Date: 28-04-2022
Location: ಬೆಂಗಳೂರು
'ಅಲ್ಲಮಪ್ರಭುವಿನೊಂದಿಗೆ ನಡೆದ ಆ ಸಂವಾದದಲ್ಲಿ ಮುಕ್ತಾಯಕ್ಕ ಮಹಾಜ್ಞಾನಿಯಾಗಿ, ದೊಡ್ಡ ಸಾಧಕಿಯಾಗಿ ಕಾಣಿಸಿಕೊಂಡಿದ್ದಾಳೆ. ಅಂತೆಯೇ ಮುಕ್ತಾಯಕ್ಕ ವಚನಕಾರ್ತಿಯರಲ್ಲಿಯೇ ತುಂಬ ವಿಶಿಷ್ಟವಾಗಿದ್ದಾಳೆ' ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ‘ಶಿವಶರಣೆಯರ ಸಾಹಿತ್ಯ ಚರಿತ್ರೆ’ ಅಂಕಣದಲ್ಲಿ ವಚನಗಾರ್ತಿ ಮುಕ್ತಾಯಕ್ಕನ ಕುರಿತು ಚರ್ಚಿಸಿದ್ದಾರೆ.
ಶೂನ್ಯ ಸಂಪಾದನೆಯಲ್ಲಿ "ಮುಕ್ತಾಯಕ್ಕಗಳ ಸಂಪಾದನೆ'' ಬರುತ್ತದೆ. ಅಲ್ಲಿ ಆಕೆ ಅಲ್ಲಮಪ್ರಭುವಿನೊಂದಿಗೆ ಸಂವಾದ ನಡೆಸಿದ್ದಾಳೆ. ಅಲ್ಲಮನ ಸಮಕಾಲೀನಳಾಗಿದ್ದ ಮುಕ್ತಾಯಕ್ಕನ ಕಾಲವೂ ಕೂಡ ಕ್ರಿ.ಶ. 1160 ಆಗಿದೆ. ಮುಕ್ತಾಯಕ್ಕನನ್ನು ಕುರಿತು ಶಾಂತಲಿಂಗದೇಶಿಕ ಕವಿಯ "ಭೈರವೇಶ್ವರಕಾವ್ಯದ ಕಥಾಮಣಿ ಸೂತ್ರರತ್ನಾಕರ" ಕೃತಿಯಲ್ಲಿ ಪ್ರಸ್ತಾಪವಿದೆ. ಆದರೆ ಮುಕ್ತಾಯಕ್ಕನ ಜೀವನಚರಿತ್ರೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ. ಜನಪದ ಕಾವ್ಯದಲ್ಲಿಯೂ ಮುಕ್ತಾಯಕ್ಕನ ಬಗೆಗೆ ಬರೆಯಲಾಗಿದೆ. ಮುಕ್ತಾಯಕ್ಕನ ವಚನಗಳಲ್ಲಿಯೇ ಆಕೆಯ ಅಣ್ಣನ ಬಗೆಗೆ ಪ್ರಸ್ತಾಪವಿದೆ.
"ಎನ್ನ ಕಣ್ಣಕಟ್ಟಿ ಕನ್ನಡಿಯ ತೋರಿತ್ತೋ ಅಜಗಣ್ಣಾ ನಿನ್ನ ವಿಯೋಗ" (ವ-3)
"ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ...." (ವ-5)
"ಎನ್ನ ಅಜಗಣ್ಣನಂತೆ ಶಬ್ದ ಮುಗ್ಧನಾಗಿರಬೇಕಲ್ಲದೆ..." (ವ-6)
ಮುಕ್ತಾಯಕ್ಕನ ಇಂತಹ ಅನೇಕ ವಚನಗಳಲ್ಲಿ ಅಜಗಣ್ಣನ ಪ್ರಸ್ತಾಪವಿದ್ದು, ಆತ ತನ್ನ ಅಣ್ಣನೆಂದು ಹೇಳಿದ್ದಾಳೆ. ಈ ಎಲ್ಲ ವಿವರಗಳನ್ನು ಗಮನಿಸಿ ಹೇಳುವುದಾದರೆ; ಮುಕ್ತಾಯಕ್ಕನ ತವರುಮನೆ ಗದಗ ತಾಲ್ಲೂಕಿನ ಲಕ್ಕುಂಡಿಯಾಗಿತ್ತು, ಗಂಡನಮನೆ ದೇವದುರ್ಗ ತಾಲ್ಲೂಕಿನ ಮೊಸರಕಲ್ಲು ಆಗಿತ್ತೆಂಬುದು ಸ್ಪಷ್ಟವಾಗುತ್ತದೆ. ಅಜಗಣ್ಣನೆಂಬಾತ ಈಕೆಯ ಅಣ್ಣನಾಗಿದ್ದನೆಂದು ತಿಳಿದುಬರುತ್ತದೆ. ಚೆನ್ನಬಸವಣ್ಣನ ವಚನವೊಂದರಲ್ಲಿ "ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ" (ವ-1993) ಎಂದು ಹೇಳಲಾಗಿದೆ. ಇದರಿಂದ ಅಜಗಣ್ಣನೆಂಬಾತನು ಅಲ್ಲಮಪ್ರಭುವಿಗಿಂತಲೂ ದೊಡ್ಡ ಜ್ಞಾನಿಯಾಗಿದ್ದನೆಂದು ತಿಳಿದುಬರುತ್ತದೆ ಇಂತಹ ಜ್ಞಾನಿಯ ತಂಗಿಯಾಗಿದ್ದ ಮುಕ್ತಾಯಕ್ಕ ಕೂಡಾ ಸಹಜವಾಗಿಯೇ ಜ್ಞಾನಿಯಾಗಿದ್ದಳು. ಶೂನ್ಯಸಂಪಾದನೆಯಲ್ಲಿ ಬರುವ ಮುಕ್ತಾಯಕ್ಕಗಳ ಸಂಪಾದನೆಯನ್ನು ಗಮನಿಸಿದಾಗ ಈ ಮಾತು ಸ್ಪಷ್ಟವಾಗುತ್ತದೆ. ಅಲ್ಲಮಪ್ರಭುವಿನೊಂದಿಗೆ ನಡೆದ ಆ ಸಂವಾದದಲ್ಲಿ ಮುಕ್ತಾಯಕ್ಕ ಮಹಾಜ್ಞಾನಿಯಾಗಿ, ದೊಡ್ಡಸಾಧಕಿಯಾಗಿ ಕಾಣಿಸಿಕೊಂಡಿದ್ದಾಳೆ. ಅಂತೆಯೇ ಮುಕ್ತಾಯಕ್ಕ ವಚನಕಾರ್ತಿಯರಲ್ಲಿಯೇ ತುಂಬ ವಿಶಿಷ್ಟವಾಗಿದ್ದಾಳೆ.
