“ಸಾವು, ಅಪರಾಧಿ ನಾನಲ್ಲ, ದೇವರ ಭಜನೆ, ಹಿತ್ತಲೇ ತವರು, ಮಾಸದ ನೆನಪು...... ಮುಂತಾದ ಕವಿತೆಗಳು ಈ ಕೃತಿಯ ಪಾಲಿಗೆ ಬಹು ಮುಖ್ಯವಾದವು. ಕೃತಿಯ ತೂಕವನ್ನು ಹೆಚ್ಚಿಸುವಲ್ಲಿ ಈ ಕವಿತೆಗಳು ಹಿಂದೆ ಬಿದ್ದಿಲ್ಲ,” ಎನ್ನುತ್ತಾರೆ ಭುವನೇಶ್ವರಿ ರು. ಅಂಗಡಿ. ಅವರು ಕಂಚುಗಾರನಹಳ್ಳಿ ಸತೀಶ್(ಕಂಸ) ಅವರ “ನೆನಪುಗಳ ಮಾತು ಮಧುರ” ಕೃತಿಗೆ ಬರೆದ ಮುನ್ನುಡಿ.
ಕವಿತೆ ಎಂದರೆ ಅದು ಬರೆಯುವುದಲ್ಲ. ಬರೆಸುವುದು. ಮಸ್ತಕದ ಯಾವುದೋ ಒಂದು ಮೂಲೆಯಲ್ಲಿ ಪುಟಿದ ವಿಚಾರಗಳು ಲೇಖನಿಯ ಹಿಡಿಸಿ ಅಕ್ಷರ ರೂಪಕ್ಕಿಳಿದು ಹೊರಬರುವಂತೆ ಮಾಡುವುದೇ ಮನಸ್ಸು. ಮಸ್ತಕದಲ್ಲಿರುವುದು ಪುಸ್ತಕಕ್ಕೆ ಬರಲು ಅವೆರಡರ ನಡುವೆ ಸಮಾಗಮ ಉಂಟಾಗಬೇಕು. ಆ ಮನಸ್ಸು ಬರೆಸಿದಾಗ ಕವಿತೆಯನ್ನು ಬರೆಯಬಹುದೇ ಹೊರತು ಮನಸ್ಸಿಲ್ಲದ ನಮ್ಮಿಂದ ಸಾಧ್ಯವೇ ಇಲ್ಲ. ಕವಿಯಾದವನಿಗೆ ಕವಿತೆ ಬರೆಯುವ ಮುನ್ನ ಒಂದು ನಿರ್ದಿಷ್ಟ ವಿಷಯ ಬೇಕು.
ಜನಜಂಗುಳಿಯಲ್ಲಿದ್ದರೂ ಕವಿತೆಗೆ ಒಂದು ವಿಷಯ ಸಿಗಬಹುದೇನೋ, ಆದರೆ ಕವಿತೆಯ ರೂಪ ಪಡೆದು ಹೊರಬೀಳಬೇಕೆಂದರೆ ಅದಕ್ಕೆ ಏಕಾಂತ ಬೇಕು. ಕವಿಯಾದವನು ಮನಸ್ಸಿನೊಂದಿಗೆ ಏಕಾಂತವಾಗಿ ಸಮಯ ಕಳೆದಾಗ, ಏಕಾಂಗಿತನವನ್ನು ಮರೆಸುವ ಮನಸ್ಸಿನೊಂದಿಗೆ ಮಾತಾಡಿದಾಗ ಮಾತ್ರ ಕವಿತೆಗೆ ಜನ್ಮ ಕೊಡಬಹುದು.
ಪ್ರತಿಜೀವಿಗೂ ಹುಟ್ಟಿದೆ ಸಾವಿದೆ. ಕವಿತೆಗೆ ಮಾತ್ರ ಸಾವಿಲ್ಲ. ಸಾಹಿತಿಗೆ ಸಾವಿದೆ ಕೊನೆಯಿದೆ. ಸಾಹಿತ್ಯಕ್ಕೆ ಕೊನೆಯಿಲ್ಲ. ಯಾವುದು ಶಾಶ್ವತವಲ್ಲ ಎಂಬುದನ್ನು ನಾ ಒಪ್ಪಲಾರೆ. ಯಾವುದಕ್ಕೆ ಆಗಲಿ ಬಳಕೆ ಇದ್ದಾಗ ಮಾತ್ರ ಅದಕ್ಕೆ ಜೀವಂತಿಕೆ ಇರುತ್ತದೆಯೇ ಹೊರತು ಬಳಸಲಾರದ ಸಂದರ್ಭದಲ್ಲಿ ಆ ವಸ್ತು ಇದ್ದು ಸತ್ತಂತೆ.
