ಪ್ರಗತಿಶೀಲ ಸಾಹಿತ್ಯ ಮತ್ತು ನಿರಂಜನರು 

Date: 04-08-2024

Location: ಬೆಂಗಳೂರು


"ಅಸಹಾಯಕರಾದ ಕಾರ್ಮಿಕರು ಗ್ರಾಮಗಳಿಂದ ವಲಸೆ ಬರುತ್ತಿದ್ದರು. ನಗರಕ್ಕೆ ಬಂದವರು ಮತ್ತೆ ಗ್ರಾಮಗಳಿಗೆ ಹಿಂದುರುಗುವ ಪರಸ್ಥಿಯಲ್ಲಿ ಕಾರ್ಮಿಕರು ಇರಲಿಲ್ಲ. ಆದ್ದರಿಂದ ಅವರನ್ನು ಕಾರ್ಖಾನೆಗಳಲ್ಲಿ ಕಡಿಮೆ ಕೂಲಿಗೆ ಹೆಚ್ಚು ದುಡಿಸಿಕೊಳ್ಳುತ್ತಿದ್ದರು. ಈ ಕಾರ್ಮಿಕವರ್ಗ ಯಾವ ಪ್ರತಿಕ್ರಿಯೆಯಿಲ್ಲದೆ ದುಡಿಯುತ್ತಿದ್ದರು. ಇವರಿಗೆ ಒಂದು ಪ್ರಜ್ಞೆಯನ್ನು ನೀಡುವ ಆಲೋಚನೆಯನ್ನು ಲೇಖಕರು ಮಾಡಿದರು," ಎನ್ನುತ್ತಾರೆ ಅಂಕಣಕಾರ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ʻಪ್ರಗತಿಶೀಲ ಸಾಹಿತ್ಯ ಮತ್ತು ನಿರಂಜನರುʼ ಕುರಿತು ಬರೆದಿದ್ದಾರೆ.

ಭಾರತ 1940ರಲ್ಲಿ ಅನೇಕ ಬದಲಾವಣೆಗೆ ಒಳಗಾಗುತಿತ್ತು. ಸ್ವಾತಂತ್ಯ್ರ ಚೆಳುವಳಿ ಗಂಭೀರ ಸ್ವರೂಪವನ್ನು ಪಡೆದುಕೊಂಡು ನಿರ್ಣಾಯಕ ಹಂತ ತಲುಪುತಿತ್ತು. ಅನೇಕ ಲೇಖಕರು ಈ ಚಳುವಳಿಯಲ್ಲಿ ಪಾಲ್ಗೊಂಡು ವಸಾಹತುಶಾಹಿ ಮುಕ್ತ ಭಾರತಕ್ಕೆ ನಾಂದಿ ಹಾಡುತ್ತಿದ್ದರು. ಹೊಸ ಭಾರತವನ್ನು ಕಟ್ಟುವ ಹುಮ್ಮಸ್ಸಿನಲ್ಲಿದ್ದರು. ಭಾರತ ಸ್ವಾತಂತ್ಯ್ರಗೊಂಡರೂ ಭಾರತದ ಕೆಲವು ಮೂಲಭೂತ ಸಮಸ್ಯೆಗಳು ಹಾಗೆ ಉಳಿಯುವದರ ಬಗ್ಗೆ ಮತ್ತು ಹೊಸದಾಗಿ ಬೆಳೆಯುತ್ತಿರುವ ನಗರೀಕರಣ ಪ್ರಕ್ರಿಯೆಯ ಬಗ್ಗೆ ಲೇಖಕರು ಗಂಭೀರವಾಗಿ ಯೋಚಿಸುತ್ತಿದ್ದರು. ಈಗಾಗಲೇ ನಗರೀಕರಣಕ್ಕೆ ಒಳಗಾದ ದೇಶಗಳ ಪರಸ್ಥಿತಿಯನ್ನು ಗಮನಿಸುತ್ತಿದ್ದರು. ಜಾತೀಯತೆ, ಅಸ್ಪೃಸ್ಯತೆ, ಲಿಂಗತಾರತಮ್ಯ, ಧರ‍್ಮಿಕ ಕಂದಾಚಾರ, ಮೌಢ್ಯ, ಅಸಮಾನತೆ ಮುಂತಾದ ಸಮಸ್ಯೆಗಳು ಯಾವ ಸ್ವರೂಪವನ್ನು ಪಡೆಯಬಹುದೆಂದು ಚಿಂತಿಸುತ್ತಿದ್ದರು. ಮುಖ್ಯವಾಗಿ ನಗರದಲ್ಲಿ ಬೆಳೆಯುತ್ತಿದ್ದ ಶ್ರೀಮಂತ ವರ್ಗದ ಮನೋಭವದ ಬಗ್ಗೆ ಗಮನಹರಿಸಲಾಗುತಿತ್ತು. ಅವರು ಯಾವ ರೀತಿಯಲ್ಲಿ ಸಮಾಜವನ್ನು ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ವಿಮರ್ಶೆಗೆ ಒಡ್ಡಲಾಗುತಿತ್ತು. ಯಾಕೆಂದರೆ ಈಗಾಗಲೇ ಈ ವರ್ಗ ಯುರೋಪ ದೇಶಗಳಲ್ಲಿ ಬಹುದೊಡ್ಡ ವರ್ಗತಾರತಮ್ಯವನ್ನು ಹುಟ್ಟುಹಾಕಿ ಬಡವರನ್ನು ಶೋಷಣೆಗೆ ಈಡುಮಾಡುತಿತ್ತು. ಜಗತ್ತನ್ನು ಏಕಮುಖನೆಲೆಯಲ್ಲಿ ನೋಡುವ ಮನೋಭಾವ ಹೆಚ್ಚಾಗುತಿತ್ತು. ಜಗತ್ತಿನ ಸಂಪತ್ತಿನ ಒಡೆಯರು ತಾವಾಗಬೇಕೆಂಬ ಸರ್ವಾಧಿಕಾರಿ ಧೋರಣೆಯು ಮೂಡುತಿತ್ತು. ಅದರ ಪರಿಣಾಮವಾಗಿ ಒಂದನೆಯ ಪ್ರಪಂಚ ಮಹಾಯುದ್ದ ನಡೆದಿತ್ತು. ಅದು ಜನಸಾಮನ್ಯರ ಮೇಲೆ ಯಾವ ಪರಿಣಾಮ ಮಾಡಿದೆ ಎಂಬುದರ ಚಿತ್ರಣ ಕಣ್ಣ ಮುಂದೆ ಇತ್ತು. ಇಡೀ ಯುರೋಪ್ ದೇಶವೇ ಯುದ್ಧದಿಂದ ಆರ್ಥಿಕವಾಗಿ ಕುಸುದು ಹೋಗಿತ್ತು. ಸಾಮಾಜಿಕ ಸಂಬಂಧಗಳು ತುಂಬಾ ಸಂಕೀರ್ಣಗೊಂಡು ಸಹಜತೆಯನ್ನು ಕಳೆದುಕೊಂಡು ಕೃತಕವಾಗುತ್ತಿದ್ದವು. ರಾಜಕೀಯ ಅಸ್ಥಿರತೆ ತಲೆದೋರಿತ್ತು. ನಿರುದ್ಯೋಗ ತಾಂಡವಾಡುತಿತ್ತು. ಪರಸ್ಪರ ದೇಶಗಳ ನಡುವೆ ಸಂಬಂಧಗಳು ವಿಶ್ವಾಸ ಕಳೆದುಕೊಳ್ಳುತ್ತಿದ್ದವು. ಮುಖ್ಯವಾಗಿ ನಗರಗಳಲ್ಲಿ ಕಾರ್ಮಿಕ ವರ್ಗ ಬೆಳೆಯುತಿತ್ತು. ಕಾರ್ಖಾನೆಗಳು ತಲೆ ಎತ್ತುತ್ತಿದ್ದವು. ಕಾರ್ಖಾನೆಯ ಮಾಲೀಕರು ಈ ದುರ್ಬರ ಪರಸ್ಥಿಯನ್ನು ತಮ್ಮ ಸ್ವಾರ್ಥಕ್ಕೆ ಬಳಿಸಿಕೊಂಡರು. ಅಸಹಾಯಕರಾದ ಕಾರ್ಮಿಕರು ಗ್ರಾಮಗಳಿಂದ ವಲಸೆ ಬರುತ್ತಿದ್ದರು. ನಗರಕ್ಕೆ ಬಂದವರು ಮತ್ತೆ ಗ್ರಾಮಗಳಿಗೆ ಹಿಂದುರುಗುವ ಪರಸ್ಥಿಯಲ್ಲಿ ಕಾರ್ಮಿಕರು ಇರಲಿಲ್ಲ. ಆದ್ದರಿಂದ ಅವರನ್ನು ಕಾರ್ಖಾನೆಗಳಲ್ಲಿ ಕಡಿಮೆ ಕೂಲಿಗೆ ಹೆಚ್ಚು ದುಡಿಸಿಕೊಳ್ಳುತ್ತಿದ್ದರು. ಈ ಕಾರ್ಮಿಕವರ್ಗ ಯಾವ ಪ್ರತಿಕ್ರಿಯೆಯಿಲ್ಲದೆ ದುಡಿಯುತ್ತಿದ್ದರು. ಇವರಿಗೆ ಒಂದು ಪ್ರಜ್ಞೆಯನ್ನು ನೀಡುವ ಆಲೋಚನೆಯನ್ನು ಲೇಖಕರು ಮಾಡಿದರು.

ವ್ಯಕ್ತಿ ವ್ಯಕ್ತಿಗಳ ನಡುವೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಎಲ್ಲಾ ರೀತಿಯ ಸಂಬಂಧಗಳ ಒಟ್ಟು ಮೊತ್ತ ಒಂದು ಸಾಮಾಜಿಕ ಸಂಸ್ಥೆ ಎನಿಸಿಕೊಳ್ಳುತ್ತದೆ. ಯಾವ ರೀತಿಯ ಸಾಮಾಜಿಕ ವ್ಯವ್ಯಸ್ಥೆಯೆ ಆಗಲಿ, ಅದರ ಮುಖ್ಯವಾದ ಸ್ವರೂಪ ನಿರ್ಣಯವಾಗುವುದು ಅದರ ತಳಪಾಯದಂತಿರುವ ಆರ್ಥಿಕ ವ್ಯವಸ್ಥೆಯ ಮೇಲೆ. ಆದ್ದರಿಂದಲೇ ವ್ಯವಸ್ಥೆಯಲ್ಲಿ ಅಂದರೆ ಉತ್ಪತ್ತಿ ಸಂಪಾದನ ಕ್ರಮಗಳಲ್ಲಿ ಮೂಲಭೂತ ಬದಲಾವಣೆಗಳು ಆದಗ್ಗೆಲ್ಲಾ ವ್ಯಕ್ತಿ ವ್ಯಕ್ತಿಗಳ ನಡುವಣ ಇತರ ಎಲ್ಲಾ ಸಂಬಂಧಗಳಲ್ಲೂ ಸೂಕ್ಷ್ಮ ಮಾರ್ಪಾಡುಗಳು ಆಗುತ್ತವೆಂಬುದನ್ನು ನಾವು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಆ ಸಂದರ್ಭದಲ್ಲಿ ಸಾಹಿತ್ಯ ಯಾವ ಧೋರಣೆಯನ್ನು ತಾಳಬೇಕು ಎಂದು ಗಂಭೀರವಾಗಿ ಚರ್ಚೆಗಳು ನಡೆಯುತ್ತಿದ್ದವು. ಈ ಹೊತ್ತಿಗೆಲ್ಲ ಮಾರ್ಕ್ಸನ ಸಿದ್ಧಾಂತಗಳು ಸಾಕಾರ ರೂಪ ಪಡೆಯುತ್ತಿದ್ದವು.

