ಬೇಂದ್ರೆಯವರ ಕಾವ್ಯಾನುಸಂಧಾನದಲ್ಲಿ 'ಯುಗಾದಿ'


"ಕಾವ್ಯದ ಹಿನ್ನೆಲೆ, ತತ್ವ, ಸೌಂದರ್ಯಾನುಭವವದ ಜೊತೆಗೆ ಭಾರತೀಯ ಜೀವನ ದರ್ಶನದ ಅನೇಕ ಹೊಸ ಹೊಳಹುಗಳನ್ನು ತಮ್ಮ ಚಮತ್ಕಾರಿಕ ಶಬ್ದಗಳ ಸಂಯೋಜನೆಯಲ್ಲಿ ಯುಗಾದಿ ಪದ್ಯ ರಚಿಸದ್ದಾರೆ. ಅಣ್ಣಿಗೇರಿಯಲ್ಲಿ ಹುಟ್ಟಿ, ಬೆಳೆದು ಬನವಾಸಿಯಲ್ಲಿ ಜೀವನ ಕಳೆದ ನಾಡೋಜ ಪಂಪ 'ಆರಂಕುಶ ಮೆಟ್ಟೊಡೆಂ ನೆನೆವುದೆನ್ನ ಮನಂ ಬನವಾಸಿ ದೇಶಮಂ'," ಎನ್ನುತ್ತಾರೆ ಕೃಷ್ಣ ಕಟ್ಟಿ ಯಲಗೂರ. ಅವರು ಬೇಂದ್ರೆಯವರ ಕಾವ್ಯಾನುಸಂಧಾನದಲ್ಲಿ 'ಯುಗಾದಿ' ಕುರಿತು ಬರೆದಿರುವ ಲೇಖನ.

'ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ'
ನಿಸರ್ಗದಲ್ಲಿ ಕಳೆದು ಹೋದದ್ದು ಮತ್ತೆ ಬರುವುದು ಪ್ರಕೃತಿಯ ಧರ್ಮ. ಆದರೆ ಮನುಷ್ಯ ಒಮ್ಮೆ ಕಳೆದುಕೊಂಡ ಅವನ ಬಾಲ್ಯ ಮತ್ತು ಯೌವನ ಮತ್ತೆ ಬಾರದು.ಜಗತ್ತಿನಲ್ಲಿ ನಿಸರ್ಗಕ್ಕೂ ಮತ್ತು ಮನುಷ್ಯನಿಗೂ ಇರುವ ವ್ಯತ್ಯಾಸ. ಬೇಂದ್ರೆಯವರು ನಿಸರ್ಗ ಧರ್ಮ ಮತ್ತು ಮನುಷ್ಯ ಜೀವನದಲ್ಲಿಯ ವಿಸ್ಮಯ ಮತ್ತು ವಿಚಿತ್ರತೆಯನ್ನು ಕಂಡುಂಡು, ಪ್ರತಿ ವರುಷ ನಿಗದಿತ ಸಮಯಕ್ಕೆ ತಪ್ಪದೆ, ಮರಳಿ ಮರಳಿ ಬರುವ 'ಯುಗಾದಿ'ಯನ್ನು ಕುರಿತು ತಮ್ಮ 'ಗರಿ' ಕವನ ಸಂಕಲನದಲ್ಲಿ'ಯುಗಾದಿ' ಎಂಬ ಪದ್ಯವನ್ನು ಬರೆದು ಓದುಗರಿಗೆ ವಿಸ್ಮಯಾಶ್ಚರ್ಯವನ್ನು ಉಂಟು ಮಾಡಿದ್ದಾರೆ. ಪ್ರಕೃತಿ ಗೀತೆಯನ್ನು ಕಾವ್ಯದಲ್ಲಿ ಬೋಧಿಸಿದ್ದಾರೆ. ಕಾವ್ಯದ ಹಿನ್ನೆಲೆ, ತತ್ವ, ಸೌಂದರ್ಯಾನುಭವವದ ಜೊತೆಗೆ ಭಾರತೀಯ ಜೀವನ ದರ್ಶನದ ಅನೇಕ ಹೊಸ ಹೊಳಹುಗಳನ್ನು ತಮ್ಮ ಚಮತ್ಕಾರಿಕ ಶಬ್ದಗಳ ಸಂಯೋಜನೆಯಲ್ಲಿ ಯುಗಾದಿ ಪದ್ಯ ರಚಿಸದ್ದಾರೆ. ಅಣ್ಣಿಗೇರಿಯಲ್ಲಿ ಹುಟ್ಟಿ, ಬೆಳೆದು ಬನವಾಸಿಯಲ್ಲಿ ಜೀವನ ಕಳೆದ ನಾಡೋಜ ಪಂಪ 'ಆರಂಕುಶ ಮೆಟ್ಟೊಡೆಂ ನೆನೆವುದೆನ್ನ ಮನಂ ಬನವಾಸಿ ದೇಶಮಂ'. ಬೇಂದ್ರೆಯವರಿಗೆ ಧಾರವಾಡದವೆಂದರೆ ಪಂಪನಿಗೆ ಬನವಾಸಿ ಇದ್ದ ಹಾಗೆ. ತಮ್ಮ ಮನೋ ಸಾಮರ್ಥ್ಯದಿಂದ ತಮ್ಮ ಬದುಕಿನ ಬೀಡಾಗಿದ್ದ ಸಾಧನಕೇರಿಯಲ್ಲಿ ನಂದನವನ್ನು ಸಾಕ್ಷಾತ್ಕರಿಸಿಕೊಳ್ಳುವ ಶಕ್ತಿ ಬೇಂದ್ರೆಯವರಲ್ಲಿತ್ತು. ತಮ್ಮ ಕಾವ್ಯಾನುಷ್ಠಾನದ ಮೂಲಕ ಒಲಿಸಿಕೊಂಡಿದ್ದರು ಬೇಂದ್ರೆ. ಅವರ ಎಲ್ಲ ನಿಸರ್ಗದ ಕವಿತೆಗಳ ಮೂಲ ಸೆಲೆ ಸಾಧನಕೇರಿ. ಸಾಧನಕೇರಿ ಅವರನ್ನು ಕಾವ್ಯರಚನೆಗೆ ಕೈ ಬೀಸಿ ಕರಿಯುತ್ತಿತ್ತು. ಪ್ರಕೃತಿ ಪುರುಷನನ್ನು ಕೈ ಬೀಸಿ ಕರೆದಾಗ ಹೊಸ ಸೃಷ್ಟಿಯಾಗುತ್ತದೆ. ಜೀವನ ಧರ್ಮ ಅದನ್ನು ಒಂದು ನೋಂಪಿಯಂತೆ ಪರಿಪಾಲಿಸಿದವರು ಬೇಂದ್ರೆ.

