Date: 15-09-2023
Location: ಬೆಂಗಳೂರು
“ಜಗತ್ತನ್ನು ನೋಡುವ ಆ ಹರೆಯ ಗೊಂದಲ, ರೋಮಾಂಚನ, ತಳಮಳ, ಕುತೂಹಲ, ಮೋಹ, ಕಾಮ, ಪ್ರೇಮದ ಸಂಘರ್ಷವನ್ನು ಒಳಗೊಂಡಿರುವಂತದ್ದು. ಈ ಸ್ಥಿತಿಯ ಬಹು ನೆಲೆಗಳು ಕಾವ್ಯದಲ್ಲಿ ಅನಾವರಣಗೊಳ್ಳುತ್ತದೆ. ತನ್ನೊಳಗಿನ ಬಂಧನದಿಂದ ಮುಕ್ತಿ ಪಡೆದು ಹೊಸ ಬದುಕಿಗೆ ತುಡಿಯುವ ಮನಸ್ಸನ್ನು ಸಿದ್ದಗೊಳಿಸಬೇಕು,” ಎನ್ನುತ್ತಾರೆ ಲೇಖಕ ರಾಜಶೇಖರ ಹಳೆಮನೆ. ಅವರು ತಮ್ಮ ‘ಓಂದಿನ ಹಂಗು’ ಹೊಸ ಅಂಕಣದಲ್ಲಿ ‘ಲಂಕೇಶರ ಕವಿತೆಗಳು’ ಕುರಿತು ವಿವರಿಸಿದ್ದಾರೆ.
ಕನ್ನಡ ನಾಡಿನಲ್ಲಿ ತಮ್ಮ ನಿರ್ಭಿಡೆ ಬರವಣಿಗೆ ಮತ್ತು ಪತ್ರಿಕೆ ಮೂಲಕ ಅರಿವಿನ ಆಂದೋಲನ ಮೂಡಿಸಿದವರು ಲಂಕೇಶ. ಸಮಾಜವಾದಿ ಸೈದ್ಧಾಂತಿಕತೆಯ ಮೂಲಕ ನಾಡಿನ ಮುನ್ನೋಟವನ್ನು ರೂಪಿಸಿದವರು. ಮನುಷ್ಯನ ಸಂಕೀರ್ಣತೆಯನ್ನು ಸೂಕ್ಷ್ಮವಾಗಿ ಶೋಧಿಸುವುದರ ಮೂಲಕ ಮಾನವ ಬದುಕಿನ ಘನತೆಯನ್ನು ಎತ್ತಿ ಹಿಡಿದವರು. ಅಂಚಿನ ಹಲವು ಧ್ವನಿಗಳಿಗೆ ಪತ್ರಿಕೆಯ ಮೂಲಕ ಅವಕಾಶವನ್ನು ಕಲ್ಪಿಸಿ ಬಹುತ್ವದ ಆಯಾಮಗಳನ್ನು ಕಾಪಿಟ್ಟುಕೊಂಡು ಬಂದವರು. ಸಾಮಾಜಿಕ ಚರಿತ್ರೆಯ ಕರಾಳತೆಯನ್ನು ಅಗಿಯುತ್ತಾ, ಪರ್ಯಾಯ ಸಾಂಸ್ಕೃತಿಕ ಅರಿವನ್ನು ನಾಡಿನಲ್ಲಿ ಶೋಧಿಸಿದವರು. ಸದಾ ಹೊಸ ಪ್ರಯೋಗಳಿಗೆ ಒಡ್ಡಿಕೊಳ್ಳುತ್ತಿದ್ದ ಲಂಕೇಶರು ನೈತಿಕ ನಿಲುವಿನಲ್ಲಿ ಸಮಾಜವನ್ನು ನೋಡುವವರು. ಧಾರ್ಮಿಕ ಕಂದಾಚಾರ, ರಾಜಕೀಯ ಬ್ರಷ್ಟಾಚಾರ, ಮೌಢ್ಯತೆ ಅವೈಜ್ಞಾನಿಕತೆಯ ಚಾರಿತ್ರಿಕ ಸಂಗತಿಗಳನ್ನು ನಿಕಷಕ್ಕೊಡ್ಡಿದವರು. ಇವುಗಳಿಂದ ಬಿಡುಗಡೆಯಾಗುವ ದಾರಿಗಳನ್ನು ತೋರಿಸುವ ಪ್ರಜ್ಞೆಯನ್ನು ತಮ್ಮ ಬರಹದ ಮೂಲಕ ನಾಡಿನಲ್ಲಿ ಬೆಳೆಸಿದವರು. ಒಂದು ವಿಶ್ವವಿದ್ಯಾಲಯದಂತೆ ನಾಡಿನ ಜಾತ್ಯಾತೀತ ಪ್ರತಿಭೆಗಳಿಗೆ ನೀರೆರೆದು ಪೋಷಿಸಿದವರು. ನಿಷ್ಠುರತೆ, ನ್ಯಾಯವಂತಿಕೆಯನ್ನು ನಂಬಿದ ಲಂಕೇಶರು ಅದರ ವೈರುಧ್ಯ ಮತ್ತು ಸಂಘರ್ಷವನ್ನು ನೈತಿಕ ನೆಲೆಯಲ್ಲಿ ಕಟ್ಟಿಕೊಟ್ಟವರು. ಅವರೊಂದು ಮಾದರಿಯಾಗಿ ನಾಡಿನ ಜನಾಂಗವನ್ನು ಸಾಂಸ್ಕೃತಿಕವಾಗಿ ಪ್ರಭಾವಿಸಿದವರು.
ಅವರ ಕಾವ್ಯವು ಮನುಷ್ಯನಾಳದ ಸಂಗತಿಗಳ ಜೊತೆಗೆ ಮುಖಾಮುಖಿಯಾಗುತ್ತದೆ. ಮನುಷ್ಯನಾಳದ ಸಂಗತಿಗಳು ಕೂಡ ಸಾಮಾಜಿಕ ನೆಲೆಯಲ್ಲಿ ಪ್ರಭಾವಕ್ಕೊಳಗಾಗುತ್ತವೆ. ಅವುಗಳ ಸಂಯೋಗ ಮತ್ತು ವೈರುಧ್ಯಗಳ ಸಾಧ್ಯತೆಯನ್ನು ಇವರ ಕಾವ್ಯ ಶೋಧಿಸುತ್ತದೆ. ಅವರ ಗದ್ಯ ಬರಹಗಳಿಗೆ ಹೋಲಿಸಿದರೆ ಕಾವ್ಯ ರಚನೆ ಕಡಿಮೆ.
ಕಾವ್ಯವು ಯೌವ್ವನದ ದಂದುಗದಿಂದ ಆರಂಭವಾಗುತ್ತದೆ. ಜಗತ್ತನ್ನು ನೋಡುವ ಆ ಹರೆಯ ಗೊಂದಲ, ರೋಮಾಂಚನ, ತಳಮಳ, ಕುತೂಹಲ, ಮೋಹ, ಕಾಮ, ಪ್ರೇಮದ ಸಂಘರ್ಷವನ್ನು ಒಳಗೊಂಡಿರುವಂತದ್ದು. ಈ ಸ್ಥಿತಿಯ ಬಹು ನೆಲೆಗಳು ಕಾವ್ಯದಲ್ಲಿ ಅನಾವರಣಗೊಳ್ಳುತ್ತದೆ. ತನ್ನೊಳಗಿನ ಬಂಧನದಿಂದ ಮುಕ್ತಿ ಪಡೆದು ಹೊಸ ಬದುಕಿಗೆ ತುಡಿಯುವ ಮನಸ್ಸನ್ನು ಸಿದ್ದಗೊಳಿಸಬೇಕು. ಆದ್ದರಿಂದ ಬಿಚ್ಚು ಕವಿತೆ ಬದುಕಿನ ಸ್ಥಿತಿಯನ್ನು ಹೇಳುತ್ತಲೇ ಅದರಿಂದ ಬಿಡುಗಡೆಯಾಗುವ ದಾರಿಯನ್ನು ತೋರಿಸುತ್ತದೆ.
