ಈ ಕಥೆಯನ್ನು ಓದಿ ಮರುಗದಿರಲು ಸಾಧ್ಯವಿಲ್ಲ


“ಮೇಲುನೋಟಕ್ಕೆ ಮುಳುಗಡೆ ಸಂತ್ರಸ್ತರ ಕುರಿತಾದ ಕಥಾನಕವಿದು ಎನ್ನಬಹುದಾದರೂ, ಕಾಲಿಗೆ ಚಕ್ರ ಹತ್ತಿಸಿಕೊಂಡು ದೇಶ ಕಾಲದ ಪರಿವೆಯಿಲ್ಲದೆ ಗರಗರನೆ ತಿರುಗುತ್ತಲಿರುವ ನಮ್ಮ ದೈನಂದಿನ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ,” ಎನ್ನುತ್ತಾರೆ ಮೋಹನ್ ಕುಮಾರ್ ಡಿ ಎನ್. ಅವರು ಗಜಾನನ ಶರ್ಮಾ ಅವರ “ಪುನರ್ವಸು” ಕೃತಿ ಕುರಿತು ಬರೆದ ವಿಮರ್ಶೆ.

ಈ ಕಥೆಯನ್ನು ಓದಿ ಮರುಗದಿರಲು ಸಾಧ್ಯವಿಲ್ಲ. ಮುಳುಗಿದ್ದು ಭಾರಂಗಿಯೇ ? ಬದುಕೇ? ಭರವಸೆಯೇ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಹಾದಿಯ ಪಯಣ ಅಸೀಮವಾದುದಾಗಿದೆ. ಅನಂತವಾದುದಾಗಿದೆ. ಅಗಮ್ಯವಾದುದಾಗಿದೆ ಮತ್ತು ಅತೀವ ನೋವು, ದುಃಖ, ನಿರಾಸೆಯಿಂದ ಕೂಡಿದೆ. ಮೇಲುನೋಟಕ್ಕೆ ಮುಳುಗಡೆ ಸಂತ್ರಸ್ತರ ಕುರಿತಾದ ಕಥಾನಕವಿದು ಎನ್ನಬಹುದಾದರೂ, ಕಾಲಿಗೆ ಚಕ್ರ ಹತ್ತಿಸಿಕೊಂಡು ದೇಶ ಕಾಲದ ಪರಿವೆಯಿಲ್ಲದೆ ಗರಗರನೆ ತಿರುಗುತ್ತಲಿರುವ ನಮ್ಮ ದೈನಂದಿನ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ಕಣ್ಣಿಗೆ ಕಾಣುವ ಜೋಗದ ಅಪರಿಮಿತ ಮತ್ತು ಅನೂಹ್ಯವಾದ ಸೌಂದರ್ಯದ ಹಿಂದೆ, ಭಯಾನಕವಾದ ಸತ್ಯವೊಂದು ಮರೆಮಾಚಿ ಕುಳಿತಿದೆ ಎನ್ನುವ ಸಣ್ಣ ಸೂಚನೆಯೂ ನಮಗಿರಲಿಕ್ಕಿಲ್ಲ. ಶರಾವತಿಯ ಅಸಂಖ್ಯಾತ ಅಪರಿಚಿತ ಮತ್ತು ನಿಗೂಢ ಹಳ್ಳಕೊಳ್ಳಗಳಲ್ಲಿ ಅನಾದಿ ಕಾಲದಿಂದಲೂ ತಮ್ಮದೇ ವಿಶಿಷ್ಟವಾದ ಜೀವನ ಶೈಲಿ ಮತ್ತು ಸಂಸ್ಕೃತಿಯನ್ನು ಆಚರಿಸಿಕೊಂಡು ಬಂದ ಅನೇಕ ತಲೆಮಾರುಗಳ ನಿಟ್ಟುಸಿರು ನಮಗೆಂದಿಗೂ ತಾಗಲಿಕ್ಕಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ನಡೆದ ಅನ್ಯಾಯ ಅಕ್ರಮವಾಗಲಿ, ದಬ್ಬಾಳಿಕೆ ಶೋಷಣೆಯಾಗಲಿ, ಅಮಾನವೀಯ ಕ್ರೌರ್ಯವಾಗಲಿ ನಮಗೆ ತಿಳಿದಿರಲಿಕ್ಕಿಲ್ಲ.

