ನಾರದ ಬ್ರಹ್ಮಚಾರಿ ಎಂದು ನಾವು ನೀವೂ ಅಂದುಕೊಂಡಿದ್ದೇವೆ...


"ಮಹಾಭಾರತದೊಳಗಿನ ಎಷ್ಟೆಲ್ಲಾ ಉಪಕಥೆಗಳು ಮತ್ತೆ ಆ ಉಪಕಥೆಗಳೊಳಗೆ ಕವಲೊಡೆಯುವ ಉಪ-ಉಪಕಥೆಗಳು ಹೀಗೆ ಕಥೆಗಳಿಂದ ಸಮೃದ್ಧವಾಗಿದೆ ಈ ಪುಸ್ತಕ. ಅದರಲ್ಲೂ ವಿಶೇಷವಾಗಿ ಪ್ರೇಮಪರವಶತೆಯ ಕಾಮದ ಉತ್ಕಟತೆಯ ಕಥೆಗಳು ಕುಂಟಿನಿಯವರ ನಿರೂಪಣೆಯಲ್ಲಿ ಹೊಸ ಹೊಳಪಿನಿಂದ ಓದಿಸಿಕೊಳ್ಳುತ್ತವೆ," ಎನ್ನುತ್ತಾರೆ ಶ್ವೇತಾ ಹೊಸಬಾಳೆ. ಅವರು ಗೋಪಾಲಕೃಷ್ಣ ಕುಂಟಿನಿ ಅವರ ‘ಮಹಾಭಾರತ ಪ್ರೇಮ ಮತ್ತು ಯುದ್ಧ’ ಕೃತಿ ಕುರಿತು ಬರೆದ ವಿಮರ್ಶೆ.

ಪ್ರೇಮ ಕಾಮದ ಬಿಸುಪೂ ಯುದ್ಧದ ಭೀಕರತೆಯೂ ಒಂದೇ ಪುಸ್ತಕದಲ್ಲಿ ಸಿಗುವಂತೆ ಜೋಡಿಸಿ ಈ ಪುಸ್ತಕ ತಂದಿರುವುದರಿಂದ ಓದುವ ಯಾನದಲ್ಲಿ ಸುಖದ ಸೆಳೆತವೂ ಜೀವನದ ನಶ್ವರತೆಯೂ ತಟ್ಟುವ ವಿಶಿಷ್ಟ ಅನುಭವವಾಗುತ್ತದೆ. ಆರೋಹಣದಿಂದ ಅವರೋಹಣ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರದಿಂದ ಬದುಕಿನ ವಿನಾಶದೆಡೆಗೆ ಮುಕ್ತಿಯೆಡೆಗೆ ಸಾಗುವ ಮನುಷ್ಯ ಜನ್ಮದ ಪಯಣದ ಗ್ರಾಫ್ ಈ ಪುಸ್ತಕದಲ್ಲಿ ಸಿಗುತ್ತದೆ.

ಬದುಕಿನುದ್ದಕ್ಕೂ ಧಾರ್ಷ್ಟ್ಯ ದಿಂದ ಮೆರೆದ ದುರ್ಯೋಧನನಂಥ ದುರ್ಯೋಧನನಿಗೂ ಬದುಕಿನ ಕೊನೆಯ ಹಂತದಲ್ಲಿ ಯಾವುದಕ್ಕಾಗಿ ನಾನು ಇಷ್ಟೆಲ್ಲಾ ಮಾಡಿದೆ ಎನ್ನುವ ವೈರಾಗ್ಯ ಕಾಡುವ ಕ್ಷಣಗಳೂ ಈ ಪುಸ್ತಕದಲ್ಲಿದೆ. ಅದನ್ನು ಕುಂಟಿನಿಯವರು "ಯುದ್ಧದ ನಿರರ್ಥಕತೆಯನ್ನು ಯುದ್ಧಕ್ಕೆ ಮೂಲಕಾರಣನಾದವನಿಂದಲೇ ವ್ಯಾಸರು ಹೇಳಿಸಿದ್ದಾರೆ" ಎಂದಿರುವುದು ಚೆಂದ ಇದೆ.

ಮಹಾಭಾರತದೊಳಗಿನ ಎಷ್ಟೆಲ್ಲಾ ಉಪಕಥೆಗಳು ಮತ್ತೆ ಆ ಉಪಕಥೆಗಳೊಳಗೆ ಕವಲೊಡೆಯುವ ಉಪ-ಉಪಕಥೆಗಳು ಹೀಗೆ ಕಥೆಗಳಿಂದ ಸಮೃದ್ಧವಾಗಿದೆ ಈ ಪುಸ್ತಕ. ಅದರಲ್ಲೂ ವಿಶೇಷವಾಗಿ ಪ್ರೇಮಪರವಶತೆಯ ಕಾಮದ ಉತ್ಕಟತೆಯ ಕಥೆಗಳು ಕುಂಟಿನಿಯವರ ನಿರೂಪಣೆಯಲ್ಲಿ ಹೊಸ ಹೊಳಪಿನಿಂದ ಓದಿಸಿಕೊಳ್ಳುತ್ತವೆ.

