ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ 

Date: 24-06-2022

Location: ಬೆಂಗಳೂರು


ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ಮಾತಾಡುವುದೇ ನಿಜವಾದ ರಾಜಕೀಯ ಪ್ರಜ್ಞೆ ಅಲ್ಲ. ಎಲ್ಲ ಪಕ್ಷಗಳಲ್ಲೂ ಕೊಳಕು ಕಾರ್ಯಕರ್ತರು, ರಾಜಕಾರಣಿಗಳಿದ್ದಾರೆ. ಆದರೆ ತಾನು ಕೆಟ್ಟ ಕಮ್ಯುನಿಷ್ಟರ ಜತೆಗಿಲ್ಲ ಎನ್ನುವ ದೊಡ್ಡ ಸಮಾಧಾನ ಮೀನಾಕ್ಷಿಯವರದು ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು, ನಿವೃತ್ತಿ ಹೊಂದುತ್ತಿರುವ ಕಲಬುರ್ಗಿಯ ವಿ. ಜಿ. ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ ಅವರ ಬದುಕು, ಬರಹ ಮತ್ತು ಹೋರಾಟಗಳ ಬಗ್ಗೆ ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಬರೆದಿದ್ದಾರೆ.

ಕಲಬುರ್ಗಿಯ ವಿ. ಜಿ. ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ಬಾಳಿ ವಯೋನಿವೃತ್ತಿ ಹೊಂದುತ್ತಿದ್ದಾರೆ. ಸರಕಾರದ ಶಿಷ್ಟಾಚಾರ ಬಂಧನಗಳಿಂದ ಬಿಡುಗಡೆಯಾದ ಸಣ್ಣದೊಂದು ಸಮಾಧಾನ. ಏನೋ ಹಳಾರ. ತನ್ಮೂಲಕ ಇನ್ಮುಂದೆ ಅವರು ಸಂಪೂರ್ಣ ಸ್ವಾತಂತ್ರ್ಯ ಪಡೆಯುತ್ತಿದ್ದಾರೆ. ಅಷ್ಟಕ್ಕೂ ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾವತ್ತೂ ಅದುಮಿಟ್ಟವರಲ್ಲ ಮತ್ತು ಅಡವಿಟ್ಟವರಲ್ಲ. ಜನಪರ ಮತ್ತು ಜೀವಪರ ಮಾತುಗಳ ಹಕ್ಕಿನ ಒಡೆತನಗಳನ್ನು ಅವರು ಸದಾ ರಿಜರ್ವ್ ಆಗಿಯೇ ಇಟ್ಟುಕೊಂಡವರು. ಹಾಗೆ ಕಾದಿರಿಸಿಕೊಳ್ಳುವ ಮನೋಧರ್ಮ ಅಷ್ಟು ಸುಲಭದ್ದಲ್ಲ.

ತತ್ರಾಪಿ ಟ್ಯುಟೋರಿಯಲ್ ಶಾಲೆಯ ಮಾಸ್ತರರೇ ಡೌಲು, ಆಡಂಬರಗಳನ್ನೇ ಮೆರೆಯುವ ಈಗಿನ ಕಾಲದಲ್ಲಿ ರಾಜ್ಯಮಟ್ಟದ ಅದೂ ಪ್ರಗತಿಪರ ವಿದ್ವಾಂಸರ ವಲಯದಲ್ಲಿ ಖ್ಯಾತನಾಮರಾದ ಪ್ರಾಧ್ಯಾಪಕಿ ಬಾಳಿ ಮೇಡಂ ಎಷ್ಟೊಂದು ಸರಳ ಎನ್ನುವ ಸೋಜಿಗ ಎಲ್ಲರಲ್ಲೂ. ಹೌದು, ಮೇಲು ನೋಟದಲಿ ಜವಾರಿತನವೇ ತುಂಬಿ ತುಳುಕುವ ಸರಳ ಸಾಧಾರಣದ ಹೆಣ್ಣುಮಗಳು. ಮಾತುಕತೆಗೆ ನಿಂತರೆ ಅಂತಃಶ್ರೋತಗೊಳ್ಳುವ ಬ್ರಹ್ಮಾಂಡದ ಜ್ಞಾನಭಂಡಾರ. ಚಳವಳಿಯ ಹೊಳೆಯನ್ನೇ ಹರಿಸಬಲ್ಲ ಹೋರಾಟದ ಗಂಭೀರ ಚಿಲುಮೆ. ಬಲಗೈಗೆ ಪುರುಷರ ವಾಚ್ ಕಟ್ಟಿಕೊಂಡ ಪ್ರಖರ ಭಾಷಣದ ವೈಖರಿಯೂ ಪೌರುಷಮಯವೇ. ಜೀವದೆದೆಯ ನಡುವೆ ಅವತರಿಸುವ ಆತ್ಮ ಹೆಣ್ಣೂಅಲ್ಲ, ಗಂಡೂ ಅಲ್ಲವೆಂಬಂತೆ ಗಟ್ಟಿಗೊಂಡ ಜೀವಧ್ವನಿ. ಅದುವೇ ಬಾಳಿ ಮೀನಾಕ್ಷಿ. ಜೀವ ಸಂವೇದನೆಗಳ ಮಹಾಮೊತ್ತ. ಪ್ರತಿಭಟನೆಯ ಗಟ್ಟಿಕೂಗು.

