Date: 03-09-2022
Location: ಬೆಂಗಳೂರು
ಲೋಕೇಶ್ ಅವರ ಪ್ರತಿಯೊಂದು ನಿಲುವಿನಲ್ಲಿ ಸಹಜವಾಗಿ ಎಂಬಂತೆ ವಾಮಪಂಥೀಯ ಒಲವು. ಸಣ್ಣದೊಂದು ಟ್ರೇಡ್ ಯೂನಿಯನ್ ವಾಸನೆ. ಆದರೆ ಅವಕ್ಕೆಲ್ಲ ಸಹಜವೆನ್ನುವಷ್ಟು ವೈಚಾರಿಕ ಆಸ್ಥೆ ಮತ್ತು ಹರವು ಎನ್ನುತ್ತಾರೆ ಲೇಖಕ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿಬುತ್ತಿ ಅಂಕಣದಲ್ಲಿ ಎಪ್ಪತ್ತೈದರ ಹೊಸ್ತಿಲಲ್ಲಿರುವ ರಂಗಕರ್ಮಿ ಜೆ. ಲೋಕೇಶ್ ಅವರ ಕುರಿತು ಬರೆದಿದ್ದಾರೆ.
ಹಾಗೆ ನೋಡಿದರೆ ನನಗೆ ಎರಡು ವರುಷಗಳ ಅವಧಿಯ ನಾಟಕ ಅಕಾಡೆಮಿ ಅಧ್ಯಕ್ಷ ಜೆ. ಲೋಕೇಶ್ ಅವರ ಪರಿಚಯವೇ ಅಧಿಕ. ಅದಕ್ಕೆ ಹೊರತಾಗಿ ಅವರದೇ ರಂಗಸಂಪದ ಮತ್ತು ರಂಗಸಂಸ್ಕೃತಿ ಸಂವೇದನೆಗಳ ಲೋಕೇಶ್ ಅವರ ದಟ್ಟವಾದ ಪರಿಚಯ ನನಗೆ ಅಷ್ಟಾಗಿ ಇಲ್ಲ. ಅಂದಹಾಗೆ ಬೆಂಗಳೂರಿನ ಹಿರಿಯ ರಂಗಕರ್ಮಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಜೆ. ಲೋಕೇಶ್ ಅವರಿಗೆ ಎಪ್ಪತ್ತೈದರ ಅಮೃತ ಮಹೋತ್ಸವದಲ್ಲಿ ಕಾಲಿಡುವ ಕಡುಸಂಭ್ರಮ. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಮಹತ್ತರ ಕಾಲಘಟ್ಟದಲ್ಲಿ ಹುಟ್ಟಿದ ಬಹುಪಾಲು ಎಲ್ಲರಿಗೂ ಅಮೃತ ಉತ್ಸವದ ಸಹಜ ಸಂತಸ ಮತ್ತು ಸಡಗರ.
ಸ್ವಾತಂತ್ರ್ಯೋತ್ತರದ ಕಾಲೋತ್ತರದಲ್ಲಿ ಹುಟ್ಟಿದ ನನ್ನಂಥವರಿಗೆ ಅದರ ದರ್ದು ಇರಲಾರದೆಂಬುದು ಬಹುತೇಕ ಹಿರೀಕರ ಅನಿಸಿಕೆ. ಅಂತಹ ಅನಿಸಿಕೆಗಳನ್ನು ನಿರಾಕರಿಸಲಾಗದೇ ಆದರಿಸುತ್ತಲೇ ತಕ್ಕಮಟ್ಟಿಗೆ ಹೇಳಬಹುದಾದ ಒಂದೆರಡು ಮಾತುಗಳಿವೆ. ಹೇಗೆ ಮನುಷ್ಯನ ಹುಟ್ಟು ಅಕಸ್ಮಿಕವೋ ಹಾಗೇ ಅದರ ಕಾಲ ಗಳಿಗೆಯೂ ಅಷ್ಟೇ ಅಕಸ್ಮಿಕ. ಅದನ್ನು ದೇಶಸ್ಥ ಮತ್ತು ಕಾಲಸ್ಥ ಕಾರಣಗಳೊಂದಿಗೆ ತಳಕು ಹಾಕಿ ನೋಡುವುದು ಮತ್ತು ಮಾತಾಡುವುದು ಅದೆಷ್ಟು ಸರಿಯೋ ನಾನರಿಯೇ.
