“ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್ತ ಅಂತ ನನಗನ್ನಿಸುತ್ತೆ,” ಎನ್ನುತ್ತಾರೆ ಸುಶ್ಮಿತಾ ನೇರಳಕಟ್ಟೆ. ಅವರು ಅಕ್ಷತಾ ಕೃಷ್ಣಮೂರ್ತಿ ಅವರ “ಇಸ್ಕೂಲು” ಕೃತಿ ಕುರಿತು ಬರೆದ ವಿಮರ್ಶೆ.
ಬಾಲ್ಯ ಅದೆಷ್ಟು ಚೆಂದ ಅಲ್ವಾ? ಬಾಲ ಇಲ್ಲದ ಕೋತಿ ತರ ನಾವು ಮಾಡುವ ಕಿತಾಪತಿಗಳೋ ಒಂದೆರಡಲ್ಲ. ಅದರಲ್ಲೂ ಶಾಲಾ ದಿನಗಳನ್ನು ಮರೆಯಲು ಸಾಧ್ಯಾನಾ? ಸ್ವಾತಂತ್ರ್ಯ ದಿನಾಚರಣೆಯ ಸಿಹಿ ತಿಂಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ, ಶಾಲಾ ಪ್ರವಾಸ, ಪ್ರತಿಭಾ ಕಾರಂಜಿ, ಕ್ರೀಡಾ ಕೂಟ, ಮಂತ್ರಿ ಮಂಡಲ, ಗೆಳೆಯರ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ, ಕೆಲವೊಮ್ಮೆ ಹೊಡೆದಾಟ, ಬಿಸಿ ಊಟದ ಸರದಿ ಸಾಲು, ಆಹಾರ ಮಂತ್ರಿಯ ಕಣ್ಣು ತಪ್ಪಿಸಿ ಊಟದ ತಟ್ಟೆಯ ಬದಿಗಿಟ್ಟ ತರಕಾರಿ ಎಸೆಯುವ ಸಾಹಸ, ಸಹಪಾಠಿಗಳೊಂದಿಗೆ ಆಟ ಓಟ ಹೇಳುತ್ತಾ ಹೋದರೆ ಇನ್ನು ಅದೆಷ್ಟೋ ಸುಂದರ ನೆನಪುಗಳು ಶಾಲೆ ಅಂದಾಕ್ಷಣ ಕಣ್ಣ ಮುಂದೆ ಬರುತ್ತವೆ. ಇಷ್ಟೆಲ್ಲ ನನ್ನ ನೆನಪುಗಳನ್ನು ಕೆದಕಿ, ಮೇಲೆ ತಂದು ನನ್ನ ಕಣ್ಣಾಲಿಗಳನ್ನು ಖುಷಿಯ ನಾಲ್ಕು ಹನಿಗಳಿಂದ ತುಂಬಿಸಿ ಕೆನ್ನೆಯನ್ನು ತೋಯಿಸಿದ್ದು ಅಕ್ಷತಾ ಕೃಷ್ಣಮೂರ್ತಿಯವರ ಕೃತಿ ಇಸ್ಕೂಲು.