ಮಾರ್ಕ್ಸ್ ಚರಿತ್ರೆಯನ್ನು ದುಡಿಯುವವರ ನೆಲೆಯಲ್ಲಿ ನಿಂತು ಅವಲೋಕಿಸಿದನು. ಆರ್ಥಿಕಶಕ್ತಿಗಳು ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಿ ಬಡವರನ್ನು ಹೆಚ್ಚು ಶೋಷಣೆ ಮಾಡುತ್ತವೆ ಮತ್ತು ಸರ್ವಾಧಿಕಾರಿ ಧೋರಣೆಯನ್ನು ತಾಳುತ್ತವೆ. ಆದ್ದರಿಂದ ಕಾರ್ಮಿಕರೆಲ್ಲ ಎಲ್ಲಾ ಒಂದಾಗಿ ಆರ್ಥಿಕ ಶಕ್ತಿಗಳ ಸರ್ವಾಧಿಕಾರವನ್ನು ನಿರ್ನಾಮ ಮಾಡಿ ಕಾರ್ಮಿಕರ ರಾಜಕೀಯ ಅಧಿಕಾರವನ್ನು ನಿರ್ಮಾಣ ಮಾಡಬೇಕೆಂದು ಮಾರ್ಕ್ಸ್ವಾದದ ನಿಲುವಾಗಿತ್ತು. ಅನಂತಮೂರ್ತಿಯವರು ಮಾರ್ಕ್ಸ್ವಾದದ ಬಗ್ಗೆ ಹೀಗೆ ಹೇಳುತ್ತಾರೆ."ಜಗತ್ತು ಹೇಗೆ ಬದಲಾಗಬೇಕು ಎಂಬುದರ ಆಧಾರದ ಮೇಲೆ ಜಗತ್ತನ್ನು ಅರ್ಥಮಾಡಿಕೊಳ್ಳಬಹುದು ಎಂದು ಆತ ವಿವರಿಸಿದ. ಅದು ಕ್ರಿಯಾಪದ ತತ್ವಜ್ಞಾವಾಗಿದ್ದು, ತೀವ್ರವಾದಿ ಗಡಿರೇಖೆಯನ್ನು ಮುಟ್ಟಿತ್ತು. ಅಲ್ಲಿ ಬದಲಾವಣೆಯ ಗುರಿಯೇ ಜ್ಞಾನದ ಕೀಲಿಕೈ ಆಯಿತು. ಸಮಾನತೆಯ ಸಾಧನೆ ಒಡೆತನದ ವರ್ಗದ ನಿರ್ನಾನವು ಬದಲಾವಣೆಯ ಆಶಯ ಕೇಂದ್ರ ಬಿಂದುವಾಯಿತು. ಇಲ್ಲಿ ಕ್ರಿಯೆ ಒಂದು ನಿರ್ದಿಷ್ಟ ರೂಪದಲ್ಲಿತ್ತು. ಅಂದರೆ ಆಸ್ತಿ ಸಂಬಂಧಗಳಲ್ಲಿ ಬದಲಾವಣೆ ತಂದು ಸಮಾನತೆ ಸಾಧಿಸುವದಕ್ಕೆ ಸಂಬಂಧಪಟ್ಟ ಕ್ರಿಯೆಯಾಗಿತ್ತು.”1

ಮಾರ್ಕ್ಸ್ ಜ್ಞಾನದ ಉತ್ಪತ್ತಿಯ ಮೂಲವನ್ನು ಶೋಧಿಸುದರ ಜೊತೆಗೆ ಅದರ ಹೊಣೆಗಾರಿಕೆಯ ಬಗೆಗೆ ಗಂಭೀರವಾಗಿ ಚಿಂತಿಸಿದನು. ಅದು ಒಣಪಾಂಡಿತ್ಯವಾಗದೆ ಸಾಮಾಜಿಕ ಬದಲಾವಣೆಯ ಅಸ್ತ್ರವಾಗಬೇಕೆಂದು ಪ್ರತಿಪಾದಿಸಿದನು. ಬದಲಾವಣೆ ತರುವದೇ ಅದರ ಅಂತಿಮ ಗುರಿಯಾಗಿರಬೇಕೆಂದು ವಾದ ಮಾಡಿದನು. ಸಾಹಿತ್ಯವು ಕೂಡ ಸಾಮಾಜಿಕತೆಯ ಭಾಗವಾಗಿರುದರಿಂದ ಅದರಲ್ಲಿರುವ ಶೋಷಣೆಯ ನೆಲೆಗಳಿಗೆ ಸ್ಪಂದಿಸುವದು ಅದರ ಮೂಲ ಆಶಯವಾಗಿರಬೇಕು. "ಅವರ ಪ್ರಕಾರ ಕಲೆಯ ಬೆಳವಣಿಗೆಯು ಆಕಸ್ಮಿಕವಲ್ಲ. ಕಲೆಯಾಗಲಿ ಸಾಹಿತ್ಯವಾಗಲಿ ಸಾಮಾಜಿಕ ಬೆಳವಣಿಗೆಯೊಂದಿಗೆ ಚಲನಶೀಲತೆಯನ್ನು ಪಡೆದುಕೊಂಡಿದೆ ಮತ್ತು ಅದು ಸಾಮಾಜಿಕ ಉದ್ದೇಶಕ್ಕೆ ತಕ್ಕಂತೆ ಪರಿವರ್ತನೆಯನ್ನು ಕಂಡಿದೆ. ಕಲೆಯಾಗಲಿ ಸಾಹಿತ್ಯವಾಗಲಿ ಅಂತಿಮವಾಗಿ ಸಮಾಜವಾದಿ ಆಶಯಕ್ಕೆ ತಕ್ಕಂತೆ ಇರಬೇಕಾಗುತ್ತದೆ. ಅದು ಅನಿವರ‍್ಯ. ಸೌಂದರ್ಯಶಾಸ್ತ್ರ ಮತ್ತು ವಾಸ್ತವತೆಯ ನಡುವೆ ದ್ವಂದ್ವಮಾನ ಭೌತಿಕವಾದಿ ಸಂಘರ್ಷವಿರುತ್ತದೆ. ಕಲೆಯಾಗಲಿ, ಸಾಹಿತ್ಯವಾಗಲೀ ಚರಿತ್ರೆಯೊಂದಗಿನ ಮುಖಾಮುಖಿಯಲ್ಲಿ ಬೆಳೆಯುತ್ತದೆ. ವರ್ಗಸಂಘರ್ಷ, ರಾಜಕಾರಣ, ನಿರ್ದಿಷ್ಟ ವರ್ಗದ ತಾತ್ವಿಕತೆಯು ಸಾಹಿತ್ಯ ಚಿಂತನೆಯ ಮೇಲೆ ಪ್ರಭಾವ ಬೀರುತ್ತದೆ.”2 ಸಾಹಿತ್ಯ ನಿರ‍್ಮಾಣಕ್ಕೆ ಕಾರಣವಾಗುವ ಅಂಶಗಳು ಯಾವುವು ಎಂಬುದರ ಮೇಲೆ ಸಾಹಿತ್ಯ ರಚನೆಯು ನಿಂತಿರುತ್ತದೆ. ಸಮಾಜವನ್ನು ಚಾರಿತ್ರಿಕವಾಗಿ ಗ್ರಹಿಸುವುದರ ಮೂಲಕ ವಾಸ್ತವವನ್ನು ಸರಿಮಾಡಬೇಕಾದ ಹೊಣೆಗಾರಿಕೆ ಲೇಖಕನದಾಗಿರುತ್ತದೆ. ಬರಹಗಾರ ಸಮಾಜದ ಭಾಗವಾಗಿರುದರಿಂದ ಸದಾ ಸಮಾಜಕ್ಕೆ ಸ್ಪಂದಿಸಬೇಕಾಗುತ್ತದೆ. ಶೋಷಣಾರಹಿತ ಸಮಾಜವನ್ನು ನರ‍್ಮಿಸುದೇ ಸಾಹಿತ್ಯದ ಗುರಿಯು ಆಗಬೇಕಾಗುತ್ತದೆ ಎಂದು ಮಾರ್ಕ್ಸ್ ಹೇಳಿದನು.

1. ತತ್ವಜ್ಞಾನದ ಗುರಿ ಜಗತ್ತಿನ ಮೂಲಸ್ವರೂಪವನ್ನು ವಿವರಿಸುವದಲ್ಲ. ಬದಲಾಗಿ ಜಗತ್ತನ್ನು ಪುನಾರಚಿಸುವುದು.
2. ಚರಿತ್ರೆಯನ್ನು ರೂಪಿಸುವ ಶಕ್ತಿಗಳು ಪ್ರಧಾವಾಗಿ ಆರ್ಥಿಕ ಶಕ್ತಿಗಳು.
3. ಸಮಾಜ ಯಾವಾಗಲು ಮಾಲೀಕರು ಆಳುಗಳೆಂಬ ಎರಡು ವರ್ಗಗಳಾಗಿ ವಿಭಜನೆಯಾಗಿರುತ್ತದೆ. ಅವರುಗಳ ನಡುವೆ ಯಾವಾಗಲು ಘರ್ಷಣೆ ಸಾಗಿರುತ್ತದೆ.
4. ಕೂಲಿಗಳ ದುಡಿಮೆಯ ಫಲವಾದ ಹೆಚ್ಚಳ ಮೌಲ್ಯವನ್ನು ಮಾಲೀಕರು ಯವಾಗಲು ಕಬಳಿಸುತ್ತಾರೆ.
5. ಖಾಸಗಿ ಆಸ್ತಿಯ ರದ್ಧತಿ ಅಥವಾ ಉತ್ಪದನಾ ಸಾಧನಗಳ ರಾಷ್ಟಿçÃಕರಣದಿಂದ ಮಾತ್ರ ಈ ಸೋಷಣೆ ನಿಲ್ಲುತ್ತದೆ.
6. ಈ ಬಡತನ ಕಾರ್ಮಿಕರಲ್ಲಿ ಕ್ರಾಂತಿಕಾರಿ ಚೈತನ್ಯತುಂಬಿ ವರ್ಗಗಳ ಘರ್ಷಣೆ ವರ್ಗಯುದ್ಧವಾಗಿ ಮಾರ್ಪಾಡಾಗುತ್ತದೆ.
7. ಕೂಲಿಕಾರರು ಮಾಲೀಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವುದರಿAದ ಅವರು ಪ್ರಭುತ್ವವನ್ನು ವಶಪಡಿಸಿಕೊಂಡು ತಮ್ಮದೇ ಆದ ರಾಜ್ಯವನ್ನು ಸ್ಥಾಪಿಸುತ್ತಾರೆ.ಇದನ್ನೇ ಮಾರ್ಕ್ಸ್ ದುಡಿಮೆಗಾರರ ಸರ್ವಾಧಿಕಾರತ್ವ ಎಂದು ಕರೆಯುತ್ತಾನೆ.
8. ಈ ವಿದ್ಯಾಮಾನಗಳನ್ನು ಪಡೆಯಲಾಗುವದಿಲ್ಲ. ಹೀಗಾಗಿ ಸಮಾಜವಾದ ಅನಿವಾರ್ಯ.”೩

ಮಾರ್ಕ್ಸ್ನ ಈ ಚಿಂತನೆಗಳು ಸಾಹಿತ್ಯದ ಮೇಲೆ ಪ್ರಭಾವ ಬೀರಿದವು. ಸಾಹಿತ್ಯವನ್ನು ಅಭಿಜಾತ ನೆಲೆಯಲ್ಲಿ ನೋಡದೆ ಅದು ಸಾಮಾಜಿಕ ಸ್ವರೂಪದಲ್ಲಿ ಕಾಣಬೇಕೆಂಬ ನಿಲುವುಗಳು ಮುಂಚೂಣಿಗೆ ಬಂದವು. ಇದರಿಂದಾಗಿ ಸಾಹಿತ್ಯವನ್ನು ನೋಡುವ ದೃಷ್ಟಿಕೋನಗಳು ಕೂಡ ಬದಲಾದವು.

