ನಳ ಚರಿತ್ರೆ : ಪ್ರೇಮದ ಅವಿಷ್ಕಾರ 

Date: 23-05-2024

Location: ಬೆಂಗಳೂರು


"ಭವದ ಕೇಡುಗಳನ್ನು ಭಗ್ನಗೊಳಿಸುವುದು ದೈವಿಕವಾದ ಪ್ರೇಮ. ಕಾಮದ ಕೊಂಡಗಳನ್ನು ಹಾಯ್ದು ಬಂದಾಗಲೇ ಪ್ರೇಮಕ್ಕೊಂದು ಭಕ್ತಿಯ ಸ್ವರೂಪ ದಕ್ಕುವುದು. ʻಮೋಹನ ತರಂಗಿಣಿʼ, ʻನಳಚರಿತ್ರೆʼಯ ಶೃಂಗಾರ ರಸ ವರ್ಣನೆಗಳನ್ನು ಈ ನೆಲೆಯಲ್ಲಿ ಗಮನಿಸಬೇಕು," ಎನ್ನುತ್ತಾರೆ ಎನ್ನುತ್ತಾರೆ ಹಳೆಮನೆ ರಾಜಶೇಖರ. ಅವರು ತಮ್ಮ ‘ಓದಿನ ಹಂಗು’ ಅಂಕಣದಲ್ಲಿ ಕನಕದಾಸರ ‘ನಳ ಚರಿತ್ರೆ' ಕುರಿತು ಬರೆದಿದ್ದಾರೆ.

ಮಹಾಕವಿ ಸಂತ ಕನಕದಾಸರು ದಾಸ ಪರಂಪರೆಯಲ್ಲಿ ವಿಭಿನ್ನರೂ, ಸೂಕ್ಷ್ಮಜ್ಞರೂ, ಕಾವ್ಯ ಸತ್ವದಲ್ಲಿ ನಂಬಿಯುಳ್ಳವರು ಆಗಿದ್ದಾರೆ. ಅವರ ಕೀರ್ತನೆಗಳಲ್ಲಿ ಸಾಮಾಜಿಕ ದಂದುಗ, ಬಿಕ್ಕಟ್ಟು, ಸಂಘರ್ಷಗಳ ಜೊತೆಗೆ ಭಕ್ತಿಯ ಆರ್ದ್ರತೆಯ ಪರಾಕಾಷ್ಠೆಯನ್ನು ಕಾಣುತ್ತೇವೆ. ಭಕ್ತಿಯ ಸಂವೇದನೆಯನ್ನು ಸಾಮಾಜಿಕ ದೈವಿಕ ಸಂವೇದನೆಯನ್ನಾಗಿ ರೂಪಿಸುವ ಚಿಂತನೆ ಅವರದು. ಅಂತರಂಗದ ಪರಿಶುದ್ಧತೆ, ದೈವಿಕ ನೆಲೆಯ ಭಕ್ತಿ, ಲೌಕಿಕವನ್ನು ಬೆಳಗುವ ದೀವಿಗೆಯಾಗಿ ಕನಕದಾಸರಿಗೆ ಕಂಡಿದೆ. ಹೀಗಾಗಿ ಭಕ್ತಿಯ ಆಂದೋಲನದ ಪರಂಪರೆಯಲ್ಲಿ ಕೀರ್ತನೆಗಳ ಸೃಷ್ಟಿಯ ಜೊತೆಗೆ, ಕಾವ್ಯ ಸೃಷ್ಟಿಯ ಸತ್ವದ ದಾರಿಯನ್ನು ಕನಕದಾಸರು ತುಳಿದರು.

ಕಾವ್ಯದ ಕಡುಮೋಹಿಯಾದ ಕನಕದಾಸರು ಶುದ್ಧಾಂಗ ವರ್ಣನಾತ್ಮಕ ಕವಿ. ವಸ್ತುಕ ಮತ್ತು ವರ್ಣುಕವನ್ನು ಕಾವ್ಯ ಬಂಧದಲ್ಲಿ ಸಂಯೋಗಗೊಳಿಸಿದವರು. ಮನುಷ್ಯನ ಸಹಜವಾದ ಪ್ರೇಮ, ಕಾಮ, ಮೋಹ, ವಿರಹದ ಸಂಬಂಧಗಳನ್ನು ಮನೋಜ್ಞವಾಗಿ ಕಾವ್ಯದಲ್ಲಿ ತುಂಬಿದವರು. ಪ್ರಕೃತಿ-ಮನುಷ್ಯ-ದೈವಿಕ ವಿನ್ಯಾಸವನ್ನು ಶೃಂಗಾರದ ನೆಲೆಯಲ್ಲಿ ಕಾವ್ಯ ಕಟ್ಟಿದವರು. ಭವ ಮತ್ತು ಭಕ್ತಿಯನ್ನು ಅಭೇದಗೊಳಿಸಿ ಬದುಕಿನ ಸಾಮಾಜಿಕ ಸಂಕೀರ್ಣತೆ, ಲೌಕಿಕ-ಅಲೌಕಿಕ ಕೇಡು ಮತ್ತು ದ್ವಂದ್ವಗಳನ್ನು ಶೋಧಿಸುವುದು ಕನಕದಾಸರಿಗೆ ಮುಖ್ಯ.

