"ಲೋಕವನ್ನೇ ನಡುಗಿಸಿದ ಕರೋನಾ ಕಾಲದಲ್ಲಿ ನಡೆದಿದೆ ಎಂದು ಈಗ ಬಗೆಯಲಾಗುತ್ತಿರುವ ಬ್ರಷ್ಟಾಚಾರದ ಕಾಳಮುಖದ ಪರಿಚಯ ಮತ್ತು ಅದರ ಕರಾಮತ್ತು ಕಾದಂಬರಿಯಲ್ಲಿ ಅತ್ಯದ್ಭುತವಾಗಿ ಒಳಗೊಂಡಿದೆ. ಒಬ್ಬ ರೆಗ್ಯುಲರ್ ನೌಕರನಿಗೂ ಮತ್ತು ಕಾಂಟ್ರಾಕ್ಟ್ ನೌಕರನಿಗೂ ಇರುವ ವಾಸ್ತವ ತುಲನೆ ಕಾದಂಬರಿಯಲ್ಲಿ ತಳುಕುಹಾಕಿಕೊಂಡಿದೆ," ಎನ್ನುತ್ತಾರೆ ಡಿ.ಎಸ್.ರಾಮಸ್ವಾಮಿ. ಅವರು ಲಕ್ಷ್ಮಣ ವಿ.ಎ ಅವರ ‘ಪಿ.ಎಚ್.ಸಿ ಕವಲು ಗುಡ್ಡ 24/7’ ಕೃತಿ ಕುರಿತು ಬರೆದ ವಿಮರ್ಶೆ..
ಡಾ.ಲಕ್ಷ್ಮಣರ ಮೊದಲ ಕಾದಂಬರಿ ಪಿ.ಎಚ್.ಸಿ ಕವಲು ಗುಡ್ಡ 24/7 ಅವರೊಳಗಿದ್ದ ಕವಿ, ಕತೆಗಾರ, ಪ್ರಬಂಧಕಾರ ಈ ಮೂವರನ್ನೂ ಪರಸ್ಪರ ಜಿದ್ದಿಗೆ ಬಿದ್ದಂತೆ ಬರೆಸಿಕೊಂಡಿದೆ ಇದು ಬರೆದದ್ದಲ್ಲ, ಬರೆಸಿಕೊಂಡಿರುವುದೇ ಆಗಿದೆ. ಬರೆಯುವುದಕ್ಕೆ ಕಲ್ಪನೆಯ ಅಗತ್ಯ ಇದೆ. ಆದರೆ ಬರೆಸಿಕೊಳ್ಳುವ ವಸ್ತುವಿಗೆ ಅಂಥ ತಾಕತ್ತು ಇದ್ದರೆ ಇಂಥ ಕಾದಂಬರಿ ಹೊರ ಹೊಮ್ಮುತ್ತದೆ.
ಈಗಾಗಲೇ ಶಮನಂದಿಬೆಟ್ಟ ತಮ್ಮ ಎಫ್ಬಿ ಬರಹದಲ್ಲಿ ಹೇಳಿರುವ ಈ ಕಾದಂಬರಿ ಕುರಿತ ಟಿಪ್ಪಣಿಯನ್ನೇ ವಿಸ್ತರಿಸಿದರೆ ಅದಕ್ಕಿಂತ ಮತ್ತೊಂದು ವಿಮರ್ಶಾ ಲೇಖನದ ಅಗತ್ಯವೇ ಕಾಣದು.
ಲೋಕವನ್ನೇ ನಡುಗಿಸಿದ ಕರೋನಾ ಕಾಲದಲ್ಲಿ ನಡೆದಿದೆ ಎಂದು ಈಗ ಬಗೆಯಲಾಗುತ್ತಿರುವ ಬ್ರಷ್ಟಾಚಾರದ ಕಾಳಮುಖದ ಪರಿಚಯ ಮತ್ತು ಅದರ ಕರಾಮತ್ತು ಕಾದಂಬರಿಯಲ್ಲಿ ಅತ್ಯದ್ಭುತವಾಗಿ ಒಳಗೊಂಡಿದೆ. ಒಬ್ಬ ರೆಗ್ಯುಲರ್ ನೌಕರನಿಗೂ ಮತ್ತು ಕಾಂಟ್ರಾಕ್ಟ್ ನೌಕರನಿಗೂ ಇರುವ ವಾಸ್ತವ ತುಲನೆ ಕಾದಂಬರಿಯಲ್ಲಿ ತಳುಕುಹಾಕಿಕೊಂಡಿದೆ.