ಸಮಾಜವನ್ನು ವಾಸ್ತವವಾಗಿ ಕಟ್ಟಿಕೊಡಬೇಕೆಂಬ ಚಿಂತನೆ ಬೆಳೆಯಿತು. ಗ್ರಾಮಗಳು ಭೂಮಾಲಿಕ ವರ್ಗಗಳಿಂದ ಶೋಷಣೆಗೆ ಗುರಿಯಾಗುತ್ತಿದ್ದವು. ಜಾತೀಯಯೆ, ಅಸ್ಪೃಷ್ಯತೆಯಂತ ಸಮಸ್ಯೆಗಳು ಅಸಮಾನತೆಯನ್ನು ಸೃಷ್ಟಿಸಿದ್ದವು. ರೈತರು, ಕೂಲಿಕಾರರು, ಮಹಿಳೆಯರು, ಕಾರ್ಮಿಕರು, ಅರೆ ಕಾರ್ಮಿಕರು ಯಾವ ಭದ್ರತೆ ಇಲ್ಲದೆ ಜೀವನ ಸಾಗಿಸುತ್ತಿದ್ದರು. ಇಂತವರ ಜೀವನವನ್ನು ಕುರಿತು ಸಾಹಿತ್ಯ ರಚಿಸಬೇಕೆಂದು ಪ್ರಗತಿಶೀಲರು ಆಲೋಚಿಸಿದರು. ಈ ಸಂದರ್ಭದಲ್ಲಿ ಹೊಸ ಓದುಗ ವರ್ಗ ಸೃಷ್ಟಿಯಾಗುತಿತ್ತು. ಅವರಿಗೆ ಸಾಹಿತ್ಯ ಒದಗಿಸಬೇಕಿತ್ತು. ಅವರಿಗೆ ಕೇವಲ ಮನೋರಂಜನೆ ಮಾತ್ರ ಕೊಡದೆ ಚಿಂತನೆ ಮಾಡುವಂತ ವಾಸ್ತವವನ್ನು ದರ್ಶನ ಮಾಡಿಸಬೇಕೆಂಬ ನಿಲುವು ಸಾಹಿತ್ಯದ್ದಾಯಿತು.

ಪ್ರಗತಿಶೀಲರು ಸಾಹಿತ್ಯವನ್ನು ಸಾಮಾಜಿಕ ಸಂಸ್ಥೆ ಎಂದು ಪರಿಗಣಿಸಿ ಅದಕ್ಕೆ ಗಂಭೀರವಾದ ಜವಬ್ದಾರಿ ಇದೆ ಎಂದು ಬಾವಿಸಿದರು. ಪ್ರಗತಿಶಿಲರು ಸಾಹಿತ್ಯವನ್ನು ಕೂಲಿಕಾರರ, ಬಡವರ, ರೈತರ, ದಲಿತರ ಪರ ರಚಿಸಬೇಕೆಂದು ನಂಬಿದ್ದರು. ಅನ್ಯಾಯ, ಶೋಷಣೆ, ಜಮೀನ್ದಾರಿಕೆ, ರಾಜಕೀಯ ಬ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ಪರಿವರ್ತನೆ ಸಾಹಿತ್ಯದ ಮುಖ್ಯ ಗುರಿಯಾಗಬೇಕೆಂದರು. ಇದಕ್ಕೆ ಪ್ರೇರಣೆಯಾದವರು ರಷ್ಯದ ಸಾಹಿತಿಗಳು. ರಷ್ಯದ ಸಾಹಿತಿಗಳು ಮಾರ್ಕ್ಸವಾದನ್ನು ಅನುಸರಿಸುತ್ತಿದ್ದರು. ಅವರಂತೆ ಪ್ರಗತಿಶೀಲರು ಕೂಡ ಮಾರ್ಕ್ಸನ ಸಿದ್ಧಾಂತವನ್ನು ತಾತ್ವಿಕ ಪ್ರಣಾಳಿಕೆಯನ್ನಾಗಿ ಮಾಡಿಕೊಂಡರು. ವರ್ಗ ಹೋರಾಟವೇ ಅವರಿಗೆ ಮುಖ್ಯವಾಯಿತು. ದುಡಿಯುವ ವರ್ಗ ಒಗ್ಗೂಡಿ ಬಂಡವಾಳಿಶಾಹಿ ವರ್ಗವನ್ನು ಸದೆಬಡಿದು, ರಾಜಕೀಯ ಅಸ್ತಿತ್ವವನ್ನು ಪಡೆಯಬೇಕೆಂಬ ನಿಲುವನ್ನು ತಮ್ಮ ಸಾಹಿತ್ಯದಲ್ಲಿ ತಂದರು. ಬಂಡವಾಳಶಾಹಿಗೆ ಪೋಷಕರಾದ ಜಮೀನುದಾರರನ್ನು ಕಟುವಾಗಿ ಅಲ್ಲಗಳೆದರು. ಜಮೀನ್ದಾರರ, ಬಂಡವಾಳಶಾಹಿಗಳ, ಶ್ರೀಮಂತರ ಶೋಷಣಾ ಸ್ವರೂಪವನ್ನು ವಿಶ್ಲೇಷಿಸಿದರು. ಸಾಹಿತ್ಯ ರಚನೆ-ಹೋರಾಟ-ಸಂಘಟನೆ-ಬದಲಾವಣೆ-ಕ್ರಾಂತಿಯನ್ನು ಒಂದಕ್ಕೊಂದು ಪೂರಕ ಎಂದು ತಿಳಿದರು. ಲೇಖಕ ಸಾಮಾಜಿಕ ಜವಾಬ್ದಾರಿಯನ್ನು ಅರಿಯಬೇಕು. ಆ ಜವಬ್ದಾರಿಯ ಭಾಗವಾಗಿ ಸಾಹಿತ್ಯ ಮೂಡಿಬರಬೇಕೆಂದು ಭಾವಿಸಿದರು. ದುಡಿಯುವ ವರ್ಗದಲ್ಲಿ ರಾಜಕೀಯ ಅಧಿಕಾರ ನೆಲೆಗೊಳ್ಳಬೆಕು. ಇಂತಹ ರಾಜಕೀಯದ ಜೊತೆಗೆ ಸಾಹಿತಿ ಕಲಾವಿದರಿರಬೇಕೆಂದು ಪ್ರಗತಿಶಿಲರ ಆಶಯವಾಗಿತ್ತು.

ಪ್ರಗತಿಶೀಲತೆ ಮೊಳಕೆಯೊಡದದನ್ನು ಸಜ್ಜದ್ ಜಾಹೀರ್ ಹೀಗೆ ವಿವರಿಸುತ್ತಾರೆ. "1931 ಒಂದು ವಿಶಿಷ್ಟ ವರ್ಷ. ಆಗ ನಾನು ಇಂಗ್ಲೆಂಡ್ ನಲ್ಲಿ ನನ್ನ ವಿದ್ಯಾರ್ಥಿ ಜೀವನದ ಕೊನೆಯ ದಿನಗಳನ್ನು ಕಳೆಯುತಿದ್ದೆ. ಜಗತ್ತನ್ನೇ ನುಂಗ ಹೊರಟ ಆರ್ಥಿಕ ಬಿಕ್ಕಟ್ಟಿನ ರಾಜಕೀಯ ಪರಿಣಾಮದ ವಿರಾಟರೂಪ ಕಾಣಿಸಿಕೊಂಡಿತು. ಎಲ್ಲ ಕಡೆಯೂ ಫ್ಯಾಸಿಸ್ಟ್ ದಬ್ಬಾಳಿಕೆಯ ದುಃಖಪೂರ್ಣ ಕಥೆಗಳೇ ಕೇಳಿ ಬರುತ್ತಿದ್ದವು. ಅಂಥ ಶಕ್ತಿಗೆದುರಾಗಿ ಜನತೆ ಪ್ರತಿಭಟಿಸುವುದನ್ನು ನಾವು ಕಂಡೆವು. ಬುದ್ಧಿಜೀವಿಗಳಲ್ಲು ವಿಚಾರ ಕ್ರಾಂತಿಯಾಯಿತು. ನಮ್ಮ ಕಣ್ಣೆದುರು ನಡೆಯುತ್ತಿದ್ದ ಘಟನೆಗಳು, ನಾವು ಓದುತ್ತಿರುವ ಪುಸ್ತಕಗಳು, ನಡೆಸುತ್ತಿದ್ದ ಚರ್ಚೆಗಳು ನಮ್ಮನ್ನು ಹೊಸಬರನ್ನಾಗಿ ಮಾಡಿದವು. ನಾವು ಮೆಲ್ಲ ಮೆಲ್ಲನೆ ಸಮಾಜವಾದ ಸಿದ್ಧಾಂತದತ್ತ ಸಾಗಿದೆವು.” 4 ಇವರು ಪ್ರಗತಿಶೀಲ ಸಾಹಿತ್ಯದ ಮೊಳಕೆಯೊಡೆಯಲು ಕಾರಣರಾದರು. ಅದರ ಪ್ರಣಾಲಿಯಂತೆ ಸಾಹಿತ್ಯ ರಚಿಸುವ ಪಣ ತೊಟ್ಟರು. ತಮ್ಮ ಜೊತೆಗಾರರನ್ನು ಬರೆಯುವಂತೆ ಪ್ರೇರೇಪಿಸಿದರು.

ಕೈಗಾರಿಕೆ ಕ್ರಾಂತಿಯಿಂದ ಬಂಡವಾಳಶಾಹಿ ವ್ಯವಸ್ಥೆ ಬೆಳೆಯುತಿತ್ತು. ದುಡಿವ ವರ್ಗವನ್ನು ಕಡಿಮೆ ಕೂಲಿಗೆ ದುಡಿಸಿಕೊಂಡು ಹೆಚ್ಚು ಲಾಭ ಪಡೆಯುತಿತ್ತು. ದುಡಿಯುವ ವರ್ಗಕ್ಕೆ ಶಿಕ್ಷಣ, ಆರೋಗ್ಯ, ವಸತಿ, ಸ್ವಾತಂತ್ಯ್ರದಂತ ಕನಿಷ್ಟ ಸೌಲಭ್ಯವನ್ನು ನೀಡಿರಲಿಲ್ಲ. ಕೇವಲ ದುಡಿಯುವ ಯಂತ್ರದಂತೆ ಭಾವಿಸಿದರು. ಕಾರ್ಮಿಕರ ದುಡಿಮೆ ಹೆಚ್ಚಾದಂತೆ ಮಾಲೀಕಕರ ಬಂಡವಾಳ ವೃದ್ಧಿಯಗುತ್ತಾ ಹೋಯಿತು. ಹಣವಂತರು ವ್ಯವಸ್ಥೆಯ ಮೇಲೆ ಸಂಪೂರ್ಣ ಹತೋಟಿ ಸಾಧಿಸುತ್ತಾ ಹೋದರು. ಅದು ಕೇವಲ ಆಯ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಹಣವಂತ ದೇಶಗಳು ಬಡ ದೇಶಗಳ ಸವಾರಿ ಮಾಡುತ್ತಿದ್ದವು. ಬಲಾಢ್ಯ ದೇಶಗಳು ಬಡ ದೇಶಗಳ ಮೇಲೆ ವಸಾಹತುವನ್ನು ಸ್ಥಾಪಿಸಿ ಸುಲಿಯುತ್ತಿದ್ದವು. ಶ್ರೀಮಂತ-ಬಡವ, ಮಾಲೀಕ-ಕಾರ್ಮಿಕ ಎಂಬ ಭೇದದ ಅಂತರ ಬೆಳೆಯುತ್ತಲೆ ಹೋಯಿತು. ದುಡಿಯುವ ವರ್ಗಕ್ಕೆ ಯಾವುದೇ ಭದ್ರತೆ ಮತ್ತು ಅಸ್ತಿತ್ವ ಇಲ್ಲದಂತಾಯಿತು. ಅನಿವಾರ್ಯವಾಗಿ ದುಡಿವ ವರ್ಗ ತಮ್ಮ ಬದುಕಿಗೆ ಹೋರಾಡಲೇಬೇಕಾಯಿತು. ಸಾಹಿತ್ಯ ರಚಿಸುವವರು ಸಂಘಟನೆ ಮಾಡಿಕೊಂಡರು. ಸಂಘಟನೆಯಿಂದ ಸಾಹಿತ್ಯ ರಚಿಸುವದರ ಜೊತೆಗೆ ಹೋರಾಟ ಮಾಡುವುದು ಅವರ ಉದ್ದೇಶವಾಯಿತು. ಬರೆಯುದರ ಜೊತೆಗೆ ಶೋಷಿತರ ಪರವಾಗಿ ಬೀದಿಗಿಳಿದು ಚಳುವಳಿ ಮಾಡುವುದು ಬಹು ಮುಖ್ಯ ಎಂದು ಭಾವಿಸಿದರು.

