ಪ್ರಬಂಧ ಮಾರ್ಗದ ಭರವಸೆಯ ಸೊಲ್ಲು  


"ಜಾತಿ ಕಾರಣಕ್ಕೆ ಶೋಷಣೆಗೊಳಗಾದವರು ಈ ಪ್ರಯತ್ನದ ಭಾಗವಾಗಿ, ಶಿವರಾಜ ಬ್ಯಾಡರಹಳ್ಳಿ ಅವರ ‘ಒಂದು ತಲೆ ಚವುರದ ಕಥೆ’ ಸಂಕಲನದ ಪ್ರಬಂಧಗಳಿಗೆ ವಿಶೇಷ ಮಹತ್ವವಿದೆ. ದಲಿತ ಪರಿಸರದ ದಟ್ಟ ವಿವರಗಳು ಪ್ರಬಂಧ ಪ್ರಕಾರದಲ್ಲಿ ಇಷ್ಟು ಪರಿಣಾಮಕಾರಿಯಾಗಿ ಬಳಕೆಯಾಗಿರುವ ಮತ್ತೊಂದು ಪ್ರಬಂಧಗಳ ಕಟ್ಟನ್ನು ನಾನು ಗಮನಿಸಿಲ್ಲ," ಎನ್ನುತ್ತಾರೆ ರಘುನಾಥ ಚ.ಹ. ಅವರು ಶಿವರಾಜ ಬ್ಯಾಡರಹಳ್ಳಿ ಅವರ ‘ಒಂದು ತಲೆ ಚವುರದ ಕಥೆ’ ಪ್ರಬಂಧ ಸಂಕಲನದ ಕುರಿತು ಬರೆದ ವಿಮರ್ಶೆ..

ಕನ್ನಡ ಕಥೆ-ಕಾದಂಬರಿ ಹಾಗೂ ಕಾವ್ಯದಲ್ಲಿ ದಟ್ಟವಾಗಿ ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿರುವ ದಲಿತಪ್ರಜ್ಞೆ ಹಾಗೂ ದಲಿತ ಪರಿಸರ, ಪ್ರಬಂಧ ಪ್ರಕಾರದಲ್ಲಿ ಸಶಕ್ತವಾಗಿ ಮೂಡಿರುವ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಕನ್ನಡ ಸಾಹಿತ್ಯದ ಮುಖ್ಯ ಪ್ರಕಾರಗಳಲ್ಲೊಂದಾಗಿ ಅಸ್ತಿತ್ವ ಕಂಡುಕೊಳ್ಳಲು ಪ್ರಬಂಧ ಪ್ರಕಾರಕ್ಕೆ ಸಾಧ್ಯವಾಗದಿರುವುದಕ್ಕೂ, ಆ ಪ್ರಕಾರದಲ್ಲಿ ದಲಿತಪ್ರಜ್ಞೆ ಸಶಕ್ತವಾಗಿ ಮೈದಳೆಯದಿರುವುದಕ್ಕೂ ಸಂಬಂಧ ಇರಬಹುದು. ತರತಮ್ಯಗಳ ವಿರುದ್ಧದ ಹೋರಾಟದಲ್ಲಿ ಬರವಣಿಗೆಯನ್ನು ನೆಚ್ಚಿದವರಿಗೆ, ಸಾಹಿತ್ಯದ ಪ್ರಮುಖ ಪ್ರಕಾರಗಳು ಮೊದಲಿಗೆ ಗಮನಸೆಳೆಯುವುದು ಸಹಜ. ಜಾತಿ ಕಾರಣಗಳಿಂದ ನೋವುಂಡವರು, ಆ ನೋವನ್ನೇ ಜೀವಶಕ್ತಿಯನ್ನಾಗಿ ಧರಿಸಿ ರೂಪುಗೊಂಡಿರುವ ಬರಹಗಾರರು ಪ್ರಬಂಧ ಪ್ರಕಾರದ ಸಾಧ್ಯತೆಗಳನ್ನು ಗಂಭೀರವಾಗಿ ದುಡಿಸಿಕೊಳ್ಳುವ ಪ್ರಯತ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕಾಗಿದೆ. ಪ್ರಬಂಧ ಪ್ರಕಾರದ ಮುಕ್ತಲಯ ಹಾಗೂ ಅಪಾರ ಸಾಧ್ಯತೆಗಳು, ಶೋಷಿತ ಸಮುದಾಯದ ಅನುಭವಗಳ ಪರಿಣಾಮಕಾರಿ ಅಭಿವ್ಯಕ್ತಿಗೆ ಹೆಚ್ಚು ಒಗ್ಗುವಂತಿದೆ. ಜಾತಿ ಕಾರಣಕ್ಕೆ ಶೋಷಣೆಗೊಳಗಾದವರು ಈ ಪ್ರಯತ್ನದ ಭಾಗವಾಗಿ, ಶಿವರಾಜ ಬ್ಯಾಡರಹಳ್ಳಿ ಅವರ ‘ಒಂದು ತಲೆ ಚವುರದ ಕಥೆ’ ಸಂಕಲನದ ಪ್ರಬಂಧಗಳಿಗೆ ವಿಶೇಷ ಮಹತ್ವವಿದೆ. ದಲಿತ ಪರಿಸರದ ದಟ್ಟ ವಿವರಗಳು ಪ್ರಬಂಧ ಪ್ರಕಾರದಲ್ಲಿ ಇಷ್ಟು ಪರಿಣಾಮಕಾರಿಯಾಗಿ ಬಳಕೆಯಾಗಿರುವ ಮತ್ತೊಂದು ಪ್ರಬಂಧಗಳ ಕಟ್ಟನ್ನು ನಾನು ಗಮನಿಸಿಲ್ಲ.

