"ಇದು ಲೇಖಕರಿಗೆ ಇರುವ ಮನುಷ್ಯ ಸ್ವಭಾವದ ಸಂಕೀರ್ಣ ಗ್ರಹಿಕೆ ಮತ್ತು ಅಭಿವ್ಯಕ್ತಿಗೆ ನಿದರ್ಶನ. ನಿರ್ಜೀವ ವಸ್ತುಗಳಿಗೂ ಮತ್ತು ಜೀವಂತ ವ್ಯಕ್ತಿಗಳಿಗು ಇರುವ ಸಂಬಂಧವನ್ನು ರೂಪಕಗಳ ಮೂಲಕ ಸೂಚಿಸುವುದು ಇವರ ಅಭಿವ್ಯಕ್ತಿ ಸ್ವರೂಪದ ಇನ್ನೊಂದು ವೈಶಿಷ್ಟ್ಯವಾಗಿದೆ," ಎನ್ನುತ್ತಾರೆ ರಘುನಾಥ್ ಕೃಷ್ಣಾಮಾಚಾರ್. ಅವರು ಎ.ಎನ್ ಪ್ರಸನ್ನ ಅವರ ‘ಪರದೆ’ ಕೃತಿ ಕುರಿತು ಬರೆದ ವಿಮರ್ಶೆ.
ಇಲ್ಲಿನ ಕತೆಗಳಲ್ಲಿ ಎದ್ದುಕಾಣುವುದು ಲೇಖಕರ ಸಂಕೀರ್ಣವಾದ ವಾಸ್ತವದ ಗ್ರಹಿಕೆ ಮತ್ತು ಅದರ ಅಭಿವ್ಯಕ್ತಿ. ಇದಕ್ಕೆ ನಿದರ್ಶನವಾಗಿ ಈ ಸಂಕಲನದ ಕೆಲವು ಕತೆಗಳನ್ನು ಪರಿಶೀಲಿಸಬಹುದು. ಕೊನೆಯ ಕತೆ 'ಪರಿಧಿ' ಇದಕ್ಕೆ ಒಳ್ಳೆಯ ನಿದರ್ಶನ. ಇದರಲ್ಲಿ ಕಂಪನಿಯೊಂದರಲ್ಲಿ ಹಿರಿಯ ಅಧಿಕಾರಿಯಾಗಿ ದುಡಿಯುತ್ತಿರುವ ವ್ಯಕ್ತಿಯ, ಕೌಟುಂಬಿಕ ಮತ್ತು ಕಛೇರಿಯ ಬದುಕಿನ ಒಳಸುಳಿಗಳ ಅನಾವರಣ ಇದೆ. ಕಥಾನಾಯಕನ ಹೆಂಡತಿ ಪಾತ್ರವೂ ಮುಖ್ಯ.ಅವಳು ಅವನಿಗೆ ಒಮ್ಮೆ ತೀವ್ರವಾದ ಖಾಯಿಲೆ ಬಂದಾಗ, ಅವನ ಆಸ್ಪತ್ರೆಯ ವೆಚ್ಚವನ್ನು ಅವನಿಗೆ ಗೊತ್ತಿಲ್ಲದಂತೆ ಭರಿಸಲು, ಅವನ ಸಹೋದ್ಯೋಗಿಯ ನೆರವಿನಿಂದ ಸಾಲ ಪಡೆದು ನಿಭಾಯಿಸಿರುತ್ತಾಳೆ. ಅದನ್ನು ತೀರಿಸಲು ಕಂಪ್ಯುಟರ್ ಕಲಿತು, ಅದರಿಂದ ಕೆಲಸ ಗಿಟ್ಟಿಸಿಕೊಂಡು, ಅದರಿಂದ ನಿಯಮಿತವಾಗಿ ಸಾಲ ತೀರಿಸುತ್ತಿರುತ್ತಾಳೆ. ಅದನ್ನು ಬಳಸಿಕೊಂಡ ಅವನು, ತಾನು ಕಛೇರಿಯಲ್ಲಿ ತಪ್ಪು ಮಾಡಿದಾಗ, ಅವನನ್ನು ಅವಳ ಗಂಡನಿಂದ ರಕ್ಷಿಸಲು ಅವಳ ನೆರವನ್ನು ಬಯಸುತ್ತಾನೆ. ಅವನಿಂದ ಸಾಲ ಪಡೆವಾಗ ತನ್ನ ತಂದೆಯ ಸಾಕ್ಷಿಯ ರುಜುವನ್ನು ತಾನೇ ನಕಲು ಮಾಡಿ ಹಾಕಿರುತ್ತಾಳೆ. ಇದನ್ನು ತಿಳಿದ ಅವನು, ಈಗ ಅದನ್ನು ತನ್ನ ಉದ್ಯೋಗದ ರಕ್ಷಣೆಗೆ ಬಳಸಿಕೊಳ್ಳಲು ನೋಡುತ್ತಾನೆ. ಈಗ ಅವಳಿಗೆ ಅವನ ಪರವಾಗಿ ತನ್ನ ಗಂಡನ ಬಳಿ ಶಿಫಾರಸ್ಸು ಮಾಡುವುದು ಅನಿವಾರ್ಯವಾಗುತ್ತದೆ. ಆ ವೇಳೆಗೆ ಸರಿಯಾಗಿ ಅವಳ ಖಾಸಾ ಗೆಳತಿಯೊಬ್ಬಳು, ಗಂಡನಿಂದ ವಿಚ್ಛೇದನ ಪಡೆದು, ಅಸಾಹಯಕ ಸ್ಥಿತಿಯಲ್ಲಿ ಇರುತ್ತಾಳೆ. ಅದನ್ನು ತಿಳಿದ ಇವಳು, ತನ್ನ ಗಂಡನ ಕಛೇರಿಯಲ್ಲಿ ಅವಳಿಗೆ ಕೆಲಸ ಕೊಡಿಸಲು ಕೇಳಿರುತ್ತಾಳೆ.
