Date: 27-11-2024
Location: ಬೆಂಗಳೂರು
"ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿಕ ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ಜೋತು ಬೀಳದೆ ತಮ್ಮ ಜೀವನ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಂಡು ದುರ್ಬಲರು ಆಗದೆ ಗಟ್ಟಿಗರಾಗಿ ಬದುಕನ್ನು ಅರ್ಥೈಸಿಕೊಂಡು ಹಳ್ಳಿಯಲ್ಲೇ ಬದುಕನ್ನು ಕಟ್ಟಿ ಬಾಳಿದವರು," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಅಂತರ್ ದೃಷ್ಟಿ’ ವಿಮರ್ಶಾ ಸರಣಿಯಲ್ಲಿ ಜಿ.ಎಚ್. ನಾಯಕ ಅವರ ಸಂಪಾದಿತ ಕೃತಿಯಿಂದ ಆಯ್ದ ಚದುರಂಗರ “ನಾಲ್ಕು ಮೊಳ ಭೂಮಿ” ಕತೆಯ ಬಗ್ಗೆ ವಿಮರ್ಶಿಸಿದ್ದಾರೆ.
ಎಂ. ಸುಬ್ರಹ್ಮಣ್ಯರಾಜೇ ಅರಸು 1916ರಲ್ಲಿ ಮೈಸೂರಿನ ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು. ಇವರು ಸೂಪ ಶಾಸ್ತ್ರವನ್ನು ಬರೆದ ಮಂಗರಸನ ವಂಶಸ್ಥರು. ಚದುರಂಗ ಎಂಬುದು ಇವರ ಕಾವ್ಯನಾಮ. ಚಿಕ್ಕಂದಿನಿಂದಲೇ ತಾಯಿಯಿಂದ ಕಥೆ ಪುರಾಣ ರಾಮಾಯಣ ಮಹಾಭಾರತದ ಕತೆಗಳನ್ನು ತಿಳಿದುಕೊಂಡು ತನ್ನ ಸಹಮಿತ್ರರಿಗೆ ಹೇಳುತ್ತಿದ್ದರು. ತಾರುಣ್ಯದಲ್ಲಿ ಸ್ವಾತಂತ್ರ್ಯ ಚಳುವಳಿ, ಗಾಂಧೀ ವಿಚಾರಗಳು ಎಂ.ಎನ್ ರಾಯ್ ವಿಚಾರಧಾರೆಗಳು ಇವರ ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡಿದ್ದವು. ಚದುರಂಗರನ್ನು “ಕನ್ನಡದ ಫೀನಿಕ್ಸ್” ಎಂದು ಕರೆಯುತ್ತಾರೆ. ತಮ್ಮ ವೈಯಕ್ತಿಕ ಬದುಕಿನಲ್ಲಿ ಸಹ ಸಾಮಾಜಿಕ ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ಜೋತು ಬೀಳದೆ ತಮ್ಮ ಜೀವನ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಂಡು ದುರ್ಬಲರು ಆಗದೆ ಗಟ್ಟಿಗರಾಗಿ ಬದುಕನ್ನು ಅರ್ಥೈಸಿಕೊಂಡು ಹಳ್ಳಿಯಲ್ಲೇ ಬದುಕನ್ನು ಕಟ್ಟಿ ಬಾಳಿದವರು.