ಹೊಸ ಸ್ಕೂಲಿಗೆ ಹೋಗು, ಬುಕ್ಕುಗಳ ಇಟ್ಟುಕೋ
ಕೂತುಕೋ
ಬಿಚ್ಚುವುದ ಕಲಿತುಕೋ
ಗೊಂದಲ ಸಾಕು. ಕ್ರಾಪು ತಿದ್ದಕೋ, ಬೆವರೊರಿಸಿಕೋ
ನೆನಸಿಕೊ: ಹಠಾತ್ತನೇ ಬಿದ್ದು, ಗದ್ದಲ ಮಾಡಿದ್ದನ್ನು
ಬಿಚ್ಚಿ ಬಂದದ್ದನ್ನು
ಭ್ರಮೆ, ಸಂಭ್ರಮಗೋಳಿಸಿದ್ದನ್ನು ಜ್ಞಾಪಕದಲ್ಲಿಟ್ಟುಕೋ
ಎಂದು ಯೌವ್ವನದ ಸಂಗತಿಯನ್ನು ಹೇಳುತ್ತಲೇ ಅದರ ರೀತಿ ಏನಾಗಬೇಕೆಂಬುದನ್ನು ಚಿಂತಿಸುತ್ತಾರೆ.
ಕನಸಿನೊಂದಿಗೆ ಸಾಗುವ ಈ ಸಮಯ ಅದರಲ್ಲಿಯೆ ಜಾರಿ ಹೋದರೆ ಅದರಿಂದ ಯಾವುದೆ ಪ್ರಯೋಜನವಿಲ್ಲ. ಅದು ಒಂದು ನಿಶ್ಚಿತತೆಯನ್ನು ಪಡೆದುಕೊಂಡು ಹೊಸ ಆದರ್ಶವನ್ನು ಪಡೆಯಬೇಕು.
ಬಿಚ್ಚಿದರೆ ಬಿಚ್ಚಬೇಕಯ್ಯ ಋಷಿಗಳ ಹಾಗೆ ಸೂಕ್ಷ್ಮವಾಗಿ
ಚಕ್ರವರ್ತಿ ಚರಿತ್ರೆಯಲ್ಲಿ ಬಿಚ್ಚುವ ಹಾಗೆ ತೀವ್ರವಾಗಿ,
ಪಂಡಿತನ ಹಾಗೆ ಗಂಭೀರವಾಗಿ,
ಗಾಂಧೀಜಿಯ ಹಾಗೆ ಮೌನವಾಗಿ
ಅಲ್ಲ, ನಾಯಿಯ ಹಾಗೆ ನಿಧಾನವಾಗಿ
ಅಥವಾ ಹಕ್ಕಿಯ ಹಾಗೆ, ಮೋಡದ ಹಾಗೆ, ಮಿಂಚಿನ ಹಾಗೆ ಆಕಾಶದಲ್ಲಿ
ಮರದ ಹಾಗೆ, ಬಯಲಿನ ಹಾಗೆ ಚೈತ್ರದಲ್ಲಿ
ಎಂಬ ನಿಲುವಿಗೆ ಕವಿತೆ ಬರುತ್ತದೆ. ಜೀವನದ ಮೋಹದೊಂದಿಗೆ ಸಾಗುವ ಪ್ರೇಮ ಕಾಮದ ತೀವ್ರತೆಗಳು, ಅವುಗಳ ಅಭೀಪ್ಸೆಗಳು ಕೊನೆಗೆ ನಿಸರ್ಗ ಸಾತತ್ಯ ಹಾಗು ಚಿಂತನೆಯ ನೆಲೆಯಲ್ಲಿ ಮಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತದೆ.
ನಾನು ಬೇಕೆ ಎಂಬ ಕವಿತೆಯಲ್ಲಿ ಪ್ರೇಮದ ನವಿರುತನವನ್ನು ಹೇಳುತ್ತಲೆ ಅದು ಸಾಮಾಜಿಕ ನಿಯಮವನ್ನು ಮೀರುವ ಸಾಧ್ಯತೆಯನ್ನು ಕಂಡುಕೊಳ್ಳುವ ಚಿಂತನೆ ಮಾಡುತ್ತದೆ. ಸಹಜವಾಗಿ ಅರಳುವ ಪ್ರೇಮ ನಿಜದಲ್ಲಿ ಅರಳದೆ ಒತ್ತಾಯದ ಉರಿಯಲ್ಲಿ ಬೆಂದು ಹೊಗುತ್ತದೆ. ಆದರೆ
ಪ್ರೇಮದ ಕಾವು ಆರುವದಿಲ್ಲ. ಅದು ಒತ್ತಾಯದ ನಿಲುವನ್ನು ಮೀರಿ ಬಿಡುಗಡೆಯಾಗಬೇಕೆಂದು ಕವಿ ಬಯಸುತ್ತಾನೆ.
ನಾನು ಬೇಕೆ, ನಿನಗೆ ನಾನು ಬೇಕೆ?
ಲಂಗ ದಾವಣಿಯಲ್ಲಿ ಕುಣಿದು ಕುಪ್ಪಳಿಸುವಾಕೆ
ಕಾಲೇಜಿನ ಜಗುಲಿಯಲ್ಲಿ ತೆಳ್ಳಗೆ, ಬೆಳ್ಳಗೆ, ಕುಡಿ ಮೀಸೆ ನಡುವೆ
ನಗುವಾತನ ಕಣ್ಣಲ್ಲಿ ತಿನ್ನುವಾಕೆ
ಎನ್ನುವ ಕವಿ, ಈ ಮುಗ್ಧತೆಯನ್ನು ಕಳೆದುಕೊಂಡು ಒತ್ತಾಯಕ್ಕೀಡಾಗಿ ಪ್ರೇಮದಿಂದ ದೂರ ಹೋದರೂ ಆತನಲ್ಲಿ ಪ್ರೇಮದ ಸೆಲೆ ಬತ್ತುವದಿಲ್ಲ.
ನಾನು ಬೇಕೆ ಕನಸು ಕಾಣುವಾಗ?
ಗಂಡನ ಎದೆಗೆ ಮುಖವಿಟ್ಟು ಮಲಗಿದಾಗ?
ಶಿಶು ನಿನ್ನ ನಡುವಿನಲ್ಲಿ ಅರಳುವಾಗ?
ವಿಚಿತ್ರ ಆಶೆಗಳ ಫಲಪಡೆದು-ಬೆಟ್ಟದ ಮೇಲೆ, ಮೆದೆಗಳ
ಮೇಲೆ, ಮನೆಯ ಮೆಟ್ಟಿಲ ಮೇಲೆ ಕುಲಾವಿಯ ಹೆಣೆಯುವಾಗ
ಜೋಗುಳವ ಕಲಿಯುವಾಗ;
ಹುಚ್ಚುಚ್ಚು ಮಾತಾಡಿ ಕುಣಿಯುವಾಗ
ಎಂದು ಪ್ರೇಮದ ಆಲಾಪವನ್ನು ಮಾಡುತ್ತಾನೆ. ಅದರಿಂದ ಬಿಡುಗಡೆಯಾಗುವ ಪರ್ಯಾಯವನ್ನು ಸೂಚಿಸುತ್ತಾನೆ.
ನಾನು ಬೇಡವೆ ವಾಕ್ಯ ರಚಿಸಲಿಕ್ಕೆ?
ಹುಟ್ಟು, ಹುಡುಗಾಟ, ಲಂಗದ ಜಿಗಿತ, ಅಪ್ಪುಗೆ, ಉಕ್ಕೆ, ಬಿತ್ತಿದ
ಬೀಜ,ಪಡೆದ ಮಳೆ,
ಎಲ್ಲಾ ಸಂಕೇತಗಳ ಸುಡಲಿಕ್ಕೆ;
ಕೊನೆಗೆ ಕೂಗುವ ಅವನ ವ್ಯಕ್ತಿತ್ವ ಪರಿಚಯಸಿ
ಚಳಿಗೆ ಬೆಂಕಿಯ ಕಾವು ಕೊಡುವುದಕ್ಕೆ
ಹರಯದ ಹಾಡ ಮತ್ತೊಮ್ಮೆ ಮೊಳಸಲಿಕ್ಕೆ;
ಸುಳಿನಗೆಯ ಬೆಳಸಲಿಕ್ಕೆ;
ನಾನು ಬೇಡುವೆ, ನಿನ್ನ ಗಂಭೀರ ಮುಖದಲ್ಲಿ ಎಳೆದ ಗೆರೆಗಳ
ಹೊಸೆದು ಸರಿಯಾದ ದಿಕ್ಕಿನಲ್ಲಿ ನಡೆಸಲಿಕ್ಕೆ;
ಸೆರೆಯಿಂದ ಬಿಡಸಲಿಕ್ಕೆ
ಎಂದು ಸಾಮಾಜಿಕ ನಿಯಮಗಳನ್ನು ಮೀರಿ ಪ್ರೇಮದ ಸಹಜತೆಯನ್ನು ಬಿತ್ತುವ ಮತ್ತು ಕಾಣುವ ಆಲೋಚನೆ ಮಾಡುತ್ತಾನೆ. ಭರವಸೆಯನ್ನು ನೀಡುತ್ತಾನೆ.