ಭ್ರಷ್ಟನಾದ ಅವನ ಸಹೋದ್ಯೋಗಿಯನ್ನು ತೆಗೆದುಹಾಕಿ, ಅವನ ಬದಲು ಇವಳ ಗೆಳತಿಗೆ ಕೆಲಸ ಕೊಡಲು ಒಪ್ಪಿಕೊಳ್ಳುತ್ತಾನೆ. ಆದರೆ ಈಗ ಹೆಂಡತಿಯೇ ಅವನ ಪರವಾಗಿ ವಕಾಲತ್ತು ವಹಿಸುವುದು ನೋಡಿ, ಅವನಿಗೆ ಸಿಟ್ಟುಬಂದು, ತನ್ನ ಕಛೇರಿಯ ವಿಷಯದಲ್ಲಿ ಮೂಗು ತೂರಿಸಬಾರದೆಂದು, ಅವಳಿಗೆ ಕಟ್ಟುನಿಟ್ಟಾಗಿ ಹೇಳಿ, ಅವಳ ಜೊತೆಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಬಿಡುತ್ತಾನೆ. ಅವನ ಸಹೋದ್ಯೋಗಿ ಮತ್ತು ಇವಳ ಗೆಳತಿಯ ನಡುವೆ ಹಳೆಯ ಸಂಬಂಧದಿಂದ ಈಗ ಅವರಿಬ್ಬರೂ ಒಂದಾಗುತ್ತಾರೆ. ಅವನು ತನ್ನ ಹಿರಿಯ ಅಧಿಕಾರಿಯ ಮೇಲಿನ ಆಪಾದನೆಯನ್ನು ಕೈ ಬಿಡುತ್ತಾನೆ. ಆ ವೇಳೆಗೆ, ಇವಳ ಗಂಡನಿಗೆ ಕಛೇರಿಯಲ್ಲಿ ಬಡ್ತಿ ದೊರೆತು, ಆ ಸಂತೋಷವನ್ನು ಆಚರಿಸುವ ಸಂಭ್ರಮದಿಂದ ಅವನ ಹೆಂಡತಿಯನ್ನು ಓಲೈಸಲು ಬಂದಾಗ, ಮೊದಲಿನ ಅವನ ಒರಟು ನಡತೆ, ಅವಳ ಆತ್ಮಸಮ್ಮಾನಕ್ಕೆ ಧಕ್ಕೆ ತಂದು, ಅವಳು ಅವನ ಓಲೈಕೆಗೆ ಮಣಿಯದೆ, ವಿಚ್ಛೇದನೆಗೆ ಸಿದ್ದಳಾಗಿ ಮನೆ ಬಿಟ್ಟು ಹೋಗುತ್ತಾಳೆ. ಉದ್ದೇಶ ಮತ್ತು ದಾರಿಗಳು ಒಂದೇ ಆಗಿರಬೇಕು ಎನ್ನುವುದು ತಾತ್ವಿಕವಾಗಿ ಸರಿಯಾದರೂ, ಅದನ್ನು ಜಾರಿಗೆ ತರುವಲ್ಲಿ ಇರುವ ತೊಡಕನ್ನು ಈ ಕತೆ ಅನನ್ಯವಾಗಿ ಸೆರೆಹಿಡಿಯುತ್ತದೆ. ನಕಲಿ ರುಜುವಿನಿಂದ ಪ್ರಾರಂಭವಾಗುವ ಕತೆ ಅದರೊಂದಿಗೆ ಅಂತ್ಯಗೊಳ್ಳುವುದು ಕತೆಯನ್ನು ಅವರ ಸಂಬಂಧದ ಸ್ವರೂಪದ ಮೇಲೆ ಬೆಳಕು ಚೆಲ್ಲುತ್ತದೆ. ಇದು ಲೇಖಕರಿಗೆ ಇರುವ ಮನುಷ್ಯ ಸ್ವಭಾವದ ಸಂಕೀರ್ಣ ಗ್ರಹಿಕೆ ಮತ್ತು ಅಭಿವ್ಯಕ್ತಿಗೆ ನಿದರ್ಶನ. ನಿರ್ಜೀವ ವಸ್ತುಗಳಿಗೂ ಮತ್ತು ಜೀವಂತ ವ್ಯಕ್ತಿಗಳಿಗು ಇರುವ ಸಂಬಂಧವನ್ನು ರೂಪಕಗಳ ಮೂಲಕ ಸೂಚಿಸುವುದು ಇವರ ಅಭಿವ್ಯಕ್ತಿ ಸ್ವರೂಪದ ಇನ್ನೊಂದು ವೈಶಿಷ್ಟ್ಯವಾಗಿದೆ.