ಅದರಂತೆ ಪ್ರಗತಿಶೀಲ ಲೇಖಕರು ನಡೆದುಕೊಂಡರು. ಸಾಹಿತ್ಯವು ಅವರ ಬರವಣಿಗೆಗೆ ಒತ್ತಾಸೆಯಾಗಿತ್ತು. ಲೇಖಕರು ದುಡಿವವರ್ಗದ ಅಂಗವಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಬೀದಿಗಿಳಿಯುವ ವಿಚಾರ ಮಾಡಿದರು. ಇಂತಹ ಪರಸ್ಥಿತಿ ಆ ಸಂದರ್ಭದಲ್ಲಿ ನಿರ್ಮಾಣವಾಗುತಿತ್ತು. ಎರಡನೆಯ ಪ್ರಪಂಚ ಮಹಾಯುದ್ಧ ನಡೆದು ಜಗತ್ತಿನ ಪರಸ್ಥಿತಿ ತಂಬಾ ಅಧೋಗತಿಗೆ ಇಳಿದಿತ್ತು. ಆರ್ಥಿಕ ಬಿಕ್ಕಟ್ಟು ಸಂಭವಿಸಿತ್ತು. ಎಲ್ಲಲ್ಲೂ ನಿರುದ್ಯೋಗ ತಾಂಡವಾಡುತಿತ್ತು. ಇಂತಹ ದಯಾನೀಯ ಪರಸ್ಥಿತಿಯನ್ನು ದುರುಪಯೊಗ ಪಡಿಸಿಕೊಂಡ ಶ್ರೀಮಂತ ವರ್ಗ ಬಡವರನ್ನು ತಮ್ಮ ಸ್ವಾರ್ಥಕ್ಕೆ ಬಳಿಸಿಕೊಂಡಿತು. ಬಡವರನ್ನು ಮುನ್ನೆಡೆಸುವವರು ಯಾರು ಇದ್ದಿಲ್ಲ. ಆ ಕಾರ್ಯವನ್ನು ಸಾಹಿತಿಗಳು ಮಾಡಬೇಕೆಂದು ಅವರ ಉದ್ದಾರದಲ್ಲಿ ತೊಡಗಿದರು. ಸಾಹಿತಿಯದವನು ಬರವಣಿಗೆಯಲ್ಲಿ ತೊಡಗಿಕೊಂಡರೆ ಸಾಲದು. ಬಡವರಿಗೆ ಸಹಾಯ ಮಾಡಿ ಅವರಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ಮಾಡಬೇಕೆಂದು ಎಲ್ಲಾ ಬರಹಗಾರರ ಮೇಲೆ ಒತ್ತಡ ಹಾಕಿದರು. ಬರವಣಿಗೆಯಲ್ಲು ಬಡವರ ಬವಣೆಗಳನ್ನು ಬಿಂಬಿಸಬೇಕೆಂದು ತಿಳಿಸಿದರು. ಹೀಗಾಗಿ ಪ್ರಗತಿಶೀಲರ ಸಾಹಿತ್ಯದಲ್ಲಿ ಹೆಚ್ಚಾಗಿ ಬಡವರ ಕಷ್ಟಗಳ ಸಂಗತಿಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

1936 ರಲ್ಲಿ ಪ್ರಗತಿಶೀಲ ಸಂಘಟನೆ ಸಭೆ ಸೇರಿತು.ಈ ಸಭೆ ಭಾರತೀಯ ಸಾಹಿತ್ಯ ವಲಯದಲ್ಲಿ ಹೊಸ ಗಾಳಿ ಬೀಸಲು ಕಾರಣವಾಯಿತು. ಸಭೆಯ ಅಧ್ಯಕ್ಷತೆಯನ್ನು ವಾಸ್ತವವಾದಿ ಲೇಖಕರಾದ ಪ್ರೇಮಚಂದರ್ ವಹಿಸಿದ್ದರು. ಅಧ್ಯಕ್ಷೀಯ ಭಾಷಣವೇ ಪ್ರಗತಿಶೀಲರ ಪ್ರಣಾಳಿಕೆಯಾಯಿತು. `` ಇಲ್ಲಿಯತನಕವೂ ತನ್ನ ಪ್ರತಿಗಮಿಗಾಮಿ ಶಕ್ತಿಯಲ್ಲಿ ಬಂಧಿಸಿಕೊಂಡ ಅದರ ಸತ್ಯ ಮತ್ತು ಪ್ರಗತಿ ಸಂರಚನೆಯನ್ನೇ ನಾಶಗೊಳಿಸಿದ ಪ್ರತಿಗಾಮಿವರ್ಗದ ಕಡೆಯಿಂದ ಸಾಹಿತ್ಯವನ್ನು ಮತ್ತಿತರ ಕಲೆಯನ್ನು ಸೆರೆಬಿಡಿಸಬೇಕಾದುದೇ ಹಾಗೆ. ಅದು ಸತ್ಯವನ್ನು ಜನರ ಹೃದಯದ ಹತ್ತಿರ ತಂದು ತನ, ಹಿಂದುಳಿದಿರುವಿಕೆ ಮತ್ತು ರಾಜಕೀಯ ಕಟು ಪರಸ್ಥಿತಿಯ ಕುರಿತು ಗಂಭೀರ ಕಾಳಜಿ ಹೊಂದಿರಬೇಕೆAದು ನಾವು ನಂಬುತ್ತೇವೆ. ಯಾವುದು ನಮ್ಮನ್ನು ನಿರಾಶವಾದಿ , ನಿಷ್ಕಿçÃಯ ಮತ್ತು ವಿಚಾರ ಶೂನ್ಯತೆಯೆಡೆಗೆ ಒಯ್ಬದುಕಿನ ಉಜ್ವಲವಾದ ವಾಸ್ತವತೆಯನ್ನು ಚಿತ್ರಿಸುವಂತೆಯು ಭವಿಷ್ಯತ್ತನ್ನೂ ರುಪಿಸುವ ಜವಾಬ್ದಾರಿಯನ್ನು ಹೊರುವಂತೆಯು ಮಾಡಬೇಕಾಗಿದೆ. ಆದ್ದರಿಂದ ಇಂದಿನ ಭಾರತೀಯ ಸಾಹಿತ್ಯ ಜನರ ಮೂಲಭೂತ ಸಮಸ್ಯೆಗಳನ್ನು ಹೊಂದಿರಬೇಕಾಗಿದೆ. ಜನರ ಹಸಿವು, ಬಡಯುತ್ತದೆಯೋ ಅದೇ ಪ್ರತಿಗಾಮಿ ನಿಲುವು. ಅದನ್ನು ನಾವು ವೈಚಾರಿಕತೆಯಿಂದ ತಿರಸ್ಕರಿಸುತ್ತೇವೆ. ಯಾವುದು ನಮ್ಮ ವಿಮರ್ಶಕ ಬುದ್ಧಿಯನ್ನು ಹೊಡೆದೆಬ್ಬಿಸುತ್ತದೋ ಆ ಮೂಲಕ ನಮ್ಮ ಸಂಸ್ಥೆ, ಮಾಧ್ಯಮ, ಕಂದಾಚಾರ, ನಡೆ-ನುಡಿಗಳನ್ನು ಪರೀಕ್ಷಸ ಹಚ್ಚುತ್ತದೋ ಅದರಿಂದಾಗಿ ಅಥವಾ ಆ ಮುಖಾಂತರವಾಗಿ ಒಂದು ಸಂಘಟನೆಯ ಅಡಿಯಲ್ಲಿ ಒಂದು ಹೊಸಕಾಲ ಪರಿವರ್ತನೆಗೆ ಅನುವು ಮಾಡುತ್ತಾ ಮುಂದುವರಿವುದೋ ಆ ಸಿದ್ದಿಯನ್ನು ಪ್ರಗತಿಶೀಲತೆಯೆಂದು ಗ್ರಹಿಸುತ್ತೇವೆ ಮತ್ತು ಸ್ವೀಕರಿಸುತ್ತೇವೆ ಎಂಬುದಾಗಿದೆ.”5

ಸಾಹಿತ್ಯವು ಸಾಮಾಜಿಕ ಅಸಮಾನತೆ ಅನ್ಯಾಯ, ಬ್ರಷ್ಟತೆ, ಅಧಿಕಾದ ದುಷ್ಟತನ, ಚಾರಿತ್ರಿಕ ಶೋಷಣೆಯ ವಿರುದ್ಧವಿರಬೇಕೆಂಬ ನಿಲುವು ಪ್ರಗತಿಶೀಲರದಾಯಿತು. ಮಾರ್ಕ್ಸನ ಕ್ರಾಂತಿಯ ಪರಿಕಲ್ಪನೆ ಪ್ರಗತಿಶೀಲರಿಗೆ ಮಾದರಿಯಾಯಿತು. ಬಂಡವಾಳಶಾಹಿಯು ಬೆಳೆಯುತ್ತಾ ಹೋದಂತೆ, ದುಡಿಯುವ ವರ್ಗದ ಸಂಘಟನೆ ಗಟ್ಟಿಗೊಂಡು ವಿವೇಕ ಪಡಿದುಕೊಂಡು ಬಂಡವಾಳಶಾಹಿಯ ವಿರುದ್ಧ ಹೋರಾಡುತ್ತಾರೆ. ಆಗ ಕ್ರಾಂತಿ ಸಂಭವಿಸಿ ದುಡಿಯುವ ವರ್ಗದ ಜನರಿಗೆ ಅಧಿಕಾರ ಪ್ರಾಪ್ತವಾಗುತ್ತದೆ. ಸಮಾನತೆಯ ಸಮಾಜ ನಿರ‍್ಮಾಣವಾಗುತ್ತದೆ ಎಂಬ ಆಶಯವನ್ನು ಸಾಹಿತ್ಯದಲ್ಲಿ ತರಲು ಪ್ರಯತ್ನಿಸಿದರು. ಮಾರ್ಕ್ಸವಾದಕ್ಕೂ ಅಂಟಿಕೊಳ್ಳದೆ ಪ್ರಗತಿಪರವಾದುದನ್ನು ಪ್ರಗತಿಶೀಲರು ಒಪ್ಪಿಕೊಂಡರು. "ಮಾರ್ಕ್ಸ್ ವಾದವು ಒಂದು ತತ್ವಜ್ಞಾನ ಸಮಗ್ರ ಜೀವನವನ್ನು ನೋಡುವ ದೃಷ್ಟಿಕೋನ. ಬುದ್ಧಿಜೀವಿಗಳು ಆ ತತ್ವಜ್ಞಾನದಿಂದ ಪ್ರಭಾವಿತರಾಗಬಹುದು. ಆಗದೆ ಇರಬಹುದು. ಅದು ಅವರಿಗೆ ಸಂಬಂಧ ಪಟ್ಟ ವಿಷಯ.ಆದರೆ ಮಾಕ್ಸ್ವಾದಿಗಳು ಮಾತ್ರವೇ ಪ್ರಗತಿಶೀಲರು ಎನ್ನುವುದು ತಪ್ಪು. ವೈಜ್ಞಾನಿಕ ದೃಷ್ಟಿಕೋನವುಳ್ಳವರು, ಆದರ್ಶವಾದಿಗಳು ತಮ್ಮ ಮಾನವೀಯ ಬಾವನೆಗಳಿಂದ ಸತ್ಯ, ನಿಷ್ಟೆಯಿಂದ ಪ್ರಗತಿಶೀಲವಾದ ಸಾಹಿತ್ಯವನ್ನು ರಚಿಸುತ್ತಾರೆ”6