ಬೇಂದ್ರೆ ಶ್ರಾವಣದ ಬೆನ್ನು ಹತ್ತುವ ಪೂರ್ವದಲ್ಲಿ, ಋತುರಾಜನ ಗೆಳೆತನದಲ್ಲಿ ಅನುಭವಿಸಿದ ಸೌಖ್ಯವನ್ನು ತಮ್ಮ ಯುಗಾದಿ ಪದ್ಯದಲ್ಲಿ ಬರೆಯುತ್ತಾರೆ. ಧಾರವಾಡದ ಸಾಂಸ್ಕೃತಿಕ ಅಗ್ರಹಾರವಾದ ಕಾಮನಕಟ್ಟೆಯಲ್ಲಿ ಬಾಲ್ಯ ಕಳೆದ ಬೇಂದ್ರೆಯವರಿಗೆ ಎಷ್ಟೋ ಪರಂಪರೆಗಳ ಜೀವನಾನುಭವವಿತ್ತು. ಪಗಡೆ ಪಟ್ಟದ ಹಾಗೆ ಇರುವ ಆ ಕಾಮನಕಟ್ಟೆಯಲ್ಲಿ ಎಲ್ಲ ರೀತಿಯ ಜನಾಂಗ ವಾಸವಾಗಿತ್ತು. ಅವರೆಲ್ಲರ ಬದುಕನ್ನು ತೀರ ಹತ್ತಿರದಿಂದ ನೋಡಿದ ಬೇಂದ್ರೆಯವರಿಗೆ ಅದು ಧಾರವಾಡದ ಆಪೂಸ ಮಾವಿನ ಹಣ್ಣಿನ ಹಾಗೂ ಇತರ ಹೂ, ಕಾಯಿ, ರುಚಿಯನ್ನು ಕೊಟ್ಟಿತ್ತು. ಆ ರಸಾನುಭವದ ಪಾಕ ಅವರ 'ಯುಗಾದಿ'ಪದ್ಯದಲ್ಲಿ ಅಚ್ಚೊತ್ತಿದೆ.
'ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರತಿದೆ.
ಯುಗಾದಿ ಸೃಷ್ಟಿಯ ಆರಂಭ ಕಾಲ. ಯುಗ+ಆದಿ=ಯುಗಾದಿ. ಯುಗ ಈ ಶಬ್ದದ ಅರ್ಥ ನೇಗಿಲಿನ ಅಥವಾ ಬಂಡಿಯ ನೊಗ. ಈ ನೊಗ ಪ್ರಕೃತಿ ಮತ್ತು ಪುರುಷನನ್ನು ಜೊತೆಯಾಗಿ ತೆಗೆದುಕೊಂಡು ಹೋಗುವ ಗುಣವುಳ್ಳ ಒಂದು ವಸ್ತು. ಯುಗ ಅಂದರೆ ಸಂತತಿ ಮತ್ತು ವೃದ್ಧಿ ಎಂಬ ಅರ್ಥವು ಇದೆ.ಅದರ ಜೊತೆಗೆ ತಲೆಮಾರುಗಳ ಅಥವಾ ಸಮಯದ ಅವಧಿಯು ಎಂದಾಗುತ್ತದೆ. 'ಆದಿ' ಮೊದಲು, ಪ್ರಾರಂಭ, ಆಶ್ರಯ, ಅವಲಂಬನೆ, ಮುಖ್ಯ ಮತ್ತು ಪ್ರಧಾನ ಎಂಬ ಅರ್ಥವನ್ನು ಕೊಡುತ್ತದೆ. ಇವರಡು ಕೂಡಿದ ಸಮಸ್ತ ಪದ ಯುಗಾದಿ. ಹೊಸ ಯುಗದ ಆರಂಭ,ಹೊಸ ಸಂವತ್ಸರದ ಪ್ರಾರಂಭ ಎಂದು ಹೇಳುತ್ತದೆ. ಋಗ್ವೇದ ಹಾಗೂ ಪ್ರಾಚೀನ ಪಠ್ಯಗಳಲ್ಲಿ ಒಂದು ವರ್ಷಕ್ಕೆ ಸಂವಾದಿಯಾಗಿ ಸಂವತ್ಸರ ಎಂದು ಉಲ್ಲೇಖಿಸಲಾಗಿದೆ. ಅರವತ್ತು ಸಂವತ್ಸರಗಳ ಒಂದು ಚಕ್ರವನ್ನು ಭಾರತೀಯ ಹಿಂದೂ ಕ್ಯಾಲೆಂಡರ ಆಚರಣೆಯಲ್ಲಿಟ್ಟು ಕೊಂಡಿದೆ. ಚಕ್ರದ ಮೊದಲನೆ ಸಂವತ್ಸರ ಪ್ರಭವ.