ಎಚ್. ಎಸ್. ವೆಂಕಟೇಶಮೂರ್ತಿಯವರ ರಚನೆಯ ಸಾಲುಗಳಂತೆ
ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು
ಬೆಳಕಿನ ಪರಿಗೆ ಒಂದೇ ಹೆಸರು
ಸೂರ್ಯ ಚಂದ್ರ ಲಾಂದ್ರ ಹಣತೆ
ಅವುಗಳ ಹಿಂದೆ ಮಾತ್ರ ಒಂದೇ ಘನತೆ |
ಅಂತೆಯೇ ಕವಿಗಳು ನೂರಾರು, ಕವಿತೆಗಳು ಸಾವಿರಾರು. ಕಾರಣ ಭಾವಗಳು ನಿರಂತರ, ಅನುಭವಗಳು ನಿರಂತರ. ಅಭಿವ್ಯಕ್ತಿಗಳು ಸ್ವತಂತ್ರ. ಅನುಭವಗಳು ಬೇರೆ ಬೇರೆ. ಮೂಡಿದ ಕವಿತೆಗಳು ಬೇರೆ ಬೇರೆ. ಮನದೊಳಗಿನ ಸಂಭ್ರಮ, ದುಗುಡ, ಪುಳಕ, ಒತ್ತಡ, ಈರ್ಷೆ, ಅಭಿಮಾನ ಬಿಗುಮಾನ, ಪ್ರೀತಿ, ಒಂಟಿತನ, ಪಾಪಪ್ರಜ್ಞೆ..... ಒಂದೇ ಎರಡೇ. ಹುದುಗಿಕೊಂಡ ಎಲ್ಲ ಭಾವಗಳು ಒಂದೊಂದಾಗಿ ತಮ್ಮ ಸರದಿ ಬಂದಾಗ ಎದ್ದು ನಿಂತು ಮಾತನಾಡುತ್ತವೆ. ಆ ಕ್ಷಣಕ್ಕೆ ಅನುಭವಕ್ಕೆ ಸಂಬಂಧಿಸಿದ ಅಂಶವೊಂದು ತನಗೆ ಅಂತ ಮೀಸಲಿಟ್ಟ ಆ ಕವಿತೆಯ ಸಾಲಿನ ಸ್ಥಳಾವಕಾಶವನ್ನು ಆಕ್ರಮಿಸಿಕೊಳ್ಳುತ್ತದೆ.
ಈಗ ನಾನು ಚಿಕ್ಕಮಗಳೂರಿನ ಕಂಸ(ಕಂಚುಗಾರನಹಳ್ಳಿ ಸತೀಶ್) ಅವರ ಕವಿತೆಗಳ ಬಗ್ಗೆ ಮುನ್ನುಡಿಯ ರೂಪದಲ್ಲಿ ಅಭಿಪ್ರಾಯ ಹೇಳಬೇಕಿದೆ. ಅದಕ್ಕೂ ಮುನ್ನ ಕವಿತೆಗಳ ರೂವಾರಿ ಆದ ಕಂಸ ಅವರ ಬಗ್ಗೆ ಸ್ಥೂಲವಾಗಿ ಪರಿಚಯಿಸಬೇಕಿದೆ. ಯುವ ಕವಿ "ಕಂಸ" ಅವರು ವೃತ್ತಿಯಲ್ಲಿ ಶಿಕ್ಷಕರು. ಪ್ರವೃತ್ತಿಯಲ್ಲಿ ಸಾಹಿತಿಗಳು. ಈಗಾಗಲೇ ಅವರು ಆರು ಕೃತಿಗಳನ್ನು ಹೊರ ತರುವುದರ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಯೋಚನಾಶೀಲತೆ ವಿಭಿನ್ನವಾದದ್ದು. ಪಾರದರ್ಶಕವಾದದ್ದು. ಅವರ ಸ್ವಭಾವ ನೋಡಲು ಆ ಕ್ಷಣಕ್ಕೆ ತುಸು ಕಠೋರವೆನಿಸಿದರೂ ಸ್ವಲ್ಪ ಸಮಯದ ನಂತರ ಹೌದಲ್ಲವೇ! ಅವರು ಹೇಳಿದ್ದೆ ಸರಿ ಎಂದುಕೊಂಡು ನಾವೇ ಅವರ ದಾರಿಗೆ ಹೋಗುತ್ತೇವೆ. ಶಿಕ್ಷಕನೊಳಗೊಬ್ಬ ಕವಿ ಹೇಗೆ ಹುಟ್ಟಿದನೋ ತರ್ಕಕ್ಕೆ ಬರುತ್ತಿಲ್ಲ. ಆದರೆ ವಿಭಿನ್ನ ಕಥಾಹಂದರದ "ಸ್ಯಾನಿಟರಿ ಪ್ಯಾಡ್" ಕಾದಂಬರಿಯ ಮೂಲಕ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ಕಷ್ಟವನ್ನು ಸಾಹಿತ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಅಲ್ಲಿಂದ ಪ್ರಾರಂಭವಾದ "ಕಂಸ" ಅವರ ಸಾಹಿತ್ಯ ಪಯಣ ಇಂದಿಗೂ ನಿರಂತರವಾಗಿದೆ.
