ಪೂರ್ಣಿಮಾ ಅವರ ವ್ಯಕ್ತಿತ್ವದಲ್ಲಿ ಅಲ್ಲಿನ ಮಣ್ಣಿನ ಸತ್ವ ಸಹಜವಾಗಿ ಸೇರಿದೆ


“ಓದಿದಾಗ ಕಾವ್ಯಾನುಭವದ ಸುಖ ನೀಡುತ್ತದೆ. ಕನ್ನಡ ಕಾವ್ಯ ಪರಂಪರೆಯ ವಿವಿಧ ಲಯಗಳನ್ನು ಇವರು ತಮ್ಮ ಕಾವ್ಯ ರಚನೆಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ,” ಎನ್ನುತ್ತಾರೆ ನರಹಳ್ಳಿ ಬಾಲಸುಬ್ರಹ್ಮಣ್ಯ. ಅವರು ಪೂರ್ಣಿಮಾ ಸುರೇಶ್ ಅವರ “ಸಂತೆಯೊಳಗಿನ ಏಕಾಂತ” ಕೃತಿಗೆ ಬರೆದ ಮುನ್ನುಡಿ.

ಪೂರ್ಣಿಮಾ ಸುರೇಶ್ ಸಹಜ ಕವಿ, ಅಭಿಜಾತ ಕಲಾವಿದೆ. ಬಹುಮುಖ ಆಸಕ್ತಿಯ ಇವರು ನಾಟಕ, ಕಿರುತೆರೆ, ಚಲನಚಿತ್ರ, ಪತ್ರಿಕೋದ್ಯಮ, ಸಂಘಟನೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ ಮೂಲತಃ ಕಾವ್ಯವೇ ಇವರ ಪ್ರಧಾನ ಅಭಿವ್ಯಕ್ತಿ ಮಾಧ್ಯಮ. ಉಡುಪಿ ಜಿಲ್ಲೆಯ ಹಿರಿಯಡ್ಕ ಎಂಬ ಗ್ರಾಮೀಣ ಪ್ರದೇಶದಿಂದ ಬಂದ ಪೂರ್ಣಿಮಾ ಅವರ ವ್ಯಕ್ತಿತ್ವದಲ್ಲಿ ಅಲ್ಲಿನ ಮಣ್ಣಿನ ಸತ್ವ ಸಹಜವಾಗಿ ಸೇರಿದೆ. ಹಿರಿಯಡ್ಕ ಎಂದಾಕ್ಷಣ ನನಗೆ ನಮ್ಮ ತುಳುನಾಡಿನ `ಸಿರಿ’ಯ ನೆನಪಾಗುತ್ತದೆ. ಸಿರಿಗೂ ಹಿರಿಯಡ್ಕಕ್ಕೂ ಅವಿನಾಭಾವ ಸಂಬಂಧವಿದೆ.

