“ನಮಗೆ ಕಾಡಿಸಿದ ಕಥೆಗಳು ಅಕ್ಷರವಾದ ಮೇಲೆ ನಾವು ನಿರಾಳರಾಗುವುದು ಇಲ್ಲೇ. ಆದರೆ ಕಾವ್ಯ ಇದನ್ನು ಇಲ್ಲಿಯೇ ಮುಗಿಸಿಲ್ಲ. ಕೊನೆಯಲ್ಲೊಂದು ಅದಕ್ಕೆ ಮುನ್ಸೂಚನೆಯನ್ನೂ ಕೊಟ್ಟಿದ್ದಾರೆ,” ಎನ್ನುತ್ತಾರ ಶುಭಶ್ರೀ ಭಟ್ಟ ಅವರು ಕಾವ್ಯ ವನಗೂರ ಅವರ “ಕೃತ” ಕಾದಂಬರಿಗೆ ಬರೆದ ಮುನ್ನುಡಿ.
ಮುನ್ನುಡಿಗೆ ಮುನ್ನಡಿಯಿಡುತ್ತಾ,
ತಮ್ಮ ಹೆಸರಿಗೆ ತಕ್ಕಂತೆ ಪುಟ್ಟದಾದರೂ ಅತ್ಯಂತ ಅರ್ಥಪೂರ್ಣವಾದ ಕವನಗಳನ್ನು ಆಗಾಗ ಬರೆಯುವ 'ಕಾವ್ಯ ವನಗೂರು' ನನಗೆ ಇತ್ತೀಚಿನ ಪರಿಚಯ. ಒಂದು ಕಡು ಮಧ್ಯಾಹ್ನ ನೀವು ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಬಹುದಾ?' ಎಂಬ ಮೆಸೇಜ್ ಕಾವ್ಯ ಕಳಿಸಿದಾಗ ನನಗಂತೂ ಅಚ್ಚರಿಯಾಯ್ತು. ಮುನ್ನುಡಿ ಅಂದರೆ ಪುಸ್ತಕಕ್ಕೊಂದು ಚೆಂದದ ಪ್ರವೇಶಿಕೆಯಿದ್ದಂತೆ. ಮುನ್ನುಡಿಯನ್ನು ಹಿರಿಯರ ಬಳಿ ಬರೆಸುವುದನ್ನು ಬಿಟ್ಟು ನಾನ್ಯಾಕೆ ಎನ್ನುವ ಗೊಂದಲವೂ ಇತ್ತು ನನಗೆ. ನಾವು ಸಮಕಾಲೀನರು ಜೊತೆ ಜೊತೆಗೆ ಬೆಳೆಯಬೇಕು ಎಂದು ಬಲವಾಗಿ ನಂಬಿದ ನನಗೆ ಒಂಥರಾ ಪುಳಕವೂ ಆಯ್ತು ಎನ್ನುವ ಮೊದಲ ಪೀಠಿಕೆ ಮುಗಿಸಿ ಈಗ ಮುನ್ನುಡಿಗೆ ಮುನ್ನಡಿಯಿಡುವ
ಹುಟ್ಟಿ ಬೆಳೆದ ಊರನ್ನು ಬಿಟ್ಟು ಬದುಕು ಕಟ್ಟಿಕೊಳ್ಳಲು ಪರವೂರಿಗೆ ಬರುವ ನಮ್ಮಂತಹ ಅನೇಕರು ಮಹಾನಗರದ ಗದ್ದಲದಲ್ಲಿ ಕಳೆದು ಹೋದ ಮಗುವಿನಂತಹ ಮನಸ್ಥಿತಿಯಲ್ಲಿಯೇ ಬಹಳ ಕಾಲ ಇರುತ್ತೇವೆ. 'ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ' ಎಂಬ ಸಾಲನ್ನು ನಮಗಾಗಿಯೇ ಬರೆದಿರಬಹುದು ಎಂದು ಅನಿಸುತ್ತಲೇ ಇರುತ್ತದೆ. ಮಹಾನಗರ ತಂದೊಡ್ಡುವ ತಳಮಳಗಳಿಗೆ, ತಲ್ಲಣಗಳಿಗೆ, ಗೊಂದಲಗಳಿಗೆ ಬಾಲ್ಯದ ನೆನಪುಗಳೇ ದಿವೌಷಧ, ಬದುಕಿನ ಬೇರೆ ಬೇರೆ ಸಂದರ್ಭದಲ್ಲಿ, ಒಂದಲ್ಲಾ ಒಂದು ರೀತಿಯಲ್ಲಿ ತಾವು ಕಳೆದ ಹಿಂದಿನ ನಿಲ್ದಾಣದಲ್ಲಿ ಒಮ್ಮೆಯಾದರೂ ಇಣುಕಿರುತ್ತೇವೆ. ಅದರಲ್ಲಿಯೂ ಒಬ್ಬ ವ್ಯಕ್ತಿ ಬರೆಯುವವರಾದರೆ ತಮ್ಮನ್ನು ಬಾಲ್ಯದಲ್ಲಿ ಪ್ರಭಾವಿಸಿದ. ಅನುಭವಿಸಿದ. ಕಂಡು, ಕೇಳಿದ್ದು, ಕಾಡಿಸಿದ್ದು ಎಲ್ಲವನ್ನೂ ಅಕ್ಷರ ರೂಪಕ್ಕೆ ತರುವ ಪ್ರಯತ್ನವನ್ನೂ ಮಾಡುತ್ತಾರೆ. ಅಲ್ಲಿಗೆ ತಾವು ಕಟ್ಟುಕೊಂಡಿದ್ದ ಬಾಲ್ಯದ ಪರಿಸರದ ಕಥೆಯನ್ನು ಕವಿತೆಯಾಗಿಸಿಯೋ, ಪ್ರಬಂಧವಾಗಿಸಿಯೋ, ಕಥೆಯಾಗಿಸಿಯೋ ಆ ನೆನಪನ್ನು ಜತನಗೊಳಿಸುತ್ತಾರೆ. 'ಕೃತ' ಕಾದಂಬರಿಯಲ್ಲಿ ಕಾವ್ಯ ಕೂಡ ಅದನ್ನೇ ಮಾಡಿದ್ದಾರೆ.