ಸುಮಾರು 40 ಕವಿತೆಗಳನ್ನು ಹೊತ್ತು "ನೆನಪುಗಳ ಮಾತು ಮಧುರ" ಕವನ ಸಂಕಲನವು ತಮ್ಮೆದುರಿಗೆ ಬರುತ್ತಿದೆ. 40 ಕವಿತೆಗಳ ರಚನೆಯನ್ನು ನೋಡುತ್ತಾ ಹೋದಾಗ, ಒಂದಕ್ಕಿಂತ ಒಂದು ವಿಷಯ ವಸ್ತು ಭಿನ್ನ. "ನಾನು ಹೇಗೆ ಕವಿ ಯಾದೆ" ಎಂಬ ಕವನದಿಂದ ಹಿಡಿದು "ಕುಲುಮೆ" ಕವನದ ತನಕವೂ ಓದುವಿಕೆ ಸಾಗಿಕೊಂಡು ಬಂದಿದ್ದೇ ಗೊತ್ತಾಗಲಿಲ್ಲ. ಕವಿ "ಕಂಸ" ಅವರು ಅನಿರೀಕ್ಷಿತವಾಗಿ ತಾವು ಕವಿಯಾದ ಅನುಭವವನ್ನೇ ತಮ್ಮ ಮೊದಲ ಕವಿತೆಯಲ್ಲಿ ಹಂಚಿಕೊಂಡಿದ್ದಾರೆ. ಕವಿಯಾದವನು ಇರುವೆ ಕಾಲಿನ ಸಪ್ಪಳವನ್ನು ಕೂಡ ಆಲಿಸುವಷ್ಟು ಸೂಕ್ಷ್ಮಗ್ರಾಹಿ ಆಗಿರಬೇಕು, ನಿರಂತರ ಅಧ್ಯಯನಶೀಲನಾಗಿರಬೇಕು, ಇತರರಿಗೆ ತನ್ನ ಸೋಲು ಗೆಲುವುಗಳನ್ನು ಹೋಲಿಸಿಕೊಳ್ಳದೆ ತನ್ನಲ್ಲಿರುವ ಆತ್ಮ ಬಲವನ್ನು ನಂಬಿ ಮುನ್ನಡೆಯಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಿದ್ದಾರೆ.
"ಅಮ್ಮ ಮತ್ತು ಸೌದೆ ಒಲೆ" ಕವನವನ್ನು ನೀವೆಲ್ಲ ಒಮ್ಮೆ ಓದಲೇಬೇಕು. ನಿಮಗೆ ತಿಳಿಯದಂತೆ ಕಣ್ಣೀರಿನ ಹನಿಗಳು ಜಾರಿ ಹೋಗುತ್ತವೆ.
ಪುಟ್ಟ ಹೊರೆ
ನನಗಾಗಿ ಕಾದಿರುತ್ತಿತ್ತು
ಹರಿದ ಸೀರೆಯ ಮಡಿಚಿ ಹೊದ್ದು
ಸೌದೆಯ ಭಾರದಲ್ಲಿ ತೇಗುತ್ತಾ
ಹಣೆಯ ಬೆವರು ಒರೆಸುತ್ತಾ
ಮನೆಯ ಕಡೆ ಸಾಗುತ್ತಿದ್ದೆವು |
ನಾವೆಲ್ಲಾ ಅನುಭವಿಸಿದ ಬಾಲ್ಯ, ಹಳ್ಳಿ ಜೀವನ, ಅಮ್ಮ ಮಾಡುತ್ತಿದ್ದ ಅಡುಗೆ, ಕೊಡುತ್ತಿದ್ದ ಕೈ ತುತ್ತಿನ ಸುತ್ತಲೂ ಕವನ ರೂಪುಗೊಂಡಿದೆ. ಅಮ್ಮನ ಕೈ ತುತ್ತು ಸ್ವರ್ಗ ಎಂಬ ಸಾರಾಂಶವನ್ನು ಕೊಡುತ್ತದಲ್ಲದೇ ಆ ಒಂದು ತುತ್ತಿನ ಊಟದ ಸಂಪಾದನೆಯ ಹೋರಾಟವನ್ನು, ಬಡತನದ ಬೇಗೆಯನ್ನು ತೋರಿಸುತ್ತದೆ. ಕವಿ ಕನ್ನಡಿಯ ಮುಂದೆ ನಿಂತು ಮೂಡುವ ತನ್ನದೇ ಪ್ರತಿಬಿಂಬಕ್ಕೆ ಬದುಕಿನ ಮುನ್ನುಡಿ ಹಾಗೂ ಬೆನ್ನುಡಿ ಎಂದು ಹೇಳಿರುವುದು ವಿಶೇಷವಾಗಿದೆ. ಪ್ರತಿಯೊಂದು ಕಾರ್ಯಕಲಾಪಗಳಿಗೆ ತನ್ನೊಳಗಿನ ಮನಸ್ಸೇ ಕಾರಣವಾದುದು, ಆರಂಭವೂ ತನ್ನಿಂದ ಅನ್ನುವುದಾದರೆ ಅಂತ್ಯವೂ ಕೂಡ ತನ್ನಿಂದಾನೇ ಎಂದು ಕವಿ ಈ ಪದ್ಯದಲ್ಲಿ ಕರಾರುವಕ್ಕಾಗಿ ಹೇಳಿದ್ದಾರೆ.