ಡಾ. ಸುಹಾಸ್ ಎಂಬ ಖಾಸಗಿ ಪ್ರಾಕ್ಟೀಸಿನಲ್ಲಿದ್ದ ಯುವ ವೈದ್ಯನೊಬ್ಬ ಕರೋನಾ ವಾರಿಯರ್ ಆಗಿ ಕಂಟ್ರಾಕ್ಟ್ ವೈದ್ಯನ ಹುದ್ದೆಗೆ ನೇಮಕವಾಗುವ ಸಂದರ್ಭದೊಂದಿಗೆ ತೆರೆದುಕೊಳ್ಳುವ ಕಥಾ ವಸ್ತು ಅವನು ನೌಕರಿಯಿಂದ ವಜಾ ಆಗುವವರೆಗೂ ಮುಂದುವರೆದಿದೆ. ಭಾರತದಂಥ ನೆಲದಲ್ಲಿ ಮಾತ್ರ ನಡೆಯಬಹುದಾದ ಬ್ರಷ್ಟಾಚಾರದ ಈ ಕತೆಯು ಉಳಿದೆಲ್ಲ ದೇಶ ಕಾಲಗಳಾಚೆಗೂ ಮೀರಿದ ಆದರೆ ನೌಕರ ಶಾಹಿ ಮತ್ತು ರಾಜಕಾರಣದ ಅವಿನಾವ ಸಂಬಂಧದ ಬಗೆಗೂ ಸೂಕ್ಷ್ಮನೋಟವನ್ನು ಬೀರಿದೆ.
ವಿಮರ್ಶೆಯ ಭರದಲ್ಲಿ ಕತೆ ಹೇಳಿ ಓದಿನ ಮೂಲಕ ಪಡೆಯಬಹುದಾದ ಅದರ ಸ್ವಾರಸ್ಯವನ್ನು ಇಲ್ಲಿ ವಿಸ್ತರಿಸಲಾರೆ. ಏಕೆಂದರೆ ಈ ಕಾದಂಬರಿ ಈ ಲೇಖಕರ ಮೊದಲ ಕಾದಂಬರಿ. ಈಗಾಗಲೇ ತಮ್ಮ ಕವಿತೆ, ಕತೆ, ಪ್ರಬಂಧ ನುಡಿಚಿತ್ರಗಳಿಂದ ಬರಹಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಡಾ. ಲಕ್ಷ್ಮಣ್ ಪ್ರಾಯಶಃ ಅಲ್ಲಲ್ಲ ಖಂಡಿತ ತಮ್ಮದೇ ಅನುಭವಕ್ಕೆ ಅವರ ಹಾಗೆಯೇ ಇದ್ದ ಹಲವು ಕಂಟ್ರಾಕ್ಟ್ ಡಾಕ್ಟರುಗಳ ಕತೆಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
ರಮ್ಯತೆ, ಗಹನತೆಗಳನ್ನು ಕಥಾ ಹಂದರದ ನಿರ್ಮಾಣದಲ್ಲಿ ಹದವಾಗಿ ಬೆರೆಸಿರುವ ಲೇಖಕರು ಪ್ರತಿ ಅಧ್ಯಾಯದಿಂದ ಅದ್ಯಾಯಕ್ಕೆ ಕುತೂಹಲ ಮತ್ತು ಸಾಂಧ್ರತೆಯನ್ನು ಕಾಪಿಟ್ಟು ಇದು ಅವರ ಮೊದಲ ಕಾದಂಬರಿ ಹಾಗಾಗಿ ಕೊಂಚ ಹರಿತ ವಿಮರ್ಶಾ ಮಾನದಂಡಗಳನ್ನು ಬಳಸದಿರೋಣ ಎನ್ನುವ ನಿಲುವನ್ನೇ ತಲೆಕೆಳಗು ಮಾಡಿದ್ದಾರೆ.