ನಾಗಬ್ರಹ್ಮನ ವರಪ್ರಸಾದದಿಂದ ಸತ್ಯನಾಪುರದ ಬಿರುಮ ಬಲ್ಲಾಳರ ಕುಟುಂಬದಲ್ಲಿ ಜನಿಸುವ ಸಿರಿ ಎಲ್ಲರ ಕಣ್ಗೊಂಬೆಯಾಗಿ ಬೆಳೆಯುತ್ತಾಳೆ. ಚೆಲುವೆ ಸಿರಿಯನ್ನು ಬಸರೂರು ಬೀಡಿನ ಕಾಂತನ ಪೂಂಜ ಮೋಹಿಸಿ ಮದುವೆಯಾಗುತ್ತಾನೆ. ಆತನಿಗೆ ಸಿದ್ದು ಎಂಬ ಹೆಣ್ಣಿನೊಡನೆ ಸಂಬಂಧವಿರುತ್ತದೆ. ಸಿರಿ ಅದನ್ನು ಪ್ರಶ್ನಿಸಿ, ಪ್ರತಿಭಟಿಸಿ ಅವನಿಂದ ದೂರವಾಗುತ್ತಾಳೆ. ಸತ್ಯನಾಪುರದ ಬೀಡಿನಲ್ಲಿ ಅಜ್ಜನ ಕಾಲಾನಂತರ ಅದರ ಅಧಿಕಾರ ಪಡೆಯುವಲ್ಲಿ ಸಮಾಜದ ವಿರೋಧಕ್ಕೆ ಗುರಿಯಾಗುತ್ತಾಳೆ. ಮುಂದೆ ಮರುವಿವಾಹವಾಗುವುದರ ಮೂಲಕ ಸಿರಿ ಸಮಾಜದ ಸ್ಥಾಪಿತ ಹಿತಾಸಕ್ತಿಗಳಿಗೆ ಸವಾಲಾಗಿ ನಿಲ್ಲುತ್ತಾಳೆ. ತನ್ನ ಬದುಕಿನುದ್ದಕ್ಕೂ ಸವಾಲುಗಳನ್ನೆದುರಿಸುತ್ತಾ ದಿಟ್ಟತನದಿಂದ ಜಡ ವ್ಯವಸ್ಥೆಯಲ್ಲಿ ಚಲನೆಯನ್ನುಂಟು ಮಾಡುವ ಸಿರಿ, ಪುರುಷ ಪ್ರಧಾನ ಸಮಾಜದ ರೂಢಿಗತ ಮೌಲ್ಯಗಳನ್ನು ಸಮರ್ಥ ರೀತಿಯಲ್ಲಿ ಪ್ರಶ್ನಿಸುತ್ತಾಳೆ. ಪಾಡ್ದನದಲ್ಲಿ ಬರುವ ಸಿರಿಯ ಈ ಪ್ರತಿಭಟನೆ ಪುರುಷನ ಅಧಿಕಾರ ನಿರಾಕರಣೆ ಮಾತ್ರವಾಗದೇ ಸ್ತ್ರೀಯರ ಅಂತಃಶಕ್ತಿಯ ಪ್ರತೀಕವೂ ಆಗುವಲ್ಲಿ ಇದರ ಮಹತ್ವವಿದೆ. ಭಾರತೀಯ ಸಾಂಪ್ರದಾಯಿಕ ಸ್ತ್ರೀ ಪರಿಕಲ್ಪನೆಗಿಂತ ಭಿನ್ನವಾದ ಈ ಬಗೆ ದೇಸಿ ಪರಿಸರದ ವಿಶಿಷ್ಟ್ಯತೆ. ಜನಸಾಮಾನ್ಯರ ಬದುಕಿನಲ್ಲಿ ತಾತ್ವಿಕ ಪ್ರತಿರೋಧಕ್ಕೆ ಬದಲಾಗಿ ಅಸ್ತಿತ್ವದ ಪ್ರಶ್ನೆ ಮುಖ್ಯವಾಗುತ್ತದೆ. ಆಗ ಸಹಜವಾಗಿಯೇ ಅವರ ಅಂತಃಶಕ್ತಿ ಜಾಗೃತಗೊಂಡು ಸಿಡಿದೇಳುತ್ತದೆ. ಇಂತಹ ಸಹಜ ಪ್ರತಿಭಟನೆಯ ಸಿಡಿಮದ್ದಿಗೆ ಅಧಿಕಾರ ಜಗತ್ತನ್ನು ಅಲ್ಲೋಲ ಕಲ್ಲೋಲಗೊಳಿಸುವ ಶಕ್ತಿ ಇರುತ್ತದೆ. ಇಲ್ಲಿ ಹೆಣ್ತನ ಶಾರೀರಿಕ ಸತ್ಯ ಮಾತ್ರವಾಗದೇ ಅದೊಂದು ಶಕ್ತಿಯುತ ಮೌಲ್ಯವಾಗುತ್ತದೆ. ಸ್ತ್ರೀ ಶಕ್ತಿಯನ್ನು ಜೈವಿಕ ನೆಲೆಯಲ್ಲಿ ಮಾತ್ರ ಸ್ವೀಕರಿಸದೇ ಅರಿವಿನ ನೆಲೆಯಲ್ಲಿಯೂ ಗ್ರಹಿಸಬೇಕಾದ ಒತ್ತಾಯ ಸಹಜವಾಗಿಯೇ ರೂಪುಗೊಳ್ಳುತ್ತದೆ. ಇಂತಹ ಸಿರಿ ಪೂರ್ಣಿಮಾ ಅವರ ವ್ಯಕ್ತಿತ್ವದ ಮೂಲದ್ರವ್ಯ. ಅವರು `ಸತ್ಯನಾಪುರದ ಸಿರಿ’ ಎಂಬ ಏಕವ್ಯಕ್ತಿ ಪ್ರದರ್ಶನದಲ್ಲಿ ಆಕೆಯನ್ನು ಆವಾಹಿಸಿಕೊಂಡು ಅಭಿನಯಿಸಿದ್ದು ಅವರ ವ್ಯಕ್ತಿತ್ವದ ಸಹಜ ಅಭಿವ್ಯಕ್ತಿ. ಯುರಿಪಿಡೀಸ್‌ನ `ಮೀಡಿಯಾ’, ಇಬ್ಸನ್‌ನ `ನೋರಾ’, ನಮ್ಮ ಶರಣೆ ಅಕ್ಕ, ತುಳುನಾಡಿನ ಸಿರಿ ಇವರೆಲ್ಲ ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಹೆಣಗಿದವರು; ಪ್ರತಿಭಟಿಸಿ ಸಿಡಿದು ನಿಂತವರು. ಪೂರ್ಣಿಮಾ ಅವರ ವ್ಯಕ್ತಿತ್ವ ಈ ಹಿನ್ನೆಲೆಯಲ್ಲಿಯೇ ರೂಪುಗೊಂಡಿದೆ.

ಕಾಲ್ಪನಿಕವಾಗಿ ಮಹಿಳೆಗೆ ಅತ್ಯಂತ ಮಹತ್ವದ ಸ್ಥಾನವಿದ್ದರೂ ವಾಸ್ತವದಲ್ಲಿ ಅವಳು ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದಾಳೆ ಎಂದು ಪುರುಷ ಪ್ರಧಾನ ಸಮಾಜದ ವಿರುದ್ಧ ಪ್ರಬಲವಾಗಿ ದನಿಯೆತ್ತಿದ ವರ್ಜೀನಿಯಾ ವೂಲ್ಫ್ `ತನ್ನದೇ ಆದ ಸ್ವತಂತ್ರ ಕೊಠಡಿ’ ಎಂಬ ಮಹತ್ವದ ಲೇಖನದಲ್ಲಿ ಯಾವ ಸ್ತ್ರೀ ಯಾಗಲಿ, ಯಶಸ್ಸು ಪಡೆಯಬೇಕಾದರೆ ಅವಳಿಗೆ `ತನ್ನದೇ ಆದ ಕೊಠಡಿ’ ಇರಬೇಕೆಂದು ಪ್ರತಿಪಾದಿಸುತ್ತಾಳೆ. ಪೂರ್ಣಿಮಾ ಇದೇ ಆಶಯವನ್ನು ಇದಕ್ಕಿಂತ ಭಿನ್ನವಾಗಿ ಯೋಚಿಸುತ್ತಾರೆ.

