ಕಣ್ಮನ ಸೆಳೆಯುವ ಭರತನಾಟ್ಯದ ಮೂಲಕ ಪರಿಚಿತರಾಗಿದ್ದ ಮಾನಸಿ ಸುಧೀರ್ ಲಾಕ್‌ಡೌನ್ ಕಾಲದಲ್ಲಿ ಕನ್ನಡದ ಹೆಸರಾಂತ ಕವಿಗಳ ಕವಿತೆಗಳನ್ನು ಅಭಿನಯ ಮತ್ತು ಗಾಯನದ ಮೂಲಕ ಅಭಿವ್ಯಕ್ತಿಪಡಿಸುವ ಹೊಸ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿ.ಆರ್. ಲಕ್ಷ್ಮಣ್ ರಾವ್ ಅವರ ಹೇಗಿದ್ದೀಯೆ ಟ್ವಿಂಕಲ್?, ಡುಂಡಿರಾಜ್ ಅವರ ಗಣರಾಜ್ಯದ ಗುಣಗಾನ, ಕೆ.ವಿ. ತಿರುಮಲೇಶ್ ಅವರ ಎಲ್ಲಿಗೆ ಹೋಗೋಣ....
ಹೀಗೆ ಹಲವಾರು ಕವಿತೆಗಳು ನೋಡುಗ-ಕೇಳುಗರನ್ನು ಆಕರ್ಷಿಸುತ್ತಿವೆ. ಮಾನಸಿ ಸುಧೀರ್ ಅವರ ಈ ವಿಭಿನ್ನ ಪ್ರಯತ್ನದ ಬಗ್ಗೆ ಎಡೆಯೂರು ಪಲ್ಲವಿ ಅವರು ಚಿತ್ರಣ ನೀಡಿದ್ದಾರೆ.
ಅಭಿನಯ ಹಾಗೂ ಗಾಯನಗಳೆರಡನ್ನೂ ಹದವಾಗಿ ಬೆಸೆದ ಅಪರೂಪದ ಯತ್ನವನ್ನು ಉಡುಪಿಯ ಮಾನಸಿ ಸುಧೀರ್ ಅವರು ಆರಂಭಿಸಿದ್ದಾರೆ. ಹಾಡುಗಳಿಗೆ ವಿಭಿನ್ನ ಅಭಿವ್ಯಕ್ತಿ ನೀಡುವ ಕೆಲಸ ಅದು. ಅದಕ್ಕಾಗಿ ಮಾನಸಿ ಅವರು ’ನಾಟಕೀಯ’ ಗೀತೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಭಿನಯ ಮತ್ತು ಹಾಡಿನ ಮೂಲಕ ಕವಿತೆಯನ್ನು ಕೇಳುಗ-ನೋಡುಗನಿಗೆ ಸಾಗಿಸುವ ಕ್ರಿಯಾಶೀಲ-ಸೃಜನಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮಾನಸಿ ಅವರ ಹಾಡು-ಅಭಿನಯಗಳು ನೋಡುಗ-ಕೇಳುಗರ ಮೆಚ್ಚುಗೆಗೆ ಪಾತ್ರವಾಗಿವೆ. ಆಗುತ್ತಿವೆ. ಅವರದೇ ಯುಟ್ಯೂಬ್ ಚಾನೆಲ್ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಈ ’ತುಣುಕು’ಗಳು ಕಾವ್ಯವನ್ನು ತಲುಪಿಸಲು ಮಾನಸಿ ಅವರು ಕಂಡುಕೊಂಡ ವಿಶಿಷ್ಟ ’ಮಾದರಿ’ಗಳಾಗಿವೆ.
ಕವಿತೆಯನ್ನು ತಲುಪಿಸಲು ’ಹಾಡುವುದು’ ಒಂದು ವಿಧಾನ. ಹಾಗೆಯೇ, ಅದನ್ನು ರಂಗದ ಮೇಲೆಯೂ ತಂದು ಪ್ರೇಕ್ಷಕರಿಗೆ ತಲುಪಿಸಿದ ಉದಾಹರಣೆಗಳೂ ಇಲ್ಲದಿಲ್ಲ. ರಂಗದ ಮೇಲೆ ಕಾಣಿಸಿಕೊಂಡ ಹಾಗೆಯೇ ’ಹಾಡು’ ಸಿನಿಮಾ-ಧಾರಾವಾಹಿಗಳಲ್ಲಿಯೂ ’ತೆರೆ’ಯ ಮೇಲೆ ಬಂದದ್ದಿದೆ. ಸೃಜನಶೀಲ ಮನಸ್ಸು ಸುಮ್ಮನೆ ಕೂರುವುದಿಲ್ಲ. ಇದು ಹೊಸತನಕ್ಕೆ ತುಡಿಯುವವರು ’ಪ್ರಯೋಗ’ಗಳಿಗೆ ಒಡ್ಡಿಕೊಳ್ಳುವ ಕಾಲ. ಈ ಯುವ ಗಾಯಕಿ-ಯಕ್ಷಗಾನ ಕಲಾವಿದೆ ಮಾನಸಿ ಅವರು ಕಾವ್ಯದ ಸಾಲುಗಳಿಗೆ ಸಂಗೀತದ ಲೇಪ ಹಚ್ಚಿ, ನಾದದ ಮಿಡಿತದಲ್ಲಿ ಎರಕ ಹೊಯ್ದು ಭಾವತುಂಬಿ ಜನಮಾನಸಕ್ಕೆ ಸರಾಗವಾಗಿ ತಲುಪಿಸುತ್ತಿದ್ದಾರೆ.
