ನಮ್ಮ ಸಮಾಜದ ಶ್ರೇಣೀಕೃತ ವ್ಯವಸ್ಥೆಯ ಗತಿಬಿಂಬ ‘ಜೈಲು ಕತೆಗಳು’


"ಶಿಕ್ಷೆಯಲ್ಲಿನ ವೈರುಧ್ಯಗಳ ಅನಾವರಣ: ಸಣ್ಣ ಪುಟ್ಟ ಕಳ್ಳತನ ಮಾಡಿದವರಿಗೆ ಕೈಗೆ ಕೋಳ ಹಾಕಿ ಸಾರ್ವಜನಿಕವಾಗಿ ಎಳೆದುಕೊಂಡು ಹೋದರೆ, ಘನತರ ಅಪರಾಧಿ ಕೋರ್ಟ್ ನಾಮಕಾವಸ್ತೆ ಶಿಕ್ಷೆ ವಿಧಿಸಿ ಕೂಡಲೇ ಫೈಸಲ್ ಮಾಡುವುದು ನ್ಯಾಯ ವ್ಯವಸ್ಥೆಯ ಅಣಕವಾಗಿದೆ," ಎನ್ನುತ್ತಾರೆ ರಘುನಾಥ್ ಕೃಷ್ಣಾಮಾಚಾರ್. ಅವರು ಕೆ. ಸತ್ಯನಾರಾಯಣ ಅವರ ‘ಜೈಲು ಕತೆಗಳು’ ಕೃತಿ ಕುರಿತು ಬರೆದಿರುವ ವಿಮರ್ಶೆ.

ಪ್ರಯೋಗ ಶೀಲರಾದ ಈ ಲೇಖಕರು ತಮ್ಮ ಪ್ರತಿ ಕೃತಿಯಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಇದಕ್ಕೆ ಅವರ ಈ ಕೃತಿಯೂ ಕೂಡಾ ಹೊರತಾಗಿಲ್ಲ. ಇದಕ್ಕೆ ಮುಖ್ಯ ಕಾರಣ ನಾವು ಯಾರನ್ನು ಅಪರಾಧಿಗಳು ಎಂದು ಪರಿಗಣಿಸುತ್ತೇವೋ, ಅವರ ಕುರಿತು ಲೇಖಕರ ಅನುಭೂತಿ. ಇದು ಸಾಧ್ಯವಾಗುವುದು ಅವರ ಪರಕಾಯ ಪ್ರವೇಶ ಶಕ್ತಿಯಿಂದ ಅಲ್ಲದೆ ಅಪರಾಧಿಗಳಾದವರ ಅಪರಾಧದಲ್ಲಿ ನಮ್ಮ ಪಾತ್ರ ಏನೂ ಇಲ್ಲವೇ ? ಇದ್ದರೆ ಅವರು ಮಾತ್ರ ಯಾಕೆ ಜೈಲಿನಲ್ಲಿ ಕೊಳೆಯುತ್ತಾರೆ.? ನಾವು ಯಾಕೆ ಅಲ್ಲ? ಎನ್ನುವ ಮೂಲಭೂತ ಪ್ರಶ್ನೆಗಳನ್ನು ಕೇಳಿ ನಮ್ಮ ಎಲ್ಲರನ್ನೂ ಆತ್ಮಾವಲೋಕನಕ್ಕೆ ಹಚ್ಚುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ. ಇದಕ್ಕೆ ನಿದರ್ಶನವಾಗಿ ಕೊಲೆ ಮಾಡಿದವರು ಇನ್ನೊಬ್ಬರನ್ನು ಬಲಿಪಶುವನ್ನಾಗಿಸುವ, ಅವರಿಗೆ ಜೈಲಿನಿಂದ ಬಿಡುಗಡೆಯ ಆಮಿಷ ತೋರಿಸಿ, ನಂತರ ಕೈ ಎತ್ತಿ ಬಿಡುವವರನ್ನು ಏನೆಂದು ಕರೆಯಬೇಕು?( ಶಾಸಕನಾಗುವೆನೆಂಬ ಖೈದಿ)ಸಮಾಜದಲ್ಲಿ ಪ್ರತಿಷ್ಠಿತರೆನಿಸಿಕೊಂಡವರು ಇಂತಹ ಕೃತ್ಯದಲ್ಲಿ ತೊಡಗಿದರೆ ಆಗ ನಿಜವಾದ ಅಪರಾಧಿಗಳು ಯಾರು? ಯಾರಿಗೆ ಶಿಕ್ಷೆಯಾಗಬೇಕು? ಆದ್ದರಿಂದ ಬಹುತೇಕ ಅಪರಾಧಿಗಳಿಗೆ ಯಾವ ಬಗೆಯ ಅಪರಾಧಿ ಮನೋಭಾವ, ಪಶ್ಚಾತ್ತಾಪ ಕಾಡುವುದಿಲ್ಲ. ಅದರ ಬದಲಿಗೆ ಅವರನ್ನು ಆ ಸ್ಥಿತಿಗೆ ತಂದವರ ಕುರಿತು ಸೇಡು ತೀರಿಸಿಕೊಳ್ಳುವ ಮನೋಭಾವ ಮೂಡಿದರೆ ಅದರಲ್ಲಿ ಅವರ ತಪ್ಪೇನು? ಆದ್ದರಿಂದಲೇ ಲೇಖಕರು ಅವರ ಬಗ್ಗೆ ಅನುಭೂತಿಯಿಂದ ನೋಡಿ, ನಮ್ಮಲ್ಲಿ ಕೂಡ ಅದೇ ಅನುಭೂತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಈ ಕೃತಿಯ ಧನಾತ್ಮಕ ಚಿಂತನೆ.