ಪ್ರಬಂಧ ಪ್ರಕಾರಕ್ಕೆ ದಲಿತ ಸಂವೇದನೆಯ ಕಸಿಯ ರೂಪದಲ್ಲಿ ಗಮನಿಸಬಹುದಾದ ಶಿವರಾಜ್‌ರ ಪ್ರಬಂಧಗಳಲ್ಲಿನ ದಲಿತಪ್ರಜ್ಞೆಯನ್ನು ಎರಡು ಆಯಾಮಗಳಲ್ಲಿ ಗುರ್ತಿಸಬಹುದು. ಸಮೃದ್ಧ ವಿವರಗಳ ಮೂಲಕ ಕಾಣಿಸಿಕೊಂಡಿರುವ ದಲಿತಪ್ರಜ್ಞೆ, ಓದುಗರಿಗೆ ದಲಿತರ ಬದುಕಿನ ಪರಿಸರವನ್ನು ಅದರೆಲ್ಲ ಚೆಲುವು ಸಂಕಟಗಳೊಂದಿಗೆ ಕಟ್ಟಿಕೊಡುವ ಪ್ರಯತ್ನ ನಡೆಸುತ್ತದೆ. ಸಮಾಜದಲ್ಲಿ ಹಾಸುಹೊಕ್ಕಾಗಿರುವ ಭಿನ್ನಭೇದಗಳ ಬಗ್ಗೆ ಸಹೃದಯರ ಗಮನಸೆಳೆಯುವುದು ಹಾಗೂ ಸಾಮಾಜಿಕ ತರತಮಗಳ ಕುರಿತು ಚರ್ಚೆಗೆ ಪ್ರೇರೇಪಿಸುವುದು ಇಲ್ಲಿನ ಪ್ರಬಂಧಗಳಲ್ಲಿನ ದಲಿತಪ್ರಜ್ಞೆಯ ಮತ್ತೊಂದು ಲಕ್ಷಣವಾಗಿದೆ.

`ಹಾವು ಹೊಡೆಯುವುದು ಎಂದರೆ' ಹಾಗೂ `ಇಲಿ ಬೇಟೆ' ರಚನೆಗಳನ್ನು ಪ್ರಬಂಧಕಾರರಾಗಿ ಶಿವರಾಜ ಬ್ಯಾಡರಹಳ್ಳಿ ಅವರ ಸಾಧ್ಯತೆಗಳಿಗೆ ಉದಾಹರಣೆಯಾಗಿ ಗಮನಿಸಬಹುದು. ಸಂಕಲನದ ಮುಖ್ಯ ರಚನೆಗಳೂ ಆದ ಈ ಎರಡೂ ಪ್ರಬಂಧಗಳು ಬೇಟೆಗೆ ಸಂಬಂಧಿಸಿದವುಗಳೇ ಆಗಿವೆ ಹಾಗೂ ತಮ್ಮ ಕೇಂದ್ರದಲ್ಲಿ ದಲಿತಪ್ರಜ್ಞೆಯನ್ನು ಒಳಗೊಂಡಿವೆ. ಮೊದಲ ಪ್ರಬಂಧದಲ್ಲಿ ದಾರಿ ತಪ್ಪಿ ಮನೆಗೆ ಬರುವ ಹಾವು ಬೇಟೆಗೆ ಗುರಿಯಾದರೆ, ಎರಡನೇ ಪ್ರಬಂಧದಲ್ಲಿ ಮನುಷ್ಯನೇ ಇಲಿಗಳ ಬಿಲಗಳನ್ನು ಹುಡುಕಿ ಬೇಟೆಯಾಡುತ್ತಾನೆ. ಮೊದಲ ಬೇಟೆಯಲ್ಲಿ ಭೀತಿ ನಿವಾರಣೆಗೊಂಡರೆ, ಎರಡನೆಯದರಲ್ಲಿ ಹಸಿವು ನಿವಾರಣೆಗೊಳ್ಳುವುದು.

