"ಕಥೆಯಲ್ಲಿ ಬರುವ ಬದರಿ ಯಾತ್ರೆಯ ಸನ್ನಿವೇಶಗಳು, ಕೇದಾರಲ್ಲಿ ನಡೆದ ಘಟನೆ, ಹರಿಹರದ ಕಾರ್ಖಾನೆ ಲಾಕ್ ಔಟ್, ಮಳಖೇಡದಲ್ಲಿ ಕೊನೆಯ ದೃಶ್ಯಗಳ ವಿವರಣೆಗಳನ್ನು ಆಸಕ್ತಿದಾಯಕವಾಗಿಯೂ, ಮನ ಮುಟ್ಟುವಂತೆ ಬರದಿದ್ದಾರೆ ಕುತೂಹಲದಿಂದ ಓದಿಸುತ್ತಾ ಹೋಗುತ್ತದೆ," ಎನ್ನುತ್ತಾರೆ ಮೃಣಾಲಿನಿ. ಅವರು ದೀಪಾ ಜೋಶಿ ಅವರ 'ತತ್ರಾಣಿ’ ಕೃತಿಗೆ ಬರೆದ ವಿಮರ್ಶೆ.
ಸಾಮಾಜಿಕ ಕಾದಂಬರಿ: 'ತತ್ರಾಣಿ’
ಪ್ರಕಾಶಕರು : ‘ಅಂಕಿತ ಪ್ರಕಾಶನ’
ಲೇಖಕಿ :ಶ್ರೀಮತಿ,
ಬೆಲೆ: 395
“ಹಿಂಗ ಕೊಡ್ತಾನ ಯಾಕ, ಕಸಗೋತಾನ ಯಾಕss ಅಂವಾ....? “
ಮೂಲತಃ ಉತ್ತರ ಕರ್ನಾಟಕದವರಾದ ಲೇಖಕಿ ದೀಪ ಜೋಶಿ ಅವರ ಕಾದಂಬರಿ ತತ್ರಾಣಿಯ ಈ ಒಂದು ಸಾಲು ಮೊದಲು ಅಧ್ಯಾಯದಿಂದ ಹಿಡಿದು 53 ಅಧ್ಯಾಯಗಳನ್ನು ಪೂರ್ಣಗೊಳಿಸುವತನಕ ನನ್ನಲ್ಲಿ ಪ್ರತಿಧ್ವನಿಸಿತು. ಒಂದು ಪರಿವಾರ ಮೊಳಕೆ ಒಡೆದು, ಬೆಳೆದು ಹೆಮ್ಮರವಾಗಿ, ತನ್ನ ಶಾಖೆಗಳನ್ನು ಹೊರಚಾಚಿ, ಬೇರೂರಲು ಪಡ ಬೇಕಾದ ಸಂಘರ್ಷ ಆ ದಿನಗಳಿಲ್ಲಿ ಎಷ್ಟು ಕಠಿಣವಾಗಿತ್ತು, ಅಂತಹ ಸತತ ಸಂಕಷ್ಟಗಳು ಎದುರಾದಾಗ ಯಾರನ್ನು ಹೊಣೆ ಮಾಡಬೇಕು, ತಮ್ಮನ್ನು ಹುಟ್ಟಿಸಿದ ತಂದೆ ತಾಯಿಗಳನ್ನಾ, ತಮ್ಮ ಆಚಾರ-ವಿಚಾರ, ಸಂಸ್ಕಾರವನ್ನಾ, ತಾವಿರುವ ಪ್ರದೇಶವನ್ನಾ ತಮ್ಮನ್ನಾಳುವ ಸರ್ಕಾರವನ್ನಾ ತಮ್ಮ ರಾಷ್ಟ್ರವನ್ನಾ, ಅಥವಾ ತಮ್ಮ ಹಣೆಬರಹ ಬರೆದ ಆ ಭಗವಂತನನ್ನಾ ಎನ್ನುವ ಪ್ರಶ್ನೆಗಳು ತತ್ರಾಣಿಯ ಓದುಗಳಾಗ ನನ್ನ ತಲೆಯಲ್ಲಿ ಗಿರ್ಕಿ ಹೊಡೆದವು, ಕಾದಂಬರಿ ಓದಿ ಮುಗಿಸಿ ಎರಡು ದಿನಗಳಾದರೂ ಈ ಪ್ರಶ್ನೆಗಳು, ಅಲ್ಲಿನ ಪಾತ್ರಗಳು ಮನಃಪಟಲದಿಂದ ಸರಿಯುತ್ತಲೇ ಇಲ್ಲ .