ಪ್ರಗತಿಶೀಲರು 1946ರಲ್ಲಿ ನಡೆದ ಧಾರವಾಡದ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಸಾಹಿತ್ಯಿಕ ನಿಲುವುಗಳನ್ನು ಸ್ಪಷ್ಟಪಡಿಸಿದರು.`` ಸಾಹಿತ್ಯವೆಂಬ ಮಡಿಕೋಟೆಯನ್ನು ಕಟ್ಟಿಕೊಂಡು ಸುತ್ತಮುತ್ತಲಿನ ಜಗತ್ತಿನ ಹಾಹಾಕಾರದ ಮೇಲೆ ಅವಕುಂಠನ ಹಾಕಿ ತನ್ನ ಭಾವ ಪ್ರಪಂಚದಲ್ಲಿ ಮೈಮರೆಯುವ ಸಾಹಿತಿ ತನ್ನ ಅಥವಾ ದೇಶದ ಹಿತವನ್ನು ಸಾಧಿಸಲಾರ. ಇವರು ಮಧ್ಯಮ ವರ್ಗದ ಆಸೆ, ಕೋಪ, ತಾಪ, ತೃಪ್ತಿಗಳನ್ನಷ್ಟೇ ಸೃಷ್ಟಿಸುತ್ತಾರೆ. ವರ್ಗವೈಷಮ್ಯವನ್ನು ಅವರು ಕೆರಳಿಸುವದಿಲ್ಲ. ಆದ್ದರಿಂದ ಇಂದಿನ ಸಾಹಿತ್ಯ ಬದಲಾಗಬೇಕಿದೆ. ಒಂದು ವರ್ಗಕ್ಕೆ ಅನ್ಯಾವಗುತ್ತಿದ್ದರೆ ಸಾಹಿತಿ ಸುಮ್ಮನೆ ಕೂಡಬಾರದು. ತಕ್ಷಣ ಅದಕ್ಕೆ ಸ್ಪಂದಿಸಬೇಕು. ಅನ್ಯಾಯ, ಕ್ರೌರ್ಯ, ದಬ್ಬಾಳಿಕೆ, ಶೋಷಣೆ ಯಾರಲ್ಲಿ ಕಂಡುಬAದರು ಸಾಹಿತಿ ಸಿಡಿದೇಳಬೇಕು. ಎಲ್ಲಾ ಸಾಹಿತ್ಯ ಕಲೆಗಳ ಉಗಮಕ್ಕೆ ಸಾಮನ್ಯ ಜನತೆಯೆ ಮೂಲ. ಉತ್ತಮ ಕಲೆಯ ತಾಯಿಬೇರು ಸಾಮನ್ಯ ಜನತೆಯಲ್ಲಿಯೇ ಅಡಗಿದೆ. ನವೋದಯದವರು ಜನಪದವನ್ನು ಕಡೆಗಣಿಸಲಿಲ್ಲ. ಅವರೊಂದಿಗೆ ಪೂರ್ಣ ಬೆರೆಯಲಿಲ್ಲ. ಅವರು ನಿರ್ವಿಣ್ಣರಾಗಿ ಸುಮ್ಮನೆ ಕುಳಿತರು. ಪರಂಪರಾಗತ ಮೌಢ್ಯವನ್ನು ಖಂಢಿಸಬೇಕು. ದುರ್ಬಲತೆಯಿಂದ ಶಾಂತಿ ಲಭಿಸುವದಿಲ್ಲ.ನ್ಯಾಯ ದೊರಕುವದಿಲ್ಲ. ಕ್ರಾಂತಿಯಿಂದ ಶಾಂತಿ ಸಾಧ್ಯವಾಗುತ್ತದೆ. ಈಗ ಜಗತ್ತಿನಲ್ಲಿ ಪ್ರಜಾಸಾಮ್ಯ, ಬಂಡವಾಳಸಾಮ್ಯ ಎಂಬ ಎರಡು ಪಕ್ಷಗಳು ಉದಯಿಸುತ್ತಿವೆ. ಇವೇ ಎರಡು ಜಾತಿಗಳು. ಇವುಗಳಲ್ಲಿ ಸಾಹಿತಿ ಯಾವುದರೊಂದಿಗೆ ಗುರಿತಿಸಿಕೊಳ್ಳುತ್ತಾನೆ ಎಂಬುದು ಮುಖ್ಯ. ಸಾಹಿತ್ಯ ವಿಲಾಸದ ಸಾಧನವಲ್ಲ. ದೇಶೋದ್ಧಾರಕ್ಕೆ, ಆತ್ಮೋದ್ಧಾರಕ್ಕೆ ಸಾಧನವಾಗಿರುವ ಗಾಯಿತ್ರಿಯಿದು. ಸಾಹಿತ್ಯ ದುರ್ಬಲರ, ದಲಿತರ, ಬಡವರ ರಕ್ಷಾಕವಚವಾಗಬೇಕು.” 7

ಪ್ರಗತಿಶೀಲರ ಒಟ್ಟು ನೋಟವನ್ನು ಗಮನಿಸಿದಾಗ ಅನೇಕ ಮಿತಿಗಳು ಕಂಡುಬರುತ್ತವೆ. ಅದು ಮುಖ್ಯವಾಗಿ ಬರಹಕ್ಕಿರುವ ಸಾಹಿತ್ಯಕ ಮೌಲ್ಯವನ್ನು ಕುರಿತು. ಬರಹ ವರದಿಯ ಮಾದರಿಯನ್ನು ಪಡೆಯದೆ ಅದು ಕಲೆಯ ರೂಪವನ್ನು ಹೊಂದಿರಬೇಕು ಎಂಬುದು ಮುಖ್ಯವಾದ ಅಭಿಪ್ರಾಯ. ಕಲೆಗಿಂತ ಬದುಕು ಮುಖ್ಯ ಅದನ್ನು ಬಿಂಬಿಸುವುದು ಜನರಿಗೆ ತಲುಪಿಸುವುದು ಆ ಮೂಲಕ ಜನರಲ್ಲಿ ಪ್ರಜ್ಞೆಯನ್ನು ಮೂಡಿಸುವುದು ಮುಖ್ಯ ಎಂದು ವಾದಿಸುವವರು ಉಂಟು. ಈ ಚರ್ಚೆ ನಡೆಯುತ್ತಲೇ ಇದೆ. ಈ ಅಂಶವನ್ನು ಕೇಂದ್ರವಾಗಿಟ್ಟುಕೊಂಡು ಪ್ರಗತಿಶೀಲ ಸಾಹಿತ್ಯವನ್ನು ವಿಮರ್ಶೆ ಮಾಡುವ ಮನೋಭಾವಗಳು ಕನ್ನಡದಲ್ಲಿ ನಡೆದಿವೆ. ಈ ಚರ್ಚೆ ನಡೆಯುವಾಗಲೆಲ್ಲ ನಿರಂಜನರ ಸಾಹಿತ್ಯವನ್ನು ಕಲೆಯ ಮತ್ತು ಮೌಲಿಕ ನೆಲೆಯಲ್ಲಿ ನೋಡುವದನ್ನು ಕಾಣುತ್ತೇವೆ. ನಿರಂಜನರು ಕಲೆ ಮತ್ತು ಬದುಕಿನ ಆಯಾಮಗಳನ್ನು ಬಹಳ ಯಶಸ್ವಿಯಾಗಿ ತಮ್ಮ ಬರಹದಲ್ಲಿ ಬಿಂಬಿಸಿದವರು. ಈ ಕಾರಣಕ್ಕಾಗಿ ಅವರು ಪ್ರಗತಿಶೀಲರಲ್ಲಿ ವಿಭಿನ್ನರಾಗಿ ನಿಲ್ಲುತ್ತಾರೆ. ಪ್ರಗತಿಶೀಲರ ಮಿತಿಯನ್ನು ದಾಟಿ ಮುನ್ನೆಡೆಯುತ್ತಾರೆ. “ನಿರ್ದಿಷ್ಟ ಸಾಹಿತ್ಯ ಪ್ರಕಾರವೊಂದು ತನ್ನದೇ ಆದ ರೀತಿಯಲ್ಲಿ ಬೆಳೆಯುತ್ತ ಒಂದು ಹಂತವನ್ನು ತಲುಪಿರುವಾಗ, ಅದಕ್ಕಿಂತಲೂ ಹಿಂದಿನ ಹಂತಗಳಲ್ಲಿ ರಚಿತವಾದ ಕೃತಿಗಳು ತಮ್ಮ ಜೀವಂತಿಕೆಯನ್ನು, ಸಾಂದರ್ಭಿಕತೆ(ರಿಲೆವೆನ್ಸ)ಯ ಬಗೆ ಹೇಗೆ ಎಂಬುದು ಮಹತ್ವದ ಪ್ರಶ್ನೆ. ಕೇವಲ ಸಮಕಾಲಿನ ಪ್ರಸ್ತುತತೆ ಮತ್ತು ತಾಂತ್ರಿಕ ಪರಿಣತಿಗಳನ್ನು ಬಯಸುವ ವಿಮರ್ಶಕರು ಹಿಂದಿನ ಕೃತಿಗಳಿಗೆ ಅನ್ಯಾಯ ಮಾಡುತ್ತಿರುತ್ತಾರೆ. ಇಷ್ಟಕ್ಕೂ ಸಾಹಿತ್ಯಾಸಕ್ತನೊಬ್ಬನು ಬೇರೆ ಬೇರೆ ಕಾಲಖಂಡಗಳಲ್ಲಿ ರಚಿತವಾದ ಕೃತಿಗಳನ್ನು ಏಕಕಾಲದಲ್ಲಿ ಓದುವ ಅವಕಾಶ ಪಡೆಯುವದರಿಂದ, ಅವನಿಗೆ ಕೃತಿ ರಚನೆಯ ಕಾಲದ ಐತಿಹಾಸಿಕ ಸಂದರ್ಭಕ್ಕಿಂತ ಆ ಕೃತಿಯ ಸಾಹಿತ್ಯಿಕ ಮೌಲ್ಯವೇ ಹಚ್ಚು ಮುಖ್ಯವಾಗುತ್ತದೆ. ಮನುಷ್ಯನ ಅನುಭವ, ಅನಿಸಿಕೆ ಮತ್ತು ಭಾವನೆಗಳ ಲೋಕವನ್ನು ಕಲೆಯಾಗಿ ಕಟ್ಟುವ ಪ್ರಕ್ರಿಯೆಯಲ್ಲಿ ಸಾಹಿತಿ ಪಡೆದಿರುವ ಯಶಸ್ಸು ಮಾತ್ರ ನಮಗೆ ಮುಖ್ಯ. ಅವನ ಕೃತಿಗಳು ಆ ಕಾಲದ ಸಾಹಿತ್ಯಿಕ ಗ್ರಹಿಕೆಗಳಿಗಿಂತ ತಾಂತ್ರಿಕ ಆವಿಷ್ಕಾರಗಳಿಂದ ಪರಿಮಿತವಾಗಿರುತ್ತದೆ. ಹಲವು ಬಾರಿ ಅವನ್ನು ಮೀರಿ ನಿಲ್ಲುತ್ತವೆ. ಅದೇ ರೀತಿಯಲ್ಲಿ ಪ್ರತಿಯೊಂದು ಯುಗವೂ ಕೂಡ ತನಗೆ ವಿಶಿಷ್ಟಟವಾದ ಸಂಗತಿಗಳ ಸಾಹಿತ್ಯಕ ಅಭಿವ್ಯಕ್ತಿಗೆ ಅತ್ಯಂತ ಸೂಕ್ತವಾದ ರೂಪವನ್ನು, ತಾಂತ್ರಿಕ ಸಲಕರಣೆಗಳನ್ನು ರೂಪಿಸಿಕೊಳ್ಳುತ್ತದೆಯೆನ್ನುವ ಮಾತಿನಲ್ಲಿಯೂ ಸಾಕಷ್ಟು ಸತ್ಯವಿದೆ.”8. ಈ ಮಾತುಗಳು ನಿರಂಜನರ ಸಾಹಿತ್ಯಕ್ಕೆ ಅನ್ವಯಿಸುತ್ತದೆ

