"ಸಂಘಮಿತ್ರೆ ಅವರು ತಮ್ಮ ಸಂಶೋಧನೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಮನೆಗೆ ಬರುವುದಾಗಿ ಹೇಳಿದ್ದರು. ಜೊತೆಗೆ "ಚಂದ್ರನಿಲ್ಲದ ರಾತ್ರಿ" ಪುಸ್ತಕವನ್ನು ತಂದಿದ್ದರು. ಈ ಕೃತಿಗೆ ಅವರು ಸುಂದರವಾದ ಚಿತ್ರಗಳನ್ನು ಬರೆದಿದ್ದಾರೆ. ಈ ಚಿತ್ರಗಳು ಕೃತಿಗೆ ಹೆಚ್ಚಿನ ಕಳೆಯನ್ನು ತುಂಬಿವೆ," ಎನ್ನುತ್ತಾರೆ ಅರವಿಂದ ಮಾಲಗತ್ತಿ. ಅವರು ಸಂಘಮಿತ್ರೆ ನಾಗರಘಟ್ಟ ಅವರ ‘ಚಂದ್ರನಿಲ್ಲದ ರಾತ್ರಿ’ ನಾಟಕ ಕೃತಿ ಕುರಿತು ಬರೆದ ವಿಮರ್ಶೆ.
"ಗೋವು ತಿಂದು ಗೋವಿನಂತಾದವರು...." ಎನ್ನುವ ಕವಿಯು ಇಲ್ಲದಿರುವ ಸಂದರ್ಭದಲ್ಲಿ "ಚಂದ್ರನಿಲ್ಲದ ರಾತ್ರಿ" ಎನ್ನುವ ಮಕ್ಕಳ ನಾಟಕ ಪ್ರಕಟವಾಗಿ ಓದುಗರ ಕೈಗೆ ಬಂದಿದೆ.
ಈ ಕೃತಿಯನ್ನು ಎನ್ ಕೆ ಹನುಮಂತಯ್ಯ ನವರ ಮಗಳು ಸಂಘಮಿತ್ರೆ, ಅವರ ಶ್ರೀಮತಿಯವರು ಹಾಗೂ ಅವರ ಮೊಮ್ಮಗ ಈ ಕೃತಿಯೊಂದಿಗೆ, ನನ್ನ ಮನೆಯ ಹೊಸ್ತಿಲ ಒಳಗೆ ಪ್ರವೇಶ ಮಾಡಿದ್ದು ಒಂದು ವಿಶೇಷ ಸಂದರ್ಭ. ಈ ನಾಟಕದ ಹೆಸರಿನಲ್ಲಿ ಹನುಮಂತಯ್ಯನವರೇ ಕುಟುಂಬ ಸಮೇತ ಪರಿವಾರದೊಂದಿಗೆ ಮನೆಗೆ ಬಂದಂತಾಗಿತ್ತು ನನಗೆ.
ಸಂಘಮಿತ್ರೆ ಅವರು ತಮ್ಮ ಸಂಶೋಧನೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಮನೆಗೆ ಬರುವುದಾಗಿ ಹೇಳಿದ್ದರು. ಜೊತೆಗೆ "ಚಂದ್ರನಿಲ್ಲದ ರಾತ್ರಿ" ಪುಸ್ತಕವನ್ನು ತಂದಿದ್ದರು. ಈ ಕೃತಿಗೆ ಅವರು ಸುಂದರವಾದ ಚಿತ್ರಗಳನ್ನು ಬರೆದಿದ್ದಾರೆ. ಈ ಚಿತ್ರಗಳು ಕೃತಿಗೆ ಹೆಚ್ಚಿನ ಕಳೆಯನ್ನು ತುಂಬಿವೆ.
ಮಕ್ಕಳಿಗಾಗಿಯೇ ಹೇಳಿ ಮಾಡಿಸಿದಂತಿರುವ ಈ ಕೃತಿ, ರಮ್ಯ ಮತ್ತು ಅದ್ಭುತ ಗುಣಗಳಿಂದ ಕೂಡಿದ, ಈ ನಾಟಕ ಮಕ್ಕಳನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಆದರೆ ಇದು ಮಕ್ಕಳ ಮನರಂಜನೆಯ ನಾಟಕ ಮಾತ್ರ ಆಗದೆ, ದೇಶದ ಪ್ರಕೃತಿಯ ಕುರಿತು, ಅದನ್ನು ನಾಶ ಮಾಡುವ ದುಷ್ಟ ಶಕ್ತಿಗಳ ಕುರಿತು ಅರಿವನ್ನು ಬಿತ್ತುವ ನಾಟಕವಾಗಿದೆ. ರಾಜನ ಪರಿಭಾಷೆಯ ಮೂಲಕ ನಾಟಕ ಬೆಳೆದರೂ, ವರ್ತಮಾನದ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿಯೂ, ನಿಸರ್ಗ ವಸ್ತುಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಮತ್ತು ಅದರಿಂದ ಹಣ ಸಂಪಾದಿಸಿ ಮೆರೆಯುವ ಗುಣವನ್ನು ನಾಟಕ ಪರೋಕ್ಷವಾಗಿ ಬಿಚ್ಚಿಡುತ್ತದೆ.