ಮೊದಲ ಕತೆಯಲ್ಲಿ ಮೊದಲಿಗೆ ಬರುವ ದೂಳು ಹಿಡಿದ ಕನ್ನಡಿಯ ರೂಪಕ, ಕತೆಯ ಕೊನೆಗೆ ಅದರಲ್ಲಿನ ತನ್ನ ಮುಖ ಕಪ್ಪಿಡಿದಂತಾಗುವುದು ನ್ಯಾಯಾಧೀಶ ವೀರಭದ್ರಪ್ಪನವರ ಕಲುಷಿತ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಅವರ ಹುದ್ದೆಗೂ ಅವರ ಭ್ರಷ್ಟ ವ್ಯಕ್ತಿತ್ವಕ್ಕು ತಾಳಮೇಳವಿಲ್ಲದಿರುವುದು ನಮ್ಮ ನ್ಯಾಯಾಂಗ ಕೂಡಾ ಇದರಿಂದ ಹೊರತಲ್ಲ. ಎನ್ನುವುದನ್ನು ಸಾಬೀತು ಪಡಿಸುತ್ತದೆ. ಕೆ.ಸತ್ಯನಾರಾಯಣ ಅವರ ಜೈಲು ಕತೆಗಳಲ್ಲಿ ಅವರು ಎತ್ತುವ ಮೂಲಭೂತ ಪ್ರಶ್ನೆ' ನಿಜವಾದ ಅಪರಾಧಿಗಳು ಯಾರು? ಒಳಗೆ ಇರುವವರೊ ಹೊರಗೆ ಇರುವವರೊ? " ನೆನಪಿಗೆ ತರುತ್ತದೆ.
'ಚದುರಂಗ' ಕತೆ ಹಳೆಯ ಗೆಳೆತನ ಮರಳಿ ಚಿಗುರಿ ಮುರುಟುವ ಸಂಕೀರ್ಣ ಪ್ರಕ್ರಿಯೆಯನ್ನು ಒಳಗೊಂಡಿದೆ. ಸಮಾಜ, ಕುಟುಂಬ, ಮಕ್ಕಳು ಈ ಪ್ರಕ್ರಿಯೆಯ ಭಾಗವಾಗುವುದು ಲೇಖಕರ ಮನುಷ್ಯ ಸ್ವಭಾವದ ಸೂಕ್ಷ್ಮಗ್ರಹಿಕೆಗೆ ನಿದರ್ಶನವಾಗಿದೆ.
`ಬಯಲು' ವರ್ತಮಾನದಿಂದ ಭೂತಕ್ಕೆ ಮತ್ತೆ ಭೂತದಿಂದ ವರ್ತಮಾನಕ್ಕೆ ಚಲಿಸುವಾಗ, ನಿಜದ ಸಂಬಂಧಕ್ಕೂ ಸುಳ್ಳು ಸಂಬಂಧಗಳಿಗೂ ಇರುವ ಅಂತರವನ್ನು ಅನನ್ಯವಾಗಿ ಅನಾವರಣಮಾಡಲಾಗಿದೆ. ಶ್ರೀನಿವಾಸಯ್ಯ ಮತ್ತು ಪೇಪರ್ ಹಾಕುವ ಸುರೇಶರ ನಡುವೆ ಇರುವುದು ನೈಜ ಸಂಬಂಧವಾದರೆ, ಮಗನ ಜೊತೆಗೆ ಇರುವುದು ಸುಳ್ಳು ಸಂಬಂಧ.ಬಯಲು ಶೀರ್ಷಿಕೆ ಸಾರ್ಥಕವಾಗಿದೆ.