"ಮಾಯಾ ಜಿಂಕೆ", "ಬೆಳದಿಂಗಳ ಚೆಲುವೆ", "ಮಸಾಲೆ ದೋಸೆಯಂತೆ ನನ್ನವಳು", "ನನ್ನಾಕೆ", "ಪ್ರೇಮದೋಲೆ", "ಸ್ವಾತಿಮುತ್ತು", "ಮಲ್ಲಿಗೆಯಂತವಳು"..... ಹತ್ತು ಹಲವಾರು ಕವಿತೆಗಳು ಕವಿಯ ಪ್ರಿಯತಮೆಯ ಸುತ್ತಲೂ ಗಿರಕಿ ಹೊಡೆಯುತ್ತವೆ. ಪ್ರಿಯತಮೆಯನ್ನು ಹೋಲಿಕೆ ಮಾಡಲು ಸುತ್ತಮುತ್ತಲು ಇರುವ ವಿಷಯ ವಸ್ತುಗಳೇ ಸಾಕಾಗಿಲ್ಲವೆಂದು ಭಾಸವಾಗುತ್ತದೆ. ಕವಿತೆಗಳ ಮೂಲಕ ಮನದರಸಿಗೆ ಪತ್ರ ಬರೆದಂತಿದೆ. ಒಂದೊಮ್ಮೆ ಬೆಳದಿಂಗಳಗೆ ಹೋಲಿಸಿದರೆ, ಮತ್ತೊಮ್ಮೆ ಮಸಾಲೆ ದೋಸೆ... ಮಗದೊಮ್ಮೆ ಮಲ್ಲಿಗೆ. ಪ್ರಿಯತಮೆಯ ಮೇಲೆ ಇರುವ ತಮ್ಮ ಪ್ರೀತಿಯ ಆತ್ಮವಿಶ್ವಾಸವನ್ನು ಅತಿಜಂಬದಿಂದ ಹೇಳಿಕೊಂಡಿದ್ದಾರೆ. ತಮ್ಮ ಪದಗುಚ್ಛಗಳಲ್ಲಿಯೇ ಪ್ರಿಯತಮೆಗೆ ಸವಾಲು ಹಾಕಿದಂತಾಗಿದೆ.
ನಾ ಪ್ರೀತಿಸುವ ಪರಿಯ ಕಂಡು
ನನಗೂ ಇಂಥ ಪ್ರೇಮಿ ಇರುವನೇ?
ಎಂದು ಬೆಕ್ಕಸ ಬೆರಗಾಗದೆ ಇರಲಾರೆ ನೀನು
ಇಂತಹ ಪ್ರೇಮಿಯನ್ನು ಕಳೆದುಕೊಂಡು ಬದುಕಿರುವೆಯಾ?
ಕಾಲಕ್ಕೆ ತಕ್ಕ ಹಾಗೆ, ವಯಸ್ಸಿಗೆ ತಕ್ಕ ಹಾಗೆ ನಡೆಯುವುದೆಲ್ಲವೂ ನಡೆಯಬೇಕು ಎನ್ನುವ ಮೂಲಕ ಕವಿ ಇಲ್ಲಿ ಆಶಾವಾದಿಯಾಗಿದ್ದಾರೆ. "ಮುಪ್ಪಿನ ಬಿರುಗಾಳಿ ಬೀಸುವ ಮುನ್ನ ಅನುಭವಿಸುವ ಯೌವ್ವನವು ಒಂದು ಕಚಗುಳಿ" ಎಂದು ಹೇಳುವುದನ್ನು ನೋಡಿದರೆ, ಕವಿ ಒಮ್ಮೊಮ್ಮೆ ರಸಿಕರಾಡುವ ಪದಗಳನ್ನು ಬಳಸಿಯೇ ಕವಿತೆ ಕಟ್ಟಿದ ಹಾಗಿದೆ. ಕವಿ ರಸಿಕರಾದಷ್ಟು ಕವಿತೆಗೆ ಮತ್ತಷ್ಟು ವರ್ಣ ತುಂಬಬಹುದು. ಇಲ್ಲಿ ಹೊಗಳಿಕೆಯೇ ಪ್ರಧಾನವಾಗಿರದೇ, ಸ್ವಾಭಾವಿಕವಾಗಿದ್ದರೆ ಓದುಗರನ್ನು ಹೆಚ್ಚು ತಲುಪಬಹುದು. "ನನ್ನವಳು ನಕ್ಕಾಗ" ಎಂಬ ಹಾಸ್ಯ ಕವನದಲ್ಲಿ ಪ್ರೀತಿ ಎಂದರೆ ಅಲ್ಲಿ ಹಾಸ್ಯವೂ ಹಾಸು ಹೊಕ್ಕಾಗಿರಬೇಕೆಂದು ಹಂಬಲಿಸಿದ್ದಾರೆ. ಪ್ರಿಯತಮೆಯ ಗುಣಗಾನದ ಜೊತೆ ಜೊತೆಗೆ ಕನ್ನಡಮ್ಮನಿಗೂ ನಮಿಸುವುದ ಮರೆತಿಲ್ಲ ನಮ್ಮ ಕನ್ನಡದ ಕವಿ "ಕಂಸ" ಅವರು.
