Date: 22-04-2025
Location: ಬೆಂಗಳೂರು
ಬೆಂಗಳೂರು: ಹಿರಿಯ ಕವಿ ಎಂ. ಗೋಪಾಲಕೃಷ್ಣ ಅಡಿಗರಿಂದ ಆರಂಭಗೊಂಡ ಕರ್ನಾಟಕ ಪ್ರಕಾಶಕರ ಸಂಘವು ಕಳೆದ 40 ವರ್ಷಗಳಿಂದ ಪುಸ್ತಕೋದ್ಯಮದ ಬೆಳವಣಿಗೆಗೆ ಬದ್ಧವಾಗಿದ್ದು, ಪ್ರತಿವರ್ಷ ನಂಜನಗೂಡು ತಿರುಮಲಾಂಬ ಮತ್ತು ಎಂ. ಗೋಪಾಲಕೃಷ್ಣ ಅಡಿಗ ಪ್ರಶಸ್ತಿಗಳನ್ನು ನೀಡುವ ಮೂಲಕ ಸಾಧಕರನ್ನು ಗೌರವಿಸುತ್ತಿದೆ.
2025ನೇ ಸಾಲಿನ ನಂಜನಗೂಡು ತಿರುಮಲಾಂಬ ಪ್ರಶಸ್ತಿವನ್ನು ರಾಯಚೂರು ಜಿಲ್ಲೆ ಮಸ್ಕಿಯ ಬಂಡರ ಪ್ರಕಾಶನದ ಶ್ರೀಮತಿ ರೇಣುಕಾ ಕೋಡುಗುಂಟಿ ಅವರಿಗೆ ನೀಡಲಾಗಿದ್ದು, ಎಂ. ಗೋಪಾಲಕೃಷ್ಣ ಅಡಿಗ ಪ್ರಶಸ್ತಿಗೆ ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಅವರು ಭಾಜನರಾಗಿದ್ದಾರೆ.
ಈ ಪ್ರಶಸ್ತಿಗಳಲ್ಲಿ ತಲಾ ರೂ.15,000 ನಗದು ಮತ್ತು ಸ್ಮರಣಿಕೆ ಒಳಗೊಂಡಿರುತ್ತವೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏಪ್ರಿಲ್ 23, ಬುಧವಾರ ಬೆಳಿಗ್ಗೆ 11 ಗಂಟೆಗೆ, ಬಿ.ಎಂ.ಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಜರುಗುವ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ನಡೆಯಲಿದೆ. ಹಿರಿಯ ಕವಿ, ಚಿಂತಕ ಬಂಜಗೆರೆ ಜಯಪ್ರಕಾಶ್ ಅವರು ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
ಇದೇ ಸಂದರ್ಭದಲ್ಲಿಯೇ ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡ ಶ್ರೀ ರಘುವೀರ್ (ಸಾಹಿತ್ಯಲೋಕ ಪಬ್ಲಿಕೇಷನ್ಸ್), ಶ್ರೀ ಕೃಷ್ಣಾ ಬೆಂಗಡಿ (ಅಮೂಲ್ಯ ಪುಸ್ತಕ), ಶ್ರೀ ಅನಂತ್ ಕುಣಿಗಲ್ (ಅವ್ವ ಪುಸ್ತಕಾಲಯ), ಶ್ರೀ ನಾಹೇಶ್ (ಕದಂಬ ಪ್ರಕಾಶನ), ಶ್ರೀ ಶ್ರೀನಾಥ್ (ಬುಕ್ ಸರ್ಕಲ್) ಇವರಿಗೂ ಪುಸ್ತಕ ಗೌರವ ಪುರಸ್ಕಾರಗಳು ನೀಡಲಾಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಭೈರಮಂಗಲ ರಾಮೇಗೌಡ ವಹಿಸಲಿದ್ದು, ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ ಪ್ರಾಸ್ತಾವಿಕ ನುಡಿಗಳು ಮತ್ತು ಉಪಾಧ್ಯಕ್ಷೆ ಡಾ. ವಸುಂಧರಾ ಭೂಪತಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಪುಸ್ತಕ ಉಡುಗೊರೆ ನೀಡಲಾಗುವುದು.
