Date: 17-12-2024
Location: ಬೆಂಗಳೂರು
ರಾಯಚೂರು: ಪ್ರಾಯೋಗಿಕ ವಿಮರ‍್ಶೆ ಎನ್ನುವುದನ್ನು ನಿರ‍್ದಿಶ್ಟ ಸಿದ್ದಾಂತವನ್ನ ಅನ್ವಯಿಸದೆ, ಸಾಹಿತ್ಯದ ರಚನೆ, ಶಯ್ಲಿ, ಬಾಶೆ ಇವುಗಳ ಮೂಲಕ ಸಾಹಿತ್ಯದ ವಸ್ತು ಮತ್ತು ಆಶಯಗಳನ್ನು ತಿಳಿದುಕೊಳ್ಳುವ ಪ್ರಯತ್ನ, ಸಾಹಿತ್ಯದ ಒಳಗೆ ಸಮಾಜದ ಅರಿವಿನ ಬಾಗವಾಗಿ ಸ್ರುಶ್ಟಿಗೊಂಡ ಒಂದು ಸಮಾಜವಿದೆ, ಅದನ್ನು ಅರ‍್ತ ಮಾಡಿಕೊಳ್ಳುವ ಪ್ರಯತ್ನ ಎಂದು ಪರಿಬಾವಿಸಿಕೊಳ್ಳಬಹುದು.
ಕನ್ನಡದಲ್ಲಿ, ಕರ‍್ನಾಟಕದಲ್ಲಿ ವಿಮರ‍್ಶೆ ಸಾಕಶ್ಟು ಬೆಳೆದು ಬಂದಿದ್ದರೂ ವಿಮರ‍್ಶಾ ಸಿದ್ದಾಂತಗಳನ್ನ ಬೆಳೆಸುವಲ್ಲಿ, ಇರುವ ಸಿದ್ದಾಂತಗಳನ್ನು ಪ್ರಶ್ನಿಸುವಲ್ಲಿ, ಬದಲಾಯಿಸುವಲ್ಲಿ, ಕಾಲಿಕಗೊಳಿಸುವಲ್ಲಿ, ಅದರಲ್ಲೂ ಪಶ್ಚಿಮದ ಸಿದ್ದಾಂತಗಳನ್ನು ನಮ್ಮ ನೆಲಕ್ಕೆ ಒಗ್ಗಿಸುವಲ್ಲಿ ಪ್ರಯತ್ನಗಳು ತುಂಬಾ ಕಡಿಮೆ. ಸಾಕಶ್ಟು ವಿಮರ‍್ಶಾ ಬರಹಗಳಲ್ಲಿ ನಿರ‍್ದಿಶ್ಟ ಸಿದ್ದಾಂತವನ್ನ ಅನ್ವಯಿಸುವುದಿರಲಿ ಅಳವಡಿಸುವುದೂ ಕಡಿಮೆ ಕಾಣಿಸುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯ ಸಿದ್ದಾಂತಗಳನ್ನು ಬೋದಿಸುವುದಿದೆಯಾದರೂ ಸಾಹಿತ್ಯ ಓದುವಾಗ ಈ ಸಿದ್ದಾಂತಗಳ ನೆರವನ್ನು ಪಡೆದುಕೊಳ್ಳುವುದು ತುಂಬಾ ಕಡಿಮೆ ಇದೆ. ಇದು ಅಶ್ಟು ಮಟ್ಟಿಗೆ ಕವನ ಓದುವ ಪ್ರಕ್ರಿಯೆಗೆ ಅಡೆತಡೆ.