ನಿನ್ನ ಪ್ರೀತಿಯುಡುಗೆಯನುಟ್ಟು
ಇಗೋ, ಸಿದ್ಧಳಾಗಿದ್ದೇನೆ ಆ ಅಕ್ಕನಂತೆ;
ನನಗಿಲ್ಲವಿನ್ನು ಆಲಯದ ಕಿರುಚೌಕಟ್ಟು,
ಇಹದ ಹಂಗಿರದ ಹಂಗಿಸುವ ಚಿಂತೆ
ನಾನು ದನಿಯನ್ನು ಅದುಮಿಬಿಟ್ಟೆ

ನನ್ನಜ್ಜಿ ಹೇಳುತ್ತಿದ್ದಳು:
ಅಲೆಮಾರಿಯಂತೆ ಅಲೆಯದಿರು
ಗೆಜ್ಜೆ ಸದ್ದಾಗಬಾರದು
ಬೀದಿ ಬಸವಿಯೆಂದಾರು
ಹೆಣ್ಣೆಂದರೆ ಹೀಗಿರಬೇಕು
ನಾನು ಕಾಲಿಗೆ ಕೋಳ ತೊಡಿಸಿದೆ

(ಗಂಡಾಗುವುದು ಕಲಿತಿಲ್ಲ)

ಹೀಗೆ ಅಜ್ಜಿ ಮಾಡುವ ನಿರಂತರ ಉಪದೇಶವನ್ನು ಪ್ರತಿಭಟಿಸುವ ಪೂರ್ಣಿಮಾ –

ನಾಗೀಗ ದನಿ ಎತ್ತರಿಸಬೇಕು
ನನ್ನ ಹೆಜ್ಜೆ ಗುರುತಾಗಬೇಕು
ನನ್ನ ನೋಟ ಪ್ರೀತಿ ಕಾಣಬೇಕು
ಹೆಣ್ಣಾಗುವ ಅಭಿನಯ ಮುಗಿಸಿದ್ದೇನೆ
ಗಂಡಾಗುವುದನು ಕಲಿತಿಲ್ಲ
ಅದಕ್ಕೆ ನಾನೀಗ ನಾನಾಗುತ್ತಿದ್ದೇನೆ
ನಿಮಗೆ ನನ್ನ ಅಜ್ಜಿ ಸಿಕ್ಕಳೆ -
ಹಾಗಿದ್ದರೆ ತಿಳಿಸಿಬಿಡಿ

(ಗಂಡಾಗುವುದು ಕಲಿತಿಲ್ಲ)

ಎಂದು ಅಜ್ಜಿಯ ಉಪದೇಶವನ್ನು ನಿರಾಕರಿಸಿ `ತನ್ನತನ’ವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆೆ. ಹೆಣ್ಣೆಂದರೆ ಇರುವುದಲ್ಲ. ಆಗುವುದು ಎಂಬ ಪೂರ್ಣಿಮಾ ಅವರ ಈ ನಿಲವು ಸಹಜವಾಗಿಯೇ ನಮಗೆ ಸಿಮೊನ್ ದ ಬೋವಾಳ `ಸೆಕೆಂಡ್ ಸೆಕ್ಸ್’ ಕೃತಿಯನ್ನು ನೆನಪಿಗೆ ತರುತ್ತದೆ.

ಪೂರ್ಣಿಮಾ ಅವರ ಕಾವ್ಯ ಜಗತ್ತಿನಲ್ಲಿ ಹೆಣ್ಣಿಗೆ ಪುರುಷ ಬೇಕು ನಿಜ, ಆದರೆ ಅವನು ಪತಿಯಾಗಿ ಅಧಿಕಾರಕೇಂದ್ರದಲ್ಲಿರುವ ಬದಲು ಸಖನಾಗಿ ಸಮಾನನೆಲೆಯಲ್ಲಿ ಪ್ರೀತಿಸಬೇಕೆಂಬ ಹಂಬಲವಿದ್ದಂತಿದೆ. ಇದು ಅವರಲ್ಲಿ ಸಮಾಜಸಮ್ಮತ ಮೌಲ್ಯವನ್ನು ಪ್ರಶ್ನಿಸುವ ಒಳದನಿಯಾಗಿ ಕಾಣಿಸಿಕೊಂಡು ಒಂದು ಸಂದಿಗ್ಧ ಸ್ಥಿತಿ ನಿರ್ಮಾಣವಾಗುತ್ತದೆ. ವ್ಯವಸ್ಥೆ ರೂಪಿಸಿರುವ ಮಡದಿಯ ಪಟ್ಟ ನಿಭಾಯಿಸುವುದು ಕಷ್ಟ ಎಂಬ ನೋವಿನ ಭಾವ ಅವರಲ್ಲಿ ತೀವ್ರವಾಗಿಯೇ ಕಾಣಿಸುತ್ತದೆ. ಇದಕ್ಕೆ ಪರಿಹಾರದ ಸಾಧ್ಯತೆಯಾಗಿ ಅವರು ಪತಿಯನ್ನು ಪ್ರಿಯಕರನನ್ನಾಗಿ ಮಾರ್ಪಡಿಸಿಕೊಳ್ಳುವ ಆಶಯವನ್ನು ವ್ಯಕ್ತಪಡಿಸುತ್ತಾರೆ. ನಮ್ಮಲ್ಲಿ ಪ್ರಿಯಕರ ಗಂಡನಾಗುವುದು ಸಹಜ; ಆದರೆ ಗಂಡನೇ ಪ್ರಿಯಕರನಾಗಿಬಿಡುವುದು ಸಾಧ್ಯವಾದರೆ ಬದುಕಿನ ಲಯವೇ ಬದಲಾಗಿ ಬಿಡುತ್ತದೆ. ಪೂರ್ಣಿಮಾ ಅವರ ಈ ಚಿಂತನೆ ನನಗೆ ಬೇಂದ್ರೆಯವರನ್ನು ನೆನಪಿಸಿತು. ಬೇಂದ್ರೆ ಪತ್ನಿಯನ್ನು `ಸಖಿ’ ಎಂದು ಸಂಬೋಧಿಸುತ್ತಾ ಹೆಂಡತಿಯನ್ನು ತಮ್ಮ ಕಾವ್ಯದಲ್ಲಿ ಸಖಿಯಾಗಿ ಕಾಣುತ್ತಾರೆ. ಬೇಂದ್ರೆಯವರ ಕಾವ್ಯ `ಸತಿಗೀತ’ವಲ್ಲ. `ಸಖೀಗೀತ’. ಪೂರ್ಣಿಮಾ ಅವರು ತಮ್ಮ ಕಾವ್ಯವನ್ನು `ಪತಿಪುರಾಣ’ವಾಗಿಸದೇ `ಗೆಳೆಯಗೀತ’ವಾಗಿಸಲು ಹಂಬಲಿಸಿದಂತಿದೆ.