ಪ್ರಿಯೆ ನಿನ್ನ ಅಂದ ಹೊಗಳಲು
ಪದಪುಂಜ ಸೃಷ್ಟಿಸಿದ
ಕನ್ನಡ ನಾಡು ನುಡಿಗೆ ನನ್ನ ನಮನ |
ಕವಿಗೆ ಬರೆಯಲು ಇಂತದ್ದೇ ಸಮಯ ಎಂದು ಇರುವುದಿಲ್ಲ. ನಿದ್ದೆಯಲ್ಲೂ ಎದ್ದು ನಡೆದಾಡುವ ಜನರನ್ನು ಕಂಡಿದ್ದೇವೆ. ಅದೇ ತರಹ ನಿದ್ದೆಯಲ್ಲೂ ಕನವರಿಸುವ ಅನೇಕ ಕವಿಗಳಿದ್ದಾರೆ. "ಒಂದೊಮ್ಮೆ ಮನಸಾದಾಗಲೆಲ್ಲ ನಿದ್ದೆಯಲ್ಲೂ ಎದ್ದು ಗೀಚುತ್ತಿದ್ದೆ | ಬೆಳಿಗ್ಗೆ ಎದ್ದು ನೋಡಿದರೆ ಕವಿತೆ ಕಾಣದೆ ಹುಡುಕಾಡುತ್ತಿದ್ದೆ" ಕನಸಿನ ಕವಿತೆಯ ಮೂಲಕ ಕವಿ ತಮ್ಮ ಚಡಪಡಿಕೆಯನ್ನು ವ್ಯಕ್ತಪಡಿಸಿದ್ದಾರೆ. ಕವಿಗಳು ಏಕಾಂತವನ್ನು ಬಯಸಿ ಬಯಸಿ ಕೊನೆಗೆ ಒಬ್ಬಂಟಿ ಯಾಗುವ ಆತಂಕವನ್ನು ಇಲ್ಲಿ ಸೃಷ್ಟಿಸಿದ್ದಾರೆ.
ಕೇಳುಗರ ಪ್ರಶ್ನೆಗೆ ಉತ್ತರವ ಕೊಟ್ಟು
ನೇರ ನುಡಿಯೆಂಬ ನೆತ್ತರವ ಸುಟ್ಟು
ಗಾವಿಲರಿಗೆ ಗಹನ ವಿಚಾರ ತಿಳಿಸಿ
ಕಡು ಘಾಟಿಯ ಕಣ್ಣನ್ನು ಬಿಟ್ಟು
ಒಬ್ಬಂಟಿ ನಾನಾದೆ |
ಮನುಷ್ಯ ಸೃಷ್ಟಿಸಿಕೊಂಡ ಧರ್ಮಭೇದ, ಜಾತಿಭೇದ, ವರ್ಣಭೇದಗಳನ್ನು ಕವಿಗಳು ಕಟುವಾಗಿ ಖಂಡಿಸಿದ್ದಾರೆ. ಇವರು ಕವಿತೆಗೆ ಬಳಸಿಕೊಂಡಿರುವ ಶಬ್ದಗಳನ್ನು ನೋಡಿದರೆ ಯಾವುದು ಭಕ್ತಿ? ಯಾರು ದೇವರು? ಎಂಬ ಉತ್ತರವಿಲ್ಲದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮೇಲು-ಕೀಳು, ಬಡವ-ಬಲ್ಲಿದ.... ಇವುಗಳ ಬಗ್ಗೆ ತುಂಬಾ ನೊಂದುಕೊಂಡು ಬರೆದಿದ್ದಾರೆ. "ಮಡಿ ಮೈಲಿಗೆ" ಕವಿತೆ ಅಂತೂ ಬಹಳ ಅದ್ಭುತವಾಗಿ ಮೂಡಿಬಂದಿದೆ.
ಶೌಚಾಲಯದಲ್ಲಿ ಕೊಟ್ಟ ಹಣ
ಮಡಿ ಮೈಲಿಗೆ ಎಣಿಸದೆ
ದೇವಾಲಯ ಚರ್ಚ್ ಮಸೀದಿ
ತಲುಪಿ ಕಾಣಿಕೆಯಾಗಿಲ್ಲವೇ?