ಚಲನಚಿತ್ರ-ಕಿರುತೆರೆಗಳಲ್ಲಿಯೂ ನಟಿಸಿದ ಅನುಭವ ಇರುವ ಮಾನಸಿ ಸುಧೀರ್ ಅವರು ಅನನ್ಯ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಕೇವಲ ಹಾಡುಗಾರಿಕೆ ಮಾತ್ರ ಸೀಮಿತವಾಗದೆ ಕಾವ್ಯದ ಸ್ವರೂಪಕ್ಕೆ ತಕ್ಕಂತಹ ಹಾವಭಾವ, ಆಂಗಿಕಾಭಿನಯವನ್ನೂ ಒಳಗೊಂಡ ವಿಧಾನ ಶೋಧಿಸಿದ್ದಾರೆ. ಇವರ ಈ ಪ್ರಯೋಗಶೀಲತೆ, ಹಾಡುಗಾರಿಕೆಗೆ ತಲೆದೂಗುತ್ತಿರುವ ಕೇಳುಗರು ಸುಮಧುರ ಸ್ವರಮಾಧುರ್ಯಕ್ಕೆ ಮನಸೋತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿದೆ.
ಹಾಡಿಗೆ ನೆರವಾದ ಲಾಕ್‌ಡೌನ್
ಮಾನಸಿ ಸುಧೀರ್ ಅವರು ಉಡುಪಿಯವರು. ತಂದೆ ಖ್ಯಾತ ಲೇಖಕ, ವಿಮರ್ಶಕ ಮುರಳೀಧರ ಉಪಾಧ್ಯ ಹಿರಿಯಡ್ಕ, ತಾಯಿ ಶಾರದಾ ಉಪಾಧ್ಯ. ಸಾಹಿತ್ಯ-ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ಮಾನಸಿ ಅವರಿಗೆ ಬಾಲ್ಯದಿಂದಲೇ ಸಂಗೀತ, ಭರತನಾಟ್ಯದಲ್ಲಿ ಒಲವು ಬೆಳೆಯಿತು. ಮೊದಮೊದಲು ನೃತ್ಯಾಭಿನಯದ ಪ್ರದರ್ಶನ ನೀಡಿ ’ವಿದುಷಿ’ ಪಟ್ಟ ಗಳಿಸಿದರು. ಸಂಗೀತದಲ್ಲಿಯೂ ಸಾಧನೆಯ ಉತ್ತುಂಗಕ್ಕೆ ಏರುತ್ತಾರೆ ಎಂದು ನಿರೀಕ್ಷಿಸುತ್ತಿರುವಾಗ ’ಆಘಾತ’ ಎದುರಿಸಬೇಕಾಯಿತು. ಹದಿನಾಲ್ಕು ವರ್ಷದೆ ಹಿಂದೆ ಗಂಟಲಿನ ಧ್ವನಿ ತಂತು(Vocal cord) ಬಲಹೀನವಾಗತೊಡಗಿತು. ಹಾಡಲು ಹೋದರೆ ಕ್ಷೀಣ ಧ್ವನಿ. ತೋರಿಸಿದ ಎಲ್ಲಾ ವೈದ್ಯರು ಶಾಶ್ವತ ಗುಣಪಡಿಸುವ ಚಿಕಿತ್ಸೆ ಇಲ್ಲವೆಂದೂ ಕೈಚೆಲ್ಲಿದರು. ನೀವು ಸುಮಾರು ದಿನಗಳ ಕಾಲ ಮಾತನಾಡದೆ ಇದ್ದರೆ, ಗಂಟಲಿಗೆ ಆರಾಮ ಸಿಕ್ಕಿ ಯಾವಾಗಲಾದರೊಮ್ಮೆ ಹಾಡಬಹುದು ಎಂದು ಸಲಹೆ ನೀಡಿದರು. ’ಕಲೆಯೇ ಜೀವನ’ ಎಂದು ನಂಬಿದ್ದ ಮಾನಸಿ ಅವರು ಭರತನಾಟ್ಯ ಕ್ಲಾಸ್ ನಡೆಸುತ್ತಿದ್ದರು. ಮಾತನಾಡದೆ ಪಾಠ ಹೇಳುವುದಾದರು ಹೇಗೆ? ಹಾಗಾಗಿ ಸಾರ್ವಜನಿಕವಾಗಿ ಭಾವಗೀತೆ ಹಾಡುವುದನ್ನು ಕೈಬಿಟ್ಟರು. ಆದರೆ ಮನದಲ್ಲಿನ ಸಂಗೀತ ಪ್ರೇಮ, ಸಾಹಿತ್ಯದ ಒಲವು ಮಾತ್ರ ಮರೆಯಾಗಲಿಲ್ಲ. ಆಗಾಗ ಮನೆಯಲ್ಲಿ ಚಿಕ್ಕಂದಿನಲ್ಲಿ ಕಲಿತ ಭಾವಗೀತೆಗಳನ್ನು ಮನದಲ್ಲಿ ಗುನುಗುತ್ತಿದ್ದರು. ಅವರ ಈ ಕಲೆಯನ್ನು ಪ್ರಸ್ತುಪಡಿಸಲು ನೆರವಾದದ್ದು ಪ್ರಸ್ತುತ ಕರೋನಾದ ಲಾಕ್‌ಡೌನ್ ಸಮಯ. ಭರತನಾಟ್ಯ ಕ್ಲಾಸ್‌ಗಳು ನಡೆಯದೇ ಇದ್ದದ್ದರಿಂದ ಧ್ವನಿ ಪೆಟ್ಟಿಗೆ ಕೊಂಚ ಸುಧಾರಿಸಿತು. ಹಿಂದಕ್ಕೆ ಸರಿದಿದ್ದ ಕಾವ್ಯ-ಗಾಯನ ಮುಂದಕ್ಕೆ ಬಂತು. ಹಿಂದೆ ಕಲಿತಿದ್ದ ಭಾವಗೀತೆಗಳನ್ನು ಹೀಗೆ ಅಭಿನಯದ ಮೂಲಕ ಹಾಡಿ ತಮ್ಮ ಸ್ನೇಹಿತರಿಗೆ, ಗುರುಗಳಿಗೆ, ಸಂಬಂಧಿಗಳಿಗೆ ಕಳುಹಿಸಿದರು ಅಷ್ಟೇ. ಅವರ ’ಭಾವಗೀತಾಭಿನಯ’ ನೋಡಿದವರು ಮೆಚ್ಚುಗೆ ಸೂಚಿಸಿದರು. ತಮ್ಮ ಫೇಸ್‌ಬುಕ್ ಟೈಂ ಲೈನಿನಲ್ಲಿ ಹಾಕಿಕೊಂಡರು. ಅಲ್ಲಿಂದ ಶುರುವಾದದ್ದು ಇದೀಗ ಫೇಸ್‌ಬುಕ್, ಯೂಟ್ಯೂಬ್, ವಾಟ್ಸಪ್‌ನಲ್ಲೂ ಶೇರ್ ಮಾಡುತ್ತಿದ್ದಾರೆ. ನೋಡುಗ-ಕೇಳುಗರ ಸಂಖ್ಯೆಯೂ ಹೆಚ್ಚುತ್ತಿದೆ.
ಕನ್ನಡಕ್ಕೆ ಮೊದಲ ಆದ್ಯತೆ
ಅವರು ಮೊದಲು ಹಾಡಿ ಹಂಚಿಕೊಂಡದ್ದು ಬೇಂದ್ರೆಯವರ ’ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’. ಈ ಹಾಡಿನಲ್ಲಿ ಮಾನಸಿ ಅವರು ಅಭಿನಯಕ್ಕಿಂತ ಗಾಯನ ಪ್ರಸ್ತುತ ಪಡಿಸುವುದಕ್ಕೆ ಹೆಚ್ಚು ಆದ್ಯತೆ ನೀಡಿದ್ದರು.
ನಂತರ ಹಾಡಿ, ಫ್ರೆಂಡ್ಸ್ ಸರ್ಕಲ್‌ನಲ್ಲಿ ಕಳುಹಿಸಿದ್ದು ಬಿ. ಆರ್. ಲಕ್ಷ್ಮಣ್ ರಾವ್ ಅವರು ಹೇಗಿದ್ದೀಯೆ ಟ್ವಿಂಕಲ್?