ನಮ್ಮ ಪ್ರಾಚೀನರೆಂದರೆ ಅವರು ಶೀಲಾಯುಗದವರೇನಲ್ಲ, ಆರೇಳು ದಶಕಗಳ ಆಚೆಯವರಷ್ಟೇ, ಆದರೂ ಎಂಥ ಹೊನ್ನ ಗುಂಡಿಯ , ನಿಷ್ಕಪಟ , ಧರ್ಮನಿಷ್ಠ ಜನರಿವರು ಎಂದು ಅವರ ಬಗ್ಗೆ ಅಗಾಧತೆ ಹುಟ್ಟಿಸುವ ಕಾದಂಬರಿ ಇದು, ಇದನ್ನು ಓದುತ್ತಾ ಹೋದಂತೆ ನನ್ನ ತಲೆಯಲ್ಲಿ ಅಂದು- ಇಂದಿನ ತುಲನೆ, ಸಮಾನಾಂತರವಾಗಿ ಓಡುತ್ತಿತ್ತು, ಆ ಜನರೆಲ್ಲ ಎಲ್ಲಿ ಕಳೆದು ಹೋದರು, ಎಲ್ಲ ಹೊತ್ತು ತರುವ ಡಿಎನ್ಎ, ಅವರಲ್ಲಿದ್ದ ಸದ್ಗುಣಗಳನ್ನು ಏಕೆ ನಮ್ಮ ಪೀಳಿಗೆಯವರಿಗೆ ವರ್ಗಾಯಿಸಲಿಲ್ಲ, ಯಾಕೆ ಆ ‘ವಸುದೈವ ಕುಟುಂಬಕಂ’ ಎಂಬ ಧೇಯ ವಾಕ್ಯ ಕಣ್ಮರೆ ಆಯಿತು, ನಮ್ಮಲ್ಲಿ ಇಷ್ಟೊಂದು ಸ್ವಾರ್ಥದ ನಂಜು ಹೇಗೆ ಏರಿತು ಎಂದು ಈ ಕಾದಂಬರಿ ಓದಿದಾಗ ನನ್ನನ್ನು ತೀವ್ರವಾಗಿ ಕಾಡಿದ ಅಂಶಗಳು.
ಆಗ ಆಸೆಗಳು, ನಿರೀಕ್ಷೆಗಳು ಬಹಳ ಕಡಮೆ, ಹೊಟ್ಟೆಗೆ ಹಿಟ್ಟು ಸಿಕ್ಕು ,ಹಸಿವೆ ನೀಗಿಸುವುದಕ್ಕೆ ಹಾಗು, ಧರ್ಮ ಶಾಸ್ತ್ರಗಳು ಹೇಳಿದ’ ಸ್ವಯಂಪಾಕದಂತಹ’ ಆರೋಗ್ಯವಂತ ಆಚರಣೆಗಳನ್ನು ಶ್ರದ್ಧೆಯಿಂದ ಪಾಲಿಸಿ , ಇನ್ನೊಬ್ಬರಿಗೆ ಅನ್ಯಾಯ ಮಾಡದೆ ಸಹಬಾಳ್ವೆ ನಡೆಸುವುದೇ ಬದುಕಿನ ಪ್ರಧಾನ ಗುರಿಯಾಗಿತ್ತು, ಹೊಸ ಬದಲಾವಣೆಯ ಗಾಳಿ ಆಗಲು ಬೀಸುತ್ತಿತ್ತು. ಆದರೆ ‘ಸ್ಟಿಕಿಂಗ್ ಟು ದಿ ರೂಟ್ಸ್’ ಎನ್ನುವ ಮನೋಭಾವನೆ ಸದೃಢವಾಗಿತ್ತು, ಮಾಡಿದ ಅಪರಾಧ ಸಣ್ಣದೇ ಇರಲಿ ದೊಡ್ಡದೇ ಇರಲಿ ಅಪರಾಧಿ ಭಾವನೆ ಒಳಮನಸ್ಸನ್ನು ಸುಡುತ್ತಿತ್ತು, ಪಶ್ಚಾತಾಪದತ್ತ ನೂಕುತ್ತಿತ್ತು. ಈಗ ‘ತಪ್ಪು’, ತಪ್ಪೇ ಅಲ್ಲ ಎಂದು ಸಮರ್ಥಿಸುವ ಭಂಡ ಧೈರ್ಯವಾಗಿ ಪರಿವರ್ತನೆಯಾಗಿದೆಯೇ ಎನ್ನುವಂತಹ ಚಿಂತನೆಗೆ ನನ್ನನ್ನು ಹಚ್ಚಿದ್ದು ಈ ಗತಕಾಲದ ಉತ್ತ್ಕ್ರಾಂತಿಯ ಕಥೆ . ಯಾವ ಕೃತಿ ಓದುಗರ ಮನದಲ್ಲಿ ಚಿಂತನೆಯನ್ನು ಹುಟ್ಟು ಹಾಕುತ್ತದೆಯೋ ಅದು ನಿಜವಾಗಿಯೂ ಸಾಹಿತ್ಯ ಲೋಕದಲ್ಲಿ ಅಪರೂಪದ ಕೃತಿ ಎಂದು ಹೇಳಬಹುದು .