ಆರಂಭಧ ಕವಿತೆಗಳಲ್ಲಿ ಹರೆಯದ ಪ್ರೇಮಮಯ ಉತ್ಸಾಹ, ಕಾಮದ ಪುಳಕತನ, ಗಂಡು ಹೆಣ್ಣಿನ ಸಮ್ಮಿಲನ, ಉತ್ಕಟತೆ, ಉತ್ಸಾಹ ಮುಂತಾದ ಸಂಗತಿಗಳ ತೀವ್ರತೆಯನ್ನು ಕಾಣುತ್ತೇವೆ. ಇದರಲ್ಲಿಯೂ ಕೂಡ ವಾಚ್ಯತೆಯನ್ನು ಕಾಣುವುದಿಲ್ಲ. ಬಳಕೆಯಾಗುವ ಪ್ರತಿಮೆ, ರೂಪಕಗಳು ಕಾವ್ಯ ಲಯದೊಂದಿಗೆ ಸಂಯೋಗಗೊಂಡು ಹೊಸ ಧ್ವನಿಯನ್ನು ಹೊರಡಿಸುತ್ತವೆ.
ಈ ನೆಲೆಯನ್ನು ಮುರಿದು ಪ್ರಾದೇಶಿಕ ಬನಿಯ ಸಾಂಸ್ಕೃತಿಕ ಅಂತ:ಸತ್ವವನ್ನು ಕಾವ್ಯದಲ್ಲಿ ಕಟ್ಟಿಕೊಡುತ್ತಾರೆ. ಈ ಕಾವ್ಯ ಪ್ರಾದೇಶಿಕ ಬದುಕಿನ ಜೀವನ ವಿವರಗಳನ್ನು ದಾಖಲಿಸುತ್ತಲೇ ಅದರ ಸಂಘರ್ಷ, ಸಂಭ್ರಮ, ಪರಿಶುದ್ದತೆಯ ಆಯಾಮಗಳನ್ನು ನಿರೂಪಿಸುತ್ತದೆ.
ನಮ್ಮ ಕಡೆಯ ಜನ ಎಂಬ ಕವಿತೆಯಲ್ಲಿ ಜನರ ಜೀವನ ಲವಲವಿಕೆ, ನಿರ‍್ಮಲತೆ, ಅನುಕ್ಷಣ ಅನುಭವಿಸುವ ಬದುಕಿನ ಸ್ವಚ್ಚಂದತೆಯನ್ನು ಕಾಣುತ್ತೇವೆ. ನಾಗರಿಕ ಸಮಾಜ ಈ ಜನರನ್ನು ನೋಡುವ ದೃಷ್ಟಿ ಕೀಳಾಗಿರುವಂತದ್ದು. ಆದ್ದರಿಂದ ಆ ಜನರು ನಿಮಗಿಂತಲೂ ಮುಖ್ಯರು ಎಂದು ಕವಿತೆ ಹೇಳುತ್ತದೆ.
ಹುಚ್ಚು ಪೋಕರಿ, ಕೀಳು, ಬಿಟ್ಟು ಬಿಡು ದೊಡ್ಡಸ್ತಿಕೆಯ
ಕೋಳಿಕತ್ತಿನ ಸೊಕ್ಕ, ಅಕ್ಷರದ ದೌಲತ್ತು;
ಇವರು ಸಹ ಘಾಟಿ ಜನ
ನಿನ್ನಾಣೆ: ಇವರಿಗಿದೆ ಗುಲಾಬಿ ಮುಳ್ಳಿನ ಕಿಚ್ಚು
ಸುತ್ತ ಸುಪ್ಪತ್ತಿಗೆಯ ಕೆಂಪು ವಾಸನೆ
ಮತ್ತು ಮುಟ್ಟಿದರೆ ಚರ‍್ರೆನುವ ಕಾಡುಕಿಚ್ಚು
ಕವಿತೆ ಜನರ ಜೀವಂತಿಕೆಯ ಜೊತೆಗೆ ಮುಖಾಮುಖಿಯಾಗುತ್ತದೆ. ಅವರ ದಿನದ ಬಾಳು ನಾಗರಿಕ ಸಮಾಜಕ್ಕಿಂತಲೂ ಸೊಗಸಾದುದು, ಸಹಜವಾದುದು. ಜೀವನ ಲಯದ ಬೇರುಗಳನ್ನು ಇವರ ದೈನಂದಿನ ಬಾಳಿನಲ್ಲಿ ಕಾಣುತ್ತೇವೆ.
ಆಯನೂರಿನ ಸಂತೆ ಭಾನುವಾರ
ಗಂಗುವಿಗೆ ಬೆಂಡೋಲೆ; ಜಬ್ಬರಗಾಯಿತೆ ಕ್ಷೌರ?
ಗಂಡನಿಗೆ ಬೀಡಿಯ ಕಟ್ಟು
ಬಾಳೆಯ ಗೊನೆಯ ಬಳಿ ಮುತ್ತಿಡುವವಗೆ ಉತ್ತುತ್ತೆ
ಕೈತುಂಬ ಕೊಬ್ಬರಿ
( ಕದ್ದ ಗಲ್ಲದ ಕಚ್ಚು ನಚ್ಚಗೆ, ಭರ್ಜರಿ)
ಇದ ಬಲ್ಲವನು ಬೇಲಿ ಹಾರಿದ, ಕುಪ್ಪಸಕೆ ಕೈಯಿಟ್ಟು
ಮೇಲೆ ಕಣ್ಣಾಡಿಸಿದ “ಪಾಪ ಪ್ರಾಯದ ದುಡುಕು”
ಎಂದು ಎಲ್ಲಾ ಮಜಕೆ ಕೊಡುತ್ತ ರಹದಾರಿ
ಸವೆಯುವುದು ಸಂತೆ ದಾರಿ
ಕವಿತೆಯ ಈ ಸಾಲುಗಳಲ್ಲಿ ಬದುಕಿನ ಜೀವಂತಿಕೆಯನ್ನು ಕಾಣುತ್ತೇವೆ. ಇದು ಬದುಕನ್ನು ಅನುಭವಿಸುವ ಪರಿ ಕೂಡ. ಈ ಬೇರುಗಳೊಂದಿಗಿನ ಸಂಬಂಧವನ್ನು ಕಳೆದುಕೊಂಡು ಅಪಹಾಸ್ಯ ಮಾಡುತ್ತೇವೆ. ಈ ಬದುಕಿನ ಸ್ಥಿತಿಯನ್ನು ಹೀಯಾಳಿಸುತ್ತೇವೆ. ಆದರೆ, ಬದುಕಿನ ಅಂತರಂಗ ಅಡಿಗಿರುದೆ ಇಂತಹ ಜೀವನ ಕ್ಷಣಗಳಲ್ಲಿ ಎಂಬುದನ್ನು ಕವಿತೆ ಹೇಳುತ್ತದೆ.
ಲಂಕೇಶರ ಬಹಳ ಪ್ರಸಿದ್ದವಾದ ಕವಿತೆ `ಅವ್ವ’ ಬದುಕನ್ನು ಧೈರ್ಯದಿಂದ ಕಟ್ಟುವ ಧೀರೋದಾತ್ತ ಗ್ರಾಮ ಮಹಿಳೆಯನ್ನು ಈ ಕವಿತೆಯಲ್ಲಿ ಅನಾವರಣ ಮಾಡಿದ್ದಾರೆ. ಚರಿತ್ರೆಯಲ್ಲಿ ದಾಖಲಾಗದ ಮಹಿಳೆಯ ಚಿತ್ರಣ ಇಲ್ಲಿದೆ. ಪಾರಂಪರಿಕ ಮೌಲ್ಯಗಳ ಮೈತುಂಕೊಂಡ ಮಹಿಳೆಗಿಂತ ಈಕೆ ಬೇರೆಯೇ ಇದ್ದಾಳೆ. ದುರ್ಬಲ ಹೆಂಗರಳಿನ ಪುರಷಾಧೀನದ ಮಹಿಳೆಯಲ್ಲ. ಪುರುಷನೊಂದಿಗೆ ಸೆಣಸಾಡಿ ಬದುಕನ್ನು ಕಟ್ಟಿಕೊಂಡ ಮಹಿಳೆ. ಮೇಲ್ಚಲನೆಯ ಸೊಗಸುಗಾರಿಕೆಯಂತ ಮಹಿಳೆಯಲ್ಲ. ಛಲವಿಡಿದ ವಾಸ್ತವದೊಂದಿಗೆ ಮುಖಾಮುಖಿಯಾಗುವ ಸ್ವಾವಲಂಬನೆಯ ಸಾಹಸಿಣಿ. ಎಲ್ಲಾ ಗಾಮೀಣ ಮಹಿಳೆಯ ಪ್ರತಿನಿಧಿಯಾಗಿ ಅವ್ವ ಕಾಣಿಸಿಕೊಳ್ಳುತ್ತಾಳೆ.
