ಕವಿತೆಗಳು ಬೆಂದ ರೊಟ್ಟಿಯಂತೆ ಹದವಾದ ರುಚಿ ಹೊಂದಿವೆ


"ಗಾಂಧೀಜಿ ಹೇಳಿದಂತೆ 'ರುಚಿ ಎನ್ನುವುದು ಅಡುಗೆಯಲ್ಲಿಲ್ಲ ನಾಲಿಗೆಯಲ್ಲಿರುತ್ತದೆ' ನಾಲಿಗೆಯಲ್ಲಿ ಅಂದರೆ ಹಸಿವಾದರೆ ನಾಲಿಗೆಯಲ್ಲಿ ರಸ ಗ್ರಂಥಿಗಳು ತಿಂದಿದ್ದನ್ನು ಸವಿಯಲು ಸಿದ್ಧವಾಗಿರುತ್ತವೆ. ಆಗ ತಿನ್ನುವುದೆಲ್ಲವೂ ರುಚಿಯೇ," ಎನ್ನುತ್ತಾರೆ ನಿಂಗಮ್ಮ ಭಾವಿಕಟ್ಟಿ ಹುನಗುಂದ. ಅವರು ಸದಾಶಿವ ದೊಡಮನಿ ಅವರ ‘ಇರುವುದು ಒಂದೇ ರೊಟ್ಟಿ’ ಕವನಸಂಕಲನದ ಕುರಿತು ಬರೆದ ವಿಮರ್ಶೆ.

ಬಡತನದ ಬೆಂಕಿಯಲ್ಲಿ ಬೆಂದು ಹದವಾದ ಅನ್ನ- ಚಿನ್ನದಂತಾದ ಡಾ. ಸದಾಶಿವ ದೊಡಮನಿ ಅವರ ಬಹು ದಿನಗಳ ನಂತರ ಮೂಡಿ ಬಂದ 'ಇರುವುದು ಒಂದೇ ರೊಟ್ಟಿ' ಬಹಳ ರುಚಿಯಾಗಿದೆ. ನನಗೆ ನೆನಪಿದೆ ನಮ್ಮ ಮನೆ ಎದುರಿಗೆ ಒಂದು ಹುಡುಗ ರೊಟ್ಟಿ ಮುರಿದು ಜೇಬಲ್ಲಿಟ್ಟುಕೊಂಡು ಚಾಕಲೇಟು, ಶೇವು ತಿನ್ನುತ್ತಾ ತಿನ್ನುತ್ತಾ ಆನಂದಿಸುತ್ತಿದ್ದ. ಆ ದಿನಗಳೇ ಹಾಗಿದ್ದವು. ಬಡತನದಲ್ಲಿ ಊಟ ರುಚಿ ಅನ್ನಿಸುತ್ತಿತ್ತು. ಎಷ್ಟೇ ದಿನಿಸು ಹಾಕಿದರು ಈಗ ಆ ರುಚಿ ಇಲ್ಲ ಎನ್ನುವುದು ಎಂಥವರು ಒಪ್ಪವ ವಿಚಾರ.

ಗಾಂಧೀಜಿ ಹೇಳಿದಂತೆ 'ರುಚಿ ಎನ್ನುವುದು ಅಡುಗೆಯಲ್ಲಿಲ್ಲ ನಾಲಿಗೆಯಲ್ಲಿರುತ್ತದೆ' ನಾಲಿಗೆಯಲ್ಲಿ ಅಂದರೆ ಹಸಿವಾದರೆ ನಾಲಿಗೆಯಲ್ಲಿ ರಸ ಗ್ರಂಥಿಗಳು ತಿಂದಿದ್ದನ್ನು ಸವಿಯಲು ಸಿದ್ಧವಾಗಿರುತ್ತವೆ. ಆಗ ತಿನ್ನುವುದೆಲ್ಲವೂ ರುಚಿಯೇ.