ಮಹಿಳಾಪರ ಚಿಂತನೆ, ಪ್ರಗತಿಪರ ಆಲೋಚನೆ, ವಚನ ಚಳವಳಿ, ತತ್ವಪದ ಚಳವಳಿ, ಕೋಮು ಸೌಹಾರ್ದತೆ ಹೀಗೆ ಜನಸಂಸ್ಕೃತಿ ಸಂದರ್ಭದ ಯಾವುದೇ ಸಭೆ ಸಮಾರಂಭಗಳಲ್ಲಿ ಬಾಳಿ ಮೀನಾಕ್ಷಿ ಮಾತುಗಳಿಗೆ ಎಲ್ಲಿಲ್ಲದ ಬೇಡಿಕೆ ಮತ್ತು ಮಹತ್ತು. ಕೊಂಚವೇನು ಬಂತು ಮೈ ಮನಗಳ ತುಂಬಾ ಬರೋಬ್ಬರಿ ಅಗ್ರೆಸ್ಸಿವ್ನೆಸ್ ತುಂಬಿ ತುಳುಕುವ ವಜ್ರದ ಜಲಪಾತ. ಧಡಲ್ಬಾಜಿ ಹೊಡೆದಂತಹ ಅವರ ಭಾಷಣದ ಛಾತಿ ಮತ್ತು ಖ್ಯಾತಿ. ಎರಡರಲ್ಲೂ ಕಾಯ್ದಿರಿಸಿಕೊಂಡ ವಿವೇಕದ ಮೇಲ್ಪಂಕ್ತಿ. ಅದು ಬೀದರ ಕಲಬುರ್ಗಿ ಮಾತ್ರವಲ್ಲ‌, ಕೋಲಾರ, ಬೆಂಗಳೂರು, ಮಂಗಳೂರು, ಮೈಸೂರು ಹೀಗೆ ಊರು ಯಾವುದೇ ಆಗಿರಲಿ ಮೀನಾಕ್ಷಿಯ ಅಸ್ಖಲಿತ ವಾಗ್ಝರಿಗೆ ಮಾರು ಹೋಗದವರೇ ಇಲ್ಲ. ಮಠ ಪೀಠಗಳ ವೇದಿಕೆಗಳಲ್ಲೂ ವೈಚಾರಿಕ ನಿಲುವಿನ ಸ್ಪಷ್ಟತೆ. ದೇಹಭಾಷೆಯ ಪ್ರಬುದ್ಧ ವೈಖರಿಗೆ ಕಿಂಚಿತ್ತೂ ಹಿಂಜರಿಕೆಯೇ ಇಲ್ಲ. ಅಂತೆಯೇ ಕೆಲವು ಮಠಾಧೀಶರಿಗೆ ಬಾಳಿ ಮೇಡಂ ಅಂದರೆ ಅಪ್ರಸ್ತುತ ಭಯ. ಗಂಟಲಲಿ ಸಿಗಿಬೀಳುವ ಗಂಭೀರ ತುತ್ತು. ನುಂಗಲಾಗದ ಮತ್ತು ಉಗುಳಲಾಗದ ಸಂದಿಗ್ಧತೆ.

