ಕರ್ನಾಟಕದ ವೈವಿಧ್ಯತೆಯನ್ನು ಸಮಾಜದ ಎಲ್ಲ ಆಯಾಮಗಳಲ್ಲಿ ತೋರಿಸುವ ಕೃತಿ ‘ಕರ್ನಾಟಕದ ಜನಪದ ಆಟಗಳು’

Date: 04-08-2023

Location: ಬೆಂಗಳೂರು


"ಈ ಜನಪದ ಆಟಗಳು ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ ಬೆಳೆದುಬಂದಿವೆ. ಕೆಲವು ಆಟಗಳು ಸಾವಿರಾರು ವರ್ಷಗಳಷ್ಟು ಹಿಂದೆಯೆ ಬೆಳೆದು ಇಂದಿಗೂ ಬಳಕೆಯಲ್ಲಿರುವಂತಿವೆ. ಈ ಆಟಗಳು ಇತಿಹಾಸದ ಉದ್ದಕ್ಕೂ ವಿವಿಧ ಬಗೆಯ ಬೆಳವಣಿಗೆಗಳನ್ನು ಕಂಡುಕೊಂಡಿರಬಹುದು" ಎನ್ನುತ್ತಾರೆ ಲೇಖಕಿ ರೇಣುಕಾ ಕೋಡಗುಂಟಿ. ಅವರ ‘ಕರ್ನಾಟಕದ ಜನಪದ ಆಟಗಳು’ ಕೃತಿಗೆ ಬರೆದ ಸಂಪಾದಕರ ಮಾತುಗಳು ನಿಮ್ಮ ಓದಿಗಾಗಿ...

ಕರ್ನಾಟಕದ ವೈವಿಧ್ಯತೆಯನ್ನು ಸಮಾಜದ ಎಲ್ಲ ಆಯಾಮಗಳಲ್ಲಿ ಕಾಣಬಹುದಾಗಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಬಳಕೆಯಲ್ಲಿರುವ ಜನಪಟ ಆಟಗಳನ್ನು ಗಮನಿಸಿದಾಗಲೂ ಈ ವೈವಿಧ್ಯತೆಯನ್ನು ಕಾಣುತ್ತೇವೆ. ಭಿನ್ನ ಪರಿಸರಗಳಲ್ಲಿ ವಿಭಿನ್ನವಾದ ಆಟಗಳು ಬಳಕೆಯಲ್ಲಿವೆ. ಈ ಜನಪದ ಆಟಗಳನ್ನು ಅಧ್ಯಯನ ಮಾಡುವುದರ ಮೂಲಕ ಕರ್ನಾಟಕದ ಸಾಮಾಜಿಕ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಆಟಗಳು ಸಾಮಾನ್ಯವಾಗಿ ಮನುಷ್ಯರ ಮಾನಸಿಕತೆಗೆ ಸಂಬಂಧಿಸಿದವು. ಮನೋರಂಜನೆ, ಸಮಯ ಕಳೆಯುವುದು, ಗುಂಪಿನಲ್ಲಿ ಇರುವುದು ಹೀಗೆ ಹಲವು ಕಾರಣಗಳನ್ನು ಜನಪದ ಆಟಗಳ ಹಿನ್ನೆಲೆಯಲ್ಲಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಅದರೊಟ್ಟಿಗೆ ಮನುಷ್ಯ ಸಮಾಜ ಜೀವಿಯಾಗಿರುವುದರಿಂದ ಪ್ರತಿಯೊಂದು ವಿಷಯವೂ ಸಾಮಾಜಿಕ ಆಯಾಮವನ್ನು ಹೊಂದಿರುತ್ತವೆ. ಕರ್ನಾಟಕದಲ್ಲಿ ವಿಭಿನ್ನ ಸಾಮಾಜಿಕ ಹಿನ್ನೆಲೆಯಲ್ಲಿ ವಿಭಿನ್ನ ಆಟಗಳು ಇರುವುದು ಕಂಡುಬರುತ್ತದೆ. ಹೀಗಾಗಿ ಜನಪದ ಆಟಗಳನ್ನು ಅವಲೋಕಿಸುವಾಗ ಅದರ ಹಿನ್ನೆಲೆಯಲ್ಲಿ ಇರುವ ಸಾಮಾಜಿಕ ಆಯಾಮವನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅದರಂತೆಯೆ ಸಾಂಸ್ಕøತಿಕ ಹಿನ್ನೆಲೆಯೂ ಜನಪದ ಆಟಗಳಿಗೆ ಇರುವುದನ್ನೂ ಕಾಣಬಹುದು. ಎಷ್ಟೊ ಜನಪದ ಆಟಗಳಿಗೆ ನಿರ್ದಿಷ್ಟವಾದ ಸಾಂಸ್ಕøತಿಕ ಹಿನ್ನೆಲೆ ಇರುವುದನ್ನು ನೋಡಬಹುದು.