ಭವದ ಕೇಡುಗಳನ್ನು ಭಗ್ನಗೊಳಿಸುವುದು ದೈವಿಕವಾದ ಪ್ರೇಮ. ಕಾಮದ ಕೊಂಡಗಳನ್ನು ಹಾಯ್ದು ಬಂದಾಗಲೇ ಪ್ರೇಮಕ್ಕೊಂದು ಭಕ್ತಿಯ ಸ್ವರೂಪ ದಕ್ಕುವುದು. ʻಮೋಹನ ತರಂಗಿಣಿʼ, ʻನಳಚರಿತೆʼಯ ಶೃಂಗಾರ ರಸ ವರ್ಣನೆಗಳನ್ನು ಈ ನೆಲೆಯಲ್ಲಿ ಗಮನಿಸಬೇಕು. ಆದ್ದರಿಂದ ಅವರ ಕಾವ್ಯಗಳಲ್ಲಿ ಭಕ್ತಿಯ ಸಾಮಾಜಿಕ ತರತಮ್ಯದ, ಕಾಮ, ಪ್ರೇಮದ ಕೇಡಿನ ʻಅಹಂʼ ನಿರಸನಗೊಳ್ಳದೆ ಬದುಕಿನ ನಿಜತ್ವ ದಕ್ಕುವದಿಲ್ಲ ಎಂಬ ನಿಲುವನ್ನು ಕಾಣುತ್ತೇವೆ. ʻರಾಮ ಧಾನ್ಯ ಚರಿತೆʼ ಸಾಮಾಜಿಕ ಅಂಹಕಾರ, ʻಮೋಹನ ತರಂಗಿಣಿʼ ಶೃಂಗಾರದ ಅಹಂಕಾರ, ʻನಳ ಚರಿತೆʼ ಕೇಡಿನ ಅಹಂಕಾರ, ಹರಿಭಕ್ತಸಾರ ಭಕ್ತಿಯ ಅಂಕಾರವನ್ನು ನಿರಸನಗೊಳಿಸುವ ತಾತ್ವಿಕತೆಯನ್ನು ಹೊಂದಿವೆ. ಈ ನಿರಸನದಲ್ಲಿಯೇ ಸಾಮಾಜಿಕ ದೈವಿಕ ಬೆಳಗು ಇದೆ. ಈ ಬೆಳಗಿನಲ್ಲಿ ಲೌಕಿಕ ಅಲೌಕಿಕ ಸತ್ಯಗಳ ಬೆಸೆಯುವಿಕೆಯನ್ನು ಕಾಣುತ್ತೇವೆ. ಈ ಹಿನ್ನಲೆಯಲ್ಲಿ ʻನಳ ಚರಿತೆʼ ಕಾವ್ಯವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.

ಭಾರತೀಯ ಕಾವ್ಯ ಪರಂಪರೆಯನ್ನು ಆಳವಾಗಿ ಅಧ್ಯಯನ ಮಾಡಿದ್ದ ಕನಕದಾಸರು ಆ ಪರಂಪರೆಯನ್ನು ಸಮರ್ಥವಾಗಿ ಕಾವ್ಯ ರಚನೆಯ ಮೂಲಕ ಮುಂದುವರಿಸಿದರು. ಅವರ ʻನಳ ಚರಿತ್ರೆʼ ಕಾವ್ಯದ ಮೇಲೆ ಭರತೀಯ ಕಾವ್ಯ ಪರಂಪರೆಯ ದಟ್ಟವಾದ ಪ್ರಭಾವ ಇದೆ. ವ್ಯಾಸರ ಮಹಭಾರತ ಎಲ್ಲಾ ಕಾಲದ ಕವಿಗಳಿಗೆ ಕಾವ್ಯ ದೀವಿಗೆ. ವ್ಯಾಸ ಪ್ರತಿಭೆಯ ಬೆಳಕಿನಲ್ಲಿ ಕವಿಗಳು ಸೃಜನಶೀಲತೆಯನ್ನು ಪುಟಗೊಳಿಸಿಕೊಂಡಿದ್ದಾರೆ. ಅದಕ್ಕೆ ಕನಕದಾಸರು ಹೊರತಲ್ಲ. ಮಹಾಭಾರತದ ನಳೋಪಖ್ಯಾನವೇ ನಳ ಚರಿತ್ರೆಗೆ ಮೂಲ. ಆದರೂ ಕನಕದಾಸರು ತ್ರಿವಿಕ್ರಮ ಭಟ್ಟನ ʻನಲ ಚಂಪುʼ. ಕನ್ನಡ ಚೌಂಡರಸನ ಚಂಪೂಕಾವ್ಯ ʻನಳ ಚರಿತ್ರೆʼಯನ್ನು ಅರಗಿಸಿಕೊಂಡು, ತಮ್ಮದೇ ವಿಶಿಷ್ಟವಾದ ಶೈಲಿಯಲ್ಲಿ ʻನಳ ಚರಿತ್ರೆʼಯನ್ನು ಸೃಜಿಸಿದ್ದಾರೆ.

ಕನಕನ ನಳ ಚರಿತ್ರೆಯಲ್ಲಿ 481 ಭಾಮಿನಿ ಷಟ್ಪದಿಗಳಿವೆ. ಇದೊಂದು ಖಂಡಕಾವ್ಯ. ಈ ಕಾವ್ಯದಲಲ್ಲಿ ಮೂರು ಅಂಶಗಳನ್ನು ಮುಖ್ಯವಾಗಿ ಗುರುತಿಸಬಹುದು.

1. ವಿಧಿಯ ಕೇಡಿನೊಂದಿಗೆ ಮುಖಾಮುಖಿಯಾಗುವುದು
2. ಪ್ರೇಮದ ಔನತ್ಯವನ್ನು ಅನ್ವೇಷಿಸುವುದು
3. ದಾಂಪತ್ಯದ ನೈತಿಕ ನಿಷ್ಠೆಯನ್ನು ಪ್ರತಿಪಾದಿಸುವುದು

ಧರ್ಮರಾಯ ಜೂಜಿನಲ್ಲಿ ಸರ್ವವನ್ನು ಕಳೆದುಕೊಂಡು ಕಾಡಿನಲ್ಲಿ ಅಲೆಯುತ್ತಿರುವಾಗ ಆತನ ದುಃಖವನ್ನು ಶಮನ ಮಾಡಲು ರೋಮೇಶ ಮುನಿಗಳು ನಳನ ಚರಿತ್ರೆಯನ್ನು ಹೇಳುತ್ತಾರೆ. ಕನ್ನಡ ಕಾವ್ಯ ಪರಂಪರೆಯಲ್ಲಿ ಕಾವ್ಯದ ಒಳಗಡನೆ ಒಂದು ಕೇಳುವ ವರ್ಗವನ್ನು ಸೃಷ್ಡಿಸಿಕೊಳ್ಳುವುದು ವಿಶೇಷ ಅಂಶ. ಈ ಕಾವ್ಯದಲ್ಲಿ ಧರ್ಮರಾಯ ಕೇಳುಗನಾದರೆ ರೋಮೇಶ ಮುನಿಗಳು ಕಥೆಯನ್ನು ಹೇಳುವವರಾಗುತ್ತಾರೆ.