ನಮ್ಮೂರು ಕಡಕೋಳ ಮಡಿವಾಳಪ್ಪನ ಜಾತ್ರೆಯಲ್ಲಿ ಕಜ್ಜಭಜ್ಜಿಯದು ವಿಶೇಷ. ಜಾತ್ರೆಯ ಖಾಂಡದ ರಾತ್ರಿ ಮತ್ತೊಂದು ವಿಶೇಷವೆಂದರೆ ಮೀನಾಕ್ಷಿಯ ಓತಪ್ರೋತ ಭಾಷಣ. ಮಡಿವಾಳಪ್ಪನ ಎಲ್ಲಾ ತತ್ವಪದಗಳು ಮೀನಾಕ್ಷಿಯ ಸ್ಮೃತಿ ಪಟಲದಲ್ಲಿ ನೆಲೆನಿಂತಿವೆ. ಅಂತೆಯೇ ಮಾತಿಗೊಂದು ಪದದ ಉಲ್ಲೇಖ. ಜಾತ್ರೆಯ ಕೊರೆವ ಡಿಸೆಂಬರ್ ಥಂಡಿಯಲ್ಲು ಬಾಳಿ ಮೀನಾಕ್ಷಿ ಮಾತುಗಳ ಬಿಸಿ ಮೈ ಚಳಿ ಬಿಡಿಸುವಂತಿರುತ್ತದೆ. ಇನ್ನೇನು ತಾನು ನಿವೃತ್ತಿ ಹೊಂದಲು ಒಂದೇ ಒಂದುವಾರ ಬಾಕಿ ಇರುವಾಗ "ಎಲ್ಲೀದು ಕಿರಿಕಿರಿ ಸುಮ್ಮನಿದ್ರಾಯಿತು" ಎಂದುಕೊಂಡ ಜೀವ ಅದಲ್ಲ. ಕಲಬುರ್ಗಿಯಲ್ಲಿ ಜರುಗಿದ ಪಠ್ಯಪುಸ್ತಕ ಮರು ಪರಿಷ್ಕರಣೆ ವಿವಾದದ ಕರ್ನಾಟಕ ಅಸ್ಮಿತೆ ಆಂದೋಲನದ ಆಹೋರಾತ್ರಿ ಸಭೆಯಲ್ಲಿ ಧುಮ್ಮಿಕ್ಕಿ ಹರಿದ ಧೀರೋದಾತ್ತ ಮಾತುಗಳ ಭೋರ್ಗರೆತ. ಅಂತರಂಗ ಸತಾಯಿಸದ ಹೊರತು ಬಾಳಿ ಮೀನಾಕ್ಷಿಯ ಬಳಿ ಮಾತು ಸುಳಿಯಲಾರವು. ಸರಕಾರದ ಶೈಕ್ಷಣಿಕ ಅನ್ಯಾಯಗಳನ್ನು ಯಾವುದೇ ಭಿಡೆ, ಮುಲಾಜು, ಮುರವತ್ತುಗಳ ಲೆಕ್ಕ ಹಾಕದೇ ಸತ್ಯಾಸತ್ಯತೆಗಳನ್ನು ಎತ್ತಿ ತೋರಿಸಿದರು. ಅದು ನ್ಯಾಯ ನಿಷ್ಠುರ ಶರಣನಡೆಯ ಜಾಯಮಾನ.

