ದೇವರಲ್ಲಿ ನಾವುಗಳಿಟ್ಟಿರುವ ಅಚಲ ನಂಬಿಕೆಯ ಭಕ್ತಿಯೇ ಲೇಖಕಿಗೆ ಸೋಜಿಗವಾಗಿ ಕಾಣುವುದು. ಚಲನಚಿತ್ರಗಳಲ್ಲಿ ಮನಸ್ಸನ್ನು ಆರ್ದ್ರವಾಗಿಸುವ ಸನ್ನಿವೇಶಗಳಿಗೆ ಮಿಡಿಯುವ ನಾವು ನಿಜ ಜೀವನದಲ್ಲಿ ನಡೆಯುವ ಇಂಥದ್ದೇ ಘಟನೆಗಳಿಗೆ ಹೇಗೆ ಮುಖಾಮುಖಿಯಾಗುತ್ತೇವೆ ? ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ಹೇಳಿರುವ ರೀತಿ ನಮ್ಮ ಮನಮುಟ್ಟುತ್ತದೆ ಎನ್ನುತ್ತಾರೆ ಲೇಖಕಿ ಎಂ.ಆರ್. ಅನಸೂಯ. ಅವರು ಲೇಖಕಿ ಎಂ.ಆರ್. ಕಮಲಾರವರ ಊರ ಬೀದಿಯ ಸುತ್ತು ಕೃತಿಯ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ..
ಕೃತಿ: ಊರ ಬೀದಿಯ ಸುತ್ತು
ಲೇಖಕಿ: ಎಂ.ಆರ್. ಕಮಲಾ
ಪುಟ: 182
ಬೆಲೆ: 175
ಪ್ರಕಾಶನ: ಕಥನ ಪ್ರಕಾಶನ
ನನ್ನ ಮೆಚ್ಚಿನ ಲೇಖಕಿ ಎಂ.ಆರ್. ಕಮಲ ಪ್ರೀತಿಯ ಷರತ್ತು ಹಾಕಿ ಕಳುಹಿಸಿದ ಮೂರು ಪುಸ್ತಕಗಳಲ್ಲಿ ಒಂದು ' ಊರ ಬೀದಿಯ ಸುತ್ತು'
ಈ ಕೃತಿಯನ್ನು ಕಮಲ ಅವರು ತಮ್ಮ ಮನೆಯ ಸಹಾಯಕಿಯಾಗಿರುವ ಗಂಗಮ್ಮಳಿಗೆ ಅರ್ಪಿಸಿರುವುದು ಅವರ ಸಹೃದಯಿ ಅಂತಃಕರಣದ ದ್ದೋತಕವಾಗಿದೆ. ಈ ಕೃತಿಯನ್ನು ಓದುತ್ತಿರುವಾಗ ಊರ ಬೀದಿಯ ಸುತ್ತಿನೊಂದಿಗೆ ಊರ ಜನರ ಮನಸ್ಥಿತಿಗಳು ಗೊತ್ತಾಗಿ ಬಿಡುತ್ತವೆ. ಕಾರಣ ಲೇಖಕಿಯ ವಿವಿಧ ಆಯಾಮಗಳುಳ್ಳ ಸೂಕ್ಷ್ಮ ದೃಷ್ಟಿ ಲೇಖಕಿ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರು ಕಾಳನೊಡನೆ ಹೊಂದಿರುವ ಅನುಬಂಧದ ಚಿತ್ರಣವು ನಮ್ಮ ಕಣ್ಮುಂದೆಯೇ ನಿಲ್ಲುವುದಲ್ಲದೆ ಅವರ ವ್ಯಕ್ತಿತ್ವಗಳ ಒಳನೋಟವು ನಮಗೆ ಅಲ್ಲಲ್ಲೇ ದಕ್ಕುತ್ತದೆ. ಈ ಕೃತಿಯಲ್ಲಿ ಕಂಡು ಬರುವ ಲೇಖಕಿಯ ವೈಯಕ್ತಿಕ ಜೀವನದ ಹೊಳಹುಗಳು ಹಾಗೂ ವೃತ್ತಿಜೀವನದ ಸೃಜನ ಶೀಲತೆಯ ಚಿಂತನೆಗಳು ಸಾಮಾಜಿಕ ಜೀವನದೊಡನೆ ಮೇಳೈಸಿಕೊಳ್ಳುವುದನ್ನು ತಿಳಿಯ ಬಹುದು.