ಅದೇನೇ ಇರಲಿ, ಈಗಿನ ಕಾಲಮಾನದಲ್ಲಿ ಮನುಷ್ಯರು ಎಪ್ಪತ್ತೈದು ವರ್ಷಗಳಷ್ಟು ಕಾಲ ಬದುಕಿರುವುದೇ ಪವಾಡ. ಅಂದರೆ ಪವಾಡಗಳನ್ನು ನಂಬದವರು ಸಹಿತ ಪವಾಡ ಸದೃಶ ಅಂತಲೇ ಹೇಳುವಂತಹ ಕಾಲಘಟ್ಟದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಅದೊಂದು ರೀತಿಯಲ್ಲಿ 'ದೇವರಾಣೆಗೂ ದೇವರಿಲ್ಲ' ಎಂಬ ಮಾತು ಅರ್ಥೈಸಿ ಹೇಳುವಂತೆ. ಲೋಕೇಶ್ ಅವರಿಗೆ ಎಪ್ಪತ್ತೈದರ ಜತೆಗೆ ಇನ್ನಿಪ್ಪತ್ತೈದು ಸೇರಿ ನೆಮ್ಮದಿಯ ನೂರು ವಸಂತಗಳು ತುಂಬಲಿ. ಅದನ್ನು ನೋಡುವ ಅವಕಾಶ ನಮಗೆಲ್ಲ ಇರಲಿ ಎಂದು ಆರಂಭಕ್ಕೇ ಹದುಳ ಮನದಿಂದ ಹಾರೈಸುವೆ.
ಬೆಂಗಳೂರಿನ ಲೋಕೇಶ್ ಅವರದು ಸಾಂಸ್ಕೃತಿಕ ಪರಂಪರೆಯ ಸುಸಂಸ್ಕೃತ ಮತ್ತು ಅನುಕೂಲಸ್ಥ ಕುಟುಂಬ. ಇವರ ತಂದೆ ಜಯದೇವಯ್ಯ. ತಾಯಿ ಚಂದ್ರಕಲಾ. ಚಂದ್ರಕಲಾ ಅವರು ದಕ್ಷಿಣಾದಿ ಸಂಗೀತ ವಿದುಷಿ. ಸಹಜವಾಗಿ ಲೋಕೇಶ್ ಅವರಿಗೆ ಸಾಂಸ್ಕೃತಿಕ ಲೋಕದ ಸರಳ ಪರಿಚಯ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿನಲ್ಲಿ ದಶಕಗಳ ಕಾಲ ಅವರದು ಹಣಕಾಸು ನಿರ್ವಹಣೆ ಕಾಯಕ. ಬ್ಯಾಂಕ್ ಉದ್ಯೋಗದ ಜತೆಯಲ್ಲಿ ಅವರಿಗೆ ಆಧುನಿಕ ರಂಗಭೂಮಿಯ ದಿವಿನಾದ ಒಡನಾಟ. ಅದು ಬರೀ ಒಡನಾಟವಲ್ಲ, ಒಡಹುಟ್ಟಿದ ರಂಗ ಪ್ರೀತಿಯಂತೆ. ಪ್ರಸಾದನ, ಬೆಳಕು, ನೇಪಥ್ಯ, ಅಭಿನಯ, ನಿರ್ದೇಶನ ಹೀಗೆ ಹೊಸ ಅಲೆಯ ರಂಗನಾಟಕಗಳಿಗೆ ಮುಖಾಮುಖಿಯಾಗಿ ಅದರ ಎತ್ತರ ಬಿತ್ತರಗಳನ್ನು ಅರಿತು ಕೊಂಡವರು. ಅಷ್ಟೇಅಲ್ಲ ರಂಗಾಭ್ಯಾಸ ಮತ್ತು ರಂಗ ಪ್ರಯೋಗಗಳ ಮೂಲಕ ಅನುಸಂಧಾನ ಮಾಡಿಕೊಂಡವರು. ಮುಖ್ಯವಾಗಿ ಇದನ್ನೆಲ್ಲ ಒಳಗೊಂಡ ಅವರೊಬ್ಬ ಅನುಭವಿ ರಂಗ ಸಂಘಟಕ. ವಿಭಿನ್ನ ಚಿಂತನೆಗಳ ರಂಗವತ್ಸಲ.