ನಿಷಧ ಮಹಾನಗರದ ನಳ ಮಹಾರಾಜ ವಿದರ್ಭ ನಗರದ ದಮಯಂತಿಯರ ನಡುವಿನ ಪ್ರೇಮ, ದಾಂಪತ್ಯದ ಚಲುವಿಕೆಯನ್ನು ಕಾವ್ಯ ಬಿಂಬಿಸುತ್ತದೆ. ನಳ ದಮಯಂತಿಯರ ದಾಂಪತ್ಯ ಸೌಂದರ್ಯ ಪ್ರಕೃತಿಯ ಸೌಂದರ್ಯ ಕಾವ್ಯದಲ್ಲಿ ಬೆಸೆದು ಅಂತಃಸತ್ವವನ್ನು ಹೆಚ್ಚಿಸಿದೆ.

ರಾಜತ್ವ, ಪ್ರಕೃತಿ, ವ್ಯಕ್ತಿ ಸೌಂದರ್ಯವನ್ನು ಕವಿ ಮನಕರಿಗಿ ಒಂದಾಗುವಂತೆ ವರ್ಣಿಸುತ್ತಾನೆ. ದಮಯಂತಿಯ ಚಿತ್ರವನ್ನು ಕಟ್ಟಿಕೊಡುವಲ್ಲಿಯೇ ಕಾವ್ಯ ರೂಪಕಗಳು ಮೈ ಪಡೆಯುತ್ತವೆ. ʻಗುಂಗುರು ಗೂದಲಿನ, ಹವಳದ ತುಟಿಯ, ಸುಂದರ ತೋಳುಗಳ, ಶಂಖದಂತಹ ಕಂಠದ, ಚಂಚಲ ನಯನಗಳ, ಸಂಪಿಗೆ ಮೂಗಿನ, ಬಾಲಚಂದ್ರನಂತಹ ಹಣೆಯ, ಸಿಂಹದ ಸೊಂಟದಂತಹ ಹಿಡಿ ನಡುವಿನ, ಹಂಸಗಮನದ, ಹೊರವಾದ ಕುಚಗಳ, ಚಿಗುರಿನಂತಹ ಕೈಗಳ, ಕಮಲದಂತಹ ಮುಖದ ದಮಯಂತಿʼ ಎಂದು ವರ್ಣಿಸುತ್ತಾನೆ.

ದಮಯಂತಿಯ ಸ್ನಿಗ್ಧ ಸೌಂದರ್ಯದ ಬಗ್ಗೆ ಕೇಳಿದ ನಳ ಮಹಾರಾಜ ಆಕೆಯನ್ನು ನೋಡುವ ಕಾತುಕ್ಕೀಡಾಗಿ ವಿರಹದಲ್ಲಿ ಬೇಯುತ್ತಾನೆ. ದಮಯಂತಿಯನ್ನು ಕಾಣುವ ಬಯಕೆ ತೀವ್ರವಾಗಿ ಕುದರೆಯೇರಿ ಕಾಡನ್ನು ಹೊಕ್ಕು, ಪ್ರಾಣಿಗಳನ್ನು ಭೇಟೆಯಾಡಿ ತಣಿಯುತ್ತಾನೆ. ಆದರೂ ಮನದ ವಿರಹ ಕರಗುವದಿಲ್ಲ. ಮತ್ತಷ್ಟೂ ಹೆಚ್ಚಾಗುತ್ತದೆ. ವಿರಹದುರಿಯಲ್ಲಿ ಕಾಡು ತಿರುಗುವಾಗ ರಾಜಹಂಸವೊಂದು ಕಾಣುತ್ತದೆ. ಅದರ ಅರುಣ ಕಾಂತಿಗೆ ಸೋತು ಅದು ಅಲ್ಲಾಡದಂತೆ ಗಟ್ಟಿಯಾಗಿ ಹಿಡಿದುಕೊಳ್ಳುತ್ತಾನೆ. ಆ ರಾಜ ಹಂಸ ನುಡಿಯುವ ಮಾತುಗಳು ನೀತಿಯುಕ್ತವಾಗಿವೆ. ʻಅರಸ ಮದಗಜಕ್ಕೆ ನುಸಿ ಸಮ ಜೋಡಿಯೇ? ಬಲಿಷ್ಠರು ಕೈಲಾಗದವರನ್ನು ಕೊಲ್ಲುವುದು ಸಾಧ್ಯವೇ? ದೊಡ್ಡ ದೊಡ್ಡ ಆನೆಗಳನ್ನು ಮುರಿದು ಕೊಲ್ಲುವ ಮೃಗರಾಜ ಸಿಂಹಕ್ಕೆ ನರಿಗಳಿದಿರೆ? ಹುಲು ಹಕ್ಕಿಯಾದ ನಾನು ಅರಿಭಯಂಕರನೆಂದು ಖ್ಯಾತನಾಗಿರುವ ನಿನಗೆ ಸಮ ಜೋಡಿಯೇ? ಅತಿ ಬಲವಂತನಾದ ನೀನು ನನ್ನಂತ ದುರ್ಬಲರನ್ನು ಕೊಲ್ಲುವುದು ತರವಲ್ಲ. ಆ ಕೊಲೆ ರಾಜ ನೀತಿ ಎನಿಸಿಕೊಳ್ಳುವದಿಲ್ಲ. ಸಾಗರವನ್ನೇ ಹೀರುವ ಬಡಬಾಗ್ನಿಗೆ ಒಂದು ಬೊಗಸೆ ಹಾಲು ಔತಣವಾಗುತ್ತದೆಯೇ? ಮಂಜು ಸುರಿದರೆ ಕೆರೆ ತುಂಬುತ್ತದೆಯೇ? ನಿನ್ನ ಹಿಡಿಯಷ್ಟಿರುವ ನನ್ನನ್ನು ಕೊಂದು ತಿಂದರೆ ನಿನ್ನೊಡಲು ತುಂಬಿ ತಣಿಯುತ್ತದೆಯೇ? ಕಂಡವರು ನಿನ್ನ ದುರಾಶೆಯನ್ನು ನೋಡಿ ನಗುವುದಿಲ್ಲವೇ? ನನ್ನ ಮನೆಯಲ್ಲಿರುವ ಮಡದಿ ಮಕ್ಕಳು ನನ್ನನ್ನು ಕಳೆದುಕೊಂಡು ಅನುಭವಿಸುವ ಸಂಕಟವನ್ನು ಕಲ್ಪಿಸಿಕೋ. ಮರವೇರಿದವರನ್ನು, ಹುತ್ತವನ್ನು ಹತ್ತಿದವರನ್ನು, ಯುದ್ದದಲ್ಲಿ ದೀನರಾಗಿ ಪ್ರಾಣ ಭಿಕ್ಷೆ ಬೇಡಿದವರನ್ನು, ಆಯುಧ ಮುರಿದು ಬರಿಗೈಯಾದವರನ್ನು ನೀರಿನೊಳಕ್ಕೆ ಹೊಕ್ಕವರನ್ನು, ಹೆಂಗಸರ ಮೊರೆ ಹೊಕ್ಕವರನ್ನು, ಕೊಲ್ಲುವುದು ರಾಜರಾದವರಿಗೆ ಉಚಿತವೇ? ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನನ್ನನ್ನು ಜೀವ ಸಹಿತ ಬಿಟ್ಟುಬಿಡು.ʼ ಎನ್ನುವ ಹಂಸದ ಮಾತುಗಳು ಮನುಷ್ಯತ್ವವನ್ನು ಸ್ಪರ್ಶಿಸುತ್ತವೆ. ಹಂಸ ಕರುಣೆಯ ರೂಪಕವಾಗಿ ಕಾವ್ಯದಲ್ಲಿ ಬರುತ್ತದೆ. ನಳ ಮತ್ತು ದಮಯಂತಿಯರನ್ನು ಒಂದಾಗಿಸಿ ಪವಿತ್ರ ಪ್ರೇಮವನ್ನು ಕೂಡಿಸುತ್ತದೆ.