ವೈಯಕ್ತಿಕ ನೆಲೆಯಲ್ಲಿ ನೋಡುವುದಾದರೆ ಗ್ರಹಣಬಡುಕರ ಬಗ್ಗೆ ಹರಿತವಾದ ವ್ಯಂಗ್ಯದೊಂದಿಗೆ ಮನೆಮುಂದೆ ನಡೆಯುವ ಹೆಣ್ಣಿನ ದೌರ್ಜನ್ಯವನ್ನು ಕುರಿತು ರೋಷದ ಪ್ರತಿಭಟನೆಯನ್ನು ವ್ಯಕ್ತಪಡಿಸುವುದು, ಕಮಲ ಮೇಡಂ ಮಗ ಬೀದಿನಾಯಿಗಳಿಗೆ ಊಟ ಹಾಕುವುದು, ಬೀದಿನಾಯಿಗಳ ಮರಿಗಳ ಜತನಕ್ಕಾಗಿ ಮತ್ತು ಬೀದಿನಾಯಿಗಳ ಬಾಣಂತನದ ಆರೈಕೆಗಾಗಿ ಮೇಡಂ ಮತ್ತು ಅವರ ಪತಿಯ ಪರದಾಟದ ಹಿಂದಿನ ಅಂತಃಕರಣದ ಅರಿವಾಗುವುದು. ನಿವೃತ್ತಿಯಾದ ಮೇಲೆ ನಾನೂ ಸಹಾ ಬೀದಿ ನಾಯಿಗಳಿಗೆ ಊಟ ಹಾಕಿ ಅವುಗಳ ಒಡನಾಟವಿಟ್ಟುಕೊಂಡ ಕಾರಣ ಅವರ ಕಾಳಜಿಯು ಅನುಕರಣೀಯವೆನಿಸುವುದು. ತಮಗೆ ತಾವೇ ತಮಾಷೆ ಮಾಡಿಕೊಂಡು ನಗುವ ಪ್ರವೃತ್ತಿಯೇ ಇಲ್ಲದಾಗಿ ಮಾತುಗಳು ಅನಗತ್ಯವಾಗಿ ಗಂಭೀರವಾಗುತ್ತಿದೆ ಎಂಬುದು ಲೇಖಕಿಯ ಬರಹದ ಸೂಕ್ಷ್ಮತೆಯ ಸೂಚಕವೇ ಹೌದು.
'ಯಾವ ಗುಂಪಿನೊಡನೆಯೂ ಇರಬಾರದು. ಇದ್ದರೆ ಸ್ವಂತ ಆಲೋಚನಾ ಶಕ್ತಿ ಹೊರಟು ಹೋಗುತ್ತದೆ. ಗುಂಪಿನ ಬಲವು ಒದಗಿದಾಗ ಮನುಷ್ಯನ ಮೃಗೀಯ ವರ್ತನೆ ಜಾಗೃತಗೊಳ್ಳುವ ಬಗ್ಗೆ , ಗುಂಪಿನಿಂದಾಚೆ ನಿಂತು ಬದುಕುವುದನ್ನು, ಅವುಗಳನ್ನು ಅನುಮಾನದಿಂದ ನೋಡುವುದನ್ನು ಕಲಿಯದಿದ್ದರೆ ನಾವೂ ಪರೋಕ್ಷವಾಗಿ ಕೊಲೆಗಡುಕರಾಗಿ ಬಿಡುತ್ತೇವೆ 'ಎಂಬುದಾಗಿ ಲೇಖಕಿಯು ತಮ್ಮ ಮಗಳಿಗೆ ಹೇಳುವ ಈ ಕಿವಿಮಾತುಗಳು ಸತ್ಯಕ್ಕೆ ಸನಿಹವಾಗಿದ್ದು ಎಲ್ಲರೂ ಅರಿಯಬೇಕಾದ ಬೇಕಾದ ಸಾಮಾಜಿಕ ಸಂದೇಶವಾಗಿದೆ. ಬಾಲ್ಕನಿಯಲ್ಲಿ ಕಿರುಚಾಡುವ ನಾಯಿಗಳನ್ನು ಕಂಡಾಗ ಲೇಖಕಿಯ ಸ್ವಗತ ಹೀಗಿದೆ ' ಈಗ ಮನುಷ್ಯರೇ ಒಂಟಿತನ ಹಾಗೂ ಕೇಳುವವರಿಲ್ಲದೆ ಬಳಲುತ್ತ ಇರುವಾಗ ಈ ನಾಯಿಗಳ ಒಂಟಿತನ ನೀಗಲಿ ' ಎನ್ನುವುದು ದುಬಾರಿಯ ಮಾತೇನೋ !' ಇದು ಅರಗಿಸಿಕೊಳ್ಳಲಾಗದ ಕಹಿಸತ್ಯ. ಶಬ್ದದ ನಡುವೆ ನಿಶ್ಯಬ್ದವಾಗಿ ಕುಳಿತುಕೊಂಡ ಕಾಳನಿಂದ ಬರಿ ದೀಪವನ್ನು ಹಚ್ಚುವುದಲ್ಲ ಶಬ್ದದಲ್ಲಿಯೇ ನಿಶ್ಯಬ್ದವಾಗುವುದನ್ನು ಕಾಳನಿಂದ ಕಲಿಯಬೇಕೆನ್ನುವ ಈ ಲೇಖಕಿಯ ಮಾತು ಚಿಂತನಾರ್ಹ.
'ಪ್ರೀತಿ ತೋರಿಸಿದರೆ ಜಗತ್ತಿನಲ್ಲಿ ಯಾರು ಬೇಕಾದರೂ ಕಷ್ಟದ ಸ್ಥಿತಿಯಿಂದ ಹೊರಬರ್ತಾರೆ 'ಎಂದು ಮಗನಿಗೆ ಹೇಳುತ್ತಿದ್ದ ಈ ಮಾತನ್ನು ಅವರ ಮಗ ತಮಗಾದ ಅನುಭವದ ಆಧಾರದಲ್ಲಿ ಒಪ್ಪುತ್ತಾರೆ. ಮನುಷ್ಯನಿಗೆ ಮೂಲಭೂತ ಅಗತ್ಯಗಳು ತೀರಿದ ಮೇಲೆ ಪ್ರೀತಿಯ ಅವಶ್ಯಕತೆ ಉಂಟಾಗುವುದರ ಹಿನ್ನೆಲೆಯಲ್ಲಿ ಕ್ಷಮೆ ,ಪ್ರೀತಿಯಿಂದ ಬದುಕಿನ ಗತಿಗಳು ಬದಲಾಗಿದ್ದನ್ನು ಬಹು ಮಾರ್ಮಿಕವಾಗಿ ಹೇಳುತ್ತಾರೆ. ಲೇಖಕಿಯೂ ಪ್ರೀತಿ ವಿಶ್ವಾಸ ಆದರದಿಂದ ಮಾತಾಡಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಂಥ ಯುವಕನಲ್ಲಿ ಅಚ್ಚರಿಯ ಬದಲಾವಣೆಗೆ ಕಾರಣರಾಗುತ್ತಾರೆ. ಇದೇ ಅಲ್ಲವೇ ಪ್ರೀತಿಯ ತಾಕತ್ತು ! ಕಾಶಿಗೆ ಹೋಗಿದ್ದಾಗ ಆ ಕಾಶಿ ವಿಶ್ವನಾಥನಿಗಿಂತಲೂ ದೇವಸ್ಥಾನದ ಬಳಿ ಮರದಿಂದ ಬಿದ್ದು ಒದ್ದಾಡುತ್ತಿದ್ದ ಮಂಗನ ಸಂಕಟವು ಅವರನ್ನು ಕಾಡಿದೆ. ಅವರ ಸ್ನೇಹಿತರು ತಾವು ತಿನ್ನುತ್ತಿದ್ದ ತಟ್ಟೆಯಲ್ಲೇ ಕಾಳನಿಗೂ ತಿನ್ನಿಸುತ್ತಾರೆ. ಎಂದಿಗೂ ತಾವು ತಿನ್ನುವ ತಟ್ಟೆಯಲ್ಲಿ ಕಾಳನಿಗೆ ತಿನ್ನಲು ಬಿಡದ ಲೇಖಕಿಗೆ ತಾನಿನ್ನೂ ಮಾನಸಿಕವಾಗಿ ಕ್ರಮಿಸ ಬೇಕಾದ ದಾರಿ ದೂರವಿದೆ ಎಂದನಿಸುತ್ತದೆ. ಇಂತಹ ಒಂದು ಸ್ವವಿಮರ್ಶೆಯು ಸಂವೇದನಾ ಶೀಲರಿಗೆ ಮಾತ್ರವೇ ಸಾಧ್ಯ.