ನನ್ನವ್ವ ಫಲವತ್ತಾದ ಕಪ್ಪು ನೆಲ
ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟೂ ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;
ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ
ಅವ್ವನನ್ನು ಫಲವತ್ತಾದ ಭೂಮಿಗೆ ಹೋಲಿಸಿದ್ದಾನೆ. ಭೂಮಿಗೆ ಮಹಿಳೆಯನ್ನು ಹೋಲಿಸುವುದು ಸಹಜ. ಆದರೆ ಈ ಅವ್ವ ಸಾಮನ್ಯಳಲ್ಲ.
ಸುಟ್ಟಷ್ಟು ಕಸುವುಗೊಳ್ಳುವವಳು. ಹೂ ಕಾಯಿ ಹಣ್ಣಾಗಿ ಜೀವ ಪೊರೆಯುವಳು. ಮಕ್ಕಳ ಒಡಲಿಗಾಗಿ ದುಡಿದ ಅವ್ವ ಅವು ಒದ್ದರೆ ಪುಳಕಗೊಳ್ಳುವವಳು. ಅನ್ನವನ್ನು ಸೃಷ್ಟಿ ಮಾಡಿ ಎಲ್ಲರಿಗೆ ಉಣಿಸಿ ಎವೆ ಮುಚ್ಚಿದವಳು.
ಹೊಲದಲ್ಲಿ ದುಡಿದು ಕುಟುಂಬವನ್ನು ಸಾಕುವವಳು. ಗಂಡನೊಂದಿಗೆ ಸಂಘರ್ಷ ಮಾಡುತ್ತಲೇ ಪ್ರೀತಿಸಿದವಳು. ಪಲ್ಲ ಜೋಳವನ್ನು ಎತ್ತಿ ಗಂಡನನ್ನು ಮೆಚ್ಚಿಸಿದವಳು. ಕೈಯಲ್ಲಿಯೆ ಬಿತ್ತಿ ಬೆಳೆ ಬೆಳೆದವಳು. ಹೂವಾಗಿ ಕಾಯಾಗಿ ಹಣ್ಣಾಗಿ ಹಸಿರಾಗಿ ಚಿಂದಿ ಸೀರೆಯಲ್ಲಿಯೆ ಜೀವನವನ್ನು ಕಳೆದವಳು. ಕಾಸಿಗೆ ಕಾಸು ಜೋಡಿಸಿ ಕುಟುಂಬವನ್ನು ಸಲುಹಿದವಳು. ಎತ್ತು, ಎಮ್ಮೆ, ಕಳೆದರೆ ಊರೂರು ಅಲೆದು ಹುಡಿಕಿದವಳು. ಈ ಅವ್ವ ಅಪ್ಪಟ ಗ್ರಾಮ ಮಹಿಳೆ.
ಸತಿ ಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ.
ಗಾಂಧೀಜಿ, ರಾಮಕೃಷ್ಣರ ಸತಿಯಂತರಲ್ಲ
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;
ಮುತ್ತೈದೆಯಾಗಿ ಕುಂಕುಮ ಇಡಲಿಲ್ಲ.
ಬನದ ಕರಿಡಿಯ ಹಾಗೆ
ಚಿಕ್ಕ ಮಕ್ಕಳ ಹೊತ್ತು
ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು
ನೊಂದ ನಾಯಿಯ ಹಾಗೆ ಬೌದು, ಗೊಣಗಿ, ಗುದ್ದಾಡಿದಳು
ಈ ಅವ್ವ ಚರಿತ್ರೆಯ ಯಾವ ಕುರುವನ್ನು ಹೊಂದಿದವಳಲ್ಲ. ಈಕೆ ಎಲ್ಲವನ್ನು ಮೀರಿ ಬದುಕಿಗೆ ಸಂವೇದಿಸದವಳು. ಸಮಾಜದ ಯಾವ ಮುಲಾಜು, ನೀತಿ ನಿಯಮಗಳಿಗೆ ಒಳಗಾಗದೆ ಕುಟುಂಬಕ್ಕಾಗಿ ಜೀವ ಬಿಟ್ಟವಳು. ಆದರ್ಶ ಪುರುಷರ ಮಡಿದಿಯರಂತೆ ಅವರ ನೆರಳಿನಲ್ಲಿ ಬೆಳೆದವಳಲ್ಲ. ತನ್ನದೇ ದಾರಿಯನ್ನು ಕಂಡುಕೊಂಡವಳು. ಸ್ವತಂತ್ರ ಮನೋಭಾದಿಂದ ಜೀವವನ್ನು ಸಾಗಿಸಿದವಳು. ಗಂಡ ದಾರಿ ತಪ್ಪಿದಾಗ ಜಗಳ ಕಾಯ್ದು ಸರಿ ದಾರಿಗೆ ತಂದವಳು. ಮನೆಯ ಉದ್ಧಾರಕ್ಕೆ ನಿರಂತರ ಹೋರಾಡಿದವಳು.
ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳು ಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ
ಸರೀಕರ ಎದರು ತಲೆ ಎತ್ತಿ ನಡೆಯಲಿಕ್ಕೆ
ಈ ನೆಲದ ನಿಜ ಅವ್ವನನ್ನು ಈ ಕವಿತೆಯಲ್ಲಿ ಕಣುತ್ತೇವೆ. ಹೋರಾಡುವ ಅವ್ವ ಸಮಾಜವನ್ನು ಎದುರಿಸಬಲ್ಲಳು. ಎದೆಗುಂದದೆ ಬದುಕನ್ನು ಕಟ್ಟಬಲ್ಲಳು. ಪುರುಷಧಿಕಾರವನ್ನು ಪರಾಮರ್ಶಿಸಬಲ್ಲಳು.
ಸಮಾಜದಲ್ಲಿ ಘನತೆ, ಸ್ವಾಭಿಮಾನ, ಗೌರವಗಳಿಂದ ಬಾಳ ಬಲ್ಲಳು. ಇಂತಹ ಮಹಿಳೆ ಇಂದಿನ ಅಗತ್ಯ. ಕವಿತೆ ಅವ್ವನ ಜೀವನವನ್ನು ಸೃಷ್ಟಸುತ್ತಲೇ ಮಹಿಳೆಯ ಅಧಿಶಕ್ತಿಯನ್ನು ನಿರೂಪಸುತ್ತದೆ. ಕವಿತೆಯಲ್ಲಿ ಬಳಕೆಯಾದ ಪ್ರತಿಮೆ ರೂಪಕಗಳು ಶಕ್ತವಾಗಿ ಕವಿತೆಯ ಧ್ವನಿ ಶಕ್ತಿಯನ್ನು ಹೆಚ್ಚಿಸಿದೆ.