ಚೆನ್ನಬಸವಣ್ಣ ಮುಂತಾದ ವಚನಕಾರರು ತಮ್ಮ ವಚನಗಳಲ್ಲಿ ಮುಕ್ತಾಯಕ್ಕನನ್ನು ಸ್ಮರಿಸಿದ್ದಾರೆ. ಆದರೆ ಇದರಿಂದ ಆಕೆಯ ಜೀವನಚರಿತ್ರೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಇನ್ನು ಮುಕ್ತಾಯಕ್ಕನು ತನ್ನ ವಚನದಲ್ಲಿ ಕೆಲವು ವಚನಕಾರರನ್ನು ನೆನಪಿಸಿಕೊಂಡಿದ್ದಾಳೆ. ಇಂತಹ ವಚನಗಳೂ ಕೂಡ ಅವಳ ಜೀವನಚರಿತ್ರೆಯ ಮೇಲೆ ಹೊಸ ಬೆಳಕು ಚೆಲ್ಲುವುದಿಲ್ಲ.
"ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು ಬದುಕಿದೆನಯ್ಯಾ ಅಜಗಣ್ಣ ತಂದೆ" (ವ-10)
ಮುಕ್ತಾಯಕ್ಕನ ಈ ವಚನದಲ್ಲಿ ಶರಣರ ಬಗೆಗೆ ಕೃತಜ್ಞತಾಭಾವವಿದೆ. ಬಸವಣ್ಣ ಗುರುವಾಗಿ, ಚೆನ್ನಬಸವಣ್ಣ ಲಿಂಗವಾಗಿ, ಪ್ರಭುದೇವ ಜಂಗಮನಾಗಿ, ಮರುಳಶಂಕರದೇವರು ಪ್ರಸಾದವಾಗಿ, ಮಡಿವಾಳಯ್ಯನು ಮಂತ್ರವಾಗಿ ತನ್ನ ಆಧ್ಯಾತ್ಮಸಾಧನೆಗೆ ಕಾರಣರಾದರೆಂದು ಅವರನ್ನು ಸ್ಮರಿಸಿದ್ದಾಳೆ.
ಲಕ್ಕುಂಡಿಯಲ್ಲಿ ಜನಿಸಿದ ಮುಕ್ತಾಯಕ್ಕನಿಗೆ ಮಹಾಜ್ಞಾನಿಯಾಗಿದ್ದ ಅಜಗಣ್ಣನೆಂಬಾತ ಅಣ್ಣನಾಗಿದ್ದ. ಮೊಸರಕಲ್ಲು ಆಕೆಯ ಗಂಡನ ಮನೆಯಾಗಿತ್ತು. ಅಜಗಣ್ಣ ನಿಧನವಾದಾಗ ಆತನ ತಲೆಯನ್ನು ತನ್ನ ತೊಡೆಯ ಮೇಲಿಟ್ಟುಕೊಂಡು ಶೋಕಿಸುತ್ತಿರುತ್ತಾಳೆ. ಇದನ್ನು ಕಂಡ ಅಲ್ಲಮಪ್ರಬು ಆಕೆಯನ್ನು ಸಮಾಧಾನಪಡಿಸಲೆತ್ನಿಸುತ್ತಾನೆ. ಇದೇ ಸಂದರ್ಭದಲ್ಲಿ ಆಕೆಗೆ ಕೆಲವು ಹಿತನುಡಿಗಳನ್ನು ಹೇಳಲು ಹೋದಾಗ, ಆಕೆ ಆತನ ಕೆಲವು ವಿಚಾರಗಳನ್ನು ಒಪ್ಪಿಕೊಳ್ಳದೆ ತನ್ನ ಅಣ್ಣ ಅಜಗಣ್ಣ ಹೇಳಿದ್ದ ನುಡಿಗಳನ್ನೇ ಹೇಳುತ್ತಾಳೆ. ಅಲ್ಲಮಪ್ರಭುವನ್ನೇ ಪ್ರಶ್ನಿಸುತ್ತಾಳೆ. ಈ ಸಂವಾದವನ್ನು ಶೂನ್ಯಸಂಪಾದನೆಕಾರರು ಕಟ್ಟಿಕೊಟ್ಟಿದ್ದಾರೆ. ಮುಕ್ತಾಯಕ್ಕನು ತನ್ನ ಗಂಡನಮನೆ ಮೊಸರಕಲ್ಲಿನಲ್ಲಿಯೇ ಲಿಂಗೈಕ್ಯಳಾಗಿರಬೇಕೆಂದು ತಿಳಿದುಬರುತ್ತದೆ. ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದಲ್ಲಿ ಪ್ರಭುದೇವರ ಗದ್ದುಗೆ ಇದೆ. ಅದನ್ನು ಮುಕ್ತಾಯಕ್ಕನೇ ಕಟ್ಟಿಸಿದಳೆಂಬ ಪ್ರತೀತಿಯಿದೆ. ಮುಕ್ತಾಯಕ್ಕ ವಾಸಿಸುತ್ತಿದ್ದ ಸ್ಥಳದಲ್ಲಿ ಈಗ ಸಮಾಧಿ ಕಟ್ಟಲಾಗಿದೆ. ಈ ಊರಿನವರ ಹೇಳಿಕೆಯ ಪ್ರಕಾರ ಈ ಗುಡ್ಡವೇ ಅಂದಿನ ಉರಾಗಿತ್ತೆಂದು ತಿಳಿದುಬರುತ್ತದೆ. ಮುಕ್ತಾಯಕ್ಕನ ಗಂಡನಮನೆ ಮೊಸರಕಲ್ಲು ಆಗಿತ್ತೆಂಬುದಕ್ಕೆ ಮೊದಲು ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ ಈಗ ಮೊಸರಕಲ್ಲೇ ಆಕೆಯ ಗಂಡನ ಊರೆಂಬ ಅಂಶ ಸ್ಪಷ್ಟವಾಗಿದೆ. ಮೊಸರಕಲ್ಲಿನಲ್ಲಿ ಅಜಗಣ್ಣ ಮತ್ತು ಮುಕ್ತಾಯಕ್ಕ ಹೆಸರಿನ ಅನೇಕ ಜನರಿದ್ದಾರೆ. ಆದರೆ ಮುಕ್ತಾಯಕ್ಕನ ಗಂಡನ ಬಗೆಗೆ ವಿವರಗಳು ದೊರೆತಿಲ್ಲ.
