ಮೈಸೂರಿನಲ್ಲಿ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ಝಲಕು

Date: 08-07-2025

Location: ಬೆಂಗಳೂರು


" ದುರಂತದ ‌ಮತ್ತು ನೋವಿನ ಸಂಗತಿಯೆಂದರೆ ವರ್ತಮಾನದ ನಾಟಕ ಕಂಪನಿಗಳಲ್ಲಿ ಪರಂಪರಾಗತ ನಾಟ್ಯ, ಸಂಗೀತ, ಸಾಹಿತ್ಯದ ಸೋಪಜ್ಞಶೀಲ ಸಿರಿಗಂಧ ಕಣ್ಮರೆಯಾಗಿದೆ. ಕಣ್ಮರೆಯಾದ ಜಾಗದ ತುಂಬಾ ಸಿನೆಮಾ ಮತ್ತು ಇತರೆ ಪ್ರಕಾರದ ಸಾಹಿತ್ಯ, ಸಂಗೀತ ಮತ್ತು ನೃತ್ಯದ ಪಾರುಪತ್ಯ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ `ರೊಟ್ಟಿ ಬುತ್ತಿ' ಅಂಕಣದ ಸರಣಿಯಲ್ಲಿ "ಮೈಸೂರಿನಲ್ಲಿ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣದ ಝಲಕು" ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ.

ಮೈಸೂರು ಮಹಾರಾಜರುಗಳ ಕಾಲದಲ್ಲೇ ಅವತ್ತಿನ ವೃತ್ತಿ ರಂಗಭೂಮಿ, ಇವತ್ತಿನ ರಂಗಭೂಮಿ ಬಾಹುಳ್ಯಕ್ಕಿಂತ ಹೆಚ್ಚಿನ ರಂಗವೈಭವ ಮೆರೆದ ರಂಗೇತಿಹಾಸ ಉಂಟು. ಅಂದಿನ ವೃತ್ತಿರಂಗದ ವಿಸ್ತಾರ, ಪ್ರೀತಿ, ಪಾರಮ್ಯ ಅಗಾಧವಾದುದು. ಮೈಸೂರು ಒಡೆಯರ ಅರಮನೆಯಲ್ಲಿ ಕನ್ನಡ ನಾಡಿನ ಬಹುತೇಕ ನಾಟಕ ಕಂಪನಿಗಳ ಹೆಸರಾಂತ ವೃತ್ತಿರಂಗ ನಾಟಕಗಳು ಪ್ರದರ್ಶನ ಕಂಡಿವೆ. ಅಷ್ಟಲ್ಲದೇ ಮರಾಠಿ, ಪಾರ್ಸಿ ಕಂಪನಿ ನಾಟಕಗಳಿಗೂ ಅವಕಾಶ ಮಾಡಿಕೊಟ್ಟ ಹೆಗ್ಗಳಿಕೆ. ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರಂತೂ ರಂಗಸಂಸ್ಕೃತಿ ಕುರಿತು ಅಪಾರ ಪ್ರೀತಿ ಉಳ್ಳವರಾಗಿದ್ದರು.

ದಾವಣಗೇರಿಯ ಕೋಲ ಶಾಂತಪ್ಪ ವಿರಚಿತ ಸ್ತ್ರೀ, ಬಿ.ಎ., ಮೊದಲಾದ ನಾಟಕಗಳು ಮೈಸೂರು ಒಡೆಯರ ಅರಮನೆಯಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶನ ಕಂಡಿವೆ. ಹಲಗೇರಿಯ ಕುಡುಗೋಲು ಜೆಟ್ಟೆಪ್ಪನವರ ಶ್ರೀ ಹಾಲಸಿದ್ದೇಶ್ವರ ಸಾಗ್ರ ಸಂಗೀತ ನಾಟಕ ಮಂಡಳಿಯು ಮೈಸೂರು ಮಹಾರಾಜರಿಂದ ಆಮಂತ್ರಿತವಾಗಿ ಕೋಲ ಶಾಂತಪ್ಪನವರ ಈ ನಾಟಕಗಳನ್ನು ಅರಮನೆಯಲ್ಲಿ ಪ್ರದರ್ಶನ ಮಾಡಿದೆ. ಹಾಗೆಯೇ ಮುದ್ರಿತವಾದ ಈ ನಾಟಕಗಳಿಗೆ ಮೈಸೂರು ಸಂಸ್ಥಾನದ ಜಿ. ಎಚ್. ರಾಮಯ್ಯ ಎಂಬ ಹಿರಿಯ ಅಧಿಕಾರಿಯೊಬ್ಬರು ಸುಲಲಿತ ಮುನ್ನುಡಿಗಳನ್ನು ಬರೆದು ಹರಸಿದ್ದಾರೆ.