ದೇವರಲ್ಲಿ ನಾವುಗಳಿಟ್ಟಿರುವ ಅಚಲ ನಂಬಿಕೆಯ ಭಕ್ತಿಯೇ ಲೇಖಕಿಗೆ ಸೋಜಿಗವಾಗಿ ಕಾಣುವುದು. ಚಲನಚಿತ್ರಗಳಲ್ಲಿ ಮನಸ್ಸನ್ನು ಆರ್ದ್ರವಾಗಿಸುವ ಸನ್ನಿವೇಶಗಳಿಗೆ ಮಿಡಿಯುವ ನಾವು ನಿಜ ಜೀವನದಲ್ಲಿ ನಡೆಯುವ ಇಂಥದ್ದೇ ಘಟನೆಗಳಿಗೆ ಹೇಗೆ ಮುಖಾಮುಖಿಯಾಗುತ್ತೇವೆ ? ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ಹೇಳಿರುವ ರೀತಿ ನಮ್ಮ ಮನಮುಟ್ಟುತ್ತದೆ. ಇಂಥಾ ಡಂಭಾಚಾರದ ನಡವಳಿಕೆಗಳು ಸಹೃದಯಿಗಳಿಗೇ ಮಾತ್ರ ಅತ್ಮವಿಮರ್ಶೆಗೆ ತೊಡಗಿಸುತ್ತವೆ. ಕಾಳನ ಮೂಲದ ಬಗ್ಗೆ ಪ್ರಸ್ತಾಪಿಸುತ್ತಾ ಪೌರತ್ವ ತಿದ್ದುಪಡಿ ಕಾಯಿದೆಯು ಹುಟ್ಟು ಹಾಕಿದ ತಲ್ಲಣಗಳ ಬಗ್ಗೆ ಹೇಳುವುದು ಹಾಗೂ 'ಮನೆಯಿರದ ಊರಿಗೆ ಮರಳಬಹುದೇ ಅಮ್ಮ ? ಎಂಬ ಕವಿತೆಯು ನಮ್ಮ ಅಂತಃಕರಣವನ್ನು ತಟ್ಟುತ್ತದೆ. ಹೀಗೆ ವೈಯುಕ್ತಿಕ ನೆಲೆಯಲ್ಲಿನ ಈ ಲೇಖನಗಳು ಸಮಾಜಮುಖಿಯಾದ ಸಂದೇಶಗಳಾಗಿವೆ.