ದುಡ್ಡು ಎಂದರೆ ಹೆಣವು ಕೂಡ ಬಾಯಿ ಬಿಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯವಾದುದು. ಹಣದ ವಿಷಯ ಬಂದರೆ ಮೇಲು-ಕೀಳು, ಮಡಿ-ಮೈಲಿಗೆ, ಬಡವ-ಬಲ್ಲಿದ, ಕಪ್ಪು-ಬಿಳುಪು.... ಎಲ್ಲವೂ ಮರೆತು ಹೋಗುತ್ತದೆ. "ಬದುಕೆಂದರೆ ಪ್ರೀತಿ ವಿಶ್ವಾಸವೇ ಹೊರತು ಧರ್ಮವಲ್ಲ ; ದೇವಾಲಯದಲ್ಲಿ ಇರುವ ಪೂಜಾರಿಗೆ ದೇವರು ಒಲಿದ ಉದಾಹರಣೆ ಇಲ್ಲ, ಮುಗ್ಧಜೀವಿಗಳು ದೇವರ ಭಯವಿಲ್ಲದೆ ನೆಮ್ಮದಿಯಿಂದ ಜೀವಿಸುತ್ತಿವೆ, ಎಲ್ಲಾ ತಿಳಿದವರಾಗಿ ಮೌಢ್ಯತೆಯ ಮೊರೆ ಹೋಗುವುದೇಕೆ?" ಕವಿಗಳ ಪ್ರಶ್ನೆಗೆ ನಾನು ಉತ್ತರ ಕೊಡದೆ ಸೋತು ಹೋದೆ. "ಗೋರಿ" ಕಟ್ಟಿಸಿಕೊಳ್ಳುವ ಮುನ್ನ ಇರುವಷ್ಟು ದಿನ ಸಂತಸದ ಬದುಕನ್ನು ಬದುಕೋಣ. "ನಾನು" ಎನ್ನುವ ಹಾಗೂ ನನ್ನೊಳಗಿನ ಅಹಂಕಾರ, ದರ್ಪ, ಸೊಕ್ಕು, ಸ್ವಾಭಿಮಾನಗಳನ್ನು ಬಿಟ್ಟು ಬಾಳೋಣ. "ಸಿರಿವಂತನಿಗೆ ಧನವಿದ್ದರೂ ಧನ್ಯತೆ ಇಲ್ಲದಿರುವುದು" ಎನ್ನುವ ಸತ್ಯಾಂಶದ ಬಗ್ಗೆ ಅರಿವಿದ್ದರೂ ನಾವು ನೀವೆಲ್ಲ ಇರುವುದರಲ್ಲೇ ನೆಮ್ಮದಿಯ ಕಂಡುಕೊಳ್ಳುವುದ ಬಿಟ್ಟು ಇರದುದರ ಕಡೆಗೆ ತುಡಿಯುವುದೇ ಹೆಚ್ಚು.
ಕವಿ "ಕಂಸ" ಅವರು ಸಾಹಿತ್ಯ ರಚನೆಯನ್ನು ಎಷ್ಟು ಪ್ರೀತಿಸುವರೋ ಅದಕ್ಕಿಂತ ಹೆಚ್ಚು ತಮ್ಮ ಶಿಕ್ಷಕ ವೃತ್ತಿಯ ಮೇಲೆ ಗೌರವ ಮತ್ತು ಅಭಿಮಾನವನ್ನು ಹೊಂದಿದ್ದಾರೆ. ನಾನು ಏಕೆ ಮಾತನಾಡಲಿ? ನನ್ನ ಕೆಲಸವೇ ಮಾತನಾಡಲಿ.... ಇದು ಇವರ ಪದ್ಯದೊಳಗಿನ ಒಂದು ಸಾಲು. "ಹಾಳೆಯ ತುಂಬಾ ಶುಭ್ರತೆಯ ಶ್ವೇತ ಇರುವಾಗ, ಯಕಶ್ಚಿತ್ ಕಪ್ಪು ಚುಕ್ಕೆಯನ್ನು ಏಕೆ ಗುರುತಿಸುವಿರಿ?" ಮನುಷ್ಯನಲ್ಲಿನ ಗುಣಗಳನ್ನು ಅಳೆಯುವ ಪರಿಯನ್ನು ಅತಿ ಸೂಕ್ಷ್ಮವಾಗಿ ಪದ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. "ಜಗತ್ತೇ ಬೆತ್ತಲಿರುವಾಗ ನೀನೇಕೆ ಬಟ್ಟೆ ತೊಟ್ಟಿರುವೆ? ಬಟ್ಟೆ ತೊಟ್ಟರು ಬೆತ್ತಲಾಗುತ್ತಿದ್ದಾರೆ ಕೆಲವರು" ಸಾಲುಗಳನ್ನು ಗಮನಿಸಿದಾಗ ಜಗತ್ತಿನ ತುಂಬಾ ಜನರು ಯಾವ ರೀತಿ ವರ್ತಿಸುತ್ತಿದ್ದಾರೋ, ಅದೇ ಮಾರ್ಗದಲ್ಲಿ ನಾವು ವರ್ತಿಸಿದರೆ ಮಾತ್ರ ಅದು ವ್ಯತಿರಿಕ್ತವಾಗುವುದಿಲ್ಲ, ಇಲ್ಲವಾದರೆ ನಾವು ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದರೂ ಅದು ಬೇರೆಯವರಿಗೆ ವಿಚಿತ್ರವಾಗಿಯೇ ಕಾಣುವುದು. "ನಾನೊಂದು ಧರೆಯಾದರೆ" ನಾವೆಲ್ಲರೂ ಒಂದೆಂಬ ಸರ್ವಧರ್ಮ ಸಹಿಷ್ಣುತೆಯ ಸಾರುವೆ ಎಂದು ಕವಿಗಳು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
"ತಟಕು" ಕವಿತೆಯಲ್ಲಿ ಕುರಿಗಾಗಿ ಸಣ್ಣವ್ವನ ನಿತ್ಯ ಬದುಕಿನ ಕಾಯಕದ ಪರಿಯನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಸರಳ ಬದುಕಿನಲ್ಲಿ ಅಡಗಿದ ನೆಮ್ಮದಿಯನ್ನು ತೋರಿಸಿದ್ದಾರೆ.
