ನನ್ನವ್ವನ ಕತೆಯೂ ಆಗಿಬಿಡುವ ಅನೇಕ ಬಿಡಿಬರಹಗಳ ಈ ಹೊತ್ತಿಗೆ..


"ಇಡೀ ಲೇಖನ ಅವ್ವನನ್ನೆ ಕುರಿತದ್ದಾದರೂ ಎಲ್ಲಾ ಘಟನೆಗಳು ನಿರೂಪಕನ ಕಣ್ಗಾವಲಿನಲ್ಲಿ ನಡೆದು ಅದನ್ನು ಹೇಳಿಕೊಂಡರೆಷ್ಟೆ ಭಾವದ ಬಿಡುವು ಎಂಬಂತೆ ಬರೆದ ಘಟನೆಗಳಲ್ಲಿ ಅವ್ವ ಜೀವಿಸಿದ್ದಾಳೆ, ಬದುಕಾಗಿದ್ದಾಳೆ ಮಕ್ಕಳ ಬದುಕಿಗೆ ಉಸಿರಾಗಿದ್ದಾಳೆ ಬದುಕನ್ನು ಒಂದು ವ್ರತದಂತೆ ಯಾರಿಗೂ ಕೇಡು ಬಯಸದೆ ಬಂದದ್ದೆಲ್ಲಾ ಬರಲಿ ಭಗವಂತನ ದಯೆಯಿರಲಿ ಎಂಬಂತೆ ನಡೆದು ಬದುಕಿನ ದಾರಿ ಸವೆಸಿದ್ದಾಳೆ," ಎನ್ನುತ್ತಾರೆ ಮಾರುತಿ ಗೋಪಿಕುಂಟೆ. ಅವರು ಜಯರಾಮಾಚಾರಿ ಅವರ ‘ನನ್ನವ್ವನ ಬಯೋಗ್ರಫಿ’ ಕೃತಿ ಕುರಿತು ಬರೆದ ವಿಮರ್ಶೆ.

ಈ ವರ್ಷದ ಕೊನೆಯ ಓದು 'ನನ್ನವ್ವನ ಬಯೋಗ್ರಫಿ' ಜಯರಾಮಚಾರಿಯವರ ಅನುಭವ ಕಥನವೂ ಆಗುವ ಕತೆಗಳಾಗಿಯೂ ಕಾಡುವ ವಿಸ್ತರಿಸಿದರೆ ಕಾದಂಬರಿಯೂ ಆಗಿಬಿಡುವ ಓದುತ್ತ ಓದಂತೆ ನನ್ನವ್ವನ ಕತೆಯೂ ಆಗಿಬಿಡುವ ಅನೇಕ ಬಿಡಿಬರಹಗಳ ಈ ಹೊತ್ತಿಗೆ ಭಾವುಕತೆಯ ಕಡಲನ್ನು ಅಲುಗಾಡಿಸಿ ಮನಸ್ಸನ್ನು ಆರ್ದ್ರಗೊಳಿಸಿಬಿಡುತ್ತದೆ.

ಇಡೀ ಲೇಖನ ಅವ್ವನನ್ನೆ ಕುರಿತದ್ದಾದರೂ ಎಲ್ಲಾ ಘಟನೆಗಳು ನಿರೂಪಕನ ಕಣ್ಗಾವಲಿನಲ್ಲಿ ನಡೆದು ಅದನ್ನು ಹೇಳಿಕೊಂಡರೆಷ್ಟೆ ಭಾವದ ಬಿಡುವು ಎಂಬಂತೆ ಬರೆದ ಘಟನೆಗಳಲ್ಲಿ ಅವ್ವ ಜೀವಿಸಿದ್ದಾಳೆ, ಬದುಕಾಗಿದ್ದಾಳೆ ಮಕ್ಕಳ ಬದುಕಿಗೆ ಉಸಿರಾಗಿದ್ದಾಳೆ ಬದುಕನ್ನು ಒಂದು ವ್ರತದಂತೆ ಯಾರಿಗೂ ಕೇಡು ಬಯಸದೆ ಬಂದದ್ದೆಲ್ಲಾ ಬರಲಿ ಭಗವಂತನ ದಯೆಯಿರಲಿ ಎಂಬಂತೆ ನಡೆದು ಬದುಕಿನ ದಾರಿ ಸವೆಸಿದ್ದಾಳೆ. ಅಪಾರ ಜೀವನಪ್ರೀತಿಯಿಂದ ಬದುಕಿದ ರೀತಿ ಓದುಗನಿಗೆ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಇಲ್ಲಿ ಎಲ್ಲವೂ ನೈಜವೆ ಅವ್ವ ಬದುಕಿದ ರೀತಿಯನ್ನುಇದ್ದಂತೆಯೆ ಬರೆದು ಓದುಗನ ಮನಸ್ಸನ್ನು ಗೆಲ್ಲುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಕೆಲವು ಘಟನೆಗಳಂತು ಕಣ್ಣೀರು ತರಿಸುತ್ತವೆ.