ಜನಪದ ಸಾಹಿತ್ಯದಲ್ಲಿ ಮುಕ್ತಾಯಕ್ಕ ಕಾಣಿಸಿಕೊಂಡಿದ್ದಾಳೆ. ಜನಪದರಿಗೆ ಅಕ್ಕಮಹಾದೇವಿ ಅಕ್ಕನಾಗಿ, ಮುಕ್ತಾಯಕ್ಕ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಮುಕ್ತಾಯಕ್ಕನ ಗಂಡ ಖಬರಗೇಡಿಯಾಗಿದ್ದನೆಂದು, ಹೀಗಾಗಿ ಆಕೆಯ ಸಂಸಾರ ಎಡವಟ್ಟಾಯಿತೆಂದು ಜನಪದ ತ್ರಿಪದಿಗಳಲ್ಲಿ ಉಲ್ಲೇಖವಾಗಿದೆ. ಹೀಗೆ ಸಂಸಾರ ಎಡವಟ್ಟಾದಾಗ ಆಕೆ ಕಲ್ಯಾಣಕ್ಕೆ ಹೋದಳೆಂದು ಜನಪದರು ಹೇಳಿದ್ದಾರೆ. ಬಸವಣ್ಣನವರ ಮನೆಯ ಹಸುಗಳನ್ನು ಕಾಯುವ ಕಾಯಕ ಮಾಡಿ ಕಲ್ಯಾಣದಲ್ಲಿದ್ದಳೆಂದು ಜನಪದ ತ್ರಿಪದಿಗಳು ಹೇಳುತ್ತವೆ. ಹೀಗೆ ಜನಪದರಿಗೆ ಮುಕ್ತಾಯಕ್ಕ ದೊಡ್ಡ ಶರಣೆಯಾಗಿ, ಮಹಾಜ್ಞಾನಿಯಾಗಿ, ಅಂತಃಕರಣವುಳ್ಳ ಅಜಗಣ್ಣನ ತಂಗಿಯಾಗಿ ಕಾಣಿಸಿಕೊಂಡಿದ್ದಾಳೆ.
ಮುಕ್ತಾಯಕ್ಕನಿಗೆ ಸಂಬಂಧಿಸಿದಂತೆ ಮೂವತ್ತಕ್ಕೂ ಹೆಚ್ಚು ತ್ರಿಪದಿಗಳು ದೊರೆತಿವೆ. ಡಾ. ನೀಲಾಂಬಿಕಾ ಸೇರಿಕಾರ ಅವರು "ತಾಯಿಯ ಪದಗಳು" ಹೆಸರಿನಲ್ಲಿ ಈ ಹಾಡುಗಳನ್ನು ಸಂಗ್ರಹಿಸಿದ್ದಾರೆ. ಈ ಸಂಗ್ರಹವನ್ನಿಟ್ಟುಕೊಂಡು "ಜನಪದ ತ್ರಿಪದಿಗಳಲ್ಲಿ ಮುಕ್ತಾಯಕ್ಕ ಹಾಗೂ ಅಜಗಣ್ಣ" ಎಂಬ ನನ್ನ ಲೇಖನವೊಂದು "ಕರ್ನಾಟಕ ಜಾನಪದ" ತ್ರೈಮಾಸಿಕದಲ್ಲಿ ಜುಲೈ 2006ರಲ್ಲಿ ಪ್ರಕಟವಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಈ ತ್ರೈಮಾಸಿಕ ಪ್ರಕಟವಾಗುತ್ತಿತ್ತು. ಇಲ್ಲಿಂದ ಕೆಲವು ತ್ರಿಪದಿಗಳನ್ನು ಉದಾಹರಿಸಿ, ಆ ಮೂಲಕ ಜನಪದರು ಕಂಡ ಮುಕ್ತಾಯಕ್ಕ ಹೇಗಿದ್ದಳೆಂಬುದನ್ನು ನೋಡಬಹುದಾಗಿದೆ.
"ಮಾಸಾಳ ಊರಾಗ ಶಿವಭಕ್ತರ ಮನಿಯಾಗ ಖುಷಿಯಾಗಿ ತಂಗಿಗಿ ಕೊಟ್ಟಾನ | ಮುಕ್ತಾಯಿ
ಹಸನಾಗಿ ಬದುಕ ಮಾಡ್ಯಾಳ||"
"ಆಕಳ ಬಿಟಕೊಂಡು ಹೊಲಕ ತಾ ಬರತಾಳ ಮೂಕಾಗಿ ಆಕಳ ಕಾಯ್ದಾಳ | ಮುಕ್ತಾಯಿ
ಮುಕ್ಕಣ್ಣನ ಧ್ಯಾನ ಮಾಡ್ಯಾಳ||"
ಈ ತ್ರಿಪದಿಗಳಲ್ಲಿ ಮುಕ್ತಾಯಕ್ಕನ ಜೀವನಚರಿತ್ರೆ ಕಾಣಿಸುತ್ತದೆ. ಇದುವರೆಗೆ ದೊರೆತ ಆಕರಗಳೆಲ್ಲ ಅಜಗಣ್ಣನ ಸಾವಿನ ಮೂಲಕವೇ ಪ್ರಾರಂಭವಾಗುತ್ತವೆ. ಆದರೆ ಜನಪದರು ಅಜಗಣ್ಣನನ್ನು ಜೀವಂತ ಕಂಡಿದ್ದಾರೆ. ಅಜಗಣ್ಣನು ಮುಕ್ತಾಯಿಗೆ ತಾನೇ ತಂದೆ-ತಾಯಿಯಾಗಿದ್ದನೆಂದು ಈ ತ್ರಿಪದಿಗಳಿಂದ ತಿಳಿದುಬರುತ್ತದೆ. ಅಜಗಣ್ಣ ಬಂಡಿಕಟ್ಟಿಕೊಂಡು, ಜೋಡೆತ್ತು ಹೂಡಿಕೊಂಡು, ಬಸವಣ್ಣನಿರುವ ಕಲ್ಯಾಣಕ್ಕೆ ಮುಕ್ತಾಯಿಯೊಂದಿಗೆ ಬರುತ್ತಾನೆ. ಈ ವಿಷಯವು ಉಳಿದ ಆಕರಗಳಲ್ಲಿಲ್ಲ.