ನಾರದ ಬ್ರಹ್ಮಚಾರಿ ಎಂದು ನಾವು ನೀವೂ ಅಂದುಕೊಂಡಿದ್ದೇವೆ. ಆದರೆ ಈ ಪುಸ್ತಕದಲ್ಲಿ ಸಾಮಾನ್ಯವಾಗಿ ಪ್ರಚಲಿತದಲ್ಲಿಲ್ಲದ ನಾರದನ ಪ್ರೇಮಕಥೆಯೂ ಇದೆ!

ಹೋಮ ಹವನಗಳನ್ನು ಮಾಡುವಾಗ 'ಸ್ವಾಹಾ' ಎನ್ನುತ್ತಾ ಅಗ್ನಿಗೆ ಹವಿಸ್ಸನ್ನು ಕೊಡುವ ಪದ್ಧತಿಯಿದೆಯಲ್ಲಾ, ಆ ಸ್ವಾಹಾ ಯಾರು? ಅವಳು ಅಗ್ನಿಯ ಪ್ರೇಯಸಿ, ಅಗ್ನಿಯೊಂದಿಗೆ ಶಾಶ್ವತವಾಗಿ ಇರಬೇಕೆನ್ನುವ ವರ ಪಡೆದವಳು ಎನ್ನುತ್ತಾ ಅಲ್ಲೊಂದು ಪ್ರೀತಿಯ ಕಥೆ ಬಿಚ್ಚಿಕೊಳ್ಳುತ್ತದೆ!

ಕೆಲವರಿಗೆ ಬದುಕಿನಲ್ಲಿ ಬಯಸಿದ ಪ್ರೀತಿ ಸಿಗುವುದೇ ಇಲ್ಲ. ಕೊನೆಗೆ ಬೇರೊಂದು ರೂಪದಲ್ಲಿ ಸಿಕ್ಕರೂ ಸುಖವಿಲ್ಲ! ಅಂಥಾ ಬದುಕನ್ನು ಬಾಳಿದ ದೇವಯಾನಿಯ ಕಥೆ ಮೂರು ಭಾಗಗಳಲ್ಲಿ ವಿಸ್ತೃತವಾಗಿದೆ ಇಲ್ಲಿ. ದೇವಯಾನಿಗೆ ಅವಳು ತುಂಬಾ ಪ್ರೀತಿಸಿದ ಕಚ ಸಿಗಲಿಲ್ಲ; ಕೊನೆಗೆ ಯಯಾತಿ ಸಿಕ್ಕರೂ ಪೂರ್ತಿ ಅವಳಿಗೇ ಸಮರ್ಪಿಸಿಕೊಳ್ಳಲಿಲ್ಲ! ಬರೀ ಸಂಘರ್ಷವೇ ಬದುಕಾದ ದೇವಯಾನಿಯ ಕಥೆ ಕಾಡಿತು.

ಭೀಮ ಸೌಗಂಧಿಕಾ ಪುಷ್ಪ ತರಲು ಹೋದಾಗ ಹನುಮಂತನ ಭೇಟಿಯಾಗುವುದು, ಆಗ ಸಾಗರೋಲ್ಲಂಘನ ಸಂದರ್ಭದ ನಿನ್ನ ರೂಪವನ್ನು ನೋಡಬೇಕು ಎಂದಾಗ ಹನುಮಂತ ಹೇಳುವ ಯುಗಧರ್ಮದ ವಿಷಯ ನಮ್ಮ ಹಲವಾರು ಅನುಮಾನಗಳಿಗೂ ಉತ್ತರವಾಗಬಲ್ಲದು. "ಭೂಮಿ, ನದಿ, ಪರ್ವತ, ಶಿಖರ, ಸಿದ್ಧರು, ದೇವತೆಗಳು ಮತ್ತು ಮಹರ್ಷಿಗಳು ಕಾಲಕ್ಕೆ ತಕ್ಕಂತೆ ವರ್ತಿಸುತ್ತಾರೆ; ಯುಗಭಾವದಂತೆ ಜೀವಿಗಳ ಶಕ್ತಿ, ಗಾತ್ರ ಮತ್ತು ಪ್ರಭಾವಗಳು ಕ್ಷೀಣಿಸುತ್ತವೆ ಮತ್ತು ವೃದ್ಧಿಯಾಗುತ್ತವೆ. ಹಾಗಾಗಿ ನಾನೂ ಕೂಡಾ ಯುಗವನ್ನು ಅನುಸರಿಸುತ್ತೇನೆ.ಕಾಲೋಹಿ ದುರತಿ ಕ್ರಮಃ, ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲ" ಎನ್ನುತ್ತಾನೆ. ಈಗ ನಂಬಲಸಾಧ್ಯವಾಗುವ ಆ ಕಾಲದ ಬದುಕಿನ ವಿಸ್ಮಯಗಳು, ವರ ಕೊಡುವುದು, ಶಾಪ ನಿಜವಾಗುವುದು, ಮಂತ್ರ ಶಕ್ತಿಯಿಂದ ಮಗು ಹುಟ್ಟುವುದು ಇನ್ನೂ ಹಲವಾರು ಈ ಥರದ್ದು ಘಟಿಸಲು ಸಾಧ್ಯವೇ ಎನ್ನುವ ಅನುಮಾನಗಳಿಗೆ ಹನುಮಂತನ ಮಾತಿನಲ್ಲಿ ಉತ್ತರವಿದೆ!