ಕಥೆಯಲ್ಲಿ ಬರುವ ಬದರಿ ಯಾತ್ರೆಯ ಸನ್ನಿವೇಶಗಳು, ಕೇದಾರಲ್ಲಿ ನಡೆದ ಘಟನೆ, ಹರಿಹರದ ಕಾರ್ಖಾನೆ ಲಾಕ್ ಔಟ್, ಮಳಖೇಡದಲ್ಲಿ ಕೊನೆಯ ದೃಶ್ಯಗಳ ವಿವರಣೆಗಳನ್ನು ಆಸಕ್ತಿದಾಯಕವಾಗಿಯೂ, ಮನ ಮುಟ್ಟುವಂತೆ ಬರದಿದ್ದಾರೆ ಕುತೂಹಲದಿಂದ ಓದಿಸುತ್ತಾ ಹೋಗುತ್ತದೆ.
ಕೃಷಿಯನ್ನು ಅವಲಂಬಿಸಿದ ಬ್ರಾಹ್ಮಣರ ಕೈಯಿಂದ ಫಲವತ್ತಾದ ಭೂಮಿಯನ್ನು ಕಸಿದು ಕಡುಬಡತನಕ್ಕೆ ನೂಕಿದ ಆಗಿನ ಸರ್ಕಾರ ಹೊರಡಿಸಿದ ‘ಟೆನೆನ್ನ್ಸಿ ಆಕ್ಟ್’ ನಿಂದ ಉಳುವವರೇನೋ ಗೆದ್ದರು. ಆದರೆ ಭೂಮಿ ಕಳೆದುಕೊಂಡವರ ಪಾಡು ಏನಾಯ್ತು ಎಂದು ಈ ಕಥೆ ಹೇಳುತ್ತದೆ.
ಬ್ರಾಹ್ಮಣರ ಹತ್ತಿರ ಜಮೀನು ಇದ್ದಾಗಲೂ ಅವರ ಕಷ್ಟ ಅಷ್ಟಿಷ್ಟಲ್ಲ, ಬಡವರು, ಹಿಂದುಳಿದವರು ಎಂದು ಅನುಕಂಪ ಗಿಟ್ಟಿಸಿಕೊಂಡ ‘ಉಳುವ’ವರು ಕೃಷಿ ವ್ಯವಹಾರದಲ್ಲಿ ಅನ್ಯಾಯ, ಮೋಸ ಮಾಡಿ, ಮಾಲೀಕರಿಗೆ ಫಸಲು ಇಲ್ಲ, ಅಸಲು ಇಲ್ಲ ಲಾಭವೂ ಬಂದಿಲ್ಲ” ಎಂದು ಸುಳ್ಳು ಹೇಳಿ ವಂಚಿಸುವ ಪ್ರಸಂಗಗಳು ನನ್ನ ಕರಳು ಹಿಂಡಿದ ಕಥಾ ಸನ್ನಿವೇಶಗಳು. ಲೇಖಕಿ ಇಂತಹ ಅದೆಷ್ಟೂ ಹುಗಿದು ಹೋದ ಸತ್ಯ ಗಳನ್ನು ಸೂಕ್ಷ್ಮವಾಗಿ ಕೆದಕಿದ್ದಾರೆ.