ಸಣ್ಣ ಪುಟ್ಟ ಕಳ್ಳತನ ಮಾಡಿ, ಕೊಲೆ ಮಾಡಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದವರು ಮಾತ್ರ ಜೈಲಿನಲ್ಲಿ ಸಿಕ್ಕಿಬೀಳುತ್ತಾರೆ, ಅವರಿಗಿಂತ ಘನಘೋರ ಅಪರಾಧ ಮಾಡಿದವರು ತಮಗೆ ಇರುವ ಸಂಪನ್ಮೂಲಗಳ ಬಲದಿಂದ ಒಂದು ವೇಳೆ ಸಿಕ್ಕಿದರೂ, ಕೂಡಲೇ ಬಿಡುಗಡೆಗೊಂಡು ಮೆರೆಯುತ್ತಾರೆ ಎನ್ನುವುದಕ್ಕೆ ಇವರು ಸಿಕ್ಕಿ ಹಾಕಿಸಿದ ದೊಡ್ಡ ಉದ್ಯಮಿಯೊಬ್ಬರು ನಿದರ್ಶನ. ಶಿಕ್ಷೆಯಲ್ಲಿನ ವೈರುಧ್ಯಗಳ ಅನಾವರಣ: ಸಣ್ಣ ಪುಟ್ಟ ಕಳ್ಳತನ ಮಾಡಿದವರಿಗೆ ಕೈಗೆ ಕೋಳ ಹಾಕಿ ಸಾರ್ವಜನಿಕವಾಗಿ ಎಳೆದುಕೊಂಡು ಹೋದರೆ, ಘನತರ ಅಪರಾಧಿ ಕೋರ್ಟ್ ನಾಮಕಾವಸ್ತೆ ಶಿಕ್ಷೆ ವಿಧಿಸಿ ಕೂಡಲೇ ಫೈಸಲ್ ಮಾಡುವುದು ನ್ಯಾಯ ವ್ಯವಸ್ಥೆಯ ಅಣಕವಾಗಿದೆ( ಒಂದು ಒಪ್ಪೊತ್ತಿನ ಜೈಲು). ಕರ್ನಾಟಕದ ಹೆಣ್ಣು ಮಗಳು ತಮಿಳು ಚಿತ್ರರಂಗದ ತಾರೆಯಾಗಿ , ತಮಿಳು ನಾಡಿನ ಮುಖ್ಯಮಂತ್ರಿಯಾಗಿ ನಂತರ ಮಾಡಿದ ಅಪರಾಧದಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿದಾಗ ಆಕೆಗೆ ಒಡನಾಡಿಯಾಗಿ ದೊರೆಯುವುದು ಒಂದು ಇಲಿ.ಅದರ ಜೊತೆ ಆಕೆಯ ಸಖ್ಯ ಕುವೆಂಪು ಅವರ ಮ.ಮ ನಲ್ಲಿ ಬರುವ ನಾಯಿಗುತ್ತಿ ಹುಲಿಯರ ಸಖ್ಯದ ರೂಪಕವಾಗುವಷ್ಟು ಸಶಕ್ತವಾಗಿ ಮೂಡಿಬಂದಿದೆ.( ಜೈಲಿನಿಂದ ಹೊರಬಂದ ಇಲಿ) ಬಂಧಿಖಾನೆಯ ಆಡಿಟ್ ರ ಆದಾಗ ಲೇಖಕರು ಕೇಂದ್ರ ಕಾರಾಗೃಹಕ್ಕೆ ಬರುವ ವಿ.ವಿ.ಐ.ಪಿ ಅಪರಾಧಿಗಳಿಗೆಂದು ಯಾವುದೇ ಲೆಕ್ಕವಿಲ್ಲದ, ಇಂದ್ರ ಭವನಕ್ಕೆ ಮತ್ತು ಅಲ್ಲಿನ ಐಷಾರಾಮಿ ಸವಲತ್ತುಗಳಿಗೆ ಸಾಕ್ಷಿಯಾಗಬೇಕಾಗಿ ಬರುವುದು ಒಂದು ವಿಡಂಬನೆಯಾಗಿದೆ. ( ಜೈಲಿನಲ್ಲಿ ಇಂದ್ರ ಲೋಕ).ಇದನ್ನು ಕುರಿತು ಯಾರೂ ಚಕಾರ ಎತ್ತುವುದಿಲ್ಲ ಎನ್ನುವುದು ವ್ಯವಸ್ಥೆಯ ವೈಪರೀತ್ಯಕ್ಕೆ ಹಿಡಿದ ಕೈಗನ್ನಡಿ. ಜೈಲು ಕೇರಿ, (ಅಮಾನವೀಯತೆಯ ಸಂಕೇತ) ಜೈಲಿಗೆ ಹೋಗಲು ಸಕಲ ಸಿದ್ಧತೆ ( ಲಂಚ ತೆಗೆದುಕೊಂಡು ಸಿಕ್ಕಿ ಬಿದ್ದರೂ ಪಶ್ಚಾತ್ತಾಪದ ಲವಲೇಶವೂ ಇಲ್ಲದ ರಾಜಾರೋಷವಾಗಿ ), ಆದ್ದರಿಂದ ನಾವು ಇಲ್ಲಿಯವರೆಗೆ ತಿಳಿದುಕೊಂಡ ಅಪರಾಧ,ಅಪರಾಧಿ, ಶಿಕ್ಷೆ, ದಂಡನೆ ಇತ್ಯಾದಿಗಳನ್ನು ಕುರಿತು ನಮ್ಮ ಪರಿಕಲ್ಪನೆಗಳನ್ನು ಪುನರ್ ಪರಿಶೀಲನೆಗೆ ಒತ್ತಾಯಿಸುವಂತೆ ಮಾಡುವುದು ಈ ಕೃತಿಯ ಸಾಧನೆ.

