“ಒಟ್ಟಾರೆಯಾಗಿ ಇಲ್ಲಿ ವಿಕಾಸ್ ಅವರು ಸರಳವಾಗಿ, ಸುಲಭವಾಗಿ ಮತ್ತು ಅರ್ಥಪೂರ್ಣವಾಗಿ ಎಲ್ಲಾ ವರ್ಗದ ಓದುಗರಿಗೂ ಇಷ್ಮವಾಗುವ ಹಾಗೆ ಮತ್ತು ಓದಿನ ರುಚಿಯನ್ನು ಸವಿಯುವ ಮತ್ತು ಹೆಚ್ಚಿಸುವ ಹಾಗೆ ಲೇಖನಗಳನ್ನು ಬರೆದಿದ್ದಾರೆ,” ಎನ್ನುತ್ತಾರೆ ಸೋಮನಾಥ ಶೇಷಗಿರಿ. ಅವರು ವಿಕಾಸ ಹೊಸಮನಿ ಅವರ “ಗಾಳಿ ಹೆಜ್ಜೆ ಹಿಡಿದ ಸುಗಂಧ” ಕೃತಿ ಕುರಿತು ಬರೆದ ವಿಮರ್ಶೆ.
ಯಾವುದೇ ಭಾಷೆಯ ಸಾಹಿತ್ಯದಲ್ಲಿ ವಿಮರ್ಶಾ ಪುಸ್ತಕಗಳು ಬಂದಿರುವುದು ಕಡಿಮೆಯೇ. ಕನ್ನಡ ಸಾಹಿತ್ಯವೂ ಇದಕ್ಕೆ ಹೊರತಾಗಿಲ್ಲ. ಕಾರಣ ಎಲ್ಲಾ ಕಡೆಯೂ ವಿಮರ್ಶೆ ಓದುವವರು ಕಡಿಮೆ.
ಕನ್ನಡದಲ್ಲಿ ಈಗಾಗಲೇ ಹಲವಾರು ಒಳ್ಳೆಯ ವಿಮರ್ಶಕರು ಮತ್ತು ವಿಮರ್ಶೆಯ ಪುಸ್ತಕಗಳು ಬಂದಿವೆ. ಅದರಲ್ಲೂ ಪ್ರಸ್ತುತ ಓದುಗರು ಕಡಿಮೆ ಇರುವ ಕಾಲದಲ್ಲಿ "ಗಾಳಿ ಹೆಜ್ಜೆ ಹಿಡಿದ ಸುಗಂಧ" ಎಂಬ ಶೀರ್ಷಿಕೆಯಡಿ ವಿಕಾಸ ಹೊಸಮನಿಯವರು ವಿಮರ್ಶೆ ಪುಸ್ತಕವನ್ನು ತಂದಿದ್ದು ಆಶ್ಚರ್ಯದ ಜೊತೆ ಜೊತೆಗೆ ಸಂತೋಷವನ್ನು ನೀಡಿದೆ. ಈ ಪುಸ್ತಕದಲ್ಲಿ ಒಟ್ಟು ಮೂರು ಭಾಗಗಳಿವೆ. ಮೊದಲ ಭಾಗ ಕಥೆ, ಎರಡನೇ ಭಾಗ ಕಾದಂಬರಿ ಮತ್ತು ಕೊನೆಯ ಭಾಗ ವಿಮರ್ಶೆಯ ವಿಮರ್ಶೆ ಹಾಗೂ ವ್ಯಕ್ತಿ ಚಿತ್ರ.
