"ಪದ್ಮಾ ಅವರ ಕಥೆಗಳು ಮುಖ್ಯವಾಗಿ ಹದಿಹರೆಯದವರ ಸಂದಿಗ್ಧತೆಗಳು, ಆಧುನೀಕರಣ, ಗ್ರಾಹಕೀಕರಣ ಮತ್ತು ಜಾಗತೀಕರಣದೊಂದಿಗೆ ವ್ಯವಹರಿಸುತ್ತವೆ. ಗಂಡು ಹೆಣ್ಣಿನ ಪ್ರೇಮ, ಪ್ರೀತಿ, ಕಾಮ ಸಂಬಂಧಗಳನ್ನು, ಅವುಗಳ ವಿಷಣ್ಣತೆಗಳನ್ನು ವೈಯುಕ್ತಿಕ, ಸಾಮಾಜಿಕ ಸಂಬಂಧಗಳಲ್ಲಿ ಹೆಣ್ಣು ಎರಡನೆಯ ದರ್ಜೆಯ ಪ್ರಜೆಯಾಗಿ ಹೇಗೆ ನಡೆಸಿಕೊಳ್ಳಲ್ಪಡುತ್ತಾಳೆಂಬುದನ್ನು ಈ ಕಥೆಗಳು ಬಿತ್ತರಿಸುತ್ತವೆ," ಎನ್ನುತ್ತಾರೆ ಮಲ್ಲೇಶಪ್ಪ ಸಿದ್ರಾಂಪೂರ. ಅವರು ತಮ್ಮ ಇನ್ ಸ್ಟಂಟ್ ಲೈಫ್ ಕೃತಿಗೆ ಬರೆದಿರುವ ಅನುವಾದಕರ ಮಾತು.
ಆಧುನಿಕ ಪೂರ್ವದ ಸಮಾಜದಲ್ಲಿ ಭಾರತದಲ್ಲಿ ಹೆಣ್ತನವನ್ನು ನಾಗರಿಕ ಸಮಾಜವು ತನ್ನ ರಾಜಕೀಯ ಉದ್ದೇಶಕ್ಕೆ ತಕ್ಕಂತೆ ನಿರ್ವಚಿಸಿದರೆ, ಆಧುನಿಕ ಸಮಾಜವು ಮಾರುಕಟ್ಟೆ ನೀತಿಗೆ ಅನುಗುಣವಾಗಿ ಹೆಣ್ತನವನ್ನು ವ್ಯಾಖ್ಯಾನಿಸುತ್ತಿದೆ. ಆಧುನಿಕ ಪೂರ್ವ ಸಮಾಜದಲ್ಲಿಯಂತೆ ಆಧುನಿಕ ಸಂದರ್ಭದಲ್ಲಿ ಬಿಗಿ ಕಟ್ಟಳೆಗಳು ಇಲ್ಲದಿದ್ದಾಗಲೂ ಬಹುಪಾಲು ಈ ಎರಡೂ ಸಂದರ್ಭಗಳಲ್ಲಿ ಹೆಣ್ಣು ಗಂಡಿನ ಕಣ್ಣುಗಳಿಂದಲೇ ಸುತ್ತಣ ಸಮಾಜದ ಚಹರೆಗಳನ್ನು ಅರ್ಥೈಸಿಕೊಳ್ಳುವಂತಹ ವ್ಯವಸ್ಥೆಯು ನಿರ್ಮಿಸಲ್ಟಟ್ಟಿದೆ. ಆದರೆ ಕಳೆದ ಶತಮಾನದ ಕೊನೆಯ ಎರಡು ದಶಕಗಳಿಂದ ಅವಳು ಸಾಮಾಜಿಕ ಬದುಕಿನೊಂದಿಗೆ ನೇರವಾಗಿ ಮುಖಾಮುಖಿಯಾಗುತ್ತಿದ್ದಾಳೆ. ತತ್ಪರಿಣಾಮವಾಗಿ ಅವಳ ಅನುಭವಲೋಕ ವಿಸ್ತಾರಗೊಂಡಿದೆ. ಹೀಗೆ ವಿಸ್ತಾರಗೊಂಡ ಅನುಭವ ಲೋಕವು ಪ್ರತಿಭಟನಾತ್ಮಕ ನೆಲೆಯಲ್ಲಿ ವ್ಯವಸ್ಥೆಗೆ ಪ್ರತಿಕ್ರಿಯಿಸುತ್ತಿದೆ. ಇಂತಹ ಪ್ರತಿಕ್ರಿಯೆಯ ಭಾಗವಾಗಿಯೇ ಬಂದಂತವುಗಳು ಕುಪ್ಪಿಲಿ ಪದ್ಮ ಅವರ ಕಥೆಗಳು.