ಹೀಗೆ ಮುಕ್ತಾಯಿಯನ್ನು ಬಂಡಿಯಲ್ಲಿ ಕೂಡ್ರಿಸಿಕೊಂಡು ಕಲ್ಯಾಣಕ್ಕೆ ಬಂದಾಗ ಅಜಗಣ್ಣನಿಗೆ, ಕಲ್ಯಾಣದ ಮುಂದಿರುವ ತ್ರಿಪುರಾಂತಕ ಕೆರೆ ಕಾಣಿಸುತ್ತದೆ. "ತ್ರಿಪುರಾಂತಕ ಕೆರೆ ಚೆಂದ, ಬಸವನ ಮನೆಮುಂದ" ಎಂಬ ತ್ರಿಪದಿಯಲ್ಲಿ ಆ ವಿಷಯ ಪ್ರಕಟವಾಗಿದೆ. ತಂಗಿಯನ್ನು ನೋಡಲು ಮೊಸರಕಲ್ಲಿಗೆ ಹೋದಾಗ ಅಲ್ಲಿ ಅಜಗಣ್ಣ ಮುಕ್ತಾಯಿಗೆ ಹಿತನುಡಿ ಹೇಳುತ್ತಾನೆ.
"ಇಟ್ಟಾಂಗ ಇರುತಂಗಿ, ಕೊಟ್ಟಾಂಗ ಉಣು ತಂಗಿ" ಎಂಬ ಜನಪದ ಹಾಡುಗಳಲ್ಲಿ ಮುಕ್ತಾಯಿ ಒಬ್ಬ ಗರತಿಯ ಹಾಗೆ ಚಿತ್ರಿತಳಾಗಿದ್ದಾಳೆ. "ತಂಗೀಗಿ ಕಳುವ್ಯಾನ| ದುಃಖ ಪಡುತಾನ| ಅಂಗೀಲಿ ಕಣ್ಣ ಒರಸ್ಯಾನ" ಎಂಬ ಹಾಡಿನಲ್ಲಿ, ತಂಗಿಯ ಕಷ್ಟವನ್ನು ಕಂಡು ತಾನೂ ದುಃಖ ಪಡುವ ಅಜಗಣ್ಣನನ್ನು ಜನಪದರು ಕಣ್ಣಿಗೆ ಕಟ್ಟುವಹಾಗೆ ಚಿತ್ರಿಸಿದ್ದಾರೆ. ಮುಕ್ತಾಯಕ್ಕ ಕಲ್ಯಾಣದಲ್ಲಿದ್ದಾಗ ಬಸವಣ್ಣನ ಮನೆಯ ಆಕಳು ಕಾಯುವ ಕಾಯಕ ಮಾಡುತ್ತಿದ್ದಳೆಂದು ಈ ತ್ರಿಪದಿಗಳು ಹೇಳುತ್ತವೆ. ಶೂನ್ಯಸಂಪಾದನೆಯಲ್ಲಿ ಕಾಣಿಸಿಕೊಳ್ಳುವ ಅಲ್ಲಮಪ್ರಭುವಿಗೂ, ಜನಪದ ಹಾಡುಗಳಲ್ಲಿರುವ ಅಲ್ಲಮನಿಗೂ ತುಂಬ ವ್ಯತ್ಯಾಸವಿದೆ. ಕಲ್ಯಾಣಕ್ಕೆ ಬಂದ ನಂತರ ಮುಕ್ತಾಯಿ ಅನುಭವ ಮಂಟಪ ಪ್ರವೇಶಿಸುತ್ತಾಳೆ. ಆಗ ಎಲ್ಲ ಶರಣರೂ ಆಕೆಯನ್ನು ತಂಗಿಯೆಂದು ಕರೆಯುತ್ತಿದ್ದರೆಂದು ಈ ತ್ರಿಪದಿಗಳಿಂದ ತಿಳಿದುಬರುತ್ತದೆ. ಅಜಗಣ್ಣ ಸತ್ತಾಗ ಮುಕ್ತಾಯಿ ಏಕಾಂಗಿಯಾಗುತ್ತಾಳೆ. ಅಣ್ಣನ ನೆನಪು ಮಾಡಿಕೊಂಡು ಅಳುತ್ತಾಳೆ. ಆಗ ಜನಪದ ಗರತಿ ತನ್ನ ಹಾಡಿನಲ್ಲಿ ಹೀಗೆ ಹೇಳಿದ್ದಾಳೆ. "ಅಜಗಣ್ಣ ತಂಗಿಯು ಪರದೇಸಿ ಆಗ್ವಾಳ ಅಂಬರಕ ಬಾಯಿ ಬಿಟ್ಟಾಳ | ತಂಗಿಗಿ ಯಾರೂ ಒರಸಲ್ಲರು ಕಣ್ಣೀರ" ಮುಕ್ತಾಯಕ್ಕನ ಪ್ರಲಾಪವನ್ನು ಜನಪದರು ಮನಕರಗುವಂತೆ ಹೇಳಿದ್ದಾರೆ. ಇಲ್ಲಿ ಅಲ್ಲಮಪ್ರಭು ಮುಕ್ತಾಯಿಗೆ ತಂಗಿ, ತಾಯಿಯೆಂದು ಕರೆದು ಗೌರವದಿಂದ ಮಾತಾಡಿಸುತ್ತಾನೆ. ಶೂನ್ಯಸಂಪಾದನೆಗಳಿಗಿಂತ ಜನಪದ ತ್ರಿಪದಿಗಳು ಶರಣರ ಚರಿತ್ರೆಯನ್ನು ತಿಳಿದುಕೊಳ್ಳಲು ತುಂಬ ವಸ್ತುನಿಷ್ಠವಾಗಿವೆ. ಏನೆಲ್ಲ ವಿವರಗಳಿದ್ದರೂ ಶರಣರಚರಿತ್ರೆ ಮಾತ್ರ ಅಪೂರ್ಣವಾಗಿಯೇ ಇದೆ.
ಶರಣರು ರಚಿಸಿರುವ ವಚನಗಳಲ್ಲಿ ಮುಕ್ತಾಯಕ್ಕನ ಪ್ರಸ್ತಾಪವಿದೆ. 11 ವಚನಗಳಲ್ಲಿ ಮುಕ್ತಾಯಕ್ಕನನ್ನೇ ಕುರಿತು ಬರೆಯಲಾಗಿದೆ. ಅವರಲ್ಲಿ ನಾಲ್ಕು ವಚನಕಾರರು ಮುಕ್ತಾಯಕ್ಕನ ಸಮಕಾಲೀನ ವಚನಕಾರರಾಗಿದ್ದರೆ ಏಳು ವಚನಕಾರರು ಬಸವೋತ್ತರ ಕಾಲದ ವಚನಕಾರರಾಗಿದ್ದಾರೆ. ಇನ್ನು ಹತ್ತು ವಚನಗಳಲ್ಲಿ ಮುಕ್ತಾಯಕ್ಕ ಮತ್ತು ಅಜಗಣ್ಣರನ್ನು ಕುರಿತು ಪ್ರಸ್ತಾಪಿಸಲಾಗಿದೆ.
ಈ ಮೊದಲು ಉಲ್ಲೇಖಿಸಿದ ವಚನದಲ್ಲಿ ಚೆನ್ನಬಸವಣ್ಣನು ಅಜಗಣ್ಣನ ವಚನಗಳ ಮಹತ್ವವನ್ನು ಹೇಳಿದ್ದಾನೆ. ಅದರ ಪೂರ್ಣ ಪಾಠವನ್ನಿಲ್ಲಿ ನೋಡಬಹುದಾಗಿದೆ.
"ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ, ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ, ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ..."
- (ಸ.ವ. ಸಂ.3, ವ-220, 1993 ಪು. 65)
ಅಜಗಣ್ಣನ ವಚನಗಳು ಹೇಗೆ ಪ್ರಭುದೇವರ ವಚನಗಳಿಗಿಂತಲೂ ಶ್ರೇಷ್ಠವಾಗಿದ್ದ ವೆಂಬುದನ್ನು ಚೆನ್ನಬಸವಣ್ಣ ಹೇಳಿದ್ದಾನೆ. ಹೀಗೆ 55 ವಚನಗಳಲ್ಲಿ ಸಮಕಾಲೀನ ವಚನಕಾರರು ಅಜಗಣ್ಣನನ್ನು ಸ್ಮರಿಸಿದ್ದಾರೆ. ಆತನ ಜ್ಞಾನ, ಅನುಭಾವದ ಮಹತ್ವವನ್ನು ಕೊಂಡಾಡಿದ್ದಾರೆ. ಅದೇರೀತಿ ಆತನ ತಂಗಿಯಾದ ಮುಕ್ತಾಯಕ್ಕನ ಮಹಿಮೆಯನ್ನೂ ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಸಿದ್ಧರಾಮನಂತೂ "ಎಮ್ಮಯ್ಯ ಅಜಗಣ್ಣನೆಂದು" ಕರೆದಿದ್ದಾನೆ. ತಮ್ಮ ತ್ರಿವಿಧಿಯಲ್ಲಿ ಮುಕ್ತಾಯಕ್ಕನನ್ನು ಸಿದ್ಧರಾಮೇಶ್ವರ ಹೀಗೆ ಸ್ಮರಿಸಿದ್ದಾನೆ.
"ಹೆತ್ತವ್ವೆ ನೀಲಮ್ಮ ಮುತ್ತವ್ವೆ ಮಹಾದೇವಿ ಎತ್ತಿ ಸಲಹಿದಳೆನ್ನ ಅಕ್ಕನಾಗಲೆತಾಯಿ ಇತ್ತಬಾರೆಂದು ತಾಂಬೂಲ ಪ್ರಸಾದವನಿತ್ತ ಮುಕ್ತಾಯಕ್ಕನಿಗೆ ಶರಣು ಯೋಗಿನಾಥ"
- (ಸಿದ್ಧರಾಮೇಶ್ವರ ವಚನಗಳು, 108ನೇ ನುಡಿ, ಸಂ.ಡಾ.ಆರ್.ಸಿ. ಹಿರೇಮಠ, ಕ.ವಿ.ವಿ. ಧಾರವಾಡ, 1968)
ಇಲ್ಲಿ ಬಳಸಿರುವ "ತಾಂಬೂಲ ಪ್ರಸಾದ" ಮುಖ್ಯವಾಗಿದೆ. ಊಟವಾದ ನಂತರ ತಾಂಬೂಲ ಸೇವಿಸುತ್ತಾರೆ. ಹಾಗೆ ಆಧ್ಯಾತ್ಮದ ಊಟದಲ್ಲಿ ಮುಕ್ತಾಯಕ್ಕನದು ತುಂಬ ವಿಶಿಷ್ಟವಾದ ಕೊಡುಗೆಯೆಂದು ಸಿದ್ಧರಾಮ ಹೇಳಿದ್ದಾನೆ. "ಎನಗುಣಲಿಕ್ಕಿದರಯ್ಯ ಸಿರಿಯಾಳ ಚಂಗಳೆಯರು ಎನಗುಡಲು ಕೊಟ್ಟರಯ್ಯಾ ದಾಸ - ದುಗ್ಗಳೆಯರು.... ಎನ್ನ ಸಲಹಿದರಯ್ಯಾ ಅಮ್ಮವ್ವೆ ಕೊಡಗೂಸು ಚೋಳಿಯಕ್ಕ ನಿಂಬವ್ವೆ ನೀಲಮ್ಮ ಮಹಾದೇವಿ ಮುಕ್ತಾಯಕ್ಕಗಳು"
- (ಸ.ವ.ಸಂ. 7, ವ-188, ಪುಟ-71, 1993)
ಈ ವಚನದಲ್ಲಿ ಮುಕ್ತಾಯಕ್ಕ ಮೊದಲಾದ ಶರಣೆಯರು ತನ್ನನ್ನು ಸಲುಹಿದರೆಂದು ಕೋಲಶಾಂತಯ್ಯ ಸ್ಮರಿಸಿದ್ದಾನೆ. ಇಲ್ಲಿ ಅರವತ್ತು ಮೂರು ಪುರಾತನರ ಶರಣರೊಂದಿಗೆ ಮುಕ್ತಾಯಕ್ಕ, ಮಹಾದೇವಿಯರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ.
"ಬಸವಣ್ಣನ ಭಕ್ತಿಸ್ಥಲ, ಮಡಿವಾಳ ಮಾಚಣ್ಣನ ಮಹೇಶ್ವರ ಸ್ಥಲ....
ಅಜಗಣ್ಣನ ಆರೂಢ, ನಿಜಗುಣನ ಬೆರಗು....