ಅನ್ಯ ಮತೀಯರ ಸಂಗಡ ಮೇಲ್ವರ್ಗದವರ ಸಹಬಾಳ್ವೆ, ಭಾತೃತ್ವ, ಪ್ರೇಮ, ಸಲುಗೆ, ಗೆಳತನ, ನಂಬಿಕೆ, ನಿಯತ್ತು ಎಷ್ಟಿತ್ತು ಎಂದು ಪ್ರಮಾಣೀಕರಿಸುವ ಗೌರವ್ವ, ಹುಸೇನಿ, ರಬ್ಬಾನಿ , ಸಿದ್ದ , ಭೋಜಪ್ಪನಂತಹ ಪಾತ್ರಗಳು ಗತಕಾಲದ ವಾಸ್ತವ ತೋರಿಸುತ್ತವೆ, ಸಮಾಜದಲ್ಲಿ ಎಲ್ಲೋ ಒಂದೋ ಎರಡೋ ಇದಕ್ಕೆ ವ್ಯತಿರಿಕ್ತ ಅಪವಾದಗಳಿರಬಹುದು ಅಲ್ಲಗೆಳೆಯಲಾಗುವಿದಿಲ್ಲ ಆದರೆ ಮೇಲ್ವರ್ಗದರೆನಿಸಿಕೊಂಡವರಲ್ಲಿ, ಮಠಾಧೀಶರಲ್ಲಿ, ಧಾರ್ಮಿಕ ಮುಖಂಡರಲ್ಲಿ, ಮಾನವೀಯತೆ ಧಮನಿ ಧಮನಿಯಲ್ಲಿ ಹರಿಯುತ್ತಿತ್ತು, ಎಂದು ಕಥೆ ಅದ್ಭುತ ಚಿತ್ರಣ ಕೊಟ್ಟಿದೆ, ಈ ಸತ್ಯ ಅರುಹಿದ ಕಥಾ ಸನ್ನಿವೇಶಗಳೆಲ್ಲಾ ನನಗೆ ಆಪ್ತವೆನಿಸಿದವು. ನಮ್ಮತನವನ್ನು ಎತ್ತಿ ಹಿಡಿಯುವ ಲೇಖಕಿಯ ನಿಲುವು ನನಗ ಬಲು ಪಸಂದಾಯ್ತು.
ಸುಂದರಾಬಾಯಿ , ವಿಜಯಾಬಾಯಿ , ಶಾಂತಾಬಾಯಿ, ವಸಕ್ಕ ,ವೆಂಕು ಹಾಗು ತುಳಸಕ್ಕ ಇವೆರೆಲ್ಲ ಯಾವ ಮಣ್ಣಿನಿಂದ ಮಾಡಿದ ಹೆಂಗಳೆಯರು , ಇವರಿಗೆ ಇದ್ದ ಸಹನಶೀಲತೆ, ಪತಿ ಭಕ್ತಿ, ನಯವಿನಯ, ಜಾಣ್ಮೆ, ತಿಳುವಳಿಕೆ, ಪ್ರಭುದ್ಧತೆ ಎಲ್ಲಿದ ಬಂತು ಶಾಲೆಯ ಮೆಟ್ಟಿಲನ್ನೇ ಹತ್ತದ ಇವರುಗಳಿಗೆ ಇದೆನ್ನೆಲ್ಲ ಯಾರು ಹೇಳಿಕೊಟ್ಟರು, ಇವರಿಗೆ ‘No' ಅನ್ನುವುದು ಯಾರೂ ಯಾಕೆ ಹೇಳಿಕೊಡಲಿಲ್ಲ, ಇವರೆಲ್ಲ ಮಕ್ಕಳನ್ನು ಹೆರುವ ಯಂತ್ರಗಳಾಗಿಯೇ ಜೀವ ಸವಿಸಿದರಲ್ಲ, ಎಂದು ಮತ್ತೊಮ್ಮೆ ಹೆಣ್ಣತನಕ್ಕೆ ಅಯ್ಯೋ ಪಾಪದ ಜೀವವೇ…. ! ಎಂದು ಭಾವುಕವಾಗಿಸಿದವು.