ಭಾರತೀಯರು ನಾವು ಯುಗಾದಿಯನ್ನು ಹೊಸ ವರ್ಷ ಎಂದು ಕರೆಯುತ್ತೇವೆ. ಈ ಯುಗಾದಿ ವರ್ಷ ಕಳಿತದ ಮತ್ತ ವರ್ಷಾ ಬರತದ. ಬರುವಾಗ 'ಹೊಸ ವರುಷಕೆ, ಹೊಸ ಹರುಷವ ಹೊಸತು ಹೊಸತು ತರತಿದೆ'. ಅಂತ್ಯ ಪ್ರಾಸದ ಸಂಯುಕ್ತಾರ್ಥ ಕೊಡುವ ಶಬ್ದಗಳು ಈ ಸಾಲಿನಲ್ಲಿವೆ. ವರುಷ ಇದು ಕಾಲ ಸೂಚಕ. ಇದು ಹರುಷವನ್ನು ತರುತ್ತದೆ. ಅಂದರೆ ಸಂತೋಷದ ಭಾವನೆಗಳನ್ನು ಹೊತ್ತು ಕೊಂಡು ಆನಂದ ನೀಡಲು ಯುಗಾದಿಯು ವರುಷ ವರುಷ ಬರುತ್ತಿದೆ. ಈ ವರುಷ ಮತ್ತು ಹರುಷ ಹೊಸ ರೂಪದಿಂದ ಹೊಸದಾಗಿ ಪ್ರತಿ ವರ್ಷ ಬರುತ್ತಿದೆ. ಧಾರವಾಡದ ಮನೋಂಗಳದಲ್ಲಿ ಕಂಡ ಯುಗಾದಿಯ ನಿಸರ್ಗವನ್ನು ಬೇಂದ್ರೆಯವರು ಹೀಗೆ ವರ್ಣಿಸುತ್ತಾರೆ.
'ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಿ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯು ತರುತಿದೆ'

ಯುಗಾದಿ ಎಂದರೆ ಹೊಸ ಜೀವ, ಹೊಸತು ಸಂತತಿ ಎಂದು ಹೇಳಿ ಆಗಿದೆ. ಅದಕ್ಕಾಗಿ ನಿಸರ್ಗದಲ್ಲಿ ನಡೆಯುವ ಒಂದು ಆಟ-ನೋಟವನ್ನು ಹೇಳುತ್ತಾರೆ. ಹೊಂಗೆಗು ವಸಂತ ಋತುವಿಗೂ ಅವಿನಾಭಾವ ಸಂಬಂಧ. ಈ ಮರಗಳು ಮರಕ್ಕೆ ಭಾರ ಎನಿಸುವಷ್ಟು ಮೈ ತುಂಬ ಹೂಗಳನ್ನು ಬಿಟ್ಟುಕೊಂಡು ನಳ-ನಳಿಸುತ್ತಿರುತ್ತವೆ. ಇದರಿಂದ ಬೇಂದ್ರೆಯವರ ಪ್ರೀತಿಯ ರೂಪಕ ದುಂಬಿ ಆಕರ್ಷಿತವಾಗಿ, ಹೊಂಗೆ ಹೂವಿನ ತೊಂಗಲಲ್ಲಿ ಸಂಗೀತದ ಕೇಲಿ ನಡೆಸುತ್ತದೆ. ಕೇಲಿ ಎಂದರೆ ಶೃಂಗಾರ, ಸುರತಾಟ. ಆನಂದ ಪಡೆಯುವ ಮನರಂಜನೆಯನ್ನು ನಡೆಸುವ ಚಟುವಟಿಕೆ. ಭೃಂಗಗಳ ಕಾಮಕ್ರೀಡೆಯ ಆಟ. ಆ ಆಟದ ನೋಟದ ಸಂಭ್ರಮ ಕೇಳಿ. ಇದು ಕ್ರಿಯಾಪದವು ಹೌದು. ಭೃಂಗದ ಈ ಸಂಗೀತ ಕೇಲಿ ಮತ್ತೆ ಮತ್ತೆ ಕೇಳಿಸುತ್ತದೆ. ಇದರ ಒಟ್ಟಾರೆ ಕ್ರಿಯೆ, ಪರಶಗ ಸ್ಪರ್ಶ. ಪರಾಗ ಸ್ಪರ್ಶಕ್ಕೆ ನಿಸರ್ಗವು ಭೃಂಗಗಳ ಹಿಂಡನ್ನು ತನ್ನ ನಸುಗಂಪಿನಿಂದ ಆವ್ಹಾನಿಸುತ್ತದೆ.