ನಾನು, ಬಾಳಿ ಮೀನಾಕ್ಷಿ, ಮಹಾಂತಪುರ ಶಿವಪುತ್ರಪ್ಪ, ಶಿವರಾಜ ಪಾಟೀಲ ಈ ನಾಲ್ವರು ನಾವು ಮಹಾಂತ ಮಡಿವಾಳರ ಮಠದಂಗಳದಲಿ ಆಡಿ ಬೆಳೆದವರು. ಹಾಗೆ ನೋಡಿದರೆ ನಮ್ಮ ನಾಲ್ವರಲ್ಲಿ ಮೀನಾಕ್ಷಿ ಮನೆಕಡೆಗೆ ಅನುಕೂಲಸ್ಥರು. ಉಳಿದ ನಮಗೆಲ್ಲ ಉಂಡುಡಲು ಇದ್ದುದು ಯಥೇಚ್ಛ ಬಡತನ. ಅದರಲ್ಲೂ ಗಡಿನಾಡಿನ ಕುಲಾಲಿಯ ಅಂದಿನ ಹುಡುಗ ಶಿವರಾಯನದು ಕಡು ಬಡತನ. ಪಾಪದ ಹುಡುಗನ ಕನಿಕರದ ಕತೆಯಂತಿದ್ದ. ಸಿದ್ಧಾಂತ ಶಿಖಾಮಣಿ ಓದಿಕೊಂಡಿದ್ದ ಹಿರೀಕ ಶಿವಪುತ್ರಪ್ಪ ನಮಗೆಲ್ಲ ಗುರುಸ್ವರೂಪಿ. ಇಂತಹ ನಮ್ಮ ಒಡನಾಟಕ್ಕೆ ಇದೀಗ ಏನಿಲ್ಲವೆಂದರೂ ನಲವತ್ತೈದು ವರ್ಷಗಳ ಪರಿಪಕ್ವ ಪ್ರಾಯ.

ಚಿಣಮಗೇರಿ ಗುಡ್ಡದ ಮಠದಲ್ಲಿ ಸಿದ್ಧರಾಮ ಶಿವಾಚಾರ್ಯರ ಸಮ್ಮುಖ. ಭೋಜರಾಜ ಗವಾಯಿ, ಚೆನ್ನವೀರ ಗವಾಯಿಗಳ ತತ್ವಗಾಯನದ ಘಮಲು. ಇತ್ತ ಕಡಕೋಳ ಮಠದಲ್ಲಿ ವೀರೇಶ್ವರ ದೇವರು ಸಮಕ್ಷಮ. ಮಹಾಂತಪ್ಪ ಸಾಧು, ಶಿವಣ್ಣ ಸಾಧು, ಮಳ್ಳಿ ಗುರವ್ವ, ಇಮಾಮಸಾಬ ಇಂತಹ ಹತ್ತಾರು ಮಂದಿ ಮಡಿವಾಳಪ್ಪನ ಪರಂಪರೆಯ ಹಿರೇಹಳ್ಳದಲ್ಲಿ ಮಿಂದೆದ್ದು ಬಂದವರು. ಕಡಕೋಳ ಎಂಬುದು ತತ್ವಪದಗಳ ಟಂಕಸಾಲಿ. ಬೆವರು ಮತ್ತು ಭಕ್ತಿ ಪರಂಪರೆಯ ಅವರು ಮಡಿವಾಳಪ್ಪನ ಪದಗಳನ್ನು ಪೊರೆದವರು. ಅವರು ಏಕತಾರಿ, ದಮ್ಮಡಿ, ಚಳ್ಳಮಗಳ ಶೃತಿಗಳಲಿ ಹಾಡುತ್ತಿದ್ದ ಅಂತಃಕರಣ ಕಲಕುವ ಪದಗಳು ಸಹಜವಾಗಿ ನಮ್ಮೊಳಗೆ ನಾದೋನ್ಮಾದದ ಗೂಡುಗಟ್ಟಿದವು. ಎಷ್ಟಾದರೂ ಅವು ಹುಸಿಹೋಗದ ಮಡಿವಾಳ ಪ್ರಭುವಿನ ಹಸನಾದ ಪದಗಳು. ಅವನ್ನು ತದೇಕ ಚಿತ್ತದಿಂದ ಆಲಿಸುವ ತನ್ಮಯತೆಯ ವಾತಾವರಣ ದಕ್ಕಿತೆಂಬುದೇ ಆ ಕಾಲದ ನಮ್ಮ ಪುಣ್ಯವೇ ಹೌದು.

ಬಾಲ್ಯದಿಂದಲೇ ಮಡಿವಾಳಪ್ಪನ ಪದಗಳ ಒಳ ಆಳದ ಸೂಕ್ಷ್ಮತೆ ಗ್ರಹಿಸುವ ಶಕ್ತಿಯನ್ನು ಮೀನಾಕ್ಷಿ ಹೊಂದಿದ್ದಳು. ಅವರ ತಾಯಿ ಕಲಾವತಿಯವರ ತವರುಮನೆ ಕಲಬುರ್ಗಿಯ ಮಂಗಶೆಟ್ಟಿಯವರ ಸಾತ್ವಿಕ ಮನೆತನ. ಅದು ಚಿಣಮಗೇರಿ ಮಹಾಂತೇಶ್ವರ ಮಠದ ಪರಮಭಕ್ತರ ಮನೆತನ. ಹೀಗಾಗಿ ಮೀನಾಕ್ಷಿಗೆ ಶರಣ ಸಂಪ್ರದಾಯಗಳು, ಲಿಂಗಾಯತ ಧರ್ಮ ಪರಂಪರೆಗಳ ಸಹಜ ಪರಿಚಯ.

ಕರ್ಪೂರ, ಊದಕಡ್ಡಿಗಳನ್ನು ಸುಡುವ ಮಠದ ಪರಿಸರದಲ್ಲಿ ಸಿಗರೇಟ್, ಬೀಡಿ ಚುಟ್ಟಾಗಳನ್ನು ಸುಡುತ್ತಿದ್ದೀರೆಂಬ ಪ್ರತಿರೋಧದ ಮಾತುಗಳು ಬಾಲಕಿ ಮೀನಾಕ್ಷಿಯ ಭಾಷಣದ ತಿರುಳಾಗಿದ್ದವು. ಅವು ಹರಿಗಡಿಯದೇ ಮುನ್ನಡೆದು ಇವತ್ತಿನ ಪ್ರಾಜ್ಞೆ ಡಾ. ಮೀನಾಕ್ಷಿ ಬಾಳಿ ತನಕ ತಂದು ನಿಲ್ಲಿಸಿದೆ. ಅಪ್ಪ ಬಾಳಿ ಸಿದ್ದಪ್ಪ ಅಪ್ಪಟ ಜವಾರಿ ಬದುಕನ್ನೇ ಬಾಳಿ ಬದುಕಿದವರು. ಬಾಳಿ ಸಿದ್ದಪ್ಪ ಮತ್ತು ಪ್ರೊ. ಎಂ‌. ಎಂ. ಕಲಬುರ್ಗಿ ಇಬ್ಬರೂ ಕೂಡಿ ಸಾಲಿ ಕಲಿತವರು. ಶಾಲೆಯ ವಾರಗೆ ಗೆಣೆಕಾರರು. ಅಂತಹದ್ದೊಂದು ಸ್ನೇಹಶೀಲ ಸಂಪನ್ನತೆಯೇ "ಕಡಕೋಳ ಮಡಿವಾಳಪ್ಪ ಮತ್ತು ಅವರ ಶಿಷ್ಯರು " ಕುರಿತು ಮೀನಾಕ್ಷಿ ಸಂಶೋಧನೆಗೆ ಇಂಬು ದೊರಕಿಸಿತು. ಡಾ. ಎಂ. ಎಸ್. ಲಠ್ಠೆ ಇತ್ತ ಕಲಬುರ್ಗಿಯಲ್ಲಿದ್ದರೆ ಅತ್ತ ಧಾರವಾಡದಲ್ಲಿ ಎಂ. ಎಂ. ಕಲಬುರ್ಗಿಯವರು.