ಅವರೇ ಹೇಳುವಂತೆ ಒಂದು ಕವಿತೆ ಬರೆಯಲು ಒಂದು ತಿಂಗಳು ಒಂದು ಮನಸೊಪ್ಪುವ ಆ ಶಬ್ದಕ್ಕೂ ಒಂದು ತಿಂಗಳು ಬೇಕಾಗುವುದು ಉಂಟು. ಕವಿತೆಯೊಲಿದಾಗ ಜಲಧಾರೆಯಂತೆ ದಬ ದಬ ಸುರಿಯುವುದು ಉಂಟು. ಇಲ್ಲಿನ ಕವಿತೆಗಳು ಬೆಂದ ರೊಟ್ಟಿಯಂತೆ ಹದವಾದ ರುಚಿ ಹೊಂದಿವೆ, ಊಟ ಹೊಟ್ಟೆಗೆ ಪದ್ಯ ಗದ್ಯಗಳು ನೆತ್ತಿಗೆ ತೃಪ್ತಿಗೊಳಿಸುತ್ತವೆ. ಕೆಲವು ಪುಸ್ತಕ ಅಥವಾ ಕವನ, ಕಥೆ, ಲೇಖನಗಳನ್ನು ಓದಿದಾಗ ಸುಮ್ಮನಿರಲು ಆಗುವುದಿಲ್ಲ. ಅವುಗಳ ಬಗ್ಗೆ ಏನಾದರೂ ಹೇಳಲೇಬೇಕೆನಿಸುವುದು ಉಂಟು. ಅಂತಹ ಕೃತಿಗಳಲ್ಲಿ ಡಾ. ಸದಾಶಿವ ದೊಡಮನಿ ಅವರ 'ಇರುವುದು ಒಂದೇ ರೊಟ್ಟಿ'ಯೂ ಒಂದು. ಒಂದೊಂದು ಕವನಗಳಂತೂ ಕಣ್ತುಂಬಿಸುವ ತಾಕತ್ತು ಹೊಂದಿವೆ ಎಂದರೆ ಅವು ಎಷ್ಟು ಹದವಾಗಿರಬೇಕು.

ಉದಾಹರಣೆಗೆ ....'ಅದ ಉಂಡು ಉಟ್ಟು ಮಲಗಿದಾಕೆ.. ಬಂಧು-ಬಳಗಕ್ಕೆ ಬೇವಿನ ಮರದ ನೆರಳಾದಾಕೆ..' ಇದನ್ನು (ಅವ್ವ ) ಅವ್ವ ಕವಿತೆ ಓದುತ್ತಿದ್ದರೆ 'ಸ್ತ್ರೀ ಎಂದರೆ ಅಷ್ಟೇ ಸಾಕೆ ನಿನಗೆ ಬೇರೆ ಹೆಸರು ಬೇಕೆ ?' ಎಂಬ ಜಿ ಎಸ್ ಶಿವರುದ್ರಪ್ಪನವರ ಕಾವ್ಯ ಚಿತ್ತದಲ್ಲಿ ಬಂದು ಹೋಗುತ್ತದೆ. ಎರಡನೇ ಕವನವೇ ಅಪ್ಪ. 'ಅಪ್ಪನ ಕೈಯ ಮೇಲೆ ಎಷ್ಟೊಂದು ಕೆರೆ, ಬಾವಿಗಳು; ಒಡ್ಡು, ಬಾಂದಾರ ತಲೆಯೆತ್ತಿದ್ದವು'ಎನ್ನುತ್ತಾ ಮುಂದುವರೆದು ತೋಡಿದ ಬತ್ತದ ಬಾವಿಯ ನೀರ ಊರೇ ಕುಡಿದರೂ ತೋಡಿದವನಿಗೆ ಮುಟ್ಟದಂತಿರದ ಸಮಾಜದ ಕಟ್ಟುಪಾಡುಗಳನ್ನು ಮನಮುಟ್ಟಿಸುತ್ತಾರೆ. ಅಂತಹ ಅಪ್ಪಂದಿರ ಜೀವನ ಗತಿಯ ತೆರೆದಿಟ್ಟು ಹೌದಲ್ಲವೇ... ಎಂದು ಮಿಡಿಯದೆ ಮುಂದೆ ಹೋಗಲಾಗುವುದೇ ಇಲ್ಲ. ಅವನೇ ಬಿತ್ತುವನಾದರೂ ಬೆಳೆದ ಮೇಲೆ ಮಣ್ಕಾಳು ಅವನಿಗೆ; ಕಟ್ಟಿದ ಮನೆಯೊಳಗೆ ಅವನೇ ಬರುವಂತಿಲ್ಲ ' ಇದು ಈಗಲೂ ಮುಂದೆಯೂ ಬದಲಾಗದ ಸಿನಿ ಮನದ ಕಥೆ. ಬುದ್ಧನನ್ನು ಮರೆತಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ದೊಡಮನಿಯವರು ಬುದ್ಧನಂತಾಗಲು ಉಪದೇಶವೀಯದೆ ವಿಷಾದವನ್ನು ಅಷ್ಟೇ ವ್ಯಕ್ತಪಡಿಸುತ್ತಾರೆ.