ಕನ್ನಡದ ಪ್ರಥಮ ಸಾಮಾಜಿಕ ನಾಟಕಕಾರ ಕೋಲ ಶಾಂತಪ್ಪ ಅವರನ್ನು ಮತ್ತು ಹಲಗೇರಿ ನಾಟಕ ಕಂಪನಿ ಮಾಲೀಕ ಕುಡುಗೋಲು ಜೆಟ್ಟೆಪ್ಪ ಅವರನ್ನು ಮೈಸೂರು ಮಹಾರಾಜರು ಅಂದು ಸತ್ಕರಿಸಿ, ಹಮ್ಮಿಣಿಯೊಂದಿಗೆ ಸನ್ಮಾನಪತ್ರ ನೀಡಿ ಗೌರವಿಸಿದ್ದಾರೆ. ಮಹಾರಾಜರ ರಂಗಸಂಸ್ಕೃತಿಯ ಪ್ರೀತಿ, ಪೋಷಣೆಗೆ ಹಿಡಿದ ರಂಗಸಾಕ್ಷಿ ಕನ್ನಡಿಯೊಂದು ಇಲ್ಲಿದೆ. ಅದೇನೆಂದರೆ; ಮಹಾರಾಜರೇ ಖುದ್ದಾಗಿ "ಚಾಮರಾಜೇಂದ್ರ ನಾಟಕ ಸಭಾ" ಎಂಬ ರಂಗಸಂಗೀತ ನಾಟಕ ಮಂಡಳಿ ಸ್ಥಾಪಿಸಿ ವೃತ್ತಿ ರಂಗಭೂಮಿಯ ಭೂಮತ್ವವನ್ನು ಮೇರುಸದೃಶವಾಗಿ ಮೆರೆದದ್ದುಂಟು. ಅದು ಅರಮನೆ ಕಂಪನಿ ಅಂತಲೇ ಪ್ರಸಿದ್ದಿ ಪಡೆದಿತ್ತು.

ಸಹಜವಾಗಿ ಅಂದಿನ ಮೈಸೂರು ಪ್ರಾಂತ್ಯದ ರಂಗಗೀತೆಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ತೀಕ್ಷ್ಣ ಪ್ರಭಾವ.‌ ಹಾಗೆಯೇ ಉತ್ತರ ಕರ್ನಾಟಕದ ನಾಟಕ ಕಂಪನಿಗಳಿಗೆ ಉತ್ತರಾದಿ ಶಾಸ್ತ್ರೀಯ ಸಂಗೀತದ ಅಂಥದೇ ಸೂಕ್ಷ್ಮಪ್ರಭಾವ. ಮೇಲ್ವರ್ಗಕ್ಕೆ ಎಂಬಂತೆ ಅಂದರೆ, ಅರಮನೆ, ಗುರುಮನೆಗಳಿಗೆ ಮಾತ್ರ ಮೀಸಲಾಗಿದ್ದ ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಿದ್ದು ನಮ್ಮ ನಾಟಕ ಕಂಪನಿಗಳು. ರಂಗಸಂಗೀತ, ಕಂದಪದ್ಯಗಳೆಂಬ ರಂಗಗೀತೆಗಳು, ಪೂಜಾನೃತ್ಯಗಳ ಮುಖಾಂತರ ಜನಮಾನಸಕ್ಕೆ ಮುಟ್ಟಿಸುತ್ತಲೇ ಶಾಸ್ತ್ರೀಯ ಕಲೆಗಳನ್ನು 'ಲೋಕಪ್ರಿಯ' ಮಾಡಿದ್ದು ಅವತ್ತಿನ ನಮ್ಮ ನಾಟಕ ಕಂಪನಿಗಳು. ಇಂತಹ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸತ್ಯಗಳನ್ನು ಯಾರೂ ಮರೆಯಬಾರದು.