ಜನತೆಗೆ ಬಣ್ಣಗಳನ್ನು ಮಾರಿ ರಾಜ ಬೊಕ್ಕಸವನ್ನು ತುಂಬಿಸಿಕೊಂಡು ಮೆರೆಯುವ ದೊರೆ, ಅದಕ್ಕೆ ಸಹಕರಿಸುವ ರಾಜ ಪರಿವಾರ, ಭ್ರಮಾತ್ಮಕವಾಗಿರುವ ವಯಸ್ಕರನೆ ಬಂಡವಾಳ ಮಾಡಿಕೊಂಡು ಸಂಪಾದಿಸುವ ದೊರೆ, 'ಮಿಂಚು ಹುಳು' ಎಂಬ ಬೆಳಕಿನ ಅರಿವಿರುವ ಈ ಶಕ್ತಿ ಮತ್ತು ದೇಶದ ಭವಿಷ್ಯವಾಗಿರುವ ಮಕ್ಕಳಿಗೆ ಅರಿವು ತುಂಬುವ ಮತ್ತು ಅವರನ್ನು ಈ ಲೋಕದಿಂದ ಬಿಡಿಸಿ ಕರೆದೊಯ್ಯುವ, ರಕ್ಷಿಸುವುದರ ಪ್ರತೀಕವಾಗಿ ಬರುತ್ತದೆ.
ಇದೊಂದು ಪ್ರತಿಮಾತ್ಮಕವಾದ ಸಾಂಕೇತಿಕ ನಾಟಕವಾಗಿದೆ. ಅರ್ಥ ವ್ಯಾಪ್ತಿಯ ದೃಷ್ಟಿಯಿಂದ ಮಹತ್ತನ್ನು ಕಟ್ಟಿಕೊಡುತ್ತದೆ. 38 ಪುಟಗಳ ಮೂಲ ವಸ್ತುವಿನ ಈ ನಾಟಕ, ವೈಚಾರಿಕತೆಯ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ. ಈ ನಾಟಕದ ಸಂದೇಶ ಅರಿವಿನ ಮಹತ್ವವನ್ನು ಸಾರುವಂಥದ್ದು. ಚಂದ್ರನನ್ನೇ ಎಳೆದು ಭೂಮಿಗಿಳಿಸುವ ಅದ್ಭುತ ಕಲ್ಪನೆ ಮಕ್ಕಳಿಗೆ ಹೆಚ್ಚು ರಂಜನೀಯವೆನಿಸಬಹುದು, ಹಾಗೆಯೇ ಮಿಂಚುಹುಳದ ಮೇಲೆ ಕುಳಿತು ಚಂದ್ರನಲ್ಲಿ ಸಾಗುವ ಕ್ರಿಯೆ ಇಂಥವೆಲ್ಲ ಮಕ್ಕಳಿಗೆ ನಾಟಕದಲ್ಲಿ ಆಕರ್ಷಕ ಸಂಗತಿಗಳಾಗಿವೆ. ಆದರೆ ನಾಟಕವನ್ನು ಓದಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಮಕ್ಕಳ ಬೌದ್ಧಿಕ ಶಕ್ತಿಗೆ ಮೀರಿದ್ದು ಎನಿಸಿದರೂ ಸಂಕೇತಗಳ ಅರ್ಥದ ಒಗಟನ್ನು ಒಮ್ಮೆ ಒಡೆದರೆ ಅವು ಮಕ್ಕಳಿಗೆ ಮನರಂಜನೆಯೊಂದಿಗೆ ಬೌದ್ಧಿಕ ಸಾಮರ್ಥ್ಯವನ್ನೂ ಕೊಡಬಲ್ಲವು ಮತ್ತು ಅರ್ಥೈಸಿಕೊಳ್ಳುವುದಕ್ಕೂ ದಾರಿ ಮಾಡಿ ಕೊಡುತ್ತದೆ.
ಈ ನಾಟಕಕ್ಕೆ ಬರಗೂರು ರಾಮಚಂದ್ರಪ್ಪ ಅವರು ಅರ್ಥಪೂರ್ಣವಾದ ಮುನ್ನುಡಿಯನ್ನು ಬರೆದಿದ್ದಾರೆ. ಈ ನಾಟಕ ಆದಷ್ಟು ಬೇಗ ರಂಗಕ್ಕೆ ಬರಲಿ ಎಂದು ಬಯಸುವೆ, ಹಾಗೆ ಬಂದಲ್ಲಿ ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ಪಡೆಯುವಂತಾಗುತ್ತದೆ ಎನ್ನುವ ನಿರೀಕ್ಷೆ ನನ್ನದು.
"ಲೇಖಕರ ಹಾಸ್ಯ, ವ್ಯಂಗ್ಯಗಳು ಮತ್ತು ಕುತೂಹಲ ಉಳಿಸಿಕೊಳ್ಳುವ ನಿರೂಪಣೆ ಈ ಕತೆಗಳ ವೈಶಿಷ್ಟ್ಯ. ಕತೆಗಳು ಒಂದು ಒಂದೂವ...
"ಜಲಪಾತ ಹೆಸರೇ ಸೂಚಿಸುವಂತೆ ನಿರಂತರ ಹರಿಯುತ್ತಿರುವ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ಬಿಂಬಿಸುವ ಪ್ರಾಕೃತಿಕ ಸೃಷ್...
"ನಗಲು ತೆರೆದ ಬಾಯನ್ನು ಮುಚ್ಚಲಾಗದಷ್ಟು ಪರಿಚಿತ ಮುಖಗಳು ಸಿಕ್ಕು ತವರಿನ ಕಾರ್ಯಕ್ರಮಕ್ಕೆ ಹೋದಂತೆನಿಸಿತು. ಕವಿಗೋಷ...
©2025 Book Brahma Private Limited.