ಕವಿಯ ಇಲ್ಲವೆ ಇನ್ನಾವುದೆ ಹಿನ್ನೆಲೆಯ ಪರಿಚಯ ಮೊದಲಾದವು ಇಲ್ಲದೆ ನೇರವಾಗಿ ಕವನದ ಓದಿಗೆ ಇಳಿಯುವವರಿಗೆ ಕವನವನ್ನು ಮೊದಲ ಹಂತದಲ್ಲಿ ಅರ‍್ತ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲದೆ ಕವನದ ಓದಿನೊಂದಿಗೆ ಅವರನ್ನು ಅಂಟಿಸುವ, ಆಸಕ್ತಿಯನ್ನು ಬೆಳೆಸುವ ಮತ್ತು ಕ್ರಮೇಣ ಕವನದ ಓದಿಗೆ ಸಿದ್ದಾಂತಗಳನ್ನು ತರಬೇಕಾದ ಅವಶ್ಯಕತೆಯನ್ನು ಓದುಗರು ಅರಿತುಕೊಳ್ಳುವ ಹಾಗೆ ಮತ್ತು ಸೂಕ್ತ ಸಿದ್ದಾಂತಗಳನ್ನು ತರುವ ಬಗೆಯನ್ನೂ ಅವರು ಅರಿತುಕೊಳ್ಳುವಂತಾಗಬೇಕು ಎನ್ನುವುದು ಈ ಸರಣಿಯ ಆಶಯ. ಹಾಗಾಗಿ, ಕವನದ ಪಟ್ಯ ಇಡಿಯಾಗಿ ಮಾತುಕತೆಯ ಕೇಂದ್ರ. ಕವನದ ರಚನೆ, ಶಯ್ಲಿ, ಬಾಶೆ ಮೊದಲಾದವು.
ಇಂದು ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕವನ ಪಾಟ ಮಾಡುವವರಿಗೆ, ಕಲಿಯುವವರಿಗೆ ಮತ್ತು ಈ ಪರಿಸರದ ಹೊರಗೆ ಇರುವ ಸಾಮಾಜಿಕರಿಗೆ ಕವನ ಓದಲು ಸಮರ‍್ತವಾದ ಆದರೆ ಸುಲಬವಾದ ಸಾದನವೊಂದನ್ನು ಒದಗಿಸುವ ಅವಶ್ಯಕತೆ ಇದೆ. ಸಾಹಿತ್ಯ ರಸಿಕರಿಗೆ ಸಹಾಯಕವೂ ಪೂರಕವೂ ಆಗಬಹುದಾದ ಸಾದನವಾಗಿ ಪ್ರಾಯೋಗಿಕ ವಿಮರ‍್ಶೆಯನ್ನು ಒದಗಿಸಬಹುದು ಎಂಬುದು ಆಶಯ. ನಿರ‍್ದಿಶ್ಟ ಸಿದ್ದಾಂತದ ಹಿನ್ನೆಲೆ ಇಲ್ಲದ ಒಂದು ಓದು ಎನ್ನುವುದು ಕವನದ ಎಲ್ಲ ಆಯಾಮಗಳನ್ನೂ ಅರ‍್ತ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡಬಲ್ಲದು ಮತ್ತು ಎಲ್ಲ ಸಾಮಾಜಿಕರಿಗೂ ಕವನದ ಓದನ್ನು ಒದಗಿಸಬಲ್ಲದು ಮತ್ತು ಮುಂದುವರೆದು ಅವರಿಗೆ ನಿರ‍್ದಿಶ್ಟ ಸಿದ್ದಾಂತಗಳನ್ನು ಅನ್ವಯಿಸುವ ವಿವಿದ ಬಗೆಯ ಆನ್ವಯಿಕ ವಿಮರ‍್ಶೆಯ ಕಡೆಗೆ ಬರಲು ದಾರಿ ಮಾಡಿಕೊಡಬಲ್ಲದು.
ʼಪ್ರಾಯೋಗಿಕ ವಿಮರ‍್ಶೆʼ ಎಂಬುದು ಪಶ್ಚಿಮದಲ್ಲಿ ಹುಟ್ಟಿದ ಮತ್ತು ಬೆಳೆದ ಬಗೆ, ಅದು ಅಂತಾರಾಶ್ಟ್ರೀಯವಾಗಿ ಪಸರಿಸಿಕೊಳ್ಳುವ ಬಗೆ ಮತ್ತು ಬಾರತಕ್ಕೆ, ಕರ‍್ನಾಟಕಕ್ಕೆ ಅದು ಬಂದದ್ದು, ಬೆಳೆದದ್ದು ಇವುಗಳಾವಕ್ಕೂ ನಿಶ್ಟವಾಗದೆ ಒಂದು ಕವನ ಓದುವುದಕ್ಕೆ ಸಹಾಯವನ್ನು ಕವನವನ್ನೆ ಒದಗಿಸುತ್ತದೆ ಮತ್ತು ಅದನ್ನು ಮುಕ್ಯವಾಗಿ ಪರಿಗಣಿಸಬೇಕು ಎಂಬುದು ಈ ಸರಣಿಯ ಹಿಂದಿನ ಆಶಯ.
ಈ ಆಶಯಗಳನ್ನು ಇಟ್ಟುಕೊಂಡು ಬಂಡಾರ ಪ್ರಕಾಶನ 'ಕಾವ್ಯ ಕರ‍್ನಾಟಕ' ಹೆಸರಿನ ಕವನ ಪ್ರಾಯೋಗಿಕ ವಿಮರ‍್ಶೆಯ ಆನ್ಲಯಿನ್ ಉಪನ್ಯಾಸ ಸರಣಿಯನ್ನು ಆಯೋಜಿಸುತ್ತಿದೆ. ಇದರಲ್ಲಿ ಕರ‍್ನಾಟಕ ಸಮಾಜಕ್ಕೆ ಪರಿಗಣಿಸುವಶ್ಟು ಕೊಡುಗೆ ಕೊಟ್ಟ, ಕರ‍್ನಾಟಕ ಸಮಾಜವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಮಹತ್ವದ ಕೊಡುಗೆ ಕೊಟ್ಟ ನೂರು ಮಹತ್ವದ ಕವನಗಳನ್ನು ಪರಿಗಣಿಸುತ್ತಿದ್ದೇವೆ. ಇದರಲ್ಲಿ ಹೊಸಗನ್ನಡದ ೩೦, ಹಳಗನ್ನಡದ ೨೦, ಜನಪದದ ೨೦, ಅನುವಾದದ ಮೂಲಕ ಕನ್ನಡಕ್ಕೆ ಬಂದ ೨೦ ಮತ್ತು ಕರ‍್ನಾಟಕದ ಇತರ ಹತ್ತು ಬಾಶೆಗಳ ೧೦ ಕವನಗಳನ್ನು ಒಳಗೊಂಡು ನೂರು ಕವಿಗಳು, ನೂರು ಕವನಗಳು, ನೂರು ವಿದ್ವಾಂಸರು ಮತ್ತು ನೂರು ಉಪನ್ಯಾಸಗಳು ಇರುತ್ತವೆ. ಉಪನ್ಯಾಸಗಳ ನಂತರ ಇವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಈ ಉಪನ್ಯಾಸ ಸರಣಿ ಡಿಸೆಂಬರ್ 15, 2024, ದವನದ ಹುಣ್ಣಿಮೆ ದಿನದಿಂದ ಮೊದಲಾಗಿದೆ. ಒಟ್ಟು ನೂರು ಉಪನ್ಯಾಸಗಳನ್ನು ಪ್ರತಿ ಸರಣಿಯ ನಡುವೆ ತುಸು ಅಂತರ ಇಟ್ಟುಕೊಂಡು ಪ್ರತಿದಿನ ಆನ್ಲಯಿನ್ ಉಪನ್ಯಾಸ ನಡೆಸಲಾಗುವುದು. ಈ ಉಪನ್ಯಾಸಗಳನ್ನು ಬಂಡಾರ ಯೂಟೂಬಿನಲ್ಲಿ ಹಾಕಲಾಗುವುದು. ಆನಂತರ ಮೇ ತಿಂಗಳಲ್ಲಿ ಈ ನೂರು ಲೇಕನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಈ ಸರಣಿಯಲ್ಲಿ ಮೊದಲ ಬಾಗವಾಗಿ ಹೊಸಗನ್ನಡ ಕವನಗಳ ಉಪನ್ಯಾಸಗಳು ನಡೆಯುತ್ತಿವೆ.