ಕಥೆಯ ಮುಖ್ಯ ಪಾತ್ರ ‘ಭುಜಂಗ’ ಈ ಹೆಸರಿನಲ್ಲೇ ಒಂದು ಘನತೆ ಇದೆ, ಆ ಘನೆತೆ ಕೊನೆಯವರೆಗೂ ಈ ಪಾತ್ರ ಜೊತೆ ಅಂಟಿಕೊಂಡಿದೆ, ಅದೇ ರೀತಿ ತಾಯಿ ಸುಂದರಾಬಾಯಿ. ತಾಯಿ- ಮಗನ ಬಾಂಧವ್ಯವೇ ಈ ಕಾದಂಬರಿಯ ಬೆನ್ನೆಲುಬು. ಭುಜಂಗಾಚಾರ್ರು ಇಲ್ಲದ ಸನ್ನಿವೇಶಗಳೇ ಇಲ್ಲ, ತಾಯಿ ಸುಂದರಾಬಾಯಿ ಮಧ್ಯಸ್ತಿಕೆಯಿಂದ ಬಗೆಹರಿಯದ ಸಮಸ್ಯೆಗಳೇ ಇಲ್ಲವೆನ್ನುವ ಹಾಗೆ ಇವರಿಬ್ಬರು ಓದುಗರ ಮನಸ್ಸನ್ನು ಆವರಿಸುತ್ತಾರೆ.
ಅಲ್ಲಲ್ಲಿ ಬರುವ ಲಘು ಸನ್ನಿವೇಶಗಳು ನಗು ಮೂಡಿಸಿದರೆ ಹರಿದ ಧೋತರಕ್ಕೆ ಗಂಟು ಹಾಕಿಕೊಳ್ಳುವಂತಹ, ಬರೀ ಉಪ್ಪು ಅನ್ನ ಉಣ್ಣುವ, ಬಡತನದ ವಾಸ್ತವಿಕತೆಯನ್ನು ತಿಳಿಸಿ ಕೊಡುವ ಕಟು ಸತ್ಯಗಳು ಅದ್ಭುತ ನೈಜತೆಯಿಂದ ಮೂಡಿ ಬಂದು ಕಾದಂಬರಿಯನ್ನು ಸದಭಿರುಚಿ ಸಾಹಿತ್ಯ ಕೃತಿಗಳಲ್ಲಿ ಅಗ್ರ ಶ್ರೇಣಿಗೆ ಏರಿಸಿವೆ. ಸುಂದರಾಬಾಯಿ ಪಾತ್ರ ಒಂದು ತೂಕವಾದರೆ ಆರ್ಥಿಕ ಬಿಕ್ಕಟ್ಟನ್ನು ದೂರಗೊಳಿಸುವ ಈ ಕಥಾನಕದ ಇನ್ನೊಂದು ಪ್ರಮುಖ ನಿರ್ಜೀವ ನಾಯಕ ಪಾತ್ರವೆಂದರೆ ಅದು ಹಳದಿ ಲೋಹ ಅದೇ ‘ಬಂಗಾರ’. ಅದು ಹೇಗೆ ಎಂದು ನೀವು ಓದಿ ತಿಳಿಯಬೇಕು.
ಲೇಖಕಿ ದೀಪ ಜೋಶಿ ಅವರಿಗೆ ಕಥೆ ಹೇಳುವ ಕೌಶಲ್ಯ ಒಲಿದಿದೆ , ಸುಮಾರು ಎರಡು ಪೀಳಿಗೆಯ ಪ್ರತಿ ಹೆಜ್ಜೆಯನ್ನು, ಸಂಸ್ಕೃತಿಯನ್ನು, ಸಾಮಾಜಿಕ ಸ್ಥಿತಿ ಯನ್ನು ಅಂದಿನ ಕಾಲಘಟ್ಟದ ಅನುಗುಣವಾಗಿ ಕಥಾ ರೂಪದಲ್ಲಿ ಎಳೆ ಎಳೆಯಾಗಿ ಹೆಣೆದು ಇಂದಿನ ಓದುಗರಿಗೆ ಕೊಡುವುದು ದೊಡ್ಡ ಸಾಹಸವೇ ಸರಿ, ಈ ಸಾಹಸದಲ್ಲಿ ಅವರು ಯಶಸ್ವಿ ಆಗಿದ್ದಾರೆ ಕೂಡ. ಇನ್ನೊಂದಿಷ್ಟು ಉ.ಕ ಸಂಭಾಷಣೆಗಳು, ಅಲ್ಲಿನ ಟಿಪಿಕಲ್ ಪದಗಳು, ಹಬ್ಬಗಳು, ನುಡಿಗಟ್ಟು, ಗಾದೆ ಮಾತುಗಳ, ವರ್ಣನೆಗಳು,ಇರಬೇಕಿತ್ತು ಎಂಬುವುದು ನನ್ನ ಆಸೆಬುರುಕುತನದ ಬಯಕೆ, ಏನ್ಮಾಡ್ಲಿ ನನಗೆ ಬ್ರಾಹ್ಮಣ ಶೈಲಿಯ ಕನ್ನಡವೆಂದರೆ ಬಲು ಪ್ರೀತಿ ಅದಕ್ಕೆ ಈ ಹಪಾಪಿತನ.
