ಪಠ್ಯಗಳ ಸಂಪಾದಕರಾಗಿ ಮೂವತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿರುವ ಡಾ. ಜಯದೇವಿ ಗಾಯಕವಾಡ


"ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ, ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ, ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ" ಎನ್ನುತ್ತಾರೆ ಡಾ ಹಣಮಂತ ಬಿ. ಮೇಲಕೇರಿ. ಅವರು ’ಜಯದೇವಿ ಗಾಯಕವಾಡ’ ವಾಚಿಕೆ (22) ಕ್ಕೆ ಬರೆದ ಪ್ರಸ್ತಾವನೆ ಇಲ್ಲಿದೆ.

ಕಲ್ಯಾಣ ಕರ್ನಾಟಕದ ಮಹತ್ವ, ಇತಿಹಾಸ, ಚರಿತ್ರೆ, ಸಾಹಿತ್ಯ, ಸಂಸ್ಕೃತಿಯಿಂದ ತನ್ನದೇ ಆದ ಹತ್ತು ಹಲವು ಅನೇಕತೆಯಲ್ಲಿ ಬಹುಸಂಸ್ಕೃತಿಯು ಕಂಡು ಬರುತ್ತದೆ. ಕವಿರಾಜ ಮಾರ್ಗ, ಆರಾಧನಾ ಕರ್ಣಾಟಟೀಕೆ, ವಡ್ಡಾರಾಧನೆ, ಮಿತಾಕ್ಷರಿ ಸಂಹಿತೆ, ವಚನ, ಕೀರ್ತನೆ, ತತ್ವಪದ, ಸ್ವರವಚನ, ಸೂಫಿ, ಅನುಭಾವಿಕ ನೆಲೆಯ ಸಾಹಿತ್ಯ ರಚನೆಯಾಗಿವೆ. ಆಧುನಿಕ ಸಾಹಿತ್ಯದ ಒಲವು ಚೆಲುವುಗಳ ನಡುವೆ; ಹೋರಾಟ, ಚಳವಳಿಗಳ ಮೂಲಕ ಸಾಹಿತ್ಯ ಸಂಸ್ಕೃತಿಗೆ ಬದ್ಧವಾದ ಚಿಂತನೆಯನ್ನು ಹೊರಹಾಕಿದವರು ಹಲವು ಸಾಹಿತಿಗಳು, ಅವರಲ್ಲಿ ಶಾಂತರಸ, ನೀರಮಾನ್ವಿ, ಶೈಲಜಾ ಉಡಚಣ, ರಾಜಪುರೋಹಿತ, ಪಂಚಾಕ್ಷರಿ ಹಿರೇಮಠ, ದೇವೇಂದ್ರಕುಮಾರ ಹಕಾರಿ, ಚನ್ನಬಸಪ್ಪ ಬೆಟ್ಟದೂರು, ಕೆ. ಮುದ್ದಣ್ಣ, ಬೀಚಿ, ಚೆನ್ನಣ್ಣ ವಾಲೀಕಾರ, ಗೀತಾ ನಾಗಭೂಷಣ, ಚಂದ್ರಕಾಂತ ಕುಸನೂರು, ಎ.ಕೆ. ರಾಮೇಶ್ವರ ಅವರ ತರುವಾಯ ನುಗಡೋಣಿ, ಹತಗುಂದಿ, ಭಾಸ್ಕ‌ರ್, ಪೋತೆ, ಹೊನಗುಂಟಿಕರ್, ಹೊಯ್ಕಲ್, ಕಂಠಿ, ಅಂಬಲಗೆ, ಖಾನಾಪುರೆ ಮೊದಲಾದವರ ಸಾಲಿನಲ್ಲಿ ಮಹಿಳಾ ಅಭಿವ್ಯಕ್ತಿ ಕೊಟ್ಟವರು, ದಲಿತತತ್ವ ಚಿಂತನೆಯ ಹರಿಬಿಟ್ಟ ಲೇಖಕಿಯರಲ್ಲಿ ಎದ್ದು ಕಾಣುವ ಹೆಸರು ಡಾ. ಜಯದೇವಿ ಗಾಯಕವಾಡ ಅವರದ್ದು.