ಮೊದಲ ಭಾಗದಲ್ಲಿ ಇವರು ಹಲವು ಪ್ರಮುಖ ಕಥೆಗಾರರಾದ ಶಾಂತಿನಾಥ ದೇಸಾಯಿ, ಅನಕೃ, ಪೂರ್ಣಚಂದ್ರ ತೇಜಸ್ವಿ, ವಾಸುದೇವ ನಾಯರ್ (ಮಲಯಾಳಂ ಲೇಖಕ), ರಾಘವೇಂದ್ರ ಪಾಟೀಲ, ಜಯಂತ್ ಕಾಯ್ಕಿಣಿ ಮತ್ತು ಕೆ. ಸತ್ಯನಾರಾಯಣ ಅವರಂತಹ ಖ್ಯಾತ ಕಥೆಗಾರರ ಆಯ್ದ ಕಥೆಗಳ ಬಗ್ಗೆ ಅವರ ಕಥನ ಸಾಹಿತ್ಯದ ವಸ್ತು, ವಿಷಯ, ಶೈಲಿ, ಪದ್ಧತಿ, ವಿಚಾರಗಳು, ಕತೆಗಳ ಅಂತರಾಳದ ಧ್ವನಿ ಮತ್ತು ಅದರ ಮಿತಿಗಳು ಸೇರಿದಂತೆ ಹಲವಾರು ವಿಚಾರಗಳನ್ನು ವಿಕಾಸ ಅವರು ಯಾವುದೇ ಮುಚ್ಚುಮರೆಯಿಲ್ಲದೆ ಸ್ವಚ್ಛಂದವಾಗಿ ವಿಮರ್ಶಿಸಿದ್ದಾರೆ. ಅಲ್ಲಲ್ಲಿ ಕಥೆಯ ಪ್ರಮುಖ ಭಾಗಗಳನ್ನು ಹೇಳುತ್ತಾ ಓದುಗರಿಗೆ ಕಥೆಗಳ ಬಗ್ಗೆ ಕುತೂಹಲ ಹುಟ್ಟುವ ರೀತಿಯಲ್ಲಿ ನಿರೂಪಿಸಿದ್ದಾರೆ.
ಎರಡನೆಯ ಭಾಗ ಕಾದಂಬರಿಗಳ ವಿಶ್ಲೇಷಣೆ ಮತ್ತು ವಿಮರ್ಶೆ ಕೂಡ ಸೊಗಸಾಗಿದೆ. ಲೇಖಕರು ಕನ್ನಡದ ಹಳೆಯ ಕಾಲದಿಂದ ಹಿಡಿದು ಇಲ್ಲಿಯವರೆಗಿನ ಹಲವು ಆಯ್ದ ಕಾದಂಬರಿಗಳು ಮತ್ತು ಕಾದಂಬರಿಕಾರರ ಕುರಿತು ವಿಮರ್ಶಿಸಿದ್ದಾರೆ.
ಮೊದಲು ಶಂಕರ ಮೊಕಾಶಿ ಪುಣೆಕರರ 'ಗಂಗವ್ವ ಗಂಗಾಮಾಯಿ' ಕಾದಂಬರಿಯ ಖಳನಾಯಕನ ಪಾತ್ರದ ಬಗ್ಗೆ ಪರಾಂಬರಿಸಿ, ಅದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಮುಂದೆ ತರಾಸುರವರ ಪ್ರಖ್ಯಾತ ಐತಿಹಾಸಿಕ ಕಾದಂಬರಿಯಾದ 'ಹಂಸಗೀತೆ'ಯ ಭಾಷೆಯ ಸೊಗಡು, ಅದು ಓದುಗರ ಮೇಲೆ ಬೀರಿದ ಪರಿಣಾಮ ಮತ್ತು ತರಾಸುರವರ ಬರವಣಿಗೆಯ ತಾಕತ್ತಿನ ಬಗ್ಗೆ ಓದುಗರಿಗೆ ವಿಫುಲ ಮಾಹಿತಿ ಒದಗಿಸಿದ್ದಾರೆ. ನಂತರದ ಲೇಖನಗಳಲ್ಲಿ ರಾಘವೇಂದ್ರ ಪಾಟೀಲರ ಮಹತ್ವದ ಕಾದಂಬರಿ 'ಗೈರ ಸಮಜೂತಿ', ಮಲ್ಲಿಕಾರ್ಜುನ ಹಿರೇಮಠರ 'ಹಾವಳಿ' ಮೊಗಸಾಲೆಯವರ 'ಇದ್ದೂ ಇಲ್ಲದ್ದು' ಮುಖ್ಯವಾದ ಕೃತಿಗಳು. ಹಿರಿಯರ ಲೇಖಕರ ಜೊತೆ ಜೊತೆಗೆ ಇತ್ತೀಚಿನ ಕಾದಂಬರಿಕಾರರಾದ ಗುರುಪ್ರಸಾದ್ ಕಾಗಿನೆಲೆ ಅವರ 'ಕಾಯಾ', ದತ್ತಾತ್ರಿಯವರ 'ಒಂದೊಂದು ತೆಲೆಗೂ ಒಂದೊಂದು ಬೆಲೆ' ಕಾದಂಬರಿಗಳ ಕುರಿತ ಸಂಪೂರ್ಣ ಚಿತ್ರಣ ನೀಡುವುದರೊಂದಿಗೆ ಕಥನದ ಇತಿಮಿತಿಗಳು, ವಿಷಯ ವಸ್ತು ಮತ್ತು ಬರವಣಿಗೆಯ ಶೈಲಿಯ ಬಗ್ಗೆ ಸವಿಸ್ತಾರವಾದ ವಿಮರ್ಶೆಯನ್ನು ನೀಡಿದ್ದಾರೆ. ಇದು ಕಾದಂಬರಿ ಪ್ರಿಯರಿಗೆ ಅತ್ಯಂತ ಖುಷಿ ಕೊಡುವ ಭಾಗ
ಕೊನೆಯದಾಗಿ ಮೂರನೇ ಭಾಗ ವಿಮರ್ಶೆಯ ವಿಮರ್ಶೆ ಮತ್ತು ವ್ಯಕ್ತಿ ಚಿತ್ರ. ನನಗೆ ವೈಯಕ್ತಿಕವಾಗಿ ಅತ್ಯಂತ ಪ್ರಿಯವಾದ, ಮತ್ತೆ ಮತ್ತೆ ಓದಿಸಿಕೊಂಡ ಭಾಗವಿದು. ಇಲ್ಲಿ ವಿಮರ್ಶಕರು ಕನ್ನಡದ ಪ್ರಮುಖ ವಿಮರ್ಶೆಯ ಪುಸ್ತಕಗಳು ಮತ್ತು ವಿಮರ್ಶಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಇಲ್ಲಿ ಕನ್ನಡದ ಹಳೆಯ ಪುಸ್ತಕಗಳಾದ ಪುಣೀಕರರ 'ಅಪೂರ್ಣ ವರ್ತಮಾನಕಾಲ' ಮತ್ತು ಬೇಂದ್ರೆಯವರ 'ವಿಚಾರ. ಮಂಜರಿ' ಕುರಿತು ಬರೆಯುತ್ತ ಅವರ ಸಾಹಿತ್ಯ ದೃಷ್ಟಿ ಮತ್ತು ವಿಮರ್ಶೆಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ನಂತರ ಮೊಗಸಾಲೆಯವರ 'ಹೂ ಬಿಸಿಲಿನ ಕೆಳಗೆ', 'ಕಂನಾಡ ಸಾಹಿತಜ್ಞರ ಆತ್ಮಕಥನ'ದಲ್ಲಿ ಕನ್ನಡದ ಪ್ರಮುಖ ಲೇಖಕರು ಮತ್ತು ದಿಗ್ಗಜರುಗಳು, ಅವರ ತ್ಯಾಗ, ಹೋರಾಟ, ಸಾಹಿತ್ಯ ಸೇವೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಅತ್ಯಂತ ಗೌರವ ಪೂರ್ವಕವಾಗಿ ಓದುಗರಲ್ಲಿ ಅಭಿಮಾನ ಮೂಡುವ ರೀತಿಯಲ್ಲಿ ವಿಕಾಸ್ ಅವರು ಬರೆದಿದ್ದಾರೆ. ವಿ.ಕೃ.