ಇಂಥ ಗತಕಾಲದಲ್ಲಿ ಪಯಣಿಸುವಂತೆ ಕಥೆಗಳೆಂದರೆ ನನಗೆ ಅಚ್ಚುಮೆಚ್ಚು ಈ ಪುಸ್ತಕ ಓದುವಾಗ, ನನ್ನ ಅಪ್ಪ,ಅಮ್ಮ, ಅತ್ಯಾ, ಅಜ್ಜಿ, ಅಜ್ಜ ನನ್ನ ಮುಂದೆ ತಮ್ಮ ನೆನಪಿನ ಗಂಟು ಬಿಚ್ಚಿ ಕೂತಿದ್ದಾರ, ನಾನು ಅವರನ್ನೇ ದಿಟ್ಟಿಸುತ್ತಾ, ಅವರ ಕಥೆಗಳನ್ನು ಕೇಳುತ್ತ ನನ್ನ ಕಲ್ಪನೆಯಲ್ಲಿ ಚಿತ್ರ ಬಿಡುಸುತ್ತಿದ್ದಿನೇನೋ ಎಂದೆನಿಸಿತು. ಸಿಹಿ ಕಹಿ ಭಾವನೆಗಳಿಂದ ತುಂಬಿ ತುಳುಕುವ ಈ ತತ್ರಾಣಿಯನ್ನು, ಕನ್ನಡಿಗರೆಲ್ಲರೂ ವಿಶೇಷವಾಗಿ ಉತ್ತರ ಕರ್ನಾಟಕದವರೆಲ್ಲರೂ ಓದಲೇ ಬೇಕು, ಹಳೆಯ ರಾಣೆಬೆನ್ನೂರು ದಿನಗಳ ಮೆಲುಕು ಹಾಕಲೇ ಬೇಕು ಎನ್ನುವುದು ನನ್ನ ಆಗ್ರಹ .
ಕಥೆ ಏನು ಎಂದು ಬಿಟ್ಟುಕೊಡದೆ, ಕಥೆಯ ಬಗ್ಗೆ ಕುತೂಹಲ ಮೂಡಿಸುವಂತೆ ಕಾದಂಬರಿ ಪರಿಚಯ ಮಾಡಿಕೊಡುವುದು ಕೂಡ ಸುಲಭವಲ್ಲ.... ಈಗಾಗಲೇ ಪುಸ್ತಕ ಓದುವ ಕೂತೂಹಲ ನಿಮಗಾಗಿರಬಹುದು ಎಂದು ನಂಬಿದ್ದೇನೆ.... ಹಾಗಾದ್ರೆ ತಡವೇಕೆ ಓದಿ ನೋಡಿ, ಅನುಭವಿಸಿ ಹೇಳಿ....
"ಬದುಕಿನಲ್ಲಿ ಲೇಖಕರಿಗೆ ಸೂಕ್ಷ್ಮತೆ ಬೇಕು ಅಂತಿದ್ರು ಲೇಖಕರೊಬ್ರು. ಇದನ್ನು ನೋಡಿದಾಗಲೂ ಹಾಗೇ ಅನಿಸಿತು ನನಗೆ. ಒಂ...
"ಸಶಕ್ತ ಬರವಣಿಗೆ, ಭಾಷಾಸಮೃದ್ಧಿ ಆಶಾ ಅವರ ಕಥನಕಲೆಯ ವೈಶಿಷ್ಟ್ಯಗಳು. 'ಕೆಂಪು ದಾಸವಾಳ' ಕಥಾಸಂಕಲನದ ಕಥೆಗ...
"ಸದಾ ಅಕ್ಷೇಪದ ದನಿಯೆತ್ತುತ್ತ ಗೊಣಗಾಡುವ, ಲಕ್ವಾ ಹೊಡೆದು ಹಾಸಿಗೆ ಹಿಡಿದ ಚಿಕ್ಕಮಾವನ ಚಾಕರಿ ಮಾಡಿ ಬೇಸತ್ತ ಭಾಗಮ್...
©2025 Book Brahma Private Limited.