`ದಾರಿ ತಪ್ಪಿ ಮನೆಗಳಿಗೆ ಬರುವ ಹಾವಿನಿಂದ ಉಂಟಾಗುವ ಭೀತಿ, ಹಾವನ್ನು ಕೊಲ್ಲಲು ನಡೆಯುವ ಪ್ರಯತ್ನಗಳು, ಆ ಪ್ರಯತ್ನಗಳು ಉಂಟು ಮಾಡುವ ಕುತೂಹಲ - ಹೀಗೆ ಹಲವು ಸ್ವಾರಸ್ಯಕರ ಪ್ರಸಂಗಗಳನ್ನು `ಹಾವು ಹೊಡೆಯುವುದು ಎಂದರೆ' ಪ್ರಬಂಧದಲ್ಲಿ ಶಿವರಾಜ್ ಕಲೆಹಾಕಿದ್ದಾರೆ. ಇಲ್ಲಿನ ವಿವರಗಳು ಮಾಹಿತಿಗಳ ಕ್ರೋಡೀಕರಣವಷ್ಟೇ ಆಗಿಲ್ಲ. ಪ್ರಸಂಗಗಳ ನಿರೂಪಣೆಯ ಮೂಲಕ ಪ್ರಾಕೃತಿಕ ಸತ್ಯವೊಂದನ್ನು ನೆನಪಿಸುವುದು ಪ್ರಬಂಧಕಾರರ ಉದ್ದೇಶವಾಗಿದೆ. ಹಾವನ್ನು ಹೊಡೆದು ಎಸೆಯುವುದು, ಸತ್ತ ಹಾವನ್ನು ಹದ್ದು ತಿನ್ನುವುದು, ಕೆಲವು ದೇಶಗಳಲ್ಲಿ ಹಾವು ಆಹಾರಪದಾರ್ಥವಾಗಿರುವುದು - ಹೀಗೆ ಆಹಾರ ಸರಪಣಿಯೊಂದನ್ನು ಪ್ರಬಂಧಕಾರರು ಗುರ್ತಿಸುತ್ತಾರೆ. ಪ್ರಕೃತಿಯಲ್ಲಿನ ಆಹಾರ ಸರಪಣಿಯನ್ನು ಗುರ್ತಿಸುವ ಮೂಲಕ, ಜಾತೀಯ ತರತಮಗಳಿಗೆ ಆಹಾರ ಸಂಸ್ಕೃತಿಯೂ ಕಾರಣಗಳಲ್ಲೊಂದಾಗಿರುವ ವಿಪರ್ಯಾಸವನ್ನು ಪ್ರಬಂಧ ಸೂಕ್ಷ್ಮವಾಗಿ ಪ್ರಸ್ತಾಪಿಸುತ್ತದೆ. ಭೀತಿಯನ್ನು ಹುಟ್ಟಿಸುವ ಹಾವನ್ನು ಬುಟ್ಟಿಯಲ್ಲಿಟ್ಟುಕೊಂಡು ಹೊಟ್ಟೆ ಹೊರೆಯುವ ಸಮುದಾಯವನ್ನು ಪ್ರಸ್ತಾಪಿಸುತ್ತ, ಬದುಕಿನ ವೈವಿಧ್ಯ ಮತ್ತು ವೈರುಧ್ಯವನ್ನು ಪ್ರಬಂಧ ಗುರ್ತಿಸುತ್ತದೆ.

`ಹಾವು ಹೊಡೆಯುವುದು ಎಂದರೆ' ಶೀರ್ಷಿಕೆಯೇ ದುರಂತವನ್ನು ಸೂಚಿಸುವಂತಿದೆ. ಹಾವಿನ ಹುಡುಕಾಟ ಹಾಗೂ ಅದನ್ನು ಹೊಡೆಯುವ ಪ್ರಸಂಗಗಳು ಸ್ವಾರಸ್ಯಕರವಾಗಿ ನಿರೂಪಣೆಗೊಂಡಿದ್ದರೂ, ಹಾವನ್ನು ಕೊಲ್ಲುವ ಕ್ರಿಯೆ ಹಿಂಸಾತ್ಮಕವಾದುದು. ಪ್ರಬಂಧದುದ್ದಕ್ಕೂ ಓದುಗರ ಮೊಗದಲ್ಲಿ ನಗೆಮುಗುಳೊಂದನ್ನು ಉಳಿಸಲು ಪ್ರಯತ್ನಿಸುವ ಪ್ರಬಂಧ, ಅಂತಿಮವಾಗಿ ಓದುಗನ ಎದೆಯಲ್ಲಿ ವಿಷಾದವನ್ನು ಉಳಿಸುತ್ತದೆ. ಈ ವಿನೋದ-ವಿಷಾದದ ಜುಗಲಬಂದಿ `ಇಲಿ ಬೇಟೆ' ಪ್ರಬಂಧದಲ್ಲೂ ಇದೆ. ‘ಇಲಿ ಬೇಟೆ’ ಪ್ರಬಂಧದ ಕಥಾನಾಯಕ ಮರಿಯ ಇಲಿ ಬೇಟೆಯಲ್ಲಿ ಗಟ್ಟಿಗ. ಯಾವ ಇಲಿ ಎಲ್ಲಿ ವಾಸಿಸುತ್ತದೆನ್ನುವುದನ್ನು ಪತ್ತೆಹಚ್ಚುವುದರಲ್ಲಿ ಪಳಗಿದವನು. ಅವನನ್ನು ಕೇಂದ್ರವಾಗಿಟ್ಟುಕೊಂಡು ನಡೆಯುವ ಇಲಿ ಬೇಟೆಗಳ ಪ್ರಸಂಗಗಳು, ಊರು ಎಳೆದ ಗೆರೆಯಾಚೆಗೆ ಬದುಕು ಕಟ್ಟಿಕೊಂಡ ಸಮುದಾಯವೊಂದರ ಬದುಕಿನ ಚಿತ್ರಗಳನ್ನು ಕಟ್ಟಿಕೊಡುತ್ತದೆ. ದುಬಾರಿಯಾದ ಬಾಡು ಕೈಗೆಟುಕದೆ ಹೋದಾಗ, ಪರ್ಯಾಯವಾಗಿ ಕಂಡುಕೊಂಡ ಇಲಿಯ ಮಾಂಸದ ರುಚಿಯನ್ನು ಪ್ರಬಂಧ ರಸವತ್ತಾಗಿ ಬಣ್ಣಿಸುತ್ತದೆ. ಒಡಲ ಕಿಚ್ಚಿನೆದುರು ಗಣಪನ ವಾಹನವೆನ್ನುವ ಭಕ್ತಿ ಹಿನ್ನೆಲೆಗೆ ಸರಿಯುತ್ತದೆ. ಮರಿಯನ ಇಲಿ ಬೇಟೆಯ ಹುಚ್ಚು ಅವನಿಂದ ಸಂಸಾರವನ್ನೇ ಕಸಿದುಕೊಂಡಿದೆ. ಇಲಿಯನ್ನು ಬೇಟೆಯಾಡುವ ಹುಚ್ಚು ಅವನ ಎರಡು ಮದುವೆಗಳನ್ನೂ ವಿಫಲವಾಗಿಸಿದೆ. ಗಂಡನ ಇಲಿ ಬೇಟೆಯ ಹುಚ್ಚಿಗೆ ರೋಸಿ ಇಬ್ಬರು ಹೆಂಡತಿಯರೂ ಅವನನ್ನು ಬಿಟ್ಟುಹೋಗಿದ್ದಾರೆ. ಸಂಸಾರ ಸುಖವನ್ನು ಹಾಳು ಮಾಡಿದ ಇಲಿಯ ವಂಶವನ್ನು ನಿರ್ವಂಶ ಮಾಡುವ ಜಿದ್ದಿಗೆ ಬಿದ್ದವನಂತೆ ಅವನು ಇಲಿಗಳ ಬೇಟೆಯಲ್ಲಿ ಮುಳುಗಿದ್ದಾನೆ. ಇಂಥ ರಣ ಬೇಟೆಗಾರ ಒಂದು ರಾತ್ರಿ, ತಿಂದೂ ಕುಡಿದೂ ಮೈಮರೆತು ಮಲಗಿರುವಾಗ ಇಲಿಗಳಿಗೇ ಬೇಟೆಯಾಗುತ್ತಾನೆ. ಮರಿಯನಿಂದ ಚರ್ಮ ಸುಲಿಸಿಕೊಂಡ ಇಲಿಗಳು ಕೆಂಡದಂತೆ ಕಾಣಿಸುವ ಚಿತ್ರ ಒಂದು ಕಡೆಯಿದ್ದರೆ, ಇನ್ನೊಂದು ತುದಿಯಲ್ಲಿ ಇಲಿಗಳಿಂದ ಮರಿಯನ ದೇಹ ಚರ್ಮ ಕಳೆದುಕೊಂಡಿರುವ ದಾರುಣ ಬಿಂಬವಿದೆ. ಬೇಟೆಗಾರನೇ ಬೇಟೆಯಾಗಿ ಹೋಗುವ ದುರಂತವನ್ನು ಪ್ರಬಂಧಕಾರರು ಚಿತ್ರಿಸುವಲ್ಲಿ ಸಾಧಿಸಿರುವ ಸಂಯಮ ಗಮನಸೆಳೆಯುತ್ತದೆ.

ದಾರುಣ ಸಂಗತಿಯನ್ನೂ ವಿನೋದದಲ್ಲಿ ಅದ್ದಿ ನಿರೂಪಿಸಬಲ್ಲ ಸಾಮರ್ಥ್ಯ ಶಿವರಾಜ್‌ರ ಪ್ರಬಂಧಗಳಲ್ಲಿ ಎದ್ದುಕಾಣಿಸುತ್ತದೆ. ವಿನೋದ, ವಿಷಾದ ಹಾಗೂ ವಿವೇಕ ಶಿವರಾಜರ ಪ್ರಬಂಧಗಳ ಸ್ಥಾಯಿಗುಣಗಳೇ ಆಗಿವೆ. ಈ ವಿನೋದಪ್ರಜ್ಞೆಯ ಹಿನ್ನೆಲೆಯಲ್ಲಿ ಯಾರ ಮೇಲೂ ಕಹಿ ಉಳಿಸಿಕೊಳ್ಳದ ಮನೋಧರ್ಮ ಇರುವಂತಿದೆ.

‘ಇಲಿ ಬೇಟೆ’ ಹಾಗೂ `ಹಾವು ಹೊಡೆಯುವುದು ಎಂದರೆ' ಪ್ರಬಂಧಗಳಲ್ಲಿ ಮಾತ್ರವಲ್ಲ, ಸಂಕಲನದ ಉಳಿದ ಪ್ರಬಂಧಗಳಲ್ಲೂ ಒಂದಲ್ಲಾ ಒಂದು ಬಗೆಯಲ್ಲಿ ಬೇಟೆ ಕಾಣಿಸುತ್ತದೆ. ಮಿಕಗಳ ಜಾಗದಲ್ಲಿ ಮನುಷ್ಯನೇ ನಿಂತಿರುವ ದಾರುಣತೆಯನ್ನೂ ಪ್ರಬಂಧಕಾರರು ಕಾಣಿಸಿದ್ದಾರೆ. `ಇಲಿ ಬೇಟೆ' ಪ್ರಬಂಧದಲ್ಲಿನ ಪಾತ್ರವೊಂದರ, `ಗುಂಡಿಗೆ ಗಟ್ಟಿ ಮಾಡ್ಕೋಬೇಕು, ಜೀವನವೇ ಒಂದು ಬೇಟೆ' ಎನ್ನುವ ಮಾತು ಶಿವರಾಜರ ಪ್ರಬಂಧಗಳ ಧ್ವನಿಯೂ ಆಗಿದೆ.

