ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವೇ ಸ್ವತಃ ಕಂಡುಂಡ ರಣರೋಚಕ ಅನುಭವಗಳನ್ನು ದಾಖಲಿಸಿದ್ದಾರೆ


"ಕಳೆದ ದಶಕದಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತು ಅಮೆರಿಕ, ನ್ಯಾಟೋ ಪಡೆಗಳ ನಡುವೆ ನಡೆದ ಸುಧೀರ್ಘ ಸಂಘರ್ಷದ ಸಮಯದಲ್ಲಿ ಲೇಖಕರು ತಮಗಾದ ಅನೇಕ ಅನುಭವಗಳನ್ನು ಕೃತಿಯಲ್ಲಿ ದಾಖಲಿಸಿದ್ದಾರೆ," ಎನ್ನುತ್ತಾರೆ ನಾಗೇಂದ್ರ ಎ.ಆರ್. ಅವರು ಮಂಜುನಾಥ ಕುಣಿಗಲ್ ಅವರ 'ಕುಣಿಗಲ್ ಟು ಕಂದಹಾರ್’ ಕೃತಿ ಕುರಿತು ಬರೆದ ಅನಿಸಿಕೆ.

ಮನಸ್ಸು ಕಾಣುವ ಕಲ್ಪನೆಗೆ ಮಿತಿಯಿಲ್ಲ. ಆದರೆ ನಡೆದ ಸತ್ಯ ಘಟನೆಗೆ ವಾಸ್ತವದ ಪರಿಧಿಯಿದೆ. ಆದ್ದರಿಂದ ನಾನ್-ಫಿಕ್ಷನ್ ಕೃತಿಗಳನ್ನು ಓದುವಾಗ 'ಇದು ನಿಜಕ್ಕೂ ಸಾಧ್ಯವೇ? ಇದು ಅತಿಶಯೋಕ್ತಿಯಲ್ಲವೇ?' ಎಂದೆಲ್ಲಾ ಮನಸ್ಸು ತರ್ಕಿಸುವುದು ಕಡಿಮೆ. ಇಂತಹ ಅದ್ಭುತ ಅನುಭವ ಕಥನಗಳ ಸಾಲಿಗೆ ಸೇರುವ ಮತ್ತೊಂದು ಕೃತಿ ಮಂಜುನಾಥ ಕುಣಿಗಲ್ ಅವರ 'ಕುಣಿಗಲ್ ಟು ಕಂದಹಾರ್'. ಮಹಾ ಪಲಾಯನ, ಅದ್ಭುತ ಯಾನ, ಪ್ಯಾಪಿಲಾನ್, ಪರ್ವತದಲ್ಲಿ ಪವಾಡ.., ಮೊದಲಾದ ಹಲವು ರೋಮಾಂಚಕ ಕಥನಗಳನ್ನು ಕನ್ನಡದ ಸಾಹಿತಿಗಳು ಅನ್ಯದೇಶದ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರೆ ಮೂಲತಃ ಕನ್ನಡದ ವ್ಯಕ್ತಿಯೊಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವೇ ಸ್ವತಃ ಕಂಡುಂಡ ರಣರೋಚಕ ಅನುಭವಗಳನ್ನು ಒಂದು ಅನುಭವ ಕಥನದ ರೂಪದಲ್ಲಿ ಹೊರತಂದ ದೃಷ್ಟಾಂತಗಳು ಬಹು ವಿರಳ. ಆ ನಿಟ್ಟಿನಲ್ಲಿ ಇದೊಂದು ಅಪರೂಪದ ಪುಸ್ತಕ.