ಅದರೊಟ್ಟಿಗೆ, ಆಟಗಳನ್ನು ಅಧ್ಯಯನ ಮಾಡುವಾಗ ವಿಭಿನ್ನ ಬಗೆಯ ನಿಯಮಗಳು ಕಂಡುಬರುತ್ತವೆ. ಇವುಗಳಲ್ಲಿ ಹೆಚ್ಚು ಆಟಗಳು ಯುದ್ಧಕ್ಕೆ ಸಂಬಂಧಿಸಿದವು ಮತ್ತು ಧರ್ಮ-ದೇವರುಗಳಿಗೆ ಸಂಬಂಧಿಸಿದವುಗಳಾಗಿವೆ. ಇದು ಸಾಮಾಜಿಕ ಇತಿಹಾಸವನ್ನು ಅರಿತುಕೊಳ್ಳಲು, ಇತಿಹಾಸದಲ್ಲಿ ಯಾವ ಯಾವ ವಿಷಯಗಳು ಮಹತ್ವವನ್ನು ಪಡೆದುಕೊಂಡಿದ್ದವು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇದುವರೆಗೆ ಕರ್ನಾಟಕದಲ್ಲಿ ಜನಪದ ಆಟಗಳಿಗೆ ಸಂಬಂಧಿಸಿದಂತೆ ಹಲವಾರು ಅಧ್ಯಯನಗಳು ನಡೆದಿವೆಯಾದರೂ ಜನಪದ ಆಟಗಳ ಕುರಿತು ಇನ್ನಷ್ಟು ಬೇರೆ ಬೇರೆ ಆಯಾಮಗಳಿಂದ ಅಧ್ಯಯನ ಮಾಡುವ ಅವಶ್ಯಕತೆ ಇದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಆಟಗಳನ್ನು ಗಮನಿಸಿದಾಗ ಅದ್ಭುತವಾದ ವೈವಿಧ್ಯತೆಯನ್ನು ಕಾಣುತ್ತೇವೆ. ಕೆಲವು ಆಟಗಳು ಎಲ್ಲ ಕಡೆ ಸಾಮಾನ್ಯವಾಗಿ ಬಳಕೆಯಲ್ಲಿವೆ ಎಂದು ಅನಿಸುತ್ತದೆ. ಆದರೆ, ಆಟದ ನಿಯಮಗಳಲ್ಲಿ ಸಣ್ಣಪುಟ್ಟ ಹಲವು ವ್ಯತ್ಯಾಸಗಳು ಇರುವುದನ್ನು ಕಾಣಬಹುದು. ಇದು ಜನಪದ ಆಟಗಳು ವಿವಿಧ ಪರಿಸರಗಳಲ್ಲಿ ಹೇಗೆ ಭಿನ್ನತೆಗಳನ್ನು ಪಡೆದುಕೊಂಡು ಬೆಳೆದಿವೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಅಲ್ಲದೆ, ಯಾವ ಯಾವ ಪರಿಸರಗಳಲ್ಲಿ ಈ ಭಿನ್ನತೆ ಇದೆ ಎಂಬುದನ್ನು ತಿಳಿದುಕೊಂಡರೆ ಇತಿಹಾಸದಲ್ಲಿ ಈ ಪರಿಸರಗಳು ಹೇಗೆ ಪಸರಿಸಿಕೊಂಡಿದ್ದವು ಮತ್ತು ವಿವಿಧ ಪ್ರದೇಶಗಳ ನಡುವೆ ಇರುವ ಪರಸ್ಪರ ಸಂಬಂಧಗಳನ್ನೂ ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಇನ್ನು ಹಲವಾರು ಆಟಗಳು ನಿರ್ದಿಷ್ಟವಾದ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಇದು ಕೂಡ ಇತಿಹಾಸದಲ್ಲಿ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಆಟಗಳು ಬೆಳೆದಿರುವುದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಈ ಜನಪದ ಆಟಗಳು ಇತಿಹಾಸದ ವಿಭಿನ್ನ ಕಾಲಘಟ್ಟಗಳಲ್ಲಿ ಬೆಳೆದುಬಂದಿವೆ. ಕೆಲವು ಆಟಗಳು ಸಾವಿರಾರು ವರ್ಷಗಳಷ್ಟು ಹಿಂದೆಯೆ ಬೆಳೆದು ಇಂದಿಗೂ ಬಳಕೆಯಲ್ಲಿರುವಂತಿವೆ. ಈ ಆಟಗಳು ಇತಿಹಾಸದ ಉದ್ದಕ್ಕೂ ವಿವಿಧ ಬಗೆಯ ಬೆಳವಣಿಗೆಗಳನ್ನು ಕಂಡುಕೊಂಡಿರಬಹುದು. ಇನ್ನು ಕೆಲವು ನಿರ್ದಿಷ್ಟ ಕಾಲಘಟ್ಟದಲ್ಲಿ ಬೆಳೆದಿರುವುದು ತಿಳಿಯುತ್ತದೆ. ಇತಿಹಾಸದಲ್ಲಿ ನಡೆದ ಕೆಲವು ನಿರ್ದಿಷ್ಟ ಘಟನೆಗಳೊಂದಿಗೆ ಸಂಬಂಧವನ್ನು ಹೊಂದಿರುವುದು ಕಂಡುಬರುತ್ತದೆ. ಅಂದರೆ, ಈ ಆಟದ ಬೆಳವಣಿಗೆಯಲ್ಲಿ ಆ ನಿರ್ದಿಷ್ಟ ಐತಿಹಾಸಿಕ ಘಟನೆ ಇದೆ ಎನ್ನುವುದು ಸ್ಪಷ್ಟವಾಗುತ್ತದೆ.