ಜಾತಿ ಭೂತ ಹಿಡಿದವರ ಮನಸ್ಥಿತಿಯನ್ನು ಮಾರ್ಮಿಕವಾಗಿ ಚಿತ್ರಿಸಿದ ದೊಡಮನಿ ಅವರು ದಲಿತರ ಅಸಹಾಯಕತೆಯ ಮೌನವನ್ನು ಮತ್ತಷ್ಟು ಗಾಢವಾಗಿಸಿದ್ದಾರೆ. ಮಲಿನ ಮನಸ್ಸುಗಳನ್ನು ತೊಳೆಯಲು ಕೆರೆಬಾವಿಗಳನ್ನು ಹುಡುಕುವ ಮನೋಜ್ಞತೆಯುಳ್ಳ ಡಾ.ದೊಡಮನಿಯವರು 'ವಿಚಾರಗಳು ಮೊಂಡ ಆಗಿವೆ..' ಎನ್ನುತ್ತಾ ಯಾರ ಯಾರು ಕೇಳರು ಈಗ ಯಾರಿಗೂ ಬೇಡವೀಗ... ಎಂದು ಸ್ಪಷ್ಟವಾಗಿ ಹೇಳುವ ಸೂಕ್ಷ್ಮತೆ ಕಾಣುತ್ತದೆ, ಅಪರೂಪದ ಮಗಳ ಆಗಮನದ ಹರುಷವನ್ನು ಬಲು ಸುಂದರವಾಗಿ ಹೆಣೆಯುವ ದೊಡಮನಿಯವರು ಅಕ್ಷರ - ಸಂಸ್ಕೃತಿಗೆ ಅಕ್ಕರೆಯ ಗೊಂಬೆ ಸಿಕ್ಕಂತಾಗಿದೆ. ಎಂದು ಮಕ್ಕಳನ್ನು ಅಕ್ಕರೆಯ ಗೊಂಬೆ ಕಾವ್ಯದ ಚೌಕಟ್ಟಿನಲ್ಲಿರಿಸಿ ಚಂದವಾಗಿಸಿ 'ಶುಭದ ನೆರಳಿರಲಿ ನಿನ್ನ ಬೆನ್ನು ನೆತ್ತಿಗೆ' ಎಂದು ಎದೆ ತುಂಬಿ ಹಾರೈಸುವಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅವರಲ್ಲಿರುವ ತಾಯ್ತನ ಎದ್ದು ಕಾಣುತ್ತದೆ. ಹೆಣ್ಣು ಭ್ರೂಣವನ್ನು ತೆಗೆಸಿ ಈಗ ಹೆಣ್ಣು ಸಂತತಿ ಮಾಪನದಲ್ಲಿ ಇಳಿಮುಖವಾಗಿ ಮಾನವತೆಯಲ್ಲಿ ಸಮತೋಲನ ತಪ್ಪಿದ ಈ ಘಳಿಗೆಯಲ್ಲಿ ದೊಡಮನಿಯವರ ಮಕ್ಕಳ ಅಕ್ಷರ, ಸಂಸ್ಕೃತಿ, ಅಪೂರ್ವ ಎಂಬ ಅಪರೂಪದ ಅರ್ಥಪೂರ್ಣ ಹೆಸರುಗಳು ಅವರೊಳಗಿನ ಜಾಣ್ಮೆಯ ದ್ಯೋತಕವಾಗಿವೆ. ಮಕ್ಕಳ ಹಠ ಪ್ರೀತಿಯನ್ನು ಆನಂದಿಸಲು ಸಮಯ ಉಳಿಸಿಕೊಂಡು 'ಮಗುತನ' ದಲ್ಲಿ ಆನಂದಿಸುವ ಅವರ ಕೌಟುಂಬಿಕ ಪ್ರೀತಿಯ ಗೃಹದಾಕಾರವಾಗಿದೆ.