ಇವರ ಸಾಹಿತ್ಯ ಜೀವನದ ಮೇಲೆ ಹಲವಾರು ಕವಿಗಳು ಪ್ರಭಾವ ಬೀರಿರುವುದನ್ನು ಕಾಣಬಹುದು. ಇವರು ಸ್ವಪ್ನ ಸುಂದರಿ, ಶವದ ಮನೆ, ಇಣುಕು ನೋಟ, ಬಂಗಾರದ ಗೆಜ್ಜೆ, ಮೀನಿನ ಹೆಜ್ಜೆ, ಕ್ವಾಟೆ, ಮೃಗಾಯ. ಎಂಬಂತಹ ಕಥಾಸಂಕಲನಗಳನ್ನು ಹಾಗೂ ‘ಸಮರ ಮಂಗಳ’ ಇವರ ಮೊದಲ ಕಾದಂಬರಿಯಾಗಿದ್ದು ಉಯ್ಯಾಲೆ, ವೈಶಾಖ, ಹೆಜ್ಜಾಲ, ಎಂಬಂತಹ ಮುಖ್ಯ ಕಾದಂಬರಿಗಳನ್ನೂ, ಇಲಿ ಬೋನು, ಎಂಬಂತಹ ಅಸಂಗತ ನಾಟಕಗಳನ್ನು ಬರೆದ ಇವರ ಸಾಹಿತ್ಯ ಕೃಷಿ ಅತ್ಯುತ್ತಮವಾಗಿ ಮೂಡಿರುವಂತದ್ದು. ವೈಶಾಖ ಕಾದಂಬರಿಯು ಕನ್ನಡದಲ್ಲಿ ಬಹಳಷ್ಟು ವಿಚಾರ ವಿಮರ್ಶೆಗೆ ಒಳಗಾದ ಕೃತಿಯಾಗಿದೆ. ಇವರು ಬರೆದಿದ್ದು ಕೆಲವೇ ಕಾದಂಬರಿ ಆದರೂ ಅವೆಲ್ಲವೂ ಸಹ ವಿಭಿನ್ನ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ‘ಮೀನಿನ ಹೆಜ್ಜೆ’ ಸಂಕಲನದಲ್ಲಿ ಇವರ “ನಾಲ್ಕು ಮೊಳ ಭೂಮಿ” ಎಂಬ ಕತೆಯನ್ನು ಕಾಣಬಹುದು.
“ನಾಲ್ಕು ಮೊಳ ಭೂಮಿ” ಕಥೆಯು ಕನ್ನಡ ಸಾಹಿತ್ಯದಲ್ಲಿ ಉತ್ತಮ ಕಥೆಗಳ ಸಾಲಿನಲ್ಲಿ ನಿಲ್ಲುವಂಥದ್ದು. ಲಾಯರು ವ್ಯಾಜ್ಯಗಳ ಕಡತಗಳೊಂದಿಗೆ ಭೂಮಿ, ಭೂಮಿ, ಎನ್ನುವ ಸ್ವಾರ್ಥದ ಚಿಂತನೆಯಲ್ಲಿ ಈ ಜಗಳ ಪಾಲು ಇವೆಂದಿಗೂ ಮುಗಿಯದ ಕೆಲಸಗಳು ಅನ್ನುತ್ತಿರುವಂತೆ ತೌರಿಗೆ ತೆರಳಿದ ಹೆಂಡತಿಗೆ ಬಂದಿರುವ ಮನೆಯಾಡರ್ ಆದರೂ ಯಾರಿಂದ? ಎಲ್ಲಿಂದ? ಯಾರು ಕಳಿಸಿದರು ಎಂಬ ಕುತೂಹಲಕ್ಕೆ ನೋಡುವ ಲಾಯರ್ಗೆ ಅವಳ ರೂಮಿನಲ್ಲಿ ಸಿಗುವ ಕಥಾ ಬರಹ ತೆಗೆದುಕೊಳ್ಳುವ ಆಯಾಮ ಬೇರೆ ತೆರನಾಗಿ ಇರುತ್ತದೆ. ಮದುವೆಯಾದ ಹೊಸತರಲ್ಲಿ ಕಥೆ ಬರೆದ ಹೆಂಡತಿಯನ್ನು ಕಂಡಾಗ ಅದರಿಂದ ಪ್ರಯೋಜನವಿದ್ದರಷ್ಟೆ ಬರೆಯಬೇಕೆಂಬ ನಿಲುವು ತೆಳೆದಿದ್ದ ಲಾಯರ್ ಗೆ ಕ್ರಮೇಣ ಹೆಂಡತಿ ಏನನ್ನು ಬರೆದಿದ್ದಾಳೆ ಬರೆಯುತ್ತಿದ್ದಾಳೆ ಎಂಬುದೇ ಮರೆತು ಹೋಗಿತ್ತು. ಈ ಪೋಸ್ಟ್ ಮನ್ ಆಕೆಗೆ ಬಂದ ಮನಿಆರ್ಡರ್ ನಿಂದಾಗಿ ಅಕೆಯ ರೂಮನ್ನು ತಡಕಾಡುವಂತೆ ಮಾಡಿದ್ದು ಸುಳ್ಳಲ್ಲ. ಅಲ್ಲೆ ಇದ್ದ ಹಾಳೆಯನ್ನು ಬಿಚ್ಚಿದಾಗ ನಾಲ್ಕು ಮೊಳ ಭೂಮಿ ಎಂಬ ಹೆಸರಿನ ಕಥೆ ತೆಗೆದುಕೊಳ್ಳುವುದು ಬೇರೆಯದೆ ಆದ ನಿಲುವುಗಳನ್ನು.