ದೇವಲೋಕ ಭೂಲೋಕವನ್ನು ಮುಖಾಮುಖಿಯಾಗಿಸುವ ಪ್ರಸಂಗ ಕಾವ್ಯದಲ್ಲಿ ಬರುತ್ತದೆ. ದಮಯಂತಿಯ ಸ್ವಯಂವರಕ್ಕೆ ಬರುವ ದೇವೇಂದ್ರ ನಳ ಮಹಾರಾಜನಿಗೆ ಭೇಟಿಯಾಗುತ್ತಾನೆ. ನಳನನ್ನು ಇಕ್ಕಟ್ಟಿಗೆ ಸಿಲಿಕಿಸುತ್ತಾನೆ. ದಮಯಂತಿಯನ್ನು ಭೇಟಿಯಾಗಿ ʻತನ್ನನ್ನೇ ಮದುವೆಯಾಗುವಂತೆ ಮನವೊಲಿಸುʼ ಎಂದು ದೇವೇಂದ್ರ ಬೇಡುತ್ತಾನೆ. ದಮಯಂತಿಯನ್ನು ತನ್ನ ಉಸಿರಾಗಿಸಿಕೊಂಡಿದ್ದ ನಳಮಹಾರಾಜ ದೇವಂದ್ರನ್ನೊಡ್ಡುವ ಸತ್ವ ಪರೀಕ್ಷೆಯನ್ನು ಗೆಲ್ಲುತ್ತಾನೆ. ಜನಪದ ಕತೆಗಳಲ್ಲಿಯಂತೆ ರೂಪಾಂತರಗೊಂಡು ನಳನು ದಮಂಯಂತಿಯ ಅರಮನೆಯೊಳಕ್ಕೆ ಬಂದು ಆಕೆಯ ಪ್ರೇಮದ ನೈಜತೆಯನ್ನು ತುಂಬಿಕೊಂಡು ತನ್ನ ನಿಜ ಸ್ವರೂಪವನ್ನು ತೋರಿಸುತ್ತಾನೆ.

ʻನಿಜಪ್ರೇಮʼ ಸತ್ವ ಪರೀಕ್ಷೆಗೆ ಒಳಗಾಗುತ್ತಲೇ ಇರುತ್ತದೆ. ನಳ ದಮಂತಿಯರ ಪ್ರೇಮವೂ ಸ್ವಯಂವರ ಸಂದರ್ಭದಲ್ಲಿ ಕ್ಷೋಭೆಗೆ ಒಳಗಾಗುತ್ತದೆ. ಆಗ ದೈವವೇ ಅವರ ಕೈ ಹಿಡಿಯುತ್ತದೆ. ದೈವ, ವಿಧಿಯನ್ನು ಮನುಷ್ಯರಿಂದ ಮೀರಲು ಸಾದ್ಯವೇ ಎಂಬ ತಾತ್ವಿಕ ಪ್ರಶ್ನೆಯನ್ನು ಕಾವ್ಯ ಮುಂದಿಡುತ್ತದೆ. ಪರೀಕ್ಷೆಗೀಡುಮಾಡಿದ ದೇವಲೋಕವೇ ನಳ ದಮಯಂತಿಯರ ಶುಭ ಲಗ್ನ ಮಾಡಿಸುತ್ತದೆ. ಪವಿತ್ರ ಪ್ರೇಮ ವಿಧಿ ಲಿಖಿತವನ್ನು ಮೀರಿಯೂ ಚಿಗುರೊಡೆಯುತ್ತದೆ.

ಮನುಷ್ಯನ ಜೀವನವೂ ಸುಗಮವಾಗಿ ಚಲಿಸುವದಿಲ್ಲ. ಏನೇನೋ ಅಸಂಭವಗಳು, ವಿಜ್ಞಗಳು, ಸಂಕಟಗಳು, ಬವಣೆಗಳು ಬರುತ್ತಲೇ ಇರುತ್ತವೆ. ಅವುಗಳೊಂದಿಗೆ ಹೋರಾಡಿ ಜಯಸಿ ಜೀವಿಸುವದೆ ಜೀವನ. ಮದುವೆಯಾದ ನಳ ದಮಯಂತಿಯರಿಗೆ ಕಂಟಕನಾಗಿ, ಕೇಡಾಗಿ ಬರುವವನು ಕಲಿಪುರುಷ. ಕಲಿ ಪುರುಷ ಬದುಕಿನ ಹದವನ್ನು ಕೆಡಿಸುವ ವಿಕೃತಿಯ ಸಂಕೇತವಾಗಿ ಕಾವ್ಯದಲ್ಲಿ ಬರುತ್ತಾನೆ.

