ಕವಿತೆ ಸದಾ ಪ್ರೀತಿಯ ಹಾಗೆ ತಾನಾಗೇ ಒಲಿಯಬೇಕು


“ಇಲ್ಲಿನ ಸಾಲುಗಳನ್ನೇ ಪುಂಖಾನು ಪುಂಖವಾಗಿ ಉದಾಹರಿಸಿ ಬರೆಯಲಾರೆ ಬದಲು ಸಹೃದಯರು ಅವರವರ ಇಷ್ಟದ ಸಾಲುಗಳನ್ನು ಅವರವರೇ ಗುನುಗಿಕೊಳ್ಳಲಿ ಅನಿಸುತ್ತದೆ,” ಎನ್ನುತ್ತಾರೆ ವಾಸುದೇವ ನಾಡಿಗ್ ಅವರು ಕಾವ್ಯ ವನಗೂರ ಅವರ “ಕೊಂಕು ಮಾತಿನವಳು” ಕೃತಿಗೆ ಬರೆದ ಮುನ್ನುಡಿ.

ಆಶಯ ಮತ್ತು ಆಕೃತಿಗಳ ವಿಚಾರಕ್ಕೆ ಬಂದಾಗ ಇವೆರಡೂ ಕೂಡಾ ಪರಸ್ಪರ ತಮ್ಮನ್ನು ತಾವು ಹುಡುಕಿಕೊಂಡು ಅಭಿವ್ಯಕ್ತಿಯ ದಾರಿಯನ್ನು ಕಂಡುಕೊಳ್ಳುತ್ತವೆ ಎನಿಸುತ್ತದೆ. ಎಲ್ಲ ಕಲೆಗಳು ಹೀಗೆ. ಕಲಾವಿದ ತನ್ನ ತಾನು ಊಹಿಸಿಕೊಳ್ಳುವ ಚಿತ್ರಕ್ಕೆ ಬಣ್ಣ ಮತ್ತು ಚೌಕಟ್ಟನ್ನು ಹುಡುಕಿಕೊಳ್ಳುವ ಹಾಗೆ ಗಾಯಕ ರಾಗವನ್ನು ಹುಡುಕಿಕೊಳ್ಳುವ ಹಾಗೆ. ಇದನ್ನೇ ಸಂವೇದನೆ ಮತ್ತು ವಿನ್ಯಾಸ ಎನ್ನಬಹುದು.

ಪಂಪನ ಕಾವ್ಯದ ಕ್ಯಾನ್‌ವಾಸ್‌ಗೆ ಚಂಪು, ಬಸವಣ್ಣನಿಗೆ ವಚನ. ಜನ್ನನಿಗೆ ಕಂದ ಪದ್ಯ, ರತ್ನಾಕರ ವರ್ಣಿಗೆ ಸಾಂಗತ್ಯ. ಹರಿಹರನಿಗೆ ರಗಳೆ, ಕುಮಾರವ್ಯಾಸನಿಗೆ ಷಟ್ಟದಿ, ದಾಸರಿಗೆ ಕೀರ್ತನೆ, ಮುದ್ದಣ್ಣನಿಗೆ ಮುಕ್ತ ಗದ್ಯ ಹೀಗೆ. ಆಶಯವೊಂದು ತನಗೆ ಬೇಕಾದ ಮೈಯನ್ನು ಹುಡುಕಿಕೊಳ್ಳುತ್ತದೆ. ಇದು ವಿಸ್ಮಯವೇ ಸರಿ. ಕೆಎಸ್ ನರಸಿಂಹಸ್ವಾಮಿ ಎಷ್ಟೇ ಉದ್ದದ ನವ್ಯ ಕಾವ್ಯವನ್ನು ಬರೆದಿದ್ದರೂ ಅವರು ಗೆದ್ದದ್ದು ಭಾವಗೀತೆಗಳಲ್ಲಿ, ಡಿವಿಜಿ ಕಗ್ಗದಲ್ಲಿ, ಮಾಸ್ತಿ ಸಣ್ಣಕತೆಗಳಲ್ಲಿ ಮತ್ತು ಚಿತ್ತಾಲರು ಕಾದಂಬರಿಗಳಲ್ಲಿ.