ಇಲ್ಲಿನ ಹಸಿವೆಯ ಕಿಚ್ಚನ್ನು ಸದಾಶಿವ ದೊಡಮನಿ ಅವರು 'ಹೊಟ್ಟೆಯಲ್ಲಿಯೇ ಸೂರ್ಯ ಉದಯಿಸುತ್ತಿದ್ದ' ಎಂಬ ಉಪಮೇಯೊಂದಿಗೆ ಗಟ್ಟಿಯಾಗಿಸಿದ್ದಾರೆ. ಬಡತನವನ್ನು ಹಾಸಿ ಹೊದ್ದು ಅದನ್ನೇ ತಿಂದು ತೇಗಿದ ಜೀವಗಳ ಪರಿಚಯಿಸಿ ಓದುಗರೆದೆಯ ತಟ್ಟಿ ಹೃದಯ ಜಿನುಗಿಸಿ ಮತ್ತೆ ಓದುತ್ತಾ ಇರುವಂತೆ ಮುಂದೆ ಹೋಗುವುದ ತಡೆಯುವಂತೆ ಮಾಡುವ ತಾಕತ್ತು ರೊಟ್ಟಿಯ ಕವಿತೆಗಿತ್ತು ಪ್ರಭುದ್ಧವಾಗಿದ್ದಾರೆ.

ಮುಂದಿನ ಕವಿತೆಗಳಲ್ಲಿ ಸಾವು ನೋವು ವಿಷಾದ ಸಾತ್ವಿಕ ಸಿಟ್ಟುಗಳನ್ನು ಅಷ್ಟೇ ಅಲ್ಲದೆ ಸಹ ಹೃದಯ ತಂಪಾಗಿಸುವ ಕಚಗುಳಿ ಇಡುವ ಪ್ರೇಮ ಸರಸಮಯ ಕವಿತೆಗಳ ನವರಸ ಪೂರ್ಣ ಸಂಕಲನವಾಗಿಸಿದ್ದಾರೆ. ಹೌದು ಕೇವಲ ಕಷ್ಟ ನೋವುಗಳನ್ನು ಅಷ್ಟೇ ಹಂಚಿಕೊಂಡರೆ ಎಷ್ಟಂತ ಕೇಳುವುದು? ಎಂಬ ಮಾತನ್ನು ಬಲ್ಲವರಾದ ಕವಿ ತಡೆದ ಮಳೆಯಂತೆ ಕವಿತೆಗಳನ್ನು ಧುಮ್ಮಿಕ್ಕಿಸಿದ್ದಾರೆ. 'ಭೂಮಿ ತೂಕದ ನಡಿಗೆ' ಯಲ್ಲಿ ದೊಂಬರಾಟದ ಹುಡುಗಿಯ ಜೊತೆ ತನ್ನನ್ನು ಸಮೀಕರಿಸಿಕೊಳ್ಳುತ್ತಾ ಜೊತೆಗೆ ಅವ್ವನನ್ನೇ ಎತ್ತರಕ್ಕೇರಿಸುವ ಪರಿ ಮೆಚ್ಚುವಂತಿದೆ ಇಲ್ಲಿಯೂ ಬಡತನ ಸಿರಿತನಗಳನ್ನು ಹಚ್ಚಿರುವ ಜಾಣ್ಮೆ ಕಾಣುತ್ತದೆ. ಅಲ್ಲದೆ ಭೂತ ವರ್ತಮಾನಗಳ ತುಲನೆ ಮಾಡುತ್ತಾ ರವಿ ಕಾಣದ್ದನ್ನು ಕವಿ ಕಂಡಿದ್ದು ಅದ್ಬುತವಾಗಿದೆ.