`ನಾ ನಿಲ್ಲುವುದಿಲ್ಲ' ಗ್ರಾಮೀಣ ಪ್ರದೇಶದಲ್ಲಿನ ಶೌಚ ಪ್ರಕ್ರಿಯೆಯ ಕುರಿತ ರಚನೆ. ಬಯಲು ಶೌಚದ ಸುಖ ಹಾಗೂ ಸಂಕಟ ಎರಡನ್ನೂ ಚಿತ್ರಿಸುವ ಈ ಪ್ರಬಂಧದ ಆಳದಲ್ಲಿರುವುದು ದಟ್ಟ ವಿಷಾದ. `ನಮ್ಮ ಕಣ್ಣ ಮುಂದೆಯೇ ಮಲ ಹೊರುವುದನ್ನು ನೋಡಿದ ಸಮಾಜ ಮಲ ಬಾಚಿ ಉಸಿರು ಕಟ್ಟಿ, ತನ್ನ ಕಂತೆ ಬಿಸಾಕುವ ಕಥೆಗೆ ಕೊನೆ ಎಲ್ಲಿ?', `ಚಂದ್ರಲೋಕದಲ್ಲಿ ನಡೆದಾಡುವ ಇಂದಿನ ವಿಜ್ಞಾನ ದಾಪುಗಾಲಿಡುತ್ತಿರುವಾಗಲೇ ಮಲದ ಗುಂಡಿಗೆ ಇಳಿದು ನಿದ್ರಾ ಗುಂಡಿಗೆ ಜಾರುವವರ ಬಗ್ಗೆ ನಮಗೆ ಏನೂ ಅನ್ನಿಸದಿದ್ದರೆ ಹೇಗೆ?' ಪ್ರಬಂಧ ಎತ್ತುವ ಈ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ ಬರಹದಲ್ಲಿನ ಸಾಲೊಂದನ್ನೇ ಹೆಕ್ಕಿ ಉಲ್ಲೇಖಿಸಬಹುದು: `ನಮ್ಮಂತೆ ಜೀವ ಇರುವ ಜೀವವು ನಮ್ಮ ಕಣ್ಣ ಮುಂದೆಯೇ ಇಂಥ ಕೆಲಸ ಮಾಡುತ್ತಿರುವಾಗ ನಾವು ಕಣ್ಣು ಧರಿಸಿ ನೋಡುತ್ತಿದ್ದೇವೆಯೇ ಹೊರತು, ಹೃದಯ ಧರಿಸಿ ನೋಡುತ್ತಿಲ್ಲ.' ನಮ್ಮ ನೋಟ ಮಾನವೀಯ ಸಂವೇದನೆಗಳನ್ನು ಕಳೆದುಕೊಂಡಿರುವುದಕ್ಕೆ ನಿದರ್ಶನ ರೂಪದ ಉದಾಹರಣೆಗಳನ್ನು ರಸ್ತೆಗಳಲ್ಲಿ ಎಡತಾಕುತ್ತಲೇ ಇರುತ್ತೇವೆ. ನಾಗರಿಕ ವ್ಯವಸ್ಥೆಯ ಸಂಕೇತಗಳಂತೆ ಕಾಣಿಸುವ ಕಸದ ವಿಲೇವಾರಿ, ಶೌಚವ್ಯವಸ್ಥೆ, ಚರಂಡಿ, ಮುಂತಾದವುಗಳು ಸಾಮಾಜಿಕ ತರತಮದ ಆಚರಣೆಗಳಾಗಿಯೂ ಉಳಿದಿವೆ. ಪ್ರಬಂಧ ನಮ್ಮ ಮುಂದಿಡುವ, ಸಾರ್ವಜನಿಕ ಶೌಚಾಲಯದಲ್ಲಿ ಒಬ್ಬಾತ ತನ್ನ ದೇಹದ ಅವಸರ ನಿವಾರಿಸಿಕೊಳ್ಳುವ ಸಂದರ್ಭದಲ್ಲೇ, ಶೌಚಾಲಯದ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿ ಪಾರ್ಸೆಲ್ ಬಿಚ್ಚಿ ಉಣ್ಣುವ ಚಿತ್ರವನ್ನು ನಮ್ಮ ಸಂವೇದನೆಗೆ ಎಸೆಯುವ ಸವಾಲಿನಂತೆ ನೋಡುವುದೋ ಅಥವಾ ಕರ್ಮ ಸಿದ್ಧಾಂತ-ಅಧ್ಯಾತ್ಮದ ನೆಲೆಗಟ್ಟಿನಲ್ಲಿ ನೋಡುವುದೋ?