ಸದ್ಯದ ಕಾವ್ಯ ಅವರ ಇಲ್ಲಿನ ರಚನೆಗಳನ್ನು ಓದಿದಾಗ ಅವರ ಆಶಯಕ್ಕೆ ತಕ್ಕುದಾದ ಶರೀರದ ಶೋಧನೆಯಲ್ಲೇ ತೊಡಗಿದ ಹಾಗಿದೆ. ಹಾಗಾಗೇ ಶೀರ್ಷಿಕೆಗಳ ಹಂಗನ್ನು ತೊರೆದಿವೆ. ಹಾಗೆ ನೋಡಿದರೆ ಒಬ್ಬ ಲೇಖಕ ತನ್ನ ಅಭಿವ್ಯಕ್ತಿಗೆ ಸರಿಯಾದ ಆಕೃತಿಯನ್ನು ಪಕ್ಕ ಖಚಿತ ಪಡಿಸಿಕೊಳ್ಳುವುದು ಸುಲಭ ಸಾಧ್ಯ. ಅಲ್ಲ. ಅಹರ್ನಿಶಿ ಪ್ರಯತ್ನ ಮತ್ತು ಧ್ಯಾನ ಬೇಕು.

ಸಂವೇದನೆಗಳಿಗೆ ತಕ್ಕ ಆಕೃತಿ ಒಲಿಯುವುದು ಭಾಗ್ಯವೇ ಸರಿ. ಈಚಿನ ಹೊಸ ಕಾಲಘಟ್ಟ ಮತ್ತು ಆಧುನಿಕ ವಿದ್ಯುನ್ಮಾನದ ಕಾಲಘಟ್ಟದಲ್ಲಿ ಸಾಹಿತ್ಯ ಸಂರಚನೆ ಚೆಲ್ಲಾಪಿಲ್ಲಿಯಾಗಿದೆ.

"ಕಾದಂಬರಿಯೊಂದನ್ನು ಪ್ರಕಟಿಸುತ್ತಿರುವೆ ಜೊತೆಗೆ ಕಾಂಪ್ಲಿಮೆಂಟರಿ ತರಹ ಒಂದು ಕವನ ಸಂಕಲನವನ್ನೂ ಪ್ರಕಟಿಸುವ ಹಂಬಲ, ಒಮ್ಮೆ ನೋಡಿ ಪ್ರಕಟಣೆಗೆ ಲಾಯಕ್ಕಿದೆಯೆ? ಒಮ್ಮೆ ಓದಿ' ಎಂಬ ಒಕ್ಕಣಿಕೆಯ ಹಿನ್ನೆಲೆಯಲ್ಲಿಯೇ ಕಾವ್ಯ ಪುನೀತ್ 'ಕೊಂಕು ಮಾತಿನವಳು' ಹಸ್ತಪ್ರತಿ ಕಳಿಸಿದ್ದಾರೆ. ಲಾಯಕ್ ಮತ್ತು ಲಾಯಕ್ಕಲ್ಲ ಎಂಬ ನಿರ್ಣಯವೇ ಖಾಸಗಿತನದ್ದು, ಬರಹವನ್ನು ಬದುಕಿದ್ದಕ್ಕೆ ಸಾಕ್ಷಿ ಎಂಬ ದಾಖಲೆ ಎಂದೇ ಪರಿಭಾವಿಸುವ ನನಗೆ ಯಾವ ಬರಹವೂ ಲಾಯಕ್ಕಲ್ಲ ಎಂದು ಹೇಳುವ ಮನಸು ಬರುವುದಿಲ್ಲ. ಬರೆದದ್ದನು ಸ್ವಲ್ಪ ತಿದ್ದುಪಡಿ ಮಾಡಿ ಚೊಕ್ಕಗೊಳಿಸಿ ಎಂದು ಹೇಳಬಲ್ಲೆ. ಜೀವ ಮತ್ತು ಜೀವನವನ್ನು ಪ್ರೀತಿಸುವ ಮತ್ತು ಆದರಿಸುವ ಗುಣ ಅಭಿವ್ಯಕ್ತವಾಗುವುದೇ ಬರಹದಲ್ಲಿ ಆದರೆ ಪ್ರೀತಿಸುವ ಮತ್ತು ಗೌರವಿಸುವ ರೀತಿಯಲ್ಲಿ ಕಲಾತ್ಮಕತೆ ಇರಬೇಕಷ್ಟೆ.

ನನ್ನ ಕವಿತೆಗಳಿಗೆ ಪದಗಳನ್ನು ಎರವಲಾಗಿ ಪಡೆದಿಲ್ಲ ಬದಲಾಗಿ ನಿನ್ನನೇ ಯಥಾ ಇಳಿಸಿದ್ದೇನೆ ಅದಕ್ಕಾಗಿಯೇ ಈ ಕವಿತೆಗಳು.