MORE FEATURES

ಸಾಧಕರು ಪುಸ್ತಕದಲ್ಲಿಲ್ಲ, ಸಿನಿಮಾದಲ್ಲಿಲ್ಲ, ನಮ್ಮ ಮುಂದಿದ್ದಾರೆ

28-12-2024 ಬೆಂಗಳೂರು

“ಈ ಎಲ್ಲ ಯುವಜನಾಂಗದ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದರ ಜೊತೆಗೆ ಇತರ ಕ್ಷೇತ್ರದಲ್ಲಿ ಹೆಸರು ಮಾಡಿದ ಸಾಧಕರ ಬಗ...

ಸರಕಾರದ ಅಡೆತಡೆಗಳು ದಕ್ಷಿಣದ ಮೇಲೆ ಹೇಗೆಲ್ಲಾ ಬೀಳ್ತಿದೆ?

28-12-2024 ಬೆಂಗಳೂರು

“ರಾಜ್ಯವಾರು ಜನರ ಬದುಕಿನ ಗುಣಮಟ್ಟ ಹೆಚ್ಚಿಸೋಕೆ, ಮೂಲಭೂತ ಸೇವೆಗಳನ್ನ ಒದಗಿಸೋಕೆ ಕೇಂದ್ರ ಸರಕಾರದ ಅಡೆತಡೆಗಳು ದಕ...

ಕಡೆಗೂ ಸಾಮಾನ್ಯ ಮನುಷ್ಯರಿಗೆ ಉಳಿಯುವುದು ಬರಿಯ ವೇದನೆ ಮಾತ್ರ..

27-12-2024 ಬೆಂಗಳೂರು

"ಲೋಕವನ್ನೇ ನಡುಗಿಸಿದ ಕರೋನಾ ಕಾಲದಲ್ಲಿ ನಡೆದಿದೆ ಎಂದು ಈಗ ಬಗೆಯಲಾಗುತ್ತಿರುವ ಬ್ರಷ್ಟಾಚಾರದ ಕಾಳಮುಖದ ಪರಿಚಯ ಮತ್...