`ನಾ ನಿಲ್ಲುವುದಿಲ್ಲ' ಬರಹ ಸೂಕ್ಷ÷್ಮವಾಗಿ ಎತ್ತುವ ಜಾತಿ ತಾರತಮ್ಯದ ಪ್ರಶ್ನೆಯನ್ನು `ಒಂದು ತಲೆ ಚವುರದ ಕಥೆ' ಪ್ರಬಂಧ ಮತ್ತಷ್ಟು ವಿಸ್ತರಿಸುತ್ತದೆ. ಊರವರ ತಲೆಯನ್ನೆಲ್ಲ ಒಪ್ಪಗೊಳಿಸುವ ಕ್ಷೌರಿಕ ದಲಿತರ ತಲೆಗಳನ್ನು ಮೂಸಿಯೂ ನೋಡುವುದಿಲ್ಲ. ಈಗ ಪರಿಸ್ಥಿತಿ ಬದಲಾಗಿರುವುದನ್ನು, ವೃತ್ತಿಗಳು ಜಾತಿಯ ಚೌಕಟ್ಟನ್ನು ಮೀರಿರುವುದನ್ನು ಪ್ರಸ್ತಾಪಿಸುವ ಪ್ರಬಂಧಕಾರರು, ಸಂವಿಧಾನದ ಆಶಯ ಎಲ್ಲ ಮನಸ್ಸುಗಳನ್ನೂ ತಲುಪಬೇಕಾದ ಅಗತ್ಯವನ್ನು ಒತ್ತಿಹೇಳುತ್ತಾರೆ. `ಕಡ್ಲೆಪುರಿಯ ಸಾಂಗತ್ಯ' ಪ್ರಬಂಧ ಕೂಡ ಜಾತಿ ತರತಮಗಳನ್ನು ಸೂಚ್ಯವಾಗಿ ಪ್ರಸ್ತಾಪಿಸುತ್ತದೆ. ಹೆಣದ ಮೇಲೆ ಕಡ್ಲೆಪುರಿ ಎರಚುವ ಸಂಪ್ರದಾಯದ ಹಿಂದೆ `ಈ ದೇಹವು ಬೆಂಡು' ಎನ್ನುವ ತಿಳಿವಳಿಕೆ ಇರಬಹುದು ಎನ್ನುತ್ತಾರೆ. ದೇಶಿ ಆಹಾರ ಪದಾರ್ಥವಾದ ಉಪ್ಸಾರು ಪ್ರಬಂಧಕಾರರಿಗೆ ಶೂದ್ರತ್ವದ ಸಂಕೇತವಾಗಿ ಕಾಣಿಸಿದೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಜಾತಿಪ್ರಜ್ಞೆ ಜೀವಂತವಾಗಿರುವುದನ್ನು, ಆ ಪ್ರಜ್ಞೆಯಿಂದಾಗಿ ನಾಗರಿಕ ಸಮಾಜ ಅಮಾನವೀಯಗೊಂಡಿರುವುದನ್ನು ಸಹೃದಯರ ಗಮನಕ್ಕೆ ತರುವ ಮೂಲಕ ಶಿವರಾಜ್ ಪ್ರಬಂಧಗಳಿಗೆ ಸಾಮಾಜಿಕ ಪ್ರಸ್ತುತತೆ ಬಹು ಸಹಜವಾಗಿ ದಕ್ಕಿದೆ.

ಪ್ರಬಂಧವೊಂದು ಯಶಸ್ವಿಗೊಳ್ಳುವಲ್ಲಿ ಪ್ರಬಂಧಕಾರನ ಓದು ಮುಖ್ಯವಾಗುತ್ತದೆ. ಪ್ರಬಂಧಕಾರನ ಓದು ದೊಡ್ಡದಾದಷ್ಟೂ ಪ್ರಬಂಧದ ರುಚಿಯೂ ಹೊಳಪೂ ಪೌಷ್ಟಿಕ ಶಕ್ತಿಯೂ ಹೆಚ್ಚುತ್ತದೆ. ಶಿವರಾಜ್‌ರ ಸಾಹಿತ್ಯಿಕ ಹಿನ್ನೆಲೆ ಅವರ ಪ್ರಬಂಧಗಳ ಧ್ವನಿಶಕ್ತಿಯನ್ನು ಹೆಚ್ಚಿಸಿದೆ. ಜನಪದಕಾರರು, ವಚನಕಾರರು, ದಾಸರು, ಕುಮಾರವ್ಯಾಸ, ಕುವೆಂಪು, ಬೇಂದ್ರೆ ಅವರ ಸಾಲುಗಳು ಇಲ್ಲಿನ ಪ್ರಬಂಧಗಳಲ್ಲಿ ಸುಳಿದುಹೋಗುವುದು ಬರಹಗಳ ಸೊಗಸನ್ನು ಹೆಚ್ಚಿಸಿದೆ ಹಾಗೂ ಪ್ರಬಂಧಕಾರರ ಓದಿನ ಸಮೃದ್ಧಿಯನ್ನು ಸೂಚಿಸುವಂತಿದೆ. ಶಿವರಾಜರ ಬರವಣಿಯ ಚಿತ್ರಕಶಕ್ತಿಗೆ ಒಂದು ಉದಾಹರಣೆ ನೋಡಿ: ``ಹಾವು ಹಿಡಿಯಲು, ಹೊಡೆಯಲು ಬಂದವರು ಎಲ್ಲವನ್ನೂ ಸಮ ಲೂಟಿ ಮಾಡಿ ಸೋರೆ ಹೊಡೆದು ಬರೀ ಖಾಲಿ ಮನೆಯಾಗಿ ಹೆಂಚಿಗೆ ಹಾಸಿದ್ದ ಜೋಡಿ ಬಿದಿರುಗಳು ಮಾತ್ರ ಕಣ್ಣಿಗೆ ಕಾಣುತ್ತವೆ. ಬೀಳಿಸಿದ ಛಾವಣಿಗಳಲ್ಲಿ ನೇತಾಡುವ ಹಗ್ಗ ಮಾತ್ರ ಉಳಿಸಿಹೋಗಿದ್ದಾರೆ. ಅದು ದೂರಕ್ಕೆ ಹಾವಿನಂತೆ ಕಾಣಿಸುತ್ತಿದೆ. ಎಲ್ಲವೂ ಬರಿದು ಮಾಡಿ ಎತ್ತ ನೋಡಿದರೂ ಖಾಲಿ ಖಾಲಿ ಆಕಾಶ ಎದುರಿಗಿದೆ. ರಾತ್ರಿ ಕಂಡ ಚಂದಿರನೂ ದೂರವಾಗಿದ್ದಾನೆ. ಕಪ್ಪನೆಯ ಬಣ್ಣಕ್ಕೆ ತಿರುಗಿಸಿದ ಬೀಸಿದ ಗಳುಗಳು ಸುಟ್ಟ ಹಾವಿನಂತೆಯೇ ಕಣ್ಣಿಗೆ ಕಾಣುತ್ತಿವೆ. ಕಣ್ಣೊರೆಸಿಕೊಂಡು ಎದ್ದ ಇಬ್ಬರೂ, ಇದೇನಿದು ಎಂಥಾ ಭೀಕರ ದೃಶ್ಯ ಎಂದರಿತ ಗಂಡ ಹೆಂಡತಿಯರಿಬ್ಬರೂ ಗಾಬರಿಯಾಗಿ ಇಬ್ಬರೂ ಒಂದೇ ಸಾರಿ ಹಾವು... ಹಾವೂ... ಹಾವೂ... ಎಂದು ಕಿಟಾರನೆ ಕಿರುಚಿಕೊಂಡರು! ಈಗ ಆ ಶಬ್ದಕ್ಕೆ ಯಾರೂ ಓಗೊಡುವುದಿಲ್ಲ. ಇವರ ಮುಂದೆ ಸುಳಿಯುವುದೇ ಇಲ್ಲ.''