ಬಲಿಷ್ಠ ರೈತನಾದ ಕಾಳಿಂಗಯ್ಯ ತನ್ನ ಲೋಭ ಬುದ್ಧಿಯಿಂದ ದೇವಯ್ಯನ ‘ನಾಲ್ಕು ಮೊಳ ಭೂಮಿ’ ಯನ್ನು ಒತ್ತುವರಿ ಮಾಡಿಕೊಂಡಿದ್ದನು. ಯಾವುದೇ ವ್ಯವಸ್ಥೆಯ ಅಡಿಯಲ್ಲಿ ದೇವಯ್ಯ ಹೋರಾಟಕ್ಕೆ ನಿಂತರು ಆ ವ್ಯವಸ್ಥೆಯನ್ನೇ ಕಾಳಿಂಗಯ್ಯ ಕೊಂಡುಕೊಳ್ಳುತ್ತಿದ್ದ. ಕೊನೆಗೂ ಯಾವ ಕೋರ್ಟ್ ಗಳು ಸಹ ದೇವಯ್ಯನಿಗೆ ನ್ಯಾಯ ನೀಡಿರಲಿಲ್ಲ.ಅದೇ ನೋವಿನಲ್ಲಿ ದೇವಯ್ತ ಹಾಸಿಗೆ ಹಿಡಿದು ಶಾಪ ಹಾಕುತ್ತಾನೆ.ಇಂದಾಲ್ಲ ನಾಳೆ ನನ್ನ ಮಗ ಪ್ರತಿಕಾರ ತೀರಿಸಿಕೊಳ್ಳದೆ ಬಿಡಲಾರನೆಂದು ಹೇಳುತ್ತಾ ಸೋಲುತ್ತಾನೆ. ರಕ್ತಬಲದ ಹಮ್ಮಿನೊಂದಿಗೆ ಬೀಗಿದ ನೈತಿಕತೆಯ ಅದಃಪತನದಲ್ಲಿ ಸಾಗುವ ಕಾಳಿಂಗಯ್ಯ ಮಾತ್ರ ಮೊದಲೆಲ್ಲ ಜಬರ್ದಸ್ತಾಗಿ ಬಾಳಿ, ನೇಗಿಲು ಹೂಡುತ್ತಿದ್ದ ಕಾಳಿಂಗಯ್ಯ ತನ್ನ ಕೊನೆಗಾಲದಲ್ಲಿ ಪಶ್ಚಾತಾಪ ಪಟ್ಟು ಬಲಿಷ್ಠ ದೇವಯ್ಯನ ಮಗನಲ್ಲಿ ಹೇಳಿದರು ಕೂಡ ದೇವಯ್ಯನ ಮಗನಿಗೆ ಅರ್ಥವಾಗುವುದಿಲ್ಲ ಹೀಗೆ ಕಥೆ ಕೊನೆಗೊಳ್ಳುತ್ತದೆ.