ಬೆಂಗಳೂರಿನ ರಂಗಸಂಪದವು ಲೋಕೇಶ್ ಅವರ ಸಂವೇದನಾಶೀಲ ರಂಗ ಕನಸು. ಅವರ ಮಹತ್ವಾಕಾಂಕ್ಷೆಯ ರಂಗಸಂಪದಕ್ಕೆ ಏರಿಳಿತಗಳ ಅರ್ಧ ಶತಮಾನದ ರಂಗೇತಿಹಾಸ. ಒಡಲಾಳ, ಮಹಾಚೈತ್ರ, ಅದೇಅಧೂರೇ, ಸುಲ್ತಾನ್ ಟಿಪ್ಪು, ಯಯಾತಿ, ಕದಡಿದ ನೀರು... ಹೀಗೆ ಕನ್ನಡ ರಂಗಭೂಮಿಗೆ ಐವತ್ತಕ್ಕೂ ಹೆಚ್ಚು ಚಿಂತನಾರ್ಹ ನಾಟಕಗಳನ್ನು ನೀಡಿದುದು ರಂಗಸಂಪದದ ಗರಿಮೆ. ಅಪರೂಪದ ರಂಗನಿರ್ದೇಶಕರು, ನಟ ನಟಿಯರು, ನೇಪಥ್ಯ ನಿಪುಣರನ್ನು ಕನ್ನಡ ರಂಗಭೂಮಿಗೆ ನೀಡಿದ ಹೆಗ್ಗಳಿಕೆ. ಅದರಲ್ಲಿ ಪ್ರಮುಖರೆಂದರೆ ಸಿ. ಜಿ. ಕೆ., ಪ್ರಸನ್ನ, ಆರ್. ನಾಗೇಶ್, ಟಿ. ಎನ್. ಸೀತಾರಾಮ, ಉಮಾಶ್ರೀ, ವೈಜಯಂತಿ ಕಾಶಿ, ಶಶಿಧರ ಅಡಪ... ಹೀಗೆ ಅತಿರಥ ಮಹಾರಥರ ಮಹೋನ್ನತ ಪಟ್ಟಿಯೇ ಇದೆ. ಬಿ. ವಿ. ಕಾರಂತ, ನಾಗಾಭರಣ, ಆರ್. ನಾಗೇಶ್, ಸಿ. ಜಿ. ಕೆ. ಅವರಂತಹ ಹೇಮಾಹೇಮಿ ನಿರ್ದೇಶಕರೊಂದಿಗೆ ಲೋಕೇಶ್ ನಟರಾಗಿ, ಬೆಳಕು ಮತ್ತು ರಂಗವಿನ್ಯಾಸಕರಾಗಿ ಕೆಲಸ ಮಾಡಿದ ಹಿರಿಮೆ.
ಪ್ರಾಯಶಃ ಅವರು ಕರ್ನಾಟಕ ನಾಟಕ ಅಕಾಡೆಮಿ ಕುರ್ಚಿಯ ಮೇಲೆ ಕೂಡಲು ಇವೆಲ್ಲ ಅರ್ಹತೆಗಳು ಅವರ ನೆರವಿಗೆ ನಿಂತವು. ಆಗಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀಯವರ ಕಟಾಕ್ಷೆಯು ಮತ್ತೊಂದು ಕಾರಣ ಆಗಿದ್ದೀತು ಎಂಬುದನ್ನು ಅಲ್ಲಗಳೆಯಲಾಗದು. ಏಕೆಂದರೆ ಉಮಾಶ್ರೀ ರಂಗಸಂಪದದ ಅನನ್ಯ ಒಡನಾಡಿ, ಅಭಿಜಾತ ಪ್ರತಿಭೆ.