‘ಒಂದು ತಲೆ ಚವುರದ ಕಥೆ’ ಸಂಕಲನದ ಕೆಲವು ಪ್ರಬಂಧಗಳನ್ನು ಆತ್ಮಕಥನದ ಸ್ವರೂಪದಲ್ಲೂ ಗಮನಿಸಬಹುದು. `ಇಲಿ ಬೇಟೆ', `ಕಡ್ಲೆಪುರಿಯ ಸಾಂಗತ್ಯ', `ದನ ಕಾಯುವ ಸುಖ', `ಹೆಣ್ಣು ನೋಡಲು ಹೋದೆ' ರಚನೆಗಳಲ್ಲಿ ಲೇಖಕರು ಬೆಳೆದುಬಂದ ಪರಿಸರದ ಸಾಕಷ್ಟು ವಿವರಗಳಿವೆ. `ಮದುವೆ ನೆರವಿಯ ಪ್ರಸಂಗ', `ಹಾರ್ಮೋನಿಯಂ ಮೇಷ್ಟ್ರು', `ತೊಟ್ಟಿ ಮನೆಗಳಲ್ಲಿ ಪುಟ್ಟ ಪೆಟ್ಟಿಗೆ' ರಚನೆಗಳು ಶಿವರಾಜ್‌ರ ಭಾವಕೋಶದ ಚಿತ್ರಗಳಾಗಿರುವಂತೆಯೇ, ಯಾವುದೇ ಹಳ್ಳಿಯಲ್ಲಿ ನಡೆಯಬಹುದಾದ ಪ್ರಸಂಗಗಳೂ ಆಗಿವೆ.

ಊರುಕೇರಿಯ ಬಗ್ಗೆ ಬರೆಯುವಾಗ ಶಿವರಾಜ್ ನೀಡುವ ವಿವರಗಳು ಸಮೃದ್ಧಿಯ ರೂಪದಲ್ಲಿ ಕಾಣಿಸಿದರೆ, ನಗರಬದುಕಿನ ಬರವಣಿಗೆಗಳಲ್ಲಿ ವಿವರಗಳು ಭಾರವಾಗಿ ಪರಿಣಮಿಸಿ ದಣಿವು ಹುಟ್ಟಿಸುತ್ತವೆ. ಬಿಎಂಟಿಸಿ ಬಸ್ ಪಯಣದ ಅನುಭವಗಳ `ಕುಂತರೆ ಸ್ವರ್ಗ ನಿಂತರೆ ನರಕ' ಬರಹದಲ್ಲಿನ ವಿವರಗಳು, ಬರವಣಿಗೆಗೆ ಲಹರಿಯ ಸ್ವಾರಸ್ಯ ತಂದುಕೊಟ್ಟಿರುವುದೇನೋ ನಿಜ. ಆದರೆ, ಲಹರಿಯ ಚೌಕಟ್ಟನ್ನು ದಾಟಿ ಬರಹ ಮತ್ತೊಂದು ಹಂತಕ್ಕೆ ಜಿಗಿದು ಹೊಸ ಆಯಾಮ ಪಡೆದುಕೊಳ್ಳಲು ಈ ವಿವರಗಳು ನೆರವಾಗಿಲ್ಲ.