ನನ್ನೊಳಗಿನ ಭಾವ, ಶಬ್ದಸೀಮೆಯಾಚೆ, ಅಕ್ಕನಂತೊಬ್ಬಳು ಅನುರಕ್ತೆ ಹಾಗೂ ಮಧ್ಯಮಾವತಿ ಎಂಬ ನಾಲ್ಕು ಕವನ ಸಂಕಲನಗಳನ್ನು ಈಗಾಗಲೇ ಪ್ರಕಟಿಸಿರುವ, ಪೂರ್ಣಿಮಾ ಅವರ ಐದನೆಯ ಸಂಕಲನ `ಸಂತೆಯೊಳಗಿನ ಏಕಾಂತ’. ವೈದೇಹಿ ಅವರು ಹೇಳುವಂತೆ ಸಾಧನೆಯ ಸಫಲತೆಯ ಕಡೆಗೆ ಸಾಗುತ್ತ ಬಂದಿರುವ ಪೂರ್ಣಿಮಾ ಅವರ ಕಾವ್ಯ ಬೆಳವಣಿಗೆಯ ಮತ್ತೊಂದು ಮಹತ್ವದ ಮಜಲೆಂಬಂತೆ ಈ ಸಂಕಲನವಿದೆ.

`ಸಂತೆಯೊಳಗಿನ ಏಕಾಂತ’ ಕವಿತೆ ಬದುಕಿನ ವಿರೋಧಾಭಾಸಗಳನ್ನು ಹೇಳುವ ಮಹತ್ವದ ಪ್ರಯತ್ನ. ಸಂಬಂಧ ಗಡಿಯಾರದ ಮುಳ್ಳುಗಳಂತೆ ಒಂದನ್ನೊಂದು ಪರಸ್ಪರ ಕ್ಷಣಮಾತ್ರ ಸಂಧಿಸುತ್ತದೆ. ಸುತ್ತುತ್ತಲೇ ಇರುವ ಮುಳ್ಳುಗಳ ಈ ಭೇಟಿ ಅತ್ಯಂತ ಕ್ಷಣಿಕವಾದುದು. ಆ ಕ್ಷಣ ಶಾಶ್ವತವಾಗಬಾರದೇ ಎಂಬ ಹಂಬಲ ತೀರ ಸಹಜ.

ಎರಡು ಮುಳ್ಳುಗಳೂ
ಒಂದಕ್ಕೊಂದು ಆತುಕೊಂಡು
ಕ್ಷಣ ಒಂದಾದಂತೆ
ಬೆಳಕಿನ ಬಿಂದುಗಳು ಸೇರಿದಂತೆ
ಅದು ಹಾಗೇ ಯಾಕೆ ಇರಬಾರದು?

ಕ್ಷಣಿಕವಾದ ಸಂಬಂಧವನ್ನು ಸ್ಥಿರವಾಗಿಸಿಕೊಳ್ಳುವ ಈ ಪ್ರಯತ್ನ ಒಳ್ಳೆಯದೇ. ಆದರೆ ಚಲಿಸುತ್ತಿರುವ ಮುಳ್ಳುಗಳು ಪರಸ್ಪರ ಸಂಧಿಸಿದಾಗ ಅದು ಶಾಶ್ವತವಾಗಿ ಅಲ್ಲಿಯೇ ನಿಂತರೆ ಏನಾಗುತ್ತದೆ?

ಹಾಗಾಗುವುದು ಕೆಟ್ಟು ಕೂತ
ಸರಕು ಎನುವೆ
ಅಂದರೆ ಅಳಿವಿನ ಸ್ಥಿತಿಯೇ

ಗಡಿಯಾರದ ಮುಳ್ಳುಗಳು ಚಲಿಸದೇ ನಿಂತರೆ ಅದು ಗಡಿಯಾರ ಕೆಟ್ಟು ನಿಂತ ಸ್ಥಿತಿ. ಅಂದರೆ ಅಳಿವಿನ ಸ್ಥಿತಿ. ಹಾಗಾದರೆ ಕ್ಷಣಿಕ ಭೇಟಿ ಸ್ಥಿರವಾಗುವುದು ಬೇಡವೇ? ಹಾಗೆ ಸ್ಥಿರವಾದರೆ ಅದು ಅಳಿವೇ? ಈ ಹಂತದಲ್ಲಿ ಕವಿತೆ ಮತ್ತೊಂದು ಆಯಾಮ ಪಡೆದುಕೊಳ್ಳುತ್ತದೆ.

ಕೆಡುವುದೆಂದರೆ ಒಂದಾಗುವುದೇ
ನಾಶವಾಗುವುದೆಂದರೆ ಲೀನವಾಗುವುದೇ

ಇದಕ್ಕಿದ್ದಂತೆ ಕವಿತೆ ಅಧ್ಯಾತ್ಮದ ನೆಲೆಗೆ ಜಿಗಿದುಬಿಡುತ್ತದೆ. ಇಲ್ಲಿ ನಮಗೆ ಅಕ್ಕನಂತೊಬ್ಬಳು ಅನುರಕ್ತೆಯ ದರ್ಶನವಾಗಿಬಿಡುತ್ತದೆ. ಲೀನವಾಗುವುದೆಂದರೆ ಕಳೆದುಹೋಗುವುದಲ್ಲ, ಪಡೆದುಕೊಳ್ಳುವುದು. ಇದೇ ಭಾವ `ಕಶೀರದಲ್ಲಿ ಕಬೀರ’ ಕವಿತೆಯಲ್ಲಿಯೂ ವ್ಯಕ್ತವಾಗುತ್ತದೆ. ಆನಂದಮಯವಾದ ಈ ಜಗ ದೇವರ ದಯೆ ಮಾತ್ರವಲ್ಲ ದೈವ ಸಾಕ್ಷಾತ್ಕಾರಕ್ಕೂ ಹಾದಿಯೆಂಬ ಕುವೆಂಪು ಅವರ ನಿಲವು ಇಲ್ಲಿ ನನಗೆ ನೆನಪಾಗುತ್ತದೆ.