ಕಲಿ ಪುರುಷ ಕಾಣುವ ನಳನ ರಾಜ್ಯವು ಎಲ್ಲಾ ಕಾಲದ ಆಡಳಿತಗಾರರಿಗೆ ಮಾದರಿಯಾದುದು.ʻನಳನ ರಾಜನ ವನಗಳೆಲ್ಲಾ ಮಲ್ಲಿಗೆಯ ವನಗಳೇ, ಬನಗಳೆಲ್ಲಾ ಸಂಪಿಗೆಯ ಬನಗಳೇ, ಮೆಳೆಗಳೆಲ್ಲಾ ಕೇದಿಗೆ ಮೆಳೆಗಳೆ, ಮರಗಳೆಲ್ಲಾ ರುದ್ರಾಕ್ಷಿ ಮರಗಳೇ, ಹೊಲಗಳಲ್ಲಿ ನಳ ನಳಿಸುವ ಬಿಲ್ವ, ಕಬ್ಬು, ದ್ರಾಕ್ಷಿ, ಬೆಳೆಗಳೆ. ಖರ್ಜುರಾದಿ ವಸ್ತುಗಳಲ್ಲದೆ ಬೇರೆ ನಿರುಪಯುಕ್ತ ಬೇರೆ ವಸ್ತುಗಳೇ ಅಲ್ಲಿ ಇರಲಿಲ್ಲ. ಎತ್ತ ನೋಡೊದರೂ ಯಾವುದಾದರೊಂದು ಉಪಯುಕ್ತ ಬೆಳೆ ಕಾಣುತಿತ್ತು. ಎಲ್ಲರೂ ಸಜ್ಜನರೇ ಆಗಿದ್ದರು. ಬೇಡಿದವರಿಗೆ ಯಾರು ಇಲ್ಲವೆನ್ನುತ್ತಿರಲಿಲ್ಲ. ಇನ್ನೊಬ್ಬರನ್ನು ಹಾಳು ಮಾಡುವ ಶಪಥಗಳನ್ನು ಯಾರು ಮಾಡುತ್ತಿರಲಿಲ್ಲ. ಅವರು ಸತ್ಯ ಸಂಧಕರಾಗಿದ್ದರು. ಸುಳ್ಳು ಅವರ ಬಳಿಗೆ ಸುಳಿಯುತ್ತಲೇ ಇರಲಿಲ್ಲ. ನಿರ್ಮಲ ಮನಸ್ಕರಾಗಿದ್ದರು. ಎಲ್ಲರ ಹಿತಾಕಾಂಕ್ಷಿಗಳಾಗಿದ್ದರು. ಹಾಗಾಗಿ ಎಲ್ಲರೂ ಸ್ನೇಹದಿಂದಿದ್ದರು. ಕ್ರೋಧ, ಮೋಸ, ವಂಚನೆಗಳಿಲ್ಲದ ಸದ್ಧರ್ಮ ಜೀವಿಗಳಾಗಿದ್ದರು. ಸತಿಯರು ಪತಿಯರಿಗೆ ವಂಚಿಸುತ್ತಿರಲಿಲ್ಲ. ಪಾತಿವ್ರತ್ಯ ಅವರ ನಿತ್ಯ ವ್ರತವಾಗಿತ್ತು. ಮಕ್ಕಳು ತಮ್ಮ ತಂದೆ ತಾಯಿಗಳ ಮಾತನ್ನು ಮೀರುತ್ತಿರಲಿಲ್ಲ. ಸದಾಚಾರ ವರ್ಣಾಶ್ರಮ ಧರ್ಮಗಳಿಗೆ ಬದ್ಧರಾಗಿದ್ದರು. ಸದ್ಭುದ್ಧಿಯುಳ್ಳವರಾಗಿದ್ದರು. ನಿತ್ಯ ಜೀವನದಲ್ಲಿ ಹರಿಭಕ್ತಿಭಾವ, ವ್ರತ, ನಿಯಮ, ನಿಷ್ಠೆಗಳನ್ನು ಅಳವಡಿಸಿಕೊಂಡು ಸರ್ವಜನಪ್ರಿಯರಾಗಿದ್ದರು.

ಇಂತಹ ನಳ ಮಹಾರಾಜನ ಆದರ್ಶ ರಾಜ್ಯಕ್ಕೆ ಕೇಡು ಬಗೆಯುವ ದುಷ್ಟತೆಯನ್ನು ಕಲಿ ಪುರುಷ ಮೆರೆಯುತ್ತಾನೆ. ನಳನ ದಾಯಾದಿ ಪುಷ್ಕರನನ್ನು ಭೇಟಿಯಾಗಿ ಆತನ ಮನಸ್ಸಿನಲ್ಲಿ ಹುಳಿ ಹಿಂಡಿ, ಆತನ ಮನಸ್ಸನ್ನು ಕಲುಷಿತಗೊಳಿಸುತ್ತಾನೆ. ರಾಜಾಧಿಕಾರದ ಆಮಿಷ ತುಂಬಿಸಿ, ಜೂಜಾಡುವಂತೆ ಪ್ರೇರೇಪಿಸುತ್ತಾನೆ. ವಂಚನೆಯಿಂದ ನಳ ಮಹಾರಾಜ ಸೋಲುವಂತೆ ಮಾಡುತ್ತಾನೆ. ನಳ ಇಡೀ ಸಾಮ್ರಾಜ್ಯವನ್ನು ಜೂಜಿನಲ್ಲಿ ಸೋತು ಬೀದಿಯ ಬಿಕಾರಿಯಾಗುತ್ತಾನೆ. ಕಲಿ ಪುರುಷನ ಮೋಸದಿಂದ ಮಡದಿ ದಮಯಂತಿಯ ಜೊತೆಗೆ ಕಾಡು ಸೇರುತ್ತಾನೆ. ಕಾಡಿಗೋದ ನಳ ತನಗೆಂತ ಗತಿ ಬಂತು, ಮಡದಿಗೆ ವೃತಾ ತೊಂದರೆ ಕೊಟ್ಟೆ ಎಂದು ಮರಗುತ್ತಾನೆ. ಆಗ ಮಡದಿ ದಮಯಂತಿ ಗಂಡನಿಗೆ ಸಮಾಧಾನ ಮಾಡಿ ಧೈರ್ಯ ತುಂಬುತ್ತಾಳೆ.ʻಶಶಿಕಲಾ ಶಿರೋಮಣಿ ಹೆತ್ತ ತಂದೆ ತಾಯಿಗಳು, ಸತಿ ಸುತರು, ಕುಟುಂಬ, ಕುಟುಂಬದ ಆಸ್ತಿ ಪಾಸ್ತಿಗಳು, ನೆಂಟರಿಷ್ಟರು, ರಾಜರ ರಾಜಭೋಗ ಇವೆಲ್ಲಾ ಸುಖ ಸಾಧನಗಳಾದರೂ ಶಾಶ್ವತವಾದುವುಗಳಲ್ಲ. ಶರೀರ ಸುಖಗಳು ಕೂಡ ಅನಿತ್ಯವೆಂಬ ನಿತ್ಯ ಸತ್ಯವನ್ನು ತಿಳಿದು, ಆಡಿದ ಮಾತಿಗೆ ಬದ್ದನಾಗಿ, ಸತ್ಯಕ್ಕೆ ಚುತಿಯನ್ನುಂಟುಮಾಡದೆ ನನ್ನನ್ನು ಕಾಪಾಡುʼ ಎಂದು ಸೋತು ದಿಕ್ಕೆಟ್ಟ ನಳನ ಚಿಂತೆಯನ್ನು ದೂರ ಮಾಡುತ್ತಾಳೆ.