ಈ ಕತೆಯಲ್ಲಿ ನಮಗೆ ಕಾಳಿಂಗಯ್ಯನ ನೈತಿಕ ಪ್ರಜ್ಞೆ ಹಾಗೂ ಲಾಯರ್ ಹೆಂಡತಿಯ ನೈತಿಕತೆಯ ಕುರುಹುಗಳು ತಾಕಲಾಟಕ್ಕೆ ಬೀಳುತ್ತವೆ. ಕಾನೂನು ದೇವಯ್ಯನ ಪಾಲಿಗೆ ವರ ನೀಡದೆ ದುಡ್ಡು ನೀಡಿದ ಕಾಳಿಂಗಯ್ಯನ ಪಾಲಿಗೆ ವರ ನೀಡುತ್ತದೆ. ಆದರೆ ಕಾಳಿಂಗಯ್ಯನ ಕೊನೆಗಾಲದಲ್ಲಿ ತಾನು ನೀಡಿದ ಆ ಐದು ರೂಪಾಯಿ ಕೂಡ ಅಣಕಿಸಿದಂತೆ ಭಾಸವಾಗುವುದು.ಮತ್ತು ಆ ಐದು ರೂಪಾಯಿಯನ್ನು ಕಳೆದು ಕೊಂಡೆನಲ್ಲ ಎಂದು ಪರಿತಪಿಸುವುದು ಆತನ ಮನಸ್ಸಿನ ವಿಚಿತ್ರ್ಯತೆಗೆ ಕನ್ನಡಿಯಂಬಂತೆ ತೋರುವುದು. ಈ ನಾಲ್ಕು ಮೊಳ ಭೂಮಿ ಕಥೆಯೊಳಗೆ ಇನ್ನೊಂದು ಕಥಾ ತಂತ್ರವನ್ನು ಬಳಸಿಕೊಂಡು, ಕಥೆಗಾರರು ಒಮ್ಮೆಲೇ ನಗರದ ಚಿತ್ರಣವನ್ನು, ಮಗದೊಮ್ಮೆ ಹಳ್ಳಿಯ ಚಿತ್ರಣವನ್ನು ಒಟ್ಟಿಗೆ ತಂದಿದ್ದಾರೆ.ಇದರ ಕಥಾತಂತ್ರ ಅಮೋಘವಾದುದ್ದೆ. ಅದರ ಜೊತೆಗೆ ತಮ್ಮ ಕಸುಬು ಆದ ಲಾಯರ್ ಗಿರಿಯ ವ್ಯಾಜ್ಯಗಳು, ನೈತಿಕತೆಯ ಚಿತ್ರಣಗಳು, ಪಾಪ ಪ್ರಜ್ಞೆಯ ಚಿಂತನೆಗಳು, ಇವೆಲ್ಲದರ ಕುಲುಕಾಟದಲ್ಲಿ ಇರುವ ಲಾಯರ್ ತನ್ನ ಹೆಂಡತಿ ಒಳ್ಳೆಯ ಕಥೆಗಾರತಿ ಎಂಬ ಅಭಿಪ್ರಾಯಗಳು ಒಮ್ಮೆಲೇ ತಲೆಕೆಳಗಾಗಿ ಲಾಯರ್ ವ್ಯಾಜ್ಯದ ನೈತಿಕ ಪ್ರಜ್ಞೆಯನ್ನೇ ಪ್ರಶ್ನೆ ಮಾಡಿದಂತೆ ಅನಿಸುವುದು. ಯಾಕೆಂದರೆ ಲಾಯರ್ ನ ಹೆಂಡತಿ ಲಲಿತ ಆಕೆ ಬರೆದಿಟ್ಟಿದ್ದ ಕಥೆಯ ಕೆಳಗೆ “ಸಂಜೀವ” ಎಂಬ ಹೆಸರಿತ್ತು. ಸಂಜೀವ ನನ್ನ ಮಾವನ ಮಗ ಎಂದು ಹೇಳಿದ ನೆನಪು ಲಾಯರ್ ಗೆ. ಅದನ್ನು ನೆನಪಿಸಿಕೊಂಡಾಗ ಸಂಜೀವ ಆಕೆಯ ಮಾವ. ಆ ಹೆಸರನ್ನು ಹೊಡೆದು ಹಾಕಿ ಆ ಜಾಗದಲ್ಲಿ ಲಲಿತ ಎಂದು ಹಾಕಿಕೊಂಡಿದ್ದಾಳೆ. ತನ್ನ ಹೆಸರಲ್ಲಿ ಕಥೆಯನ್ನು ಪ್ರಕಟಿಸುತ್ತಿದ್ದಾಳೆ ಎಂಬ ಸಂಶಯ ಮೂಡಿದಾಗ ಕಾಳಿಂಗಯ್ಯನ ಪಾಪಪ್ರಜ್ಞೆಗೂ, ಲಲಿತಳ ಪ್ರಜ್ಞಾಹೀನತೆಗೂ ವ್ಯತ್ಯಾಸವನ್ನು ಕಂಡುಹಿಡಿಯದಾದ ಲಾಯರ್. ವ್ಯವಸ್ಥೆಯನ್ನು ತನ್ನ ಕಪಿಮುಷ್ಟಿಗೆ ಬಳಸಿಕೊಂಡ ಕಾಳಿಂಗಯ್ಯ ಸಾಯುವ ಕೊನೆಯಲ್ಲಾದರೂ ಪಶ್ಚಾತಾಪದ ಪಾಪಪ್ರಜ್ಞೆಯಲ್ಲಿ ಬೆಂದನು. ಆದರೆ ಲಲಿತ ಯಾರದೋ ಕಥೆಗೆ ತನ್ನ ಹೆಸರನ್ನು ಬಳಸಿಕೊಂಡು ಪ್ರಕಟಗೊಳಿಸುತ್ತಿರುವಾಗ ಅವಳಲ್ಲಿ ಯಾವ ತೆರನಾದ ಪಾಪಪ್ರಜ್ಞೆಯು ಕಾಣದಿರುವುದನ್ನು ಕಂಡಾಗ ಮನಸು ದಿಗಿಲಾಗುವುದು. ನಗರದ ಲಾಯರ್ ನ ಹೆಂಡತಿಗೆ ಇಲ್ಲದಿರುವ ನೈತಿಕಪ್ರಜ್ಞೆ, ಹಳ್ಳಿಯ ಕಾಳಿಂಗಯ್ಯ ಕೊನೆಗೆ ಉಂಟಾಗುವ ಪಾಪಪ್ರಜ್ಞೆಯು, ನಗರ ಮತ್ತು ಹಳ್ಳಿಯ ವೈದೃಶ್ಯವನ್ನು ಕಾಳಿಂಗಯ್ಯ ಮತ್ತು ಲಲಿತ ಎರಡು ಪಾತ್ರಗಳ ಮೂಲಕ ಕವಿ ಕಟ್ಟಿಕೊಟ್ಟಿದ್ದಾರೆ. ಈ ಕಥೆಯ ಬಹುದೊಡ್ಡ ವ್ಯಂಗ್ಯ ಎಂದರೆ ತನ್ನ ಹೆಂಡತಿ ಕಥೆ ಬರೆಯುತ್ತಿದ್ದಾಳೆ, ಅದರಲ್ಲೂ ಬಹುಮಾನ ಗಿಟ್ಟಿಸಿಕೊಳ್ಳುವಷ್ಟು ಹಣ ಪಡೆದಿರುವುದು ವ್ಯಂಗ್ಯ. ಇದೆ ಈ ಕತೆಯ ಕೇಂದ್ರದ ಜೀವಾಳ.
