Date: 18-12-2024
Location: ಬೆಂಗಳೂರು
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು 21 ಭಾಷೆಯ ಕೃತಿಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ. ಆ ಪೈಕಿ ಎಂಟು ಕವನ ಸಂಕಲನಗಳಿಗೆ ದೊರೆತರೆ ಮೂರು ಕಾದಂಬರಿ ಮತ್ತು ಎರಡು ಸಣ್ಣಕತೆಗಳ ಸಂಕಲನಕ್ಕೆ ದೊರೆತಿವೆ. ಮೂರು ಪ್ರಬಂಧ ಸಂಕಲನ ಹಾಗೂ ಮೂರು ವಿಮರ್ಶಾ ಕೃತಿಗಳು ಹಾಗೂ ಒಂದು ನಾಟಕ ಹಾಗೂ ಮತ್ತೊಂದು ಸಂಶೋಧನಾ ಕೃತಿಗಳು ಪ್ರಶಸ್ತಿಗೆ ಭಾಜನವಾಗಿವೆ. ಬಂಗಾಲಿ, ಡೋಗ್ರಿ ಮತ್ತು ಉರ್ದು ಭಾಷೆಯ ಪ್ರಶಸ್ತಿಗಳನ್ನು ನಂತರ ಪ್ರಕಟಿಸುವುದಾಗಿ ಅಕಾಡೆಮಿ ತಿಳಿಸಿದೆ.
21 ಭಾಷೆಗಳ (ಪ್ರತಿ ಭಾಷೆಗೆ ಮೂವರು) ನಿರ್ಣಾಯಕರು ಸೂಚಿಸಿದ ಪುಸ್ತಕಗಳಿಗೆ ಪ್ರಶಸ್ತಿ ಘೋಷಿಸಲು ಅಕಾಡೆಮಿಯ ಕಾರ್ಯಕಾರಿ ಮಂಡಳಿ ನಿರ್ಧರಿಸಿತು. ಅಕಾಡೆಮಿಯ ಅಧ್ಯಕ್ಷ ಮಾಧವ ಕೌಶಿಕ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಸಮೀರ ತಂತ್ರಿ (ಆಸಾಮಿ), ದಿಲೀಪ್ ಝವೇರಿ (ಗುಜರಾತಿ), ಗಗನ್ ಗಿಲ್ (ಹಿಂದಿ), ಕೆ. ಜಯಕುಮಾರ್ (ಮಲಯಾಳಂ), ಹಾವೊಬಮ್ ಸತ್ಯಬತಿದೇವಿ (ಮಣಿಪುರಿ), ಪೌಲ್ ಕೌರ್ (ಪಂಜಾಬಿ), ಮುಕುಟ್ ಮಣಿರಾಜ್ (ರಾಜಸ್ಥಾನಿ), ದೀಪಕ್ ಕುಮಾರ್ ಶರ್ಮ (ಸಂಸ್ಕೃತ) ಅವರ ಕವನ ಸಂಕಲನಗಳಿಗೆ ಪ್ರಶಸ್ತಿ ಸಂದಿವೆ.
ಅರೋಣ್ ರಾಜಾ (ಬೋಡೊ), ಎಸ್ತೆರಿನ್ ಕಿರೆ (ಇಂಗ್ಲಿಷ್), ಸೋಹಲ್ ಕೌಲ್ (ಕಾಶ್ಮೀರಿ) ಕಾದಂಬರಿಗಳಿಗೆ ಹಾಗೂ ಯುವಾ ಬರಾಲ್ (ನೇಪಾಳಿ), ಹುಂಡ್ರಾಜ್ ಬಲ್ವಾನಿ (ಸಿಂಧಿ) ಸಣ್ಣಕತೆಗಳ ಸಂಕಲನಗಳಿಗೆ ಪ್ರಶಸ್ತಿ ದೊರೆತಿದೆ.
ಹಾಗೆಯೇ ಮುಖೇಶ್ ಥಾಲಿ (ಕೊಂಕಣಿ), ಮಹೇಂದ್ರ ಮಳಂಗಿಯಾ (ಮೈಥಿಲಿ), ಬೈಷ್ಣಬ್ ಚರಣ ಸಮಾಲ್ (ಓಡಿಯಾ) ಅವರ ಪ್ರಬಂಧ ಸಂಕಲನಗಳಿಗೆ ಹಾಗೂ ಕೆ.ವಿ. ನಾರಾಯಣ (ಕನ್ನಡ), ಸುಧೀರ್ ರಸೈ (ಮರಾಠಿ), ಪೆನುಗೊಂಡ ಲಕ್ಷ್ಮಿನಾರಾಯಣ (ತೆಲುಗು) ಅವರ ವಿಮರ್ಶಾ ಸಂಕಲನಗಳಿಗೆ ಪ್ರಕಟಿಸಲಾಗಿದೆ.
ಮಹೇಶ್ವರ ಸೋರೆನ್ (ಸಂತಾಲಿ) ಅವರ ನಾಟಕ ಹಾಗೂ ಎ.ಆರ್. ವೆಂಕಟಾಚಲಪತಿ (ತಮಿಳು) ಸಂಶೋಧನಾ ಕೃತಿಗಳಿಗೆ ಪ್ರಶಸ್ತಿ ದೊರೆತಿದೆ.
2018ರ ಜನವರಿ 1ರಿಂದ 2022ರ ಡಿಸೆಂಬರ್ 31ರ ನಡುವಿನ ಅವಧಿಯಲ್ಲಿ ಪ್ರಕಟವಾದ ಪುಸ್ತಕಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಹಾಗೂ ಕಂಚಿನ ಪದಕ ಹಾಗೂ ಶಾಲುಗಳನ್ನು ಒಳಗೊಂಡಿರುತ್ತದೆ. 2025ರ ಮಾರ್ಚ್ 8ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.
ನವದೆಹಲಿ: 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಹಿರಿಯ ಲೇಖಕ, ಚಿಂತಕ ಕೆ. ವಿ. ನಾರಾಯಣ ಅವರು ಆಯ್ಕೆಯ...
ರಾಯಚೂರು: ಪ್ರಾಯೋಗಿಕ ವಿಮರ್ಶೆ ಎನ್ನುವುದನ್ನು ನಿರ್ದಿಶ್ಟ ಸಿದ್ದಾಂತವನ್ನ ಅನ್ವಯಿಸದೆ, ಸಾಹಿತ್ಯದ ರಚನೆ, ಶ...
ಶಹಾಪುರ: ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನ ಶಹಾಪುರ ನೀಡುವ ರಾಜ್ಯಮಟ್ಟದ ‘ಕರದಳ್ಳಿ ಸದ್ಭಾವನಾ ಪುರಸ್ಕಾರ 2...
©2024 Book Brahma Private Limited.