ಗೆಳೆಯ ಬಾಳಿ ಸಿದ್ದಪ್ಪನ ಮಗಳು ಕಡಕೋಳ ಮಡಿವಾಳಪ್ಪ ಮತ್ತು ಅವನ ತತ್ವಪದಗಳ ಕುರಿತು, ಶಿಷ್ಯರ ಕುರಿತು ಸಂಶೋಧನೆ ಮಾಡಬೇಕೆಂಬ ಸದಾಶಯ ಕಲಬುರ್ಗಿಯವರಿಗೆ. ವಾಸ್ತವವಾಗಿ ಪಕ್ಕದ ಸಿಂದಗಿ ತಾಲೂಕಿನ ಮೀನಾಕ್ಷಿಯ ಹುಟ್ಟೂರು ದೇವಣಗಾಂವ. ಅದು ಕಡಕೋಳಕ್ಕೆ ಬಹಳ ದೂರವೇನಲ್ಲ. ಭೀಮಾತೀರದ ಅನುಭಾವ ಚಿಂತನದ ತವರು ಮನೆಗಳು. ನಮ್ಮದು ಮೊಗಲಾಯಿ ನೆಲ. ಅವರದು ಆಂಗ್ಲರ ಅಧಿಪತ್ಯಕ್ಕೊಳಗಾಗಿದ್ದ ಬುದ್ದಿವಂತರ ನಾಡು. ಮೀನಾಕ್ಷಿಯ ಸಂಶೋಧನಾ ಮಹಾ ಪ್ರಬಂಧದ ಸಿಂಹಪಾಲು ಶ್ರೇಯಸ್ಸು ಅಪ್ಪ ಸಿದ್ಧಪ್ಪ ಬಾಳಿ ಅವರಿಗೆ ಸಲ್ಲಬೇಕು. ಶಿಸ್ತು ಬದ್ಧತೆಯಿಂದ ಮಗಳೊಂದಿಗೆ ಹತ್ತಾರು ವರ್ಷಗಳ ಕಾಲ ಹತ್ತಾರು ಊರುಗಳನ್ನು ಸುತ್ತಿದವರು ಸಿದ್ದಪ್ಪ.

ಸಿದ್ದಪ್ಪ ಬಾಳಿ ಮೆಡಿಕಲ್ ದುಕಾನ ಕಾಯಕವನ್ನೇ ಕೈ ಬಿಟ್ಟು ಮಗಳ ಪಿಎಚ್. ಡಿ. ಕೆಲಸ ಕಾರ್ಯಗಳಿಗೆ‌ ತಮ್ಮ ಮುಪ್ಪನ್ನೇ ಮುಡಿಪಿಟ್ಟರು. ಮಗಳಿಗೆ ಪಿಎಚ್. ಡಿ. ಅವಾರ್ಡ್ ಆದಾಗ ಅಪ್ಪ ಸಿದ್ದಪ್ಪನವರಿಗಾದ ಆನಂದ ಅಷ್ಟಿಷ್ಟಲ್ಲ. ಅದು ಮಹಾಂತನ ಗುಡ್ಡದಷ್ಟು. ಮಡಿವಾಳತನದ ದಿವ್ಯ ಸಂಕಲ್ಪ ಈಡೇರಿದ ದಿವಿನಾದ ಸಂತಸ. ಅಸಮ ಮಹಾಂತನ ಖುಷಿಯ ಉಮೇದು. ಮಡಿವಾಳಪ್ಪನ ಬದುಕು, ಸಾಧನೆ, ಹೋರಾಟದ ಅಧ್ಯಯನಗಳ ಭರಾಟೆ ಮತ್ತು ವ್ಯವಸ್ಥೆಯ ವಿರುದ್ಧದ ಹೋರಾಟದ ಮಧ್ಯ , ತಮ್ಮ ತಂಗಿಯರ ಬದುಕು ಕಟ್ಟಿ ಕೊಡುವ ಭರದಲ್ಲಿ ಮೀನಾಕ್ಷಿ ತಾನು ಮದುವೆ ಆಗುವುದನ್ನೇ ಮರೆತು ಬಿಟ್ಟರೇನೋ.?

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ ಸಮಗ್ರ ತತ್ವಪದಗಳ ಸಂಗ್ರಹ ಕಾರ್ಯದ ಹಿಂದೆ ಮೀನಾಕ್ಷಿ ಬಾಳಿ ಅವರ ಅನನ್ಯವಾದ ಪರಿಶ್ರಮವಿದೆ‌. ಕಡಕೋಳ ಮಡಿವಾಳಪ್ಪನ ಕುರಿತು ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಾಶನಕ್ಕೆ ಮಹತ್ವದ ಕೃತಿ ರಚಿಸಿದ್ದಾರೆ. ಇತ್ತೀಚೆಗೆ ಕಡಕೋಳ ಮಡಿವಾಳಪ್ಪ ಮತ್ತು ಖೈನೂರು ಕೃಷ್ಣಪ್ಪನ ಕುರಿತು ನಾಟಕ ಪ್ರಕಟಿಸಿದ್ದಾರೆ. ಅವು ರಂಗಪ್ರಯೋಗಕ್ಕೆ ಸಿದ್ಧಗೊಳ್ಳಬೇಕಿದೆ. ಇದಲ್ಲದೇ ಅವರು ಹದಿನೆಂಟು ಮಹತ್ವದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅನೇಕ ಸಂಶೋಧಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಹತ್ತಾರು ಸಂಘ ಸಂಸ್ಥೆಗಳ ಪ್ರಮುಖ ಪ್ರಶಸ್ತಿಗಳು ಇವರ ಮುಡಿಗೇರಿವೆ.