ಕವಿತೆಯು ದುರ್ಬಲರ ಅಸಹಾಕರ ದೀವಿಗೆಯಾಗಬೇಕು. ಬಾಳನ್ನು ಹಸನುಗೊಳಿಸಬೇಕು. ಬಾಳನ್ನು ಬಂಧಿಸುವ ಗೋಡೆಗಳನ್ನು ಒಡೆಯಬೇಕು. ಅದಕ್ಕೆ ಕವಿ ಹೇಳುವುದು
ನನ್ನ ಗೀತವೆ ಹೋಗು, ಅತೃಪ್ತ ಒಬ್ಬಂಟಿ ವ್ಯಕ್ತಿಗಳ ಬಳಿಗೆ;
ಹೋಗು ನರ ಕುಸಿದವರ, ಪದ್ಧತಿಯ ಪಾದಕ್ಕೆ ಸಿಕ್ಕವರ ಬಳಗೆ;
ತುಳಿವವರ ಬಳಿಗೆ ಹೋಗು ನನ್ನ ಕೋಪವ ಹೊತ್ತು;
ಹೋಗು ಸಂತೋಷಕರ ತಣ್ಣನೆಯ ಅಲೆಯ ಹಾಗೆ;
ನನ್ನ ತಿರಸ್ಕಾರವನ್ನಿಕ್ಕು ತುಳಿವ ಎಲ್ಲರಿಗೆ
ಅಗೋಚರ ಕ್ರೂರ ದಮನಗಳ ಪ್ರತಿಭಟಿಸು;
ಕಲ್ಪನೆಯ ಲವಲೇಶವಿಲ್ಲದೆಲ್ಲದರ ನೀನು ಅಲ್ಲಗಳೆ,
ಅಲ್ಲಗಳೆ ಸಂಕಲೆಯ:
ಬೇಸತ್ತ ಬೂರ್ಜ್ವಾ ಹೆಣ್ಣುಗಳ ಬಳಿ ಹೋಗು;
ದುರ್ವಿಧಿ ಜೋಡಿಸಿದ ಸಂಸಾರಿಗಳ ಬಳಿ ಹೋಗು;
ಹೋಗು, ಸಂಕಟವ ಬಚ್ಚಿಟ್ಟ ವ್ಯಕ್ತಿಗಳ ಬಳಿಗೆ;
ಖರೀದಿಗೆ ದೊರೆತ ಹೆಣ್ಣ ಬಳಿಗೆ;
ತೊತ್ತಾಗಿ ಸೊತ್ತಾದ ಅಬಲೆಯರ ಹತ್ತಿರಕ್ಕೆ
ಕವಿತೆಯ ಧ್ವನಿಗಳು ಸಂಕಟದಲ್ಲಿರುವವರ ಹೃದಯಗಳಿಗೆ ಸ್ಪಂದಿಸಬೇಕು. ಅದು ಕರುಣೆಯನ್ನು ತುಂಬಿಕೊಂಡಿರಬೇಕು. ಆ ನೆಲೆಯಲ್ಲಿ ಕವಿತೆ ಸಾಮಾಜಿಕವಾಗಿ ಹೊಂದಾಗಬೇಕೆಂಬುದು ಕವಿತೆಯ ನಿಲುವು.
ಕಾಮ ಪ್ರಾಸಗಳು, ಸಂಗ್ಯನಂಥ ಇನ್ನೊಬ್ಬನ ಪ್ರೇಮ ಗೀತೆ, ಚೆಲುವೆ ಖಂಡಿತ ಮದುವೆಯಾಗುವುದಿಲ್ಲ ಮುಂತಾದ ಕವಿತೆಗಳು ದೇಹದ ಮೋಹದ ವಿವಿಧ ಪರಿಯನ್ನು ನಿರೂಪಿಸುತ್ತಲೇ ಅದರ ವೈರುಧ್ಯಗಳನ್ನು ಮನಗಾಣಿಸುತ್ತದೆ. ಪ್ರೇಮ ಕಾಮ ಮಾನವ ಸಹಜ ಗುಣಗಳಾದರೂ ಅವು ಸಾಮಾಜಿಕ ಕಾರಣಗಳಿಗೆ ಮುಕ್ತತೆಯನ್ನು ಪಡೆಯಲಾರದೆ ಗೊಂಲಕ್ಕೀಡಾಗುದನ್ನು ಈ ಕವಿತೆಗಳು ಶೋಧಿಸುತ್ತವೆ.
ತಲೆಮಾರು ಎಂಬ ಕವಿತೆ ಗಾಂಧಿಯ ವ್ಯಕ್ತಿತ್ವವನ್ನು ಕೇಂದ್ರವಾಗಿಟ್ಟುಕೊಂಡು ಚರಿತ್ರೆಯ ಚಲನೆಯೊಂದಿಗೆ ಮುಖಾಮುಖಿಯಾಗುತ್ತದೆ. ಗಾಂಧಿ ಚಿಂತಿಸಿದ ಫಲಗಳು ಯಾವ ಸ್ವರೂಪ ಪಡೆದವೆಂಬುದನ್ನು ಕವಿತೆ ಚಿಂತಿಸುತ್ತಾ ಹೋಗುತ್ತದೆ. ಜನರ ಅನೇಕ ಬವಣೆಗಳಿಗೆ ಸಂವೆದಿಸುತ್ತಾ ಸಾಗಿದ ಗಾಂಧಿ ಜನರೊಳಗೆ ಒಂದಾಗುತ್ತಾ ಸಾಗಿದ್ದನು.
ಗಾಂಧಿಯ ಕೆಲಸ ಸಾಗಿತ್ತು
ಮನಸ್ಸಿನ ಬೇರು ಬೇರು ಕಿತ್ತು
ಮೈಯ ರಂಧ್ರ ರಂಧ್ರ ಉತ್ತು
ಸಿಟ್ಟು ಸಂಯಮದ ಕಪ್ಪು ಬಿಳಿಪುಗಳ
ಒಂದಾಗಿಸಿ
ಸಾವು ಬದುಕುಗಳ ಅಂಗೈಯಲ್ಲಿ ಹಿಡಿದು
ದೇಹವೇ ಆತ್ಮವಾಗಿ ನಡೆದು
ಸಾಗಿದ್ದಾಗ ನನ್ನಪ್ಪ ಹರಯದವನಂತೆ
ಗಾಂಧಿಯ ವ್ಯಕ್ತಿತ್ವವು ಜನರ ಹೃದಯದಲ್ಲಿ ಒಂದಾಗುವ ಸಂದರ್ಭಗಳು ಗಾಂಧಿಯ ನಂತರ ಯಾವ ಸ್ವರೂಪ ಪಡೆದವು ಎಂಬ ಚಿಂತೆ ಕವಿತೆಯನ್ನು ಕಾಡುತ್ತದೆ. ಜನರ ಸಾಮರಸ್ಯ ಸಹಬಾಳ್ವೆಯೊಂದಿಗೆ ತಲೆಮಾರುಗಳು ಬೆಳೆಯಬೇಕಾದ ಅಗತ್ಯವಿತ್ತು. ಆದರೆ ಆ ನೆಲೆಗಳು ಕುಸಿದು ಹೋಗಿ ಜಾತಿ ಧರ್ಮದ ಒಡಕುಗಳು ಮೈದಾಳದವು. ಅದಕ್ಕೆ ಕವಿತೆ ವ್ಯಥೆ ಪಡುವುದು
ಗಾಂಧಿ ಸತ್ತ ವರ್ಷ
ನನಗೆ ಹದಿಮೂರು ವಷ, ಊರ ಮುಖಂಡರು
ನಾಡ ಧ್ವಜದ ಕೆಳಗೆ
ಮುಸು ಮುಸು ಅತ್ತರು.
ನನ್ನಷ್ಟುದ ಗಡ್ಡಬಿಡುವ
ನನ್ನ ತರಗತಿಯ ಮಲ್ಲಿ
ನನ್ನ
ಸಹಪಾಠಿ ಹುಸೇನಿಯ ಜೊತೆ ನಕ್ಕಿದ್ದು
ಎಷ್ಟು ಬೇಸರ ತಂದಿತೆಂದರೆ ನನ್ನ
ಅಂಗಿ ಕಿತ್ತುಕೊಂಡು ಹೊಳೆ ಹಾರಲಾಗದೆ
ಅತ್ತೆ,
ಗಾಂಧಿಯ ಜೊತೆ ಕ್ಷಣ ಸತ್ತೆ
ಪುಟ್ಟಿ, ಪ್ರತಿಭಟನೆಯ ಒಂದು ಮುಖ, ಒಂದು ಭೇಟಿ, ಅಕ್ಕ, ತಮ್ಮ, ಏನು ವಿಶೇಷ? ಕವಿತೆಗಳು ಗ್ರಾಮದ ಬದುಕಿನ ಚಿತ್ರಗಳನ್ನು ಕಟ್ಟಿಕೊಡುತ್ತವೆ. ಗ್ರಾಮದ ಪಲ್ಲಟಗಳು, ಜೀವನ ಸಂಘರ್ಷಗಳು, ಸಂಭ್ರಮ, ವಿಷಾದ, ಉತ್ಸಾಹಗಳ ಸಂಯೋಗವನ್ನು ಈ ಕವಿತೆಗಳು ಪ್ರತಿಬಿಂಬಿಸುತ್ತವೆ. ಕಥನ ಕವನ ಮಾದರಿಯಲ್ಲಿ ಈ ಕವಿತೆಗಳಿವೆ.