ಇಷ್ಟೊಂದು ಚೆಂದ ఎంబ ಸಾಲುಗಳನ್ನು ಓದುವಾಗ ಒಂದು ಕ್ಷಣ ಅದರ ಆತ್ಮವಿಶ್ವಾಸಕ್ಕೆ ಬೆರಗಾದೆ. ವ್ಯಕ್ತಿ ಅಥವಾ ಆಲೋಚನೆಯೊಂದನ್ನು ನಂಬಿ ಬರೆಯುವಾಗ ಆಗಬೇಕಾದ ಭಾವ ಅಂದರೆ ಇದೇನೆ ಕಾವ್ಯ ಅವರ ಈ ಪದ್ಯಗಳಲ್ಲಿ ಕಾಣುವ ಸರ್ವನಾಮಗಳು ಅಪಾರವಾದ ಪ್ರೀತಿಯಲ್ಲಿ ತೊಯ್ದಿಕೊಂಡಿದೆ ಮತ್ತು ಅದರಾಚೆ ಬಾಳನ್ನು ವ್ಯಾಖ್ಯಾನಿಸುವ ಜರೂರತ್ತಿಗೆ ತಳ್ಳುತ್ತದೆ. ನಿಜ ಇದು ಬೇಕು ಎದುರು ಒಂದು ಆಕೃತಿ ಮತ್ತು ಆಶಯ ಇದ್ದಾಗಲೇ ಮಾತಾಡಬೇಕು ದಡಹಾಯಿಸಬೇಕು ಅನಿಸಬೇಕು. ಅನಿಸುತ್ತದೆ. ದಾಟಿಸಬೇಕು ಅನಿಸುತ್ತದೆ. ಕಾವ್ಯ ಇಂತಹ ಒಂದು ಸಂವಾದದ ನೆಲೆಯನ್ನು ಕಂಡುಕೊಂಡಿದ್ದಾರೆ ಹಾಗಾಗೇ ಇವು ಸಂವಾದ ರೂಪಿ ಪದ್ಯ. ಇಲ್ಲಿ ಮಾತಿನರೂಪದ ಸಾಲುಗಳು ಕೊಡುವ ಅನುಭವ ಕಾವ್ಯಾತ್ಮಕವಾಗಿದೆ. ಗದ್ಯ ಗಂಧಿ ಅನಿಸಿದರೂ ಕೂಡಾ ಅವು ಒಂದು ಅನುಭವದ ಕೂಡ ದಕ್ಕಿದಾಗ ಅದು ಪೊಯಟಿಕ್ ಅನಿಸುತ್ತದೆ. ಹಾಗಾಗಿ ಕಾವ್ಯದ ಶೈಲಿ ಎನ್ನುವುದು ಅದರ ಭಾಷೆಯ ಆಚೆ ಭಾವದಡಿ ಗೆಲ್ಲುತ್ತದೆ ಎಂಬ ಮಾತು ನೆನಪಾಗುತ್ತದೆ.

ಕಾವ್ಯ ಅವರ ಇಲ್ಲಿನ ರಚನೆಗಳು ಕೊಡುವ ಅನುಭವ ಇದೆಯಲ್ಲ ಭಾವ ತೀವ್ರತೆಯನ್ನು ಅವಲಂಬಿಸಿದೆ. ಇಂತಹ ರಚನೆಗಳನ್ನು ಓದುವಾಗ ಹೊಗಿಸಿಕೊಂಡವರು ಅನುಭವಗಳನ್ನು ಹಾದು ಇಂತಹ ಅನುಭವಗಳನ್ನು ಆದರಿಸುವರಿರಬೇಕು. ಇಲ್ಲಿನ ಸಾಲುಗಳನ್ನೇ ಪುಂಖಾನು ಪುಂಖವಾಗಿ ಉದಾಹರಿಸಿ ಬರೆಯಲಾರೆ ಬದಲು ಸಹೃದಯರು ಅವರವರ ಇಷ್ಟದ ಸಾಲುಗಳನ್ನು ಅವರವರೇ ಗುನುಗಿಕೊಳ್ಳಲಿ ಅನಿಸುತ್ತದೆ ಇಂತಹ ಅಥವಾ 'ನೆನಪುಗಳು ಮುಟ್ಟಿನಂತೆ ತೊಟ್ಟಿಕ್ಕುತ್ತದೆ' ಎಂಬ ಸಾಲೇ ಸಾಕು ಹತ್ತು ಹಲವು ಅರ್ಥ ಸ್ಪುರಿಸಬಲ್ಲದು. ಇಲ್ಲಿ ಸೃಷ್ಟಿ ಇದೆ ನಾಶವಿದೆ. ಮರು ಹುಟ್ಟಿದೆ. ಮರು ದಾರಿ ಇದೆ.