ಬಂಡಾರ ಪ್ರಕಾಶನ ನಿರಂತರವಾಗಿ ಕನ್ನಡ ಮತ್ತು ಕರ‍್ನಾಟಕಗಳನ್ನು ಅರಿತುಕೊಳ್ಳುವ ಕಾಯಕದಲ್ಲಿ ತೊಡಗಿದೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಮಾಡುತ್ತಿದೆ. ಯುವ ಸಂಶೋದಕರನ್ನು ಉತ್ತೇಜಿಸುವ ಉದ್ದೇಶದಿಂದ ಪಿಎಚ್.ಡಿ. ಪದವಿ ಪಡೆದ ಮಹಾಪ್ರಬಂದಗಳನ್ನು ಪ್ರತಿವರುಶ ಕನ್ನಡ ಆರಯ್ಪು ಸರಣಿಯಲ್ಲಿ ಪ್ರಕಟಿಸಲಾಗುತ್ತಿದೆ. ಅದರೊಟ್ಟಿಗೆ ʼಹೊಸ ಬೆಳೆʼ ಸರಣಿಯೊಂದನ್ನೂ ಶುರು ಮಾಡಿ ಪ್ರಕಟಣೆಗೆ ಯೋಗ್ಯವೆನಿಸಿದ ಪ್ರಬಂದಗಳನ್ನು ಈ ಸರಣಿಯಲ್ಲಿ ಪ್ರಕಟಿಸಲಾಗುತ್ತಿದೆ. ʼಹಯ್ದರಾಬಾದ ಕರ‍್ನಾಟಕʼ ಸರಣಿಯೊಂದನ್ನು ಮಾಡಿ ಹಿಂದುಳಿದ ಎಂಬ ಹೆಸರನ್ನೆ ಪಡೆದುಕೊಂಡಿರುವ ಶ್ರೀಮಂತ ಹಯ್ದರಾಬಾದ ಕರ‍್ನಾಟಕ ಪ್ರದೇಶದ ಕುರಿತು ವಿವಿದ ಆಯಾಮಗಳ ಸಂಪುಟಗಳನ್ನು ಪ್ರಕಟಿಸುತ್ತಿದೆ. ಇದರೊಟ್ಟಿಗೆ ʼಎಲ್ಲಮ್ಮ ಅದ್ಯಯನʼಕ್ಕೆ ಹೊಸ ಯೋಜನೆಯೊಂದನ್ನು ರೂಪಿಸಿದೆ. ಎಂದು ಮಸ್ಕಿ ಬಂಡಾರ ಪ್ರಕಾಶನದ ಪ್ರಕಾಶಕ ಪರಶುರಾಮ ಕೋಡಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು 21 ಭಾಷೆಯ ಕೃತಿಗಳಿಗೆ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದೆ. ಆ ಪೈಕಿ ಎಂಟು ಕವ...
ನವದೆಹಲಿ: 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಹಿರಿಯ ಲೇಖಕ, ಚಿಂತಕ ಕೆ. ವಿ. ನಾರಾಯಣ ಅವರು ಆಯ್ಕೆಯ...
ಶಹಾಪುರ: ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನ ಶಹಾಪುರ ನೀಡುವ ರಾಜ್ಯಮಟ್ಟದ ‘ಕರದಳ್ಳಿ ಸದ್ಭಾವನಾ ಪುರಸ್ಕಾರ 2...
©2024 Book Brahma Private Limited.