ಋತುಸ್ನಾನದ ಹಿಮಸುರಿದು
ಇಳೆ ರಾಣಿ
ಶುಭ್ರ ಶ್ವೇತಧಾರಿಣಿ

ಜಗದಾಚೆಯ ಜಗವಿದು
ಕಣ್ಣಿನ ಆಚೆಯ ಕಣ್ಣಿಗೆ
ಅಮ್ಮನುಣಿಸುವ ತುತ್ತು
ಸಿಂಗಾರದ ಕರುಣ ಧಾರೆ

ತಾಯಿ ಭಾರತಿಯ ಮುಕುಟ
ಬೆರಗಿನಾಚೆಯ ಕಶೀರ
ಬೆರಗಿನಲಿ ಅಲೆ ಅಲೆದು ಕಬೀರ
ಶರಣಾಗಿದೆ ಆತ್ಮ ತಾದಾತ್ಮತೆಯ

(ಕಶೀರದಲ್ಲಿ ಕಬೀರ)

ಪೂರ್ಣಿಮಾ ಅವರ ಕಾವ್ಯಜಗತ್ತಿನ ಮತ್ತೊಂದು ಪ್ರಧಾನವಾದ ನೆಲೆ ಬೆರಗು. ಇದು ಕೇವಲ ಮುಗ್ಧತೆಯ ಬೆರಗು ಮಾತ್ರವಲ್ಲ ಸೃಷ್ಟಿಯ ಜೀವಜಾಲದ ನಿಗೂಢ ಜಗತ್ತಿನ ಬೆರಗೂ ಹೌದು. ಅಲ್ಲದೇ ಕಾವ್ಯಸೃಷ್ಟಿಯ ಬೆರಗಿನ ಜೊತೆಗೂ ಇದರ ಹೆಣಿಗೆ ಇದೆ. ಜೀವಸೃಷ್ಟಿ ಹಾಗೂ ಕಾವ್ಯಸೃಷ್ಟಿ ಇವರಿಗೆ ಪ್ರತ್ಯೇಕ ಸಂಗತಿಗಳಲ್ಲ.

ಕವಿತೆ ಅವತರಿಸುವ ಅನೂಹ್ಯ ಘಳಿಗೆ
ಸುಲಭವಲ್ಲ
ಭಾವಗಳಿಗೆ ಅಮ್ಮೀ ಉಣಿಸುವುದು
ಪದಗಳ ಪಾದಗಳಿಗೆ
ಗೆಜ್ಜೆ ಕಟ್ಟುವುದು
ಹುಸಿಬೇನೆ ನಿಭಾಯಿಸುವುದು

ನಾಭಿಕೇಂದ್ರದ ಸುತ್ತ ಭೂಕಂಪ
ಹೆರಿಗೆ
ಕವಿತೆ ಎದುರಾಗದೆ
ಮುದ್ದಿಸದೆ
ಕವಿತೆ ಆಗಲಾರೆ
ಕವಿತೆ ಹೆರಲಾರೆ

(ಪ್ರಸವ ಮಾಯೆ)

ಇವೆರಡೂ ಅವರಿಗೆ ಪವಾಡ ಸದೃಶ ಸಂಗತಿಗಳೇ; ಸದಾ ಚಡಪಡಿಸುವ, ಹಠ ಮಾಡುವ ಏನೋ ಬೇಕು ಎಂಬಂತೆ ರಚ್ಚೆ ಹಿಡಿದು ಅಳುವ, ಬದುಕಿನ ವಿಸ್ಮಯ, ಸಂಭ್ರಮ, ನೋವುಗಳನ್ನು ಬೆರಗಿನಿಂದ ನೋಡುವ ಮಗುವೊಂದು ನನ್ನೊಳಗಿಂದ ಪೊರೆಯುತ್ತಿದೆ. ಆ ಮಗುವನ್ನು ಸಂತೈಸುವ ದನಿಗಾಗಿ ಒಂದು ಹುಡುಕಾಟ ನನ್ನ ಬಗಲಲ್ಲಿ ಹೊತ್ತು ಅಲೆದಾಡುತ್ತೇನೆ. ಅಲೆದಾಡುತ್ತಲೇ ಇದ್ದೇನೆ. ಈ ದನಿ ಎಲ್ಲೆಲ್ಲೋ ಮುಖಾಮುಖಿಯಾದಂತೆ ಕಣ್ಣಿಗೆ ಕಣ್ಣು ಸೇರಿಸಿ ಘನವಾಗುತ್ತಾ ಮತ್ತೆ ಕರಗಿ ಜೀವರಸವಾಗಿ ಚಿಗುರಿಕೊಳ್ಳುತ್ತದೆ – ಇದು ಪೂರ್ಣಿಮಾ ಅವರ ಕವಿತಾ ರಚನೆಯ ಪ್ರಕ್ರಿಯೆ. ಇವರಿಗೆ ಕವಿತೆಯೆಂಬುದು ಕತ್ತಲಿನ ಅಂಚಿನಲ್ಲಿ ಬೆದರಿಸುವ ಅಕರಾಳ ವಿಕರಾಳ ಆಕೃತಿಗಳಿಂದ ಬದುಕನ್ನು ಪೊರೆಯುವ ಸಾಧನ. ಬದುಕಿನ ಎಲ್ಲ ಸಂಕಟಗಳ ನಡುವೆಯೇ ಗಾಳಿಹೊತ್ತು ತರುವ ಸುಗಂಧದಂತೆ ಸ್ಪರ್ಶಿಸಿ ಸುಖನೀಡುವ `ನೀಲನ ದರ್ಶನ’.

ಈ ಕತ್ತಲೆಗೊಂದು ಕವಿತೆ ನೀಡು ದೇವರೇ
ಬೆಳಕ ಸರಿಸದಿರು ಸಖನೇ
ಕತ್ತಲ ಕರಗಿಸುವ ಕವಿತೆ ಕರುಣಿಸು

(ದೇವ ಕವಿತೆಯಾಗು)

ಪೂರ್ಣಿಮಾ ಅವರಿಗೆ ಕಾವ್ಯ, ಬದುಕಿನ ಕತ್ತಲೆ ಕರಗಿಸುವ ಬೆಳಕೂ ಹೌದು; ಮಾತ್ರವಲ್ಲ ಶಬ್ದಸೋಪಾನದ ಮೂಲಕ ದೈವಸಾಕ್ಷಾತ್ಕಾರಕ್ಕೆ ದಾರಿಯೂ ಹೌದು.