ಎಂದು ಆರಂಭವಾಗುವ ’ಅದೇ ಹಾಡು’ ಕವಿತೆಯನ್ನು
ಸಂಭಾಷಣೆಯಂತಿರುವ ಈ ಹಾಡು ಬಹು ಜನಪ್ರಿಯತೆ ಪಡೆಯಿತು.
ನಂತರ ಕನ್ನಡದ ಪ್ರಸಿದ್ಧ ಹಾಸ್ಯಕವಿ ಡುಂಡಿರಾಜ್ ಅವರ ಕವನ ‘ಗಣರಾಜ್ಯದ ಗುಣಗಾನ’
,
ಮೂರನೆಯ ಕವನ ಪ್ರಸ್ತುತಿ ಹೆಸರಾಂತ ಕವಿ ಕೆ. ವಿ. ತಿರುಮಲೇಶ್ ಅವರ ‘ಎಲ್ಲಿಗೆ ಹೋಗೋಣ’
ಹಾಗೂ ಅವರ ನಾಲ್ಕನೆಯ ಪ್ರಸ್ತುತಿ ಬಿ. ಆರ್. ಲಕ್ಷ್ಮಣರಾವ್ ಅವರ ‘ಏನೀ ಅದ್ಭುತವೇ!?’ -
ಹಾಡಿದ್ದು ಈಗ ಹಲವು ನೂರಕ್ಕು ಹೆಚ್ಚು ಶೇರ್ ಕಂಡಿದೆ. ಇವರ ಈ ಸಂಗೀತಾಸಕ್ತಿಯನ್ನು ಮೆಚ್ಚಿದ ಅವರ ಗುರುಗಳಾದ ಗುರುರಾಜ ಮಾರ್ಪಳ್ಳಿ ರಾಗ ಸಂಯೋಜನೆ ಮಾಡಿದ್ದಾರೆ.
ತಮ್ಮ ಧ್ವನಿ ತಂತು(Vocal cord) ಸಮಸ್ಯೆ ಬಗ್ಗೆ ಕೊಂಚವೂ ಬೇಸರಿಸಿಕೊಳ್ಳದ ಅವರು ಧನಾತ್ಮಕವಾಗಿ ಚಿಂತಿಯತ್ತಲೇ ಹೊರಳುತ್ತಾ “ಚಿಕ್ಕಂದಿನಲ್ಲಿ ಕ್ಲಾಸಿಕಲ್ ಸಂಗೀತವನ್ನು ಕಲಿತ ನನಗೆ ಭಾವಗೀತೆಗಳೆಡೆಗೆ ಅತಿಯಾದ ಸೆಳೆತ ಉಂಟಾಯಿತು. ಗುರುಗಳಾದ ಗುರುರಾಜ ಮಾರ್ಪಳ್ಳಿ, ಚಂದ್ರಶೇಖರ ಕಿದ್ಲಾಯ, ಶ್ರೀಕಾಂತ ಸೊಮಯಾಜಿ, ರವಿಕಿರಣ್ ಮಣಿಪಾಲ್, ಅವರ ಒಡನಾಟದಲ್ಲಿ ಕನ್ನಡ ಸಾಹಿತ್ಯದ ಬಗೆಗು ಒಲವು ಮೂಡಲು ಬೇರೆ ಭಾಷೆಗಳೆಡೆ ಗಮನವೇ ಹರಿಯಲಿಲ್ಲ” ಎನ್ನುತ್ತಾ ಮುಗುಳ್ನಗುತ್ತಾರೆ ಅವರು. ಇದಲ್ಲವೆ ಪಾಸಿಟೀವ್ ಆಟಿಟ್ಯೂಡ್ ಎಂದರೆ, ಕಳೆದುಕೊಂಡಿದ್ದರ ಬಗ್ಗೆ ಚಿಂತಿಸುತ್ತಾ ಕೂರಗುವ ಬದಲು ಇದ್ದುದ್ದರಲ್ಲೆ ಯಾವುದೇ ಫಲಾಫೇಕ್ಷೆ ಇಲ್ಲದೆ ಸಾಹಿತ್ಯವನ್ನು ಸರಳವಾಗಿ ಉತ್ಕೃಷ್ಟವಾಗಿ ಜನರಿಗೆ ತಲುಪಿಸುವೆನೆಂಬ ಆತ್ಮವಿಶ್ವಾಸ ಅವರದು.
ಅವರ ಫೇಸ್ ಬುಕ್ ಪೇಜ್ ಲಿಂಕ್ ಇಲ್ಲಿದೆ-
https://www.facebook.com/manasi.sudhir
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.