ಸದಾ ತನ್ನ ಒಡಲಿನಲ್ಲಿ ಕಹಿಯನ್ನು ಕಟ್ಟಿಕೊಂಡಿರುವ ಬೇವು, ವಸಂತ ಋತುವಿನಲ್ಲಿ ತನ್ನ ಹೂಗಳಿಂದ ನಸಗಂಪು ಸೂಸುತ್ತ ಪ್ರಕೃತಿಗೆ ಜೀವ ಕಳೆಯನ್ನು ತರುತ್ತಿದೆ. 'ಬ್ಯಾಸಗಿ ದಿವಸಕ್ಕೆ ಬೇವಿನ ಮರ ತಂಪ' ಎಂದು ಗರತಿ ಹಾಡಿದ್ದಾಳೆ. ದೇಹಕ್ಕೆ ಮತ್ತು ಮನಸ್ಸಿಗೆ ತಂಪು ಕೊಡುವ ಶಕ್ತಿ ಬೇವಿನ ಗಿಡ ಹೊಂದಿರುತ್ತದೆ. ಹಳ್ಳಿ-ಹಳ್ಳಿಗಳಲ್ಲಿ ದಣಿದು ಬಂದ ರೈತ ಬೇವಿನ ಮರದ ನೆರಳಿನಲ್ಲಿ ಆಸರೆ ಪಡೆದು ಸುಖದ ವಿಶ್ರಾಂತಿ ಪಡೆಯುತ್ತಾನೆ. ಸಂಪೂರ್ಣ ಒಣಗಿ ನಿಂತಂತೆ ಕಾಣುವ ಬೇವು, ವಸಂತ ಕಾಲಿಡುತ್ತಿದ್ದಂತೆ ಬೇವಿನ ಮರದಲ್ಲಿ ಹೂಗಳು ಅರಳಿ ನಿಸರ್ಗಕ್ಕೆ ಜೀವ ಕಳೆಯನ್ನು ತರುತ್ತದೆ. ಈ ಸಮಯ ಹೊಸ ಜೀವದ ಸೃಷ್ಟಿಗೆ ಸೂಕ್ತ ಕಾಲ ಎನ್ನುತ್ತದೆ ಪ್ರಕೃತಿ. ಪ್ರಕೃತಿ ಸಕಲ ಜೀವ ಜಾತಕ್ಕೆ ಹೇಳುತ್ತದೆ, ಪ್ರಕೃತಿ ಧರ್ಮದೊಂದಿಗೆ ನಿಮ್ಮ ಮನೋಧರ್ಮವನ್ನು ಸಂಕಲಿಸಿ ಮನರಂಜನೆಯ ಆಟವನ್ನು ಆಡೋಣ ಎಂದು.
'ಕಮ್ಮನೆ ಬಾಣಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ'.

ಈ ಸಾಲುಗಳು ವಸಂತ ಪಂಚಮಿಯಿಂದ ಮೂಡಲು ಪ್ರಾರಂಭವಾಗಿ,ವಸಂತ ಋತುವಿನಲ್ಲಿ ನಿಚ್ಚಳಗೊಂಡು ಪಡೆಯಬೇಕಾದದ್ದನ್ನು ಪ್ರಕೃತಿಯಿಂದ ಪಡೆದುಕೊಳ್ಳುತ್ತವೆ.ಮನುಷ್ಯನ ಮಾನಸೋಲಾಸಕ್ಕೆ ಮುದ ನೀಡುತ್ತವೆ.ವಸಂತ ಪಂಚಮಿ, ರಥಸಪ್ತಮಿ,ಶಿವರಾತ್ರಿ, ಕಾಮದಹನ,ಧೂಲಿವಂದನ,ರಂಗಪಂಚಮಿ ಹೀಗೆ ಉತ್ಸವಗಳನ್ನೆಲ್ಲಾ ಆಚರಿಸುತ್ತಾ,ಹೊಸ ಸಂವತ್ಸರದ ಹಾದಿಯನ್ನು, ನಿತ್ಯ ನಿಸರ್ಗದಲ್ಲಿ ಆಗುವ ಬದಲಾವಣೆಯನ್ನು ನೋಡುತ್ತ,ಯುಗಾದಿಯ ದಿನವನ್ನು ಪ್ರಕೃತಿ ಪಂಚಾಂಗ ಹಾಗೂ ಜ್ಯೋತಿಷ್ಯದ ಪಂಚಾಂಗದ ಮುಖಾಂತರ ಮಾನವ ನಿರ್ಧರಿಸುತ್ತಾನೆ.