ಕಾವ್ಯ, ಕಥೆ, ವಿಮರ್ಶೆಯ ಪ್ರಕಾರಗಳಲ್ಲಿ ತೊಡಗಿಕೊಂಡಿರುವ ಶಿವರಾಜ್, ‘ಒಂದು ತಲೆ ಚವುರದ ಕಥೆ’ ಕೃತಿಯ ಮೂಲಕ ಪ್ರಬಂಧ ಪ್ರಕಾರದಲ್ಲಿನ ತಮ್ಮ ಆಸಕ್ತಿ ಪ್ರಕಟಪಡಿಸಿದ್ದಾರೆ. ಪ್ರಬಂಧ ಪ್ರಕಾರ ಶಿವರಾಜ್‌ರ ಅಭಿವ್ಯಕ್ತಿಗೆ ಸಹಜವಾಗಿ ಒಗ್ಗುತ್ತದೆ. ಅನುಭವಗಳ ನಿರೂಪಣೆ ಹಾಗೂ ವಿವರಗಳ ಜೋಡಣೆಯ ಸಾವಯವ ಸಂಬಂಧದಲ್ಲಿ ಓದುಗನಿಗೆ ಹೊಳಹೊಂದನ್ನು ದಾಟಿಸುವುದು ಒಳ್ಳೆಯ ಪ್ರಬಂಧವೊಂದರ ಗುಣ. ಈ ಸಾಧ್ಯತೆ ಶಿವರಾಜ್‌ರ ಪ್ರಬಂಧಗಳಲ್ಲಿ ದಟ್ಟವಾಗಿ ಕಾಣಿಸುತ್ತದೆ. ಕನ್ನಡ ಪ್ರಬಂಧ ಪ್ರಕಾರ ಹೊಸ ಜಿಗಿತದ ನಿರೀಕ್ಷೆಯಲ್ಲಿರುವ ಸಂದರ್ಭದಲ್ಲಿ, ಆ ಹಂಬಲದ ಭಾಗವಾಗಿ ಶಿವರಾಜ್‌ರ ಪ್ರಬಂಧ ಕುತೂಹಲ ಮೂಡಿಬಂದಿದೆ ಎನ್ನಿಸುವುದಕ್ಕೆ ‘ಒಂದು ತಲೆ ಚವುರದ ಕಥೆ’ ಸಂಕಲನ ಉದಾಹರಣೆಯಂತಿದೆ. ಸಾಹಿತ್ಯದ ವಿದ್ಯಾರ್ಥಿಯಾಗಿ ಹಾಗೂ ಓರ್ವ ಪ್ರಬಂಧಕಾರನಾಗಿ ಶಿವರಾಜ್‌ರ ಮುಂದಿನ ಪ್ರಬಂಧಗಳನ್ನು ಕುತೂಹಲದಿಂದ ನಿರೀಕ್ಷಿಸಲು ಈ ಸಂಕಲನದ ರಚನೆಗಳು ಒತ್ತಾಯಿಸುವಂತಿವೆ.

ಚೊಚ್ಚಿಲ ಪ್ರಬಂಧ ಸಂಕಲನ ಶಿವರಾಜ್‌ರಿಗೆ ಎಲ್ಲ ಬಗೆಯ ಯಶಸ್ಸನ್ನು ತಂದುಕೊಡಲಿ. ಪ್ರಬಂಧಮಾರ್ಗದಲ್ಲಿನ ಅವರ ಪಯಣ ನಿರಂತರವಾಗಿರಲಿ, ಸುದೀರ್ಘವಾಗಿರಲಿ ಎಂದು ಪ್ರೀತಿಯಿಂದ ಹಾರೈಸುವೆ.

-ರಘುನಾಥ ಚ.ಹ.

MORE FEATURES

ಎಲ್ಲವನ್ನೂ ಮೀರಿ ನಿಂತ ಒಂದು ಸುಂದರ ನಿರೂಪಣೆಯುಳ್ಳ ಅನುಭವ ಕಥನವಿದು..

25-12-2024 ಬೆಂಗಳೂರು

""ಒಂದು ಪುರಾತನ ನೆಲದಲ್ಲಿ" ಪ್ರವಾಸ ಕಥನದ ರೂಪದಲ್ಲಿರುವ ಒಂದು ಮಿಶ್ರ ತಳಿಯ ಇತಿಹಾಸ. ಇದು ಈಜಿಪ್ಟ್ ಸ...

ಹೆಣ್ಣಿನ ಸಂವೇದನೆಗಳನ್ನೆ ಕಟ್ಟಿಕೊಡುವ ಕಥೆಗಳಿವು

25-12-2024 ಬೆಂಗಳೂರು

"ಪದ್ಮಾ ಅವರ ಕಥೆಗಳು ಮುಖ್ಯವಾಗಿ ಹದಿಹರೆಯದವರ ಸಂದಿಗ್ಧತೆಗಳು, ಆಧುನೀಕರಣ, ಗ್ರಾಹಕೀಕರಣ ಮತ್ತು ಜಾಗತೀಕರಣದೊಂದಿಗೆ...

ಇದನ್ನು ಕುವೆಂಪು ಮಾದರಿ ಎನ್ನಲು ಅಡ್ಡಿಯಿಲ್ಲ

24-12-2024 ಬೆಂಗಳೂರು

“ಒಂದುಕಡೆ ಅನುಮಾನ ಪಡುವ ಸ್ವಭಾವವನ್ನು `ರಾಮಮತಿ’ ಎಂದು ಕರೆಯಲಾಗಿದೆ! ಸಮಕಾಲೀನ ವಿದ್ಯಮಾನಗಳಿಂದಾಗಿ `ಅವರ...