ಕರೋನಾದ ಮಾರಿ ದೇಶದ ಅರ್ಥ ವ್ಯವಸ್ಥೆ ಮತ್ತು ಸಾಮಾಜಿಕ ಸನ್ನಿವೇಶಗಳಲ್ಲಿ ಇನ್ನಿಲ್ಲದ ಬದಲಾವಣೆ ತಂದುದನ್ನು ಕಾದಂಬರಿ ತುಂಬ ಚನ್ನಾಗಿ ನಿರ್ವಹಿಸಿದೆ.
ಕಡೆಗೂ ಸಾಮಾನ್ಯ ಮನುಷ್ಯರಿಗೆ ಉಳಿಯುವುದು ಬರಿಯ ವೇದನೆ ಮಾತ್ರ...
ನಾವು ಏನೇ ಹೇಳಲಿ, ವ್ಯವಸ್ಥೆಯ ಕುರಿತು ಮಾಧ್ಯಮಗಳಿಗೆ ಬೇಕಿರುವುದು ತಕ್ಷಣಕ್ಕೆ ಬೇಕಿರುವ ಬ್ರೇಕಿಂಗ್ ಸುದ್ದಿ. ಇದನ್ನು ತುಂಬ ಸೂಕ್ಷ್ಮವಾಗಿ ಕಾದಂಬರಿಯಲ್ಲಿ ಹೆಣೆದಿರುವ ಲೇಖಕರು ಅದನ್ನು ಕಣ್ಣಿಗೆ ಕಟ್ಟುವಂತೆ ಅಲ್ಲಲ್ಲ ರಾಚುವಂತೆ ಕಥಾ ಹಂದರದಲ್ಲಿ ಒಡಮೂಡಿಸಿದ್ದಾರೆ. ಕಡೆಗೂ ಗೆಲ್ಲುವುದು ವ್ಯವಸ್ಥೆಯನ್ನು ಕೈಗೊಂಬೆ ಮಾಡಿಕೊಂಡಿರುವ ರಾಜಕಾರಣಿಗಳು ಅವರಿಗೆ ಬೆಂಬಲವಾಗಿರುವ ಮೇಲಧಿಕಾರಿಗಳು ಮತ್ತು ಎರಡೂ ಕಡೆ ಸಿಕ್ಕಿದ್ದನ್ನು ನೆಕ್ಕುವ ರವಿಯಂಥ 'ಟೆಕ್ನಿಕಲ್' ಮನುಷ್ಯರು...
ವಿಷಾದ ಸ್ಥಾಯಿಯಾಗಿದೆ...ಕಾದಂಬರಿಯುದ್ದಕ್ಕೂ…
ಹೆಂಡತಿ ಮಗ ಕಡೆಗೆ ಹೆತ್ತ ತಾಯಿಯತ್ತಲೂ ಗಮನ ಹರಿಸಲಾಗದ ಸ್ಥಿತಿಯನ್ನು ಸ್ವತಃ ತಲುಪುವ ನಾಯಕ ನಮ್ಮೆಲ್ಲರೊಳಗೂ ಇರುವ ಹತಾಶ ಪರಿಸ್ಠಿತಿಯನ್ನು ಯಶಸ್ವಿಯಾಗಿ ಪ್ರತಿನಿಧಿಸಿದ್ದಾನೆ. ಪರಿಸ್ಥಿತಿಯ ಕೈಗೊಂಬೆ ಆಗುವ ಡಾ.ಸುಹಾಸ ಸದ್ಯೋವರ್ತಮಾನದ ದಾಖಲೆಯೂ ಆಗಿದ್ದಾನೆ.
ಕಾದಂಬರಿಯ ಪ್ರೊಡಕ್ಷನ್ ರಿಚ್ ಆಗಿ ಬಂದಿದೆ. ಮುಖಪುಟದಲ್ಲಿ ಇರುವ ಮಾಸ್ಕಿನ ಉಬ್ಬಿದ ಚಿತ್ರ ಕರೋನಾ ಕಾಲಘಟ್ಟದಲ್ಲಿ ನಡೆದಿರಬಹುದಾದ ವ್ಯಾಪಕ ಬ್ರಷ್ಟಾಚಾರದ ಅನಧಿಕೃತ ಮಾಹಿತಿಯೂ ಆಗಿದೆ.