ಅಂತೆಯೇ ಅಂದಿನ ನಾಟಕ ಕಂಪನಿಗಳ ಹೆಸರುಗಳು ಸಾಹಿತ್ಯ, ನಾಟ್ಯ, ಸಂಗೀತ ಮಂಡಳಿ ವಿಶೇಷಣಗಳಿಂದ ಕೂಡಿರುತ್ತಿದ್ದವು. ದುರಂತದ ‌ಮತ್ತು ನೋವಿನ ಸಂಗತಿಯೆಂದರೆ ವರ್ತಮಾನದ ನಾಟಕ ಕಂಪನಿಗಳಲ್ಲಿ ಪರಂಪರಾಗತ ನಾಟ್ಯ, ಸಂಗೀತ, ಸಾಹಿತ್ಯದ ಸೋಪಜ್ಞಶೀಲ ಸಿರಿಗಂಧ ಕಣ್ಮರೆಯಾಗಿದೆ. ಕಣ್ಮರೆಯಾದ ಜಾಗದ ತುಂಬಾ ಸಿನೆಮಾ ಮತ್ತು ಇತರೆ ಪ್ರಕಾರದ ಸಾಹಿತ್ಯ, ಸಂಗೀತ ಮತ್ತು ನೃತ್ಯದ ಪಾರುಪತ್ಯ.

ಪ್ರಸಕ್ತ ಇಂತಹ ಅನೇಕ ಅಪಸವ್ಯಗಳನ್ನು ಮನಗಂಡು, ಅವುಗಳ ನಿವಾರಣೋಪಾಯದ ಕಾರ್ಯಕ್ರಮಗಳು ಆದ್ಯತೆಯಾಗಬೇಕಿದೆ‌. ಆ ಮೂಲಕ ನೂತನ ರಂಗಾಯಣ ತನ್ನ ಸ್ವರೂಪ ಕಾಣತೊಡಗಿದೆ. ಚೈತನ್ಯಶೀಲ ಅಪ್ಪಟ ರಂಗ ನಾಟಕಗಳ ಪುನರ್ ಸೃಷ್ಟಿಗೆ ರಂಗಸಂಗೀತದ ಸೂಕ್ಷ್ಮತೆಗಳ ಅನುಸಂಧಾನ ಅತ್ಯಗತ್ಯ. ಆ ನಿಟ್ಟಿನಲ್ಲಿ ನಮ್ಮ ರಂಗಾಯಣವು ಮೊದಲ ಆದ್ಯತೆಯಾಗಿ ನಾಟ್ಯಸಂಗೀತ ಕಾರ್ಯಾಗಾರವನ್ನು ದಾವಣಗೆರೆಯಲ್ಲಿ ಏರ್ಪಡಿಸಿ ಯಶಸ್ಸು ಕಂಡಿತು. ಆ ಪ್ರಯತ್ನವನ್ನು ನಾಡಿನ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿಸ್ತೃತ ಪಡಿಸಲಾಗುವುದು.