ಕಳೆದ ದಶಕದಲ್ಲಿ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತು ಅಮೆರಿಕ, ನ್ಯಾಟೋ ಪಡೆಗಳ ನಡುವೆ ನಡೆದ ಸುಧೀರ್ಘ ಸಂಘರ್ಷದ ಸಮಯದಲ್ಲಿ ಲೇಖಕರು ತಮಗಾದ ಅನೇಕ ಅನುಭವಗಳನ್ನು ಕೃತಿಯಲ್ಲಿ ದಾಖಲಿಸಿದ್ದಾರೆ. ವೃತ್ತಿಯಿಂದ ಒಬ್ಬ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಮಂಜುನಾಥ್ ಕುಣಿಗಲ್ ಅವರು, ಯುದ್ಧದ ಸಮಯದಲ್ಲಿ ಅಮೇರಿಕಾ ಮತ್ತು ನ್ಯಾಟೋ ಪಡೆಗಳಿಗೆ ಬೇಕಾದ ಎಂಜಿನಿಯರಿಂಗ್ ಸೌಲಭ್ಯಗಳನ್ನು ಒದಗಿಸಲು ಹಲವು ಬಾರಿ ಆಫ್ಘಾನಿಸ್ತಾನಕ್ಕೆ ತೆರಳಿದ್ದರು. ಅಲ್ಲಿನ ಮಿಲಿಟರಿ ಕ್ಯಾಂಪ್ಗ಼ಳಲ್ಲಿ ಕೆಲಸ ಮಾಡುವಾಗ ಅವರು ಕಣ್ಣಾರೆ ಕಂಡ ಹಿಂಸಾಚಾರ, ಉಗ್ರರ ರಾಕೆಟ್ ಮತ್ತು ಶೆಲ್ ದಾಳಿಗಳು, ಯುದ್ಧದಿಂದ ತತ್ತರಿಸಿದ ಅಲ್ಲಿಯ ಸಾಮಾನ್ಯ ನಾಗರೀಕರ ಜೀವನ, ಪ್ರಕ್ಷುಬ್ಧ ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಕೆಲ ಸ್ಥಳೀಯ ಶಕ್ತಿಗಳು, ಕ್ಯಾಂಪುಗಳಲ್ಲಿನ ಭದ್ರತಾ ವೈಪರಿತ್ಯಗಳು, ಮಿಲಿಟರಿ ಆಡಳಿತದಲ್ಲಿಯೂ ಇದ್ದ ಭ್ರಷ್ಟಾಚಾರ ಮತ್ತು ಒಳ ರಾಜಕೀಯ....ಇಂತಹ ಹಲವಾರು ಸಂಗತಿಗಳನ್ನು ಈ ಪುಸ್ತಕ ಓದುಗನ ಕಣ್ಣೆದುರಿಡುತ್ತದೆ. ಲೇಖಕರು ತಾವು ಅಮೇರಿಕಾ-ಇರಾಕ್ ಯುದ್ಧದ ಸಮಯದಲ್ಲಿ, ಕಂಪನಿಯ ಕೆಲಸದ ಮೇಲೆ ಇರಾಕಿಗೆ ತೆರಳಿದಾಗ ಆದ ಅನುಭವಗಳನ್ನೂ ಇಲ್ಲಿ ದಾಖಲಿಸಿದ್ದಾರೆ.

ಈ ಹೋರಾಟ, ಯುದ್ಧ, ರೋಚಕತೆ ಎಲ್ಲವನ್ನೂ ಸ್ವಲ್ಪ ಪಕ್ಕಕ್ಕಿಡೋಣ. ಆದಾಗ್ಯೂ, ಈ ಪುಸ್ತಕದಲ್ಲಿ ದಾಖಲಾಗಿರುವ ಕೆಲವು ಸಂಗತಿಗಳು, ಬದುಕಿನ ಸಾಧ್ಯತೆಗಳ ಕುರಿತು ನನ್ನ ಮನತಟ್ಟಿದವು. ಅದರಲ್ಲಿ ಒಂದನ್ನು ಹೇಳಲೇಬೇಕು. ದುಬೈ ನಗರದಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲೇಖಕರು, ತಮ್ಮ ಕಂಪನಿಯು ನಿರ್ವಹಿಸುತ್ತಿದ್ದ ಎಂಜಿನಿಯರಿಂಗ್ ಕೆಲಸಗಳನ್ನು ನೋಡಿಕೊಳ್ಳಲು ಆಫ್ಘಾನಿಸ್ತಾನಕ್ಕೆ ಆಗಾಗ ತೆರಳುತ್ತಲೇ ಇರುತ್ತಾರೆ. ಒಮ್ಮೆ ಅವರಿಗೆ ಆಫ್ಘಾನಿಸ್ತಾನದ ಶಿಂದಾಂದ್ ಎಂಬ ಮಿಲಿಟರಿ ಕ್ಯಾಂಪಿನಲ್ಲಿ ಪರಿಚಯವಾದ 'ಎಮಿರ್' ಎಂಬ ವ್ಯಕ್ತಿಯೊಬ್ಬ, ತನಗೆ ದುಬೈನಲ್ಲೇ ಯಾವುದಾದರೂ ಕೆಲಸ ಕೊಡಿಸುವಂತೆ ಲೇಖಕರ ಬೆನ್ನೇರುತ್ತಾನೆ. ಅಫ್ಘಾನಿಸ್ತಾನದ ಮರಳುಗಾಡುಗಳಲ್ಲಿ, ಯುದ್ಧಭೂಮಿಗಳಲ್ಲಿ ಕೆಲಸ ಮಾಡಲು ಅವನಿಗೆ ಇಷ್ಟವಿರಲಿಲ್ಲ. ಅದಕ್ಕೆ ಭಯವೂ ಕಾರಣವಿರಬಹುದು. ಕೊನೆಗೂ ಆತನ ಆಸೆಯಂತೆ ದುಬೈ ನಗರದಲ್ಲಿ ಲೇಖಕರ ಕಂಪನಿಯಲ್ಲೇ ಆತನಿಗೊಂದು ಉದ್ಯೋಗ ದೊರಕುತ್ತದೆ. ಆತನ ಬದುಕು ಅವನೆಣಿಕೆಯಂತೆ ಸುಖಕರವಾಗುತ್ತದೆ. ಲೇಖಕರೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತಿದ್ದ ಎಮಿರ್, ಒಮ್ಮೆ ಇದ್ದಕ್ಕಿದ್ದಂತೆ ಮರೆಯಾಗುತ್ತಾನೆ. ಇದಾಗಿ ಕೆಲ ಸಮಯದ ನಂತರ ಲೇಖಕರಿಗೆ ತಿಳಿಯುತ್ತದೆ. ಆತನಿಗೆ ದುಬೈ ನಗರದ ಶೇಕ್ ಝಯೇದ್ ರಸ್ತೆಯಲ್ಲಿ ದೊಡ್ಡ ಅಪಘಾತವಾಗಿ ದೇಹದ ಬಲಪಾರ್ಶ್ವ ಪೂರ್ತಿ ಊನವಾಗಿರುತ್ತದೆ !!! ಬದುಕು ಎಷ್ಟು ವಿಚಿತ್ರ !!! ಎಷ್ಟೇ ಸಂಬಳ ನೀಡಿದರೂ ಯುದ್ಧಭೂಮಿಗಳಲ್ಲಿ ಕೆಲಸ ಮಾಡಲು ಜನ ಹಿಂದೇಟು ಹಾಕುತ್ತಾರೆ. ಅಂತದ್ದರಲ್ಲಿ 'ಶ್ರೀಕಾಂತ್ ಪೊಳಲಿ' ಎಂಬ ಕನ್ನಡದ ವ್ಯಕ್ತಿಯೊಬ್ಬರು ಕಂದಹಾರ್ ಕ್ಯಾಂಪಿನಲ್ಲಿ ನೆಟ್ವರ್ಕ್ ನಿರ್ವಾಹಕರಾಗಿ ಕೆಲಸ ಮಾಡುತ್ತಾ, ತನ್ನ ಪತ್ನಿಯೊಂದಿಗೆ ಹಲವು ವರ್ಷ ಅಲ್ಲಿಯೇ ಸುರಕ್ಷಿತವಾಗಿ ನೆಲೆಸಿದ್ದರು. ಅದೇ ಯುದ್ಧಭೂಮಿಯ ಕೆಲಸ ಬಿಟ್ಟು ದುಬೈಗೆ ಬಂದ ಎಮಿರ್ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದ. ಅದೃಷ್ಟ ಕೈಕೊಟ್ಟರೆ ಬದುಕು ಯಾವ ಸ್ಥಳದಲ್ಲೂ, ಯಾವ ಕ್ಷಣದಲ್ಲೂ ಹೇಗೆ ಬದಲಾಗುತ್ತದೆ !!

ಪುಸ್ತಕದ ಆರಂಭದಲ್ಲಿ, ಅಮೆರಿಕ ಮತ್ತು ನ್ಯಾಟೋ ಪಡೆಗಳ ವಾಸ್ತವ್ಯ ಮತ್ತು ಯುದ್ಧಾಭ್ಯಾಸಕ್ಕೆ ನಿರ್ಮಿಸಲ್ಪಟ್ಟಿದ್ದ ಕಂದಹಾರ್ ಏರ್`ಬೇಸಿನ ವರ್ಣನೆ ಬಹಳ ಮುದ ನೀಡಿತು. ಅದರಲ್ಲಿಯೂ ಸೈನಿಕರ ಊಟೋಪಚಾರಕ್ಕಾಗಿಯೇ ಇದ್ದ ದೊಡ್ಡ ಫ್ಯಾಬ್ರಿಕ್ಗ಼ಳು, ಅಲ್ಲಿನ ಬಗೆಬಗೆಯ ಭಕ್ಷ್ಯಗಳು !! ಮನಸ್ಸು ಮಾಡಿದರೆ ಮನುಷ್ಯ ಎಂತಹ ಬಂಜರುಭೂಮಿಯಲ್ಲೂ, ಒಂದು ತಾತ್ಕಾಲಿಕ ಯುದ್ಧನಗರವನ್ನೇ ಹೇಗೆ ಸೃಷ್ಟಿಸಬಲ್ಲ ಎಂದು ಆಶ್ಚರ್ಯವಾಯಿತು. ಆದರೆ ಕಾಬೂಲ್ ನಗರದ ಬಡತನ, ಧೂಳು, ಮಾಲಿನ್ಯ, ಸಾಮಾಜಿಕ ಅಸಮತೋಲನಗಳು, ಹೆಂಗಸರು ಮಕ್ಕಳೆನ್ನದೆ ಅವರ ಕಷ್ಟಗಳನ್ನು ಓದುವಾಗ ಮನಸ್ಸಿಗೆ ವೇದನೆಯಾಯಿತು. ಒಂದೇ ದೇಶದ ಎರಡು ನಗರಗಳು. ಆದರೆ ಪರಿಸ್ಥಿತಿಯಲ್ಲಿ ಎಷ್ಟು ವೈರುಧ್ಯ !!

ಕೊನೆಗೂ ಯುದ್ಧ ಪರಿಸ್ಥಿತಿ ತಣ್ಣಗಾದ ನಂತರ, ಸೈನಿಕರಿಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಯುದ್ಧನಗರಿ ಕರಗಿಹೋಯಿತು. ಬಡತನದ ಕಾಬೂಲ್ ಹಾಗೆಯೇ ಉಳಿಯಿತು.

ಇದನ್ನೆಲ್ಲಾ ಓದಿದಾಗ ಕೊನೆಯಲ್ಲಿ ಅನಿಸಿದ್ದು ಇಷ್ಟೇ.... ಮನುಷ್ಯ ಅದೆಷ್ಟೇ ಬೆಳೆದರೂ ಕಾಲದೆದುರು ಅದೆಷ್ಟು ಕುಬ್ಜ !!

- ನಾಗೇಂದ್ರ ಎ.ಆರ್.


 

 

 

MORE FEATURES

ಸಾಹಿತ್ಯ ಸಾಧಕರಲ್ಲಿ ನಿಲ್ಲುವ ಅಪ್ರತಿಮ ವ್ಯಕ್ತಿತ್ವವುಳ್ಳ ಸೃಜನಾತ್ಮಕ ಸಾಹಿತಿ ಗವಿಸಿದ್ಧಪ್ಪ

19-09-2024 ಬೆಂಗಳೂರು

“ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಮುಟ್ಟದ ವಿಷಯವಿಲ್ಲ ಎಂಬ ನಾಡ ನುಡಿಯಂತೆ ಡಾ. ಗವಿಸಿದ್ದಪ್ಪ ಹೆಚ್ ಪಾಟೀಲ ಅವರ...

ನಿಗೂಢ, ಪತ್ತೇದಾರಿಯ ಜಾಡಿನಲ್ಲಿ ಸಾಗುವ ಕಾದಂಬರಿಯಿದು..

19-09-2024 ಬೆಂಗಳೂರು

“ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿದ್ದ ಯಾವುದೋ ಊರು ಅದು. ಆ ಊರಲ್ಲಿ ಸಂಪಾದಕರು, ವರದಿಗಾರರು ಯಾರೆಂದೇ ತ...

ಒಂದು ಕಥೆಯೊಳಗೆ ಎಷ್ಟೆಲ್ಲ ಕಥೆಗಳು!

19-09-2024 ಬೆಂಗಳೂರು

"ನಾವು ಬದುಕನ್ನು ಆ ವರ್ಷ ಪಡೆದ ಸಂಬಳ, ಮಾಡಿದ ಖರ್ಚು, ಕೊಂಡ ವಸ್ತುಗಳು, ಕಳೆದುಕೊಂಡ ವ್ಯಕ್ತಿಗಳು ಎಂಬ ಅಂತಿಮ ಘಟ್...