ಪ್ರೇಮ ಕುರಿತ ಕವಿತೆಗಳು ದೇಹದ ಮಿತಿಯನ್ನು ಮೀರಿ ಸಹಜ ಬಾವದೊಂದಿಗೆ ಒಂದಾಗುವ ಗುಣವನ್ನು ಅಭಿವ್ಯಕ್ತಿಸುತ್ತವೆ.
ಪ್ರೇಮಿಸುವದು ಕೋಮಲ ಬೆರಳುಗಳಿಂದ ಸೂರ್ಯನ
ಬೆಳಕಿನ ಗೆರೆಯ ನೇವರಿಸಿದ ಹಾಗೆ,
ಕಳೆದ ಎಲ್ಲಾ ದಿನಗಳೊಂದಿಗೆ ಒಪ್ಪಂದ ಮಾಡಿಕೊಂಡು
ಕೈಕುಲಕಿ ನಕ್ಕ ಹಾಗೆ,
ಬರಲಿರುವ ಕಾಲದ ಹೆಗಲಿಗೆ ಕೈಹಾಕಿ
ಥೈಯ ಥೈಯ ಎಂದು ನಡೆದ ಹಾಗೆ
ಪ್ರೇಮಿಸುವದು ಸಿದ್ಧಾರ್ಥ ಹುಡುಕಿ ಹೊರಟ ಹಾಗೆ,
ಅವ್ವನ ಮೊಲೆ ನಡುವೆ ಮುಖವಿಟ್ಟು ನಲಿದ ಹಾಗೆ
ಪ್ರೇಮವು ಮನಸ್ಸನ್ನು ಅರಳಿಸುವ ಕ್ರಿಯೆ. ಅದು ಮನಸ್ಸಿನ ತುಮುಲವನ್ನು ಹೋಗಲಾಡಿಸಿ ಸಾಂತ್ವಾನದ ಬನಿಯನ್ನು ನೀಡುವಂತದ್ದು. ಪರಿಶುದ್ದವಾದ ಸ್ಥಿತಿಯನ್ನು ಪವಿತ್ರವಾದ ಪ್ರೇಮವು ನೀಡುತ್ತದೆ. ಸೂರ್ಯ, ಚೆಂದ್ರ, ತಂಗಾಳಿಯಂತೆ ಪ್ರೇಮ ಇರುತ್ತದೆ. ಅಂತಹ ಪ್ರೇಮವನ್ನು ಕವಿತೆ ಹುಡುಕುತ್ತದೆ. ಸಿದ್ಧಾರ್ಥನ ನರ‍್ಮಲ ಮನಸ್ಸಿನಂತೆ ಪ್ರೇಮವು ಹರಿಯುತ್ತಿರಬೇಕು.
ಮಧ್ಯಮ ವರ್ಗವು ಸದಾ ತನ್ನತನದ ಬಗ್ಗೆ ಚಿಂತಿಸುತ್ತಿರುತ್ತದೆ. ತನ್ನ ಸುತ್ತಲಿರುವ ಜನರ ಬಗ್ಗೆ ಮರುಕ ಪಡುತ್ತಾರೆ. ಆದರೆ ಕ್ರಿಯಾತ್ಮಕವಾಗಿ ಅವರು ಸ್ಪಂದಿಸುವದಕ್ಕಿಂತ ಉದಾರ ನೆಲೆಯಲ್ಲಿ ನೋಡುತ್ತಾರೆ. ಅದು ಮನುಷ್ಯ ಉತ್ಸಾವನ್ನು ಹೆಚ್ಚಿಸುವುದಿಲ್ಲ. ಕಟ್ಟಿಗೆ ಮಾರುವ ಹೆಣ್ಣುಮಕ್ಕಳ ಬಗ್ಗೆ ಇರುವ ಕವಿತೆ ಈ ಕುರಿತು ಚಿಂತಿಸುತ್ತದೆ.
ಕಾರು ನಿಲ್ಲಿಸಿ ನಮ್ಮ ಬಗ್ಗೆ ಏನೆನ್ನಿಸುತ್ತದೆಂದು
ತಿಳಿಯಬೇಕೆಂದು ಹುಷರಾಗಿ ಸಾಗಿದಾಗ
ಬಂದರು, ಅದೇ ಛಂದದಲ್ಲಿ.
ಕಾರು ನಿಲ್ಲಿಸಿ ಹತ್ತಿರ ಕರೆದು ಹೆಸರು,
ಮನೆಮಠದ ಬಗ್ಗೆ ವಿಚಾರಿಸಿದಾಗ
ಒಂದೇ ಒಂದು ವಿಷಯ ಸ್ಪಷ್ಟವಾಯಿತು;
ನಮ್ಮ ಬಗ್ಗೆ ಅವರಿಗೆ ಅಸೂಯೆ ಇರಲಿಲ್ಲ.
ನಮ್ಮ ಬಗ್ಗೆ ಅಸೂಯೆ ಇರಲಿಲ್ಲ ಎಂಬ ಸಾಲು ಬಹಳ ಮುಖ್ಯವಾದುದು. ಶ್ರೀಮಂತರು, ಮಧ್ಯಮವರ್ಗದವರು ದುಡಿವ ವರ್ಗವನ್ನು ಬಹಳ ಗೌರವದಿಂದ ನೋಡುವದಿಲ್ಲ. ಅದು ಸಹಜವಾಗಿ ಬಂದ ಮಾನಸಿಕ ಸ್ಥಿತಿಯಾಗಿದೆ. ಆದರೆ ದುಡಿವ ವರ್ಗ ಎಂದೂ ತನ್ನ ಮೇಲಿನ ವರ್ಗವನ್ನು ಅಸೂಯೆಯಿಂದ ನೋಡುವದಿಲ್ಲ. ತಮ್ಮ ಕಾಯಕ ಮಾಡಿಕೊಂಡು ಲವಲವಿಕೆಯಿಂದ ಇರುತ್ತಾರೆ.
ನನ್ನ ಮಧ್ಯಮ ವರ್ಗದ ಕ್ರಾಂತಿ, ಕೆರಳಿಕೆಗೆ
ಅವಕಾಶ ಕೊಡದಿರುವ ಈ ಕ್ರೂರಿಗಳ ಬಗ್ಗೆ ಒಬ್ಬ ಹೇಳಿದ
ಅವರೆಲ್ಲ ಮನೆ ಬಿಟ್ಟು ನಗುವ ಜನ!
ಜನತಾ ಮನೆ, ಜನಾರ್ಧನ ಮನೆ, ಬಂಗಲೆ, ಅರಮನೆಗಳ
ನನ್ನ ಮನಸ್ಸಿಗೆ ಕೂಡಲೇ ಅನಿಸಿದ್ದು;
ಇವರಂತೆ ಲಕಲಕಿಸದ ಮನೆಗಳೆಲ್ಲ ಖಾಲಿ!
ದುಡಿವ ವರ್ಗದ ಜೀವನೋತ್ಸಾಹ ಸಹಜವಾದುದು. ಯಾವ ಡಾಂಭಿಕ ವ್ಯಸನಗಳಿಲ್ಲದೆ ಬದುಕುವವರು. ಆಡಂಬರದ ಆಮಿಷಗಳಿಗೆ ಒಳಗಾಗದೆ ತಮ್ಮತನದೊಂದಿಗೆ ಬದುಕುವವರು. ಇವರನ್ನು ಹೀಯಾಳಿಸಿ ಬದುಕುವ ಸಮಾಜ ಮುಂದೆ ಖಾಲಿ ಮನೆಯಾಗುತ್ತದೆ ಎನ್ನುತ್ತದೆ ಕವಿತೆ.
ನಮ್ಮನಡುವೆ ಗೋಡೆಗಳನ್ನು ನಿರ್ಮಿಸಿದ ಜಾತಿ ವ್ಯವಸ್ಥೆ ಬಗ್ಗೆ ಬಹಳ ಮಾರ್ಮಿಕವಾದ ಕವಿತೆಯನ್ನು ಕಟ್ಟಿದ್ದಾರೆ. ಅಸಾಹಾಯಕರ ಮನಸ್ಥಿತಿಗಳನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಜನರ ಮುಂದೆ ಜಾತಿಯು ಕೂಡ ಒಂದು ದಾಳವಾಗುತ್ತದೆ ಎಂದು ಮಾವಿನ ಮರದಡಿಯ ದೃಶ್ಯ ಕವಿತೆ ಧ್ವನಿಸುತ್ತದೆ.