ಹೆಂಡತಿಯನ್ನು ಕಾಡು ಪಾಲು ಮಾಡಿದೆನಲ್ಲಾ ಎಂಬ ವ್ಯಥೆಯಿಂದ ಕಂಗೆಟ್ಟ ನಳನನ್ನು ದಮಯಂತಿ ಮಮತೆಯ ನೀತಿಯ ಮಾತುಗಳಿಂದ ಸಂತೈಯಿಸುತ್ತಾಳೆ. ʻಅರಸ ನೀನೇಕೆ ಮರುಗುವೆ? ವಿಧಿ ಬರೆದ ಹಣೆ ಬರಹವನ್ನು ತಪ್ಪಿಸಲು ಹರಿಹರ ಬ್ರಹ್ಮಾದಿಗಳಿಗೂ ಸಾಧ್ಯವಿಲ್ಲ. ಅಂಥಾದ್ರಲ್ಲಿ ನಮ್ಮ ಪಾಡೇನು? ಸಂಪತ್ತು ತುಂಬಾ ಚಂಚಲವಾದುದು. ಈ ಕ್ಷಣ ಬಂದು ತುಂಬಿಕೊಳ್ಳುತ್ತದೆ. ಮರುಕ್ಷಣವೇ ಮಾಯವಾಗುತ್ತದೆ. ಎಂದಿಗೂ ಸಿರಿ ಶಾಶ್ವತವಲ್ಲʼ ಎನ್ನುತ್ತಾಳೆ.

ಕಾಲಪುರುಷ ಕಾಡಿಗೆ ಹೋದರೂ ಬೆನ್ನು ಬಿಡದೆ ಹಕ್ಕಿಯಾಗಿ ಬಂದು ನಳನ ಮೈಮೇಲಿನ ಬಟ್ಟೆಯನ್ನು ಅಪಹರಿಸುತ್ತದೆ. ಆದರೂ ದಮಯಂತಿ ದೃತಿಗೆಡದೆ ತನ್ನ ಸೀರೆಯ ಅರ್ಧವನ್ನು ನಳನಿಗೆ ನೀಡಿ ʻಇಂಥ ದುಸ್ಥಿತಿಗೆ ಈಡು ಮಾಡಿದಿರಲ್ಲಾ ಎಂಬ ಅಸಮಧಾನ ನನಗೆ ಎಳ್ಳಷೂ ಇಲ್ಲʼ ಎಂದು ಸಮಧಾನ ಪಡಿಸುತ್ತಾಳೆ. ನಳ ದಮಯಂತಿಯರ ದಾಂಪತ್ಯದ ಅನೋನ್ಯತೆ, ನಿಷ್ಠೆ, ಭಕ್ತಿಪೂರ್ವಕ ಸರ್ಪಣೆಯನ್ನು ಕವಿ ಕರುಳು ಕರಗುವಂತೆ ಚಿತ್ರಿಸಿದ್ದಾನೆ.