ಅವರು ಮೂಲತಃ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಇಟಗಿ ಗ್ರಾಮದವರು. ಇವರ ಅಜ್ಜ ಭೀಮರಾವ ಶಹಬಾದ್‌ಗೆ ಬಂದು ನೆಲೆಸಿದರು. ಇವರ ತಂದೆ ಲ್ಯಾಬ್ ಅಸಿಸ್ಟೆಂಟ್ ಹುದ್ದೆಗೆ ಬೀದರಿಗೆ ಬಂದು ನೆಲೆಸಿದರು. ಆಗಲೇ ಬುದ್ಧ- ಅಂಬೇಡ್ಕರ್ ಚಿಂತನೆ ಅರಿತವರು. ಚಿದ್ರಿಯಲ್ಲಿದ್ದ ಬಿ. ಶ್ಯಾಮಸುಂದರ ಭಾಷಣದಿಂದ ಪ್ರೇರಿತರಾಗಿ ಅವರ ಹಿಂದೆ ಓಡಾಡಿದವರು. ಇವರೆಲ್ಲರ ಪ್ರೇರಣೆಯಿಂದ ಮಲ್ಲಪ್ಪ ಗಾಯಕವಾಡ ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಛಲ ತೊಟ್ಟರು. ಘಾಟಬೋರಾಳ- ರಾಜೇಶ್ವರದಲ್ಲಿ ಅವರು ನಿವೃತ್ತಿಯಾಗಿ ಅಲ್ಲೇ ಇದ್ದು ಈಗ ಕಲಬುರಗಿ ನಿವಾಸಿಯಾದವರು. ಇಂತಹ ಮಲ್ಲಪ್ಪ ಗಾಯಕವಾಡ-ಬಸಮ್ಮರ ಮಗಳಾಗಿ ಡಾ. ಜಯದೇವಿ ಗಾಯಕವಾಡ ಹುಟ್ಟಿದರು.

ಇವರು ಹುಟ್ಟಿದ್ದು ರಾಜೇಶ್ವರದಲ್ಲಿ, ಶಿಕ್ಷಣ ಒಂದನೆಯ ತರಗತಿಯಿಂದ ಏಳನೆಯ ತರಗತಿಯವರೆಗೆ ಸರಕಾರಿ ಶಾಲೆ, ಎಂಟನೆಯ ತರಗತಿಯಿಂದ ಹತ್ತನೆಯ ತರಗತಿವರೆಗೆ ಪ್ರಕಾಶ ಅಂಬೇಡ್ಕರ್ ಪ್ರೌಢಶಾಲೆ, ಹಾಗೆ ಪಿ.ಯು.ಸಿ. ಸತ್ಯಾಶ್ರಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ, ಬಿ.ಎ. ಹುಮನಾಬಾದ ವೀರಭದ್ರೇಶ್ವರ ಕಾಲೇಜು, ಬಿ.ಇಡಿ. ಚಾಂದ ಬೀಬೀ ಬಿ.ಎಡ್. ಕಾಲೇಜು, ಎಂ.ಎ. ಕನ್ನಡ, ಎಂ.ಫಿಲ್., ಪಿಎಚ್.ಡಿ. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದರು. ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದ ಮೇಲ್ವಿಚಾರಕರಾಗಿ (2002-2009) 28.10.2009 ರಿಂದ ಕಾಲೇಜು ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಚಿಟಗುಪ್ಪದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಸಹಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಐದನೆಯ ತರಗತಿಯಿಂದಲೇ ಭಾಷಣ ಮಾಡುವ ಪ್ರವೃತ್ತಿ ಬೆಳೆಯಿತು. ಪದವಿಯವರೆಗೆ ಭಾಷಣದಲ್ಲಿ ಪ್ರಥಮ ಸ್ಥಾನ ಹೊಂದಿದವರು. ಇದಕ್ಕೆ ಅಣ್ಣ ಭೀಮಶೇನ್ ಕಾರಣರಾದರೆ; ಸಾಹಿತ್ಯಕವಾಗಿ ಬೆಳವಣಿಗೆಗೆ ಪತಿ ಡಾ. ಗವಿಸಿದ್ದಪ್ಪ ಪಾಟೀಲರು ಕಾರಣೀಕರ್ತರು, ಸಾಕ್ಷಿ ಸಿದ್ದಾರ್ಥ, ಸೃಷ್ಟಿ ಇವರ ಬರವಣಿಗೆಗೆ ಸ್ಫೂರ್ತಿದಾಯಕರು. 1997- 98 ರಲ್ಲಿ ಚುಟುಕು ಕವನ ಬರೆಯುತ್ತಾ ಬಂದವರು. 2002 ರಲ್ಲಿ ಯಾಜ್ಞಸೇನಿಯ ಆತ್ಮಕಥನ ಪ್ರಥಮ ಕೃತಿ ರಚನೆ ಪ್ರಥಮ ಕಾದಂಬರಿಯೂ ಹೌದು ಆನಂತರದಲ್ಲಿ ಪ್ರಾಚೀನ ಬೌದ್ಧ ವಿದ್ಯಾಕೇಂದ್ರ ಸನ್ನತಿಯೂ ಸಂಶೋಧನ ಕೃತಿ ಪ್ರಕಟವಾಗಿ ಹೆಸರು ತಂದಿತು. ಕಾವ್ಯ, ಗಜಲ್, ಹಾಯಿಕು, ತಾಂಕಾ, ರುಬಾಯಿ, ಆಧುನಿಕ ವಚನ, ಹೋರಾಟದ ಹಾಡುಗಳು, ಕಾವ್ಯ ಕ್ಷೇತ್ರದಲ್ಲಿ ವಿನೂತನವಾದ ಶೈಲಿ. ಬರಹದ ಮೂಲಕ ಕಾವ್ಯಾಸಕ್ತರ ಗಮನ ಸೆಳೆದಿದ್ದಾರೆ. ಜೀವನ ಚರಿತ್ರೆ, ವೈಚಾರಿಕ ಸಾಹಿತ್ಯ, ವಚನ ಸಾಹಿತ್ಯ, ಸಂಪಾದನೆ, ಪಠ್ಯಗಳ ಸಂಪಾದಕರಾಗಿ ಮೂವತ್ತಕ್ಕೂ ಹೆಚ್ಚು ಕೃತಿ ಪ್ರಕಟಿಸಿದ ಶ್ರೇಯಸ್ಸು ಡಾ. ಜಯದೇವಿ ಗಾಯಕವಾಡ ಅವರಿಗೆ ಸಂದಿದೆ.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾಗಿ, ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ಸದಸ್ಯರಾಗಿ, ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀವಿಜಯ ಸಾಹಿತ್ಯ ಪ್ರಶಸ್ತಿ, ಪ್ರಥಮ ಹೈದ್ರಾಬಾದ ಕರ್ನಾಟಕ ಮಹಿಳಾ ಸಾಹಿತ್ಯ ಸಮ್ಮೇಳನ, ಪ್ರಥಮ ಹುಮನಾಬಾದ ತಾಲೂಕಾ ದಲಿತ ಸಾಹಿತ್ಯ ಸಮ್ಮೇಳನ, ಬಸವಕಲ್ಯಾಣ ತಾಲೂಕು 4ನೇಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮತ್ತು ಎಂಟನೆಯ ರಾಷ್ಟ್ರೀಯ ಹಳಕಟ್ಟಿ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಗೌರವ ದೊರೆತಿದೆ. ದಲಿತ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದಲಿತ ಸಮ್ಮೇಳನ ಗೌರವ ಪ್ರಶಸ್ತಿಗಳು ದೊರಕಿವೆ. ಅಪ್ಪ, ಅವ್ವ-ಅಮ್ಮ, ಅಂತರರಾಷ್ಟ್ರೀಯ ಜಯದೇವಿ ತಾಯಿ ಲಿಗಾಡೆ ಪ್ರಶಸ್ತಿ, ಉರಿಲಿಂಗಪೆದ್ದಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.