ಶರದ್ವತ, ಘೃತಾಚಿ, ತಪತಿ, ಸಂವರಣ, ಉಪರಿಚರ, ಬೃಹದ್ರತ, ಗಿರಿಕೆ, ಮಹಾಭಿಷ, ಉತಥ್ಯ, ಶ್ರುತರ್ವಾಣ, ದೃಢಸ್ಯು, ವಿಭಾಂಡಕ, ಚ್ಯವನ, ಭೃಗು, ಪುಲೋಮೆ, ರುರು, ಪ್ರಮದ್ವರಾ, ಜರತ್ಕಾರು, ಉತ್ತಂಕ, ಶಮೀಕ, ವೈವಸ್ವತ, ಸ್ಥೂಲಕರ್ಣ ಹೀಗೆ ಕಥೆಗಳಲ್ಲಿ ಬರುವ ಪೌರಾಣಿಕ ಹೆಸರುಗಳೂ ಸೆಳೆಯುತ್ತವೆ.

ಪ್ರೇಮ ಕಾಮದ ಕಥೆಗಳಿಂದ ಶುರುವಾದ ಪುಸ್ತಕ ಮಹಾಭಾರತದ ಹದಿನೆಂಟು ದಿನಗಳ ಯುದ್ಧದ ವೀರಾವೇಶ, ವಿಷಾದದೊಂದಿಗೆ, ಯುದ್ಧಾನಂತರದ ಸಂಕ್ಷಿಪ್ತ ವಿವರಗಳೊಂದಿಗೆ ಸಮಾಪ್ತಿಗೊಳ್ಳುವ ಹೊತ್ತಿಗೆ ತಲೆಯಲ್ಲೊಂದಿಷ್ಟು ಪ್ರಶ್ನೆಗಳು, ಹೊಸವಿಷಯಗಳು, ಜಿಜ್ಞಾಸೆಗಳು, ಉತ್ತರಗಳ ಮೊರೆತ, ಸಾವಿರಾರು ವರ್ಷಗಳ ಹಿಂದೆ ನಡೆದ ಯುದ್ಧದ ಗುಂಗು, ಜೀವಿಸಿದ್ದ ವ್ಯಕ್ತಿಗಳು, ಪಾತ್ರಗಳ ಬದುಕು, ತಾನೇ ಒಂದು ಪಾತ್ರವಾಗಿದ್ದುಕೊಂಡು ಇಡೀ ಕಥಾನಕವನ್ನು ನಿರೂಪಿಸಿದ ವ್ಯಾಸನೆಂಬ ಬೆರಗು ನಮ್ಮನ್ನಾವರಿಸಿಕೊಂಡಿರುತ್ತದೆ.

MORE FEATURES

ಮ್ಯಾಜಿಕ್ ನಂತೆ ಮಂತ್ರ ಮುಗ್ಧಗೊಳಿಸುವ ಕತೆಗಳು

30-12-2024 ಬೆಂಗಳೂರು

"ನನಗೆ ತುಂಬಾ ಇಷ್ಟವಾದ ಕತೆ ಮ್ಯಾಜಿಕ್ ಸೌಟು. ಇದರಲ್ಲಿ ಕೆಲಸದಾಕೆಯ ಕೈ ರುಚಿ ನೀಡುವ ನೆಮ್ಮದಿಗಾಗಿ ಹಂಬಲಿಸುವ ಕುಟ...

ಮಕ್ಕಳಿಗಾಗಿ ಬರೆಯುವುದೆಂದರೆ ಮಕ್ಕಳಾಟವಲ್ಲ

30-12-2024 ಬೆಂಗಳೂರು

“ಎಲ್ಲದಕ್ಕಿಂತ ಮುಖ್ಯವಾಗಿ ಇವೆಲ್ಲ ಕಾದಂಬರಿಯ ಮುಖ್ಯ ಕಥಾನಕಕ್ಕೆ ಪೂರಕ ಅಂಶಗಳಾಗಿ ಬಂದುಹೋಗುವುದರಿಂದ, ಓದುಗರಿಗೆ...

ಸೋಲಿಸಬೇಡ ಗೆಲಿಸಯ್ಯಾ... 

30-12-2024 ಬೆಂಗಳೂರು

"ಕರಾವಳಿಯ ಘಟನೆಯಲ್ಲಿ ಶಿಕ್ಷಕಿಯ ವಿರುದ್ಧ ರೂಪುಗೊಂಡ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳೂ ಇದ್ದರು. ತಮಗೆ ಕಲಿಸಿದ ಗ...