ಕೆಲವು ದಿನಗಳಿಂದ ಮನಸ್ಸು ಶೂನ್ಯಭಾವದಿಂದ ಚಡಪಡಿಸುತ್ತಿತ್ತು. ಇಡಿ ಬಯೋಗ್ರಫಿಯನ್ನು ಒಂದೇ ಉಸಿರಿಗೆ ಇಡಿಯಾಗಿ ಓದಿ ಮುಗಿಸಿದೆ ಅಲ್ಲಲ್ಲಿ ನಮ್ಮವ್ವ ನೆನಪಾದಳು. ಇಡಿ ಬದುಕನ್ನು ಕಷ್ಟದಲ್ಲಿಯೆ ಜೀಕುವ ಜೀವ ಇನ್ನೇನು ಬದುಕು ಹಸನಾಯಿತು ಎಂದು ಸುಖವುಣ್ಣುವಾಗ ಬದುಕು ಬರಿದಾಗುವ ಸಂಕಟಕ್ಕೆ ಗುರಿಯಾಗುವ ಜೀವ ಅವ್ವಳಿಗೆ ಮಾತ್ರ ಮೀಸಲೆ ಅನಿಸಿಬಿಡುತ್ತದೆ ಕೊನೆಯದಾಗಿ ಲಂಕೇಶರ ಕವಿತೆ ಹೇಳುವಂತೆ

ನನ್ನವ್ವ ಬದುಕಿದ್ದು
ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.
ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು
ಹೆತ್ತದಕ್ಕೆ ಸಾಕಿದಕ್ಕೆ ಮಣ್ಣಲ್ಲಿ ಬದುಕಿ,
ಮನೆಯಿಂದ ಹೊಲಕ್ಕೆ ಹೋದಂತೆ
ತಣ್ಣಗೆ ಮಾತಾಡುತ್ತಲೇ ಹೊರಟು ಹೋದುದ್ದಕ್ಕೆ .

ಸುಮ್ಮನೆ ನಿಸ್ವಾರ್ಥಿಯಾಗಿ ಬದುಕುವ ಅವ್ವನ ಬದುಕಿಗೆ ಅವ್ವ ನೆನಪಾಗುವಂತೆ ಬರೆದ ಗೆಳೆಯ ಜಯರಾಮಚಾರಿಯವರಿಗೂ ಇಂತಹ ಒಳ್ಳೆಯ ಬರಹ ಓದಿಸಿದ ವರ್ಷದ ಕೊನೆಯ ಆ ಸಮಯಕ್ಕೆ ಥ್ಯಾಂಕ್ಯೂ... ನೀವೊಮ್ಮೆ ಓದಿ ಬಿಡಿ ಅಮ್ಮ ಪದೆಪದೆ ನೆನಪಾಗುತ್ತಾಳೆ...

- ಮಾರುತಿ ಗೋಪಿಕುಂಟೆ.

MORE FEATURES

ಬೆಂಗಳೂರು ಸಹಾನುಭೂತಿಯ ಬಂಡವಾಳಶಾಹಿಯ ಶಕ್ತಿಗೆ ಜೀವಂತ ಸಾಕ್ಷಿಯಾಗಿದೆ

04-01-2025 ಬೆಂಗಳೂರು

“ಮಾನವನ ಮಹತ್ವಾಕಾಂಕ್ಷೆ ಮತ್ತು ಆವಿಷ್ಕಾರದ ಶಕ್ತಿಯಿಂದ ಸ್ಫೂರ್ತಿಗೊಂಡ ಯಾರಿಗಾದರೂ ಸ್ಪಂದಿಸುವ ಚಿತ್ತಾಕರ್ಷಕ ನಿ...

ಕುಶಾನರ ಕಾಲದ ಏಷ್ಯಾವನ್ನು ನಮ್ಮೆದುರು ಬಿಚ್ಚಿಡುವ ಸುಂದರ ಕಥಾನಕ

04-01-2025 ಬೆಂಗಳೂರು

“ಬಟ್ಟೆಯೆಂದರೆ ಬರಿಯ ಮೈಮುಚ್ಚುವ ಸಾಧನವಲ್ಲ... ಅದು ದೇಶ ದೇಶಗಳನ್ನೇ ಬೆಸೆಯುವ ಹಾದಿ... ಆ ಹಾದಿಯುದ್ದಕ್ಕೂ ನಡೆಯ...

ಬದುಕಿನಲ್ಲಿ ನಾವೇನಾಗಬಲ್ಲೆವೂ ಅದಾಗಬೇಕು

03-01-2025 ಬೆಂಗಳೂರು

“ಈ ಪುಸ್ತಕ ಓದಿ ನಾನು ಯಾರು ಎಂದು ಗೊತ್ತಾಯಿತು ಮಾತ್ರವಲ್ಲ; ಬೇರೆಯವರು ಯಾಕೆ ಹೀಗೆ? ಎಂದು ತಿಳಿಯಿತು,” ಎ...