ಮೈಸೂರು ವಿಭಾಗವು ವೃತ್ತಿರಂಗ ಪರಂಪರೆಯ ಆಡುಂಬೊಲ. ಅದರ ವಾರಸುದಾರಿಕೆಯಂತೆ ಅಂದು ಮಹಾದೇವಸ್ವಾಮಿ, ವರದಾಚಾರ್ಯ, ಸುಬ್ಬಯ್ಯ ನಾಯ್ಡು, ಮಹ್ಮದ್ ಪೀರ್, ಹೊನ್ನಪ್ಪ ಭಾಗವತರ, ಗುಬ್ಬಿ ವೀರಣ್ಣ ನಾಟಕ ಕಂಪನಿಗಳು ಮೈಸೂರಿನಲ್ಲಿ ವೃತ್ತಿ ರಂಗಭೂಮಿಯ ಚಾರಿತ್ರಿಕ ವೈಭವವನ್ನು ಸಾರಿ ಸಾರಿ ಮೆರೆದಿವೆ. ಅದಾದ ಮೇಲೆ ಆಗಾಗ ಹತ್ತಾರು ನಾಟಕ ಕಂಪನಿಗಳು ಮೈಸೂರಲ್ಲಿ ಮೊಕ್ಕಾಂ ಮಾಡಿ ವೃತ್ತಿರಂಗದ ಸದಭಿರುಚಿ ಪರಂಪರೆಯನ್ನು ಈ ಊರಲ್ಲಿ ಬಾಳಿ ಬದುಕಿವೆ. ಹೀಗೆ ಮೈಸೂರಿನ ವೃತ್ತಿ ರಂಗಭೂಮಿ ಚರಿತ್ರೆ ಕರ್ನಾಟಕದ ಅಭೂತಪೂರ್ವ ರಂಗಸಂಸ್ಕೃತಿಯ ಐತಿಹ್ಯ ಭಾಗವೇ ಆಗಿರುವುದು ಹೌದು.

ಅಷ್ಟೇಯಾಕೆ ಇವತ್ತಿಗೂ ಹಳೆಯ ಮೈಸೂರು ಪ್ರಾಂತ್ಯದ ಸಾವಿರಾರು ಹಳ್ಳಿ ಹಳ್ಳಿಗಳಲ್ಲಿ ನೂರಾರು ರಂಗತಂಡಗಳು ತಮ್ಮ ಸ್ವಂತ ಹಣದಲ್ಲಿ ವೃತ್ತಿರಂಗ ಕಂಪನಿ ಶೈಲಿಯ ಸಹಸ್ರಾರು ಪೌರಾಣಿಕ, ಐತಿಹಾಸಿಕ ನಾಟಕಗಳನ್ನು ಕಲಿತು ಪ್ರದರ್ಶನ ಮಾಡುತ್ತಲಿವೆ. ಒಂದು ಅಧಿಕೃತ ಮಾಹಿತಿಯ ಪ್ರಕಾರ ಇಡೀ ಕರ್ನಾಟಕದಾದ್ಯಂತ ವರ್ಷವೊಂದಕ್ಕೆ ಹದಿನೈದರಿಂದ ಹದಿನೆಂಟು ಸಾವಿರ ಸಂಖ್ಯೆಯಷ್ಟು ಇಂತಹ ನಾಟಕಗಳು ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನ ಕಾಣುತ್ತವೆ. ಅದಕ್ಕಾಗಿ ನಮ್ಮ ಗ್ರಾಮೀಣರು ವರ್ಷಕ್ಕೆ ಎಂಬತ್ತರಿಂದ ನೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ತನ್ಮೂಲಕ ವೃತ್ತಿ ರಂಗಭೂಮಿಯ ಜವಾರಿ ಸಡಗರವನ್ನು ನಾಡಿನಾದ್ಯಂತ ಸಮೃದ್ಧವಾಗಿ ಸಂಭ್ರಮಿಸುತ್ತಾರೆ. ಅದನ್ನು ಜನಸಂಸ್ಕೃತಿಯಂತೆ ಬೆಳೆಸಿದ್ದಾರೆ.