ರಾತ್ರಿಯಾದರೆ ಯಾರದ್ದೋ ಹೊಲದಲ್ಲಿ
ಮಂದೆ ಹಾಕಿ ತಲೆಗೆ ಕೈಕೊಟ್ಟು
ಶಿವಾ ಎಂದು ಮಲಗುವಳು
ಹಾಸಿಗೆ ಇಲ್ಲ ಹೊದಿಕೆ ಇಲ್ಲ
ಆಕಾಶವೇ ಮೇಲು ಸೆರಗು ಭೂಮಿಯೇ ಗಾದಿ |
"ಕುಲುಮೆ" ಎಂದರೆ ಅದೊಂದು ಯಂತ್ರವಷ್ಟೇ ಅಲ್ಲ. ಕುಲುಮೆಯಲ್ಲಿ ಕಬ್ಬಿಣವು ಬೇಯುವುದು, ಜೊತೆಗೆ ಕಮ್ಮಾರರ ಬದುಕು ಬೇಯುವುದು. ಅದು ಉದ್ಯೋಗ ಮಾತ್ರ ಎಂದರೆ ತಪ್ಪಾಗುವುದು. ಕುಲುಮೆ ಎನ್ನುವುದು ಕಮ್ಮಾರರ ಪಾಲಿಗೆ ದೇವರು. ಕೊಡಲಿ, ಕುರ್ಪಿಗಳು ಒಂದೇ ಕುಲುಮೆಯಲ್ಲಿ ತಯಾರಾದರೂ ಅವುಗಳಿಂದ ಆಗುವ ಕೆಲಸಗಳಲ್ಲಿ ಬೇಕು-ಬೇಡ ಎರಡೂ ಇವೆ. "ಗುಣಗಳ ತಿಳಿದು ನೀ ಬಾಳು" ಎನ್ನುವ ಕಿವಿಮಾತು ನೀಡಿದ್ದಾರೆ.
ಕುಲುಮೆಯಲ್ಲಿ ದಿನವೂ ಬೆಂದ
ಕುಟುಂಬಕ್ಕೆ ಹಸಿವು ನೀಗಿಸುವ ಚಿಂತೆ
ಯಾವುದು ಕೊಲ್ಲುವುದೋ
ಮತ್ತಾವುದು ಕೊಯ್ಯುವುದೋ
ಅವರಿಗಿಲ್ಲ ವ್ಯಥೆ
ದಿನವೂ ಕುಲುಮೆಯಲ್ಲಿ ಆಡುವ ಮಕ್ಕಳಿಗೆ
ಎರಡರ ಅರಿವೂ ಇಲ್ಲ |
"ಸಾವು", "ಅಪರಾಧಿ ನಾನಲ್ಲ", "ದೇವರ ಭಜನೆ", "ಹಿತ್ತಲೇ ತವರು", "ಮಾಸದ ನೆನಪು"...... ಮುಂತಾದ ಕವಿತೆಗಳು ಈ ಕೃತಿಯ ಪಾಲಿಗೆ ಬಹು ಮುಖ್ಯವಾದವು. ಕೃತಿಯ ತೂಕವನ್ನು ಹೆಚ್ಚಿಸುವಲ್ಲಿ ಈ ಕವಿತೆಗಳು ಹಿಂದೆ ಬಿದ್ದಿಲ್ಲ. ಒಬ್ಬ ಹೆಣ್ಣಾಗಿ ನಾನು ಇಲ್ಲಿ ವಿಶೇಷವಾಗಿ ಒಂದು ಕವಿತೆಯ ಬಗ್ಗೆ ಹೇಳಲೇಬೇಕು. ಅದು "ಎಲ್ಲರೂ ಜರಿಯುವವರೇ". ಹೆಣ್ಣು ಹುಟ್ಟಿದರೆ ಕಷ್ಟ ಎನ್ನುವುದು ಆ ಕಾಲದಲ್ಲಿ ಮಾತ್ರ ಇತ್ತು ಎನ್ನುವುದು ಸುಳ್ಳು. ಈಗಲೂ ಕೂಡ ಕೆಲವು ಪ್ರದೇಶಗಳಲ್ಲಿ ಹೆಣ್ಣು ಹುಟ್ಟಿದರೆ ಕಷ್ಟ ಎನ್ನುವ ಅನಿಷ್ಟ ಪದ್ದತಿ ಜಾರಿಯಲ್ಲಿದೆ. ಹೆಣ್ಣಾಗಿ ಹುಟ್ಟಿ ಅವಳು ಅನುಭವಿಸುವ ಪಾಡು, ಅನಿವಾರ್ಯವಾಗಿ ಬದುಕಬೇಕಾದ ಬದುಕಿನ ಜಾಡನ್ನು ಹಿಡಿದು ಕವಿ ಹೊರಟಿದ್ದಾರೆ ಅನಿಸಿತು. "ಹೆಣ್ಣಿನ ಸಂಕಟ ಹೆಣ್ಣಿಗೆ ಗೊತ್ತು" ಅನ್ನುವ ಮಾತಿಗೆ ಅಪವಾದವೆನ್ನುವಂತೆ ಒಬ್ಬ ಪುರುಷ ಹೆಣ್ಣಿನ ಸಂಕಟದ ಬಗ್ಗೆ ಇಷ್ಟೊಂದು ವಿಚಾರ ಮಾಡಿದ್ದು ಹೆಣ್ಣಿನ ಕುಲಕ್ಕೆ ಸಮಾಧಾನ ಎನ್ನುವ ಹಾಗೆ ಇದೆ. ಈ ಕವಿತೆಯನ್ನು ಬರೆದ ಒಂದು ಪ್ರಯತ್ನಕ್ಕೆ ನಾನು ಕವಿ "ಕಂಸ" ಅವರನ್ನು ವಿಶೇಷವಾಗಿ ಗೌರವಿಸುತ್ತೇನೆ ಮತ್ತು ಸಮಸ್ತ ಹೆಣ್ಣು ಕುಲದ ಪರವಾಗಿ ಅವರಿಗೆ ವಿಶೇಷ ಅಭಿನಂದನೆಗಳು.
ಮೊಬೈಲ್ ನ ಭರಾಟೆಯಲ್ಲಿ ಪುಸ್ತಕದ ಸಂಸ್ಕೃತಿ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಒಂದು ಕೃತಿಯನ್ನು ಹೊರ ತರುವುದು ಅಷ್ಟು ಸರಳವಾದ ಕೆಲಸವಲ್ಲ. ಇನ್ನು ಓದುಗರನ್ನು ಹುಟ್ಟಿ ಹಾಕುವುದಂತೂ ತುಂಬಾನೇ ಪ್ರಯಾಸದ ಕೆಲಸ. ಆದಾಗ್ಯೂ "ಜೇಡರ ಬಲೆ" ಕವಿತೆಯಲ್ಲಿರುವ ಸ್ಫೂರ್ತಿಯಂತೆ ಮರಳಿ ಯತ್ನವ ಮಾಡಿದರೆ ಸಾವಕಾಶವಾಗಿ ಯಶಸ್ಸು ದೊರೆಯುವುದು ಎಂಬ ಮೂಲಮಂತ್ರವನ್ನು ಕವಿಗಳು ಅಳವಡಿಸಿಕೊಂಡಿರುವ ಹಾಗೆ ಕಾಣುತ್ತದೆ. ಬಾಲ್ಯದಿಂದ ಇಲ್ಲಿಯವರೆಗೆ ತಾವು ಕಂಡುಂಡ ಅನುಭವಗಳನ್ನು ಕವಿತೆಯ ರೂಪದಲ್ಲಿ ನಮ್ಮೆಲ್ಲರ ಮುಂದೆ ಇಟ್ಟಿದ್ದಾರೆ. ಅವರ ಕವಿತೆಗಳನ್ನು ಓದಿ, ಅವರಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಅವರ ಕವಿತೆಗಳಿಗೆ ನನ್ನ "ಮುನ್ನುಡಿ" ಯನ್ನು ಪ್ರಸ್ತುತಪಡಿಸಲು ಒಂದು ಅವಕಾಶ ಮಾಡಿಕೊಟ್ಟ "ಕಂಸ" ಸರ್ ಗೆ ಧನ್ಯವಾದಗಳು. "ಮನಸುಗಳ ಮಾತು ಮಧುರ" ಕವನ ಸಂಕಲನವು ಓದುಗರ ಮನಸ್ಸುಗಳನ್ನು ಮೀಟಿ ಮಧುರ ನಾದ ಹೊರ ಹೊಮ್ಮಲಿ. ಮತ್ತಷ್ಟು ಮತ್ತಷ್ಟು ಸಾಹಿತ್ತಿಕ ಕೃತಿಗಳು ತಮ್ಮ ಲೇಖನಿಯಿಂದ ಮೂಡಿ ಬರಲಿ. ಕನ್ನಡಮ್ಮನಿಗೆ ತಾವು ಸಲ್ಲಿಸುತ್ತಿರುವ ಸೇವೆ ನಿರಂತರವಾಗಿರಲಿ. ಒಳ್ಳೆಯದಾಗಲಿ.
“ಪ್ರೀತಿ, ಪ್ರೇಮಗಳು ,ಜಾತಿ, ಮತ ಧರ್ಮ,ವಿಚಾರಗಳು, ಯುವಕರ ಬಗ್ಗೆ ಆಚರಣೆಗಳು ಹೀಗೆ ಹಲವಾರು ಪ್ರಸ್ತುತ ಬದಲಾದ ಹಳ...
“ಇಸ್ಕೂಲು ಓದಿಸಿಕೊಂಡು ಹೋಯಿತು ಅನ್ನುವುದಕ್ಕಿಂತ ನೆನಪಿನ ಅಲೆಯಲ್ಲಿ ತೇಲಿಸಿಕೊಂಡು ಹೋಯಿತು ಅಂದರೆ ಹೆಚ್ಚು ಸೂಕ್...
“ಪ್ರೀತಿಯ ಕಥಾವಸ್ತುನಿಟ್ಟುಕೊಂಡ ಕೃತಿಗಳಲ್ಲಿ ಸಾಮಾನ್ಯವಾಗಿ ಭಾವುಕತೆಯೇ ವಿಜೃಂಭಿಸುತ್ತದೆ. ಆದರೆ ಈ ಕೃತಿಯು ಮನು...
©2025 Book Brahma Private Limited.