ಪತ್ನಿಗೆ ಇಂತ ಹೀನ ಸ್ಥಿತಿ ತಂದೆನಲ್ಲಾ ಎಂಬ ನಳನ ಪಾಪ ಪ್ರಜ್ಞೆಯ ಭಾವನೆ ದಮಯಂತಿಯನ್ನು ಮತ್ತಷ್ಟೂ ದುಃಖಕ್ಕೆ ದೂಡುತ್ತದೆ. ನಳ ದಮಯಂತಿಯನ್ನು ಕಾಡಿನಲ್ಲಿ ಬಿಟ್ಟು ಹೋಗುವ ಪ್ರಸಂಗವಂತೂ ಕಾವ್ಯ ಪ್ರಸಂಗಗಳಲ್ಲಿಯೇ ಔನತ್ಯವಾದುದು. ದಮಯಂತಿಯ ದುಃಖ ಕರುಳನ್ನು ಕಲುಕುತ್ತದೆ. ʻನೃಪತಿ ಮರೆತು ಮಲಗಿದ್ದ ಸತಿಯನ್ನು ನಿಷ್ಕರಣೆಯಿಂದ ದಟ್ಟಕಾಡಿನಲ್ಲಿ ಬಿಟ್ಟುಹೋಗಿಬಿಟ್ಟ, ಅಬಲೆ ಹುಲಿ ಕರಡಿ ಮುಂತಾದ ದುಷ್ಟಮೃಗಗಳ ಉಪಟಳವನ್ನು ಹೇಗೆ ಸಹಿಸಿಕೊಳ್ಳುವಳೋ ಏನೊ ಅವಳನ್ನು ಎಚ್ಚರಿಸಿ ಅವಳ ಮೊರೆಯನ್ನಾಲಿಸಿ ಅವಳಿಗೆ ನೆರವಾಗುತ್ತೇನೆʼ ಎಂದು ಅಕ್ಕರೆಯನ್ನು ಸೂಸುತ್ತ ಬಂದನೊ ಎಂಬಂತೆ ಹೊಂಗಿರಣಗಳನ್ನು ಸೂಸುತ್ತ ಸೂರ್ಯ ಪೂರ್ವದಿಕ್ಕಿನಲ್ಲಿ ಕಾಣಿಸಿಕೊಂಡ. ಹಾಗೆ ಸೂರ್ಯ ಮೂಡಿ ಬೆಳಗಾದಾಗ ನಳಿನಮುಖಿ ನಿದ್ರೆ ತಿಳಿದು ಪಕ್ಕದಲ್ಲಿ ಪತಿಯನ್ನು ಕಾಣದೆ, ಎಡಬಲಕ್ಕೆ ದೃಷ್ಟಿ ಹಾಯಿಸಿ ಹುಡುಕಾಡಿದಳು. ಎಲ್ಲಿಯೂ ಆತನ ಸುಳಿವು ಕಾಣದಿದ್ದಾಗ ಮೂರ್ಛಿತಳಾಗಿ ಬಿದ್ದು ಮೈಮರೆತಳು. ಮರುಕ್ಷಣವೇ ಎಚ್ಚತ್ತು ಕಾತರದಿಂದ ಪತಿಗಾಗಿ ಹಂಬಲಿಸಿ ಹಲುಬಿದಳು. “ಹಾರಮಣ! ನಳನೃಪತಿ! ರಣಧೀರ! ನಿತ್ಯೋದಾರ ನಿರ್ಮಳ ಸತ್ಯಸಂಚಾರ! ನಿನ್ನನ್ನೇ ನಂಬಿದ್ದ ನಾರಿಯನ್ನು ಘೋರಕಾನನದಲ್ಲಿ ಒಂಟಿಯಾಗಿ ಬಿಟ್ಟುಹೋಗಬಹುದೆ? ನನಗಿನ್ನಾರು ಗತಿ? ಎಲ್ಲಿರುವೆ? ಕಾಣಿಸಿಕೊ” ಎಂದು ಗೋಳಿಟ್ಟಳು. ಭೂಮಿಯಲ್ಲಿ ಹುದುಗಲೋ? ಉರಿಗೆ ಹಾಯ್ದು ಅಗ್ನಿಯ ಒಡಲಲ್ಲಿ ಅಡಗಿಲೊ? ಕಾಳಕೂಟದ ಮಡುವಿನಲ್ಲಿ ಮುಳುಗಲೊ? ಹಾಸುಬಂಡೆಯ ಮೇಲೆ ಬೀಳಲೊ? ವಿಷಕುಡಿಯಲೊ? ಘೋರವಿಪತ್ತಿಗೆ ತುತ್ತಾಗಿರುವ ನಾನು ಹೇಗೆ ಪ್ರಾಣಬಿಡಲಿ? ನೀನೇ ನೀನೆ ನಿಶ್ಚಯಿಸಿ ಹೇಳುʼ ಎಂದು ಗೋಳಾಡುತ್ತಾ ಕಾಡಿನಲ್ಲಿ ಅಲೆದಾಡಿದಳು. “ಅರಸಂಚೆಗಳೇ ತರುಲತೆಗಳೇ! ಮೃಗಪಕ್ಷಿಗಳೇ! ಗಿಳಿಕೋಗಿಲೆಗಳೇ! ನನ್ನ ಪತಿ ನಳಚಕ್ರವರ್ತಿಯನ್ನು ಕಂಡಿರಾ?” ಎಂದು ಕಂಡಕಂಡದ್ದನ್ನೆಲ್ಲ ಕೇಳುತ್ತ ಪರಿಪರಿಯಾಗಿ ಪತಿಗಾಗಿ ಹಲುಬಿದಳು. ತಲೆಕೆದರಿಕೊಂಡು ಧೂಳಿನಲ್ಲಿ ಬಿದ್ದು ಹೊರಳಾಡುತ್ತ “ಅಡವಿಪಾಲಾಗೆಂದು ನನ್ನಮ್ಮ ನನ್ನನ್ನು ಹಡೆದಳೆ? ಭೂಲೋಕದ ಮಡದಿಯರಲ್ಲಿ ನನ್ನಂತೆ ಪತಿಯನ್ನು ಕಳೆದುಕೊಂಡು ದುಃಖಕ್ಕೆ ಒಡಲು ತೆತ್ತವರು ಯಾರಿದ್ದಾರೆ? ಪೊಡವಿಪತೀಮುಖದೋರುʼ ಎಂದು ಭೋರೆಂದತ್ತು ಪತಿಗಾಗಿ ಹಂಬಲಿಸಿ ಹಲುಬಿದಳು. ಈ ಪ್ರಸಂಗ ಹೃದಯವನ್ನು ತಲ್ಲಣಗೊಳಿಸುತ್ತದೆ. ಅದಮ್ಯವಾಗಿ ಪ್ರೀತಿಸುತ್ತಿದ್ದ ಪತಿ ಕಾಡಿನಲ್ಲಿ ಕಾಣದಾದಾಗ ವಿಹ್ವಲಗೊಳ್ಳುವ ದಮಯಂತಿಯ ಚಿತ್ರಣ ಅಮೋಘವಾದುದು.

ಆಕೆಯ ಮುಂದಿನ ಕಷ್ಟಕೋಟಲೆಗಳು ಅಂತಃಕರಣವನ್ನು ಕಲುಕುತ್ತವೆ. ವಿಧಿ ವಿಲಾಸದಲ್ಲಿ ನಳ ದಮಯಂತಿ ನೊಂದು ಬೆಂದು ಮುರುಟಿ ಹೋಗುತ್ತಾರೆ. ಆದರೂ ಬದುಕಿನ ಪ್ರೀತಿ, ನಿಷ್ಠೆ, ಅನೋನ್ಯತೆಯನ್ನು ಕಳೆದುಕೊಳ್ಳುವುದಿಲ್ಲ. ವಿಧಿಯನ್ನು ಗೆಲ್ಲುವ ದಾರಿ ಅವರಿಗೆ ಒಂದೆ. ಹರಿಯ ಸ್ಮರಣೆ, ಹರಿಯ ಮೇಲಿನ ಅಚಲ ನಿಷ್ಠೆ ಎಂತ ಕಷ್ಟ ಕೋಟಲೆಗಲನ್ನು ದೂರ ಮಾಡುತ್ತದೆ.