ನಿಂಬಿಯಕ್ಕನ ನಿಶ್ಚಯ, ಮುಕ್ತಾಯಕ್ಕನ ಅಕ್ಕರು. "
- (ಸ.ವ.ಸಂ.6, ವ-1034, ಪು.327, 1993)
ಆದಯ್ಯನು ಈ ವಚನದಲ್ಲಿ ಯಾವ್ಯಾವ ಸ್ಥಲಕ್ಕೆ ಯಾರ್ಯಾರು ಕೊಡುಗೆ ಕೊಟ್ಟಿದ್ದಾರೆಂಬುದನ್ನು ಹೇಳುತ್ತ ಅಜಗಣ್ಣನದು ಆರೂಢ ಸ್ಥಲವೆಂದು ಹೇಳಿದ್ದಾನೆ. ಶರಣರ ಸ್ಥಲಗಳನ್ನು ಕುರಿತು ಹೇಳಿದ ಈ ವಚನದಲ್ಲಿ, ಶರಣೆಯರ ಗುಣವಿಶಿಷ್ಟತೆಯನ್ನು ಕುರಿತು ಹೇಳಲಾಗಿದೆ. ನಿಂಬಿಯಕ್ಕ ದೃಢ ಭಕ್ತಿಗೆ ಹೆಸರಾಗಿದ್ದರೆ, ಮುಕ್ತಾಯಕ್ಕ ಅಕ್ಕರು ಎಂದರೆ ಅಕ್ಕರೆಯ ಭಕ್ತಿಗೆ ಹೆಸರಾಗಿದ್ದಳೆಂದು ಹೇಳಲಾಗಿದೆ. ಇದನ್ನು ಮಧುರಭಕ್ತಿ ಎಂದು ಕರೆಯಲಾಗುತ್ತದೆ. "ಪ್ರಸಾದಲಿಂಗವೆ ಬಸವಣ್ಣನೆಂದರಿದು ತಮ್ಮ ಪ್ರಸಾದ ಲಿಂಗದಲ್ಲಿ ನಿರವಯನೈದಿಹದು ಮುಕ್ತಾಯಕ್ಕಗಳು"
- (ಸ.ವ.ಸಂ. 5, ವ-721, ಪು.222, 1993)
"ಈ ಮುಕ್ತಾಯಕ್ಕಗಳ ಕಕ್ಕುಲತೆಯ
ಶಂಭುಜಕ್ಕೇಶ್ವರನ ಶರಣರೊಪ್ಪರಯ್ಯಾ..."
- (ಸ.ವ.ಸಂ. 5, ವ-1223, ಪು.399, 1993)
ಮುಕ್ತಾಯಕ್ಕನ ಸಮಕಾಲೀನ ಶರಣೆಯರಾದ ಆಯ್ದಕ್ಕಿಲಕ್ಕಮ್ಮ ಮತ್ತು ಸತ್ಯಕ್ಕ ತಮ್ಮ ವಚನಗಳಲ್ಲಿ ಮುಕ್ತಾಯಕ್ಕನನ್ನು ನೆನಪಿಸಿಕೊಂಡಿದ್ದಾರೆ. ತನ್ನ ಬಹಿರಂಗ ಶುದ್ಧಿಗೆ ಮುಕ್ತಾಯಕ್ಕನೇ ಕಾರಣವಾಗಿದ್ದಾಳೆಂದು ಆಯ್ದಕ್ಕಿಲಕ್ಕಮ್ಮ ಹೇಳಿದರೆ, ಮುಕ್ತಾಯಕ್ಕನ ಕಕ್ಕುಲತೆಯನ್ನು ಕುರಿತು ಸತ್ಯಕ್ಕ ಹೇಳಿದ್ದಾಳೆ.
"ಮುಕ್ತಾಯಕ್ಕನ ಕರುಣಜಲ, ವಿನಯಜಲ, ಸಮತಾ ಜಲ" ಎಂದು ಗುರಸಿದ್ಧ ದೇವರು ಹೇಳಿದರೆ, "ಮುಕ್ತಾಯಕ್ಕಗಳ ಪದಸ್ಪರ್ಷನದಿಂದ ಭಾವಶೂನ್ಯನಾದನೆಂದು'' ದೇಶಿಕೇಂದ್ರ ಸಂಗನಬಸವಯ್ಯನವರು ಹೇಳಿದ್ದಾರೆ. ಮುಕ್ತಾಯಕ್ಕನಿಂದ ಪಿಂಡಜ್ಞಾನ ಪಡೆದಿದ್ದನೆಂದು ಹೇಮಗಲ್ಲ ಹಂಪ ಹೇಳಿದರೆ, "ಎನ್ನ ಅರುಹಿನ ವಿಶ್ರಾಂತಿಯೇ ಮುಕ್ತಾಯಕ್ಕ" ಎಂದು ಗುಮ್ಮಾಳಪುರದ ಸಿದ್ಧಲಿಂಗದೇವರು ಹೇಳಿದ್ದಾರೆ. ಹೀಗೆ ಅನೇಕ ಶರಣರು, ಕವಿಗಳು ತಮ್ಮ ವಚನಗಳಲ್ಲಿ ಮುಕ್ತಾಯಕ್ಕನನ್ನು ಕುರಿತು ಕೊಂಡಾಡಿದ್ದಾರೆ.
ಬಸವಯುಗದ ಮತ್ತು ಬಸವೋತ್ತರಯುಗದ ವಚನಕಾರರು ಮುಕ್ತಾಯಕ್ಕನನ್ನು ಕುರಿತು ಬರೆದಿದ್ದಾರೆ. ಮುಕ್ತಾಯಕ್ಕನ ಮೂವತ್ತೇಳು ವಚನಗಳು ಪ್ರಕಟವಾಗಿವೆ. "ಅಜಗಣ್ಣ" ಅಂಕಿತದಲ್ಲಿ ಈ ವಚನಗಳಿವೆ. ಮುಕ್ತಾಯಕ್ಕ ರಚಿಸಿರುವ ವಚನಗಳು ಸಂಖ್ಯೆಯ ದೃಷ್ಟಿಯಿಂದ ಕಡಿಮೆಯಿದ್ದರೂ, ಸತ್ವದ ದೃಷ್ಟಿಯಿಂದ ಪ್ರಮುಖವಾದವುಗಳಾಗಿವೆ. ಶೂನ್ಯಸಂಪಾದನೆಗಳಲ್ಲಿ ಬರುವ ಅಲ್ಲಮಪ್ರಭು ಮುಕ್ತಾಯಕ್ಕ ಇವರ ಸಂವಾದದಲ್ಲಿಯ ಕೆಲವು ವಚನಗಳನ್ನು ನೋಡಿದಾಗ ಮುಕ್ತಾಯಕ್ಕ ಮಹಾಜ್ಞಾನಿಯಾಗಿದ್ದಳು, ದೊಡ್ಡ ಅನುಭಾವಿಯಾಗಿದ್ದಳೆಂಬುದು ಸ್ಪಷ್ಟವಾಗುತ್ತದೆ.
"ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ" ಎಂದು ಅಲ್ಲಮಪ್ರಭು ಮುಕ್ತಾಯಕ್ಕನೆದುರು ಹೇಳಿದಾಗ ಆಕೆ ಕೊಡುವ ಉತ್ತರ ತುಂಬ ಮಹತ್ವದ್ದಾಗಿದೆ.
"ನಡೆದು ನಡೆದು ನಡೆಯ ಕಂಡವರು, ನುಡಿದು ನುಡಿದು ಹೇಳುತ್ತಿಹರೆ?
ನುಡಿದು ನುಡಿದು ಹೇಳುವನ್ನಕ್ಕರ ನಡೆದುದೆಲ್ಲಾ ಹುಸಿಯೆಂಬೆನು" - (ವ-24)
ಎಂದು ಪ್ರಭುವಿಗೆ ನೇರವಾಗಿ ಹೇಳುತ್ತಾಳೆ. ಆ ಕಾಲದಲ್ಲಿ ಒಬ್ಬ ಮಹಿಳೆ, ಶೂನ್ಯಪೀಠದ ಅಧ್ಯಕ್ಷ ಅಲ್ಲಮಪ್ರಭುವಿಗೆ ಈ ರೀತಿಯ ಪ್ರತಿಕ್ರಿಯೆ ನೀಡಿದ್ದು, ನಿಜಕ್ಕೂ ಆಶ್ಚರ್ಯವೆನಿಸುತ್ತದೆ, "ತನ್ನ ತಾನರಿದಡೆ ನುಡಿಯೆಲ್ಲಾ ತತ್ವನೋಡಾ ! ತನ್ನ ತಾ ಮರೆದಡೆ ನುಡಿಯೆಲ್ಲಾ ಮಾಯೆ ನೋಡಾ" ಎಂದು ಪ್ರಭು ಹೇಳಿದಾಗ ಮುಕ್ತಾಯಕ್ಕ ಹೀಗೆ ಹೇಳುತ್ತಾಳೆ.
"ನುಡಿಯ ಹಂಗಿನ್ನೂ ನಿಮಗೆ ಹಿಂಗದು,
ನಡೆಯನೆಂತು ಪರರಿಗೆ ಹೇಳುವಿರಿ? ಒಡಲ ಹಂಗಿನ ಸುಳುಹು ಬಿಡದು,
ಎನ್ನೊಡನೆ ಮತ್ತೇತರ ಅನುಭಾವವಣ್ಣಾ?...." (ವ-27)
ಮುಕ್ತಾಯಕ್ಕನ ಈ ವಚನವು ಮಹಿಳಾ ಸಾಧ್ಯತೆಗೆ ಬರೆದ ವ್ಯಾಖ್ಯೆಯಂತಿದೆ: ಯಾವ ಅಲ್ಲಮಪ್ರಭು ಅನುಭವ ಮಂಟಪದ ಅಧ್ಯಕ್ಷನಾಗಿದ್ದನೊ, ಯಾವ ಪ್ರಭುದೇವ ಎಲ್ಲ ಶರಣರ ದೃಷ್ಟಿಯಲ್ಲಿ ಅನುಭಾವಿಯಾಗಿ ಕಂಡಿದ್ದನೊ ಅಂತಹ ಮಹಾನುಭವಿಯನ್ನು ಮುಕ್ತಾಯಕ್ಕ ಪ್ರಶ್ನಿಸುವ ರೀತಿ ಬೆರಗುಗೊಳಿಸುವಂತಿದೆ. ``ನಿನಗಿನ್ನೂ ಒಡಲ ಹಂಗು ಬಿಟ್ಟಿಲ್ಲ, ಮಾತಿನ ಮಥನ ಹಿಂಗಿಲ್ಲ, ಎನಗೇತರ ಅರಿವ ಹೇಳುವೆ ಹೋಗು'' ಎನ್ನುವ, ಮುಕ್ತಾಯಕ್ಕನ ನುಡಿಯಲ್ಲಿ ನಿಷ್ಠುರತೆಯಿದ್ದರೂ, ಸತ್ಯವೇ ಅಡಗಿದೆ. ಮುಕ್ತಾಯಕ್ಕನ ಇಂತಹ ನೇರ ಬಿರುನುಡಿಗಳನ್ನು ಕೇಳಿಸಿಕೊಂಡ ಅಲ್ಲಮಪ್ರಭು ನಂತರ ವಿನಮ್ರತೆಯಿಂದ ನಡೆದುಕೊಳ್ಳುತ್ತಾನೆ, ಅನೇಕ ಶರಣೆಯರು ಉಳಿದವರಿಗೆ ನಯ-ವಿನಯವನ್ನು ಕಲಿಸಿಕೊಟ್ಟಿದ್ದಾರೆ.
"ಸಿಡಿಲುಹೊಯ್ದ ಬಾವಿಗೆ ಸೋಪಾನವುಂಟೆ?
ನೆರೆಯರಿದ ಬಳಿಕ ಮತ್ತೆ ಮತಿ ಹುಟ್ಟಲುಂಟೆ?