ಅರ್ಥವ ವೇದವು ಕಾಮದೇವನು ಬ್ರಹ್ಮಾಂಡದ ಸೃಜನ ಶೀಲ ಶಕ್ತಿಯನ್ನು ಹೊಂದಿದವನು ಎಂದು ಉಲ್ಲೇಖಿಸುತ್ತದೆ. ಇವನು ಬ್ರಹ್ಮ ದೇವರ ಮಾನಸ ಪುತ್ರ. ಶಿವನು ಧ್ಯಾನ ಮಾಡುತ್ತಿರುವಾಗ ಅವನ ಮೂರನೇ ಕಣ್ಣಿನಿಂದ ಅವನ ದಹನವಾಯಿತು.ನಂತರ ಕೃಷ್ಣ ಮತ್ತು ರುಕ್ಮಿಣಿಯರ ಹಿರಿಯ ಮಗನಾಗಿ ಜನ್ಮ ತಾಳಿದನು.ಕಾಮದೇವನು ಬಿಲ್ಲು ಮತ್ತು ಬಾಣಗಳನ್ನು ಹಿಡಿದ ಸುಂದರವಾದ ಮನಮೋಹಕ ಪುರುಷ. ಅವನ ಬಿಲ್ಲು ಕಬ್ಬಿನಿಂದ ಮಾಡಲ್ಪಟ್ಟಿದೆ.ಅವನ ಬಾಣಗಳು ಐದು ಬಗೆಯ ಪರಿಮಳಯುಕ್ತ ಹೂಗಳಿಂದ ರೂಪಗೊಂಡಿವೆ.ಬಿಳಿ ಕಮಲ,ಅಶೋಕ ಪುಷ್ಪ,ಮಾವಿನ ಮರದ ಹೂಗಳು, ಮಲ್ಲಿಗೆ ಹೂಗಳು, ನೀಲಿ ಕಮಲದ ಹೂಗಳು. ಕ್ರಮವಾಗಿ ಅವುಗಳನ್ನು ಹೀಗೆ ಹೇಳುತ್ತಾರೆ. ಅರವಿಂದ, ಅಶೋಕ, ಚೂತ,ನವ ಮಲ್ಲಿಕಾ ಮತ್ತು ನೀಲೋತ್ಪಲಾ,ಕಾಮದೇವನ ಸಹಚರರು ಕೋಗಿಲೆ, ಗಿಳಿ ಮತ್ತು ಗುಂ ಗುಂ ಗಾನ ಮಾಡುವ ಜೇನುನೊಣಗಳು (ದುಂಬಿ).ಭಾರತೀಯ ಎಲ್ಲ ಪುರಾಣಗಳಲ್ಲಿ ಇವನ ಉಲ್ಲೇಖ ಇದೆ.ವೈದಿಕ ಹಾಗೂ ಅವೈದಿಕದಲ್ಲಿ ಕಾಮನ ಆಚರಣೆಗಳು ಅನೇಕ ಹಾಗೂ ಭಿನ್ನ ಭಿನ್ನವಾಗಿವೆ. ಜಗತ್ತು ಇವನ ಆಚರಣೆಯನ್ನು ಮಾಡುತ್ತದೆ. ಸಂಸ್ಕೃತ ನಾಟಕ ಮೃಚ್ಛಕಟಿಕದಲ್ಲಿ ನಾಯಕ ಚಾರುದತ್ತ,ನಾಯಕಿ ವಸಂತಸೇನೆ ಮೊದಲು ಬಾರಿಗೆ ಭೇಟಿಯಾಗಿದ್ದು ಕಾಮದೇವನ ಗುಡಿಯಲ್ಲಿ, ಆ ಮೊದಲು ನೋಟದ ಆಕರ್ಷಣೆ ಈಡಿ ನಾಟಕದುದ್ದಕ್ಕೂ ಶೃಂಗಾರ ಹಾಗೂ ರಾಜಕೀಯದೊಂದಿಗೆ ನಡೆಯುತ್ತದೆ.