- ಡಾ ಹಣಮಂತ ಬಿ. ಮೇಲಕೇರಿ

MORE FEATURES

ನಿಗೂಢ, ಪತ್ತೇದಾರಿಯ ಜಾಡಿನಲ್ಲಿ ಸಾಗುವ ಕಾದಂಬರಿಯಿದು..

19-09-2024 ಬೆಂಗಳೂರು

“ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿದ್ದ ಯಾವುದೋ ಊರು ಅದು. ಆ ಊರಲ್ಲಿ ಸಂಪಾದಕರು, ವರದಿಗಾರರು ಯಾರೆಂದೇ ತ...

ಒಂದು ಕಥೆಯೊಳಗೆ ಎಷ್ಟೆಲ್ಲ ಕಥೆಗಳು!

19-09-2024 ಬೆಂಗಳೂರು

"ನಾವು ಬದುಕನ್ನು ಆ ವರ್ಷ ಪಡೆದ ಸಂಬಳ, ಮಾಡಿದ ಖರ್ಚು, ಕೊಂಡ ವಸ್ತುಗಳು, ಕಳೆದುಕೊಂಡ ವ್ಯಕ್ತಿಗಳು ಎಂಬ ಅಂತಿಮ ಘಟ್...

ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವೇ ಸ್ವತಃ ಕಂಡುಂಡ ರಣರೋಚಕ ಅನುಭವಗಳನ್ನು ದಾಖಲಿಸಿದ್ದಾರೆ

18-09-2024 ಬೆಂಗಳೂರು

"ಕಳೆದ ದಶಕದಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತು ಅಮೆರಿಕ, ನ್ಯಾಟೋ ಪಡೆಗಳ ನಡುವೆ ನಡೆದ ಸುಧೀರ್ಘ ...