ಗೋಕಾಕರ 'ಇಂದಿನ ಕರ್ನಾಟಕ', ಲಕ್ಷ್ಮಿ ನಾರಾಯಣ ಭಟ್ಟರ 'ಪ್ರಾಯೋಗಿಕ ವಿಮರ್ಶೆ' ಕುರಿತು ತುಂಬ ಚೆನ್ನಾಗಿ ತಿಳಿಸಿದ್ದಾರೆ. ಕೊನೆಯದಾಗಿ 'ನವ್ಯಸಾಹಿತ್ಯ ಚಳುವಳಿಯ ಮಿತಿಗಳು' ಲೇಖನದಲ್ಲಿ ನವ್ಯಸಾಹಿತ್ಯದ ಇತಿಮಿತಿಗಳ ಬಗ್ಗೆ, ಮತ್ತು ಪ್ರಸ್ತುತ ಸಾಹಿತ್ಯದ ಕುರಿತು ತಮ್ಮ ವಿಚಾರಗಳನ್ನು ಸಾಕ್ಷಿ ಸಮೇತ ಮಂಡಿಸಿದ್ದಾರೆ. ಕೊನೆಯ ವ್ಯಕ್ತಿ ಚಿತ್ರವಾದ 'ಅಪೂರ್ವ ಕಾದಂಬರಿಕಾರ ತ.ರಾ.ಸು. ಖ್ಯಾತ ಕಾದಂಬರಿಕಾರರಾದ ತರಾಸು ಅವರ ಬಗ್ಗೆ ಅತ್ಯಂತ ಪ್ರೀತಿ ಮತ್ತು ಗೌರವ ಮೂಡುವಂತೆ ಬರೆದಿದ್ದಾರೆ ಅವರ ಬದುಕು ಹಾಗೂ ಬರಹದ ಜೊತೆಗೆ ಹಲವು ವಿಶೇಷ ವಿಚಾರಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
ಒಟ್ಟಾರೆಯಾಗಿ ಇಲ್ಲಿ ವಿಕಾಸ್ ಅವರು ಸರಳವಾಗಿ, ಸುಲಭವಾಗಿ ಮತ್ತು ಅರ್ಥಪೂರ್ಣವಾಗಿ ಎಲ್ಲಾ ವರ್ಗದ ಓದುಗರಿಗೂ ಇಷ್ಮವಾಗುವ ಹಾಗೆ ಮತ್ತು ಓದಿನ ರುಚಿಯನ್ನು ಸವಿಯುವ ಮತ್ತು ಹೆಚ್ಚಿಸುವ ಹಾಗೆ ಲೇಖನಗಳನ್ನು ಬರೆದಿದ್ದಾರೆ, ಕಥೆಗಳ, ಕಾದಂಬರಿಗಳ ಮತ್ತು ಆತ್ಮಕಥನಗಳ ಕೆಲವು ಮುಖ, ಸಾಲುಗಳನ್ನು ಉಲ್ಲೇಖಿಸುವ ಮೂಲಕ ಇನ್ನಷ್ಟು ಕುತೂಹಲಕಾರಿಯಾಗಿ ಲೇಖನಗಳನ್ನು ಬರೆದಿದ್ದಾರೆ.
ಓದುವ ಹುಚ್ಚನ್ನು ಮತ್ತು ಆಸಕ್ತಿಯನ್ನು ಹೆಚ್ಚಿಸುವ ವಿಕಾಸ ಅವರ ಉದ್ದೇಶ ಈ ಲೇಖನಗಳ ಮೂಲಕ ಯಶಸ್ವಿಗೊಂಡಿದೆ. ಹೀಗೆ ಮತ್ತಷ್ಟು ಪುಸ್ತಕಗಳನ್ನು ನಿಮ್ಮಿಂದ ನಿರೀಕ್ಷಿಸುವ ಧನ್ಯವಾದಗಳು.
"ರಾಜಮಾತೆ ಕೆಂಪನಂಜಮ್ಮಣ್ಣಿ - ಮಾದರಿ ಮೈಸೂರಿನ ತಾಯಿಬೇರು - ಈ ಪುಸ್ತಕ ಕೊಂಡು ವಾರವೇ ಆದರೂ ರೇಷ್ಮೆ ಬಟ್ಟೆಯ ಓದು ...
"ನಾನೂರು ವರ್ಷಗಳಷ್ಟು ಹಳೆಯ ಥಿಯೇಟರಲ್ಲಿ ನಾಟಕ ನೋಡಿದಾಗ ನೀನಾಸಂ ನೆನಪು, ವಿಸೀಯವರ ಇಂಗ್ಲೆಂಡ್ ಪಯಣ, ವರ್ಡ್ಸ್ ವರ...
"ಕಾವ್ಯದ ಹಿನ್ನೆಲೆ, ತತ್ವ, ಸೌಂದರ್ಯಾನುಭವವದ ಜೊತೆಗೆ ಭಾರತೀಯ ಜೀವನ ದರ್ಶನದ ಅನೇಕ ಹೊಸ ಹೊಳಹುಗಳನ್ನು ತಮ್ಮ ಚಮತ್...
©2025 Book Brahma Private Limited.