ಈ ಮೂರು ಸಾಲಿನಲ್ಲಿ ಬೇಂದ್ರೆ ಕಾವ್ಯ ಜಗತ್ತನ್ನು ಮೋಡಿ ಮಾಡಿ ಬಿಟ್ಟಿದ್ದಾರೆ. ಮನುಷ್ಯನ ಜ್ಞಾನೇಂದ್ರಿಯಗಳಿಗೆ ತನ್ನ ಪಂಚ ಬಾಣಗಳ ಮುಖಾಂತರ ಸಿಹಿ ಉಣಿಸುವವನು ಕಾಮದೇವ.ಪ್ರಕೃತಿ ದೇವತೆ ಕಾಮನಿಗೆ ಸೋತು, ಅವನೊಂದಿಗೆ ಕಶಮ ಕೇಲಿ, ಮಿಲನ ಹೊಂದಿ, ವಸಂತ ಋತುವಿನಿಂದ ಹೊಸ ಸೃಷ್ಟಿಗೆ ನಾಂದಿ ಹಾಡುತ್ತಾಳೆ. ಕಾಮದೇವನ ಬಾಣದ ಸ್ಪರ್ಶದಿಂದ ಮಾವಿನ ಮರವು ಪುಲಕಿತಗೊಂಡು ಪುಷ್ಪವತಿಯಾಗಿದೆ. ಆ ಪುಲಕಿತ ಪುಷ್ಪ ದುಂಬಿಗೆ ಪರಾಗ ಸ್ಪರ್ಶಕ್ಕೆ ಆವ್ಹಾನ‌ ನೀಡುತ್ತದೆ. ಆಕರ್ಷಣೆಗೆ ಒಳಗಾಗಿ, ಆವ್ಹಾನ ಒಪ್ಪಿಕೊಂಡು ದುಂಬಿ ಹಿಂಡು ಹಿಂಡಾಗಿ ಚೂತ ಪುಷ್ಪಕ್ಕೆ ಮುತ್ತಿಡುತ್ತವೆ. ಅವುಗಳಿಂದ ಹೊಂದಿಸಿಕೊಂಡು, ಆ ಹಿಂಸೆಯಲ್ಲಿ ಸುಖಾನಂದ ಹೊಂದಿ, ಪರಾಗ ಸ್ಪರ್ಶ ಪೂರೈಸಿ ಪುಷ್ಪವತಿ ಇದ್ದವಳು, ಫಲವತಿಯಾಗಿ ಸ್ವಾದಿಷ್ಟವಾದ ಫಲವನ್ನು ಮಾವು ಕೊಡುತ್ತದೆ. ಕಾಮಗಾಗಿ ಕಾದಿರುವ ನಿಸರ್ಗದ ಅನುಭವವನ್ನು ಅನಭವಿಸಿ ಹೇಳಿದ್ದಾರೆ. ಈ ಪದ್ಯದಲ್ಲಿರುವ ಮಾವು-ಬೇವುಗಳು ತಮ್ಮ ತಮ್ಮ ಆಸರೆಗೆನೆ ಭಾರವಾಗಿ ಮೈತುಂಬಿಕೊಂಡು ದಿನದಿಂದ ದಿನಕ್ಕೆ ವರ್ಣ ಬದಲಾವಣೆ ಹೊಂದುತ್ತವ ತಾವು ಸುಖ ಅನುಭವಿಸಿ ಪ್ರಾಣ ಸಮೂಹಕ್ಕೆ ಸಂತೋಷವನ್ನುಂಟು ಮಾಡುತ್ತವೆ.
'ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ'.

ಕಾಮದೇವನ ವಾಹನ ಗಿಳಿ(ಶುಕ).ಮಾಘದಲ್ಲಿ ನಡೆಯುವ ರೈತನ ರಾಶಿಯಲ್ಲಿ ಪುಷ್ಕಳವಾದ ಆಹಾರದಿಂದ ದಷ್ಟ-ಪುಷ್ಟವಾದ ಗಿಳಿಗಳು ಬರಲಿರುವ ವಸಂತಕಾಲದ ಹಾದಿಯನ್ನು ನಿತ್ಯ ನೋಡುತ್ತಿರುತ್ತವೆ. ಕಾಮದೇವ ಗಿಳಿಯನ್ನು ವಾಹನವನ್ನಾಗಿ ಮಾಡಿಕೊಂಡು ವಸಂತ ದಿಗ್ವಿಜಯ ಮಾಡುತ್ತಾನೆ. ಆಗ ಗಿಳಿಗಳು ಸಂಭ್ರಮದಿಂದ, ತಮ್ಮ ಮಧುರ ಧ್ವನಿಯಿಂದ ಸುಗ್ಗಿ ಬಂತು, ಸುಗ್ಗಿ ಎಂದು ನಾಡಿಗೆ- ಕಾಡಿಗೆ ಹೇಳುತ್ತಾ ಹಾರಾಡುತ್ತವೆ. ಆ ಗಿಳಿಗಳು ಹಿಂಡು ಹಿಂಡಾಗಿ ಹಾರಾಡುವದನ್ನು ಕವಿ ಅದ್ಭುತ ರೂಪಕದಲ್ಲಿ ಹೇಳುತ್ತಾರೆ. ಪ್ರಕೃತಿ ದೇವಿಯ ಗುಡಿಗೆ ಕಟ್ಟಿದ ತೋರಣದ ಕೋಲಾಗಿದೆ ಎಂದು. ತನ್ನ ಯಜಮಾನನ ಬಾಣ ಪ್ರಯೋಗದಿಂದ ನೀನು ಪುಷ್ಪವತಿ ಹಾಗೂ ಫಲವತಿ ಆಗಿರುವೆ ಮಾಮರವೆ ಎಂದು ಅದಕ್ಕೆ ತಿಳಿಸಿಕೊಡುತ್ತಾ ಅಲ್ಲಿಯೇ ಆಶ್ರಯ ಪಡೆಯುತ್ತವೆ. ರಾಮಾಯಣದಲ್ಲಿ ಶಬರಿ ಬೋರೆ ಹಣ್ಣಿನ ರುಚಿ ನೋಡಿ ರಾಮನಿಗೆ ನೀಡಿದಂತೆ,ಗಿಳಿಗಳು ಮಾವಿನ ಹಣ್ಣಿನ ರುಚಿ ನೋಡಿ ಕಾಯಿಗಳನ್ನು ಕೆಡುವುತ್ತವೆ. 'ಗಿಣಿಕಡಕ'ಎಂದು ಜನರು ಆ ಹಣ್ಣನ್ನು ಬಹಳ ಪ್ರೀತಿಯಿಂದ ಸವಿಯುತ್ತಾರೆ.

ಮಾವು ಬೇವಿನ ತಳಿರು ತೋರಣ ಕಟ್ಟಿ, ಬೇವು+ಬೆಲ್ಲವನ್ನು ದೇವರಿಗೆ ಸಮರ್ಪಿಸಿ
ಶತಾಯುರ್ವಜ್ರ ದೇಹಾಯ,
ಸರ್ವ ಸಂಪತ್ಕಾರಯಚl
ಸರ್ವಾರಿಷ್ಟ ವಿನಾಶಾಯ,
ನಿಂಬ ಕಂದಲ ಬಕ್ಷಣಾತ್ll
ನೂರು ವರ್ಷಗಳ ಕಾಲ ವಜ್ರ ದೇಹಿಯಾಗಿರಲು, ಸರ್ವ ಸಂಪತ್ತುಗಳನ್ನು ಪಡೆಯಲು ಮತ್ತು ಸಕಲ ಅನಿಷ್ಟ ನಿವಾರಣೆಗಾಗಿ ಬೇವಿನ ಹೊಸ ಹೂ ಚಿಗುರನ್ನು ಮನುಷ್ಯನು ಸ್ವೀಕರಿಸುತ್ತಾನೆ. ಯುಗಾದಿಯ ಪರ್ವದ ಸಂಭ್ರಮದಲ್ಲಿರುವಾಗ ಕವಿಯ ಮನಸ್ಸಿನಲ್ಲಿ ಮೂಡಿದ್ದು, ಮನುಷ್ಯನನ್ನು ಹೊರತುಪಡಿಸಿ ನಿಸರ್ಗವೆಲ್ಲಾ ಹೊಸ ವರ್ಷದೊಡನೆ ಹೊಸ ಜನ್ಮ ತಾಳಿ ಸಂಭ್ರಮಿಸುತ್ತದೆ. ಹಳೆಯ ನೆಲೆಯನ್ನು ಕಳಚಿ ಹಾಕಿ, ಹರ್ಷದ ಹೊಸ ನೆಲೆಯನ್ನು ಪಡೆಯುತ್ತದೆ. ಪ್ರತಿ ವರ್ಷ ಪ್ರಕೃತಿ ಹೊಸ ಬಾಲ್ಯ ಹಾಗೂ ಹೊಸ ಯೌವನವನ್ನು ಪಡೆಯುತ್ತದೆ.ಆದರೆ ಮನುಷ್ಯನ ಸ್ಥಿತಿ ಹಿಗಿಲ್ಲವಲ್ಲ ಎನ್ನುವದು ಅರಿವಿಗೆ ಬಂದಾಗ ಆಶ್ಚರ್ಯ ಹಾಗೂ ವಿಷಾದ ಭಾವನೆಗೆ ಒಳಗಾಗಿ ಕವಿ ಈ ಸಾಲುಗಳನ್ನು ಉದ್ಗರಿಸುತ್ತಾರೆ.
'ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?
ಎಂದು ಚಿಂತಿಸುತ್ತಾರೆ. ಕವಿಗೂ ಗೊತ್ತು ದೇವರು ಇದನ್ನು ಕೇವಲ ನಿಸರ್ಗಕ್ಕಷ್ಟೆ ಕೊಟ್ಟಿದ್ದಾನೆ ಎಂದು. ಶ ಒಲವನ್ನು ಚೆಲುವನ್ನು ಅನುಭವಿಸು. ಅದಕ್ಕಿದದ್ದು ನಿನಗಿಲ್ಲಾ ಎಂದು. ಆದರೂ ಸುಮ್ಮ ಕೂಡದ ಕವಿಯ ಮನಸ್ಸು ಕಾವ್ಯದ ಸಾಲುಗಳಲ್ಲಿ ಮನುಜ ಕುಲದ ಇಚ್ಚೆಯನ್ನು ಹೀಗೆ ಅಭಿವ್ಯಕ್ತ ಪಡಿಸುತ್ತಾರೆ.
'ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಪ್ರಕೃತಿಗೆ ವರುಷಕ್ಕೊಮ್ಮೆ ಮೂರ್ತತ್ವ ಇದೆ. ನಮಗೆ ಇದು ನಿತ್ಯವು ನಿದ್ದೆ-ಎಚ್ಚರ ದಲ್ಲಿ ಯಾಕೆ ಆಗಬಾರದು ಎಂದು ಬೇಂದ್ರೆಯವರ ಕಾವ್ಯೋಚಾರ. ಆದರೂ ನಿಸರ್ಗ ವರ್ಷ-ವರ್ಷದ ಜನ್ಮಕ್ಕೆ ಕಾರಣನಾದ ಸನತ್ಕುಮಾರನನ್ನು ಕವಿ ಹೀಗೆ ಪ್ರಶ್ನಿಸುತ್ತಾರೆ.
'ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ.