ಜಗಳ ಮಾಡಿದ ಲಿಂಗಾಯತ ಮತ್ತು ದಲಿತ ದುಡಿಮೆಗಾರರ ನಡುವೆ ನಡೆವ ಸಂಭಾಷಣೆ ಜಾತಿಯ ಮಿತಿಯಗಳನ್ನು ದಾಟಿ ಮಾನವೀಯತೆಯನ್ನು ತುಡಿಯುತ್ತದೆ.
ಗೂಳ್ಯ ಬೀಡಿ ಕಟ್ಟು ತೆಗೆದು
ಇವನು ತನ್ನ ಬೀಡಿ ಸೇದಲಾರ ಎಂದು ಬೆಂಕಿಗಾಗಿ ತಡಕಾಡಿದಾಗ
ಶಿಬಸ್ಯ `ಇಲ್ಲೊಂದು ಕೊಡಿ’ ಎಂದಾಗ ಗುಳ್ಯ ದೊಡ್ಡಗೆ
ನಕ್ಕು `ಬಸಪ್ಪಾರೆ, ತಲುಬಿದ್ದ ಜನಕ್ಕೆ ಜಗಳಾನೇ ಕಮ್ಮಿ’
ಎಂದು ಹತ್ತಿರ ಸರಿದು ಬೀಡಿ ಕೊಟ್ಟು ತನೊಂದು ಹಚ್ಚಿದ
ಅವಮಾನವೇ ಇಲ್ಲದ ಜೀವಿಗಳು ಕವಿತೆ ಮನುಷ್ಯನ ಸೋಗಲಾಡಿತನವನ್ನು ಬಿಚ್ಚಿಡುತ್ತದೆ. ಮನುಷ್ಯ ಏನೆಲ್ಲ ಸೃಷ್ಟಿ ಮಾಡಿದ್ದರೂ ನಿಸರ್ಗದಂತೆ ಬದುಕಲಾಗುತ್ತಿಲ್ಲ. ಸಹಜತೆಯನ್ನು ಕಳೆದುಕೊಂಡು ಹಿಂಸೆ ಕ್ರೌರ್ಯವನ್ನು ಮೈಗೂಡಿಸಿಕೊಳ್ಳತ್ತಿದ್ದಾನೆ. ಆದ್ದರಿಂದ ತನ್ನ ಸುತ್ತಲಿರುವ ನಿಸರ್ಗವನ್ನು ನೋಡಿಯೇ ನಡೆತೆಯನ್ನು ತಿದ್ದಿಕೊಳ್ಳಬೇಕಾಗಿದೆ.
ಗಿಡಗಳನ್ನು ನೀವು ಕಡಿಯಬಹುದು
ಎಲೆ ಕಿತ್ತು
ಹೂಗಳ ಪಕಳೆಗಳನ್ನು ಕಿತ್ತು
ನೋಯಿಸಬಹುದು
ಅಥವಾ ಇಡೀ ಹೂಗಳನ್ನು ಹರಿದು
ಮುಡಿದುಕೊಂಡು ನಿಮ್ಮ ಮೆರವಣಿಗೆಯಲ್ಲಿ
ಮೆರವಣಿಗೆ ಮಾಡಬಹುದು
ಆದರೆ ಗಿಡಗಳು
ಎಷ್ಟು ಬತ್ತಲೆ ಜೀವಿಗಳೆಂದರೆ
ಅವುಗಳಿಗೆ ಅವಮಾನವಾಗುವದಿಲ್ಲ
ಸುಮ್ಮನೆ ನೋಯಿತ್ತ ನಿಲ್ಲುತ್ತವೆ
ಪ್ರಾಣಿಗಳೂ ಅಷ್ಟೆ
ಗಿಡಗಳು ಹಾಗೆಯೇ
ನೊಂದು ಕೊರಗಿ
ನಿಮ್ಮ ಬಗ್ಗೆ ಕನಿಕರ ಪಡದೆ
ಸುಮ್ಮನೆ ಇದ್ದು
ಆತ್ಮಾರ್ಪಣೆ ಮಾಡಿಕೊಳ್ಳುತ್ತವೆ.
ಪ್ರಕೃತಿಯ ಈ ಸತ್ಯವನ್ನು ಅರ್ಥ ಮಾಡಿಕೊಳ್ಳದ ಮನುಷ್ಯ ಸ್ವಾರ್ಥವನ್ನು ಉಸಿರಾಡುತ್ತಾನೆ. ಎಲ್ಲವನ್ನು ಭೋಗ ನೆಲೆಯಲ್ಲಿ ನೋಡುತ್ತಾನೆ. ತನ್ನ ಮಾನವನ್ನು ಕೂಡ ಹರಾಜಾಕುತ್ತಾನೆ.
ಆದರೆ ಈ ಮಾನಕ್ಕಾಗಿ ಬಟ್ಟೆಯುಟ್ಟ
ಮನುಷ್ಯ ಹಾಗಲ್ಲ,
ಇವನ ಬಟ್ಟೆಗಳಿರುವುದೇ ಇವನ
ವಸ್ತಾçಪಹರಣಕ್ಕಾಗಿ.
ಅವಮಾನಿಸುವದಕ್ಕಾಗಿ
ಅವಮಾನದಿಂದ ನಿದ್ರೆಗೆಡಿಸುವದಕ್ಕಾಗಿಯೇ
ಇವರ ಸ್ಥಾನ ಮಾನ
ಅಧಿಕಾರ
ಅಧಕಾರದ ದಾಹ, ಹಣದ ಮೋಹ ಮನುಷ್ಯನನ್ನು ನಾಶ ಮಾಡುತ್ತದೆ. ಇದರಿಂದ ಹೊರಬಂದು ಸಹಜವಾಗಿ ಬದುಕಲು ಸಾಧ್ಯವಾಗುವದಿಲ್ಲವೆ ಎಂಬುದನ್ನು ಕವಿತೆ ಚಿಂತಿಸುತ್ತದೆ.
ಅವ್ವನ ಕುರಿತು ಇಪ್ಪತ್ತೈದು ವರ್ಷಗಳ ನಂತರ ಮತ್ತೊಂದು ಕವಿತೆಯನ್ನು ಬರೆದರು. ಈ ಕವಿತೆ ಇಷ್ಟು ವರ್ಷಗಳ ಮನುಕುಲದ ಚರಿತ್ರೆಯನ್ನು ಹೇಳುತ್ತದೆ. ಮನುಷ್ಯನಲ್ಲಾದ ಬೆಳವಣಿಗೆಯನ್ನು ಧ್ವನಿಸುತ್ತದೆ. ಅದು ವೈಯಕ್ತಿಕ ಅನಿಸಿದರೂ ಎಲ್ಲರ ಸ್ಥಿತಿಯನ್ನು ನಿವೇದಿಸುತ್ತದೆ. ಪುರುಷ ಹೆಣ್ಣಾಗುವ ಕ್ರಿಯೆ ಸಾಧ್ಯವೆ ಎಂಬುದನ್ನು ಕವಿತೆ ಶೋಧಿಸುತ್ತದೆ. ಪುರುಷಾಹಂಕಾರವನ್ನು ಬಿಡದೆ ಹೆಣ್ಣಾಗಲಿಕ್ಕೆ ಸಾಧ್ಯವಿಲ್ಲ. ಈ ಬಂಧವನ್ನು ಅವ್ವನನ್ನು ಮತ್ತೆ ನೆನಪಿಸಿಕೊಳ್ಳುವುದರ ಮೂಲಕ ಅರಿಯಲು ಪ್ರಯತ್ನಿಸುತ್ತಾರೆ.