ನಿರಂಜನರು ಜನಪರವಾದ ಸಾಹಿತ್ಯವನ್ನು ಸೃಷ್ಟಿಸುವ ಆಶಯವನ್ನು ಹೊಂದಿದ್ದರೂ ಅವರು ಕಲಾತ್ಮಕತೆಗೂ ಮಹತ್ವವನ್ನು ನೀಡಿದರು. ಅವರು ಬರಹಗಾರರು ಮಾತ್ರವಾಗಿರದೆ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತರಾಗಿದ್ದರು. ಅವರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಕಂಡವರಾಗಿದ್ದರು. ಆದ್ದರಿಂದ ಅವರಿಗೆ ಜನರ ಆಳದ ನಾಡಿಮಿಡಿತದ ಅರಿವು ಇತ್ತು. ಅವರ ಬರಹದಲ್ಲಿ ಕಾಳಜಿಯ ಕ್ರಿಯೆಗಳು ತೋರಿಕೆಯ ವಾಚ್ಯದ ನೆಲೆಯನ್ನು ಪಡೆಯುದಿಲ್ಲ. ಅವು ನೈಜ ಮತ್ತು ಮಾನವೀಯ ನೆಲೆಯನ್ನು ಪಡೆದಿವೆ. ಅದಕ್ಕೆ ಅವರ ಬದುಕಿನಲ್ಲಾದ ಬದಲಾವಣೆಗಳು ಕೂಡ ಕಾರಣವಾಗಿರುದನ್ನು ಗಮನಿಸಬೇಕು. “ನಿರಂಜನರ ಬದುಕಿನಲ್ಲಿ ಹಲವು ಮಹತ್ವದ ಘಟ್ಟಗಳಿದ್ದು, ಅವು ಅವರ ಬರವಣಿಗೆಯ ಮೇಲೆ ಪ್ರಭಾವ ಬೀರಿವೆ ಎಂಬುದು ನನ್ನ ಅಭಿಪ್ರಾಯ. ಅವರು ಕಮ್ಯುನಿಷ್ಟ ಪಕ್ಷದ ಸಕ್ರಿಯ ಸದಸ್ಯರಾಗಿದ್ದು, ಭೂಗತವಾಗಿದ್ದು, ಜನಶಕ್ತಿ ಸಂಪಾದಕರಾಗಿದ್ದುದು 1941ರಿಂದ 1951ರ ವರೆಗಿನ ಅವಧಿಯಲ್ಲಿ. ಎಂದರೆ ಹದಿನೆಂಟರಿಂದ ಇಪ್ಪತ್ತರ ವಯಸ್ಸಿನಲ್ಲಿ, ಹಲವು ಕಾರಣಗಳಿಂದ ರಾಜಕೀಯ ಚಟುವಟಿಕೆಗಳಿಂದ ಬಿಡುಗಡೆ ಪಡೆದ ನಂತರ ಎಂದರೆ 1985ರಲ್ಲಿ ಅವರ ಮೊದಲ ಕಾದಂಬರಿ ಪ್ರಕಟವಾಯಿತು (ವಿಮೋಚನೆ). ಆಗ ಅವರಿಗೆ ಮುವತ್ತು ವರ್ಷ. ಅದರ ನಂತರ ಅವರು ರಾಜಕೀಯ ಸಿದ್ದಾಂತವೊಂದರ ಬೆಂಬಲಿಗರಾಗಿ ಉಳಿದರೆ ವಿನಾ, ಸಾಹಿತಿಗಳಾದರೆ ವಿನಾ ರಾಜಕೀಯ ಹೋರಾಟಗಾರರಾಗಲಿಲ್ಲ. ಆದ್ದರಿಂದ ಕ್ರಾಂತಿ ಪರವಾದ, ಜನತೆಯ ಹೋರಾಟವನ್ನು ಸಮರ್ಥಿಸುವ ಅವರ ಕೃತಿಗಳೆಲ್ಲವೂ ಅವರು ಮೂವತ್ತನೆಯ ವಯಸ್ಸಿನಲ್ಲಿ ರಾಜಕೀಯ ನಿವೃತ್ತಿ ಪಡೆದ ನಂತರವೇ ರಚಿತವಾದವು. ಇದು ತಪ್ಪೆಂದು ನಾನು ಹೇಳುತ್ತಿಲ್ಲ. ಇದು ಪ್ರಾಯಶಃ ಆ ಕಾಲದ ವಾಮಪಂಥೀಯ ಹೋರಾಟಗಳ ವಸ್ತುಸ್ಥಿತಿಯನ್ನು ಪ್ರತಿಫಲಿಸುತ್ತಿರಬಹುದು. ಆದರೆ ತನ್ನ ಬದುಕಿನ ಕೊನೆವರೆಗೂ ಹೋರಾಟದಲ್ಲಿ ನಿರತನಾಗಿದ್ದ ಪಾಬ್ಲೋ ನೆರುದಾ ಅಂತವರ ಬರವಣಿಗೆಗೂ ಇದಕ್ಕೂ ವ್ಯತ್ಯಾಸ ಇದೆಯೆಂದು ನನಗೆ ತೋರುತ್ತದೆ.”9

ನಿರಂಜನರು ಬದುಕನ್ನು ಸೌಂದರ‍್ಯದ ನೆಲೆಯಲ್ಲಿ ಕಾಣುವ ಕಾದಂಬರಿಯನ್ನು ಬರೆದರು. ಅವರ ಬದುಕಿನ ಸೌಂದರ‍್ಯವೇ ಬೇರೆ. ಶೋಷಣೆಗೆ ಒಳಗಾಗುವ ವ್ಯವಸ್ಥೆಯನ್ನು ಮಾನವೀಯ ನೆಲೆಯಲ್ಲಿ ಕಾಣುವುದು. ಶೋಷಣೆಗೆ ಒಳಗಾಗುವ ಬದುಕನ್ನು ಹೋರಾಟದ ಮೂಲಕ ಬದಲಾಯಿಸುವುದು ಅವರಿಗೆ ಮುಖ್ಯವಾದರೂ ಸಾಹಿತ್ಯ ರಚನೆಯಲ್ಲಿ ಮಾತ್ರ ಕಲಾತ್ಮಕ ಅಂಶವನ್ನು ಬದಿಗಿಟ್ಟು ಜನಪ್ರಿಯ ಮಾದರಿಯನ್ನು ಅನುಸರಿಸಿ ಸಾಹಿತ್ಯವನ್ನು ಬರೆಯಲಿಲ್ಲ. ಖಚಿತ ಸಮಾಜವಾದಿ ನಿಲುವುಗಳನ್ನು ಸ್ಪಷ್ಟವಾಗಿ ಸಾಹಿತ್ಯದಲ್ಲಿ ತರುವ ಪ್ರಯತ್ನ ಮಾಡಿದರು. ಅದು ಹೇಳಿಕೆಯ ರೀತಿಯಲ್ಲಿ ಇರದೆ ಸೈದ್ಧಾಂತಿಕ ಸ್ವರೂಪವನ್ನು ಪಡೆದುಕೊಂಡಿತ್ತು. ಮುಖ್ಯವಾಗಿ ಮಾನವನ ಶೋಷಣೆಯನ್ನು ಚಾರಿತ್ರಿಕ ಸಂಗತಿಗಳಲ್ಲಿ ಶೋಧಿಸುವ ಚಿಂತನೆಯನ್ನು ಅವರ ಬರಹಗಳಲ್ಲಿ ಕಾಣುತ್ತೇವೆ. ಶೋಷಣೆಯ ಕುರಿತು ಯೋಚಿಸುವ ವಿಧಾನದಲ್ಲಿಯೇ ಸೌಂದರ್ಯದ ಮಾದರಿಯನ್ನು ಕಾಣುವ ಮನೋಭಾವ ನಿರಂಜನರದು.``ಮಾನವನ ಜೀವನವನ್ನು ನಿಯಂತ್ರಿಸುತ್ತಿರೋ ಶಕ್ತಿಗಳು ಯಾವುವು? ಈ ಪ್ರಶ್ನೆಯತ್ತ ನಿರಂಜನರ ಗಮನ. ಅದಕ್ಕೆ ಅವರು ಕಂಡುಕೊಂಡ ಸಮಾಜದ ವಾಸ್ತವ ಶಕ್ತಿಗಳ- ಶೋಷಣೆ ದಬ್ಬಾಳಿಕೆಗಳ ಬಗ್ಗೆ ಕಾನ್ಪರೇಷನ್ ಮಾಡಿದರು. ಹಾಗೆ ಕನ್ನಡ ಕಾದಂಬರಿಯಲ್ಲಿ ಮೊದಲ ಬಾರಿಗೆ ಕನ್ನಡ ಕಾದಂಬರಿಯಲ್ಲಿ ಮೊದಲ ಬಾರಿಗೆ ಸಾಮಾಜಿಕ ಪ್ರವಾದಿಯ ಧ್ವನಿ ಕೇಳಿಸಲು ಆರಂಭವಾಯಿತು. ಕಾರಂತ, ಪುಟ್ಟಪ್ಪರಿಗೆ ಶೈಲಿಯಲ್ಲಿ ಸರಳವಾದ ಒಂದು ಬಿಡುವು ಇದೆ. ಒಂದು ಮಳೆಗಾಲ, ಮಳೆಯ ರಾತ್ರಿ, ಬೆಳದಿಂಗಳ ರಾತ್ರಿ, ಸುರ‍್ಯೋದಯಗಳನ್ನು ಏನು ಕೆಲಸವಿಲ್ಲದ, ಸೈಂರ‍್ಯ ಪ್ರಜ್ಞೆಯುಳ್ಳ ಒಬ್ಬ ಸಾಮನ್ಯನಂತೆ ಅವರು ವರ್ಣಿಸಬಲ್ಲರು.( ಕಾರಂತರ ಬೆಟ್ಟದಜೀವ, ಮರಳಿ ಮಣ್ಣಿಗೆ ಕಾದಂಬರಿಯನ್ನು ಲಕ್ಷಿಸಿ ಈ ಮಾತು) ನಿರಂಜನಿಗಾದರೋ ಈ ರೀತಿಯ ಬಿಡಿವು ಇಲ್ಲ. ಅವರಿಗೆ ಯಾವ ರೀತಿಯ ಒಂದು ಆತುರ, ಒಂದು ಆರ್ತತೆ ಇದೆಯೆಂದರೆ ಮನುಷ್ಯ ಯಾಕೆ ಹೀಗಾಗಿದ್ದಾನೆ ......... ಎಂಬುದೇ ಆ ತುಡಿತ.” 10