ಬೆಂಗಳೂರು ಮಹಾನಗರಕ್ಕೆ ಆಧುನಿಕ ರಂಗಭೂಮಿಯಲ್ಲಿ ಮಹತ್ವದ ಸ್ಥಾನಮಾನ. ಹಾಗೆ ನೋಡಿದರೆ ಬೆಂಗಳೂರು ಆಧುನಿಕ ರಂಗಭೂಮಿಯ ತವರೂರು. ದೂರದ ಅಂದಿನ ಬಿಜಾಪುರದ ಅಗರಖೇಡವೆಂಬ ಹಳ್ಳಿಯಿಂದ ಬಂದ ಶ್ರೀರಂಗರಿಗೆ ನೆಲೆ ಒದಗಿಸಿದ ಊರು ಬೆಂಗಳೂರು. ಅನೇಕ ಮಹತ್ತರ ರಂಗತಂಡಗಳು ಸೇರಿದಂತೆ ನೂರಾರು ಸಣ್ಣಪುಟ್ಟ ತಂಡಗಳು ಬೃಹತ್ ಬೆಂಗಳೂರು ಮಹಾನಗರದಲ್ಲಿವೆ. ಆ ಎಲ್ಲಾ ತಂಡಗಳಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮ ನಾಟಕಗಳ ರಂಗಪ್ರದರ್ಶನ ನೀಡುವ ಉಮೇದು. ಆ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಕೆಲವು ಸಣ್ಣಪುಟ್ಟ ತಂಡಗಳು ಸದಾ ಹೋರಾಟದ ಕಾಂಕ್ಷೆಯಲ್ಲಿರುತ್ತವೆ. ಮತ್ತೊಂದು ಪರಿಪ್ರೇಕ್ಷ ಸಂಗತಿ ಎಂದರೆ ಕಲಾಕ್ಷೇತ್ರದ ಪ್ರದರ್ಶನಗಳನ್ನೇ ಕೆಲವರು ಸಮಗ್ರ ಕನ್ನಡ ರಂಗಭೂಮಿ ಚರಿತ್ರೆ ಎಂದು ಭಾವಿಸುವವರು ಇದ್ದಾರೆ. ಆದರೆ ಲೋಕೇಶ್ ಇದಕ್ಕೆ ಹೊರತಾದವರು.
ಲೋಕೇಶ್ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಅಕೆಡಮಿಷಿಯನ್ ತರಹ ಅಕಾಡೆಮಿಕ್ ನೆಲೆಯಲ್ಲಿ ಅಕಾಡೆಮಿ ನಡೆಸಲು ಪ್ರಯತ್ನ ಪಟ್ಟರು. ಅವರಿಗೊಂದು ಆ ನಿಟ್ಟಿನ ಶಿಸ್ತಿತ್ತು. ಬೆಳಗ್ಗೆ ಕಚೇರಿ ವೇಳೆಗೆ ಸರಿಯಾಗಿ ಅಕಾಡೆಮಿಗೆ ಬರುವುದು. ಅವರು ಯಾವತ್ತೂ ಕಚೇರಿಯಲ್ಲಿ ಸಿಗರೇಟ್ ಸೇದಿದವರಲ್ಲ. ನಿಗದಿತ ಕಾರ್ಯ ಕಲಾಪಗಳಲ್ಲಿ ತಪ್ಪದೇ ಭಾಗವಹಿಸುವುದು. ಅಕಾಡೆಮಿ ವತಿಯಿಂದ ಆಗದ ಕೆಲಸಗಳನ್ನು ಸರಕಾರದ ಮಟ್ಟದಲ್ಲಿ ನೀಗಿಸಿಕೊಳ್ಳಲು ಕೂಡಲೇ ಸಂಬಂಧಿಸಿದವರಿಗೆ ಮತ್ತು ಸರಕಾರದ ಪ್ರಧಾನ ಕಾರ್ಯದರ್ಶಿಗೆ ಅಚ್ಚುಕಟ್ಟಾದ ಪತ್ರ ಬರೆಯುವುದು. ಹಾಗೆ ನೂರಾರು ಪತ್ರಗಳನ್ನು ಬರೆದು ದಾಖಲೆಯನ್ನೇ ನಿರ್ಮಿಸಿದರು. ಅಂತಹ ಕಾಗದಗಳಿಂದ ಕೆಲಸ ಆಯಿತೋ ಬಿಟ್ತೋ ಎನ್ನುವುದು ಎರಡನೇ ವಿಷಯ. ಆದರೆ ಅವರು ಅದು ತನ್ನ ಹೊಣೆಗಾರಿಕೆ ಎಂಬಂತೆ ನೆರವೇರಿಸದೇ ಇರುತ್ತಿರಲಿಲ್ಲ. ಹೀಗಾಗಿ ಅಕಾಡೆಮಿಯ ಅವರ ಆಪ್ತ ಕಾರ್ಯದರ್ಶಿ ಪ್ರತಿ ನಿತ್ಯವೂ ಒಂದಲ್ಲ ಒಂದು ಡಿಕ್ಟೇಷನ್ನಿಗೆ ಸಿದ್ಧವಿರಬೇಕಿತ್ತು.