ರೇಣುಕಾ ಕೋಡುಗುಂಟಿ ಪರಿಚಯ:
ರಾಯಚೂರು ಜಿಲ್ಲೆಯ ಮಸ್ಕಿಯವರು ಆದ ರೇಣುಕಾ ಕೋಡುಗುಂಟಿ ತಿಮೋಗ್ಯೂರ ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಮತ್ತು ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿಗಳನ್ನು ಪಡೆದಿದ್ದಾರೆ. ಜನಪದ, ಸಾಹಿತ್ಯದಲ್ಲಿ ಆಸಕ್ತಿಯುಳ್ಳ ಅವರು, ರಾಯಚೂರು ಹಿನ್ನಲೆಯ ಜನಪದ ಹಾಡುಗಳ ಸಂಗ್ರಹದಿಂದ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದು, ಎರಡು ಕವನ ಸಂಕಲನ, ಎರಡು ಕತೆ ಸಂಕಲನ, ಒಂದು ಹಾಯ್ಕು ಸಂಕಲನ ಪ್ರಕಟಿಸಿದ್ದಾರೆ. ಜನಪದ ಹಾಡುಗಳು, ಶವಸಂಸ್ಕಾರ ಸಂಪುಟ ಸಂಪಾದನೆ, ಜನಪದ ಆಟಗಳ ಕುರಿತು ವಿಶೇಷ ಕೆಲಸ ಮಾಡಿದ್ದಾರೆ.
ಅಹರ್ನಿಶಿ ಪ್ರಕಾಶನ ಪರಿಚಯ:
ಆಕಸ್ಮಿಕವಾಗಿ ಹುಟ್ಟಿದ ಅಹರ್ನಿಶಿ ಪ್ರಕಾಶನ 125ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದು, ಮಹಿಳೆಯರು ಮತ್ತು ಹೊಸ ಬರಹಗಾರರಿಗೆ ವೇದಿಕೆ ನೀಡುವಲ್ಲಿ ಮುಂಚೂಣಿಯಲ್ಲಿದೆ. ಯುವ ಸಮೂಹವನ್ನು ವೈಚಾರಿಕವಾಗಿ ಚೈತನ್ಯಗೊಳಿಸುವ ಬರಹಗಳಿಗೆ ಆದ್ಯತೆ ನೀಡುತ್ತಿದ್ದು, ಹಲವು ಪುಸ್ತಕಗಳು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿವೆ. ಅಕ್ಷತಾ ಹುಂಚದಕಟ್ಟೆ ಅವರ ನೇತೃತ್ವದಲ್ಲಿ ಈ ಪ್ರಕಾಶನ ಪೌಷ್ಟಿಕ ಸಾಹಿತ್ಯದ ಮೂಲಕ ಗುರುತಿಸಿಕೊಂಡಿದೆ. ಅವರ ನೇರ ನುಡಿಗಳು ಹಾಗೂ ಪುಸ್ತಕ ಸೇವೆಯನ್ನು ಗುರುತಿಸಿ ಈ ಬಾರಿ ಎಂ. ಗೋಪಾಲಕೃಷ್ಣ ಅಡಿಗ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಬೈಲಹೊಂಗಲ: ಬಸವ ಸಮಿತಿ ಬೆಂಗಳೂರು ಇವರ ವತಿಯಿಂದ ವಿಶ್ವ ಬಸವ ಜಯಂತಿ 2025 ರ ನಿಮಿತ್ತ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ...
ಬೆಂಗಳೂರು: ಹಲಸಂಗಿಯ ಸುಗಮ ಪುಸ್ತಕ ವತಿಯಿಂದ ಮೇರಿ ಆಲಿವರ್ ಅವರ ಮೂಲ ಕವಿತೆಗಳ ಅನುವಾದ ಚೈತ್ರಾ ಶಿವಯೋಗಿಮಠ ಅವರ &lsquo...
ಬೆಂಗಳೂರು: ರಾಯಚೂರಿನ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಪ್ರತಿಷ್ಠಾನ (ರಿ.)ದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಶಿ...
©2025 Book Brahma Private Limited.