ಸಂಜೀವನ ಹೆಸರಿನ ಬಲದಿಂದ ತಾನು ಗಳಿಸಿಕೊಂಡ ಯಶಸ್ಸು ಕೀರ್ತಿ ಬಗ್ಗೆ ಕಿಂಚಿತ್ ಪಾಪಪ್ರಜ್ಞೆ ಇಲ್ಲದಿರುವುದು, ಆದರೆ ಕಾಳಿಂಗಯ್ಯ ಕೊನೆ ಪಕ್ಷ ಕೊನೆಗಾಲದಲ್ಲಿ ಆದರೂ ಪಚ್ಚಾತಾಪದ ಬೇಗೆಯಲ್ಲಿ ಬೆಂದು ಸಾವನಪ್ಪಿದನು. ದೇವಯ್ಯನ ನಾಲ್ಕು ಮೊಳ ಭೂಮಿಯನ್ನು ಕಾಳಿಂಗಯ್ಯ ಒತ್ತುವರಿ ಮಾಡಿಕೊಂಡಿರೆ, ಲಾಯರ್ ನ ಹೆಂಡತಿ ತನ್ನ ಮಾವ ಬರೆದಿಟ್ಟ ನಾಲ್ಕು ಮೊಳ ಭೂಮಿ ಎಂಬ ಕಥೆಯನ್ನು ಒತ್ತುವರಿ ಮಾಡಿಕೊಂಡು ತನ್ನ ಹೆಸರಿನಲ್ಲಿ ಇರಿಸಿಕೊಂಡು ಬೀಗುತಿದ್ದಾಳೆ. ಸದಾ ವ್ಯಾಜ್ಯ, ಭೂಮಿಯ, ಹುಚ್ಚು ಮುಕ್ತಾಯವೇ ಇಲ್ಲದ ವ್ಯವಹಾರಗಳಲ್ಲಿ ಜೋಕಾಲಿ ಆಡುವ ಈ ಬದುಕು ಸೊಗಸಿಲ್ಲದ ಮನಸ್ಸಿಗೆ ಮಾವನ ಹೆಸರನ್ನು ತೆಗೆದು ತನ್ನ ಹೆಸರನ್ನು ಇರಿಸಿ, ಪ್ರಕಟಿಸುವ ಹೆಂಡತಿ ಲಲಿತಾಳ ಮನಸ್ಥಿತಿಗೆ ಲಾಯರ್ ಎಂದು ಮುಗಿಯದ ನೈತಿಕತೆಯ ಪಾಪ ಪ್ರಜ್ಞೆಯ ಅರಿವಿರದ ವ್ಯಾಜ್ಯಕ್ಕೆ ಲಲಿತಾಳಂತವರ ಚಿಂತನೆಗಳು ಈ ಕಥೆಯ ಧ್ವನಿಯಾಗಿದೆ. ಅರ್ಥಾತ್ ವ್ಯಾಜ್ಯಗಳಿಗೆ ಮುಕ್ತಾಯವೇ ಇಲ್ಲವೇ ಎಂದು ಪರಿತಪಿಸಿ ಗೋಳಾಡುವ ಲಾಯರ್ಗೆ ನಾಲ್ಕು ಮಳ ಭೂಮಿ ಕಥೆಯನ್ನು ಓದಿ ಕೊನೆಗಾಣಿಸಿದಾಗ ಅಪರಾಧದ ನೆಲೆಗೆ ಉತ್ತರ ದಕ್ಕಿದರು ಕೊನೆಯಲ್ಲಿ ಕಂಡ ಸಂಜೀವನ ಹೆಸರಿನ ಜಾಗದಲ್ಲಿ ಲಲಿತಳ ಹೆಸರು ರಾರಾಜಿಸಿದು, ಮತ್ತದೇ ತಾಕಲಾಟಕ್ಕೆ ಕೊನೆಯಿಲ್ಲದ ನೈತಿಕ ಪ್ರಜ್ಞೆಯ ನೆಲೆಗಳು ಸೂಚಿತವಾಗುತ್ತವೆ. ಇದನ್ನೇ ಕವಿ ನಮಗೆ ಹೇಳಲು ಪ್ರಯತ್ನಿಸಿದ ರೀತಿ. ಒಂದು ವ್ಯವಸ್ಥೆಯ ಮೇಲೆ ಬಲಿಷ್ಠ ಕೈಗಳು ತನ್ನ ಹಸ್ತವನ್ನು ಚಾಚಿ ಲಾಯರ್ ಒಳಗಿನ ಮೊದಲಿನ ಗೊಂದಲಕ್ಕೆ ಉದ್ಧಿಪನ ಶಕ್ತಿಯಾಗಿ ಪೂರಕ ಅರ್ಥನಿರ್ವಹಿಸಿದಂತೆ ತೋರುವುದು. ಲಲಿತಳೇ ಕಥೆಗಾರಳು ಎಂಬ ವರ್ತನೆಯಲ್ಲಿ ಕಥೆ ತೆರೆದುಕೊಂಡಿದ್ದು, ಲಾಯರ್ ನ ಕಡತಗಳಲ್ಲಿ ಎಂದೂ ಮುಗಿಯದ ಕಥೆಗೆ ನಿಜವಾದ ಉತ್ತರ ಮಾತ್ರ ಮುಗಿಯಲಾರದ ಸಂದೇಶ ಎಂಬುದನ್ನು ಸಾಮಾಜಿಕ ವ್ಯವಸ್ಥೆಯ ಅಡಿಯಲ್ಲಿ ನಮಗೆ ಒಂದು ಕೇಂದ್ರಪ್ರಜ್ಞೆಯನ್ನು ಕಟ್ಟಿಕೊಡುವಲ್ಲಿ ಕಥೆ ಗೆಲ್ಲುತ್ತದೆ. ಕಥೆಯ ಪ್ರಾರಂಭವೂ ಹಾಗೂ ಅಂತ್ಯವು ಒಂದಕ್ಕೊಂದು ಪೂರಕ ಅಂಶಕ್ಕೆ ಹೊಂದಿಕೊಂಡಂತೆ ಕಥೆಯ ಪ್ರಾರಂಭದ ಉತ್ತರಕ್ಕೆ ಕತೆಯ ಅಂತ್ಯ ಉತ್ತರವಾಗಿ ಲಾಯರಿಗೆ ಕಾಣುವುದು ಈ ಕಥೆಯ ವೈದೃಶ ಸಂಗತಿಯನ್ನು ವಿವೇಚಿಸಿದ ರೀತಿ.
ಈ ಕಥೆ ನಮ್ಮ ಸಮಾಜದ ವ್ಯವಸ್ಥೆ ಬಲಿಷ್ಠತೆಯ ಕರಾಳತೆಯನ್ನು ಹಾಗೂ ತುಳಿಯುವ ಕಾಲಿಗೆ ಸಿಕ್ಕರೆ ಎಂತಹದು ಕೂಡ ನಾಶವಾಗುವಿಕೆಯ ಚಿತ್ರಣವನ್ನು ತೆರೆದಿಡುತ್ತದೆ. ಒಂದು ಅಂತ್ಯ ಇನ್ನೊಂದರ ಆರಂಭ, ಎಂಬುದು ದೇವಯ್ಯನ ಮಗನ ವಜ್ರಕಾಯ ದೇಹವ ಕಂಡು ಹೆದರಿದ ಕಾಳಿಂಗಯ್ಯನ ಮನಸ್ಥಿತಿಯೇ ಈ ಕಥಾ ಪಾತ್ರದ ಒಳನೋಟವಾಗಿದೆ. ಓದುಗರಿಗೆ ಅಂತ್ಯಕ್ಕೊಂದು ಆರಂಭವಿದೆ ಎಂಬ ಸ್ಪಷ್ಟ ನಿದರ್ಶನವನ್ನು ತೆರೆದಿಡುತ್ತದೆ ಈ ಕಥೆಯ ನಗರ ಜೀವನಕ್ಕೂ ಹಳ್ಳಿಜೀವನದ ಸಾದೃಶ್ಯವನ್ನು ಕತೆ ಕಂಡುಕೊಳ್ಳುವುದು. ಹಳ್ಳಿಯರ ಮನಸ್ಥಿತಿ, ನಗರದವರ ಮನಸ್ಥಿತಿಯ ರೂಪುರೇಷೆಗಳ ಭಿನ್ನ ನೆಲೆಯನ್ನು ಕಂಡುಕೊಳ್ಳುವಿಕೆ. ಹೀಗೆ ತಂತ್ರದೊಳಗೊಂದು ತಂತ್ರ ಬಳಸಿ ಕಥೆಯ ಸಂವಿಧಾನವನ್ನು ವಿಶೇಷವಾಗಿ ನಿರ್ಮಿಸಿರುವುದು ಕಾಣಬಹುದು.