ಅಕಾಡೆಮಿಯಲ್ಲಿ ಬದಲಾವಣೆ ತರುವ ತುಡಿತ ತುಂಬಿರುವಂತಿರುತ್ತಿತ್ತು. ಪ್ರತೀ ವರ್ಷವೂ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಫಲಕವಾಗಿ ನೀಡುವ ನಟರಾಜ ಪುತ್ಥಳಿಗೆ ಬದಲು ಸುದೇಶ್ ಮಹಾನ್ ಅವರಿಂದ ಹೊಸ ವಿನ್ಯಾಸದ ಲೋಹದ ಪುತ್ಥಳಿ ಮಾಡಿಸಲು ಹೋಗಿ ರಾಜ್ಯಮಟ್ಟದಲ್ಲಿ ಸುದ್ದಿಯಾದರು. ಅಷ್ಟೇ ಯಾಕೆ ಅಕಾಡೆಮಿಯ ಲೋಗೋ ಬದಲಿಸುವ ಇಚ್ಛೆಯು ಅವರದಾಗಿತ್ತು.
ಅವರ ಬಳಿ ಬೃಹದಾಕಾರದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯೇ ಇತ್ತು. ಸುವ್ಯವಸ್ಥಿತ ರಂಗಮಂದಿರ ನಿರ್ಮಾಣ ಮತ್ತು ಅದರ ಧ್ವನಿಲೋಕದ ನಿರ್ವಹಣೆ ಇಂಜಿನಿಯರಗೆ ಇರಬಹುದಾದ ಜ್ಞಾನ ಲೋಕೇಶ್ ಅವರಲ್ಲಿದೆ. ಅದಕ್ಕಾಗಿ ಅವರಲ್ಲಿ ರಂಗಮಂದಿರಗಳ ಪ್ರಾಧಿಕಾರ ಸ್ಥಾಪನೆಯ ಮಹಾ ಕನಸು ಅಂಕುರಿಸಿತು. ಅದಕ್ಕಾಗಿ ಅವರು ಮೆಗಾ ಬಜೆಟ್ಟಿನ ಯೋಜನೆಯನ್ನೇ ರೂಪಿಸಿದ್ದರು.
ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಒಂದು ವ್ಯವಸ್ಥಿತವಾದ ರಂಗಮಂದಿರ ನಿರ್ಮಾಣವಾಗಬೇಕು. ಹಾಗೆಯೇ ನಗರ ಪ್ರದೇಶಗಳಲ್ಲಿ ಬಡಾವಣೆ ರಂಗಮಂದಿರಗಳು ರಚನೆಯಾಗಬೇಕು. ಅಂತೆಯೇ ಅವುಗಳ ನಿರ್ವಹಣೆಗೆ ಪ್ರಾಧಿಕಾರ ರಚನೆಯಾಗಬೇಕು. ಇದು ಅವರ ರಂಗಮಂದಿರ ಪ್ರಾಧಿಕಾರದ ಕನಸುಗಳ ಸಂಕ್ಷೇಪ. ಅದಕ್ಕಾಗಿ ಅವರು ನೀಲನಕ್ಷೆಯನ್ನು ರೂಪಿಸಿದ್ದರು. ಅಷ್ಟು ಮಾತ್ರವಲ್ಲ ಅವರು ಅಕಾಡೆಮಿಯಿಂದ ನಿರ್ಗಮಿಸಿದ ಮೇಲೂ ಹೊಸ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ. ರವಿ ಅವರನ್ನು ಭೇಟಿಮಾಡಿ ರಂಗಮಂದಿರ ಪ್ರಾಧಿಕಾರದ ತಮ್ಮ ಕನಸಿನ ಸಾಕಾರಕ್ಕೆ ಕೋರಿಕೆ ಸಲ್ಲಿಸಿದ ನೆನಪು ನನ್ನದು.