ಈ ಸಂಕಲನ ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದ್ದು ಇವು ಅವರ ಭಿನ್ನ ಸಂಕಲನಗಳಿಂದ ಆಯ್ದ ಕಥೆಗಳಾಗಿವೆ. ಇವು ಮೆಟ್ರೋಪಾಲಿಟನ್ ಲೈಫ್, ಕಾರ್ಪೋರೇಟ್ ಜಗತ್ತು, ಜಾಬ್ ಮಾರ್ಕೆಟ್, ಮಲ್ಟಿಕಲ್ಚರಲಿಸಂ, ಲಿವಿಂಗ್ ರಿಲೇಷನ್... ಮುಂತಾದವುಗಳನ್ನೇ ಕೇಂದ್ರ ನೆಲೆಯಲ್ಲಿಟ್ಟುಕೊಂಡಿವೆ. ಪದ್ಮಾ ಅವರ ಕಥೆಗಳು ಮುಖ್ಯವಾಗಿ ಹದಿಹರೆಯದವರ ಸಂದಿಗ್ಧತೆಗಳು, ಆಧುನೀಕರಣ, ಗ್ರಾಹಕೀಕರಣ ಮತ್ತು ಜಾಗತೀಕರಣದೊಂದಿಗೆ ವ್ಯವಹರಿಸುತ್ತವೆ. ಗಂಡು ಹೆಣ್ಣಿನ ಪ್ರೇಮ, ಪ್ರೀತಿ, ಕಾಮ ಸಂಬಂಧಗಳನ್ನು, ಅವುಗಳ ವಿಷಣ್ಣತೆಗಳನ್ನು ವೈಯುಕ್ತಿಕ, ಸಾಮಾಜಿಕ ಸಂಬಂಧಗಳಲ್ಲಿ ಹೆಣ್ಣು ಎರಡನೆಯ ದರ್ಜೆಯ ಪ್ರಜೆಯಾಗಿ ಹೇಗೆ ನಡೆಸಿಕೊಳ್ಳಲ್ಪಡುತ್ತಾಳೆಂಬುದನ್ನು ಈ ಕಥೆಗಳು ಬಿತ್ತರಿಸುತ್ತವೆ. ಹೆಣ್ಣಿನ ಕುಟುಂಬ ಸಂಬಂಧಗಳು, ಸಾಮಾಜಿಕ ಸಂಬಂಧಗಳು, ಹೆಣ್ಣಿನ ಆಂತರಿಕ ಸಂಬಂಧಗಳು (ಪ್ರೇಮ ಮತ್ತು ದೈಹಿಕ ಸಂಬಂಧಗಳು) ಪ್ರೀತಿಯ ಹೆಸರಿನಲ್ಲಿ, ಬಾಂಧವ್ಯದ ಹೆಸರಿನಲ್ಲಿ ಅವಳ ಸ್ವೇಚ್ಛೆಗಳನ್ನು ಹರಣ ಮಾಡುವುದರ ಮೂಲಕ ಅವಳ ಶೋಷಣೆಗೆ ಹೇಗೆ ಕಾರಣವಾಗುತ್ತದೆಂಬುದನ್ನು ಈ ಕಥೆಗಳು ಕಟ್ಟಿಕೊಡುತ್ತವೆ. ಒಬ್ಬಂಟಿ ಮಹಿಳೆಯ ಸಮಸ್ಯೆಗಳನ್ನು, ಉದ್ಯೋಗಸ್ಥ ಮಹಿಳೆಯ ಕೆಲಸದ ಸ್ಥಳದ ಸವಾಲುಗಳನ್ನು, ಒತ್ತಾಯಗಳನ್ನು, ಉದ್ವಿಗ್ನತೆಗಳನ್ನು, ಗೊಂದಲಗಳನ್ನು ಮತ್ತು ಸಂದಿಗ್ಧತೆಗಳನ್ನು ಆಳಕ್ಕಿಳಿದು ಪರಿಶೀಲಿಸುತ್ತವೆ. ಮುಖ್ಯವಾಗಿ ಆಧುನಿಕೋತ್ತರ ಕಾಲದ ಮಹಿಳೆಯ ತಲ್ಲಣಗಳನ್ನು, ಅವಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶೋಷಣೆಗಳ ಜೊತೆಗೆ ರಾಜಕೀಯವೂ, ರಾಜಕೀಯ ವಿಜ್ಞಾನವೂ, ರಾಜಕೀಯ ವೈಚಾರಿಕತೆಯಿಂದ ಕೂಡಿದ ಚಿಂತನೆಗಳೂ ಸಹ ಅವಳ ಸ್ತ್ರೀಯತ್ವಗಳನ್ನು ಹೇಗೆ ಅಳೆಯುತ್ತವೆ ಮತ್ತು ಬಳಸಿಕೊಳ್ಳುತ್ತವೆಯೆಂಬುದನ್ನು ಈ ಕಥೆಗಳು ಅನಾವರಣಗೊಳಿಸುತ್ತವೆ. ಜೊತೆಗೆ ಮಹಿಳೆಯ ಅಮೂರ್ತ ರೂಪದ ಹಿಂಸೆಯ ಕ್ರೌರ್ಯಗಳು ಈ ಹಿಂದಿಗಿಂತ ಈಗ ಹೇಗೆ ಬದಲಾಗಿವೆ ಮತ್ತು ಅಷ್ಟೇ ನಾಜೂಕಿನ ಕ್ರೌರ್ಯಗಳಾಗಿಯೂ ಅವು ಸ್ಸ್ತ್ರೀಯ ಜೀವ ಚೈತನ್ಯವನ್ನು ಹೇಗೆ ಹೊಸಕಿ ಹಾಕುತ್ತಿವೆಯೆಂಬುದನ್ನು ಈ ಕಥೆಗಳು ಅಭಿವ್ಯಕ್ತಿಸುತ್ತವೆ. ಆಧುನಿಕತೆ, ಪ್ರಗತಿಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲವೂ ಸ್ತ್ರೀಗೆ ಮತ್ತನೇಕ ಹೊಸರೂಪದ ಮುಳುವುಗಳನ್ನು ತಂದೊಡ್ಡುತ್ತಿವೆಯೆಂಬುದನ್ನು ಈ ಕಥೆಗಳು ಗುರುತಿಸುತ್ತವೆ. ಒಟ್ಟಿನಲ್ಲಿ ಹೆಣ್ಣಿನ ಕಣ್ಣಿಂದನೆ ನೋಡುವ ಕಥೆಗಳಿವು. ಹೆಣ್ಣಿನ ಸಂವೇದನೆಗಳನ್ನೆ ಕಟ್ಟಿಕೊಡುವ ಕಥೆಗಳಿವು.
ವ್ಯವಸ್ಥೆ ಪೂರೈಸುವ ಯಾವ ಹಂದರವನ್ನೂ ಅವಲಂಬಿಸದೆ, ಹೆಣ್ಣು ಪರಾವಲಂಬಿ ಎಂಬ ಹಣೆಪಟ್ಟಿಯನ್ನು ಬದಿಗಿಟ್ಟು, ಸ್ವಯಂ ಸಂಕಲ್ಪದಿಂದ ತನ್ನ ಶಕ್ತಿಯನ್ನು ಪ್ರದರ್ಶಿಸುವ ಹೆಣ್ತನದ ಸ್ವರೂಪವನ್ನು ಪರಿಚಯಿಸುವ ಕಥೆಗಳನ್ನು ಕುಪ್ಪಿಲಿ ಪದ್ಮ ಅವರು ಸೃಜಿಸಿದ್ದಾರೆ. ಜೊತೆಗೆ ಜಾಗತೀಕರಣದ ಹೆಸರಿನಲ್ಲಿ ಭಾರತೀಯ ಬದುಕಿನಲ್ಲಿ ಆಗುತ್ತಿರುವ ಮಾರ್ಪಾಡುಗಳನ್ನು ಚಿತ್ರಿಸುತ್ತಲೇ, ಅಲ್ಲಿನ ಹೆಣ್ಣಿನ ಜೀವನಾನುಭವದ ಬಗೆಗೆ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಾರೆ. ಜಾಗತೀಕರಣ ಜಗತ್ತನ್ನು ಹತ್ತಿರವಾಗಿಸಿದಷ್ಟು ಮಾನವೀಯ ಸಂಬಂಧಗಳನ್ನು