ಈ ಹಿನ್ನೆಲೆಯಲ್ಲಿ ಈ ಕತೆಯನ್ನು ಗಮನಿಸಿದಾಗ “ಚದುರಂಗ ಅವರು ಕತೆಯೊಳಗಿನ ಕತೆಯಷ್ಟನ್ನೇ ನೋಡಿದರೆ ನವೋದಯ,ಆದರೆ ಮುಖ್ಯ ಕಥೆ ತಂದು ನಿಲ್ಲಿಸುವ ಅನುಭವವು ಪ್ರಗತಿಶೀಲ ಧೊರಣೆಯಂತೆ ಕಂಡರೂ ಎಲ್ಲ ಪ್ರಗತಿಶೀಲರಂತೆ ರೊಚ್ಚು ಅಬ್ಬರ ಇವರ ಬರಹದಲ್ಲಿ ಕಾಣುವುದಿಲ್ಲ”.(ಜಿ.ಹೆಚ್. ನಾಯಕ್) ಧನ್ಯತೆಯ ಬದುಕುನ್ನು ಬಾಳಿದ ಚದುರಂಗರು ಇನ್ನೊಬ್ಬರ ಬಾಳಲ್ಲಿ ಅವರ ಮುಖದಲ್ಲಿ ನಗುವನ್ನು ತರಿಸಿ ಧನ್ಯತೆಯ ಭಾವವನ್ನು ಹೊಂದುವಂತಹ ಜೀವನಕ್ರಮ ಅವರದು.ಇಂತಹ ಮಹಾನ್ ಚೇತನ ನಮ್ಮ ಕನ್ನಡ ಸಾಹಿತ್ಯ ಲೋಕಕ್ಕೆ ಒಂದು ಮೈಲುಗಲ್ಲಾಗಿ ದಿಕ್ಸೂಚಿಯಾಗಿ ನಿಲ್ಲುವರು.
- ವಾಣಿ ಭಂಡಾರಿ
ಈ ಅಂಕಣದ ಹಿಂದಿನ ಬರಹಗಳು:
ಯಾರು ಹಿತವರು ನಿನಗೆ ಕಥೆಯೊಳಗಿನ ಕಾಮ
ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ
ಯಾರು ಅರಿಯದ ವೀರನ ತ್ಯಾಗ
ಮಾಸ್ತಿಯವರ ಮೊಸರಿನ ಮಂಗಮ್ಮ
ಕಮಲಾಪುರದ ಹೊಟ್ಲಿನೊಳಗೊಂದು ಸುತ್ತು
ಧರ್ಮಕೊಂಡದಲ್ಲಿ ಪ್ರಭುತ್ವದ ನೆಲೆ
ಸೆರೆಯೊಳಗೆ ಪ್ರಕೃತಿ ಧರ್ಮದ ಭವ್ಯತೆ
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
©2024 Book Brahma Private Limited.