ನೆನಪಿರಲಿ : ಇಂತಹ ಲೋಕಪರ ಅರ್ಥಾತ್ ಜನಸಾಮಾನ್ಯರ ರಂಗಪರಂಪರೆಯನ್ನು ಕೆಲವರು ಅಣಕು ವ್ಯಂಗ್ಯದಂತೆ ಕಾಣುತ್ತಿರುವುದುಂಟು. ಅಲ್ಲದೆ ಕಿರುತೆರೆಗಳು ತಮ್ಮ ಟಿಆರ್ಪಿ ದರ ಹೆಚ್ಚಿಸಿಕೊಳ್ಳುವ ಮಾನದಂಡಗಳಂತೆ ಇದನ್ನು ಬಳಕೆ ಮಾಡುತ್ತಿವೆ. ಕಿರುತೆರೆ ರಿಯಾಲಿಟಿ 'ಶೋ'ಗಳು ಪ್ರತಿಭಾಶಾಲಿ ರಂಗಭೂಮಿ ಕಲಾವಿದರನ್ನು ಅವು ಮನಸೋಇಚ್ಛೆ ಉಪಯೋಗ ಪಡಿಸಿಕೊಳ್ಳುತ್ತಲಿವೆ. ಅದ್ಯಾವ ಪ್ರಮಾಣದಲ್ಲಿ ಅಂದರೆ ಇಪ್ಪತ್ತೇ ನಿಮಿಷದಲ್ಲಿ ವೃತ್ತಿ ರಂಗದ ವೃತ್ತಾಂತವನ್ನು ಚರಿತ್ರಿಸುವಂತೆ ಬಿಂಬಿಸಿವೆ. ಅವು ಡಬಲ್ ಮೀನಿಂಗ್ ಹಾಸ್ಯಕ್ಕೆ ಮಿತಿಗೊಳಿಸುವಲ್ಲಿ ಗೆಲುವು ಸಾಧಿಸಿದಂತಿವೆ.

ಮತ್ತೆ ಹಳೇ ಮೈಸೂರಿನ ರಂಗಚರಿತೆಗೆ ಹೊರಳುವುದಾದರೆ, ಅವಿಭಜಿತ ಮೈಸೂರು ಜಿಲ್ಲೆಗೆ ಸೇರಿದ ವರನಟ ಡಾ. ರಾಜಕುಮಾರ ಅವರು ವೃತ್ತಿರಂಗದ ಸುವಿಧ ಪರಂಪರೆಯನ್ನು ಉತ್ತುಂಗಕ್ಕೇರಿಸಿದ ಪ್ರಾತಃಸ್ಮರಣೀಯರು. ಅಂತಹ ವೃತ್ತಿರಂಗ ಔನ್ನತ್ಯವನ್ನು ಮೆರೆದ ಹತ್ತಾರು ಮಹನೀಯರ ರಂಗಪ್ರಾಂತ್ಯ ಮೈಸೂರು. "ವೃತ್ತಿ ರಂಗಭೂಮಿ ಎಂಬುದು ಹಚ್ಚಿಟ್ಟ ಕರ್ಪೂರ., ಅಲ್ಲಿ ಇದ್ದಿಲು ಹುಡುಕುವುದು ಬೇಡ" ಈ ಮಾತನ್ನು ಹೇಳಿದವರು ಈ ಭಾಗದ ವೃತ್ತಿ ರಂಗಭೂಮಿಯ ಮೇರುವ್ಯಕ್ತಿತ್ವದ ಎಚ್. ಕೆ. ಯೋಗಾನರಸಿಂಹಮೂರ್ತಿ. ಅವರ ಈ ಮಾತು ಸಮಗ್ರ ಕನ್ನಡ ರಂಗಸಂಸ್ಕೃತಿಯ ಮೌಲ್ಯವನ್ನೇ ಪ್ರತಿಪಾದಿಸುತ್ತದೆ.

ವರ್ತಮಾನದ ಮೈಸೂರು ರಂಗಾಯಣ ಜಾಗತಿಕ ಮಟ್ಟದಲ್ಲಿ ಹೆಸರು ಸಂಪಾದಿಸಿದೆ. ಬಿ. ವಿ. ಕಾರಂತರು ಅದರ ಸಂಸ್ಥಾಪಕರು.‌ ಅವರು ಗುಬ್ಬಿ ಕಂಪನಿಯಿಂದ ಕಲಿತು ಬಂದವರೆಂಬುದು ಮಗದೊಂದು ಹೆಮ್ಮೆ.