ಕವಿತೆಯ ಕೊನೆಯಲ್ಲಿ ಯುಗಾದಿ' ನಮ್ಮನಷ್ಟೆ ಮರೆತಿದೆ'ಹಳ ಹಳಿಕೆಯ ಭಾವ ಸ್ಥಿರವಾಗಿ ಬಿಡುತ್ತದೆ. ವಸಂತ ತತ್ವವನ್ನು ತನ್ನ ಒಡಲಲ್ಲಿಟ್ಟುಕೊಂಡು ಬೆಳೆದ ಕವಿತೆ ಯುಗಾದಿ. ಬೇಂದ್ರೆಯವರ ಕಾವ್ಯಾನು‌ಸಂಧಾನ ಪ್ರಕೃತಿ ಹಾಗೂ ಮನುಜರೊಡನೆ ಆಲೋಕ್ಯ ಸಂಬಂಧವನ್ನು ಇಟ್ಟುಕೊಳ್ಳ ಬಹುದು. ಮನುಷ್ಯನ ಸುಖಾತ್ಮಕ ಬದುಕಿಗೆ ಪ್ರಕೃತಿಯ ಒಡನಾಟ ಬಹಳ ಮುಖ್ಯವಾದದ್ದು. ಬೇಂದ್ರೆಯವರ ವಸಂತೋತ್ಸವದ ಆಚರಣೆ ಈ ಕಾವ್ಯದಲ್ಲಿ ಸಂಭ್ರಮದಿಂದ ಪರಿಪೂರ್ಣಗೊಂಡಿದೆ. ಯುಗಾದಿ ಸಕಲ ಜೀವ ಜಾತಕೆ ಮಂಗಲವನ್ನುಂಟು ಮಾಡಲಿ

MORE FEATURES

ನಾಗಾಲ್ಯಾಂಡ್ ಸಮಸ್ಯೆಯೂ ಕಾಶ್ಮೀರಕ್ಕಿಂತ ತೀರಾ ಭಿನ್ನವೇನಲ್ಲ

03-04-2025 ಬೆಂಗಳೂರು

“ 'ನಾಗಾ' ಸಮುದಾಯದ ವಾಸಸ್ಥಾನವಾಗಿದ್ದ, ಮೊದಲು ಅಸ್ಸಾಂನ ಭಾಗವಾಗಿದ್ದ ಆ ಪ್ರದೇಶ ಈಗ 'ನಾಗಾಲ್ಯಾಂಡ...

ಹದಿನೈದು ಕಥೆಗಳೂ ಹದಿನೈದು ಲೋಕವನ್ನು ತೋರಿಸುವಂತವು

03-04-2025 ಬೆಂಗಳೂರು

"ಈ ಕಥಾಸಂಕಲನದಲ್ಲಿ ಬರೀ ನೇರಳೆ ಬಣ್ಣ ಮಾತ್ರವಲ್ಲದೇ ಅವರೊಳಗೆ ಕಾಡಿದ ಬದುಕಿನ ಎಲ್ಲಾ ಬಣ್ಣಗಳೂ ಇವೆ.. ಮುಖ್ಯವಾಗಿ ...

ಬಯಲು ಸೀಮೆಯ ಭಾಷೆ, ಸಂಸ್ಕೃತಿ, ಸಮಸ್ಯೆ ಕಷ್ಟ ಕೋಟಲೆಗಳ ಚಿತ್ರಣವಿಲ್ಲಿದೆ

02-04-2025 ಬೆಂಗಳೂರು

"'ದೊರೆ' ಕಥೆಯಲ್ಲಿ ಒಬ್ಬ ಚಿಕ್ಕ ಹುಡುಗನ ತುಂಟಾಟಗಳನ್ನು ಕೇಂದ್ರವಾಗಿಟ್ಟುಕೊಂಡು ಲಾಕ್ಡೌನ್ ವೇಳೆಯಲ್ಲಿ ...