ಬೆಳಕು ಎಂದೂ ಮೈಲಿಗೆಯಾಗದು
ಕತ್ತಲನು ಸರಿಸುವ ಕವಿತೆ
ನನ್ನ ಪೊರೆಯುವ ಹಾದಿಯ
ಎದುರು ನೋಡುತ್ತಿರುವೆ
ಅಭಯ ನೀಡು ಸ್ವಾಮಿ
ಕವಿತೆಯಾಗು ದೇವ

(ದೇವ ಕವಿತೆಯಾಗು)

ಪೂರ್ಣಿಮಾ ಅವರಿಗೆ ಬದುಕು, ಅಂಚಿನಲ್ಲಿ ಪಡೆಯುವ ಸಾಧನೆಯ ವಿರಕ್ತಿಯಲ್ಲ. ಪ್ರತಿಕ್ಷಣವನ್ನು ಅನುಭವಿಸಿ ಆನಂದ ಪಡೆಯುವ ಅನುರಕ್ತಿ. ಹೀಗಾಗಿ ಅವರಿಗೆ ಗುರಿಗಿಂತ ಮಾರ್ಗವೇ ಮುಖ್ಯ. `ದೋಸೆಯ ಆತ್ಮಕಥೆ’ ಕವಿತೆ ಪೂರ್ಣಿಮಾರಂಥವರು ಮಾತ್ರ ಬರೆಯಬಹುದಾದಂತಹದ್ದು. ಇದು ದೋಸೆಯ ಆತ್ಮಕಥೆ ಮಾತ್ರವಲ್ಲ ಒಂದು ಹೆಣ್ಣಿನ ಆತ್ಮಕಥೆಯೂ ಹೌದು. ಗಂಡಿಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಡೈನಿಂಗ್ ಟೇಬಲಿನ ಮೇಲೆ ದೋಸೆ ಪ್ರತ್ಯಕ್ಷವಾಗಿ ಬಿಡುತ್ತದೆ. ಆದರೆ ದೋಸೆಯ ಹಿಂದೆ ಹೆಣ್ಣಿನ ಶತಶತಮಾನದ ಕಥೆಯೇ ಇದೆ. ಅಡುಗೆ ಮನೆಯ ಹೆಣ್ಣಿನ ಅನುಸಂಧಾನದ ಇತಿಹಾಸವೇ ಇಲ್ಲಿ ಅನಾವರಣಗೊಳ್ಳುತ್ತದೆ.

ದೋಸೆ ಹೊಯ್ದ ಪರಿಮಳ
ರುಚಿ ಗೊತ್ತು ನಿಮಗೆ
ಆದರೆ ದೋಸೆ ಲೋಕದ
ಕುಸುರಿ
ಬೇಯುವ, ಕಾಯುವ
ಮಾಗುವ ಹಸಿ
ವೆಗೆ ಇಳಿಯುವ
ರೂಪಾಂತರ
ನಿಮಗೆ ತಿಳಿದಿದೆಯೇ
ಜೀವಾತ್ಮ
ಬನ್ನಿ ಅಡುಗೆ ಮನೆಗೆ

(ದೋಸೆಯ ಆತ್ಮಕಥೆ)

ಜೊತೆಗೆ ಆಧುನಿಕ ಬದುಕಿನಲ್ಲಿ ಬಯಸಿದ್ದೆಲ್ಲ ಬೆರಳತುದಿಯಲ್ಲಿ ಕ್ಷಣ ಮಾತ್ರದಲ್ಲಿ ಸಿಗುತ್ತದೆ. ಹಾಗೆ ಸಿಗುವುದರಿಂದಲೇ ಅದು ನೀಡಬಹುದಾದ ಸಂತೋಷದಿಂದ ನಾವು ವಂಚಿತರಾಗುತ್ತಿದ್ದೇವೆ ಎಂಬ ಆಳವಾದ ವಿಷಾದ ಈ ಕವಿತೆ ನೀಡುವ ಕಾವ್ಯಾನುಭವ. ಸರಕು ಸಂಸ್ಕೃತಿ ಸೃಷ್ಟಿಸಿರುವ ಯಾಂತ್ರಿಕ ಬದುಕಿನ ನಿರರ್ಥಕತೆಯನ್ನು, ದಿನನಿತ್ಯದ ನಮ್ಮ ಬದುಕಿನಲ್ಲಿ ಸೃಜನಶೀಲತೆ ಕಣ್ಮರೆಯಾಗಿರುವ ದುರಂತವನ್ನು ಪೂರ್ಣಿಮಾ ತಮ್ಮ ಅನೇಕ ಕವಿತೆಗಳಲ್ಲಿ ನಮ್ಮ ಅನುಭವಕ್ಕೆ ತಂದುಕೊಡುತ್ತಾರೆ. `ಟವಲ್’ ಸಹ ಗಂಡು ಹೆಣ್ಣಿನ ಸಂಬಂಧ ಸ್ವರೂಪದ ಇತಿಹಾಸವನ್ನು ಹೇಳುವ ಮತ್ತೊಂದು ಕವಿತೆ.

`ದೇವರನ್ನು ಮುಟ್ಟಲಾಗದು’ ಒಂದು ವಿಶಿಷ್ಟ ಕವಿತೆ. `ಮುಟ್ಟು’ ನಾಮಪದವೂ ಹೌದು. ಕ್ರಿಯಾಪದವೂ ಹೌದು.