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಅಕ್ಷತಾ ಅವರು ತಾವು ಸೇವೆ ಸಲ್ಲಿಸುತ್ತಿರುವ ಉತ್ತರ ಕನ್ನಡದ ಜೋಯಿಡಾ ತಾಲೂಕಿನ ಅಣಶಿಯ ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಕತೆಯನ್ನು ಹಲವು ಲೇಖನಗಳ ಮೂಲಕ ಇಲ್ಲಿ ಪೊಣಿಸಿದ್ದಾರೆ. ಸರಕಾರಿ ಶಾಲೆಯ ಟೀಚರ್ ಹೇಳುವ ಈ ಅನುಭವ ಕಥನಗಳು ಆ ಮಕ್ಕಳ ಸೃಜನಶೀಲತೆ, ಮುಗ್ಧತೆ, ಅವರಿಗೆ ಕಾಡಿನ ಬಗ್ಗೆ ಇರುವ ಪ್ರೀತಿ ಇತ್ಯಾದಿ ತಿಳಿಸುವ ಕಾರ್ಯ ಮಾಡಿದೆ. ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂದು ಹೆತ್ತವರು ಇಂಗ್ಲೀಷ್ ಮೀಡಿಯಂ ಶಾಲೆಗಳ ಕಡೆಗೆ ಮುಖ ಮಾಡಿರುವ ಈ ಸಂದರ್ಭದಲ್ಲಿ ಶಿಕ್ಷಕಿಯೊಬ್ಬರು ಸಹಶಿಕ್ಷಕರ ಸಹಕಾರದೊಂದಿಗೆ ಶಾಲಾ ಸುತ್ತಲಿನ ಪರಿಸರವನ್ನೇ ಬಳಸಿ ವಿನೂತನ ಮಾದರಿ ಶಿಕ್ಷಣ ನೀಡುತ್ತಿರುವ ಪರಿ ನಿಜಕ್ಕೂ ಪ್ರಶಂಸನೀಯ.
ಮಕ್ಕಳನ್ನು ಶಾಲೆಯ ಕಡೆ ಸೆಳೆಯಲು ಆಟಗಳ ಜೊತೆ ಪಾಠದಲ್ಲಿ ಆಸಕ್ತಿ ಬೆಳೆಸಲು ರಾಧಕ್ಕೋರು ಮಾಡಿಸುವ ವಿವಿಧ ಚಟುವಟಿಕೆಗಳು, ಅದರಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವ ರೀತಿ ನೋಡಿದಾಗ ಎಲ್ಲಾ ಶಾಲೆಗಳಲ್ಲೂ ಇಂತಹ ಒಬ್ಬರು ಟೀಚರ್ ಇದ್ದರೆ ಯಾವ ಸರಕಾರಿ ಶಾಲೆಗೂ ಮಕ್ಕಳಿಲ್ಲದೆ ಮುಚ್ಚುವ ಪರಿಸ್ಥಿತಿ ಬರಲಾರದು ಎಂದು ಅನಿಸುತ್ತದೆ. ಇಲ್ಲಿ ರಾಧಕ್ಕೋರು ಶಿಕ್ಷಣವನ್ನು ನಾಲ್ಕುಗೋಡೆಗಳ ನಡುವೆ ಸೀಮಿತಗೊಳಿಸದೇ ಬೆಟ್ಟ, ಕಾಡು, ನದಿ, ಜಲಪಾತ ಇತ್ಯಾದಿಗಳೆಡೆಗೂ ವಿಸ್ತರಿಸಿದ ಬಗೆ ಮೆಚ್ಚುವಂತದ್ದು. ಬೇಸಿಗೆ ರಜೆಯ ನಂತರ ಮಕ್ಕಳನ್ನು ಶಾಲೆಯ ಕಡೆ ಸೆಳೆಯಲು ಮೆಹಂದಿ ಸ್ಪರ್ಧೆ ಏರ್ಪಡಿಸುವ ರಾಧಕ್ಕೋರು ಅದರಲ್ಲಿ ಯಶಸ್ವಿಯಾದಾಗ ಅವರ ಯೋಚನೆಗೆ ನಾವು ತಲೆದೂಗದೆ ಇರಲಾರೆವು.
ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಮಕ್ಕಳೇ ಅದರ ಜವಾಬ್ಧಾರಿ ಹೊತ್ತು ಎಲ್ಲಾ ಸಿದ್ಧತೆಗಳನ್ನು ತಾವೇ ಮಾಡುವ ಅವರ ಉತ್ಸಾಹ ನಾವು ದೊಡ್ಡವರನ್ನು ನಾಚಿಸುತ್ತದೆ. ಅಣಶಿ ಶಾಲೆಯ ಮಕ್ಕಳ ಪರಿಸರ ಪ್ರೇಮ, ಹೊಸತನ್ನು ತಿಳಿಯುವ ಕುತೂಹಲ, ಸಾಹಿತ್ಯದೆಡೆಗಿನ ಆಸಕ್ತಿ, ಕಾಡು, ಪ್ರಾಣಿ-ಪಕ್ಷಿಗಳ ಬಗ್ಗೆ ಅವರಿಗಿರುವ ತಿಳುವಳಿಕೆ, ರಾಧಕ್ಕೋರ ಮೇಲಿನ ಅಕ್ಕರೆ, ಶಾಲೆಯ ಮೇಲಿರುವ ಪ್ರೀತಿ ಒಂದಾ ಎರಡಾ? ಹೇಳುತ್ತಾ ಹೋದರೆ ಅದೆಷ್ಟೋ ಮಕ್ಕಳ ವಿಚಾರಗಳು ನಮ್ಮನ್ನು ಅಚ್ಚರಿಗೆ ದೂಡದೆ ಇರದು.
ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್ತ ಅಂತ ನನಗನ್ನಿಸುತ್ತೆ. ಅಕ್ಷತಾ ಅವರ ಬರವಣಿಗೆ, ನಿರೂಪಣ ಶೈಲಿ ಈ ಲೇಖನಗಳನ್ನು ಜೀವಂತವಾಗಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕರೊನಾ ಸಂದರ್ಭದಲ್ಲಿ ಮಕ್ಕಳು ಮಾತ್ರವಲ್ಲ ಶಾಲೆ ಕೂಡ ಮಕ್ಕಳನ್ನು ಎಷ್ಟು ಮಿಸ್ ಮಾಡಿಕೊಂಡಿತು ಎನ್ನುವುದನ್ನು ಅವರು ವಿವರಿಸಿದ ಪರಿ ಮನಸ್ಸಿಗೆ ತಟ್ಟದೆ ಇರದು. ಇಲ್ಲಿ ಅವರು ಒಂದು ಪಾತ್ರವಾಗಿದ್ದರೂ ಸಹ, ಆ ಪಾತ್ರದ ಮೂಲಕ ಕತೆ ಹೇಳದೆ ವರದಿಯ ರೂಪದಲ್ಲಿ ವಿವರಿಸುವ ಪರಿ ಈ ಕತೆಗೆ ಆಪ್ತತೆ, ಸಹಜತೆಯ ಚೌಕಟ್ಟನ್ನು ಒದಗಿಸಿದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
ಬಾಲ್ಯವನ್ನು ಮಿಸ್ ಮಾಡಿಕೊಳ್ಳುತ್ತಿರುವವರು ಮಿಸ್ ಮಾಡದೇ ಈ ಪುಸ್ತಕ ಓದಿ. ನಿಮ್ಮ ನೆನಪುಗಳಿಗೆ ಇಸ್ಕೂಲು ಒಂದಿಷ್ಟು ಬಣ್ಣ ತುಂಬುವುದರಲ್ಲಿ ಅನುಮಾನವಿಲ್ಲ.
"ಒಂದು ನಾಟಕೀಯ ಲಾಜಿಕ್, ಅದರಲ್ಲಿ ಯಾವುದೇ “ಗ್ರೇ ಏರಿಯಾಗಳಿಗೆ ಅವಕಾಶ ಇಲ್ಲದಂತೆ” 0 ಮತ್ತು 1ಗಳು (...
"ಪ್ರವಾಸ ಕಥನವನ್ನು ಓದುವ ಮೊದಲು ಲೇಖಕರ ಮಾತನ್ನು ಅಷ್ಟಾಗಿ ಗಮನಿಸದೆ ನೇರವಾಗಿ ವಿಷಯಕ್ಕೇ ಹೋಗಿದ್ದೆ. ಬರವಣಿಗೆಯಲ್...
"ಇತಿಹಾಸದಲ್ಲಿ ದಾಖಲಾಗುವ ಈ ಶತಮಾನದ ಮಹಾ ತಲ್ಲಣಗಳಲ್ಲಿ ಒಂದಾದ ಕರೋನಾ ಮಹಾಮಾರಿಯನ್ನು ಒಬ್ಬ ಗುತ್ತಿಗೆ ವೈದ್ಯನ ಪರ...
©2025 Book Brahma Private Limited.