ದೂರವಾಗಿಸುತ್ತಿದೆ, ಜಗತ್ತು ಸಂಕುಚಿತಗೊಂಡಂತೆಯೇ ಮಾನವರ ಮನಸ್ಸುಗಳು ಸಂಕುಚಿತಗೊಳ್ಳುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳಿಗಾಗಿ ಹುಡುಕಾಟಕ್ಕಿಳಿಯುವ ಕುಪ್ಪಿಲಿ ಪದ್ಮಾರವರು ಯಂತ್ರ ನಾಗರಿಕತೆಯಲ್ಲಿ ಯಂತ್ರದಂತಾಗಿರುವ ಮನುಷ್ಯರ ನಡುವೆ ಮಾಯವಾದ ಮಮಕಾರ, ಅನುರಾಗ, ಜೀವಪರ ಕಾಳಜಿ, ಸುತ್ತಣದ ಬಗೆಗಿನ ಸಹಾನುಭೂತಿಗಾಗಿ ಶೋಧಿಸುತ್ತಾರೆ. ಭಿನ್ನ ನೆಲೆಗಳಲ್ಲಿ ಗಂಡಾಳಿಕೆಯ ಮೌಲ್ಯಗಳಿಗೆ ಸವಾಲು ಹಾಕುವಂತಹ ವ್ಯಕ್ತಿತ್ವದ ಪಾತ್ರಗಳನ್ನ ಸೃಷ್ಠಿಸುವಲ್ಲಿಯೇ ಅವರು ತಮ್ಮ ಪ್ರತ್ಯೇಕತೆಯನ್ನು ಕಾಯ್ದುಕೊಂಡಿದ್ದಾರೆ. ಆ ಮೂಲಕ ಹೆಣ್ತನದ ಚೈತನ್ಯವನ್ನು ಸೃಜನಶೀಲ ಪ್ರಕ್ರಿಯೆಯಲ್ಲಿ ಕ್ರಿಯಾಶೀಲಗೊಳಿಸುವ ಪ್ರಯತ್ನ ಮಾಡಿದ್ದಾರೆ.
ತೆಲುಗಿನಲ್ಲಿ ತುಂಬಾ ಚರ್ಚೆಗೊಳಗಾಗಿರುವ ಇವರ ಕಥೆಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಈ ಕಥೆಗಳು ತೆಲುಗು ಮಣ್ಣಿನ ವಾಸನೆಯಿಂದ ಹೊರಹೊಮ್ಮಿದವುಗಳಾದರೂ, ಸಮಕಾಲೀನತೆಯನ್ನು ಮೈಗೂಡಿಸಿಕೊಂಡ ವಿಶ್ವಾತ್ಮಕ ನೆಲೆಯನ್ನುಳ್ಳವುಗಳು.
- ಮಲ್ಲೇಶಪ್ಪ ಸಿದ್ರಾಂಪೂರ
""ಒಂದು ಪುರಾತನ ನೆಲದಲ್ಲಿ" ಪ್ರವಾಸ ಕಥನದ ರೂಪದಲ್ಲಿರುವ ಒಂದು ಮಿಶ್ರ ತಳಿಯ ಇತಿಹಾಸ. ಇದು ಈಜಿಪ್ಟ್ ಸ...
"ಜಾತಿ ಕಾರಣಕ್ಕೆ ಶೋಷಣೆಗೊಳಗಾದವರು ಈ ಪ್ರಯತ್ನದ ಭಾಗವಾಗಿ, ಶಿವರಾಜ ಬ್ಯಾಡರಹಳ್ಳಿ ಅವರ ‘ಒಂದು ತಲೆ ಚವುರದ ...
“ಒಂದುಕಡೆ ಅನುಮಾನ ಪಡುವ ಸ್ವಭಾವವನ್ನು `ರಾಮಮತಿ’ ಎಂದು ಕರೆಯಲಾಗಿದೆ! ಸಮಕಾಲೀನ ವಿದ್ಯಮಾನಗಳಿಂದಾಗಿ `ಅವರ...
©2024 Book Brahma Private Limited.