ ಒಂದು ತಮಾಷೆ ಉತ್ತರ ಇದೆ. ಕಡಲೆಕಾಯಿ ಎಷ್ಟೇ ತಿಂದರೂ ತೃಪ್ತಿಯಾಗುವುದಿಲ್ಲವಂತೆ. ಇನ್ನೊಂದೆರಡು ಕಾಯಿ ಎಲ್ಲಾದ್ರೂ ಇರಬಹುದಾ ಅಂತ ಸಿಪ್ಪೆಗಳಲ್ಲಿ ನಮ್ಮ ಬೆರಳುಗಳು ಹುಡುಕುತ್ತವೆಯಂತೆ. ಆದ್ದರಿಂದಲೇ ಅವುಗಳಿಗೆ ಕಳ್ಳೇಕಾಯಿ ಅಂತ ಹೆಸರು. ಅರ್ಜುನ್ ಅವರ ಕತೆಗಳಿಗೂ ಇದೇ ಗುಣವಿದೆ. ಇದೊಂದು ಓದಿ ಮುಗಿಸೋಣ ಅಂತ ಕೂತರೆ, ಮತ್ತೊಂದು ನನ್ನ ಓದಿಬಿಡು ಅನ್ನುತ್ತೆ. ಅದು ಓದಿ ಎತ್ತಿಡೋಣ ಅಂದುಕೊಂಡರೆ, ಮಗದೊಂದು ನನ್ನನ್ನೂ ಓದು ಅಂತ ಅವಸರಿಸುತ್ತೆ. ಹೀಗೆ ನೂರೂ ಕತೆಗಳೂ ಸ್ಪರ್ಧೆಗೆ ಬಿದ್ದಂತೆ ಓದಿಸಿಕೊಳ್ಳುತ್ತವೆ. ನನ್ನ ಮಾತಿನ ಮೇಲೆ ನಂಬಿಕೆ ಇಲ್ಲವೆಂದರೆ, ನೀವೊಮ್ಮೆ ಓದಿಬಿಡಿ.

MORE FEATURES

ಮಾಧ್ವ ಕುಟುಂಬದ ಬದುಕನ್ನು ಭುಜಂಗಾಚಾರ್ಯ ಪಾತ್ರದ ಮೂಲಕ ಸುಂದರವಾಗಿ ಚಿತ್ರಿಸಲಾಗಿದೆ

25-03-2025 ಬೆಂಗಳೂರು

"ಬಾಲ್ಯದಲ್ಲಿ ಶ್ರೀಮಂತಿಕೆಯಲ್ಲಿ ಬೆಳೆದ ಭುಜಂಗಾಚಾರ್ಯರು ತಂದೆಯ ಅಕಾಲಿಕ ಮರಣದಿಂದ ವಿಧಿ ತಂದೆಯನ್ನಲ್ಲದೇ ಶ್ರೀಮಂತ...

ಒಳ್ಳೆಯ ಮಾರ್ಗದಿಂದಲೇ ತನ್ನ ಬದುಕನ್ನು ಕಟ್ಟಿಕೊಂಡ ಹೆಣ್ಣು ಮಗಳ ಜೀವನಗಾಥೆ

25-03-2025 ಬೆಂಗಳೂರು

“ಇಲ್ಲಿ ಲೇಖಕಿಯು ವೇಶ್ಯೆಯ ಮಗಳು ಸಮಾಜದಲ್ಲಿ ಎದುರಿಸುವ ಸವಾಲು ಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಹಾಗೂ ಆ...

ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ

25-03-2025 ಬೆಂಗಳೂರು

“ನಮಗೆ ಕಾಡಿಸಿದ ಕಥೆಗಳು ಅಕ್ಷರವಾದ ಮೇಲೆ ನಾವು ನಿರಾಳರಾಗುವುದು ಇಲ್ಲೇ. ಆದರೆ ಕಾವ್ಯ ಇದನ್ನು ಇಲ್ಲಿಯೇ ಮುಗಿಸಿಲ...