ಎಲ್ಲೆಲ್ಲಿ, ಹೇಗೆ ಹೇಗೆ ಯಾರ್ಯಾರ ಬದುಕು ಮುಳುಗಿತೋ? ಕಾಲ ಕೆಳಗಿನ ಇನ್ನೊಂದು ಪರ್ಯಾಯ ಜೀವ ಜಗತ್ತಿನ ಬಗಗೆ ಕನಿಷ್ಟ ಮಟ್ಟದ ತಿಳುವಳಿಕೆಯೂ ಇರದ ನಮಗೆ, ಹೊಳೆಯಲ್ಲಿ ಸ್ನೇಹಿತರ ಜೊತೆಯೋ, ಬಂಧು ಬಳಗದ ಜೊತೆಯೋ ಅಥವಾ ಹೆಂಡತಿ ಮಕ್ಕಳ ಜೊತೆಯೋ ಸುರಕ್ಷಿತವಾದ ದೋಣಿಯಲ್ಲಿ ಕುಳಿತು ವಿಹಾರ ಮಾಡುವಾಗ್ಯೆ ಅದೆಷ್ಟು ಲಕ್ಷಲಕ್ಷ ಕನಸುಗಳು ಅದೇ ನೀರಿನಲ್ಲಿ ಜಲ ಸಮಾಧಿಯಾಗಿವೆಯೋ ಎನ್ನುವ ಊಹೆಯಾದರೂ ಇದ್ದೀತೇ!! ಖಂಡಿತ ಇಲ್ಲ. ನವ ನಾಗರೀಕತೆ ಎನ್ನುವ ಮಾಯಾಮೃಗದ ಬೆನ್ನು ಹತ್ತಿ ನಾಗಾಲೋಟ ಮಾಡುತ್ತಿರುವ ನಾವು ಮುಳುಗಿದ್ದು ಏನೆಂದು ಯೋಚಿಸಿದರೆ, ಮುಳುಗಿದ್ದು ಭಾರಂಗಿಯೂ ಹೌದು, ಭರವಸೆಯೂ ಎನ್ನುವುದರ ಜೊತೆಗೆ ನಮ್ಮೆಲ್ಲರ ಬದುಕೂ ಹೌದು ಎನ್ನಬೇಕು. ಈ ಹೃದಯ ವಿದ್ರಾವಕ ಕಥಾನಕ ನಮ್ಮೊಳಗೆ ಜಾಗೃತಿಯನ್ನು ಮೂಡಿಸಲಿ. ಏನಿಲ್ಲವಾದರೂ ಕೊನೆಗೆ ನಾವೆಸಗಿದ ಪ್ರಮಾದಕ್ಕೆ ಪಾಪಪ್ರಜ್ಞೆಯಾದರೂ ಸರಿ. ಕಾದಂಬರಿಯಲ್ಲಿ ಬರುವ ಭಾರಂಗಿ ದತ್ತಪ್ಪ ಹೆಗಡೆ, ತುಂಗಕ್ಕ, ಭವಾನಕ್ಕ, ಶರಾವತಿ, ದೋಣಿ ಗಣೇಶ, ಮುರಾರಿ ಭಟ್ಟ, ಕೃಷ್ಣರಾವ್, ವಸುಧಾ ಚಿರಕಾಲ ಮನದಲ್ಲಿ ನಿಲ್ಲುತ್ತಾರೆ. ಜೊತೆಗೆ ಕತ್ತಲಿನಿಂದ ಬೆಳಕಿನೆಡೆಗೆ ನಮ್ಮೆಲ್ಲರ ಬದುಕನ್ನು ಕೊಂಡೊಯ್ಯಲು ಬುನಾದಿ ಹಾಕಿದ ಗೌರವಾನ್ವಿತರಾದ ನಾಡ ಪ್ರಭು ನಾಲ್ವಡಿ ಕೃಷ್ಣರಾಜ ಒಡೆಯರು, ಪ್ರಾತಃಸ್ಮರಣೀಯರಾದ ಸರ್ ಎಂ ವಿಶ್ವೇಶರಯ್ಯನವರು, ವಿದೇಶಿಯನಾದರೂ ಕರುನಾಡಿಗೆ ಸೈವೆಗೈದ ಫೋರ್ಬ್ಸ್ ಸಾಹೇಬರು, ಕಡಾಂಬಿಯಂತಹ ಇಲಾಖಾ ಮುಖ್ಯಸ್ಥರು, ಕೃಷ್ಣರಾವ್ ರಂತಹ ನಿಷ್ಟೆಯುಳ್ಳ ಅಭಿಯಂತರರಿಗೆಲ್ಲ ನಾವು ಋಣಿಗಳಾಗಿರಬೇಕು. ಇಂತಹ ಮೌಲಿಕ ಕೃತಿಯನ್ನು ಕೊಟ್ಟ ಗಜಾನನ ಶರ್ಮರಿಗೆ ಧನ್ಯವಾದಗಳು.

MORE FEATURES

ಸ್ನೇಹಮಯಿ ಬದುಕಿನ ‘ಚುಂಬಕ ಗಾಳಿ’ 

22-03-2025 ಬೆಂಗಳೂರು

“ಸಂಪನ್ಮೂಲ ಮತ್ತು ಸಂಪರ್ಕಗಳ ಮಿತಿಯ ಕಾರಣದಿಂದ ಕೇವಲ ಇಪ್ಪತ್ತೊಂದು ಬರೆಹಗಳನ್ನು ಮಾತ್ರ ಈ ಪುಸ್ತಕದಲ್ಲಿ ಸಂಕಲಿಸ...

ಉಪಮೇಯ, ರೂಪಕಗಳ ಮೂಲಕ ಓದುಗನನ್ನ ಹಿಡಿದು ಕೂರಿಸಬಹುದು

22-03-2025 ಬೆಂಗಳೂರು

“ಒಂದೊಳ್ಳೆ ಹೋಳಿಗೆ ಊಟ ಮಾಡಿದ ಅನುಭವ. ಮಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ, ಹಸಿ ಬಾಣಂತಿಯ ಎಡಗೈ ತಿಂದಷ್ಟೇ ತೃಪ...

ಉತ್ತರ ಕರ್ನಾಟಕದ ವಿಚಾರಗಳು ಇಲ್ಲಿವೆ

21-03-2025 ಬೆಂಗಳೂರು

“ಒಟ್ಟಾರೆಯಾಗಿ ಅತ್ಯಂತ ಖುಷಿಯಿಂದ ಓದಿ ಖುಷಿ ಪಡುವ, ನಕ್ಕು ನಗಿಸುವ ಪ್ರಬಂಧ ಸಂಕಲನ ಇದು,”ಎನ್ನುತ್ತಾರೆ ಸ...