ಅನ್ನದ ಪೋಲಾಗುವಿಕೆಯನ್ನು ಸಾಂಕೇತಿಕವಾಗಿ ಹೇಳುತ್ತಾ 'ಅನ್ನಸಂತರ್ಪಣೆ' ಯಲ್ಲಿ ಅನ್ನ ನೋಡಿ ಹಸಿವನ್ನು ಮಾತನಾಡಿಸಿದಂತಿದೆ. ಅನ್ನ ಚೆಲ್ಲುವವರು ಒಂದು ಕಡೆಯಾದರೆ ಅದೇ ಅನ್ನವಿಲ್ಲದೆ ಇರುವವರು ಇನ್ನೊಂದು ಕಡೆ ಹಸಿವಿನಿಂದ ಕಂಗೆಟ್ಟಿದ್ದನ್ನು ಚಿತ್ರಿಸಿದ್ದಾರೆ ಅನ್ನ ಹಸಿವೆಗಳನ್ನು ಪಕ್ಕದಲ್ಲಿ ನಿಲ್ಲಿಸಿ ಬರೆದು ಓದುಗರ ಕಣ್ಣು ಒದ್ದೆ ಮಾಡಿದ ಕವಿತೆ ಸಾರ್ಥಕವಾಗುತ್ತದೆ. 'ಆತ್ಮಸಖಿ' ಯೊಂದಿಗೆನ ಸೆಳೆತವನ್ನು ರಸವತ್ತಾಗಿಸುತ್ತ ಹಗಲು ರಾತ್ರಿಗಳೊಂದಾಗಿ ಸುಗಮವಾಗಿಸಿದ್ದಾರೆ. ಕನ್ಯೆ ನೋಡಲು ಹೋದಾಗಿನ ಸಂದರ್ಭವನ್ನು ಬಲು ಚಂದವಾಗಿ ಶಬ್ದಗಳಲ್ಲಿ ಹಿಡಿದಿಟ್ಟು ಹರಯದ ಕಣ್ಣಿಗೆ ರಂಗೇರಿಸಿ ಭಾವ ಬೆಚ್ಚಗಾಗಿಸುವಲ್ಲಿ ಪಳಗಿದ್ದಾರೆ. ನೀನಲ್ಲವೆ... ಎನ್ನುತ್ತಲೇ ನೀನೇ ಕಣೇ ಎನ್ನುವ ಆಪ್ತತೆಯ ಹಂಚಿಕೊಂಡಿದ್ದಾರೆ . ದಾಂಪತ್ಯದ ಬದುಕಿನ ಮಧ್ಯೆ ನೀರಸತೆ ದಾಳಿ ಮಾಡಿದಂತೆನಿಸಿದಾಗ ಇಂತಹ ಮದುವೆಗೂ ಮೊದಲ ಪ್ರಸಂಗಗಳ ನೆನೆದು ಬದುಕಲಿ ಪ್ರೇಮರಸ ಜನುಗುತಿರುವಂತೆ ಇರಿಸಿಕೊಳ್ಳಲು ಬಯಸುತ್ತಾರೆ.

'ಚಂದ್ರನನ್ನು ಹುಡುಕುತ್ತಾ ಬಂದವಳು ತಾನು ಬೆಳದಿಂಗಳನ್ನುವುದ ಮರೆತಳು.... ಎನ್ನುವ ರಸಭಾವದ ರೂಪಕಗಳನ್ನು ಬಳಸುತ್ತ ಕಾವ್ಯದ ಚೆಲುವ ಹೆಚ್ಚಿಸುತ್ತಾರೆ.

ನೋವು ಅಜ್ಜನ ಆಸ್ತಿಯಂತೆ ಬಳುವಳಿಯಾಗಿ ಬಂದಿದ್ದು ಎನ್ನುವ ಆಳದಲ್ಲಿ ನೋವುಗಳು ಬರತೊಡಗಿದರೆ ಸಾಲು ಸಾಲಾಗಿ ಬರುತ್ತವೆ ಎನ್ನುವುದು ಅವರ ಅನುಭವದ ಸಾಲುಗಳಾಗಿ ಮೂಡಿಬಂದಿವೆ. ಇವರಿಗೆ ಅವ್ವ ಕಣ್ಣ ಮುಂದಿನ ಬೆಳಕಾಗಿ ನೆತ್ತಿ ಮೇಲಿನ ನೆರಳಾಗಿದ್ದು ಇದೇ ಭಾವದ ಉಪಮೇ ಎಂಬಂತೆ ನೆನಪಾಗಿದ್ದು ಸತ್ಯಾನಂದ ಪಾತ್ರೋಟರ 'ಅವ್ವ ಕವಿತೆಯಾದಳು'

ಮುಂದೊಂದು ದಿನ ಇವರು ಕವಿತೆಯಲ್ಲಿ ಅಧಿಕಾರಿಗಳು ಉಳ್ಳವರು ಜುಲ್ಮಾನೇ ಹಾಕುವ ಕಾರಣಗಳು ಸಿಲ್ಲಿ ಎನಿಸಿದರೂ ಭಯವಾಗುವಂತಿವೆ. ಮತ್ತು ಸುಮ್ಮನಿರುವ ನಮ್ಮನ್ನು ನಾವು ನೋಡಿಕೊಂಡಾಗ ನಾಚಿಕೆಯಾಗುತ್ತದೆ. ಬರಗಾಲದ ಚಿತ್ತಾರ ಕಾವೇರಿದ ಬೆಲೆ ಏರಿಕೆಗಳ ಬಣ್ಣ ಬೆಸೆಗೊಂಡು ಸಂಕ್ರಾಂತಿಯು ಅಚ್ಚಳಿಯದೆ ಉಳಿಯುತ್ತದೆ. ಮನವ ಕಾಯಿಲೇನು ತರಲೆನ್ನುತ ಒಳ ಹೊರಗಣ ತನ್ನತನ ಕಾಪಾಡಿಕೊಳ್ಳುವ ಹೆಣಕಾಟ ಕಾಡುತ್ತದೆ. ಸಹಜವಾಗಿ ಎಲ್ಲ ಕವಿತೆಗಳಂತೆ ಡಾ. ದೊಡಮನಿಯವರಿಗೂ 'ಅವಳು' ಕಾಡಿದ್ದಾಳೆ ಅವಳೇ 'ಚಂದವಳ್ಳಿಯ ಚೆಲುವೆ' ಆ ಮಲ್ಲಿಗೆಯವಳ ಬಣ್ಣಿಸಲು ಪದಗಳಿಗಾಗಿ ತಡಕಾಡಿದ್ದಾರೆ. ಹೃದಯದಲ್ಲಿ ಮಡುಗಟ್ಟಿದ ಆ ಪ್ರೇಮ ಅಮೃತದ ಸವಿಯುಂಟು, ಮೈಮರೆತ ಭಾವ ಮುದ ನೀಡುತ್ತದೆ . ಸಿಗದವಳು ಎದೆಯ ಭಗ್ನಗೊಳಿಸಿ ಎದೆ ಕಲ್ಲಾಗಿಸಿ ಅಲ್ಲೇ ಸೆಲೆಯಾಗಿ ಬಿಡುತ್ತಾಳೆ. ಸಿಕ್ಕವಳು ಮಲ್ಲಿಗೆಯಾಗಿ ಮನಕೆ ಅಮೃತವಿಕ್ಕಿ ಬಹಳ ತನ್ನ ತಾನು ತೆಗೆದುಕೊಳ್ಳುತ್ತಾ ಕೆಂಪಾಗಿ ಹರಡಿ ಹಬ್ಬಿ ಬಿಟ್ಟಿರುತ್ತಾಳೆ ಆಕೆಯೇ ಈ ಚಂದವಳ್ಳಿಯಾಕೆ.

ಅಲ್ಲಿಂದ ಮುಂದೆಲ್ಲಾ ಕಾವ್ಯಗಳು ಬಹುತೇಕ ಅವಳೇ ಹಾಡಾಗಿ ಅವ್ವಳಿಗೆ ಮಗಳಾಗಿ ಪಾತ್ರವಹಿಸಿ ಪ್ರವಹಿಸಿದ್ದಾಳೆ. 'ಜೀವ ಹೋಗುವ ವೇಳೆಯಲ್ಲಿ ಯಾರಿದ್ದರೇನು ಇರದಿದ್ದರೇನು ಹೋಗುವ ಜೀವ ಹೋಗುವುದೇ.. ಎನ್ನುವಲ್ಲಿ ಅತಂತ್ರ ಜೀವನದಲ್ಲಿ ಜೀವ ಹೋಗುವ ಗಳಿಗೆ ಎಷ್ಟು ವಿಚಿತ್ರ ಎನ್ನುವುದನ್ನು ಹೇಳುತ್ತಾ ಈ ನಶ್ವರ ಜೀವನದ ಮನದಟ್ಟು ಮಾಡಿಸುತ್ತಾರೆ. 'ಸಾಯಲು ಒಂದು ನೆಪ ಅದು ಎಡವಿದರೂ ಕೆಮ್ಮಿದರು ಆಗಬಹುದು ಹೊರಗೋದವರು ಒಳಗೆ ಬರದು ಖಚಿತ ಇರೋದಿಲ್ಲ... ಎನ್ನುವುದನ್ನು ಹೇಳುವ ಕವಿತೆ 'ಅವನ ನ್ಯಾಯಾಲಯದಲ್ಲಿ' ಹಾಸ್ಯ ಮಾತುಗಾರ ಗಂಗಾವತಿ ಪ್ರಾಣೇಶ್ ಒಂದು ಕಡೆ ವಿಡಂಬನೆ ಮಾಡುತ್ತಾರೆ 'ಗಾಂಧಿಯನ್ನು ಸರ್ಕಲ್ಲು ವೃತ್ತಗಳಲ್ಲಿ ನಿಲ್ಲಿಸಿದ್ದಾರೆ ಏಕೆಂದರೆ ಅವರ ತತ್ವ ಆದರ್ಶಗಳನ್ನು ನಿಲ್ಲಿಸಿದ್ದಾರೆ' ಎನ್ನುವ ಮಾತುಗಳನ್ನು ನೆನಪಿಸುತ್ತದೆ 'ಗಾಂಧೀ ಸ್ಮೃತಿ ಕವಿತೆ'.

ಇದೇ ನೆಲದ ಸಿದ್ದಲಿಂಗಯ್ಯ, ಸತ್ಯಾನಂದ ಪಾತ್ರೋಟರಂತೆ ಅದೇ ಸಾಲಿನ ಬಂಡಾಯದ ಕವಿಯಂತೆ ಸಣ್ಣಗೆ ಸಿಡಿದಂತೆ ಹೇಳುವುದನ್ನು ಖಾರವಾಗಿ ತಂಪಾಗಿ ಬಿರುಗಾಳಿಯಾಗಿ ಹೇಳುತ್ತಾರೆ, ನಡುವೆ ಅವಳೊಂದಿಗೆ ಮೃದುವಾಗಿ ಸಹ ಹೇಳಬಲ್ಲೆನೆಂದು ಸಾರಿದ್ದಾರೆ. ಇತ್ತೀಚೆಗೆ ಬಹು ಚರ್ಚಿಸಲ್ಪಟ್ಟ ಸಂಕಲನ ಇದಾಗಿರುವುದು ಆ ಸಂಕಲನದ ಹೆಚ್ಚುಗಾರಿಕೆಯನ್ನು ಬಿಂಬಿಸುತ್ತದೆ.

ಇಲ್ಲಿ ಹಸಿವು, ಬೇಸರ, ಕಳಕಳಿ, ಪ್ರೀತಿ, ಕೋಪ ಎಲ್ಲವೂ ಮೇಳೈಯಿಸಿದ, ಮಾಗಿದ ಕವನಗಳ ಗುಚ್ಛವಿದೆ. ಇವು ಒಮ್ಮೆ ಓದಿ ನಮ್ಮನ್ನೇ ಅವಲೋಕನೆಗೆ ಹಚ್ಚಿದರೆ ಒಮ್ಮೆ ನಮ್ಮ ಮುಗ್ದತೆಗೆ ನಮ್ಮ ಮೇಲೆ ಕೋಪ ಬರುವಂತೆ ಮಾಡುವ ತಾಕತ್ತಿದೆ. ಬುದ್ಧ ಬಸವನನ್ನು ಅನಾವರಣಗಳಿಸಿದ ಪರಿ ಅಪ್ಯಾಯವಾನವಾಗಿದೆ ಡಾ. ಸದಾಶಿವ ದೊಡಮನಿಯವರಿಗೆ ಅಭಿನಂದನೆಗಳು

 

 

MORE FEATURES

ಪೂರ್ಣಿಮಾ ಅವರ ವ್ಯಕ್ತಿತ್ವದಲ್ಲಿ ಅಲ್ಲಿನ ಮಣ್ಣಿನ ಸತ್ವ ಸಹಜವಾಗಿ ಸೇರಿದೆ

19-03-2025 ಬೆಂಗಳೂರು

“ಓದಿದಾಗ ಕಾವ್ಯಾನುಭವದ ಸುಖ ನೀಡುತ್ತದೆ. ಕನ್ನಡ ಕಾವ್ಯ ಪರಂಪರೆಯ ವಿವಿಧ ಲಯಗಳನ್ನು ಇವರು ತಮ್ಮ ಕಾವ್ಯ ರಚನೆಯಲ್ಲ...

ಬಿ ಸುರೇಶ್ ಅಂದರೆ ನಂಗಿಷ್ಟ…

19-03-2025 ಬೆಂಗಳೂರು

“ನೀನೂ ಅದನ್ನು ನೋಡುವಿಯಂತೆ ಅಂದ. 'ಸರಿ ಲೊಕೇಶನ್ ಕಳಿಸು' ಅಂದೆ. ಲೊಕೇಶನ್ ಬಂದು ಬಿದ್ದಾಗ ನೋಡಿದರೆ ಅದ...

ಈ ಕಥೆಯನ್ನು ಓದಿ ಮರುಗದಿರಲು ಸಾಧ್ಯವಿಲ್ಲ

19-03-2025 ಬೆಂಗಳೂರು

“ಮೇಲುನೋಟಕ್ಕೆ ಮುಳುಗಡೆ ಸಂತ್ರಸ್ತರ ಕುರಿತಾದ ಕಥಾನಕವಿದು ಎನ್ನಬಹುದಾದರೂ, ಕಾಲಿಗೆ ಚಕ್ರ ಹತ್ತಿಸಿಕೊಂಡು ದೇಶ ಕಾ...