ಲೋಕೇಶ್ ಅವರ ಮತ್ತೊಂದು ಪ್ರಮುಖ ಕನವರಿಕೆಯೆಂದರೆ ರಂಗದಾಖಲೆಗಳ ಡಿಜಿಲಿಟೀಕರಣ. ಅದಕ್ಕಾಗಿ ಅವರು ಹಿರಿಯರಾದ ವೆಂಕಟಸುಬ್ಬಯ್ಯ ಅವರ ಬಳಿಯಿದ್ದ ರಂಗಸಂಸ್ಕೃತಿಗೆ ಸಂಬಂಧಿಸಿದ ಅನೇಕ ಪುಸ್ತಕ, ಫೋಟೊ, ಪತ್ರಿಕೆಗಳ ಪ್ರಕಟಿತ ಬರಹಗಳನ್ನು ಅಕಾಡೆಮಿಗೆ ಪಡೆದಿದ್ದರು. ಆ ಕಾರ್ಯದ ಬಾಹುಳ್ಯವನ್ನು ರಾಜ್ಯಮಟ್ಟದವರೆಗೆ ವಿಸ್ತೃತ ಮತ್ತು ವಿಸ್ತಾರಗೊಳಿಸುವ ಸಮಯದಲ್ಲಿಯೇ ಅವರು ಅಕಾಡೆಮಿಯಿಂದ ಹೊರ ಹೋಗಬೇಕಾಯಿತು.
ಅವರ ಎರಡು ವರ್ಷದ ಅವಧಿಯ ಕಡೆಯ ಗಳಿಗೆಯಲ್ಲಿ ಅವರ ಮತ್ತು ರಿಜಿಸ್ಟ್ರಾರ್ ನಡುವೆ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿತ್ತು. ಅದರ ಪರಿಣಾಮ ಅವರೇ ಘೋಷಿಸಿದ ಅಕಾಡೆಮಿ ಪ್ರಶಸ್ತಿಗಳನ್ನು ಕಲಾವಿದರಿಗೆ ಅರ್ಪಿಸುವ ಅವಕಾಶ ಅವರಿಗೆ ದೊರಕದೇ ಹೋಯಿತು. ಇಂತಹ ಅನಿರೀಕ್ಷಿತ ಕಹಿ ಪ್ರಸಂಗಗಳನ್ನು ಅವರ ತರುವಾಯ ಬಂದ ಅಕಾಡೆಮಿ ಅಧ್ಯಕ್ಷರು ಲೋಕೇಶ್ ಪ್ರಕಟಿತ ಪ್ರಶಸ್ತಿಗಳ ಪಟ್ಟಿಯನ್ನೇ ರದ್ದುಗೊಳಿಸಿದ್ದು ಸಹಿತ ದೊಡ್ಡ ಪ್ರಮಾಣದ ಸುದ್ದಿಯೇ ಆಯಿತು.
ಲೋಕೇಶ ಅವರ ಪ್ರತಿಯೊಂದು ನಿಲುವಿನಲ್ಲಿ ಸಹಜವಾಗಿ ಎಂಬಂತೆ ವಾಮಪಂಥೀಯ ಒಲವು. ಸಣ್ಣದೊಂದು ಟ್ರೇಡ್ ಯುನಿಯನ್ ವಾಸನೆ. ಆದರೆ ಅವಕ್ಕೆಲ್ಲ ಸಹಜವೆನ್ನುವಷ್ಟು ವೈಚಾರಿಕ ಆಸ್ಥೆ ಮತ್ತು ಹರವು. ಹಳ್ಳದ ಜುಳು ಜುಳು ನೀರು ಹರಿದಂತೆ ಭಾಷಣ ಮಾಡುವ ಕಲೆ ಅವರದು. ಕೇಳಬೇಕೇ ಮೊದಲೇ ಅವರು ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್, ಟ್ರೇಡ್ ಯುನಿಯನ್ ಲೀಡರ್. ಸಾಮಾಜಿಕ ಕಳಕಳಿಯುಳ್ಳ ಲೋಕೇಶ್ ಅವರದು ರಂಗವಾತ್ಸಲ್ಯದ ಓತಪ್ರೋತ ಮಾತುಗಳು. ಅಂತಹ ರಂಗವತ್ಸಲ ಲೋಕೇಶ್ ಅವರಿಗೆ ಎಪ್ಪತ್ತೈದು ವರುಷಗಳ ಅಮೃತ ಮಹೋತ್ಸವದ ಸಂಭ್ರಮ. ಅವರು ಶತಮಾನೋತ್ಸವದ ಸಡಗರ ಕಾಣಲಿ. ಅದನು ನೋಡುವ ಸಂತಸವೂ ನಮಗಿರಲಿ.
-ಮಲ್ಲಿಕಾರ್ಜುನ ಕಡಕೋಳ
9341010712
ಈ ಅಂಕಣದ ಹಿಂದಿನ ಬರಹಗಳು
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.