ನನಗೂ ಆಸೆ ಎದೆ ಉಮ್ಮಳಿಸಿ
ಯಾಕೆ ನಾನು ಮುಟ್ಟಬಾರದು
ಮುಟ್ಟಿಯೇ ತೀರುತ್ತೇನೆ
ನೀನು ಮಲಿನವಾಗು
ನಾನಾಗುವೆ ಪಾವನ
ಬರಲಿ ಕೆದಕಲು ಕಾರಣ
ನಡೆಯಲಿ ಅಷ್ಟಮಂಗಳ,
ಶುದ್ದಿ ಶಾಂತಿ, ಹೋಮ - ಹವನ

(ದೇವರನ್ನು ಮುಟ್ಟಲಾಗದು)

ಸಾಮಾಜಿಕ ನೆಲೆಯಲ್ಲಿ ಸಾಗುವ ಈ ಕವಿತೆ ಕಡೆಯಲ್ಲಿ ಮುಟ್ಟುವುದೇ ಅರ್ಥಹೀನವೆಂಬ ಬೇರೊಂದು ನೆಲೆಯನ್ನು ಪಡೆದುಕೊಂಡು ಬಿಡುವಲ್ಲಿ ಕವಿತೆಯ ಸಾರ್ಥಕತೆಯಿದೆ.

ದೇವ ಅನುಮತಿಸು
ವಿಗ್ರಹ ಅಲ್ಲೇ ಅವರಿಗಿರಲಿ
ಗರುಡ ಹೊರಗೆ ಹಾರುತ್ತಿದೆ
ಗಮನವೆನ್ನದು ಅದರ ಮೇಲಿರಲಿ

(ದೇವರನ್ನು ಮುಟ್ಟಲಾಗದು)

`ಹಾವು ಮತ್ತು ಬೆಕ್ಕು’ ಪೂರ್ಣಿಮಾ ಅವರ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಡುವ ಪ್ರತಿಮೆಗಳು. ಕೆ. ವಿ. ತಿರುಮಲೇಶ್ ಹೇಳುವಂತೆ ಬೆಕ್ಕು ಮತ್ತು ಹಾವು ಕಾವ್ಯ ಜಗತ್ತಿನಲ್ಲಿ ನಮಗೆ ಎಂದೂ ಕ್ಲೀಷೆಯಾಗದ ಪರಿಚಿತ ರೂಪಕಗಳು. ಇವು ಪೂರ್ಣಿಮಾ ಅವರ ಮನಸ್ಸಿನ ಒಳಕೋಣೆಯಲ್ಲಿ ಕುಳಿತು ವಿವಿಧ ಬಗೆಯ ಭಾವನೆಗಳನ್ನು ಉದ್ದೀಪಿಸಿವೆ; ಅವು ನಿತ್ಯನೂತನವಾಗಿಯೂ ಇವೆ. `ಮುಖಾಮುಖಿ’ ಹಾಗೂ `ಅಂಗಳದಲ್ಲೊಂದು ನಾಗಮಂಡಲ ನಾಟಕ’ ಅಂಥ ಕವಿತೆಗಳು.

ಈ ಬದುಕನ್ನು ಅರ್ಥಮಾಡಿಕೊಳ್ಳಲು, ಬದುಕಿನಾಚೆಗಿನ ನಿಗೂಢಗಳನ್ನು ಶೋಧಿಸಲು ಸಂಕಟಮಯ ಬದುಕಿನಲ್ಲೂ ಸಂತಸ ಕಾಣಲು, ಹಾಡನ್ನು ಪಾಡಾಗಿಸಲು `ಒಳಗಣ್ಣಿನ ಕಿಂಡಿ’ಯೊಂದು ಬೇಕು. ಅದಿಲ್ಲದಿದ್ದರೆ `ದರ್ಶನ’ ಸಾಧ್ಯವಾಗದು.

ಚೆನ್ನಮಣೆ, ಕಾಲು ಮುರಿದ ಕುರ್ಚಿ ಹರಿದ ಹಾಸು ಕೈಯಿಲ್ಲದ ಗೊಂಬೆ, ಕಾಗದದ ಗುಪ್ಪೆ ಒಣಗಿದ ದುರ್ಗಂಧ ಕೊಡದ ಸುರಗಿಮಾಲೆಯ ಕಂಪು ಎಲ್ಲವೂ ವಿನ್ಯಾಸಗೊಂಡು ಸುಂದರ ಚಿತ್ರ ಆಗುವುದು ಇಂತಹ ಕಿಟಕಿಯಿಂದ.

ಅಟ್ಟದ ಕತ್ತಲಿಗೆ ಒತ್ತಿಕೊಂಡ
ಕಿಟಕಿಗೆ
ಮಾತ್ರವೇ
ಕಣ್ಬೆಳಕು ಹೊಳಪಿಸುವ
ಕಸಿಯುವ
ಮರಳಿಸುವ
ಜಾದು ತಿಳಿದಿದೆ

(ಅಟ್ಟದ ಕಿಂಡಿ)

ಲಯವಿಹೀನ ರಚನೆಗಳೇ ಕವಿತೆಯ ಹೆಸರಿನಲ್ಲಿ ಪ್ರಕಟವಾಗುತ್ತಿರುವ ನಮ್ಮ ಸಂದರ್ಭದಲ್ಲಿ, ಪೂರ್ಣಿಮಾ ಅವರಿಗಿರುವ ಲಯಪ್ರಜ್ಞೆ ನಮ್ಮ ಗಮನ ಸೆಳೆಯುತ್ತದೆ. ಓದಿದಾಗ ಕಾವ್ಯಾನುಭವದ ಸುಖ ನೀಡುತ್ತದೆ. ಕನ್ನಡ ಕಾವ್ಯ ಪರಂಪರೆಯ ವಿವಿಧ ಲಯಗಳನ್ನು ಇವರು ತಮ್ಮ ಕಾವ್ಯ ರಚನೆಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ರಂಗಭೂಮಿ ಕಲಾವಿದೆಯಾದ ಇವರ ಕವಿತೆಗಳ ರಚನಾವಿನ್ಯಾಸದಲ್ಲಿ ದೃಶ್ಯವತ್ತಾದ ಚಿತ್ರ ಹಾಗೂ ಅರ್ಥವತ್ತಾದ ಲಯ ಸಹಜವಾಗಿ ಸೇರಿಕೊಂಡಿದೆ.