ನಿಜ. ಪದ್ಯ ಮೂಡಲು ಯಾವುದಾದರೊಂದು ಗಾಢ ಕಾರಣ ಬೇಕು ಅದು ನೋವು ನಲಿವು ವಿಷಾದ ರೋಮಾಂಚನ. ಅಂತಹ ಭಾವನೆ ಇಲ್ಲದೇ ಹೋದಾಗ ಕವಿತೆ ಅರಳುವುದಿಲ್ಲ. ಹಾಗಾಗೇ ಇಡೀ ಕವನ ಸಂಕಲನದ ದನಿಯನ್ನು ಹೊತ್ತು ಕೊಡಬಹುದಾದ ಸಾಲು ಮತ್ತು ಕಾರಣ ಹೀಗೆ ಇದೆ

"ನಾನು ನಿನ್ನನ್ನು ಧೇನಿಸುವುದನ್ನೇ ಜನ ಕವಿತೆ ಎನ್ನುತ್ತಾರೆ'’ ಇದಕ್ಕಿಂತ ಕ್ವಚಿತ್ತಾಗಿ ಹೇಳ ಹೊರಟರೆ ಅದು ಕ್ಲೀಷೆ ಆಗುತ್ತದೆ. 'ಆರಾಧಿಸುವುದು ಮತ್ತು ನೋಯಿಸುವುದು ಕೂಡಾ ದೌರ್ಬಲ್ಯವಾಗಿ ಬಿಟ್ಟದ್ದು ನಮ್ಮ ದೌರ್ಭಾಗ್ಯ' ಕಾವ್ಯ ಅವರಿಗೆ ಪದ್ಯ ಎನ್ನುವುದು ಒಂದು ಹುಡುಕಾಟದ ಮಾರ್ಗ. ಹಾಗಾಗಿ ಬಾಳಿನ ಎಲ್ಲಕ್ಕೂ ಅವರು ಪದ್ಯವನ್ನೇ ಸಾಕ್ಷಿಯನ್ನಾಗಿ, ಪ್ರೇಮನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ ಹುಟ್ಟು ಸಾವು ಸಂಸಾರ, ತಗಾದೆ. ಸಂಬಂಧ, ಸಂಗತ ಅಸಂಗತ, ಭರವಸೆ ನಿರಾಶೆ ಎಲ್ಲಕ್ಕೂ ಪದ್ಯದ ಮೊರೆ ಹೋಗುತ್ತಾರೆ. ಎಲ್ಲವನ್ನೂ ಬರೆದಿಟ್ಟರೂ ಇನ್ನೂ ಉಳಿಯುವ ಒಂದು ಹಸಿವು ಇಲ್ಲಿ ಸದಾ ಧ್ವನಿತ. ಆಗಾಗೆ ಇಣುಕುವ ದೈವಿಕತೆ ಮತ್ತು ತಾತ್ವಿಕವಾದ ಹೊಳಹುಗಳು ಕೂಡಾ ಇಲ್ಲಿ ಗಮನಾರ್ಹವೇ. ನೀಷೆ ಹೇಳುವ ಹಾಗೆ ಹುಚ್ಚುತನವೂ ಅನುಗ್ರಹವೇ. ಒಂದಿಲ್ಲೊಂದು ಹುಚ್ಚು ನಮ್ಮ ಇರುವಿಕೆಗೆ ಘನತೆ ಮತ್ತು ಅರ್ಥ ತಂದು ಕೊಡುವ ಹಾಗಿದ್ದರೆ ಅಂತಹ ಹುಚ್ಚುತನಕ್ಕೆ ಸ್ವಾಗತ. ಈ ಅರಿವು ಕಾವ್ಯ ಅವರ ಅನೇಕ ಸಾಲುಗಳಲ್ಲಿ ಕಾಣುತ್ತದೆ.