‘ರಿಪೇರಿ' ಮಾಧ್ವ ಹುಡುಗಿ ಮತ್ತು ಒಕ್ಕಲಿಗ ಹುಡುಗರ ಆಂತರ ಜಾತಿಯ ಮದುವೆಯಾದ ಜೋಡಿಯ ಮೂಲಕ, ಆದರ್ಶ ಮತ್ತು ವಾಸ್ತವಗಳ ನಡುವೆ ಇರುವ ಅಂತರವನ್ನು, ಗೋಡೆಯ ರೂಪಕದ ಮೂಲಕ ಸೂಚಿಸಲಾಗಿದೆ.
ಸರ್ಕ್ಯುಲೇಟಿಂಗ್ ಲೈಬ್ರೆರಿ' ಇಲ್ಲಿನ ಕಥಾನಾಯಕ ಅನಾರೋಗ್ಯದ ಕಾರಣಕ್ಕೆ ವೃತ್ತಿಯಿಂದ ಮೊದಲೇ ನಿವೃತ್ತಿ ಹೊಂದಿದರೂ ಅವನಿಗೆ ಇದ್ದ ಓದಿನ ದಾಹ ಪುಸ್ತಕಹಗಳ ಸಂಗ್ರಹಕ್ಕೆ ಕಾರಣವಾಗುವುದಲ್ಲದೆ, ಸರ್ಕ್ಯುಲೇಟಿಂಗ್ ಲೈಬ್ರೆರಿಯ ಸ್ಥಾಪನೆಗೂ ಕಾರಣವಾಗಿ, ಅವನ ಪುಸ್ತಕ ಆಸಕ್ತ ಸಹೋದ್ಯೋಗಿಯ ಬದುಕು , ದುರಂತದಲ್ಲಿ ಅಂತ್ಯವಾಗುವುದನ್ನು ತಪ್ಪಿಸುವ ಮೂಲಕ, ಬದುಕ ಬದಲಿಸಬಹುದು ಎನ್ನುವ ಆಶಾವಾದಿ ನಿಲುವಿಗೆ ಪ್ರೇರಕವಾಗಿದೆ. ಅದು ಕತೆಯ ಅಂತ್ಯದಲ್ಲಿ ಸೂಚ್ಯವಾಗಿ ಪ್ರಕಟವಾಗುತ್ತದೆ .
ವೈಶಿಷ್ಟ್ಯಗಳು:1 ಮನುಷ್ಯ ಸ್ವಭಾವದ ಸಂಕೀರ್ಣ ಗ್ರಹಿಕೆ.
2: ಕಾವ್ಯಮಯ ಭಾಷೆ
3. ಕತೆಗಳನ್ನು ಅಪೂರ್ಣವಾಗಿಸಿ, ಸಹೃದಯರ ಕಲ್ಪನಾ ಶಕ್ತಿಗೆ ಇಂಬುಗೊಡುವುದು.
4: ನಿರ್ಜೀವವಾದುವು ಜೀವಂತ ವ್ಯಕ್ತಿಗಳ ಜತೆಗಿನ ಸಾಹಚರ್ಯದಿಂದ ಜೀವ ಪಡೆದುಕೊಳ್ಳುವ ಮಾಯಕ.
ಈ ಕೃತಿ ಗೌಣವೆನ್ನಬಹುದಾದ ಕೆಲವು ಲಿಪಿ ಸ್ಖಾಲಿತ್ಯಗಳು ಮತ್ತು ಅನರ್ಥಕ ಶಬ್ದಗಳ ಪ್ರಯೋಗಗಳನ್ನು (ಎಣ್ಣೆಗೆ ಬದಲಾಗಿ ಎಳ್ಳು) ಹೊಂದಿದೆ.
“ಓದಿದಾಗ ಕಾವ್ಯಾನುಭವದ ಸುಖ ನೀಡುತ್ತದೆ. ಕನ್ನಡ ಕಾವ್ಯ ಪರಂಪರೆಯ ವಿವಿಧ ಲಯಗಳನ್ನು ಇವರು ತಮ್ಮ ಕಾವ್ಯ ರಚನೆಯಲ್ಲ...
“ನೀನೂ ಅದನ್ನು ನೋಡುವಿಯಂತೆ ಅಂದ. 'ಸರಿ ಲೊಕೇಶನ್ ಕಳಿಸು' ಅಂದೆ. ಲೊಕೇಶನ್ ಬಂದು ಬಿದ್ದಾಗ ನೋಡಿದರೆ ಅದ...
“ಮೇಲುನೋಟಕ್ಕೆ ಮುಳುಗಡೆ ಸಂತ್ರಸ್ತರ ಕುರಿತಾದ ಕಥಾನಕವಿದು ಎನ್ನಬಹುದಾದರೂ, ಕಾಲಿಗೆ ಚಕ್ರ ಹತ್ತಿಸಿಕೊಂಡು ದೇಶ ಕಾ...
©2025 Book Brahma Private Limited.