ಸಕಲೇಶಪುರ ತಾಲೂಕಿನಲ್ಲಿರುವ ಕಾಡಿನಿಂದಲೇ ಆವೃತ್ತವಾದ ಸುಂದರ ಊರು ವನಗೂರಿನ ಸುತ್ತಲೇ ನಡೆಯುವ ಕಥೆಯಿದು. ಸಮೃದ್ಧವಾದ ಮಲೆನಾಡಿನ ಅಂದರೆ ಸಕಲೇಶಪುರದ ಭಾಷೆಯನ್ನು ಬಳಸಿದ್ದು ಕಾದಂಬರಿಯಲ್ಲಿನ ಸಂಭಾಷಣೆಗೆ ಮತ್ತಷ್ಟು ಮೆರಗು ತಂದುಕೊಟ್ಟಿದೆ. ಹಾಗೆಯೇ ಇಲ್ಲಿ ಕಥೆಯಲ್ಲಿನ ಮುಖ್ಯ ಪಾತ್ರಗಳಿಗೆ ಯಾವುದೇ ಹೆಸರಿಲ್ಲದಿರುವುದು ಕೂಡ ವಿಶೇಷ. ನಾನು, ಪುಟ್ಟ, ಅಣ್ಣ, ಅಕ್ಕಯ್ಯ, ದೊಡ್ಡಕ್ಕಯ್ಯ, ದೊಡ್ಡಣ್ಣ, ದೊಡ್ಡಯ್ಯ, ದೊಡ್ಡಮ್ಮ. ಅಮ್ಮ, ಅಜ್ಜಿ ಹೀಗೆ ಸಂಬಂಧಗಳಿಂದಲೇ ಹೆಣೆದಿರುವ ಕಥೆಯನ್ನು ಓದಿದವರು ಯಾರಾದರೂ ಇದು ತಮ್ಮದೇ ಕಥೆ ಅಥವಾ ತಾವು ಕೇಳಿರಬಹುದಾದ, ನೋಡಿರಬಹುದಾದ ಕಥೆಯೇ ಇದು ಎಂದು ಎದೆಗೊತ್ತಿಕೊಳ್ಳಬಹುದು. ತನ್ನ ಪಾಡಿಗೆ ಶಾಂತವಾಗಿ ಹರಿಯುತ್ತಿರುವ ನದಿಗೆ ಕಲ್ಲನ್ನೆಸೆದರೆ ಅದು ಕಲಕದೆ ಇರಲು ಸಾಧ್ಯವೇ? ಅಂತಹದ್ದೇ ಘಟನೆಯೊಂದು ಹೇಮಾವತಿ ನದಿಯ ತಟದಲ್ಲಿರುವ ಜನರ ನಡುವೆ ನಡೆದು ಒಳಗಿನ ಕಿಚ್ಚನ್ನು ಬಡಿದೆಬ್ಬಿಸಿದ್ದು ಇಲ್ಲಿನ ಮುಖ್ಯ ಕಥಾವಸ್ತುವೇ ಆದರು ಇಲ್ಲಿ ನಮಗೆ ಬಹಳವಾಗಿ ಹತ್ತಿರವಾಗುವುದು ಅಲ್ಲಿನ ಮಕ್ಕಳ ತಲ್ಲಣಗಳು. ಮಕ್ಕಳಿಗೆ ಅರ್ಥವಾಗದ ಗಲಭೆಗೆ ಊರಿಂದಲೇ ಮಾಯವಾದ ಗಂಡಸರು. ಅಕ್ಕಿಯನ್ನೋ ರಾಗಿಯನ್ನೋ ಹಿಟ್ಟು ಮಾಡಿಸಲೂ ಆಗದೆ ಒದ್ದಾಡಿ ಅಡುಗೆ ಮಾಡುವ ಹೆಂಗಸರು. ಸುತ್ತಲೂ ತಿರುಗುವ ಪೋಲಿಸರು. ಇದ್ಯಾವುದರ ಅರಿವಿರದೆ ತಮ್ಮದೇ ಲೋಕದಲ್ಲಿ ವಿಹರಿಸುವ ಮುಗ್ಧ ಮಕ್ಕಳು ಮತ್ತವರ ಪಪಂಚ ಎಲ್ಲವನೂ, ಸುಂದರವಾಗಿ ಹೆಣೆದಿದ್ದಾರೆ. ಅಷ್ಟೇ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ ಕೂಡ.