ಕಾವ್ಯ ಸೂಕ್ಷ್ಮ ಸಂವೇದನಾಶಾಲಿ. ಆದರೆ ಪೊಯಟ್ರಿ ವಿಷಯಕ್ಕೆ ಬಂದಾಗ ಇನ್ನಷ್ಟು ಧ್ಯಾನ ಮತ್ತು ಸಂಯಮದ ಅಗತ್ಯವಿದೆ. ಸಾಲುಗಳ ನಡುವಿನ ಖಾಲಿ ಜಾಗದಲ್ಲಿ ಪದ್ಯ ಮಾತಾಡಬೇಕಾಗಿದೆ. ಅಂತಹ ಪ್ರಯತ್ನ ಅವರದ್ದಾಗಬೇಕು. ಮಾತಿನ ಚಮತ್ಕಾರಕ್ಕೆ ಕಾವ್ಯದ ಮಾಂತ್ರಿಕ ಸ್ಪರ್ಶ ದಕ್ಕಬೇಕಾಗಿದೆ. ಹೊಸ ಓದು ಹೊಸ ಗ್ರಹಿಕೆ ಮತ್ತು ಹೊಸ ಕಣ್ಣನ್ನು ಕೊಡಲಿಕ್ಕೆ ಸಾಧ್ಯ. ಪರಂಪರೆ ಮತ್ತು ನೆರೆಹೊರೆಯ ಭಾಷೆ ಭಾವದ ಸಖ್ಯ ಅವರ ಮುಂದಿನ ಪದ ಪದ್ಯಗಳನ್ನು ಇನ್ನಷ್ಟು ಗಟ್ಟಿಗೊಳಿಸಬಲ್ಲದು. ಅಲ್ಲಮ, ಅಕ್ಕ, ಕುಮಾರವ್ಯಾಸ ಆದಿಯಾಗಿ ರೂಮಿ, ಕಬೀರ, ಗುಲ್ವಾರ್, ಜಾವೆದ್ ಅಖರ್, ಸೂಫಿ, ಜೆನ್, ಜಪಾನಿ ಹೈಕು ಮತ್ತು ನೆರೆ ರಾಜ್ಯದ ಹೊಸ ಹೊಸ ಸಂವೇದನೆಗಳ ಸಖ್ಯ ಬೇಕು. ಅದು ಸಾಧ್ಯವೂ ಕೂಡಾ. 3段

ಅವರ ಆಯ್ಕೆ ಮತ್ತು ಬಾಳಿನ ಅನುಭವಗಳೆ ಇನ್ನಷ್ಟು ಬರೆಸಬಲ್ಲದು. ಅಕ್ಷರದ ಬೆಳಕಿನ ಹುಡುಕಾಟಕ್ಕೆ ಲೋಕೋತ್ತರದ ವ್ಯಾಪಕತೆ ದೊರಕಬಲ್ಲದು. ಮತ್ತೆ ಮತ್ತೆ ಅದದೆ ಹೇಳಿ ಪದ್ಯಗಳ ಕೊರಳನ್ನು ಹಿಚುಕಲಾರೆ. ಅವುಗಳ ಪಾಡಿಗೆ ಅವು ಮೊರೆಯಲಿ ಮತ್ತು ಉಳಿಯಲಿ

'ನನಗೆಲ್ಲವೂ ಇದೆ ಅವನಿಗೆ ಏನೇನು ಇಲ್ಲ ಇದ್ದದ್ದು ಯಾರಿಗೆ ಬೇಕಿದೆ? ಇರದದ್ದೇ ಹುಡುಕಾಟ' ಇದು ಎಲ್ಲ ಸೃಜನಶೀಲ ಮನಸುಗಳ ಶಾಶ್ವತ ಹಪಾಹಪಿ, ಅಡಿಗರ ಯಾವ ಮೋಹನ ಮುರಳಿಯ ಕರೆಯೂ ಇದೇ ಅಲ್ಲವೆ? ಎದುರಿಗೆ ಇದ್ದೂ ತಡಕಾಡುವ ಈ ಶಾಶ್ವತ ಕುರುಡತನ ಅತ್ಯುತ್ತಮವಾದುದನ್ನು ಕೊಡಬಲ್ಲದು

ಅಲೆದಾಟ ನನ್ನದಷ್ಟೇ!
ಅಲೆದಾಟ
ನನ್ನೊಳಗಿನ ಅವನು ಮಾತ್ರ ಸ್ಥಿರ'


ಈ ಅವನು ಮತ್ತು ಅವಳು ಕವಿತೆಯೂ ಆಗಬಲ್ಲದು

MORE FEATURES

ಇದು ಹಳ್ಳಿ ಮತ್ತು ಪಟ್ಟಣದ ಸಮಾಜವನ್ನು ಕಟ್ಟಿಕೊಡುತ್ತದೆ

29-03-2025 ಬೆಂಗಳೂರು

“ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ...

ನೆನಪುಗಳಿಗೆ ಬಣ್ಣ ತುಂಬುವ ಇಸ್ಕೂಲು

29-03-2025 ಬೆಂಗಳೂರು

“ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್...

ಪ್ರೀತಿಯನ್ನು ವ್ಯಾಖ್ಯಾನ ಮಾಡುವುದು ಕಷ್ಟ

29-03-2025 ಬೆಂಗಳೂರು

“ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನು...