`ಒಂದೊಂದು ತಲೆಗೂ ಒಂದೊಂದು ಬೆಲೆ' ಬರಿಯ ಕಾದಂಬರಿಯಲ್ಲ...


ಲೇಖಕ ಎಂ ಆರ್ ದತ್ತಾತ್ರಿ ಅವರ ‘ಒಂದೊಂದು ತಲೆಗೂ ಒಂದೊಂದು ಬೆಲೆ’ ಕೃತಿಯ ಬಗೆಗೆ ಬರಹಗಾರ ಕಾರ್ತಿಕೇಯ ಅವರ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಕೃತಿ: ಒಂದೊಂದು ತಲೆಗೂ ಒಂದೊಂದು ಬೆಲೆ
ಲೇಖಕ: ಎಂ ಆರ್ ದತ್ತಾತ್ರಿ
ಪುಟ: 248
ಬೆಲೆ: 250
ಮುದ್ರಣ: 2022
ಪ್ರಕಾಶನ: ಅಂಕಿತ ಪುಸ್ತಕ

ದತ್ತಾತ್ರಿ ರವರ ಬರಹದ ಶೈಲಿ ತುಂಬಾ ಇಷ್ಟವಾಯಿತು. *ಒಂದೊಂದು ತಲೆಗೂ ಒಂದೊಂದು ಬೆಲೆ* ಒಂದು ಅದ್ಭುತ ಕಾದಂಬರಿ.

ಮುಖ್ಯ ಪಾತ್ರ ಶಿವಸ್ವಾಮಿ ಮತ್ತು ಧಾವಲ್, ಇಲ್ಲಿ ಶಿವಸ್ವಾಮಿ ಕೆಲವು ಕಡೆ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ, ಬಿ.ಇ.ಎಲ್ ನಲ್ಲಿ 35 ವರ್ಷ ಕಾಲ ಕೆಲಸ ಮಾಡಿ 2 ವರ್ಷಗಳಿಂದ ನಿವೃತ್ತಿಯಾಗಿದ್ದರೂ ಮತ್ತೆ ತಾವು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ಎನ್ನುವುಕ್ಕಿಂತ ಹೆಚ್ಚು ಅನಿವಾರ್ಯವಾಗುತ್ತದೆ, ಕರ್ನಾಟಕದವರಾದರೂ ಘಾಜಿಯಾಬಾದಿನಲ್ಲಿ 35 ವರ್ಷವಿದ್ದು ಬೆಂಗಳೂರಿಗೆ ಬಂದು ನೆಲಸಿ ಖಾಸಗಿ ಕಂಪನಿಗೆ ಓಡಾಡುವಾಗ ಬೆಂಗಳೂರಿನ ಟ್ರಾಫಿಕ್ ಹಾಗು ಮೆಟ್ರೋ ಪ್ರಯಾಣಗಳ ಅನುಭವದಿಂದ ಇಷ್ಟು ಕಷ್ಟ ಪಟ್ಟು ಕೆಲಸ ಮಾಡಲು ಅವಶ್ಯಕತೆಯಿದೆಯೇ ಎಂದು ಹಲವಾರು ಬಾರಿ ಅನಿಸುದ್ದುಂಟು ಆದರೆ ತಮ್ಮ ಜವಾಬ್ದಾರಿಗಳನ್ನು ಪೂರೈಸಲೇ ಬೇಕಲ್ಲವೆ. ಸರ್ಕಾರಿ ಕಂಪನಿಯಲ್ಲಿ ಮಾಡುತ್ತಿರುವ ಕೆಲಸಕ್ಕೂ, ಅಲ್ಲಿದ್ದ ನೌಕರರಿಗೂ ಹಾಗು ಖಾಸಗೀ ಕಂಪನಿಯಲ್ಲಿ ಮಾಡುವ ಕೆಲಸಕ್ಕೂ ಇಲ್ಲಿರುವ ನೌಕರರಿಗೂ ತುಂಬಾ ವ್ಯತ್ಯಾಸ, ಇಲ್ಲಿ ಪ್ರತಿಯೊಂದಕ್ಕೂ ಒಂದು ಪ್ರೋಟೋಕಾಲ್ ಅನುಸರಿಸಿ ಬೇಕಾಗಿ ಬರುತ್ತದೆ, ಪ್ರತಿ ದಿನ ತಮ್ಮ ಕೆಲಸದ ಬಗ್ಗೆ ತಮ್ಮ ಮ್ಯಾನೇಜರ್ ಗೆ ವರದಿ ಮಾಡುವ ಕಟ್ಟುನಿಟ್ಟುಗಳೂ ಇರುತ್ತವೆ,ಕೆಲವು ಸಂದರ್ಭದಲ್ಲಿ ತಾವು ಕೊಡುವ ಸಲಹೆಗಳು ಇತರರಿಗೆ ಸರಿ ಅನಿಸಿದರು ಅದನ್ನು ಮೇಲಧಿಕಾರಿಗಳು ಒಪ್ಪಿಕೊಳ್ಳುವುದಕ್ಕೆ ಈಗೋ ಅಡ್ಡ ಬರುವುದೂ ಕಂಡಿದ್ದಾರೆ, ಕೆಲವು ಸಲ ಪರಿಗಣಿಸಿರುವುದನ್ನೂ ಕಂಡಿದ್ದಾರೆ. ಕೆಲವನ್ನು ಒಪ್ಪಿದರೂ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಮಯ ಹಿಡಿಯುವುದನ್ನೂ ಕಂಡಿದ್ದಾರೆ, ಅಲ್ಲಿದ್ದ ಕೆಲವರಿಗೆ ಅಷ್ಟು ಬೇಗ ಹೊಂದಿಕೊಳ್ಳುವುದೂ ಅಷ್ಟು ಸುಲಭದ ಮಾತಲ್ಲ. ಆದರೂ ಇದೆಲ್ಲದರ ಮಧ್ಯೆ ಅವರ ಧೈರ್ಯ ಹಾಗು ಚಾಣಾಕ್ಷತೆಯಿಂದ ಖಾಸಗೀ ಕಂಪನಿಯ ಕೆಲಸಕ್ಕೆ ಸರಿಹೊಂದಿಸಿಕೊಳ್ಳುವುದಲ್ಲದೆ ಅಲ್ಲಿದ್ದ ನೌಕರರಿಗೂ ತುಂಬಾ ಹತ್ತಿರವಾಗುತ್ತಾರೆ, ಅವರು ಎದುರಾಗುವ ಪ್ರಸಂಗಗಳನ್ನು ಹೇಳುವುದಕ್ಕಿಂತ ಓದಿಯೇ ಸವಿಯಬೇಕು. 

ವಿದೇಶಕ್ಕೆ ಹೋದ ಮಗನು ಬರುವುದರೊಳಗೆ ಮನೆ ಮಾಡಬೇಕೆಂದು ನಿರ್ಧರಿಸಿ ಹಣದ ಜವಾಬ್ದಾರಿ ಮಗನ ಮೇಲೆ ಹೊರಸಕೂಡದೆಂದು ಶಿವಸ್ವಾಮಿ ಲಕ್ಷಗಟ್ಟಲೆ ಹಣ ಸುರಿದು ಮನೆ ಖರೀದಿಸಿದರೂ, ಬಿಲ್ಡರ್ ಗಳು ಪದೇ ಪದೇ ಹಣ ಕೇಳಿ ಸತಾಯಿಸಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ರಿಯಲ್ ಎಸ್ಟೇಟ್ ರವರ ಧಂದೆಗೆ ಒಳಗಾಗಿ ಹಣವನ್ನು ಒದಗಿಸಲು ಕೆಲಸಕ್ಕೆ ಸೇರಿ ಅಲ್ಲಿ ಕಂಪನಿಯಲ್ಲೂ, ಇಲ್ಲಿ ಮನೆಯ ವಿಷಯದಲ್ಲೂ ಶಿವಸ್ವಾಮಿ ಎದುರಾಗುವ ಹಲವಾರು ಪ್ರಸಂಗಗಳನ್ನು ಓದಿದಾಗ ದುಖವಾಗುತ್ತದೆ. ರಿಯಲ್ ಎಸ್ಟೇಟ್ ಧಂದೆ ಎನ್ನುವುದು ಈ ನಡುವೆ ಎಲ್ಲಾ ಕಡೆ ಸಾಮಾನ್ಯವಾಗಿದೆ. “ಅಸ್ತಿತ್ವಕ್ಕೆ ಮನೆ ಬೇಕು ಆದರೆ ವಿಚಿತ್ರವಾಗಿ, ಅಸ್ತಿತ್ವಕ್ಕೂ ಮನೆಗೂ ವಿಲೋಮ ಸಂಬಂಧವಿದೆ, ಮನೆ ದೊಡ್ಡದಾದಷ್ಟು ಅಸ್ತಿತ್ವ ಕುಗ್ಗುತ್ತದೆ”. ಹೀಗೆ ತಮ್ಮದೇ ಆದ ಬಗೆಬಗೆಯ ಸಮಸ್ಯೆಗಳಿದ್ದರೂ ಶಿವಸ್ವಾಮಿಯು ಕೆಲಸವನ್ನು ನೀಯತ್ತಿನಿಂದ ನಿರ್ವಹಿಸುತ್ತಾ, ನಮಗೆ ಆದರ್ಶವಾಗುತ್ತಾರೆ. ಯಾವುದೇ ಸಮಸ್ಯೆಯನ್ನು ಬಿಡಿಸುವ ಮೊದಲು ಮನುಷ್ಯನ ಆಳಕ್ಕೆ ಇಳಿದು ಆತನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಎನ್ನುವುದು ಅವರ ನಂಬಿಕೆ.

ತಾನು ಬೆಳಸಿದ ಕಂಪನಿ ತನ್ನ ಆಧೀನದಲ್ಲೇ ಇರಬೇಕೆಂದು ಹಾಗು ತಾವು ಹೇಳಿದ ಹಾಗೆ ನಡೆಯಬೇಕೆಂಬ ಧಾವಲ್ ರವರ ಹಟ ಒಂದು ಕಡೆಯಾದರೆ, ತಮ್ಮ ಮನೋ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಅವರು ಅಪ್ಡೇಟ್ ಆಗುತ್ತಿಲ್ಲವೆಂದು ತಮಗೆ ಜವಾಬ್ದಾರಿಗಳೇ ಕೊಡುತ್ತಿಲ್ಲವೆಂದು ತಂದೆಯ ಮೇಲೆ ಮಗನ ಆರೋಪಗಳನ್ನು ಕಾಣಬಹುದು, ಈ ಕಂಪನಿ ನಡೆಸುವ ಜನರು ಶ್ರೀಮಂತರೆ ಇರಬಹುದು ಆದರೆ ಹಣ ಎಷ್ಟಿದ್ದರೇನು ಲಾಭ, ತಮಗೆ ಸುಖವಿಲ್ಲ, ತಮಗೆ ಬಂಗಲೆ ಇದ್ದರೂ ಅಲ್ಲಿ ವಾಸವಾಗಿರುವುದು ಎಷ್ಟುಜನ? ಒಂದೇ ಮನೆಯಲ್ಲಿದ್ದರೂ ಮಾತಾನಾಡಲೂ ಆಗದೆ ಒಂಟಿಯಾಗಿರುವ ಜೀವನಕ್ಕೆ ಅರ್ಥವೇ ಇಲ್ಲ. ಹಣ ಹೆಚ್ಚಿದ್ದಷ್ಟು ಸುಖವಿಲ್ಲ ಅನ್ನಿಸುತ್ತೆ, ಅದಕ್ಕಾಗಿಯೇ ಜೀವನದಲ್ಲಿ ಸಂಸ್ಕೃತಿ ಮುಖ್ಯ, ತಂದೆ ತಾಯಿ ತಮ್ಮ ಮಕ್ಕಳನ್ನು ಬೆಳೆಸುವ ರೀತಿ ಮುಖ್ಯ. 

ಕಡೆಯಲ್ಲಿ ಶಿವಸ್ವಾಮಿ ತಮ್ಮ ಉದ್ಯೋಗದಲ್ಲಿ ಒಳ್ಳೆ ಹುದ್ದೆಗೆ ತಲಪುತ್ತಾರೋ? ತಮ್ಮ ಮಗಳ ಜೀವನದಲ್ಲಿ ನಡೆದ ಸಂಘಟನೆಗಳನ್ನು ಮರೆಯಲು ಸಾಧ್ಯವಾಯಿತಾ? ಶಿವಸ್ವಾಮಿಯ ಜೀವನದಲ್ಲಿ ಪತ್ನಿ ರೇವತಿ, ಮಕ್ಕಳು ತೇಜೂ, ಸಂಜು ಪಾತ್ರಗಳೇನು? ಕಂಪನಿಯಲ್ಲಿ ಪ್ರಭುದಾಸ್, ಶಾಮಲಾ ಮೆನನ್, ರವಿರಾಜ ರವರ ಪಾತ್ರಗಳೇನು? ಮನೆಯ ಸಮಸ್ಯೆಗಳು ಶಿವಸ್ವಾಮಿ ಪರಿಹಾರಿಸುತ್ತಾರೋ? ಧಾವಲ್ ತಮ್ಮ ಜವಬ್ದಾರಿಯನ್ನು ಮಗನಿಗೆ ಒಹಿಸಿಕೊಟ್ಟರೋ? ಶಿವಸ್ವಾಮಿ ಧಾವಲ್ ರವರ ಜೀವನದಲ್ಲಿ ಹೇಗೆ ಪ್ರವೇಶಿಸಿದರು ಅದರಿಂದ ಅವರಿಬ್ಬರಿಗೂ ಉಪಯೋಗವಾಯಿತಾ? ಕಡೆಯಲ್ಲಿ ಧಾವಲ್ ಶಿವಸ್ವಾಮಿ ತೆಗೆದುಕೊಂಡ ಕೆಲವು ನಿರ್ಧಾರಗಳು ಸರಿಯೋ ತಪ್ಪೋ ಮತ್ತು ಇನ್ನೂ ಹಲವು ಪ್ರಸಂಗಗಳನ್ನು ಹೇಳುವುದಕ್ಕಿಂತ ಓದುವುದು ಉತ್ತಮ.

-ಕಾರ್ತಿಕೇಯ

ಒಂದೊಂದು ತಲೆಗೂ ಒಂದೊಂದು ಬೆಲೆ ಕೃತಿ ಪರಿಚಯ ಇಲ್ಲಿದೆ..

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...