ಇನ್ನು ವೃತ್ತಿಜೀವನದ ನೆಲೆಯಲ್ಲಿ ನಿಂತು ನೋಡಿದಾಗ ಕಾಳ ರಸ್ತೆಯಲ್ಲಿ ಅಲ್ಲಲ್ಲೇ ನಿಂತು ಸತಾಯಿಸುವುದನ್ನು ಛಂದಸ್ಸಿನ ಯತಿಗೆ ಹೋಲಿಸುತ್ತಲೇ , ಸರ್ಕಾರಿ ಕಾಲೇಜುಗಳಲ್ಲಿ ದೀರ್ಘ ಸೇವೆ ಸಲ್ಲಿಸಿದ ಲೇಖಕಿಗೆ ಬಡ ವಿದ್ಯಾರ್ಥಿಗಳ ಪರದಾಟವನ್ನು ಹತ್ತಿರದಿಂದ ನೋಡಿ ಬದುಕನ್ನು ವಿಶಾಲ ನೆಲೆಯಲ್ಲಿ ಅರ್ಥ ಮಾಡಿಕೊಂಡವರಾಗಿ ಯಾರನ್ನೂ ನಿಕೃಷ್ಟತೆಯಿಂದ ನೋಡದ ಮನಸ್ಥಿತಿಯನ್ನು ತಲುಪಿದ್ದೇನೆ ಎಂದು ಹೇಳುವ ಮೂಲಕವೇ ಓದುಗರಲ್ಲಿ ಮಾನವೀಯತೆಯ ಭಾವವನ್ನು ಸ್ಪುರಿಸುತ್ತಾರೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಸಿಗುವಷ್ಟು ಅನುಭವವು ಮತ್ತೆ ಇನ್ನೆಲ್ಲಿಯೂ ಸೀಗಲಾರದು ಎಂಬುದಕ್ಕೆ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿಯಾಗಿ ನಿವೃತ್ತಳಾಗಿರುವ ನನ್ನ ಸಹಮತವಿದೆ. ಸಂಬಳದ ಪೈಪೋಟಿಗೆ ಬಿದ್ದ ಮನಸ್ಸು ಹೇಗೆ ಸಂತೋಷವನ್ನು ಖುಷಿಯನ್ನು ಕಳೆದುಕೊಳ್ಳುತ್ತದೆ ಎಂದು ತಮ್ಮ ವಿದ್ಯಾರ್ಥಿಯ ಮನಸ್ಥಿತಿಯನ್ನು ಉದಾಹರಿಸಿದ್ದು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಪ್ರಾಣಿಗಳು ಪ್ರೀತಿ ವಿಶ್ವಾಸ ಗಳಿಗೆ ಬಾಗಿದರೆ ಜನರು ಮಾತ್ರ ಹಣ ಹಾಗೂ ಸ್ಥಾನಮಾನಗಳಿಗೆ ಬಾಗುತ್ತಾರೆ ಎಂಬ ಸಾರ್ವಕಾಲಿಕ ಸಾರ್ವತ್ರಿಕ ಸತ್ಯವನ್ನು ಹೇಳಲು ತಮ್ಮ ವೃತ್ತಿ ಜೀವನದ ಸ್ವಾರಸ್ಯಕರ ಘಟನೆಯೊಂದನ್ನು ಹೇಳುತ್ತಾರೆ. ಇಲ್ಲಿ ಲೇಖಕಿಯ ಹಮ್ಮುಬಿಮ್ಮಿಲ್ಲದ ವೃತ್ತಿಪರ ಬದ್ಧತೆಯನ್ನು ಕಾಣಬಹುದು