ಕನ್ನಡ ಪರಂಪರೆಯ ಕಾವ್ಯಸತ್ವವನ್ನು ಗಾಢವಾಗಿ ತನ್ನ ವ್ಯಕ್ತಿತ್ವದಲ್ಲಿ ಮೈಗೂಡಿಸಿಕೊಂಡಿರುವ ಪೂರ್ಣಿಮಾ ಆಶಯ ಮತ್ತು ಆಕೃತಿ ಎರಡರಲ್ಲಿಯೂ ತನ್ನತನದ ಹಾದಿಯನ್ನು ಗುರ್ತಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಮಕಾಲೀನ ಸಂದರ್ಭದ ಪ್ರಮುಖ ದನಿಯೆಂಬುದನ್ನು `ಸಂತೆಯೊಳಗಿನ ಏಕಾಂತ’ ನಿಸ್ಸಂದೇಹವಾಗಿ ಸಾಬೀತುಪಡಿಸುತ್ತದೆ.ಗಡಿ ದಾಟಿ ಬಂದಿರುವ ನನಗೀಗ

ಬಿಟ್ಟುಬಿಡಿ ನನ್ನನ್ನು ನನ್ನಷ್ಟಕೆ
ತಡೆಯನೊಡ್ಡದೆ ಯಾರೂ ನನ್ನಿಷ್ಟಕೆ

(ಅಕ್ಕನಂತೊಬ್ಬಳು ಅನುರಕ್ತೆ)

`ತನ್ನದೇ ಆದ ಕೊಠಡಿ’ಗೂ `ಆಲಯದ ಕಿರು ಚೌಕಟ್ಟನ್ನು’ ಮೀರುವ ಹಂಬಲಕ್ಕೂ ಇರುವ ವ್ಯತ್ಯಾಸ ಗಮನಿಸಬೇಕಾದಂತಹದ್ದು. ಮಾತ್ರವಲ್ಲ ಇಲ್ಲಿ `ಆಲಯ’ ಸಹಜವಾಗಿಯೇ ನಮಗೆ ವಚನ ಸಾಹಿತ್ಯದ `ಬಯಲಿ’ನ ಪರಿಕಲ್ಪನೆಯನ್ನು ನೆನಪಿಸಿಬಿಡುವುದರಿಂದ ಇಲ್ಲಿನ ಅರ್ಥ ವಿಸ್ತಾರಗೊಳ್ಳುತ್ತದೆ.

ಈ ನನ್ನಜ್ಜಿ
ಎಲ್ಲರಜ್ಜಿಯಂತಲ್ಲ
ಕೊನೆತನಕ `ಅಜ್ಜಿ’
ಆಗದೇ ಉಳಿದವಳು
ನನ್ನ ಸಪ್ಪೆಮೊಗದಲ್ಲಿ
ನಗೆ ಉಕ್ಕಿಸಿದವಳು
ನನ್ನ ಬಾಳದೋಣಿಗೆ
ಹುಟ್ಟುಹಾಕಿದವಳು
ನನ್ನ ಎದೆಯಂಗಳದಿ
ಕನಸಬೀಜ ಬಿತ್ತಿದವಳು
ಪ್ರೀತಿ ಉಣಿಸುತ್ತಲೇ
ಮಣ್ಣಲ್ಲಿ ಕರಗಿ ಹೋದವಳು
(ಎಲ್ಲರಂತಲ್ಲ)

ಹೀಗೆ ಅಜ್ಜಿಯ ಅಂತಃಕರಣವನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವ ಪೂರ್ಣಿಮಾ –

ನನ್ನಜ್ಜಿ ಹೇಳುತ್ತಿದ್ದಳು:
ಮೆದುವಾಗಿ ಮಾತಾಡು
ಮಾತು ಮಾರೆತ್ತರಕ್ಕೆ ಹಾರಿ
ಮಾಡನ್ನು ಮುಟ್ಟಬಾರದು
ಹೆಣ್ಣೆಂದರೆ ಹೀಗಿರಬೇಕು

MORE FEATURES

ಉಪಮೇಯ, ರೂಪಕಗಳ ಮೂಲಕ ಓದುಗನನ್ನ ಹಿಡಿದು ಕೂರಿಸಬಹುದು

22-03-2025 ಬೆಂಗಳೂರು

“ಒಂದೊಳ್ಳೆ ಹೋಳಿಗೆ ಊಟ ಮಾಡಿದ ಅನುಭವ. ಮಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ಹಸಿ ಬಾಣಂತಿಯ ಎಡಗೈ ತಿಂದಷ್ಟೇ ತೃಪ...

ಉತ್ತರ ಕರ್ನಾಟಕದ ವಿಚಾರಗಳು ಇಲ್ಲಿವೆ

21-03-2025 ಬೆಂಗಳೂರು

“ಒಟ್ಟಾರೆಯಾಗಿ ಅತ್ಯಂತ ಖುಷಿಯಿಂದ ಓದಿ ಖುಷಿ ಪಡುವ, ನಕ್ಕು ನಗಿಸುವ ಪ್ರಬಂಧ ಸಂಕಲನ ಇದು,”ಎನ್ನುತ್ತಾರೆ ಸ...

‘ಅದನ್ನು ಬಳಸಬೇಡಿ, ಬೇರೆ ರಾಗಿ ಸ್ವಚ್ಛ ಮಾಡಿಸಿ ಕಳಿಸುತ್ತೇನೆ’

21-03-2025 ಬೆಂಗಳೂರು

"ವೈಯಕ್ತಿಕ ನೆಲೆಯಲ್ಲಿ ನನಗಿಷ್ಟ ಬಂದ, ಸಿಕ್ಕ ಸಿಕ್ಕ ಸಾಹಿತ್ಯ ಕೃತಿಗಳನ್ನು ಓದಿಕೊಳ್ಳುತ್ತಿದ್ದೆನಷ್ಟೇ. ಬರೆದಿಟ್...