ಕೃತಿಯುದ್ದಕ್ಕೂ ಬಳಸಿದ ಸಣ್ಣಪುಟ್ಟ ವಿವರಗಳು ಉದಾಹರಣೆಗೆ 'ಬಾಳೆದಿಂಡಿನ ಮೇಲೆ ಕೂತು ತೋಟವನ್ನು ಘಮಗುಡಿಸಿ ಬಂದರಾಯ್ತು', 'ಹೊಗೆತಾಕಿ ಮುಖವೆ ಕಾಣದ ದೇವರ ಫೋಟೋಗಳ ಮುಂದೆ ಕೈಮುಗಿದು..', ಗೋಪಿ ಕಾಫಿ ಕುಡಿಯುವ ರೀತಿ, ಎಲೆ ಅಡಿಕೆ ತಿನ್ನುವ ರೀತಿ ಹೀಗೆ ಪ್ರತಿಯೊಂದು ಸಣ್ಣಪುಟ್ಟ ವಿಷಯವೂ ಮನಸಿಗೆ ಮುದ ನೀಡುವ ರೀತಿಯಲ್ಲಿ ಲೇಖಕಿ ಬರೆದಿದ್ದಾರೆ. "ಅವರು ನಮ್ಮಂಗೆ ಮನುಷ್ಯರೇ ತಗ, ಒಂದಾಗಿ ಬಾಳಕೆ ಆಗಕ್ಷ ಅಂದ್ರೆ ಅವರ ಪಾಡಿಗೆ ಅವನ್ನ ಬದುಕೋಕೆ ಬುಡೋದ್ ಬುಟ್ಟು" ಎಂದು ಒಬ್ಬರ ಬಗ್ಗೆ ಅತ್ಯಂತ ಮಾನವೀಯತೆಯಿಂದ ಮಾತನಾಡಿ, ಆ ಜನರಿಗೆ ಕನಿಕರ ತೋರಿಸಿದವರಿಂದಲೇ ಮುಂದೆ 'ಅವರನ್ನು ಸಿಕೆ ಸಾಯಿಸಿಬಿಡ್ತಿನಿ' ಅನ್ನುವಂತಹ ವೈಪರಿತ್ಯದ ಮಾತನಾಡಿಸುವುದು ಅಷ್ಟು ಸುಲಭವಲ್ಲ. ಹಾಗೆ ಮಾತನಾಡಿಸಿದ್ದಾರೆಂದರೆ ಅಲ್ಲೊಂದು ಎದೆಗೊದೆಯುವಂತಹ ಘಟನೆ ನಡೆದಿರಲೇಬೇಕು. ಅದನ್ನು ತಿಳಿಯಬೇಕಾದರೆ ಈ ಕಾದಂಬರಿ ಓದಬೇಕು.
ಮುಗಿಸುವ ಮುನ್ನ ಕಾದಂಬರಿ ಬರೆಯುವವರನ್ನು ಕಂಡರೆ ನನಗೆ ಸದಾ ಅಚ್ಚರಿ, ಕಾದಂಬರಿ ಬರೆಯಲು ಒಂದಿಷ್ಟು ಶಿಸ್ತು, ಸಂಯಮ, ಬದ್ಧತೆಯ, ಅಂತಃಕರಣ ಅಗತ್ಯವಾಗಿ ಬೇಕು. ನಮಗೆ ಕಾಡಿಸಿದ ಕಥೆಗಳು ಅಕ್ಷರವಾದ ಮೇಲೆ ನಾವು ನಿರಾಳರಾಗುವುದು ಇಲ್ಲೇ. ಆದರೆ ಕಾವ್ಯ ಇದನ್ನು ಇಲ್ಲಿಯೇ ಮುಗಿಸಿಲ್ಲ. ಕೊನೆಯಲ್ಲೊಂದು ಅದಕ್ಕೆ ಮುನ್ಸೂಚನೆಯನ್ನೂ ಕೊಟ್ಟಿದ್ದಾರೆ. ಹಾಗಾಗಿ ಒಬ್ಬ ಓದುಗಳಾಗಿ ನನ್ನ ನಿರೀಕ್ಷೆ ಕೂಡ ಹೆಚ್ಚಿರುತ್ತದೆ. ಕೃತಿಯ ಕರ್ತೃ ಕಾವ್ಯರಿಗೆ ಅಭಿನಂದನೆಗಳು. ಶುಭವಾಗಲಿ ಬರೆಯುತ್ತಿರಿ.
“ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ...
“ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್...
“ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನು...
©2025 Book Brahma Private Limited.