ಸೊಡರುಳ್ಳ ಮನೆಗೆ ಮತ್ತೆ ತಮಂಧವೆಂಬುದೇನೊ? ತನ್ನಲ್ಲಿ ತಾನು ತದ್ಗತವಾದ ಬಳಿಕ
ಬೊಮ್ಮ ಪರಬೊಮ್ಮವಾದೆನೆಂಬುದಿಲ್ಲ ನೋಡಾ..." (ವ-34)
ಎಂದು ಸ್ಪಷ್ಟವಾಗಿ ಹೇಳುವ ಮುಕ್ತಾಯಕ್ಕನ ಜ್ಞಾನ ಅದ್ಭುತವಾದುದಾಗಿದೆ. ನಾನೇ ಬ್ರಹ್ಮ ಎನ್ನುವವರಿಗೆ ಮುಕ್ತಾಯಕ್ಕನ ಈ ವಚನ ಚಾಟಿ ಏಟಿನಂತಿದೆ. ಅಲ್ಲಮಪ್ರಭುವು ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕ ಇಬ್ಬರನ್ನೂ ಪ್ರಶ್ನಿಸುತ್ತಾನೆ, ಪರೀಕ್ಷಿಸುತ್ತಾನೆ. ಆಗ ಅಕ್ಕ ವಿನಯದಿಂದ ಉತ್ತರ ನೀಡಿದರೆ, ಮುಕ್ತಾಯಕ್ಕ ನೇರವಾಗಿಯೇ ಉತ್ತರಿಸುತ್ತಾಳೆ. ತಾನು ಅಜಗಣ್ಣನ ತಂಗಿಯೆಂಬ ಅಭಿಮಾನ ಆಕೆಯಲ್ಲಿದೆ. ಅಜಗಣ್ಣನ ಆದರ್ಶದಲ್ಲಿ ಬೆಳೆದ ಮುಕ್ತಾಯಕ್ಕ ನಿಜವಾದ ಶರಣೆಯಾಗಿದ್ದಾಳೆ, ನಿಷ್ಠುರವಾದ ಜ್ಞಾನಿಯಾಗಿದ್ದಾಳೆ. ಇವರಿಬ್ಬರ ನುಡಿಗಳನ್ನು ಕೇಳಿದ ಅಲ್ಲಮಪ್ರಭುವಿಗೆ ಆಶ್ಚರ್ಯವಾಗುತ್ತದೆ. ಆಗ ಅವರ ಪಾದಂಗಳಿಗೆ ನಮಿಸುತ್ತಾನೆ. ಜ್ಞಾನ ಮತ್ತು ಅನುಭಾವದಲ್ಲಿ ಮಹಿಳೆಯರು ಯಾರಿಗಿಂತಲೂ ಕಡಿಮೆಯಿಲ್ಲವೆಂಬುದನ್ನು ಈ ಶರಣೆಯರು ತೋರಿಸಿಕೊಟ್ಟಿದ್ದಾರೆ.
"ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು
ಮೂಗನ ಕೈಯಲ್ಲಿ ಕಾವ್ಯವ ಕೇಳಿದಂತಿರಬೇಕು" (ವ-1)
"ಅಲರೊಳಡಗಿದ ಪರಿಮಳದಂತೆ
ಪತಂಗದೊಳಡಗಿದ ಅನಲನಂತೆ..." (ವ-9)
"ಉಟ್ಟುದ ತೊರೆದವಂಗೆ ಊರೇನು, ಕಾಡೇನು?
ನಷ್ಟ ಸಂತಾನಕ್ಕೆ ಕುಲವೇನು? ಛಲವೇನು" - (ವ-9)
"ನುಡಿಯೆನೆಂಬಲ್ಲಿಯೆ ನುಡಿಅದೆ
ನಡೆಯೆನೆಂಬಲ್ಲಿಯೆ ನಡೆಅದೆ...." (ವ-28)
ಇಂತಹ ಅನೇಕ ವಚನಗಳಲ್ಲಿ ಮುಕ್ತಾಯಕ್ಕ ಸ್ವತಂತ್ರವಾಗಿ ಚಿಂತನೆ ಮಾಡಿದ್ದಾಳೆ. ಯಾರ ಹಂಗಿಗೂ ಒಳಗಾಗದೆ ತನ್ನ ಅಣ್ಣ ಅಜಗಣ್ಣನಂತೆ ಆಧ್ಯಾತ್ಮ ಕ್ಷೇತ್ರದಲ್ಲಿ ಬೆಳೆದು ನಿಂತಿದ್ದಾಳೆ. ಆಕೆ ಹೇಳುವ ಮಾತುಗಳಲ್ಲಿ ನಿಷ್ಠುರತೆಯಿದೆ, ಸತ್ಯವಿದೆ, ಸದು ವಿನಯವಿದೆ. ಮುಕ್ತಾಯಕ್ಕನಂತಹ ಶಿವಶರಣೆಯರ ವಚನಗಳು, ಬರಹಗಳು ಕೇವಲ "ಸಾಹಿತ್ಯಕ್ಕಾಗಿ ಸಾಹಿತ್ಯ" ಎಂದಿರದೆ, ಬದುಕಿಗಾಗಿ ಸಾಹಿತ್ಯವೆಂಬ ಧೋರಣೆಯನ್ನು ಹೊಂದಿವೆ. ಕೆಲವೇ ವಚನಗಳನ್ನು ಮುಕ್ತಾಯಕ್ಕ ರಚಿಸಿದ್ದರೂ ಒಂದೊಂದು ವಚನವು ಒಂದೊಂದು ಸಿದ್ಧಾಂತವನ್ನು ಹೇಳುತ್ತದೆ.
ವಿಜಯಶ್ರೀ ಸಬರದ
9845824834
ಮುಂದುವರೆಯುವುದು....
ಈ ಅಂಕಣದ ಹಿಂದಿನ ಬರೆಹಗಳು:
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ
ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು
"ಈ ಕಥೆಯ ಒಳತಿರುಳುಗಳನ್ನು ಅರ್ಥೈಸುತ್ತಾ ಸಾಗಿದಂತೆ ಒಂದಿಷ್ಟು ವೈರುಧ್ಯ ವ್ಯಂಗ್ಯ ವಿಡಂಬನೆ ನಮಗೆ ಕಾಣುತ್ತದೆ. ಜಿ...
"ತಾಯ್ಮಾತಿನಲ್ಲಿ ಶಿಕ್ಶಣವನ್ನು ಕೊಡುತ್ತಿರುವ ಚೀನಾ, ಜಪಾನ್, ಕೊರಿಯಾ ಮೊದಲಾದ ದೇಶಗಳ ರ‍್ತಿಕ ಪ್ರಗತಿಯನ್ನು ...
"ಈ ಕಥೆಯನ್ನು ಬಹುಶಃ ಇಡೀಯಾಗಿ ಓದಿದಾಗ, ಬಿಡಿಯಾಗಿ ನಿವೇದಿಸಿಕೊಂಡಾಗ ಹೆಣ್ಣಿನ ಆಂತರ್ಯದಲ್ಲಿ ಅಡಗಿದ ನೋವಿನ ತ...
©2025 Book Brahma Private Limited.