ಇದೀಗ ಮೊದಲ ಬಾರಿಗೆ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣವು ಮೈಸೂರು ನಗರದಲ್ಲಿ ಹದಿನೈದು ದಿವಸಗಳ ಅವಧಿಯ ರಂಗಸಂಗೀತ ಮತ್ತು ಸದಭಿನಯ ರಂಗಗೀತೆಗಳ ಕಲಿಕಾ ಕಾರ್ಯಾಗಾರ ಹಮ್ಮಿಕೊಂಡಿದೆ. ಅದಕ್ಕೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಸಹಯೋಗ. ದಾವಣಗೆರೆ ರಂಗಾಯಣ ತನ್ನ ಸೀಮೆ ದಾಟಿಬಂದ ಹೆಮ್ಮೆ ಮತ್ತು ಸಂಭ್ರಮ. ನಾವು ಕರೆದ ನೇರ ಸಂದರ್ಶನಕ್ಕೆ ಆಗಮಿಸಿದ ಯಾರೂ ಅನರ್ಹರು ಇರಲಿಲ್ಲ. ನಾವು ಪ್ರಕಟ ಪಡಿಸಿದ ನಿಯಮಗಳ ಮಿತಿಯನ್ನು ಸಡಿಲಿಸಲಾಗಲಿಲ್ಲ. ಹೀಗಾಗಿ ಅರ್ಹತೆ ಇದ್ದ ಇನ್ನೂ ಹತ್ತಾರು ಮಂದಿ ಅಭ್ಯರ್ಥಿಗಳನ್ನು ಶಿಬಿರಕ್ಕೆ ಸೇರಿಸಿಕೊಳ್ಳಲಾಗಲಿಲ್ಲ. ವಿವಿಧ ಕಲಾಶಿಸ್ತುಗಳ ಶಿಬಿರಾರ್ಥಿಗಳು ಆಯ್ಕೆಗೊಂಡು ರಂಗಸಂಗೀತ ಮತ್ತು ರಂಗಗೀತೆಗಳ ಕಲಿಕಾ ಕಾರ್ಯಾಗಾರಕ್ಕೆ ಸಡಗರ ಮೂಡಿದೆ.

ರಂಗಸಂಗೀತ ಮತ್ತು ಅಭಿನಯ ಪೂರ್ವಕವಾಗಿ ರಂಗಗೀತೆಗಳ ಕಲಿಕಾ ಶಿಬಿರಕ್ಕೆ ನಿರ್ದೇಶಕರಾಗಿ ಶೋಭೆ ತಂದು ಕೊಟ್ಟವರು ಹಿರಿಯ ಸಂಗೀತ ವಿದ್ವಾಂಸರಾದ ವಿದ್ವಾನ್ ವೈ. ಎಂ. ಪುಟ್ಟಣ್ಣಯ್ಯ ಅವರು. ಪ್ರಸಕ್ತ ವೃತ್ತಿ ರಂಗಭೂಮಿ ಪರಂಪರೆಯಲ್ಲಿ ಅವರದು ಹಿರಿದಾದ ಸ್ಥಾನಮಾನ. ಗುಬ್ಬಿ ವೀರಣ್ಣ , ಮಾದೇವಸ್ವಾಮಿ, ಹೊನ್ನಪ್ಪ ಭಾಗವತರು, ಮಾಸ್ಟರ್ ಹಿರಣ್ಣಯ್ಯ ಮೊದಲಾದವರ ನಾಟಕ ಕಂಪನಿಗಳಲ್ಲಿ ರಂಗಸೇವೆಗೈಯ್ದ ಸಂವೇದನಾಶೀಲ ರಂಗಾನುಭವಿ ಅವರು. ವೃತ್ತಿರಂಗವತ್ಸಲರು. ಅಷ್ಟು ಮಾತ್ರವಲ್ಲದೇ ಮೈಸೂರು ರಂಗಾಯಣಕ್ಕೆ "ಸದಾರಮೆ" ಎಂಬ ರಂಗನಾಟಕ ಕಟ್ಟಿಕೊಟ್ಟವರು. ಸುಶೀಲ ಸ್ವಭಾವದ ಅವರ ರಂಗಸಿರಿತನದಲ್ಲಿ ಮೈಸೂರಿನ ರಂಗಸಂಗೀತ ಶಿಬಿರ ಸಾರ್ಥಕವಾಗಿ ಜರುಗುತ್ತಿರುವುದು ಖಂಡುಗ ಖುಷಿ. ಅವರಿಗೆ ಸಹಾಯಕನಾಗಿ ಅಹರ್ನಿಶಿ ರಂಗಸ್ಪಂದನ ಮೂಡಿಸುತ್ತಿರುವವರು ಯುವರಂಗಕರ್ಮಿ ಸುಪ್ರೀತ್ ಭಾರದ್ವಾಜ್.