ನಿರಂಜನರ ಬರವಣಿಗೆಯಲ್ಲಿ ನಿರಂತರ ಹರಿಯುವ ಬದುಕನ್ನು ಹಿಡಿದಿಡುವ ಅಖಂಡತೆಯನ್ನು ಕಾಣುತ್ತೇವೆ. ಅದು ಹುಸಿ ಹಸಿಯಾದ ಬರವಣಿಗೆಯಲ್ಲ. ಬದುಕನ್ನು ಹಸನುಗೊಳಿಸುವ ಬದಲಾಯಿಸುವ, ಶೋಷಣೆಗೆ ಈಡುಮಾಡುವವರ ಮನೋಧರ್ಮವನ್ನು ಬಯಲುಗೊಳಿಸುವ ಚಿಂತನೆ ಅವರದು. ಯಾವ ಗೊಂದಲಗಳಿಲ್ಲದೆ ಬದುಕಿನುದ್ದಕ್ಕೂ ಹೋರಾಟವನ್ನು ವಾಸ್ತವಗೊಳಿಸುವ ಆಲೋಚನೆಯನ್ನು ಮಾಡುತ್ತಲೇ ಬಂದಿದ್ದಾರೆ. ಇದು ಅವರ ಬರವಣಿಗೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಹೊಸ ಬರಹಗಾರಿರಿಗೆ ಮಾದರಿಯೊಂದನ್ನು ಹಾಕಿಕೊಟ್ಟಿದೆ. "ನಿರಂಜನರ ಬರವಣಿಗೆಯ ರೀತಿ ಯಾವುದೆಂದರೆ ಅವರ ಕೊನೆಯ ಗಿರಾಕಿಯ ಬಗ್ಗೆ ಮಾತಾಡುವಾಗ ಆ ಇಡೀ ಕತ್ತೆಗೆ ಮೃತ್ಯಂಜಯದಂತ ಒಂದು ಆಕೃತಿ ಇದೆ. ಒಂದು ಸಮಾಜವಾದಿ ಪುರಾಣದ ಆಕೃತಿ ಇದೆ ಅನ್ನುವುದು ತಿಳಿಯುತ್ತದೆ. ಸಾಹಿತ್ಯವನ್ನು ಅದರ ವಾಸ್ತವತೆಯಿಂದ ಮೆಲೆತ್ತಿ ಮಹಾನ್ ರೂಪಕವಾಗಿ ಮಿತ್ ಆಗಿ ಮಹೋನ್ನತಿಯನ್ನಾಗಿ ಬರೆಯುವ ಛಲ ಇದೆ. (ಸಮಾಜವಾದಿ ಬರಹಗಾರರಿಗೆಲ್ಲ ಇದು ಸಾಮನ್ಯ- ಯುರೋಪ್ ನಲ್ಲಿ ಗಾರ್ಕಿಯಂತವರು ಇತ್ಯಾದಿ.) ನಿರಂಜನರ ಈ ಸಮಾಜವಾದಿ ಛಲಕ್ಕಾಗಿ ಅವರನ್ನು ಅಭಿನಂದಿಸಬೇಕಾಗಿದೆ. ಕನ್ನಡ ಸಾಹಿತ್ಯದಲ್ಲಿ ಈ ರೀತಿಯ ಅಖಂಡ ಶೈಲಿ ಇರುವವರು ನಿರಂಜನೊಬ್ಬರೆ. ಆದುದರಿಂದ ಸಮಾಜಜವಾದದಲ್ಲಿ ಆಸಕ್ತಿ ಇರುವ ತರುಣ ಲೇಖಕರು ಅವರಿಂದ ಕಲಿಯಬೇಕಾದುದನ್ನೆಲ್ಲ ಕಲಿತು ಅವರಿಗಿಂತ ಭಿನ್ನವಾಗಿ ಬರೆಯಬೇಕು.” 11

ನಿರಂಜನರು ತೀಕ್ಷ್ಣಮತಿಗಳಾಗಿದ್ದರಿಂದ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದರು. ಸಾಹಿತ್ಯಕ ಬದಲಾವಣೆಯನ್ನು ಗಮನಿಸುತ್ತಿದ್ದರು. ಬರವಣಿಗೆಯಲ್ಲಿ ಒಂದೇ ತೆರನಾದ ಮಾರ್ಗವನ್ನು ಅನುಸರಿಸುತ್ತಿರಲಿಲ್ಲ. ಹೊಸ ಪ್ರಯೋಗಗಳನ್ನು ಮಾಡುತ್ತಿದ್ದರು. "ಕಾಲು ಶತಮಾನದಿಂದ ಒಂದು ಸಾಹಿತ್ಯ ಪ್ರಕಾರವನ್ನು ಬೆಳೆಸುತ್ತಾ ಬಂದಿರುವ, ಸಾಹಿತಿಯೊಬ್ಬನು ಆ ಪ್ರಕಾರದಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಆವಿಷ್ಕಾರಗಳನ್ನು ಎಚ್ಚರದಿಂದ ಗಮನಿಸಿ, ಅವಕ್ಕೆ ತನ್ನ ಬರವಣಿಗೆಯಲ್ಲಿ ಪ್ರತಿಸ್ಪಂದಿಸಬೇಕಾಗುತ್ತದೆ. ಹಾಗಲ್ಲದೆ ಅವನು ತನ್ನ ಸುತ್ತಾ ಅನಾಸಕ್ತಿ, ಹಟಮಾರಿತನ ಮತ್ತು ತಿರಸ್ಕಾರಗಳ ಗೋಡೆಯನ್ನು ಕಟ್ಟಿಕೊಂಡು ಬದಲಾಗದೆ ಉಳಿದುಬಿಟ್ಟರೆ ಅವನ ಬರವಣಿಗೆಯು ಪುನರುಕ್ತಿ ಪರಂಪರೆಯಾಗಿಬಿಡುತ್ತದೆ. ಸರ್ವಮಂಗಳ, ಸ್ವರೂಪ, ಮತ್ತು ಬಿರುಕು ಕಾದಂರಿಗಳನ್ನು ಬರೆದವರು, ಎಷ್ಟೋ ಕಾಲದ ನಂತರ ವೈಶಾಖ, ಕಾರ್ವಾಲೋ, ಮುಸ್ಸಂಜೆಯ ಕಥಾಪ್ರಸಂಗಳಂತೆ ಮಹತ್ವದ ಕೃತಿಗಳನ್ನು ರಚಿಸಿದ್ದು ಈ ಬಗೆಯ ಪ್ರತಿಸ್ಪಂದನಕ್ಕೆ ಸಾಕ್ಷಿ. ಅದೇ 1980ರ ಮೃತ್ಯಂಜಯಕ್ಕೂ 1954ರ ಚಿರಸ್ಮರೆಣೆಗೂ ಇರುವ ವ್ಯತ್ಯಾಸ. ಕಾಲ, ದೇಶ, ಗಾತ್ರ ಮತ್ತು ವಿವರಗಳಲ್ಲಿ ಮಾತ್ರವೆನಿಸಿದರೆ ಅದು ಒಂದು ಬಗೆಯ ಸ್ಥಗಿತ ಮನೋಧರ್ಮಕ್ಕೆ ಸಾಕ್ಷಿಯಾಗುತ್ತದೆ. ಹರಿಯುವ ನದಿಯ ಬದಿಯಲ್ಲಿ ಹರಿಯದೆ ನಿಂತ ನೀರು ಆರೋಗ್ಯದಿಂದಲೇ ವಂಚಿತವಾಗುತ್ತದೆ. ತನ್ನ ವಿಕಸನದ ಸಾಧ್ಯತೆಗಳನ್ನು ಮೊಟಕು ಮಾಡಿಕೊಂಡಿರುತ್ತದೆ. ಆದ್ದರಿಂದ ಚಿರಸ್ಮರಣೆಯು ಯಾವ ಕಾರಣಗಳಿಗೋಸ್ಕರ, ಹೇಗೆ ಮುಖ್ಯ ಅದ್ವಿತೀಯ ಎನಿಸಿತೋ ಅದೇ ಕಾರಣಗಳಿಗೋಸ್ಕರ ಮೃತ್ಯುಂಜಯ ಕೂಡ ಮುಖ್ಯವಾಗುತ್ತದೆ.”12

