ಕೆಲವು ಕಡೆ ಇದು ನನ್ನದೇ ಕಥೆ ಅಂತಲೂ ಭಾಸವಾಗುತ್ತಿತ್ತು


"ಇಲ್ಲಿಯ ಕಥಾನಾಯಕನಿಗೆ ಮತ್ತು ನಾಯಕಿಗೆ ಯಾವುದೇ ಹೆಸರಿಲ್ಲ. ನಾನು ಮತ್ತು ಅವಳು ಈ ಎರಡು ವ್ಯಕ್ತಿಗಳ ಸುತ್ತಲೇ ಸ್ಟೋರಿ ಹಿಡಿತ ಪಡೆದುಕೊಳ್ಳುತ್ತಾ ಸಾಗುತ್ತದೆ. ನಿಷ್ಕಲ್ಮಶ ಪ್ರೇಮ, ನಿರಂಕುಶ ಒಲವು ಓದಿನುದ್ದಕ್ಕೂ ಕಂಡುಬರುತ್ತದೆ. ಆದರೆ ಅಷ್ಟೇ ಅಲ್ಲ, ಇದರಲ್ಲಿ ನಾಯಕನ ಪಾತ್ರವನ್ನು ಲೇಖಕ, ಅರ್ಜುನ ದೇವಾಲದಕೆರೆ ಅವರು ಕಟ್ಟಿಕೊಟ್ಟಿರುವ ರೀತಿ ನಿಜಕ್ಕೂ ಅದ್ಭುತ," ಎನ್ನುತ್ತಾರೆ ಹರ್ಷ ಹೆಗ್ಡೆ ಕೊಂಡದಕುಳಿ. ಅವರು ಅರ್ಜುನ್ ದೇವಾಲದಕೆರೆ ಅವರ ‘ಅವಳು - ಬದುಕ ಕಲಿಸಿದವಳು’ ಕೃತಿ ಕುರಿತು ಬರೆದ ಅನಿಸಿಕೆ.

ಇತ್ತೀಚೆಗೆ ನಾ ಓದಿದ ಪುಟ್ಟ ಕಾದಂಬರಿ ‘ಅವಳು. ಹಿಡಿದ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುವ ಬರಹದ ಶೈಲಿ ಈ ಕಾದಂಬರಿಯ ನಿಜವಾದ ತಾಕತ್ತು. ನೈಜ ಘಟನೆಯಾಧಾರಿತ ಪ್ರೇಮಕಥೆ ಎಂದು ಪುಸ್ತಕದ ಮೇಲೆಯೇ ಬರೆದಿದ್ದರೂ ನನಗಿದೂ ಎಲ್ಲೂ ಬರಿಯ ಪ್ರೇಮಕಥೆಯಂತೆ ಕಂಡಿಲ್ಲ. ಇಲ್ಲಿ ಸಾಮಾನ್ಯನೊಬ್ಬನ ಜೀವನವಿದೆ. ಮಿಡಲ್ ಕ್ಲಾಸ್ ಹುಡುಗನೊಬ್ಬನ ದಿನಂಪ್ರತಿಯ ಕಥೆಯಿದೆ. ಜವಾಬ್ದಾರಿಗಳನ್ನು ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸುವ ನಮ್ಮ ನಿಮ್ಮ ನಡುವಿನಲ್ಲೇ ನಡೆಯುವ ಚಿತ್ರಣವಿದೆ. ಕಥೆ ಪ್ರಾರಂಭವಾಗುವುದು ಫಿಲ್ಮ್ ರೀತಿಯಲ್ಲೇ ಆದರೂ ಅದು ಬೆಳೆಯುತ್ತಾ ಹೋಗಿದ್ದು ಮಾತ್ರ ನಮ್ಮ ಸನಿಹದಲ್ಲೇ ಎಂಬುದು ಆಪ್ತತೆ ಕೊಡುತ್ತದೆ. ಬಹುತೇಕ ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದವರ ಎಲ್ಲರ ಕಥೆಯೂ ಒಂದಲ್ಲ ಒಂದು ರೀತಿಯಲ್ಲಿ ಈ ಹೊತ್ತಗೆಯ ಹೂರಣವೇ.

ಇಲ್ಲಿಯ ಕಥಾನಾಯಕನಿಗೆ ಮತ್ತು ನಾಯಕಿಗೆ ಯಾವುದೇ ಹೆಸರಿಲ್ಲ. ನಾನು ಮತ್ತು ಅವಳು ಈ ಎರಡು ವ್ಯಕ್ತಿಗಳ ಸುತ್ತಲೇ ಸ್ಟೋರಿ ಹಿಡಿತ ಪಡೆದುಕೊಳ್ಳುತ್ತಾ ಸಾಗುತ್ತದೆ. ನಿಷ್ಕಲ್ಮಶ ಪ್ರೇಮ, ನಿರಂಕುಶ ಒಲವು ಓದಿನುದ್ದಕ್ಕೂ ಕಂಡುಬರುತ್ತದೆ. ಆದರೆ ಅಷ್ಟೇ ಅಲ್ಲ, ಇದರಲ್ಲಿ ನಾಯಕನ ಪಾತ್ರವನ್ನು ಲೇಖಕ, ಅರ್ಜುನ ದೇವಾಲದಕೆರೆ ಅವರು ಕಟ್ಟಿಕೊಟ್ಟಿರುವ ರೀತಿ ನಿಜಕ್ಕೂ ಅದ್ಭುತ. ಅವನಲ್ಲಿರುವ ದೇಶಪ್ರೇಮ, ಅದನ್ನು ನಾಲ್ಕು ಜನರಿಗೆ ಒಪ್ಪಿಸುವ ರೀತಿ, ನಿಯತ್ತು, ಬದ್ಧತೆ, ವಿಷಯಗಳ ಸ್ಪಷ್ಟತೆ, ಸ್ನೇಹಗಳಿಗೆ, ಸಂಬಂಧಗಳಿಗೆ ಅವನು ಕೊಡುವ ಮಹತ್ವ, ಮಿಸ್ ಅಂಡರ್ ಸ್ಟಾಂಡಿಂಗ್ ಗಳನ್ನು ಪರಿಹರಿಕೊಳ್ಳುವ ರೀತಿ, ಪರೋಪಕಾರ ಗುಣ - ಇವೆಲ್ಲವೂ ಈ ಪುಸ್ತಕದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಕೆಲವು ಸನ್ನಿವೇಶಗಳಲ್ಲಿ ನಾನಂತೊ ಅಕ್ಷರಶಃ ಆ ಜಾಗದಲ್ಲಿ ಅವನ ಪಕ್ಕದಲ್ಲೇ ನಿಂತಂತೆ ಅನ್ನಿಸುತ್ತಿತ್ತು. ಕೆಲವು ಕಡೆ ಇದು ನನ್ನದೇ ಕಥೆ ಅಂತಲೂ ಭಾಸವಾಗುತ್ತಿತ್ತು.

ಆಧುನಿಕತೆಯ ಬಗ್ಗೆ, ಕನಸುಗಳ ಬಗ್ಗೆ, ದ್ವೇಷದ ಬಗ್ಗೆ, ಪ್ರೀತಿಯ ಬಗ್ಗೆ, ಆಕರ್ಷಣೆಯ ಬಗ್ಗೆ, ಜವಾಬ್ದಾರಿಗಳ ಬಗ್ಗೆ, ಕೆಲಸದ ಬಗ್ಗೆ, ಅಪ್ಪ- ಅಮ್ಮನ ಬಗ್ಗೆ, ಒಟ್ಟಾರೆ ಬದುಕಿನ ಬಗ್ಗೆ, ಅದರ ವಿವಿಧ ಮಗ್ಗುಲುಗಳ ಬಗ್ಗೆ, ಅಲ್ಲಿ ಸೃಷ್ಟಿಯಾಗುವ ಸಂದಿಗ್ಧತೆಗಳ ಬಗ್ಗೆ ಒಂದಷ್ಟು ಸಾಲುಗಳನ್ನು ಓದುವಾಗ ಪ್ರಸ್ತುತತೆಗೆ ಅತ್ಯಂತ ಆವಶ್ಯಕವಾದ ಸಾಲುಗಳಿವು ಎನಿಸಿದ್ದು ಸುಳ್ಳಲ್ಲ. ಕೆಲವು ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳು ಏನಿದೆಯೋ ಥೇಟು ಅದನ್ನೇ ಲೇಖಕರು ಪೆನ್ನಿನಿಂದ ಕೆತ್ತಿದ್ದಾರೆ ಅನಿಸುತ್ತಿತ್ತು. ಅವರು ನಾಯಕನನ್ನು ಭಾಷಣಗಳಲ್ಲಿ ಚರ್ಚಾಸ್ಪರ್ಧೆಗಳಲ್ಲಿ ಗೆಲ್ಲಿಸುವಾಗ ನಾನು ನನ್ನ ಶಾಲಾ ಕಾಲೇಜು ದಿನಗಳಲ್ಲಿ ಅದೇ ರೀತಿ ಪ್ರಶಸ್ತಿಗಳನ್ನು ಬಾಚುತ್ತಿದುದು ನೆನಪಿಗೆ ಬರಲು ಹೆಚ್ಚು ಹೊತ್ತು ಹಿಡಿಯಲಿಲ್ಲ.

ಇನ್ನು ಈ ಪುಸ್ತಕದ ನೆಗೆಟಿವ್ ಗಳ ಬಗ್ಗೆ ಬಂದರೆ, ನನಗೆ ಕಂಡಿದ್ದು ಹೆಜ್ಜೆ ಹೆಜ್ಜೆಯಲ್ಲಿಯೂ ಅಕ್ಷರದೋಷಗಳು. ಕರಡುಪ್ರತಿಗಳನ್ನು ಸರಿಯಾಗಿ ತಿದ್ದಲಿಲ್ಲವೋ, ಅಥವಾ ಪ್ರಿಂಟ್ ಮಿಸ್ಟೇಕ್ ಗಳೋ ಅರಿಯೆ. ಆದರೆ ಪದೇ ಪದೇ ಕಾಲಿಗೆ ಬಳ್ಳಿಯೊಂದು ತಡವರಿಸುವಂತೆ ತ್ರಾಸಾಗುತ್ತಿತ್ತು. ಕೆಲವು ಕಡೆ ಒಂದೇ ಪ್ಯಾರಾ ಎರಡು ಸಲ ಅಚ್ಚಾಗಿರುವುದೂ ಇದೆ. ಕೆಲವು ಸಾಲುಗಳನ್ನು ಅಲ್ಲಲ್ಲಿ ಪದೇ ಪದೇ ಮರುಬಳಕೆ ಮಾಡಿಕೊಂಡಿದ್ದಾರೆ ಅನಿಸಿತು. ಇದೆಲ್ಲ ನಾನು ಕೊಂಡ ಪ್ರತಿಯ ಸಮಸ್ಯೆಗಳೋ, ಅಥವಾ ಎಲ್ಲಾ ಪ್ರತಿಗಳದ್ದೂ ಹೀಗೆಯೋ ಗೊತ್ತಿಲ್ಲ. ಅಕಸ್ಮಾತ್ ಎಲ್ಲದರಲ್ಲೂ ಹೀಗೆಯೇ ಅಂತಾದರೆ, ಮುಂದಿನ ಮುದ್ರಣಕ್ಕೆ ಹೋಗುವಾಗ ಲೇಖಕರು, ಪ್ರಕಾಶಕರು ಮತ್ತೊಮ್ಮೆ ಗಮನಿಸುವುದೊಳಿತು. ಇನ್ನೊಂದು; ಮುಂದಿನ ಮುದ್ರಣಕ್ಕೆ ಹೋಗುವಾಗ ಕವರ್ ಪೇಜ್ ಅನ್ನು ಬದಲಾಯಿಸಿದರೆ ಮತ್ತಷ್ಟು ಓದುಗರನ್ನು ತಲುಪಬಹುದೇನೋ. ಡೋಂಟ್ ಜಡ್ಜ್ ಆ ಬುಕ್ ಬೈ ಇಟ್ಸ್ ಕವರ್ ಎಂದರೂ ಮೊದಲ ಇಂಪ್ರೆಷನ್ ಯಾವತ್ತಿಗೂ ಅದೇ ಅಲ್ಲವೇ !

ಇದಕ್ಕೂ ಮೊದಲು ರವಿ ಬೆಳಗೆರೆಯವರ ಹೇಳಿ ಹೋಗು ಕಾರಣ ಓದಿದ್ದೆ. ಅದೊಂದು ರೀತಿಯಲ್ಲಿ ಪ್ರೀತಿ-ಪ್ರೇಮ-ಪ್ರಣಯ ಎಂಬ ವಿಷಯಗಳ ಬೈಬಲ್ ಅಂದರೆ ತಪ್ಪಾಗಲಿಕ್ಕಿಲ್ಲ. ಅಷ್ಟರ ಮಟ್ಟಿಗಿನ ಭಾವೋದ್ರೇಕಗಳ ಅಕ್ಷರರೊಪ ಅದಾಗಿತ್ತು. ಇದೂ ಕೂಡ ಅಂತಹುದ್ದೇ ಪುಸ್ತಕವಾಗಿರಬಹುದು, ಮತ್ತೊಂದು ಪ್ರೇಮವೆಂಬ ಬದನೇಕಾಯಿ ಪುಸ್ತಕದೊಳಕ್ಕೆ ಅಚ್ಚಾಗಿರಬಹುದು ಎಂಬ ಭಾವನೆಯೇ ಓದುವ ಮೊದಲಿದ್ದುದು. ಆದರೆ ಕೊನೆಯ ಪುಟ ತಿರುವುವಾಗ ಒಂದು ಚೆಂದದ ಓದಿನ ಅನುಭೂತಿಯನ್ನು ಇದು ಕೊಡುವುದರಲ್ಲಿ ಸಫಲವಾಗಿತ್ತು. ನಡುವಲ್ಲಿ ಹತ್ತಾರು ಬಾರಿ ಮೆದುಳಿಗೆ ಒಂದಿಷ್ಟು ಆಹಾರ ನೀಡಿತ್ತು, ಚಿಂತನೆಗೆ ದೂಡಿತ್ತು, ಕಣ್ಣಂಚನ್ನು ತೇವವಾಗಿಸಿತ್ತು.

ಯಾವತ್ತಿಗೆ ಲೇಖಕ ತನ್ನ ಬರಹದ ಮೂಲಕ ಓದುಗನೆದೆಯ ಕದ ತಟ್ಟುತ್ತಾನೋ, ಅವನನ್ನ ತನ್ನ ಬರಹದ ಮೂಲಕವೇ ಭಾವನೆಗಳ ಸುಲಿಗೆ ದೂಡುತ್ತಾನೋ ಅಲ್ಲಿಗೆ ಆತ ಗೆದ್ದಂತೆ. ಅರ್ಜುನ ದೇವಾಲದಕೆರೆ ಅವರದ್ದೂ ಅಂಥದ್ದೇ ಸಾಲಿನ ಲೇಖನಿಯ ಹೆಜ್ಜೆಗಳು. ಹೀಗಾಗಿ ಅವರ ಬರಹದ ಅಭಿಮಾನಿಯಾಗಿಬಿಟ್ಟಿದ್ದೆ. ಅಂದಹಾಗೆ ಲೇಖಕರು ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಕಥೆ ಎಂಬ ತಲೆಬರಹದಡಿಯಲ್ಲಿ ದಿನವೂ ಒಂದೊಂದು ಸಣ್ಣ ಕಥೆಯನ್ನು ಹಂಚಿಕೊಳ್ಳುತ್ತಾರೆ. ಈಗೀಗ ಅದೂ ಕಾಡಲಾರಂಭ್ಸಿದೆ.

MORE FEATURES

ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಕಾದಂಬರಿ

31-03-2025 ಬೆಂಗಳೂರು

"ರಾಜಮಾತೆ ಕೆಂಪನಂಜಮ್ಮಣ್ಣಿ - ಮಾದರಿ ಮೈಸೂರಿನ ತಾಯಿಬೇರು - ಈ ಪುಸ್ತಕ ಕೊಂಡು ವಾರವೇ ಆದರೂ ರೇಷ್ಮೆ ಬಟ್ಟೆಯ ಓದು ...

ಪ್ರವಾಸ ಕಥನವನ್ನು ಹೀಗೂ ಬರೆಯಬಹುದೆನ್ನುವುದನ್ನು ಲೇಖಕಿ ತೋರಿಸಿಕೊಟ್ಟಿದ್ದಾರೆ..

31-03-2025 ಬೆಂಗಳೂರು

"ನಾನೂರು ವರ್ಷಗಳಷ್ಟು ಹಳೆಯ ಥಿಯೇಟರಲ್ಲಿ ನಾಟಕ ನೋಡಿದಾಗ ನೀನಾಸಂ ನೆನಪು, ವಿಸೀಯವರ ಇಂಗ್ಲೆಂಡ್ ಪಯಣ, ವರ್ಡ್ಸ್ ವರ...

ಬೇಂದ್ರೆಯವರ ಕಾವ್ಯಾನುಸಂಧಾನದಲ್ಲಿ 'ಯುಗಾದಿ'

31-03-2025 ಬೆಂಗಳೂರು

"ಕಾವ್ಯದ ಹಿನ್ನೆಲೆ, ತತ್ವ, ಸೌಂದರ್ಯಾನುಭವವದ ಜೊತೆಗೆ ಭಾರತೀಯ ಜೀವನ ದರ್ಶನದ ಅನೇಕ ಹೊಸ ಹೊಳಹುಗಳನ್ನು ತಮ್ಮ ಚಮತ್...