ತನ್ನನ್ನು ಎಡಪಂಥೀಯ ರಾಜಕೀಯ ಸಾಹಚರ್ಯದೊಳಗೆ ಗುರುತಿಸಿಕೊಂಡ ಕಾಲದಿಂದ ಕೆಲವರ ಮನದೊಳಗೆ ಅದೇನೋ ಹೇಳಲಾಗದ ಮತ್ತು ಹೇಳದಿರಲಾಗದ ಮುಜುಗರ. ಎಡಬಲಗಳ ಎರಡಿರದ ಜನಪಂಥೀಯ ಮೀನಾಕ್ಷಿಯೇ ತಮಗೆ ತುಂಬಾ ಇಷ್ಟ ಎನ್ನುವ ಅನೇಕರಿದ್ದಾರೆ. ಅದು ಜನಮಾನಸದ ಲೋಕಮೀಮಾಂಸೆ. ಅದನ್ನು ಅನೇಕ ಹಿರಿಯರು ನನ್ನೆದುರು ಮತ್ತು ಅನೇಕ ಸಂದರ್ಭಗಳಲ್ಲಿ ಮಾತಾಡಿಕೊಳ್ಳುತ್ತಾರೆ. ಇವೆಲ್ಲಕ್ಕೂ ಅವರ ಬಳಿ ಉತ್ತರಗಳಿವೆ. ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ಮಾತಾಡುವುದೇ ನಿಜವಾದ ರಾಜಕೀಯ ಪ್ರಜ್ಞೆ ಅಲ್ಲ. ಎಲ್ಲ ಪಕ್ಷಗಳಲ್ಲೂ ಕೊಳಕು ಕಾರ್ಯಕರ್ತರು, ರಾಜಕಾರಣಿಗಳಿದ್ದಾರೆ. ಆದರೆ ತಾನು ಕೆಟ್ಟ ಕಮ್ಯುನಿಷ್ಟರ ಜತೆಗಿಲ್ಲ ಎನ್ನುವ ದೊಡ್ಡ ಸಮಾಧಾನ ಅವರದು. ಅದನ್ನವರು ಮುಕ್ತವಾಗಿ ಹೇಳಿಕೊಳ್ಳುತ್ತಾರೆ.

ನಾಳೆ ಜೂನ್ 26ರಂದು ಕಲಬುರ್ಗಿಯಲ್ಲಿ ಮೀನಾಕ್ಷಿ ಬಾಳಿ ಅಭಿಮಾನಿ, ಬಂಧುಬಳಗ ವಾತ್ಸಲ್ಯದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದೆ. ವಯೋನಿವೃತ್ತಿ ಹೊಂದುತ್ತಿರುವ ಅವರಿಗೆ ಸಹಸ್ರಾರು ಮಕ್ಕಳಲ್ಲಿ ತಾನು ವೈಚಾರಿಕ ಪ್ರಜ್ಞೆ ಹಂಚಿದ ಖುಷಿ. ನಮ್ಮ ನಡುವಿನ ಸಂಸ್ಕೃತಿ ಚಿಂತಕ ನಟರಾಜ ಬೂದಾಳು ಮತ್ತು ಜನವಾದಿ ಮಹಿಳಾ ಸಂಘಟನೆಯ ಕೆ. ಎಸ್. ವಿಮಲಾ ಮೀನಾಕ್ಷಿ ಬಾಳಿ ಬದುಕು ಸಾಧನೆಗಳ ಹಾದಿ ಕುರಿತು ಮೆಲುಕು ಹಾಕುವರು. ಮೀನಾಕ್ಷಿ ಬಾಳಿ ನೂರ್ಕಾಲ ಬಾಳಲಿ.

ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...