ಅವರ ಸಾಹಿತ್ಯಕ ಸಾಧನೆಯನ್ನು ಪ್ರಗತಿಶೀಲರೊಂದಿಗೆ ಹೋಲಿಸಿದರೆ ಬಿನ್ನ ನೆಲೆಗಳನ್ನು ಕಾಣುತ್ತೇವೆ. ಕೇವಲ ಸಿದ್ಧಾಂತಕ್ಕೆ ಮಾತ್ರ ತಮ್ಮನ್ನು ಮತ್ತು ಸಾಹಿತ್ಯವನ್ನು ಸೀಮಿತಗೊಳಿಸಲಿಲ್ಲ. ಬದುಕಿನ ಅನಂತವನ್ನು ಶೋಧಿಸುವ ಪ್ರಯತ್ನ ಮಾಡಿದರು. ಬದುಕಿನ ಹಲವು ಆಯಾಮಗಳನ್ನು ತಮ್ಮ ಬರಹಗಳಲ್ಲಿ ತಂದರು. ಸಾಹಿತ್ಯವನ್ನು ತಮ್ಮತನದ ಪ್ರದರ್ಶನಕ್ಕೆ ಬಳಸಿಕೊಳ್ಳಲಿಲ್ಲ. ಬಹಳ ಗಂಭೀರವಾಗಿ ಸಾಹಿತ್ಯ ಚಿಂತನೆಯನ್ನು ಮಾಡಿದರು. "ಪ್ರಗತಿಶೀಲ ಸಾಹಿತ್ಯಕ್ಕೂ ನಿರಂಜನರ ಕಾದಂಬರಿಗಳಿಗೂ ಇರುವ ಸಂಬಂಧವನ್ನು ಕುರಿತು ಒಂದೆರಡು ಮಾತುಗಳು ಅಗತ್ಯ. 1943ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ತಾವು ಶೀ ಅ.ನ. ಕೃ. ಜೊತೆಯಲ್ಲಿ ಪ್ರಗತಿಶಿಲತೆಯ ತುತ್ತೂರಿ ಊದಿದೆವೆಂದು ನಿರಂಜನರು ಹೇಳುತ್ತಾರೆ. ಆಗ ಅವರಿಗೆ ಇಪ್ಪತ್ತು ವರ್ಷ. 1944ರಲ್ಲಿ ಎಂದರೆ ಒಂದು ವರ್ಷದ ನಂತರ, “ ಪ್ರಗತಿಶೀಲ ಸಾಹಿತ್ಯಾಸಕ್ತರ ಸಭೆಯಲ್ಲಿ ಶ್ರೀ ಅ.ನ.ಕೃ. ಅವರ ಕಾರ್ಯವಿಧಾನವನ್ನು ಟೀಕಿಸಿ ಭಾಷಣ ಮಾಡುತ್ತಾರೆ. 1945ರಲ್ಲಿ ಶ್ರೀ ಅ.ನ.ಕೃ. ಬಳಗದವರಿಗೆ ಅಸ್ಪೃಶ್ಯರಾಗುತ್ತಾರೆ. ಹೀಗೆ ನಾವು ಪ್ರಗತಿಶೀಲ ಸಾಹಿತ್ಯವೆಂದು ಕರೆಯುವ ಚಳುವಳಿಯ ಮೊದಲ ಹಂತದಿಂದಲೂ, ನಿರಂಜನರದು ಭಿನ್ನವಾದ ಧೋರಣೆಯಾದುದರಿಂದ, ಅವರ ಕಾದಂಬರಿಗೆ ಅ.ನ.ಕೃ ಅನುಕರಣೀಯ ಮಾದರಿಯೆನಿಸುವದಿಲ್ಲ. ತಮ್ಮ ಮೊದಲ ಕಾದಂಬರಿ ಪ್ರಕಟಣೆಗಿಂತಲೂ ಮುಂಚಿನಿಂತಲೂ ಅವರು ಬೆಳಿಸಿಕೊಂಡ ವಿಮರ್ಶಾತ್ಮಕ ನೆಲೆಯು ನಿರಂಜನರು ಪ್ರಗತಿಶೀಲರ ನಡುವೆ ವಿಶಿಷ್ಟರಾಗಲು ಕಾರಣವಾಯಿತು. ಅಲ್ಲದೆ ಹಿಂಧೂಧರ್ಮದ ತಾತ್ವಿಕ ಮೌಲ್ಯಗಳ ಕಡೆಗೆ ಅ.ನ.ಕೃ. ತಾ.ರ.ಸು. ಅವರ ಆಸಕ್ತಿಯು ಜೀವಂತವಾದರೆ ನಿರಂಜನರೂ ಇಂದಿನವರೆಗೂ ಕಟ್ಟಾ ನಾಸ್ತಿಕರಾಗಿಯೇ ಉಳಿದಿದ್ದಾರೆ. ಅವರ ಯಾವ ಬರಹದಲ್ಲಿಯೂ ದೇವರು, ಧರ್ಮಗಳೂ ಮಾನವೀಯ ಸಂಬಂಧಗಳಿಗಿಂತ ಮುಖ್ಯವಾಗುವದಿಲ್ಲ. ಇಲ್ಲಿಯೇ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಪ್ರಗತಿಶೀಲರ ಕಾಮಪ್ರಚೋದಕ ಬರವಣಿಗೆಯ ವಿರುದ್ಧ ನಿರಂಜನರು ವ್ಯಕ್ತಪಡಿಸಿದ ತೀವ್ರ ಪ್ರತಿಭಟನೆ. ಅವರು ಅದನ್ನು ಸ್ವಚ್ಚಂದತೆಗೆ ಲೈಸೆನ್ಸ್ ಎಂದು ಕರೆದರು. ಪ್ರಗತಿಶೀಲರ ಕಮ್ಯೂನಿಸ್ಟ್ ವಿರೋಧವನ್ನು ಖಂಡಿಸುವದರ ಮೂಲಕ ಅವರು ಇನ್ನಷ್ಟು ಏಕಾಂಗಿಯಾದರು. ಹೀಗೆ ಬುದ್ದಿಪೂರ್ವಕವಾಗಿ ಬೆಳಿಸಿಕೊಂಡ ವಿರೋಧ ಮತ್ತು ಭ್ರಮನಿರಸನಗಳೇ ಅವರ ಕಾದಂರಿಗಳ ಹಲವು ಒಳ್ಳೆಯ ಗುಣಗಳಿಗೆ ಕಾರಣವಾಗುವುದನ್ನು ಗಮನಿಸಬಹುದು.’’13 ಬರಹ ಮತ್ತು ಬದುಕನ್ನು ಅವರು ಬೆಸೆಯುತ್ತಾ ಬಂದವರು. ಎಂತ ತೊಡುಕಗಳ ನಡುವೆಯೂ ವ್ಯವಸ್ಥೆಯೊಂದಿಗೆ ರಾಜಿಯಾಗದೆ ತಮ್ಮತನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಪ್ರಗತಿಪರತೆಯನ್ನು ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದಿದ್ದಾರೆ. ಜೀವಪರ ಚಿಂತನೆಯನ್ನೇ ನಂಬಿಕೊಂಡು ಅದರಂತೆ ಸಾಹಿತ್ಯವನ್ನು ಸೃಷ್ಟಿ ಮಾಡಿದ್ದಾರೆ. `` ಕನ್ನಡ ಹಾಗು ಭಾರತೀಯ ಭಾಷೆಗಳಲ್ಲಿಯೇ, ತಾವು ಪ್ರಗತಿಶೀಲರೆಂದು ಕರೆಸಿಕೊಂಡ ಅನೇಕ ಸುಪ್ರಸಿದ್ದ ಸಾಹಿತಿ, ಕವಿಗಳು, ಸ್ವಾತಂತ್ಯ್ರನಂತರ ಯಾವ ಯಾವುದೋ ಕಾರಣದಿಂದ ತಮ್ಮ ಪ್ರಗತಿಪರ ನಿಲುವುಗಳಿಂದ ಹೊಯ್ದಾಡಿದ್ದಾರೆ. ಇವರು ತಮ್ಮ ತಾರುಣ್ಯದ ಬಿಸಿ ರಕ್ತದ ಆವೇಶದಲ್ಲಿ ಪ್ರಗತಿವಾದಿಗಳಾಗಿ, ಕ್ರಾಂತಿಕಾರಿಗಳಾಗಿ ಸಾಹಿತ್ಯ ಸೃಷ್ಟಿಗೆ ನುಗ್ಗಿದ್ದಾರೆ. ಆದರೆ ನಂತರ ತಮ್ಮ ಮಧ್ಯಮ ಹಾಗು ಕೊನೆಯ ವಯಸ್ಸಿನಲ್ಲಿ ಆಧ್ಯಾತ್ಮ, ದಿಗಂಬರ, ಪ್ರತೀಕ ಮೊದಲಾದ ವಾದಗಳಿಗೆ ಒಳಗಾಗಿ ಸೋತಿದ್ದಾರೆ. ತಮ್ಮ ಸುತ್ತಲಿನ ಸಾಮಂತಿ ಹಾಗು ಬೂರ್ಜ್ವಾ ವಾತವರಣಕ್ಕೆ ಹೆದರಿಕೊಂಡು ಹೇಗಾದರು ಬದುಕುವ ಬಯಕೆಗಾಗಿ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಭಾರತೀಯ ಲೆಖಕರಲ್ಲಿ ಇಂಥವರ ಸಂಖ್ಯೆ ಹೇರಳವಾಗಿದೆ. ಕೇವಲ ಬೆರಳೆಕೆಯಷ್ಟು ಸಾಹಿತಿಗಳು ಮಾತ್ರ ತಾವು ದೃಢವಾಗಿ ನಂಬಿಕೊಂಡು ಬಂದ ಪ್ರಗತಿಶೀಲ ಧೋರಣೆಗಳಿಗೆ ದ್ರೋಹ ಬಗೆಯದೆ ಆಜೀವ ಬದ್ದರಾಗಿ ಸಾಹಿತ್ಯ ಸೃಷ್ಟಿಸುತ್ತಾ ಬಂದಿದ್ದಾರೆ. ಇಂಥ ಅಪರೂಪದ ಲೇಖಕರಲ್ಲಿ ನಿರಂಜನರು ಒಬ್ಬರೆಂದು ದೈರ್ಯವಾಗಿ ಹೇಳಬಹುದು”.14

ಅಡಿಟಿಪ್ಪಣೆ

ಯು. ಆರ್. ಅನಂತಮೂರ್ತಿ, ಪ್ರಜ್ಞೆ ಮತ್ತು ಪರಿಸರ, ಪು. 27
ಡಾ. ಕೆ. ಕೇಶವಶರ್ಮ, ಮಾರ್ಕ್ಸವಾದಿ ವಿಮರ್ಶೆ ಪು. 45
ಡಿ.ಆರ್. ನಾಗರಜ್, ಸಂಸ್ಕೃತಿ ಕಥನ, ಪು. 206
ನಿರಂಜನ , ಬುದ್ದಿ ಬಾವ ಬೆಳಕು 1984,ಪು.96
ಆರ್.ವಿ.ಭಂಡಾರಿ: ಕಾದಂರಿಗಳಲ್ಲಿ ವರ್ಗ ವರ್ಣ ಸಂಘರ್ಷ, 2003,ಪು.73

ನಿರಂಜನ , ಬುದ್ದಿ ಬಾವ ಬೆಳಕು, 1984 ಪು. 53
ಎಚ್.ಎಸ್. ರಾಘವೇಂದ್ರರಾವ್, ನಿರಂಜನರ ಕಾದಂರಿಗಳು ಕೆಲವು ಟಿಪ್ಪಣೆಗಳು, ಪು. 340 ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, 1986,)
ಎಚ್.ಎಸ್. ರಾಘವೇಂದ್ರರಾವ್, ನಿರಂಜನರ ಕಾದಂರಿಗಳು ಕೆಲವು ಟಿಪ್ಪಣೆಗಳು, ಪು. 341, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭ
ಡಿ.ಆರ್. ನಾಗರಾಜ್, ಕನ್ನಡ ಕಾದಂಬಿಕಾರರಲ್ಲಿ ನಿರಂಜನರ ಪಾತ್ರ, ಪು.338, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, 1986)
12 ಎಚ್.ಎಸ್. ರಾಘವೇಂದ್ರರಾವ್, ನಿರಂಜನರ ಕಾದಂರಿಗಳು ಕೆಲವು ಟಿಪ್ಪಣೆಗಳು, ಪು. 340 ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, 1986
13 ಎಚ್.ಎಸ್. ರಾಘವೇಂದ್ರರಾವ್, ನಿರಂಜನರ ಕಾದಂರಿಗಳು ಕೆಲವು ಟಿಪ್ಪಣೆಗಳು, ಪು. 341 ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, 1986

14 ಪಿ. ವಿ. ವಜ್ರಮಟ್ಟಿ, ಪ್ರಗತಿಶೀಲ ಸಾಹಿತಿಯಾಗಿ ನಿರಂಜನ, ಪು. 202, ನಿರಂಜನ ಅಭಿನಂದನ, ಸಂ. ಬೋಳಂತಕೋಡಿ ಈಶ್ವರಭಟ್ಟ, 1986

 

 

 

 

 

MORE NEWS

ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು

16-10-2024 ಬೆಂಗಳೂರು

"ಪಂಜೆಯವರಿಗೆ ಮಡಿಕೇರಿಗೆ ವರ್ಗವಾಗಿ ಅಲ್ಲಿ ವೃತ್ತಿಯನ್ನು ಪ್ರಾರಂಭಿಸಿದ ಸಂದರ್ಭದಲ್ಲಿ ಬರೆದಂತಹ ಕೃತಿಯೇ "ಕ...

ಮಗು ಮತ್ತು ಬಾಶಾಗಳಿಕೆ 

11-10-2024 ಬೆಂಗಳೂರು

"ಮಕ್ಕಳು ಬಾಶೆಯನ್ನು ಹೇಗೆ ಪಡೆದುಕೊಳ್ಳುತ್ತಾರೆ ಎಂಬುದು ಬಹುಶಾ ಮೊದಲಿನಿಂದಲೂ ಮನುಶ್ಯರನ್ನು ಕಾಡಿದ ಹಲವು ಪ್ರಶ್ನ...

ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ

09-10-2024 ಬೆಂಗಳೂರು

"ಸಾಹಿತ್ಯವೂ ವ್ಯಕ್ತಿಯ ಮನಸ್ಸನ್ನು ಸಾಮಾಜಿಕ ಕ್ರಾಂತಿಯ ಮೂಲಕ ಸಾಧಿಸುವ ಶಕ್ತಿ ಎಂದು ನಂಬಿದ್ದ ಇವರು ಅಸ್ಪೃಶ್ಯತೆ ...