ಮುಖ್ಯವಾಗಿ ಮೈಸೂರಿನಲ್ಲಿ ಈ ಕಾರ್ಯಕ್ರಮ ನೆರವೇರಿಸಲು ನಮಗೆ ನೆರವಾದವರು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ವಿ.ವಿ.ಯ ಕುಲಪತಿಗಳಾದ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ಮತ್ತು ಅವರ ಸಿಬ್ಬಂದಿ. ವಿಶೇಷವಾಗಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಹಕಾರ ಶ್ಲಾಘನೀಯ. ಅದರಲ್ಲೂ ಡಾ. ಚಂದ್ರಪ್ಪನವರು ಈ ಕಾರ್ಯಕ್ರಮದ ಭಾಗದಂತೆ ಸಕ್ರಿಯವಾಗಿ ಸ್ಪಂದಿಸಿದ್ದಾರೆ. ಈ ಎಲ್ಲರನ್ನೂ ಹದುಳ ಮನದಿಂದ ಸ್ಮರಿಸಿಕೊಳ್ಳುತ್ತೇನೆ.

ಅದೆಲ್ಲಕ್ಕಿಂತ ಹೇಳಲೇಬೇಕಾದ ಪ್ರಮುಖ ಸಂಗತಿಯೊಂದಿದೆ. ಅದೇನೆಂದರೆ : ಹಲವು ದುರಿತಗಳ ಗರ್ಭೀಕರಣದಂತಿರುವ ಜಾಗತೀಕರಣದ ಸವಾಲುಗಳ ನಡುವೆಯೂ ಮೈಸೂರು, ಸಾಂಸ್ಕೃತಿಕವಾಗಿ ತನ್ನ ಸೂಕ್ಷ್ಮ ಸಂವೇದನೆಗಳನ್ನು ಇವತ್ತಿಗೂ ಉಳಿಸಿಕೊಂಡಿದೆ. ಸಣ್ಣ ಪ್ರಮಾಣದಲ್ಲಿ ಆದರೂ ಅದನ್ನು ಈ ಕಾರ್ಯಾಗಾರ ಸಾಬೀತು ಪಡಿಸುತ್ತಲಿದೆ. "ರಂಗಗೀತೆಗಳ ಉಳಿವು ಅಗತ್ಯ" ಕಾರ್ಯಕ್ರಮದ ಸುದ್ದಿ ಓದಿದ ಶ್ರೀ ಚಿಲ್ಕರಾಗಿಯವರು ರಂಗಗೀತೆ ಹಾಡುವವರೂ ಉಳಿಯಬೇಕೆಂದು ಎಚ್ಚರಿಸಿದ್ದಾರೆ. ಹೀಗೆ ರಂಗಸಂಸ್ಕೃತಿ ಉಳಿವಿನ ಚಿಂತನೆಗಳಿಗೆ ಸಾವಿರ, ಸಾವಿರ ಸಲಾಮುಗಳು.

ಮಲ್ಲಿಕಾರ್ಜುನ ಕಡಕೋಳ
9341010712

MORE NEWS

ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್

08-12-2025 ಬೆಂಗಳೂರು

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...