ಇಬ್ಬರೂ ಪರಸ್ಪರನ್ನು ಹುಡುಕುತ್ತಾ ಅಲೆಯುತ್ತಾರೆ. ದುಃಖದ ಬಾಣಲೆಯಲ್ಲಿ ಬೆಂದು ಹೋಗುತ್ತಾರೆ. ಆದರೂ ಬದುಕಿನ ಉತ್ಸಾಹ, ಭರವಸೆಯನ್ನು ಕಳೆದುಕೊಳ್ಳುವದಿಲ್ಲ. ನಳ ದಮಯಂತಿಯನ್ನು ಹುಡುಕುತ್ತಾ ಬೆಂಕಿಗಾಹುತಿಯಾಗುತ್ತಿದ್ದ ಉರುಗೇಂದ್ರನನ್ನು ರಕ್ಷಿಸಿ ಅದರಿಂದ ಕಚ್ಚಿಸಿಕೊಂಡು ಮನ್ಮಥರೂಪವನ್ನು ಕಳೆದುಕೊಂಡು ವಿರೂಪನಾಗುತ್ತಾನೆ. ಅಯೋಧ್ಯೆಯ ಋತುಪರ್ಣ ರಾಜನಲ್ಲಿ ಅಶ್ವಗಳನ್ನು ನೋಡಿಕೊಳ್ಳುವ ಕಾಯಕಕ್ಕೆ ಸೇರುತ್ತಾನೆ. ಅಶ್ವಗಳನ್ನು ಪಳಗಿಸುವ, ಓಡಿಸುವ ವಿವರಗಳು ಮನೋಜ್ಞವಾಗಿವೆ.

ಅಪ್ಪನ ಮನೆಯನ್ನು ಸೇರಿದ ದಮಯಂತಿ ನಳನ ಧ್ಯಾನದಲ್ಲಿಯೇ ಅನುಕ್ಷಣವೂ ಕಾಯುತ್ತಾಳೆ. ಮತ್ತೊಮ್ಮೆ ಸ್ಯಯಂವರ ನಿಗದಿಯಾಗುತ್ತದೆ. ಅಲ್ಲಿ ನಳನನ್ನು ಗುರುತಿಸಿ ಒಂದಾಗಿ ರಾಜ್ಯಭಾರ ಮಾಡುತ್ತಾರೆ.

ವಿಧಿಲೀಲೆ, ರಾಜತ್ವ, ಪ್ರೇಮ, ಕೇಡು, ದೈವತ್ವ, ಮನುಷ್ಯತ್ವಗಳ ಸಂಬಂಧಗಳನ್ನು ನಳ ದಮಯಂತಿಯ ಮೂಲಕ ಕಾವ್ಯ ಶೋಧಿಸುತ್ತಾ ಹೋಗುತ್ತದೆ. ನಳ ದಮಯಂತಿಯರ ದುಃಖ, ಬವಣೆ, ಅಗಲುವಿಕೆ, ಹುಡುಕಾಟ, ತಲ್ಲಣ, ಸಂಕಟಗಳು ದೈನಂದಿನ ಬದುಕಿನ ವಿನ್ಯಾಸವೇ ಆಗಿವೆ. ಹೀಗಾಗಿ ನಳ ದಮಯಂತಿಯರ ಚರಿತ್ರೆಯ ಮೂಲಕ ಎಲ್ಲಾ ಕಾಲದ ಬದುಕಿನಲ್ಲಿ ಸಂಭವಿಸುವ ಪ್ರೇಮದ ಅನ್ವೇಷಕರಾಗುತ್ತಾರೆ. ಹೀಗಾಗಿ ಅವರು ಕಾವ್ಯದ ಪಾತ್ರಗಳು ನಮ್ಮ ಬದುಕಿನ ಭಾಗವೇ ಆಗುತ್ತವೆ.

ಈ ಅಂಕಣದ ಹಿಂದಿನ ಬರಹಗಳು:
ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಂಸ್ಕೃತಿಯ ನಿರ್ವಚನ
ಧರ್ಮಾಧಿಕಾರದ ಆಶಯಗಳು

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ
ಘಾಂದ್ರುಕ್ ಕಾದಂಬರಿ: ಜೀವನ ಮುಕ್ತಿಯ ಶೋಧ
ಧನಿಯರ ಸತ್ಯನಾರಾಯಣ ಕತೆಃ ಕಾಲಮಾನದ ಶೋಷಣೆಯ ಸ್ವರೂಪ
ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳಲ್ಲಿ ಬದುಕಿನ ಚಿಂತನೆ
ಇದ್ದೂ ಇಲ್ಲದ್ದೂಃ ಪರಂಪರೆಯ ಸಾತತ್ಯ ಹಾಗೂ ದೇವರ ಬಿಕ್ಕಟ್ಟಿನ ಕಥನ
ಕಾಂತಾವರ ಕನ್ನಡ ಸಂಘದ ಕನ್ನಡ ಕಾಯಕ
`ಹೆಣ್ತನದ’ ಕತೆಗಳು
ಡಾ. ಪೂವಪ್ಪ ಕಣಿಯೂರು ಸಂಶೋಧನೆಗಳು: ಜಾನಪದೀಯ ಬಹು ಪ್ರಮಾಣಗಳ ಆಖ್ಯಾನ
ಡಾ. ಮಲ್ಲಿಕಾ ಘಂಟಿ ಕಾವ್ಯ: ಪುರುಷ ಪ್ರಮಾಣಗಳ ಭಂಜನ
ಡಾ. ಚೇತನ ಸೋಮೇಶ್ವರ ಕವಿತೆ `ಹೊಸ ನುಡಿಗಟ್ಟಿನ ಲಯಗಳು'
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು

 

 

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...