ಈ ಕೃತಿಯ ನಾಯಕ ಕಾಳನ ಕುರಿತ ಲೇಖಕಿಯ ಕಾಳಜಿಯು ಕೃತಿಯುದ್ದಕ್ಕೂ ಕಾಣುತ್ತಿದ್ದರೂ ಕಾಳನ ಮೇಲಿನ ಲೇಖಕಿಯ ಮಮಕಾರ ಹಾಗೂ ವ್ಯಾಮೋಹದ ತೀವ್ರತೆಯು ಅರಿವಿಗೆ ಬರುವುದು ಕಾಳನಿಗೆ ಬರೆದ ಪತ್ರವನ್ನೋದಿದ ನಂತರವೇ. ಇನ್ನು ಈ ಕೃತಿಯನ್ನು ಅರ್ಪಣೆ ಮಾಡಿರುವ ' ಗ್ಯಾಂಜೆಸ್ ಮದರ್ ' ಗಂಗಮ್ಮನೇ ಕಮಲ ಮೇಡಂ ನಿವೃತ್ತರಾಗುವ ತನಕ ಮನೆಯ ಅನಭಿಷಿಕ್ತ ರಾಣಿ. ದಿನಾ ನೆರೆಹೊರೆಯವರ ಜೊತೆ ಕ್ಯಾತೆ ತರಲೆಗಳು ಹಾಗೂ ಕಾಳನ ಮೇಲಿನ ಮುನಿಸು ಇದೆಲ್ಲದರ ನಡುವೆ ಮನೆಯವರೆಲ್ಲರ ಪ್ರೀತಿಯನ್ನು ಪಡೆದ ಗಂಗಮ್ಮನ ಪ್ರಭಾವ ಕಡಿಮೆಯೇನಲ್ಲ. ಲೇಖನವೊಂದರಲ್ಲಿ ಲೇಖಕಿಯವರು ಬರೆದಿರುವ 'ಗೂಡರು' ಎನ್ನುವ ಪದ ಓದಿದ ಕೂಡಲೆ ಅದೆಲ್ಲಿಂದಲೋ ನಮ್ಮ ಅಜ್ಜಿಯ ನೆನಪು ಧುತ್ತೆಂದು ಬಿತ್ತು.ಮೋಡ ಮುಚ್ಚಿಕೊಂಡಾಗ ನಮ್ಮ ಅಜ್ಜಿಯು ಹೇಳುತ್ತಿದ್ದ ಮಾತಿದು. ನಂತರ ಇದು ನನ್ನ ಕಿವಿಗೆ ಬೀಳಲೇ ಇಲ್ಲ .ನಮ್ಮ ಅಮ್ಮನೂ ಸಹಾ ಮೋಡ ಮುಚ್ಚಿಕೊಂಡಿದೆ ಎನ್ನುತ್ತಿದ್ದರು. 'ಅಟ್ಲು' ಎನ್ನುವ ಪದವಂತೂ ಅಪರಿಚಿತವೇ ಸರಿ. ಓದುಗರು ಅಲ್ಲಲ್ಲೇ ಹಾಸ್ಯ ಲಹರಿಯಲ್ಲಿ ಸಾಗಬಹುದು.,ಲಲಿತ ಪ್ರಬಂಧ ಗಳ ಈ ಕೃತಿಯು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ ಗಂಭೀರ ವಿಷಯಗಳನ್ನೂ ಸಹ ಸರಳ ಸುಲಲಿತವಾಗಿಯೇ ಹೇಳುವ ಲೇಖಕಿಯ ವಿಶಿಷ್ಟ ಶೈಲಿಗೆ ಸಹೃದಯಿ ಓದುಗರು ಅಹುದಹದೆನುತ ತಲೆದೂಗಲೇ ಬೇಕು.
- ಎಂ.ಆರ್. ಅನಸೂಯ
""ಒಂದು ಪುರಾತನ ನೆಲದಲ್ಲಿ" ಪ್ರವಾಸ ಕಥನದ ರೂಪದಲ್ಲಿರುವ ಒಂದು ಮಿಶ್ರ ತಳಿಯ ಇತಿಹಾಸ. ಇದು ಈಜಿಪ್ಟ್ ಸ...
"ಪದ್ಮಾ ಅವರ ಕಥೆಗಳು ಮುಖ್ಯವಾಗಿ ಹದಿಹರೆಯದವರ ಸಂದಿಗ್ಧತೆಗಳು, ಆಧುನೀಕರಣ, ಗ್ರಾಹಕೀಕರಣ ಮತ್ತು ಜಾಗತೀಕರಣದೊಂದಿಗೆ...
"ಜಾತಿ ಕಾರಣಕ್ಕೆ ಶೋಷಣೆಗೊಳಗಾದವರು ಈ ಪ್ರಯತ್ನದ ಭಾಗವಾಗಿ, ಶಿವರಾಜ ಬ್ಯಾಡರಹಳ್ಳಿ ಅವರ ‘ಒಂದು ತಲೆ ಚವುರದ ...
©2024 Book Brahma Private Limited.