ಇದರೊಟ್ಟಿಗೆ ವಿವಿಧ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಆಟಗಳಲ್ಲಿ ಕಂಡುಬರುವ ಭಾಷೆ ಮೊದಲಾದವು ಕೂಡ ಈ ವೈವಿಧ್ಯತೆಯನ್ನು ತೋರಿಸುತ್ತವೆ ಮತ್ತು ಸಮಾಜವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ತುಂಬಾ ಅನುಕೂಲವಾಗುತ್ತದೆ.

ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಕರ್ನಾಟಕದ ವಿವಿಧ ಪರಿಸರಗಳಲ್ಲಿ ಬಳಕೆಯಲ್ಲಿರುವ ಜನಪದ ಆಟಗಳನ್ನು ಪರಿಚಯಿಸುವ ಮತ್ತು ಸ್ಥೂಲ ವಿಮರ್ಶೆ ಇರುವ ಲೇಖನಗಳನ್ನು ಒಂದೆಡೆ ತರುವುದರಿಂದ ಕರ್ನಾಟಕದ ಒಟ್ಟು ಜನಪದ ಆಟಗಳ ಅಧ್ಯಯನಗಳಿಗೆ ಇದು ಸಹಾಯವಾಗುತ್ತದೆ ಎಂಬ ಆಶಯದಿಂದ ಈ ಪುಸ್ತಕವನ್ನು ಸಿದ್ಧಪಡಿಸಲಾಗಿದೆ.

MORE NEWS

‘ಈ ಹೊತ್ತಿಗೆ’ ೧೨ನೇ ವಾರ್ಷಿಕೋತ್ಸವ ‘ಹೊನಲು’ ಮಾರ್ಚ್ ೯ರಂದು ಬೆಂಗಳೂರಿನಲ್ಲಿ

07-03-2025 ಬೆಂಗಳೂರು

ಬೆಂಗಳೂರು: ‘ಈ ಹೊತ್ತಿಗೆ’ ಮಾಸಪತ್ರಿಕೆಯ ೧೨ನೇ ವಾರ್ಷಿಕೋತ್ಸವ ‘ಹೊನಲು’ ಕಾರ್ಯಕ್ರಮ ಜೆ ...

MBIFL-2025; ಅಫ್ಘಾನಿಸ್ತಾನ ಚೀನಾ ದೃಢ ಹೆಜ್ಜೆ; ಭಾರತದ ಪಾಲಿಗೆ ನುಂಗಲಾರದ ತುತ್ತು

08-02-2025 ತಿರುವನಂತಪುರ

`ಬುಕ್ ಬ್ರಹ್ಮ’ ವಿಶೇಷ ವರದಿ ತಿರುವನಂತಪುರ: ೨೦೨೧ರ ಆಗಸ್ಟ್ ೮ ರಿಂದ ೧೭ರ ಅವಧಿಯಲ್ಲಿ ಅಫ್ಘಾನಿಸ್ತಾನ ಸರ್ಕಾ...

ನೆನಪಿನ ಪುಟಗಳನ್ನು ಸದ್ದಿಲ್ಲದೆ ತಿರುವಿ ಹಾಕಿತು

25-01-2025 ಬೆಂಗಳೂರು

“ಈ ಕತೆಯನ್ನು ಹೇಳಲು ಲೇಖಕರು ಬಳಸಿದ ಬಾಷೆ ಅತ್ಯಂತ ಆಪ್ತವಾಗಿದೆ. ಬಹುತೇಕ ಪಾತ್ರಗಳ ನಡುವಿನ ಸಂವಾದಗಳಲ್ಲೇ ಸಾಗುವ...