ಫಾಂಟ್ ಸೈಜನ್ನು ಕೊಂಚ ಕಡಿಮೆ ಮಾಡಿದ್ದಿದ್ದರೆ ಇನ್ನೂ ಚನ್ನಿತ್ತು.
ಕಾದಂಬರಿ ಸ್ವಲ್ಪ ಸ್ವಲ್ಪವಾಗಿ ಬಿಚ್ಚಿಕೊಳ್ಳುತ್ತ ಒಟ್ಟೂ ದೇಶದಾದ್ಯಂತ ಕರೋನಾ ಕಾಲ ಘಟ್ಟದ ಹಂತಗಳನ್ನು ಒಳಗೊಳ್ಳುತ್ತಲೇ ಆ ಕಾಲದ ಅಧಿಕೃತ ವರದಿಯೂ ಆಗಿ ಓದುಗನನ್ನು ವ್ಯಾಪಕ ಚಿಂತನೆಗೆ ಹಚ್ಚಿ ವಿಷಾದದ ಆಳಕ್ಕೆ ತಳ್ಳುತ್ತದೆ.
ಸಿನಿಮಾ ವಿಮರ್ಶೆಯಲ್ಲಿ ಹೇಳುವ ಹಾಗೆ ಕೊಂಚ ಕತ್ತರಿಯಾಡಿಸುವ ಅವಶ್ಯಕತೆ ಇತ್ತು. ಮತ್ತು ಕಾದಂಬರಿಯ ವಸ್ತುವಿಗೆ ನಾಯಕನ ಸಾಂಸಾರಿಕ ಚಿತ್ರಣ ಹಿನ್ನೆಲೆ ಸಂಗೀತವಾಗಿಯೇ ಕಾಡುತ್ತದೆ. ಫೈಟು, ಸಾಂಗು, ಎಮೋಶನ್ನು, ಸ್ಲೋ ಮೋಷನ್ನು ಎಲ್ಲಕ್ಕೂ ಅವಕಾಶಗಳಿವೆ. ಮುಖ್ಯತಃ ಯಾವುದೇ ಲೊಕೇಶನ್ನಲ್ಲೂ ಆರಾಮಾಗಿ ಚಿತ್ರಿಸಬಹುದಾದ ಚಿತ್ರಕತೆ ಈಗಾಗಲೇ ಕಾದಂಬರಿಯಲ್ಲಿಯೆ ಕಾಣುತ್ತಿದೆ.
- ಡಿ.ಎಸ್.ರಾಮಸ್ವಾಮಿ
“ತಮ್ಮ ವೃತ್ತಿ ಜೀವನದಲ್ಲಿ ನಡೆದ ಒಂದು ಸಣ್ಣ ಘಟನೆಯ ಹಿಂದೆ ಬಿದ್ದ ಡಾ. ಸೂರ್ಯಕುಮಾರ್ ಅವರು, ಸಲೀಸಾಗಿ ಓದಿಸಿಕೊಂ...
"ದೇಹವನ್ನು ಕೇವಲ ಒಂದು ಮಾಧ್ಯಮವಾಗಿಸಿಕೊಳ್ಳುವ ಅಥವಾ ಮಾಧ್ಯಮವನ್ನಷ್ಟೇ ಆಗಿಸಿಕೊಳ್ಳಬೇಕಾಗುವ ಹಾಗೂ ಬುದ್ಧಿ ಮನಸ್ಸ...
“ಇವ್ರು ಹೆಣಗಳ ಹಿಂದೋ ಇಲ್ಲಾ ಹೆಣಗಳೇ ಇವರ ಹಿಂದೋ ಓಡಾಡಿದಂಗಿದೆ. ಜಗತ್ತಿನ ಖಿನ್ನತೆಗೊಳಗಾದ ಮಹಾಕವಿಯ, ತುಂಬಾ ಸರ...
©2024 Book Brahma Private Limited.