ನಭದಲ್ಲಿ ಅಸಂಖ್ಯ ಹಕ್ಕಿಗಳು ಹಾರಿವೆ
ಕನಿಷ್ಟ ನಾಲ್ಕು ಕ್ಷಾಮಗಳು ಬಂದು ಹೋಗಿವೆ
ಊರು ಅರಣ್ಯ ಕಳೆದುಕೊಂಡು ಬೆತ್ತಲೆ ನಿಂತಿದೆ
ಅವ್ವನನ್ನು ಮತ್ತೆ ನೆನಪಸಿಕೊಳ್ಳುವುದು ಹೀಗೆ. ಮೊದಲಿನ ನೆನಪಿನಲ್ಲಿ ಇನ್ನೂ ಊರಿನಲ್ಲಿ ಸ್ವಲ್ಪವಾದರೂ ಅರಣ್ಯವಿತ್ತು. ಅದೀಗ ನಾಶವಗಿದೆ. ಊರು ಅರಣ್ಯವನ್ನು ಕಳೆದುಕೊಂಡಿದೆ. ತಾಯ್ತನವಿಲ್ಲದ ಬೆಳವಣಿಗೆ ನಾಶವನ್ನುಂಟುಮಾಡುತ್ತದೆ. ಆ ಪ್ರಜ್ಞೆ ಇಲ್ಲದೆ ಮನುಷ್ಯ ಮುನ್ನಡೆಯುತ್ತಿದ್ದಾನೆ. ಆ ವಿಷಾದ ಕವಿತೆಗಿದೆ
ಆದರೆ ಅದೇಕೋ ಗೊಂದಲ ಕೂಡ.
ಈ ಗೊಂದಲ ಮುಮದುವರಿಯುತ್ತಲೇ ಇದೆ.
ಈಕೆಯ ತೊಡೆಯ ಮೇಲೆ ನಾನಿಟ್ಟ ತಲೆ,
ಹಳೆಯ ಸೀರೆಯ ಕಮ್ಮನೆಯ ವಾಸನೆ
ಈಕೆ ನನ್ನ ಬಾಯಿಗಿಟ್ಟ ಎಲೆ, ಭಜೆ, ಚಕ್ಕಿ, ಲವಂಗ,
ಎಲ್ಲ ಕಾಮಿನಿಯರ ಕಾಮಕ್ಕೆ
ತಾಯ್ತನದ ಸುಗುಂಧದ ಪೂಸುವಿಕೆ,
ಎಲ್ಲ ಬೌದ್ಧಿಕ ಆರ್ಭಟಗಳಿಗೆ
ಕಡಿವಾಣ ಹಾಕುವ ಹೆಣ್ಣಿನ ಮಮತೆ,
ಸಾಧನೆಯ ಆಹಾಂಕಾರದ ನಡುವೆ
ಈಕೆ ಕದ್ದು ನೀಡಿದ ಕೊಬ್ಬರಿ ಉತ್ತುತ್ತೆ
ಅವ್ವನ ಮಡಿಲಲ್ಲಿ ಕಳೆದ ದಿನಗಳು ವೈಚಾರಿಕತೆಯನ್ನು ಮೀರಿದವು. ವೈಜ್ಞಾನಿಕತೆ, ವೈಚಾರಿಕತೆಯಲ್ಲಿ ಮಿಂದು ಹೋದ ಮನುಷ್ಯ ಅವನ ಸಂತೈಕೆಗಾಗಿ ಇರುವ ಆಯಾಮಗಳಿಂದ ದೂರವಾಗಿದ್ದಾನೆ. ಈ ಸ್ಥಿತಿಗೆ ಎದುರಾಗುವ ಬಗೆಯಲ್ಲಿ ಗೊಂದಲದಲ್ಲಿದ್ದಾನೆ. `ಎಲ್ಲ ಕಾಮಿನಿಯರ ಕಾಮಕ್ಕೆ ತಾಯ್ತನದ ಸುಗುಂಧದ ಪೂಸುವಿಕೆ’ ಎಂಬ ಸಾಲು ಆಧುನಿಕತೆ ಪಡೆದುಕೊಳ್ಳಬೇಕಾದ ಮನಸ್ಸೊಂದನ್ನು ಬಿಂಬಿಸುತ್ತದೆ.
ಸ್ಪಷ್ಟತೆ, ವೈಚಾರಿಕತೆಯೇ ಆಧುನಿಕ ಮನುಷ್ಯನ
ನಿರ್ದಿಷ್ಟ ಲಕ್ಷಣ ಎಂದು ಹೇಳುವ ನನಗೆ
ಕೊಂಚ ತಾಯ್ತನದ ವಿನಯ ಮತ್ತು ಮೌನ.
ಕಾಲು ಶತಮಾನದ ಬಳಿಕ:
ಜಗಳಗಂಟಿಯಾಗಿದ್ದ ಈ ಅವ್ವ ಈಗ ನನ್ನಲ್ಲಿ
ವಿನಯ ಮತ್ತು ಮೌನ.
ಮನುಷ್ಯನ ವೈರುಧ್ಯಗಳನ್ನೆಲ್ಲ ಹೇಳುವ ಲಂಕೇಶರ ಕವಿತೆಗಳು ಹೊಸ ಲಯ, ಭಾಷೆ, ಚಿತ್ರಕ ಶಕ್ತಿಯಿಂದ ಹೊಸ ಧ್ವನಿಯನ್ನು ಹೊರಡಿಸುತ್ತವೆ. ಅವರ ಗಧ್ಯ ಬರಣಿಗೆಗಳ ಜೊತೆಗೆ ಕಾವ್ಯನ್ನು ಹೋಲಿಸಿದರೆ ಎರಡರ ನಡುವೆ ವ್ಯತ್ಯಾಸಗಳನ್ನು ಮಾಡಲಾರದಷ್ಟು ಅವರ ಬರವಣಿಗೆಗೆ ಕಾವ್ಯದ ಲಯವಿದೆ. ಮನುಷ್ಯನ ಒಳ ತುಮುಲಗಳನ್ನು ಇವರ ಕಾವ್ಯ ಹಿಡಿದಿಡುತ್ತದೆ. ಸಂಕೀರ್ಣ ಸ್ಥಿತಿಯ ಆಯಾಮಮಗಳನ್ನು ಶೋಧಿಸುವುದು ಕವಿತೆಗಳ ಮುಖ್ಯ ಗುಣವಾಗಿದೆ. ಕೊನೆಗೆ ಇವರ ಕವಿತೆಗಳು ಧ್ಯಾನಿಸುವುದು ಮನುಷ್ಯನನ್ನು ತಲುಪಬೇಕಾದ ದಾರಿಗಳು ಯಾವುವು ಎಂಬುದರೆಡೆಗೆ.
ಮಾತುಗಳಿಂದ ಹಿಡಿದು ಮನಸ್ಸನನ್ನೊಳಗೊಂಡ
ಬೆಟ್ಟ, ಬಯಲು, ಸಮುದ್ರದ ಅಲೆಗಳಿಗೆ
ಹೊಸ ಸ್ಪಂದನವೊಂದು ಹೊಮ್ಮುತ್ತಿದೆ.
ಸೋತ ಮಾರ್ಕ್ಸ್ನ ಲೆಕ್ಕ, ಸವಾಲಿಗೆ ಬದಲು
ಅವನ ಆತ್ಮಗೌರವದ, ದುಡಿಮೆಯ, ಸರಳತೆ,
ಧರ್ಮ
ನಮ್ಮ ಆತ್ಮಗಳ ತಲುಪಬೇಕಾಗಿದೆ.
ಹೊರಗೆ ಬೆಳೆವ ಮರ, ಹಾರುವ ಪಕ್ಷಿ,
ಹರಿವ ನೀರಿನಂತೆಯೇ
ಹಸಿರು ಹೊಮ್ಮಬೇಕಾಗಿದೆ,
ನಮ್ಮ ಎದೆಯಲ್ಲಿ, ಮನದಲ್ಲಿ, ಮನದಲ್ಲಿ
ಹಸಿರು ಹೃದಯದಲ್ಲಿ ಹುಟ್ಟಬೇಕಾಗಿದೆ ಎಂಬ ಕನಸು ಕವಿತೆಗಳಗಿದೆ. ಕಾಲಘಟ್ಟದ ಸ್ಥಿತ್ಯಂತರಗಳನ್ನು ಮಾನವೀಯ ನೆಲೆಯಿಂದಲೇ ಗ್ರಹಿಸಬೇಕು. ಇಲ್ಲದಿದ್ದರೆ ಅದು ಜೀವ, ಆತ್ಮಗಳನ್ನು ನಾಶ ಮಾಡುತ್ತದೆ ಎಂಬ ಆತಂಕವೂ ಕವಿತೆಗಳಲ್ಲಿದೆ.
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
"ನಮ್ಮ ಊರಿನವರೇ ಆಗಿ ಹೋಗಿದ್ದ ಕಾಚಾಪುರದ ಸಿದ್ಧರಾಜ ಗವಾಯಿಯ ಅನುಬಾರದೇನಂದೀನೇ ಅಂಬಾ ನಿನಗೆ/ ಅಂಬಾ ಜಗದಂಬೆ ಅಂದೀನ...
©2024 Book Brahma Private Limited.